06 June 2023

ನೆನಪುಗಳ ಮಾತು(ಪುಸ್ತಕ ವಿಮರ್ಶೆ)


ನೆನಪುಗಳ ಮಾತು..ನೀವೂ  ಕೇಳಿ ಮತ್ತು ಓದಿ..


ವಿಶ್ವ ಪುಸ್ತಕ ದಿನದಂದು ಬೆಂಗಳೂರಿನ ಬಿ ಬಿ ಸಿ ನಲ್ಲಿ ನನ್ನ "ಕ್ಯಾತ್ಸಂದ್ರ ಟು ಕ್ಯಾತನಮಕ್ಕಿ" ಕೃತಿ ಬಿಡುಗಡೆಯಾಯಿತು.ಅಂದೇ ಶಶಿಕಾಂತ್ ಬಿಲ್ಲಾಪುರ ರವರ "ನೆನಪುಗಳ ಮಾತು " ಕಾದಂಬರಿ ಬಿಡುಗಡೆಯಾಯಿತು. ಮೊದಲ ಭೇಟಿಯಲ್ಲಿ ಶಶಿಕಾಂತ್ ಹಾಗೂ ಅವರ ಜೊತೆಯಲ್ಲಿ ಅವರ ಸ್ನೇಹ ಬಳಗ ನನ್ನ ಬಹುಕಾಲದ ಗೆಳೆತನವೇನೋ ಎಂಬಂತೆ ಬೆರೆತೆವು .  

ಪುಷ್ಪ ಸರ್ಜಾಪುರ,ಸುನಿತಾ ಸರ್ಜಾಪುರ,ಚಂದ್ರಶೇಖರ ಸರ್ಜಾಪುರ ,ಸಾಕರಾಜು ತಾವರೆಕರೆ..

ಶ್ರೀನಿವಾಸ್ ಸಂಪಂಗೆರೆ,ಸಂತೋಷ  ರವರು ತಮಿಳುನಾಡು...  ಇವರ  ಭೇಟಿಯಾಗಿ ಎಷ್ಟೋ ವರ್ಷಗಳ ಪರಿಚಯವೇನೋ ಎಂಬಂತೆ ಮಾತನಾಡಿಸಿದರು.  ಇವರು ನನ್ನ ಹತ್ತಕ್ಕೂ ಹೆಚ್ಚು ಕೃತಿಗಳ ಖರೀದಿಸಿದರು. ಇದೇ ಪುಸ್ತಕ ಬಂಧ.


ಬಿಡುವಿರದ ಕಾರ್ಯದೊತ್ತಡದ ನಡುವೆ ಮೊನ್ನೆ 

ಶಶಿಕಾಂತ್ ಬಿಲ್ಲಾಪುರ ರವರ ಕಾದಂಬರಿ  ಓದಿದೆ .ನಿಜಕ್ಕೂ ಮೊದಲ ಪುಸ್ತಕದಲ್ಲೇ ಭರವಸೆ ಮೂಡಿಸುವ ಲೇಖಕರು ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇವರ ಕೃತಿಯು  ಒಂದು ಸುಮಧುರ ಭಾವನೆಗಳ ಹೊತ್ತಿಗೆ. ಒಬ್ಬ ಯುವ ಪ್ರೇಮಿಯ ಮೊದಲ ಪ್ರೇಮದ ಪಯಣದಲ್ಲಿ ಯುವಕನ ಮನಸ್ಸಿನಲ್ಲಿ ಉಂಟಾಗುವ ಗೊಂದಲಗಳು, ಮಧುರ ಭಾವನೆಗಳು, ಮೊದಲ ಪ್ರೇಮದ ಕನಸುಗಳನ್ನು ತಮ್ಮ ಉತ್ತಮ ಬರಹದಿಂದ ರಸವತ್ತಾಗಿ ವರ್ಣಿಸಿದ್ದಾರೆ. 

ಈ ಕಾದಂಬರಿಯ ಕಥಾನಾಯಕ ತನ್ನ ಪ್ರೀತಿಯನ್ನು ಪ್ರೇಯಸಿಯ ಎದುರು ವ್ಯಕ್ತಪಡಿಸಲು ಪಡುವ ಮಾನಸಿಕ ತೊಳಲಾಟ, ಮುಜುಗರ, ಎದುರಾದ ಸಮಸ್ಯೆಗಳ ಆಗರ, ಎಲ್ಲವನ್ನು ಅಪ್ಪಿಕೊಂಡ ಎದೆಗಾರಿಕೆ ಓದುಗರ ಮನಸ್ಸನ್ನು ತಣಿಸುತ್ತವೆ. ಹೊಸತನದ ಪ್ರೇಮ ಕಥೆಯೊಂದು ಶುರುವಾಗಿ ಅರಳಿ ಹೂವಾದಾಗ ದುತ್ತನೆ ಎದುರಾಗುವ ಸಮಸ್ಯೆಗಳು ಹೇಗೆ ಪ್ರೀತಿಯ ಪಯಣದಲ್ಲಿ ಅಡಚಣೆಯಾಗಿ ನಿಲ್ಲುತ್ತವೆ ಎಂಬುದನ್ನು ತುಂಬ ಪ್ರಬುದ್ಧತೆಯಿಂದ ಇಲ್ಲಿ ತೆರೆದಿಡಲಾಗಿದೆ. ಎಲ್ಲೂ ಅತಿರೇಕವಿಲ್ಲದೆ, ಎಲ್ಲಾ ಅಪರೂಪವಾಗಿದೆ. 

ಪ್ರೀತಿಸಿದ ನಂತರದ ಅವಸ್ಥೆ, ಪಡುವ ವೇದನೆ, ಏಳು-ಬೀಳುಗಳ ಅಂತರಾಳವನ್ನು ಬಿಂಬಿಸಿದ ರೀತಿ ಮನೋಜ್ಞವಾಗಿದೆ. ಪ್ರತಿಯೊಬ್ಬ ಪ್ರೇಮಿಯು ಇಲ್ಲಿ ಕಥೆಯಾಗಿದ್ದಾನೆ, ಕಥೆಗೆ ಕೊಡುಗೆಯಾಗಿದ್ದಾನೆ.

ಎಂಬ ಲೀಲಾ ಸೋಂಪುರ ರವರ ಅಭಿಪ್ರಾಯ ದಿಟವಾಗಿದೆ.


ಲೇಖಕರೇ ಹೇಳಿಕೊಂಡಂತೆ 

ಜೀವನವೆಂಬುದು ಸಾಗರದಂತೆ ಆಳ, ಅದರಲ್ಲಿ ಜೀವಿಸಬೇಕಾದರೆ ಪ್ರತಿಯೊಂದು ಜೀವಿಯೂ ಈಜಲೇಬೇಕು. ಅದು ಅನಿವಾರ್ಯ. ಅಂತಹ ಜೀವನದಲ್ಲಿ, ಜೀವಿಗಳಲ್ಲಿ ತಮ್ಮದೇ ಆದ ಕಷ್ಟ, ಸುಖ, ನೋವು-ನಲಿವುಗಳ ಪಳಿಯುಳಿಕೆಗಳಿವೆ. ಅವುಗಳದ್ದೇ ಆದ ಅಸ್ತಿತ್ವವಿದೆ, ಅಪಾರತೆಯಿದೆ.

ಅಂತಹ ಜೀವಗಳ, ಜೀವನದ ಕಥೆಗಳು ಕೇವಲ ಅನುಭವಿಸಿದವನಿಗೆ ಅಪಾರತೆಯನ್ನು ಉಂಟುಮಾಡಿದರೆ, ಅನುಭವಿಸಿದವನು ಅದನ್ನು ವರ್ಣಿಸಿದಾಗ ಕೇಳುವವನಿಗೆ ಅಲಸ್ಯವನ್ನು ಉಂಟುಮಾಡುವುದು ಸಹಜ, ಸ್ವಾಭಾವಿಕ. ಏಕೆಂದರೆ, ಜೀವಿಗಳಲ್ಲಿ ಮನುಷ್ಯ ಬುದ್ಧಿವಂತ, ಕಷ್ಟದ ಪ್ರಮಾಣ ಅಳೆಯುವಷ್ಟು ಧೀಮಂತ. ಹೇಳುವವನು ವರ್ಣಿಸಿದ ನೋವು ಕೇಳುವವನಿಗೆ ಸಣ್ಣ ಪ್ರಮಾಣದ್ದಾಗಿದ್ದರೆ ಅಲಸ್ಯ ಅಥವಾ ಅಲ್ಪವಾಗಿ ಕಾಣಬಹುದು. ಆ ಪ್ರಮಾಣ ಹೆಚ್ಚಾಗಿದ್ದು ಅದು ಕೇಳುಗನಿಗೆ ಹೊಸತಾಗಿದ್ದರೆ ಅದು ಆಶ್ಚರ್ಯ, ಅದ್ಭುತ ಅಥವಾ ದೊಡ್ಡದಾಗಿ ಕಾಣಬಹುದು.   ಜೀವನದಲ್ಲಿ ತಮ್ಮದೇ ಆದ ನೋವು-ನಲಿವುಗಳ, ಕಷ್ಟ-ಸುಖಗಳ, ಪ್ರೀತಿ-ದ್ವೇಷಗಳ ಕಥೆಗಳಿವೆ. ಅಂತಹ ಕಥೆಯೊಂದನ್ನು ಹಂಚಿಕೊಳ್ಳಬೇಕು. ಆ ಅನುಭವಗಳನ್ನು ಅರ್ಪಿಸಬೇಕು. ಇದೇನು ಅನುಭವಕ್ಕೆ ಮೀರಿದ್ದಲ್ಲ. ಅನುಭವಕ್ಕೆ ಸ್ವಲ್ಪ ದೂರವಿರಬಹುದು, ಅನುಭವಕ್ಕೆ ಅಂತರವಿರಬಹುದು. 

ಹೌದು ಈ ಕಾದಂಬರಿ ಓದಿದಾಗ  ಇದು ಲೇಖಕರ ಅನುಭವ ಕಥನವಿಬಹುದೇ? ಇವರ ಕಥನದ ಕೆಲ ಪಾತ್ರಗಳು ಅಂದು ನಾನು  ಬಿಬಿಸಿ ಯಲ್ಲಿ ಭೇಟಿ ಮಾಡಿದ ಸ್ನೇಹಿತರು ಇರಬಹುದಾ ? ಎಂಬ ಅನುಮಾನ ಕಾಡಿತು. ಅವರು ಮುಖತಃ ಸಿಕ್ಕಾಗ ಅವರನ್ನೇ ಕೇಳುವೆ .ಒಟ್ಟಾರೆ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿರುವ ಶಶಿಕಾಂತ್ ರವರು ಕನ್ನಡ ಸಾಹಿತ್ಯ ಲೋಕದಲ್ಲಿ ಇನ್ನೂ ಹೆಚ್ಚಿನ ಕೃತಿ ರಚಿಸಲಿ ಹೆಚ್ಚು ಓದುಗರ ಸೆಳೆಯಲಿ ಎಂದು ಹಾರೈಸುವೆ.

ನಿಮಗೂ "ನೆನಪುಗಳ ಮಾತು "  ಕೇಳುವ ಆಸೆಯಾದರೆ  9980623234 ಸಂಖ್ಯೆಗೆ ಕರೆ ಮಾಡಿ  ಉಷಾ ಪ್ರಕಾಶನ ಸಂಪರ್ಕಿಸಿ 140₹ ಕೊಟ್ಟು ಖರೀದಿಸಿ ಓದಬಹುದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


 

No comments: