13 April 2020

ಗೋಕುಲ ನಿರ್ಗಮನ (ಗೀತನಾಟಕ ವಿಮರ್ಶೆ) ಪ್ರಥಮ ಬಹುಮಾನ ಪಡೆದ ವಿಮರ್ಶೆ




*ಗೀತನಾಟಕ ವಿಮರ್ಶೆ*
   ನಾಟಕ:  ಗೋಕುಲ ನಿರ್ಗಮನ
   
   ಕವಿ:   ಪು ತಿ ನರಸಿಂಹಾಚಾರ್
ಹೊಸಗನ್ನಡದ ಓದಿನ‌ ನಡುವೆ ಹಳಗನ್ನಡದ ಓದು ಮೊದಲಿಗೆ ತುಸು ಕಷ್ಟವಾದರೂ ಇತ್ತೀಚೆಗೆ ಕುವೆಂಪು ರವರ ಚಿತ್ರಾಂಗಧ ಕೃತಿ ಓದಿದ್ದರಿಂದ ಅಷ್ಟೇನೂ ಕಠಿಣ ಎನಿಸಲಿಲ್ಲ.
ದೇವರ ಪ್ರಾರ್ಥನೆಯ ಮೂಲಕ ಆರಂಭವಾಗುವ ಗೋಕುಲ ನಿರ್ಗಮನ ಗಿತನಾಟಕ ಗೀತೆಗಳಲ್ಲಿ ಮುಂದುವರೆಯುವುದು ವಿಶೇಷ. ರಾಗಗಳ ಬಗ್ಗೆ ಆವರಣದಲ್ಲಿ ಸೂಚನೆಗಳನ್ನು ನೀಡಿದ್ದರೂ ನಮಗೆ ರಾಗದ ಬಗ್ಗೆ ಅಷ್ಟು ತಿಳುವಳಿಕೆಯು ಇಲ್ಲದಿದ್ದರೂ ಗೀತೆಗಳ ಪ್ರಾಸ ಮತ್ತು ಅರ್ಥವನ್ನು ಅರಿಯಲು ಕಷ್ಟ ಆಗುವುದಿಲ್ಲ.
ವಿವಿಧ ಪಾತ್ರಗಳಾದ ಕಥಾ ನಾಯಕ ಕೃಷ್ಣ, ಬಲರಾಮ,ಅಕ್ರೂರ ,ರಾದೆ,ನಾಗವೇಣಿ ಗೋಪಿಕೆಯರು, ಗೋಪಾಲಕರು,ಹಿರಿಯರು, ಋಷಿಗಳು, ಎಲ್ಲರ ಪಾತ್ರಗಳನ್ನು ಗೀತನಾಟಕದಲ್ಲಿ ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ ಕವಿ.
ಕೃಷ್ಣನ ಕೊಳಲಿನ ನಾದವನು ಕೇಳಿದ
ಬೃಂದಾವನದಲಿ ಸಖಿಯರ
ಸಖಿಯರ ಭಾವನೆಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ
ಸಂಗೀತದ ಮೂಲಕ ಕಥೆಯನ್ನು ಹೇಳುವ ಪರಿಯೇ ಚೆಂದ ಅದರಲ್ಲೂ ಪ್ರಾಸಗಳ ಮೂಲಕ ನಾನಾರ್ಥಗಳ ಸೂಚಿಸುವ ಸಂಭಾಷಣೆ ಈ ಗೀತನಾಟಕದ ಪ್ರಮುಖ ಅಗ್ಗಳಿಕೆ.
ಸುದಾಸ ನ ಮಾತಿನಲ್ಲಿ ಹೇಳುವಂತೆ "ಹುಚ್ಚು ಹೆಚ್ಚು ಜಗಕೆಲ್ಲ ಹುಚ್ಚು" ಎಂದು ಹೇಳಿರುವುದು ಈಗಲೂ ಆದ್ಯಾತ್ಮದ ಅನುಭೂತಿಯನ್ನು ಹೊಂದಿರುವವರಿಗೆ, ಆಸ್ತಿಕರಿಗೆ ಕೃಷ್ಣ ಹೆಸರ ಕೇಳುವುದೇ ಹುಚ್ಚು.
"ನಿದ್ದೆ ಬರದ ಉದ್ದವಾದ ಇರುಳಿನಂತೆ....."
ಎಂಬ ಗೋಪಿಕೆಯರು ಹಾಡುವ 
ಸಂಭಾಷಣೆ ರೂಪದ ಪದ್ಯಗಳೋದುವುದೆ ಮನಕ್ಕೆ ಮುದ ನೀಡುತ್ತದೆ.
"ನಾನೆ ನಲ್ಲ  ನಾನು ಎಲ್ಲ ನಾನು ನಾನಲ್ಲ ನಿಮ್ಮಕ್ಕರೆಯ ಹಾಲೊಳು ಕರಗಿಹೆನಲ್ಲ ನನಗು ನಾನಿಲ್ಲ " ಎಂಬ ಕೃಷ್ಣನ ಮಾತಿನಲ್ಲಿ ಸಾವಿರ ಅರ್ಥವಿದೆ.
ಕೃಷ್ಣ ನ ಕಂಡ ಹಿರಿಯರೂ ಕೂಡ ಅವನ ಕೊಳಲ ನಾದವನ್ನು ಆಲಿಸಿ ಮನದುಂಬಿ ಕುಣಿವರು.
ಒಂದು‌ ಹಂತದಲ್ಲಿ  ಕೃಷ್ಣನ ಕಂಡ ಋಷಿಗಳು ಸಹ ತಮಗರಿವಿಲ್ಲದೇ ಕೃಷ್ಣನ‌ಕಂಡು ಹಾಡಿ ಕುಣಿವರು ಇನ್ನೂ ಸಾಮಾನ್ಯ ಮಾನವರಾದ ನಾವು ಈ ಗೀತನಾಟಕದ ತಾಳ ,ಲಯ ಬದ್ದ ,ಪ್ರಾಸಬದ್ದಪದಗಳ ಓದುತ ಮನವು ಕುಣಿಯದಿರದು ಕಾಲುಗಳು ಮಿಸಕುದಿರವು.
ವೇಣು ವಿಸರ್ಜನ ಭಾಗದಲ್ಲಿ ಎಲ್ಲರ ಅಪೇಕ್ಷಣೀಯವಾಗಿ ಮತ್ತೆ ಕೊಳಲ ನುಡಿಸುವ ಕೃಷ್ಣನ ಸಂಗೀತ ಒಬ್ಬೊಬ್ಬರಿಗೆ ಒಂದು ರೀತಿ ಕೇಳುವುದು. ಈಗಲೂ ಅಷ್ಟೇ, ಕೃಷ್ಣ ಕೆಲವರಿಗೆ ಕಳ್ಳ, ಕೆಲವರಿಗೆ ಪ್ರಿಯಕರ,ಕೆಲವರಿಗೆ ದೈವ ಇತ್ಯಾದಿ.
ಕೊನೆಯಲ್ಲಿ ಕೊಳಲ ತೊರೆದು ಮತ್ತು ಗೋಕುಲದಿಂದ ನಿರ್ಗಮನದ ಸಮಯದಲ್ಲಿ ಎಲ್ಲರ ಶೋಕ ಮೇರೆ ಮೀರುವುದು, ಗೋಪಿಕೆಯರ ಮೂಲಕ ಕೃಷ್ಣ ನಿರ್ಗಮನದ ವಿಷಯ ತಿಳಿದ ರಾಧೆಯ ನೋವು ವರ್ಣಿಸಲು ಸಾಧ್ಯವಿಲ್ಲ.
"ಗುರು ಲಘುವೆನ್ನದೆ ಜಗವೆಲ್ಲ ಕುಣಿಸಿದ ಬಲುಮೆಯ ಕೊಳಲೆ "ಎಂಬ  ಸಾಲಿನೊಂದಿಗೆ ಮುಕ್ತವಾಗುವ ಈ‌ಗೀತನಾಟಕವನ್ನು ಓದಿದ ನಾವೇ ಧನ್ಯರು .ಈ‌ ಕಲಿಗಾಲದಲ್ಲಿ ಆಧುನಿಕತೆಯ ಭರಾಟೆಯಲ್ಲಿ ಭಗವನ್ನಾಮ‌ ಸಂಕೀರ್ತನೆಗೆ ಸಮಯವಿಲ್ಲ ಎಂದು ಸಬೂಬು ಹೇಳುವ ಮಂದಿ ಈ ಗೀತ ನಾಟಕ ಓದಿದರೆ ಕೃಷ್ಣನ ಸ್ಮರಣೆ ಮಾಡಿದಂತಾಗುವುದು.ಕೃಷ್ಣಾರ್ಪಣಮಸ್ತು...
*ಸಿ ಜಿ‌  ವೆಂಕಟೇಶ್ವರ*
*ತುಮಕೂರು*

No comments: