01 October 2024

ವನಸ್ನಾನದ ಬಗ್ಗೆ ನಿಮಗೆಷ್ಟು ಗೊತ್ತು?


#ವನಸ್ನಾನ 


ಸನ್ ಬಾತ್, ಮಡ್ ಬಾತ್ ಬಗ್ಗೆ ಕೇಳಿರುವ ನಾವು ವನ ಸ್ನಾನದ ಬಗ್ಗೆ ಕೇಳಿರುವುದು ಕಡಿಮೆ. ಹೌದು ಹೀಗೊಂದು ಅರಣ್ಯ ಸ್ನಾನ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರನ್ನು ಸೆಳೆಯುತ್ತಿದೆ.

1980 ರ ದಶಕದಲ್ಲಿ ಜಪಾನ್‌ನಲ್ಲಿ ಶಿನ್ರಿನ್-ಯೋಕು ಎಂಬ ಹೆಸರಿನಿಂದ ಆರಂಭವಾದ  ಅರಣ್ಯ ಸ್ನಾನ ಪರಿಕಲ್ಪನೆ ಇಂದು ಬಹುತೇಕ ದೇಶಗಳಲ್ಲಿ ಜಾರಿಯಲ್ಲಿದೆ.

  1990 ರ ದಶಕದಲ್ಲಿ ಸಂಶೋಧಕರು ಅರಣ್ಯ ಸ್ನಾನದ ಶಾರೀರಿಕ ಪ್ರಯೋಜನಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು.  

ವನಸ್ನಾನವನ್ನು  ವನಪ್ರಿಯರು ಮಾತ್ರವಲ್ಲ ಎಲ್ಲರೂ  ಅಭ್ಯಾಸ ಮಾಡಬಹುದು. 


ಅರಣ್ಯ ಅಥವಾ ವನ   ಸ್ನಾನವೆಂದರೆ ಕಾಡಿನ ಪರಿಸರದಲ್ಲಿ ಹೋಗಿ ಸುಮ್ಮನೆ ಮಾತಾನಾಡದೆ ಕೂತು ಕಾಡಿನ ಶಬ್ದಗಳನ್ನು ಕೇಳುವುದು.‌ ದೂರದಲ್ಲೊಂದು‌ ಹಕ್ಕಿ ತನ್ನ ಸಂಗಾತಿಗೆ ಕರೆಯವ ಶಬ್ದ, ಮೆಲ್ಲನೆ ತೇಲಿ ಬಂದು ಕಿವಿಗೆ ಅಪ್ಪಳಿಸುವ ಗಾಳಿ, ದೂರದ ಕಾಡಿನ ಮದ್ಯದಿಂದ ಬರುವ ಚಿತ್ರವಿಚಿತ್ರ ಶಬ್ದಗಳು ಇವುಗಳನ್ನು ಕೇಳಬಾರದು "ಆಲಿಸಬೇಕು". ಕಾಡಿನಲ್ಲಿ ನಾವು ಮಾತಾಡದೆ ಸುಮ್ಮನಿದ್ದರೆ ಕಾಡು ಮಾತನಾಡಲು ಪ್ರಾರಂಭಿಸುತ್ತದೆ.  ಅದನ್ನು ಅನುಭವಿಸಬೇಕು.


ನಾವು ದೇಹವನ್ನು ಪ್ರಕೃತಿಯೊಂದಿಗೆ ಜೋಡಿಸಿದಾಗ ಅದು ಯಾವಾಗಲೂ ಶಾಂತವಾಗಿರುತ್ತದೆ. ಆಗ ಮನಸ್ಸಿನಲ್ಲೊಂದು ಹೊಸ ಚೈತನ್ಯ ಮೂಡುತ್ತದೆ. ಎಂದು 

ಹಲವಾರು ವರ್ಷಗಳಿಂದ ವನ ಸ್ನಾನ ಮಾಡುತ್ತಿರುವ 

ನಿವೃತ್ತ ಉಪನ್ಯಾಸಕರಾದ ನಂಜುಂಡಪ್ಪ ರವರು ಅಭಿಪ್ರಾಯಪಡುತ್ತಾರೆ. ಪ್ರಕೃತಿಯ ಶಬ್ದಗಳನ್ನು ಆಲಿಸಿ, ನಮಗಾಗಿ ಹಾಡುವ ನಿರ್ದಿಷ್ಟ ಪಕ್ಷಿಗಳನ್ನು ವೀಕ್ಷಿಸಬಹುದು. ಮರವನ್ನು ತಬ್ಬಿಕೊಳ್ಳಿ, ಹೂವುಗಳನ್ನು ವಾಸನೆ ಗ್ರಹಿಸಿ, ತೊಗಟೆ ಮತ್ತು ಎಲೆಗಳ ವಿನ್ಯಾಸವನ್ನು ಪರಿಶೀಲಿಸಬಹುದು. ಭೂಮಿಯನ್ನು ಸ್ಪರ್ಶಿಸಿ ಮತ್ತು ಭೂಮಿಯ ವಾಸನೆಯನ್ನು ಅನುಭವಿಸಬಹುದು. 

ನಮಗೆ ದಣಿವಾದಾಗ, ಹುಲ್ಲು ಅಥವಾ ಬಿದ್ದ ಮರದ ಮೇಲೆ ಕುಳಿತು ವಿಶ್ರಾಂತಿ ಪಡೆಯಬಹುದು. ಕ್ಯಾಮರಾದಿಂದ ಚಿತ್ರಗಳನ್ನು ತೆಗೆದುಕೊಳ್ಳುವ ಬದಲು, ನಮ್ಮ ಕಣ್ಣುಗಳಿಂದ ಶೂಟ್ ಮಾಡುವ ಪ್ರಯತ್ನ ಮಾಡಬೇಕು. ಪ್ರತಿ ವಿವರವನ್ನು ನೋಡಿ ಮತ್ತು ಆಶ್ಚರ್ಯಪಡುತ್ತಾ ಆನಂದ ಪಟ್ಟರೆ  ಇದಕ್ಕಿಂತ ‌ದೊಡ್ಡ ಯೋಗ, ಧ್ಯಾನ ಮತ್ತೊಂದಿಲ್ಲ ಎನಿಸುತ್ತದೆ.

ಇಂತಹ ಅನುಭವದ ಅನುಭೂತಿಯನ್ನು ಪಡೆಯಲು ‌ನೀವು ಒಮ್ಮೆ ಅಥವಾ ಆಗಾಗ್ಗೆ ವನ ಸ್ನಾನ ಮಾಡಬಹುದು.


ಸಿಹಿಜೀವಿ ವೆಂಕಟೇಶ್ವರ

#sihijeeviVenkateshwara #forestbathing #forest #floral #bathing #relaxation



 

ಅಮರ .ಹನಿಗವನ


 

#ಅಮರ

ಆ ಮರ
ತಬ್ಬಿದೆ
ಈ ಮರ
ಹೇಳುತ್ತಿವೆ
ನಮ್ಮ ಸ್ನೇಹ
ಅಮರ

ಸಿಹಿಜೀವಿ ವೆಂಕಟೇಶ್ವರ

ಚಿತ್ರ ಕೃಪೆ: ಅಂತರ್ಜಾಲ..

ಮರೀನಾ ಬೀಚ್ ಚೆನ್ನೈ


 ಮರೀನಾ ಬೀಚ್..


ಕಳೆದ ವರ್ಷ ಅಕ್ಟೋಬರ್ ರಜೆಯಲ್ಲಿ  ಅಂಡಮಾನ್ ಗೆ ಟೂರ್ ಹೊರಟಾಗ ಎರ್ ಇಂಡಿಯಾದ ಪ್ರಮಾದದಿಂದ ಫ್ಲೈಟ್ ಕ್ಯಾನ್ಸಲ್ ಆದ ಪರಿಣಾಮವಾಗಿ ಎರಡು ದಿನ ಅವರ ಖರ್ಚಿನಲ್ಲಿ ‌ಚೆನ್ನೈನ ಒಂದು  ಹೋಟೆಲ್ ನಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಮಾಡಿದ್ದರು. ನಮಗೆ ಅದೊಂದು ಬೋನಸ್ ಟ್ರಿಪ್ ಮಾಡಲು ಸಹಕಾರಿಯಾಯಿತು. ಆ ಸಮಯದಲ್ಲಿ ನಾವು ಮರೀನಾ ಬೀಚ್ ನ ಸೌಂದರ್ಯ ಸವಿದೆವು.

ಬಂಗಾಳ ಕೊಲ್ಲಿಯಲ್ಲಿ ಚೆನ್ನೈನಲ್ಲಿರುವ ಮರೀನಾ ಬೀಚ್ ಭಾರತದ ಅತಿ ಉದ್ದದ ಮತ್ತು ವಿಶ್ವದ ಎರಡನೇ ಅತಿ ಉದ್ದದ ಬೀಚ್ ಆಗಿದೆ. ಸುಮಾರು 12 ಕಿಲೋಮೀಟರ್‌ಗಳ ಈ ಬೀಚ್ ದಕ್ಷಿಣದಲ್ಲಿ ಬೀಸಂಟ್ ನಗರದಿಂದ ಉತ್ತರದಲ್ಲಿ ಸೇಂಟ್ ಜಾರ್ಜ್ ಕೋಟೆಯವರೆಗೆ ವ್ಯಾಪಿಸಿದೆ. ಚೆನ್ನೈ ಮರೀನಾ ಬೀಚ್ ಅನ್ನು ಗವರ್ನರ್ ಮೌಂಟ್‌ಸ್ಟುವರ್ಟ್ ಎಲ್ಫಿನ್‌ಸ್ಟೋನ್ ಗ್ರಾಂಟ್ ಡಫ್ 1880 ರಲ್ಲಿ ನವೀಕರಿಸಿದರು. ಚೆನ್ನೈಗೆ ಪ್ರಯಾಣಿಸುವ ಎಲ್ಲಾ ಪ್ರವಾಸಿಗರು ಈ ಭವ್ಯವಾದ ಚೆನ್ನೈ ಬೀಚ್‌ಗೆ ಭೇಟಿ ನೀಡುವುದನ್ನು ತಪ್ಪಿಸುವುದಿಲ್ಲ. ಮರೀನಾ ಬೀಚ್ ಅನ್ನು ಬಸ್ಸುಗಳು, ಟ್ಯಾಕ್ಸಿಗಳು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಮೂಲಕ ಸುಲಭವಾಗಿ ತಲುಪಬಹುದು.



ಮರೀನಾ ಬೀಚ್ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಚಟುವಟಿಕೆಯಿಂದ ತುಂಬಿರುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಕಡಲತೀರಗಳ ಉದ್ದಕ್ಕೂ ನಡೆಯುವುದು ಎಲ್ಲರಿಗೂ ಆಹ್ಲಾದಕರ ಅನುಭವ ನೀಡುತ್ತದೆ ಸಂಜೆಯ ವೇಳೆಗೆ ಈ ಬೀಚ್ ಕಲಾಕೃತಿಗಳು, ಕರಕುಶಲ ಪ್ರದರ್ಶನಗಳು,  ಆಭರಣಗಳು ಮತ್ತು ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಹಲವಾರು ಮಳಿಗೆಗಳೊಂದಿಗೆ ಜಗಮಗಿಸುತ್ತದೆ.

 

 ಗಾಳಿಪಟಗಳನ್ನು ಹಾರಿಸುವುದು ಮತ್ತು ಕುದುರೆ ಸವಾರಿ ಈ ಕಡಲತೀರದಲ್ಲಿ ಜನಪ್ರಿಯ ಚಟುವಟಿಕೆಗಳಾಗಿವೆ.



ಮರೀನಾ ಕಡಲತೀರದ ಪ್ರಮುಖ ಆಕರ್ಷಣೆಗಳೆಂದರೆ  ಅಕ್ವೇರಿಯಂ ಮತ್ತು ಐಸ್ ಹೌಸ್. ಚೆಪಾಕ್ ಅರಮನೆ, ಸೆನೆಟ್ ಹೌಸ್, PWD ಕಛೇರಿ, ಪ್ರೆಸಿಡೆನ್ಸಿ ಕಾಲೇಜು ಮತ್ತು ಚೆನ್ನೈ ವಿಶ್ವವಿದ್ಯಾನಿಲಯವು ಬೀಚ್ ಡ್ರೈವ್‌ನಲ್ಲಿರುವ ಐತಿಹಾಸಿಕ ಕಟ್ಟಡಗಳಾಗಿವೆ.


ವಿಕ್ಟರಿ ಆಫ್ ಲೇಬರ್ ಮತ್ತು ಮಹಾತ್ಮ ಗಾಂಧಿ ಮರೀನಾ ಬೀಚ್‌ನಲ್ಲಿರುವ ಎರಡು ಪ್ರಮುಖ ಪ್ರತಿಮೆಗಳು. ಈ ಚೆನ್ನೈ ಕಡಲತೀರದ ಉದ್ದಕ್ಕೂ ಇರುವ ಇತರ ಪ್ರತಿಮೆಗಳಲ್ಲಿ ಸ್ವಾಮಿ ಶಿವಾನಂದ, ಅವಯ್ಯರ್, ತಂತೈ ಪೆರಿಯಾರ್, ತಿರುವಳ್ಳುವರ್, ಡಾ. ಅನ್ನಿ ಬೀಸೆಂಟ್, ಜಿಯು ಪೋಪ್, ಸರ್ ಥಾಮಸ್ ಮನ್ರೋ, ಸುಬ್ರಮಣಿಯ ಭಾರತಿಯಾರ್, ಕಾಮರಾಜರ್, ರಾಬರ್ಟ್ ಕಾಲ್ಡ್ವೆಲ್, ಕನ್ನಗಿ, ಕಾಮರಾಜರ್, ಎಂಜಿ ರಾಮಚಂದ್ರನ್ ಮತ್ತು ಶಿವಾಜಿ  ಗಣೇಶನ್ ಪ್ರತಿಮೆಗಳು ಮುಖ್ಯವಾಗಿವೆ.