06 April 2020

ನಿರೀಕ್ಷೆ (ಕಥೆ) ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಮತ್ತು ನಗದು ಬಹುಮಾನವನ್ನು ಪಡೆದ ಕಥೆ

*ನಿರೀಕ್ಷೆ* ಕಥೆ

"ಅಮ್ಮಾ ನನಗೆ ಇಲ್ಲಿ ಊಟ ಸರಿಯಾಗಿ ಸೆಟ್ ಆಗ್ತಾ ಇಲ್ಲ, ಯಾಕೋ ಬೇಜಾರು, ನಿನ್ನ ನೋಡಬೇಕು ಅಂತ ಆಸೆ ಆಗ್ತಾ ಐತೆ ಉರಿಗ್ ಬರಲೇನಮ್ಮ " ಎಂದು ಪೋ‌ನಿನಲ್ಲೆ ಬಿಕ್ಕಳಿಸಿದ್ದನ್ನು ಕೇಳಿ ತಾಯಿ ಕರುಳು ಚುರ್     ಎಂದು ‌ಅಳುತ್ತಲೇ "ಯಾಕೋ ಮಗ ಏನಾತೋ? ನಿನ್ ಮನೆಗೆ ನೀನು ಬರೋಕೆ ಇದ್ಯಾಕೋ ಇಂಗ್ ಕೇಳ್ತಿಯಾ ನಾಳೆನೇ ಬಾ .ಬಸ್ ಚಾರ್ಜಿಗೆ ದುಡ್ ಐತೇನಪ್ಪ ."
"ಹೂಂಕಣಮ್ಮ ಐನೂರು ರುಪಾಯ್ ಐತೆ "ಎಂದ ಮಗ . "ಸರಿ ನಾಳೆ ಬಾರಪ್ಪ ಫೋನ್ ಇಕ್ಕನೇನಪ್ಪ ,ಸರಿ ನಾಳೆ ಬಾ ಹುಸಾರು" ಎಂದು ಅಮ್ಮ ಪೋನಿಟ್ಟಿರು.

"ನಿಮ್ಮಪ್ಪ  ನೀನು ಐದು ವರ್ಷ‌ ಇದ್ದಾಗ ಹಾವು ಕಡದು ತೀರಕಂಡರು ಹೆಣ್ಣೆಂಗಸಾದ ನಾನು ನಿನ್ನ ಹೊಟ್ಟೆ ಬಟ್ಟೆ ಕಟ್ಟಿ ಬೆಳಿಸಿ ಕೂಲಿನಾಲಿ ಮಾಡಿ ಇಸ್ಕೂಲಿಗೆ ಕಳಿಸಿದರೆ ಹತ್ತನೇ ಕ್ಲಾಸಿಗೆ ಪೇಲಾದೆ, ಮತ್ತೆ ಕಟ್ಟಿಸಿ ಮುಂದಕ್ಕೆ ಕಳಿಸಿದರೆ ಸರಿಯಾಗ್ ಒದ್ದೇ ಈಗ ಪಿಈಸಿನಲ್ಲೂ ಪೇಲಾದ್ಯಲ್ಲೋ, ಮಗ ನಿ‌ನಗೆ ಸ್ವಲ್ಪನಾದರು ಜಬಾಬ್ದಾರಿ ಬ್ಯಾಡವಾ? " ಎಂದು ಸಾಕವ್ವ ಒಂದೇ ಸಮನೆ ಮಗನನ್ನು ಬೈಯತ್ತಿದ್ದುದು ಇಡೀ ಓಣಿಗೆ ಕೇಳುತ್ತಿತ್ತು. ತಲೆ ತಗ್ಗಿಸಿಕೊಂಡು ಎಲ್ಲವನ್ನೂ ‌ಕೇಳುತ್ತಿದ್ದ ರಮೇಶ ಮೆಲ್ಲಗೆ " ನನಗೆ ಇದ್ದ್ಯಾ ತಲೆಗತ್ತತ ಇಲ್ಲ ಏನ್ ಮಾಡನಮ್ಮ . ನಾನು ಓದಿ ನಿ‌ನ್ನ ಚೆನ್ನಾಗಿ  ಸಾಕ್ ಬೇಕು ಅಂತ ಆಸೆ ಇಟ್ಕಂಡಿದಿನಿ ,ನಾನು ದುಡೀತಿನಿ ಸುಮ್ಕಿರಮ್ಮ ನೀನು" ಅಂದ .ಅಲ್ಲ ಕಣ್ಲಾ ಒಂದು ತಂಬಿದ್ ಸೆಂಬು ಅತ್ಲಾಗ್  ಎತ್ತಿ ಇತ್ಲಾಗ  ಇಕ್ಕಕೆ ಆಗಲ್ಲ ನಿನಗೆ , ನೀನು ಅದ್ಯೆಂಗ್ ದುಡಿತಿಯಲಾ? ಸುಮ್ಮನೇ ಮಾತು ಆಡ್ ಬೇಡ ಬಾ ಮುದ್ದೆ ಉಣ್ಣು" ಎಂದು ಅಮ್ಮ ತಟ್ಟೆಯನ್ನು ತಂದು ಸ್ವಲ್ಪ ಜೋರಾಗಿಯೇ ನೆಲಕ್ಕೆ ಕುಕ್ಕಿದರು  . ಆತು ನಾನು ನಾಳೆ ಬೆಂಗಳೂರಿಗೆ ಹೋಗಿ ಅಲ್ಲಿ ದುಡಿತೀ‌ನಿ ಪಕ್ಕದ ಮನೆ ರಾಜ ಅಲ್ಲಿ ಸಿಲಿಂಡರ್ ಮನೆ ಮನೆಗೆ ಹಾಕಿ‌ ದುಡ್ಡು  ದುಡಿತಾನಂತೆ ನಾನು ಅದೇ ಕೆಲ್ಸ ಮಾಡ್ತೀನಿ.ಎಂದ  ಸಾಕವ್ವ ನಿನಗೆಲ್ಲಿ ಆ ಕೆಲ್ಸ ಮಾಡಾಕ್ ಆಗ್ತೈತೆ ಸುಮ್ನೆ ಉಣ್ಣು ಎಂದು ಮುದ್ದೆ ಇಟ್ಟರು. ಇಲ್ಲವ್ವ ನಾಳೆ ನಾನು ಬೆಂಗಳೂರಿಗೆ ಹೋಗಾದೆಯಾ ಎಂದು ಮಗ ಹಠ ಹಿಡಿದ . ಸಾಕವ್ವ ಸಿಟ್ ಬಂದು ಆತು ಹೋಗಪ್ಪ ಅದೇನು‌ ದಬ್ಬಾಕ್ತಿಯೋ ದಬ್ಬಾಕ್ " ಎಂದರು

ಅಂದು ನಾನು ಅಂಗ್ ಮಗೀನ ಬೈ ಬಾರದಿತ್ತು ಮಗ ಈಗ ಹೆಂಗದೋ ಏನೋ ಎಲ್ಲಾ ನನ್ನಿಂದಾನೇ ಆಗಿದ್ದು ಎಂದು ಪರಿತಪಿಸುತ್ತಾ  ಪಕ್ಕದ ಮನೆಗೆ ಹೋಗಿ ರಾಜ ಯಾವಾಗ ಬತ್ತಾನೆ ? ನನ್ ಮಗನ್ನೂ ಕರ್ಕಂಬರಕೆ ಹೇಳು ಗಿರಜಕ್ಕ ಎಂದು ಗೋಗರೆದಳು.

ಬೆಂಗಳೂರು ದೂರದಿಂದ ಮಾತ್ರ ನೋಡಲು ಚೆಂದ ಒಳಗೆ ಬಂದಾಗ ಏನು ಎಂದು ರಮೇಶನಿಗೆ ಅರ್ಥವಾಗಲಹ ಬಹಳ ದಿನ ಬೇಕಾಗಲಿಲ್ಲ. ಕೆಲಸ ಕೇಳಲು ಮೊದಲನೇ ದಿನ ರಾಜನ ಜೊತೆ ಹೋದಾಗ ಓನರ್ ಈಗ ಕೆಲಸ ಖಾಲಿ‌ ಇಲ್ಲ  ಎರಡು ದಿನ ಬಿಟ್ಟು ಬಾ ಎಂದರು ಮೂರನೇ ದಿನಕ್ಕೆ ಹೇಗೋ ಸಿಲಿಂಡರ್ ಸಾಗಿಸುವ ಕೆಲಸ ಕೊಟ್ಟರು. ಮನೆಯಿಂದ ತಂದ ಹಣ ಖಾಲಿಯಾಗಿ ಹೋಟೆಲ್ನಲ್ಲಿ ತಿನ್ನುವುದು ನಿಲ್ಲಿಸಿ ರಾಜ ಮಾಡಿದ ಅನ್ನ ಮತ್ತು ನೀರಿನಂತಹ ಸಾರನ್ನು ಬಾಯಿಗೆ ಇಟ್ಟಾಗ ಅಮ್ಮನ ರುಚಿ ನೆನಪಾಗಿ ಅಳು ಬಂತು ಅಮ್ಮ ಎಷ್ಟೇ ರುಚಿಯಾಗಿ ಅಡಿಗೆ ಮಾಡದರೂ ಅದಕ್ಕೆ ಹೆಸರಿಡದೇ ಊಟ ಮಾಡಿದ್ದು ರಮೇಶನಿಗೆ ನೆನಪಿಲ್ಲ ." ನನ್ ಮಗನೆ ನನ್  ಅಡಿಗೆ ಜರಿತಿಯಾ ನಿನಿಗೆ ಮುಂದೆ ಗೊತ್ತಾಗುತ್ತೆ ಅಡಿಗೆ ಬೆಲೆ ಮುಚ್ಕೊಂಡು ತಿನ್ನೋ " ಎಂಬ ಅಮ್ಮನ ಮಾತು ಕಿವಿಯಲ್ಲಿ ಗುಯ್ಗುಡುತ್ತಿದ್ದವು.
ಸಿಲಿಂಡರ್ ಎತ್ತಿ ಇಳಿಸಿ ಕೈಗಳಲ್ಲಿ ಬೊಬ್ಬೆ ಬಂದು ಕೆಲವೊಮ್ಮೆ ರಕ್ತ ಸಹ ಸುರಿಯುತ್ತಿತ್ತು ಊರಿಗೆ ಹೋಗಿಬಿಡೋಣ ಎಂಬ ಮನಸು ಆದರೆ ಅಮ್ಮನ ಮಾತು ಕೇಳದೆ ಹಠದಿಂದ ಬಂದಿರುವೆ ದುಡಿಯಬೇಕು ಎಂದು ಗಟ್ಟಿ ಮನಸು ಮಾಡಿ ಕೆಲಸದಲ್ಲಿ ಮಾಡುತ್ತಾ ಬೆಂಗಳೂರಿನ ಜೀವನಕ್ಕೆ ಕ್ರಮೇಣ ಒಗ್ಗಿಕೊಂಡಿದ್ದ.

ಉಗಾದಿ ಹಬ್ಬಕ್ಕೆ ತಾನು ದುಡಿದ ಹಣದಲ್ಲಿ ಅಮ್ಮನಿಗೆ ಒಂದು ಸೀರೆ ತೆಗೆದುಕೊಂಡು, ತನಗೂ ಹಬ್ಬಕ್ಕೆ ಪ್ಯಾಂಟ್ ಶರ್ಟ್ ಕೊಂಡು ರಾಜನಿಗೆ ತೋರಿಸಿ ಸಂಭ್ರಮ ಪಟ್ಟಿದ್ದ.
ಅಮ್ಮನಿಗೆ ಪೋನ್ ಮಾಡಿ " ಅಮ್ಮ ಉಗಾಎ ಹಬ್ಬಕ್ಕೆ ನಾನೇ ನಿನಗೆ ಸೀರೆ ಮತ್ತು ನನಗೆ ಬಟ್ಟೆಗಳನ್ನು ತಗಂಡಿದಿನಿ ನೀನು ತಗಬ್ಯಾಡ ಹಬ್ಬಕ್ಕೆ ಬರುವಾಗ ತತ್ತಿನಿ" ಎಂದಿದ್ದ .ಅಮ್ಮನಿಗೆ ಈ ಮಾತು ಕೇಳಿ ಬಹು ಆನಂದದಿಂದ ಕಣ್ಣಲ್ಲಿ ಎರಡು ಹನಿಗಳು ಉದುರೇ ಬಿಟ್ಟವು.

ಮೂರು ತಿಂಗಳಿಂದ ಅಮ್ಮನ ಮುಖ ನೋಡದೇ ಇದ್ದದ್ದರಿಂದ ರೂಮಿನಲ್ಲಿ ಪ್ರತಿದಿನ ಒಂದೇ ರೀತಿ ಸಾರು ಅನ್ನ ತಿಂದು ಅಮ್ಮನ ಕೈರುಚಿ ನೆನಪಾಗಿ ನಾಳೆ ಅಮ್ಮನ ನೋಡುವೆ ಅಮ್ಮನು ಮಾಡುವ ರುಚಿ ರುಚಿಯಾದ ಊಟ ತಿನ್ನುವೆ ಎಂದು ಯೋಚಿಸುತ್ತಾ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಬಸ್ಟ್ಯಾಂಡ್ ಗೆ ಬಂದ.

ಬಸ್ಟಾಂಡ್ ನಲ್ಲಿ‌ ಒಂದೂ ಬಸ್ ಇಲ್ಲ ಯಾಕೆ ಎಂದು ವಿಚಾರಿಸಿದಾಗ ಕರೋನ ಪ್ರಯುಕ್ತ ದೇಶಾದ್ಯಂತ ಬಂದ್ ಇರುವುದರಿಂದ ಬಸ್ ,ಆಟೋ ,ಯಾವುದೂ ಇಲ್ಲ ಅಂದರು .ರಾತ್ರಿ ‌ಎಂಟು‌ಗಂಟೆಯಾದರೂ ಯಾವುದೇ ವಾಹನ‌‌‌ ಸಿಗಲಿಲ್ಲ ಅಲ್ಲಿಗೆ ಜನ ಜಾತ್ರೆ ಸೇರಿತ್ತು ಎಲ್ಲರೂ ಇವನಂತೆ ಊರಿಗೆ ಹೊರಟವರೆ ಇದ್ದರು. ಒಂದು ಟ್ರಾಕ್ಟರ್ ಬಂತು ಜನ ಹೇಳದೇ ಕೇಳದೆ ಜೇನು ಹುಳ ಮುತ್ತಿದಂಗೆ ಮುತ್ತಿದರು ರಮೇಶ ಹೇಗೋ ಟ್ರಾಕ್ಟರ್ ಹತ್ತಿ ಕುಳಿತ
ನೆಲಮಂಗಲದ ಹತ್ತಿರ ಟ್ರಾಕ್ಟರ್ ನಿಂತಿತು ಇದ್ದಕ್ಕಿದ್ದಂತೆ ಜನ ದಡಬಡ ದುಮುಕಿದರು ನೋಡಿದರೆ ಪೊಲೀಸರು ಲಾಟಿ ಬೀಸುತ್ತಿದ್ದರು. "ಯಾವ ವೆಹಿಕಲ್ ಬಿಡಲ್ಲ ಡಿ ಸಿ ಆರ್ಡರ್ ನಡಿರಿ ಹಿಂದಕ್ಕೆ" ಎಂದು ಪೊಲೀಸ್ ರು ಘರ್ಜಿಸುತ್ತಿದ್ದರು. ಕೆಲ ಯುವಕರು ಟ್ರಾಕ್ಟರ್ ಇಳಿದು ರಾತ್ರಿ ಹನ್ನೆರಡು ಗಂಟೆಯ ಸಮಯದಲ್ಲಿ ಹೈವೆ ಯಲ್ಲಿ ನಡೆದು ಊರಿಗೆ ಹೋಗಲು ಹೆಜ್ಜೆ ಹಾಕಿದರು ರಮೇಶ ಅವರ ಜೊತೆ ಸೇರಿ ನಡೆದ .ಮಾತನಾಡುತ್ತಾ ದಾರಿ ಸಾಗಿದ್ದೇ ತಿಳಿಯಲಿಲ್ಲ, ಬೆಳಗಿನ ಜಾವ ಐದು ಗಂಟೆಗೆ ತುಮಕೂರು ಬಳಿ ಮತ್ತೆ ಪೊಲೀಸರು ತಡೆದು ಎಲ್ಲರನ್ನೂ ಅರೆಸ್ಟ್ ಮಾಡಿ ಅವರನ್ನು ಒಂದು ಹಾಸ್ಟೆಲ್ ನಲ್ಲಿ ಬಂದಿಸಿ ಊಟ ತಿಂಡಿ ವ್ಯವಸ್ಥೆ ಮಾಡಿದರು.
ರಮೇಶ ಪೊಲೀಸರಿಗೆ " ಸಾರ್ ನಮ್ಮವ್ವ ಅಲ್ಲಿ ಕಾಯ್ತಿರ್ತಾಳೆ ನಮ್ಮವ್ವನ ನೋಡ್ಬೇಕು ಬಿಡ್ರಿ ಸಾರ್ " ಎಂದು ಗೋಗರೆದ .ಪೋಲೀಸ್ ರು ಬಿಡುವರೆ? ಇತ್ತ ಹರ್ತಿಕೋಟೆಯಲ್ಲಿ ಸಾಕವ್ವ ಇಂದು ನನ್ನ ಮಗ ಊರಿಗೆ ಬರುವ ಎಂಬ ನಿರೀಕ್ಷೆಯೊಂದಿಗೆ ಸಂಭ್ರಮದಿಂದ ಎಲ್ಲರ ಬಳಿ ಹೇಳಿಕೊಂಡು ಬರುತ್ತಿದ್ದಳು " ಹೇ ಕೆಂಚ ಇವತ್ತು ನನ್ಮಗ ಬೆಂಗಳೂರಿಂದ  ಬತ್ತಾನೆ.... ಉಗಾದಿ ಹಬ್ಬಕ್ಕೆ ಬಟ್ಟೆ ತತ್ತಾನೆ ಕಣೋ....

*ಸಿ ಜಿ‌ ವೆಂಕಟೇಶ್ವರ*
*ತುಮಕೂರು*


No comments: