04 June 2023

ಪ್ರತಿದಿನವೂ ಪರಿಸರ ದಿನಾಚರಣೆಯಾಗಲಿ....

 


ಪ್ರತಿದಿನವೂ ಪರಿಸರ ದಿನಾಚರಣೆಯಾಗಲಿ...

ಮತ್ತೊಮ್ಮೆ ಜೂನ್ ಬಂದಿದೆ.ಈ ತಿಂಗಳ ಐದು ವಿಶ್ವ ಪರಿಸರ ದಿನವೆಂದು ನೆನೆದು ಅಲ್ಲಲ್ಲಿ ಒಂದೊಂದು ಗಿಡನೆಟ್ಟು ಪೋಟೋ ಗೆ ಪೋಸ್ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದರೆ ಆ ವರ್ಷದ ಪರಿಸರ ದಿನ ಮುಗಿದಂತೆ ಉಳಿದಂತೆ ವರ್ಷಪೂರ್ತಿ ಪರಿಸರಕ್ಕೆ ಹಾನಿ ಮಾಡುವ ಕಾಯಕ ಮುಂದುವರೆಸುತ್ತಾ ಅತಿ ವೃಷ್ಟಿ ,ಅನವೃಷ್ಟಿ, ಉಷ್ಣಾಂಶ ಹಚ್ಚೆಳಕ್ಕೆ ನಾವೇ ಕಾರಣರಾದರೂ ಪ್ರಕೃತಿ ಮಾತೆ ಬೈಯ್ಯುತಾ ಮುಂದಿನ ವರ್ಷ ಜೂನ್ ಐದಕ್ಕೆ ಕಳೆದ ವರ್ಷ ನೆಟ್ಟ ಒಣಗಿದ ಗಿಡ ತೆಗೆದು ಹೊಸ ಗಿಡ ನೆಡುತ್ತೇವೆ?  

ವಿಶ್ವ  ಪರಿಸರ ದಿನಾಚರಣೆಯ 50ನೇ ವರ್ಷಾಚರಣೆಯಲ್ಲಿದ್ದೇವೆ. ಆದರೂ ಪರಿಸರ ಮಾಲಿನ್ಯದ  ಸವಾಲುಗಳು  ನಮ್ಮನ್ನು ಕಾಡುತ್ತಲೇ ಇವೆ.  ಪರಿಸರ ಸಮಸ್ಯೆಗಳಿಗೆ ಪ್ರತಿಕ್ರಿಯೆಯನ್ನು ಸಂಘಟಿಸಲು 1972ರಲ್ಲಿ ಆರಂಭ ಗೊಂಡ ವಿಶ್ವಸಂಸ್ಥೆಯ ಅಂಗಸಂಸ್ಥೆ ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮ (ಯುನೈಟೆಡ್ ನೇಷನ್ಸ್ ಎನ್ವಿರಾನ್ವೆಂಟ್ ಪ್ರೋಗ್ರಾಂ) ನಿಂದ ನೆದರ್ಲ್ಯಾಂಡ್ ಸಹಯೋಗದೊಂದಿಗೆ ಕೋಟ್ ಡಿ. ಐವರಿ ದೇಶ ಆತಿಥ್ಯ ವಹಿಸಿದೆ. ಈ ವರ್ಷದ ಥೀಮ್ ಸಲ್ಯೂಷನ್ ಟು ಪ್ಲಾಸ್ಟಿಕ್ ಪೊಲ್ಯೂಷನ್, ಯು ಎನ್ ಇ ಪಿ ವರದಿಯಂತೆ ಪ್ರತೀ ವರ್ಷವೂ ವಿಶ್ವದಾದ್ಯಂತ ಸುಮಾರು 430 ಮಿಲಿಯನ್ ಟನ್ ನಷ್ಟು ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ ಹಾಗೂ 2000 ಟ್ರಕ್ನಷ್ಟು ಪ್ಲಾಸ್ಟಿಕ್ನ್ನು ಪ್ರಪಂಚದಾದ್ಯಂತ ಕೆರೆ ನದಿ ಸಮುದ್ರಗಳಿಗೆ ಎಸೆಯಲಾಗುತ್ತಿದೆ.

ಪ್ಲಾಸ್ಟಿಕ್ ವಿಲೇವಾರಿ ಒಂದು ಜಾಗತಿಕ ಸಮಸ್ಯೆಯಾಗಿ ಬೆಳೆದು ನಿಂತಿದೆ, ಈ ಸಮಸ್ಯೆ ಜೈವಿಕ ಪ್ರಕ್ರಿಯೆಗಳನ್ನು ಬದಲಾಯಿಸುವ, ಆವಾಸ ಸ್ಥಾನಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಹವಾಮಾನ ವೈಪರೀತ್ಯಗಳಂತಹ ತೀವ್ರತರ ಸಮಸ್ಯೆಗಳಿಗೆ   ಎಡೆ ಮಾಡಿಕೊಡುತ್ತಿದೆ. ಈ ಪರಿಣಾಮಗಳು ನೇರವಾಗಿ ಜನಸಾಮಾನ್ಯನ ಸಾಮಾಜಿಕ ಸ್ವಾಸ್ಥ್ಯ, ಆಹಾರೋತ್ಪಾದನೆ, ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತಿದೆ.

ತೀವ್ರವಾಗಿ ಹೆಚ್ಚಳವಾಗುತ್ತಿರುವ ಪ್ಲಾಸ್ಟಿಕ್ ಮತ್ತು ಅದರ ಪರಿಣಾಮಗಳನ್ನು ಕಡಿಮೆ ಮಾಡಲೇಬೇಕಿರುವ ಅಗತ್ಯ ಉಂಟಾಗಿದ್ದು, ಯುಎನ್ಇಪಿಯು ಈ ಕುರಿತಂತೆ ಟರ್ನಿಂಗ್ ಆಫ್ ದ ಟ್ಯಾಪ್ ಎಂಬ ವರದಿಯನ್ನು ಸಿದ್ಧಪಡಿಸಿದ್ದು, ಮಾರುಕಟ್ಟೆ ರೂಪಾಂತರದ ಮೂಲಕ ಪ್ಲಾಸ್ಟಿಕ್ ನಿಯಂತ್ರಣ ಕುರಿತಂತೆ ಕ್ರಮವನ್ನು ರೂಪಿಸಿದೆ. ಇದು ಪರಿಸರ, ಆರ್ಥಿಕತೆ ಎರಡನ್ನೂ ಗಮನದಲ್ಲಿರಿಸಿಕೊಂಡು ಸಿದ್ಧಪಡಿಸಿದ ವರದಿ. ವರದಿಯ ಪ್ರಕಾರ ರಿಯೂಸ್, ರಿಸೈಕಲ್, ರಿ ಓರಿಯೆಂಟ್ ಹಾಗೂ ಡೈವರ್ಸಿಫೈ ಎಂಬ ಅಂಶಗಳಿಂದ ಪ್ಲಾಸ್ಟಿಕ್ ನಿರ್ವಹಣೆಗೆ ಮಾರ್ಗ ಸೂಚಿಯಾಗಿದೆ. 

ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನದ ಏರಿಕೆಯಲ್ಲಿಯೂ  ಪ್ಲಾಸ್ಟಿಕ್ನ ಪಾರಮ್ಯ ಮರೆಯಲಾಗದು. ಪ್ಲಾಸ್ಟಿಕ್ನ ತಯಾರಿಕೆಯಿಂದ ಹಿಡಿದು ವಿಲೇವಾರಿವರೆಗೂ ಇಂಗಾಲದ ತೀವ್ರತೆ ಇರುವ  ಚಟುವಟಿಕೆಗಳಾಗಿದ್ದು, ಜಾಗತಿಕವಾಗಿ ಪ್ಲಾಸ್ಟಿಕ್ ಉದ್ಯಮದ ತ್ವರಿತವಾದ ಹೆಚ್ಚಳದಿಂದಾಗಿ ಹಸಿರುಮನೆ ಅನಿಲಗಳ ಉತ್ಪಾದನೆಯೂ ಹೆಚ್ಚಾಗಿದೆ. ಇದು ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ. ಮನುಷ್ಯ ಬದುಕಬಲ್ಲ ಗರಿಷ್ಠ ತಾಪಮಾನವು 35 ಡಿಗ್ರಿ ಸೆಂಟಿಗ್ರೇಡ್ ಆಗಿದ್ದು, ಈ ವರ್ಷರ ಬೇಸಿಗೆಯಲ್ಲಿ ಭ ಭಾರತದ ಹಲವೆಡೆ  ಉಷ್ಣತೆಯು  ಪ್ರಮಾಣವು 45ಡಿಗ್ರಿ ದಾಟಿ
ಹೆಚ್ಚಿನ ತಾಪಮಾನವುಂಟಾಗಿ  ಬದುಕು  ಅಸಹನೀಯವಾಗಿರುವುದು ನಮ್ಮ ಕಣ್ಣ ಮುಂದಿದೆ.ಮುಂದಿನ ದಿನಗಳಲ್ಲಿ ಈ ಉಷ್ಣತೆ ಏರುವುದಿಲ್ಲ ಎಂಬುದಕ್ಕೆ ಖಾತ್ರಿ ಇಲ್ಲ.

ಜೀವ ವೈವಿಧ್ಯತೆಯ ಮೇಲೆಯೂ  ಪ್ಲಾಸ್ಟಿಕ್ನ ಪರಿಣಾಮ ಘನಘೋರ.
ಜೀವಿ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿನ ಬಳಕೆಯಿಂದಾಗಿ ಪ್ಲಾಸ್ಟಿಕ್ ನಿರಂತರವಾಗಿ ಉಳಿದು ಹೋಗಿದೆ. ನೀರಿನ ಆಕರಗಳಿಗೆ ಪ್ಲಾಸಿಕ್
ತ್ಯಾಜ್ಯ, ಪ್ಲಾಸ್ಟಿಕ್ ಉತ್ಪಾದನೆಯಿಂದ ಬಿಡುಗಡೆಯಾಗುವ ರಾಸಾಯನಿಕಗಳು ಜೀವ ವೈವಿಧ್ಯತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಸಾಗರ ಪರಿಸರ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಶೇ.10ರಷ್ಟು ಹೆಚ್ಚುತ್ತಲೇ ಇದ್ದು, ಸಾಗರ ಪರಿಸರ ವ್ಯವಸ್ಥೆಯಲ್ಲಿ ಶೇ. 86ರಷ್ಟು ಸರಿಸೃಪಗಳು, ಶೇ.44ರಷ್ಟು ಜಲಪಕ್ಷಿಗಳು, ಶೇ.43ರಷ್ಟು ಸಸ್ತನಿಗಳು ಅಪಾಯದಂಚಿಗೆ ತಲುಪಿದ್ದು, ಸುಮಾರು 800 ವಿವಿಧ ಜಾತಿಯ ಸಾಗರ ಜೀವ ವೈವಿಧ್ಯವು ಅಪಾಯದಂಚಿಗೆ ಸೇರಿವೆ. ಹೀಗೆಯೆ ಪ್ರಾಣಿ ಪಕ್ಷಿಗಳ ಆವಾಸ ಸ್ಥಾನ ನಾಶಕ್ಕೆ ಹಾಗು ಪರಿಸರ ವ್ಯವಸ್ಥೆಯ ಆಹಾರ ಸರಪಳಿಯಲ್ಲಿ ಪ್ಲಾಸ್ಟಿಕ್ ಸೇರಿಹೋಗಿರುವುದು ಅಪಾಯಕಾರಿ ಕರೆಗಂಟೆಯಾಗಿದೆ.

ಮಾನವನ ಆರೋಗ್ಯದ ಮೇಲೆ ಪ್ಲಾಸ್ಟಿಕ್ ದುಷ್ಪರಿಣಾಮಗಳು ಹಲವಾರು ಸಂಶೋಧನೆಗಳಿಂದ ಋಜುವಾತಾಗಿದೆ.
ಉಸಿರಾಟದಿಂದಲೋ, ಆಹಾರ ಸೇವನೆಯಿಂದಲೋ, ಸ್ಪರ್ಶದಿಂದಲೋ ಪ್ರತಿನಿತ್ಯ ಹಲವಾರು ರಾಸಾಯನಿಕಗಳ, ಮೈಕ್ರೋಪ್ಲಾಸ್ಟಿಕ್ನ ಸಂಪರ್ಕಕ್ಕೆ ಬರುತ್ತೇವೆ, ಡಬ್ಬ ಡಬ್ಲ್ಯುಎಫ್ನ ವರದಿಯೊಂದರಂತೆ ವಾರವೊಂದಕ್ಕೆ ಮನುಷ್ಯನು  ತನಗರಿವಿಲ್ಲದೇ  ಸುಮಾರು 5 ಗ್ರಾಂ ನಷ್ಟು ಪ್ಲಾಸ್ಟಿಕ್ ಅನ್ನು  ಸೇವಿಸುತ್ತಿದ್ದಾನೆ. ಇದು ಮನುಷ್ಯನಲ್ಲಿ, ಅನೇಕ ರೋಗಗಳಿಗೆ, ಶಾಶ್ವತ ನ್ಯೂನತೆಗಳಿಗೆ, ಮಕ್ಕಳಲ್ಲಿ ಶಿಶುಮರಣಕ್ಕೆ ಕಾರಣ ವಾಗುತ್ತಿರುವುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಹಾಗೂ ಪ್ಲಾಸ್ಟಿಕ್ನಿಂದ ಕ್ಯಾನ್ಸರ್, ಹಾರ್ಮೋನುಗಳ ಚಟುವಟಿಕೆಗಳಲ್ಲಿ ಬದಲಾವಣೆಗಳಾಗಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಪ್ಲಾಸ್ಟಿಕ್ ಆಹಾರ ಸರಪಳಿಯಲ್ಲಿ ಉಳಿದು ಹೋಗಿರುವುದು ಅಪಾಯಕಾರಿ ಬೆಳವಣಿಗೆ ಹೀಗೆ, ಜೀವಿ ಪರಿಸರ ಪ್ಲಾಸ್ಟಿಕ್ ಉಳಿದುಹೋಗಿದ್ದು, ಪ್ಲಾಸ್ಟಿಕ್ ನಿಯಂತ್ರಣ ಮತ್ತು ಪ್ಲಾಸ್ಟಿಕ್ನ ಅಪಾಯಗಳ ನಿರ್ಮೂಲನೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಿದೆ.

ಪ್ಲಾಸ್ಟಿಕ್ನಿಂದ ಮಾತ್ರವಲ್ಲದೇ, ಮಾನವನ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಂದ ಮೂಲಭೂತ ಅಂಶಗಳಾದ ಗಾಳಿ, ನೀರು, ಶಬ್ದ, ಮಣ್ಣು ಮಲಿನವಾಗುತ್ತಿವೆ, ಕೇವಲ ಆರ್ಥಿಕ ಅಭಿವೃದ್ಧಿಯಷ್ಟೇ ಅಲ್ಲದೆ ಪರಿಸರ ಸಂರಕ್ಷಣಾ ದೃಷ್ಟಿಕೋನ ಎಲ್ಲ ಅಭಿವೃದ್ಧಿಕಾರ್ಯಗಳ ಆರಂಭಕ್ಕೂ ಮೊದಲ ಆದ್ಯತೆಯಾಗಬೇಕು.

ಕಳೆದ ವರ್ಷ ಕೇಂದ್ರ ಸರ್ಕಾರ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಪೂರ್ಣವಾಗಿ ಜಾರಿಯಾಗದಿದ್ದರೂ ತಕ್ಕಮಟ್ಟಿಗೆ ಈ ಪ್ಲಾಸ್ಟಿಕ್ ನಿಷೇಧ ದಾರಿಯಾಗುತ್ತಿದೆ. ಹಣ್ಣು ,ದಿನಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಪೇಪರ್, ಮತ್ತು ಬಟ್ಟೆ ಚೀಲ ಬಳಕೆ ಹೆಚ್ಚಾಗಿದೆ. ಇದು ಸಕಾರಾತ್ಮಕ ಬದಲಾವಣೆಯ   ಸೂಚಕ  . ಇತ್ತೀಚಿಗಭೆ   ತಿರುಮಲಕ್ಕೆ ಭೇಟಿ ನೀಡಿದಾಗ ಅಲ್ಲಿ ಎಲ್ಲಾ ಮಾರಾಟ ಮಳಿಗೆಗಳಲ್ಲಿ ಪ್ಲಾಸ್ಟಿಕ್  ನೀರಿನ ಬಾಟಲ್ ಬದಲಿಗೆ ಗಾಜಿನ ನೀರಿನ ಬಾಟಲ್ ಮಾರುವುದು ಕಂಡು ಖುಷಿಯಾಯಿತು.ಮತ್ತೊಂದು ಉದಾಹರಣೆಯಾಗಿ ಕಳೆದ ವಾರ ಚಿಕ್ಕಮಗಳೂರಿನ ಝರಿ ಇಕೋ ಸ್ಟೇ ನಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ವಾತಾವರಣ ಕಂಡು ಖುಷಿಯಾಯಿತು.
ಪ್ಲಾಸ್ಟಿಕ್ ಮುಕ್ತ ಜಗವ ಕಾಣಲು ಮತ್ತು
ಪರಿಸರ ಸಂರಕ್ಷಣೆಯಲ್ಲಿ ಸರ್ಕಾರಗಳು ಯಾವುದೇ ಕಠಿಣ ಕಾನೂನು ಜಾರಿಗೊಳಿಸಿದರೂ   ವೈಯಕ್ತಿಕ ಮತ್ತು ಸಮುದಾಯದ ಪಾತ್ರ ಹಿರಿದು ನಮ್ಮ ಜವಾಬ್ದಾರಿ ಅರಿತು ನಾವು ನಮ್ಮ ಪರಿಸರ ಸಂರಕ್ಷಣೆಗೆ ಪಣ ತೊಡಬೇಕಿದೆ.ತನ್ಮೂಲಕ ಸುಸ್ಥಿರ ಅಭಿವೃದ್ಧಿಗೆ ಪಣ ತೊಡಬೇಕಿದೆ.ಅದಕ್ಕೆ ಪ್ರತಿದಿನವೂ ಪರಿಸರದಿನಾಚರಣೆ ಆಚರಿಸುವ ಮನಸ್ಥಿತಿಯನ್ನು ನಾವು ಹೊಂದಬೇಕಿದೆ.ಏಕೆಂದರೆ ಇರುವುದೊಂದೇ ಭೂಮಿ ಇದರ ಅವಶ್ಯಕತೆ ನಮಗಿದೆ .ನಮ್ಮ ಅವಶ್ಯಕತೆ ಭೂಮಿಗಿಲ್ಲ. ಈ ಭುವಿಯನ್ನು ಉಳಿಸುವ ಜವಾಬ್ದಾರಿ ನಮ್ಮದೆ ಅಲ್ಲವೇ? 

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು

No comments: