11 December 2022

ಸ್ಮಾರಕಗಳನ್ನು ಸಂರಕ್ಷಿಸೋಣ..


 



ಸ್ಮಾರಕಗಳನ್ನು ಸಂರಕ್ಷಿಸೋಣ..


 ಪ್ರಾಗೈತಿಹಾಸಿಕ ಆಧಾರಗಳು ಇತಿಹಾಸ ರಚನೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಅದರಲ್ಲೂ ಐತಿಹಾಸಿಕ ಮಹತ್ವದ ಸ್ಮಾರಕಗಳು ನಮ್ಮ ಪರಂಪರೆಯ ಹೆಮ್ಮೆಯ ಪ್ರತೀಕವೂ ಆಗಿವೆ. ಇಂತಹ ಸ್ಮಾರಕಗಳ ಮಹತ್ವ ತಿಳಿಯದೆ ಬಹುತೇಕ ಸ್ವಾರಕಗಳು ಇಂದು ಅನಾಥವಾಗಿವೆ.ಕೆಲವು ಕಡೆ ಶಾಸನಗಳು ಮತ್ತು ಸ್ಮಾರಕಗಳನ್ನು ಬಟ್ಟೆ ಒಗೆಯೊ ಕಲ್ಲುಗಳಾಗಿ ದನ ಕಟ್ಟುವ ಗೂಟಗಳಾಗಿ ಬಳಕೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿ.ಇತ್ತೀಚೆಗೆ ಸ್ನೇಹಿತರ ಜೊತೆಯಲ್ಲಿ  ಗಂಗರ ರಾಜಧಾನಿಯಾಗಿದ್ದ    ಮಣ್ಣೆ ಗೆ ಹೋದಾಗ ಅಲ್ಲಿಯ ಸ್ಮಾರಕಗಳ ದುಸ್ತಿತಿ ಕಂಡು ಮನಸ್ಸಿಗೆ ಬಹಳ ಬೇಸರವಾಗಿ ಅಂತಹ ಸ್ಮಾರಕಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂಬುವ ಆಗ್ರಹಪೂರ್ವಕ ಲೇಖನ ಬರೆದಿದ್ದೆ.ಇದಕ್ಕೆ ಇತಿಹಾಸ ಪ್ರಿಯರು ಮತ್ತು ಸ್ಮಾರಕಗಳ ಬಗ್ಗೆ ಆಸಕ್ತಿ ಇರುವವರು ದನಿಗೂಡಿಸಿದ್ದರು.

ಆಶಾದಾಯಕ ಬೆಳವಣಿಗೆಯಂತೆ ಕಳೆದ ವಾರ ಕರ್ನಾಟಕ  ಸರ್ಕಾರ 

21   ತಾಲ್ಲೂಕುಗಳಲ್ಲಿ “ಸಂರಕ್ಷಣ್" ಹೆಸರಿನಲ್ಲಿ ಪಾರಂಪರಿಕ ಮಹತ್ವದ ಸ್ಮಾರಕಗಳನ್ನು ಗುರುತಿಸಿ, ಸಂರಕ್ಷಣೆಗೆ ಯೋಜನೆ ರೂಪಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.


 2022- 23ನೇ ಸಾಲಿನಲ್ಲಿ    ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಗಾಗಿ ಪುರಾತತ್ವ ಇಲಾಖೆಯು  ರಾಜ್ಯದಲ್ಲಿ 844 ರಾಜ್ಯ ಸಂರಕ್ಷಿತ ಹಾಗೂ 65 ಕೇಂದ್ರ ಸಂರಕ್ಷಿತ ಸ್ಮಾರಕಗಳನ್ನು ಗುರುತಿಸಲಾಗಿದೆ.

ಸಾವಿರಕ್ಕೂ ಹೆಚ್ಚು ಪ್ರಕಾರದ  ಅಸಂರಕ್ಷಿತ ಸ್ಮಾರಕಗಳಿವೆ. ಅವುಗಳ ವ್ಯವಸ್ಥಿತ ಅಧ್ಯಯನ  ಮತ್ತು ಸಮೀಕ್ಷೆ ಮಾಡಿ  ಸಂರಕ್ಷಣೆಗೆ  ನಿಖರವಾದ ಮಾಹಿತಿ ಸಂಗ್ರಹದ ಅಗತ್ಯವಿದೆ . ಮೂರೂವರೆ ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಉದ್ದೇಶವಿದೆ. ಸಮೀಕ್ಷೆಯ ನಂತರ ಒಂದೂವರೆ ತಿಂಗಳು ದಾಖಲೆಗಳ ಕ್ರೂಢೀಕರಣ ನಡೆಯಲಿದೆ. 


ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಮಾಗಡಿ, ದೇವನ ಹಳ್ಳಿ ರಾಣೆಬೆನ್ನೂರು, 'ಶಹಬಾದ್ ಕಂಪ್ಲಿ, ಸಂಡೂರು, ಚಿಕ್ಕಮಗಳೂರು, ಸೋಮವಾರಪೇಟೆ, ಕುಶಾಲನಗರ, ಪಾಂಡವಪುರ ಹಾಗೂಭದ್ರಾವತಿ,

ಪುತ್ತೂರು,ಹಿರಿಯೂರು  ತಾಲ್ಲೂಕುಗಳಲ್ಲಿ ಈಗ ಸಮೀಕ್ಷೆ ಆರಂಭವಾಗಲಿದೆ.ಈ  ಉದ್ದೇಶಕ್ಕಾಗಿ ಸರ್ಕಾರ  35 ಲಕ್ಷ ಅನುದಾನ ಒದಗಿಸಿದೆ. ಅಧಿಕಾರಿಗಳು, ಕ್ಯುರೇಟರ್ಗಳು, ಸಿಬ್ಬಂದಿ, ತಜ್ಞರು, ಪರಂಪರೆಯ ವಿಷಯ ದಲ್ಲಿ ಸ್ನಾತಕೋತ್ತರ ಪದವೀಧರರು, ಪದವೀಧರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರು 

ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥ ರೊಂದಿಗೆ ಚರ್ಚೆ ನಡೆಸಲಿವೆ, ಅಲ್ಲಿರುವ  ವೀರಗಲ್ಲು, ಮಾಸ್ತಿಗಲ್ಲು, ಮಂಟಪ, ದೇವಸ್ಥಾನಗಳು ಮೊದಲಾದ ರಚನೆಗಳ ಮಾಹಿತಿಯನ್ನು ದಾಖಲಿಸ ಲಾಗುತ್ತದೆ. ಅವು ಯಾವ ಸ್ಥಿತಿಯಲ್ಲಿವೆ ಎಂಬುದನ್ನು

ನಮೂದಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ದೇಗುಲವಿದ್ದರೆ ವಿಶೇಷವಾಗಿ ದಾಖಲಿಸಲಾಗುತ್ತದೆ. ನಿಗದಿತ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತದೆ. 


ದೇಶದ ಬದಲಾಯಿಸಲಾಗದ ಮತ್ತು ನವೀಕರಿಸಲಾಗದ ಸಾಂಸ್ಕೃತಿಕ ಸಂಪನ್ಮೂಲಗಳಾದ  ಸ್ಮಾರಕಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಲು  ಪುರಾತತ್ವ ಇಲಾಖೆ ಮತ್ತು ಸರ್ಕಾರ ಕೈಗೊಂಡಿರುವ ಈ ಕಾರ್ಯಕ್ಕೆ ನಾಗರೀಕರ ಮತ್ತು ಸಮಾಜದ ಬೆಂಬಲ ಅಗತ್ಯವಿದೆ. ತನ್ಮೂಲಕ ನಮ್ಮ ದೇಶದ ಭವ್ಯ ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


No comments: