10 December 2022

ಮಾನವ ಹಕ್ಕುಗಳ ದಿನ.. Human rights day


 


ಮಾನವ ಹಕ್ಕುಗಳ ದಿನ ...


ಇಂದು ವಿಶ್ವದಲ್ಲಿ ಬಹುತೇಕ ದೇಶಗಳು ಸ್ವತಂತ್ರವಾದರೂ ಯಾವ ದೇಶದಲ್ಲೂ ಹಿಂಸೆ, ದೌರ್ಜನ್ಯ ಇತ್ಯಾದಿಗಳು ಕಡಿಮೆಯಾಗಿಲ್ಲ ಪರಸ್ಪರ ಅಪನಂಬಿಕೆ ,ಹಿಂಸೆ ಹೆಸರಲ್ಲಿ ಎರಡು ವಿಧ್ವಂಸಕ ವಿಶ್ವ ಸಮರ ಕಂಡರೂ ಪರಸ್ಪರ ಕಚ್ಚಾಟ ಮಾಡುತ್ತ  ಮಾನವ ತನ್ನ ಹಕ್ಕುಗಳನ್ನು ತಾನೇ ಉಲ್ಲಂಘನೆ ಮಾಡುವ ಪ್ರಕರಣಗಳು ಈಗಲೂ ಮುಂದುವರೆದಿರುವುದು ವಿಪರ್ಯಾಸ.

ವಿಶ್ವ ಮಾನವ ಹಕ್ಕುಗಳ ದಿನದಂದು ಹೀಗೊಂದು ಚಿಂತನೆ ನನ್ನ ಮನದಿ ಬಂದು ಹೋಯಿತು.


ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1948 ನವೆಂಬರ್ 10 ರಂದು ಮಾನವ ಹಕ್ಕುಗಳನ್ನು ಅಂಗೀಕಾರ ಮಾಡಲಾಯಿತು ಅದರ ನೆನಪಿಗಾಗಿ ಪ್ರತಿವರ್ಷ ನಾವು ಈ ದಿನವನ್ನು ಮಾನವ ಹಕ್ಕುಗಳ ದಿನ ಎಂದು ಆಚರಿಸುತ್ತೇವೆ. 

ಭಾರತದ ಸಂವಿಧಾನದಲ್ಲಿ ನಮ್ಮ ಹಕ್ಕುಗಳಿಗೆ ವಿಶೇಷವಾದ  ಒತ್ತು ನೀಡಿರುವುದು ನಮಗೆ ತಿಳಿದೇ ಇದೆ.


ಮಾನವ ಹಕ್ಕುಗಳ ಪರಿಧಿ ವ್ಯಾಪಕ ಸ್ವರೂಪದ್ದು.ಇದು ನಾಗರಿಕ ರಾಜಕೀಯ, ಮತ್ತು ಆರ್ಥಿಕ ಹಕ್ಕುಗಳನ್ನು ಒಳಗೊಂಡಿರುವುದು. ಇವುಗಳಲ್ಲಿ ಅತಿ ಮುಖ್ಯವಾದವು  ಸಮಾನತೆಯ ಹಕ್ಕು, ಸಮಾನ ಕಾನೂನು ರಕ್ಷಣೆ, ಶೋಷಣಿ ರಹಿತ ಆರೋಗ್ಯಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು, ತಮ್ಮ ಆಯ್ಕೆಯ ವೃತ್ತಿ, ಕಲಕೆಯ ಹಕ್ಕು, ಭಾರತದ ಯಾವುದೇ ಸ್ಥಳಕ್ಕೆ ಹೋಗಲು ಮತ್ತು ಅಲ್ಲಿ ವಾಸಿಸಲು, ಆತ್ಮಸಾಕ್ಷಿ ಸ್ವಾತಂತ್ರ್ಯ, ನಂಬಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಸ್ಪೃಶ್ಯತೆ ಅಥವಾ ಜಾತಿ ಮತ ಅಥವಾ ಲಿಂಗ ಆಧಾರಿತ ತಾರತಮ್ಯದಿಂದ ಮುಕ್ತಿ ಇತ್ಯಾದಿ...


ಈ ಮಹತ್ತರ ಚಿಂತನೆಯ ಮೇರೆಗೆ ಮಾನವ ಹಕ್ಕುಗಳ ರಕ್ಷಣಿಗೆ ಮತ್ತು ಅವುಗಳ ಪರಿಣಾಮಕಾರಿ ಜಾರಿಗಾಗಿ ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ, 1993ರ ಅನ್ವಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳನ್ನು ರಚನೆ ಮಾಡಲಾಗಿದೆ. 


ಪ್ರತಿಯೊಬ್ಬ ಪ್ರಜೆಯ ಮಾನವ ಹಕ್ಕುಗಳನ್ನು ರಕ್ಷಿಸುವುದು ರಾಜ್ಯದ ಮತ್ತು ಇದರ ಎಲ್ಲಾ ಸಂಸ್ಥೆಗಳ ಆದ್ಯ ಕರ್ತವ್ಯ, ರಾಜ್ಯದ ಯಾವುದೇ ಕಛೇರಿಯಿಂದಾಗಲೇ ಅಥವಾ ಸಂಸ್ಥೆಯಿಂದಾಗಲೀ' ಯಾವುದೇ ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಪಕ್ಷದಲ್ಲಿ  ಅಥವಾ ಮಾನವ ಹಕ್ಕುಗಳ ರಕ್ಷಣೆ ಮಾಡಲು ವಿಫಲವಾಗಿರುವ ಸಂದರ್ಭಗಳಲ್ಲಿ  ತೊಂದರೆಗೆ ಒಳಗಾದವರಾಗಲೀ ಅಥವಾ ಆತನ/ಆಕೆಯ ಪರವಾಗಿ ಬೇರೆ ಯಾರಾದರಾಗಲೀ ಅವರ ಕುಂದು ಕೊರತೆಗಳನ್ನು ಪರಿಹರಿಸಲು, ನ್ಯಾಯ ದೊರಕಿಸಿಕೊಡಲು ಮಾನವ ಹಕ್ಕುಗಳ ಆಯೋಗವನ್ನು ಸ್ಥಾಪಿಸಲಾಗಿದೆ.ನಮ್ಮ ಸುತ್ತ ಮುತ್ತ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಂಡು ಬಂದರೆ ಸೂಕ್ತ ಪ್ರಾಧಿಕಾರಕ್ಕೆ ಮಾಹಿತಿಯನ್ನು ನೀಡೋಣ. ನಾವು ಮಾನವರಾಗಿ ಮಾನವ ಹಕ್ಕುಗಳ ಸಂರಕ್ಷಕರಾಗೋಣ...


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


No comments: