29 January 2020

ನಾರಾಯಣನಾಗುವ ಬಯಕೆ(ಚಿತ್ರ ಕವನ)

*ನಾರಾಯಣನಾಗುವ ಬಯಕೆ*

ನಾನೂ ಒಬ್ಬ ನರ.
ಮೊದಲು ನಾನೂ
ಸಹ ಮರದಂತೆ
ಹಸಿರಾಗಿದ್ದೆ ಉಸಿರಾಗಿದ್ದೆ
ನೆರಳಾಗಿದ್ದೆ,ಪರೋಪಕಾರಿಯಾಗಿದ್ದೆ.
ನಿಸ್ವಾರ್ಥಿಯಾಗಿದ್ದೆ ,ಲವಲವಿಕೆಯಿಂದಿದ್ದೆ.

ನನ್ನಲ್ಲಿ ಆಸೆ ಚಿಗುರೊಡೆದು,
ಅತಿಯಾಸೆ ಕವಲೊಡೆದು
ಅಮಾನವೀಯ ಗುಣಗಳುದಿಸಿ,
ಮೃಗೀಯಗುಣಗಳು ಬೆಳೆದು,
ರಾಕ್ಷಸ ಗುಣಗಳ ನರ್ತನವಾಡಿ
ದುರ್ಗುಣಗಳ ಗಣಿಯಾಗಿ
ಸದ್ಗುಣಿಗಳ ಕಂಡರೂ ಕಾಣದೆ,
ನಾನು ನನ್ನಿಂದ ಎಂಬ ಅಹಂ
ಬೆಳೆದು, ಒಳಿತು ರುಚಿಸದೆ,ಕೆಡುಕುಗಳ
ಅಧಿಪತಿಯಾದೆ.

ನಾನೀಗ ಕೃಷಕಾಯದ ನರ
ನರಮೂಳೆಗಳು ಮಾತ್ರವಿರುವ
ಸತ್ವವಿರದ ನಿಸ್ಸತ್ವ ಜೀವಿ
ಜೀವಿಸಲು ಕೊರಗುತಿರುವ
ಹೆಣವಾಗಲು ಹೆಣಗುತಿರುವ
ಮಣಭಾರದ ಪಾಪದ ಮೂಟೆಹೊತ್ತ,
ನತದೃಷ್ಟ ನರ ನಾನು.

ಈ ಜನ್ನಮದಲಿ ಉತ್ತಮ ನರನಾಗಲಿಲ್ಲ
ನಾರಾಯಣನ ದಯವಿದ್ದರೆ
ಮುಂದಿನ ಜನ್ಮದಿ? ನರ ರೂಪದ ನಾರಾಯಣನಾಗುವ ಬಯಕೆ.

*ಸಿ ಜಿ ವೆಂಕಟೇಶ್ವರ*


ದಂಡಂ ದಶಗುಣಂ (ಲೇಖನ)

*ದಂಡಂ ದಶಗುಣಂ*

ನೂರಾರು ವರ್ಷಗಳಿಂದ ಅಪಘಾತಗಳ ತಡೆಯಲು ಸರ್ಕಾರ ,ಸರ್ಕಾರೇತರ ಸಂಘ ಸಂಸ್ಥೆಗಳು ವಿವಿಧ ಪ್ರಯತ್ನಗಳನ್ನು ಮಾಡಿದಾಗಲೂ ಅಪಘಾತಗಳ ಸಂಖ್ಯೆ ಇಳಿಮುಖದ ಹಾದಿ ಹಿಡಿಯಲೇ ಇಲ್ಲ. ಬದಲಾಗಿ ಅಪಘಾತಗಳ ಸಂಖ್ಯೆ ದುಪ್ಪಟ್ಟು ಆದವು.ಅಮೂಲ್ಯ ಜೀವಗಳು ಅಪಘಾತದಲ್ಲಿ ಮರೆಯಾದವು.ಸಾವಿರಾರು ಕುಟುಂಬಗಳು ಅನಾಥರಾದವು ಲೆಕ್ಕವಿಲ್ಲದಷ್ಟು ಜನ ಶಾಶ್ವತವಾಗಿ ಅಂಗವಿಕಲರಾದರು.  ಇದನ್ನು ಮನಗಂಡ ಸರ್ಕಾರವು ನಮ್ಮ ಜನರಿಗೆ ಬಾಯಿ ಮಾತಿನಲ್ಲಿ ಜಾಗೃತಿ ಮೂಡಿಸಿದರೆ ಸಾಲದು ದಂಡಂ ದಶಗುಣಂ ಎಂಬ ಅಸ್ತ್ರ ಪ್ರಯೋಗ ಮಾಡೊಯೇ ಬಿಟ್ಟಿತು. ಇದಕ್ಕೆ ಕಾನೂನಿನ ಬೆಂಬಲ ನೀಡಿ ಮೋಟಾರು ವಾಹನ ಕಾಯ್ದೆ ಜಾರಿಗೆ ತಂದಿತು .
ಇದರ ಪರಿಣಾಮವಾಗಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿರುವುದು ಅಂಕಿ ಅಂಶಗಳಿಂದ ಸಾಬೀತಾಗಿದೆ.

ಸಂಚಾರಿ ನಿಯಮಗಳ ಉಲ್ಲಂಘನೆ ಮತ್ತು ಅಪಘಾತ ತಡೆಯಲು ದಂಡವೊಂದೆ ಮಾನದಂಡವೆ?
ಹೌದು ಎಂದು ಸಾರುತ್ತಿವೆ ಇತ್ತೀಚೆಗೆ ಬಿಡುಗಡೆಯಾದ ಅಂಕಿ ಅಂಶಗಳು.
ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ನಿಯಮ ಮೀರಿ  ಸರಕು ಸಾಗಣೆ ಮಾಡಿ ಅಪಘಾತ ಮಾಡುವ ವಾಹನಗಳ ಸಂಖ್ಯೆ ಇಳಿಮುಖವಾಗುತ್ತದೆ.
ದಂಡಕ್ಕೆ ಹೆದರಿ ಜನರು ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸುವುದರಿಂದ ಅಮೂಲ್ಯವಾದ ಜೀವಗಳು ಉಳಿಯುತ್ತಿವೆ.
ಅಪ್ರಾಪ್ತ ವಯಸ್ಕ ಮಕ್ಕಳು ವಾಹನ ಚಲಾಯಿಸುವುದು ಕಡಿಮೆಯಾಗುತ್ತದೆ. ಇದರಿಂದ ಅಪಘಾತದ ಪ್ರಮಾಣದಲ್ಲಿ ಇಳಿಮುಖವಾಗುತ್ತಿವೆ.
ದಂಡಕ್ಕೆ ಹೆದರಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದರಿಂದ  ೫೦% ಅಪಘಾತಗಳು ಕಡಿಮೆಯಾಗುತ್ತಿವೆ.

ಒಟ್ಟಿನಲ್ಲಿ ಸ್ವಇಚ್ಛೆಯಿಂದ ಮಾಡಲಾಗದ ಜಾಗೃತಿ ಆಂದೋಲನದಡಿ ಮಾಡಲಾಗಾದ ಕಾರ್ಯವನ್ನು ಸರ್ಕಾರದ ಕಾನೂನು ಮತ್ತು ದಂಡದ ಭಯವು ಮಾಡಿದೆ. ಇದರ ಪರಿಣಾಮ ಸಕಾರಾತ್ಮಕವಾಗಿ ಕಂಡು ಬಂದಿರುವುದು ಆಶಾದಾಯಕ ಬೆಳವಣಿಗೆ.

*ಸಿ ಜಿ ವೆಂಕಟೇಶ್ವರ*

24 January 2020

ರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು

*ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು*

ರಂಗನಾಥ ಸ್ವಾಮಿಯವರಂತೆ
ಹರಸಿದ "ರಂಗಜ್ಜಿ".
ಹೆತ್ತು ಹೊತ್ತುಸಾಕಿ ಸಲಹಿ
ಸಿರಿದೇವಿಯಂತೆ  ಕಾಯುವ "ಶ್ರೀದೇವಮ್ಮ".
ನನ್ನ ಬಾಳಲಿ ಕವಿತೆಯಾಗಿ ಬಂದ "ಕವಿತ*.
ಶೋಭಾಯಮಾನವಾಗಿ ನನ್ನ ಜೀವನ
ಬೆಳಗಲು ಬಂದ ನನ್ನ ಮೊದಲ ಲಕ್ಷ್ಮಿ "ಶೋಭಿತ".
ಮಳೆಯಿಂದ ಮನ ಉಲ್ಲಸಿತವಾಗುವಂತೆ
ಬಂದ ನನ್ನ ಎರಡನೇ ಲಕ್ಷ್ಮಿ" ವರ್ಷಿತ".

ಇವರೆಲ್ಲರಿಗೂ ಮತ್ತು ಜಗದ ಎಲ್ಲಾ ಹೆಣ್ಣು ಮಕ್ಕಳಿಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು.

*ಸಿ.ಜಿ ವೆಂಕಟೇಶ್ವರ*


23 January 2020

ನನ್ನಮ್ಮ(ಲೇಖನ)

ತಾಯಿ

ನನಗೆ ನೆನಪಿದೆ ನಾನಿನ್ನು ನಾಲ್ಕು ವರ್ಷದ ಹುಡುಗನಾಗಿದ್ದಾಗ ನನ್ನ ತಂದೆ ಹಾವು ಕಚ್ಚಿ ತೀರಿಕೊಂಡರು. ಆಗ ಮನೆಯಲ್ಲಿ ಶೂನ್ಯ ಆವರಿಸಿದ್ದ ಸ್ಥಿತಿ . ಹಳ್ಳಿಯಲ್ಲಿ ಸ್ವಂತ ಮನೆಯೇನೋ ಇತ್ತು ದೂರದಲ್ಲಿ ನಾಲ್ಕು ಎಕರೆ ಒಣಬೇಸಾಯದ ಭೂಮಿಯು ಇತ್ತು, . ನಮ್ಮ ಅಮ್ಮನಿಗೆ ಒಂದೇ ಚಿಂತೆ ಈ ಇಬ್ಬರು ಮಕ್ಕಳನ್ನು ಹೇಗೆ ಸಾಕಲಿ ,? ಹೇಗೆ ದೊಡ್ಡವರ ಮಾಡಲಿ ? ನಾನು ಹೇಗೆ ದುಡಿಯಲಿ? . ಹೊಲದಲ್ಲಿ ವ್ಯವಸಾಯ ಮಾಡಿ ದುಡಿಯೋಣ ,ಎಂದರೆ ದಾಯಾದಿಗಳ ಉಪಟಳ, ಒಬ್ಬಂಟಿ ಹೆಂಗಸೆಂದು ಹೆದರಿಸಿ ,ಬೆದರಿಸಿ, ಹೊಲದಲ್ಲಿ ‌ಹೆಜ್ಜೆ ಇಡದಂತೆ ಮಾಡಿದರು. ಆಗ ನಮ್ಮ ಅಮ್ನ ಆಯ್ದುಕೊಂಡ ಆಯ್ಕೆ ಕೂಲಿ ಮಾಡಿ ನಮ್ಮ ಸಾಕುವುದು.ಮತ್ತು ಓದಿಸಿ ವಿದ್ಯಾವಂತರ ಮಾಡುವುದು. ಈ ಹಂತದಲ್ಲಿ ನನಗೆ P  ಲಂಕೇಶ್ ರವರ ಅಮ್ಮ‌ ಎಂಬ ಕವನ ನೆನಪಾಗುತ್ತದೆ ಅದರಲ್ಲಿ ಬರುವ ಅಮ್ಮನಂತೆ ನನ್ನಮ್ಮ ಸರೀಕರೊಡನೆ ತನ್ನ ಮಕ್ಕಳನ್ನು ತಲೆ ಎತ್ತುವಂತೆ ಬೆಳೆಸಲು ಪಣ ತೊಟ್ಟಿದ್ದರು. ತಾನು ಹರಿದ‌ ಸೀರೆ ಉಟ್ಟರೂ ನಮಗೆ ಯುಗಾದಿ ಹಬ್ಬಕ್ಕೆ ಎರಡು ಜೊತೆ ಬಟ್ಟೆಗಳನ್ನು ಕೊಡಿಸಲು ಮರೆಯುತ್ತಿರಲಿಲ್ಲ .ನಮಗೆ ಮನೆಯಲ್ಲಿ ರಾತ್ರಿ ಊಟ ಹಾಕಿ .ರಾತ್ರಿಯ ಪಾಳಿಯಲ್ಲಿ ಸುಗ್ಗಿ ಕಣದಲ್ಲಿ ಕೆಲಸ ಮಾಡುತ್ತಿದ್ದರು. ಈಗಲೂ ನನಗೆ ಅನುಮಾನವಿದೆ ನಮ್ಮಮ್ಮನಿಗೆ ಭಗವಂತ ಎಷ್ಟು ಶಕ್ತಿ ಕೊಟ್ಟಿದ್ದ . ಈ ನಡುವೆ ನಮ್ಮ ಅಮ್ಮ ಹೆರಿಗೆ ಮಾಡಿಸುವ ಸೂಲಗಿತ್ತಿಯ ಕೆಲಸ ಮಾಡುತ್ತಿದ್ದರು. ಕೆಲವು ಸಲ  ಹಗಲೆಲ್ಲಾ ಕೂಲಿ ಮಾಡಿ ಸುಸ್ತಾಗಿದ್ಧ ಅಮ್ಮ ನಿದ್ದೆಗೆ ಜಾರಿದಾಗ ಹೊತ್ತಲ್ಲದ ಹೊತ್ತಲ್ಲಿ " ಅಕ್ಕ ನಮ್ಮ ಮಗಳಿಗೆ ಹೆರಿಗೆ ನೋವು ಶುರುವಾಗಿದೆ ಬಾರಕ್ಕ" ಎಂದಾಗ ಅಮ್ಮ  ಮರುಮಾತಾಡದೇ ಎದ್ದು ಹೋದದ್ದೇ ಗೊತ್ತು ಮನೆಗೆ ಯಾವಾಗ ಬಂದು ಮಲಗಿದರೋ ಆದರೆ  ಬೆಳಗಿನ ಜಾವ  ಬೇಗನೆ ಎದ್ದು ಮನೆ ಮುಂದೆ ಕಸ ತೆಗೆದು ನೀರು‌ಹಾಕುವಾಗ ನಮಗೆ ಎಚ್ಚರವಾಗುತ್ತಿತ್ತು.  ಒಮ್ಮೆ ನಾನು ಎಂಟನೇ ತರಗತಿ ಓದುವಾಗ ನನಗೆ ಜ್ವರ ಬಂದು ಅನಾರೋಗ್ಯ ಪೀಡಿತನಾದಾಗ ಎರಡು ಕಿಲೋಮೀಟರಗಿಂತ ಹೆಚ್ಚು ದೂರ ನನ್ನ ಕಂಕುಳಲ್ಲಿ ಎತ್ತಿ ಕೊಂಡು ಹೋಗಿ ನನಗೆ ಡಾಕ್ಟರ್ ಬಳಿ ಚಿಕಿತ್ಸೆ ಕೊಡಿಸಿದರು. ಅಮ್ಮ ನಿನ್ನ ಬಗ್ಗೆ ಬರೆಯಲು ‌ಕುಳಿತರೆ ನಿಮಿಷ ದಿನ ,ವಾರ ,ತಿಂಗಳು ವರ್ಷ ಸಾಲಲ್ಲ ಆದರೂ ಕೆಲವೊಮ್ಮೆ ಹೀಗೆ ನಾಲ್ಕು ಸಾಲು ಬರೆದು ನಿನ್ನ ಜ್ಞಾಪಿಸಿಕೊಂಡರೆ ಎನೋ ಸಮಾಧಾನ.


ಸಿ ಜಿ ವೆಂಕಟೇಶ್ವರ

ಸುಭಾಷ್ ( ಹನಿ) ಸುಭಾಷ್ ಚಂದ್ರ ಬೋಸ್ ಮತ್ತು ನನ್ನ ಎರಡನೇ ಮಗಳು ವರ್ಷಿತಾಳ ಹುಟ್ಟು ಹಬ್ಬ

*ಸುಭಾಷ್*

(ಇಂದು ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನ)

ಅವರು ನಿಜವಾದ ನೇತಾರ
ನೇರ ದಿಟ್ಟ ನುಡಿಯ ಹರಿಕಾರ
ಸ್ವಾತಂತ್ರ್ಯ ಹೋರಾಟದ ಧೀರ
ನಂಬಿದ ದೇಶಭಕ್ತರ ಚಂದಿರ
ಪರಂಗಿಗಳ ಪಾಲಿನ ಉರಿವ ಸೂರ್ಯ
ಅವರ ಕಾರ್ಯಕ್ಕೆ ಹೇಳಲೇಬೇಕು
ಶಹಬ್ಬಾಸ್
ಅವರೇ ನಮ್ಮ ಹೆಮ್ಮೆಯ
ಸುಭಾಷ್.

*ಸಿ ಜಿ ವೆಂಕಟೇಶ್ವರ*

21 January 2020

ಸ್ವಾಗತಾರ್ಹ (ಪತ್ರಿಕೆಯಲ್ಲಿ ಲೇಖನ)

ಪತ್ರಿಕಾ ಲೇಖನ

ಚುನಾವಣಾ ಆಯೋಗದ
ಸ್ವಾಗತಾರ್ಹ ಕ್ರಮ

ಚುನಾವಣಾ ಆಯೋಗವು ಚುನಾವಣೆಗಳಲ್ಲಿ
ಪೇಸ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ಮತದಾರರ ಗುರುತಿಸುವ ಬಗ್ಗೆ ಯೋಚನೆ ಮಾಡಿರುವುದು ಸ್ವಾಗತಾರ್ಹ. ಈ ರೀತಿ ಮಾಡುವುದರಿಂದ ನಿಜವಾದ ಮತದಾರರ ಗುರುತು ಪತ್ತೆ ‌ಮಾಡಬಹುದು. ಜೊತೆಗೆ ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆ ನಡೆಸಲು ಸಹಕಾರಿಯಾಗುತ್ತದೆ. ಕೆಲವು ಮತಗಟ್ಟೆಗಳಲ್ಲಿ ಬೇರೆಯವರು ಬಂದು ತಮ್ಮದಲ್ಲದ ಮತ ಚಲಾಯಿಸಲು ಮತಗಟ್ಟೆಯ ಸಿಬ್ಬಂದಿಯ ಜೊತೆಗೆ ಅನವಶ್ಯಕ ವಾಗ್ವಾದ ಮಾಡುವುದು ಕಂಡುಬರುತ್ತದೆ. ಪೇಸ್ ರೆಕಗ್ನಿಶನರ ತಂತ್ರಾಂಶದ ಸಹಾಯದಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದು. ಆದರೆ ಇದಕ್ಕೆ ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನು ನೀಡಬೇಕು ಜೊತೆಗೆ ದೋಷ ರಹಿತವಾದ ಯಂತ್ರಗಳ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಊದುವುದು ಕೊಟ್ಟು ಒದರುವುದು ತಂದರು ಎಂದಾಗುತ್ತದೆ.

*ಸಿ.ಜಿ.ವೆಂಕಟೇಶ್ವರ*

ರುಬಾಯಿ

*ರುಬಾಯಿ*

ಪ್ರಿಯೆ,  ಕಣ್ಣ ರೆಪ್ಪೆಗಳಲಿ  ಬಚ್ಚಿಡಲೇ?
ಹೃದಯದಲಿ ಮುಚ್ಚಿಡಲೇ
ಅವಳೆಂದಳು ಬೇಳೆ ,ಉಪ್ಪು         ತರಕಾರಿಯಿಲ್ಲದ ಸಾಂಬಾರ್ ಮಾಡಲೆ?
*ಸಿ.ಜಿ ವೆಂಕಟೇಶ್ವರ*


ಜಗವು ಜಗಮಗಿಸಲಿ (ಕವನ)


*ಜಗವು ಜಗಮಗಿಸಲಿ*

ಜಗವನುದ್ದರಿಸಿದವಳು ಜಗಜ್ಜನನಿ
ತನ್ನ ಮಕ್ಕಳಿಗೆ ಸೃಷ್ಟಿ ಸ್ಥಿತಿ ಲಯದ
ಅಧಿಕಾರವ ನೀಡಿ ಜಗವ ನಡೆಸಲು
ಬ್ರಹ್ಮ ,ವಿಷ್ಣು,,ಮಹೇಶ್ವರರ  ನೇಮಿಸಿಹಳು.
ಜಗ ಸಮತೋಲನದಿಂದಿರುವುದು ದೇವಿಯ ಕೃಪೆ ಎಂದರು ಮುನಿಗಳು.

ಮುನಿದ ವಿಜ್ಞಾನಿ 
ಜಗದ ಮೂಲ ಅಣು, ಪರಮಾಣು,
ಬಿಗ್ ಬ್ಯಾಂಗ್ ನಿಂದ ಉಗಮ
ಸೃಷ್ಟಿ ವೈಜ್ಞಾನಿಕ ಸ್ಥಿತಿ ಸಂಶೋಧನಾ ಫಲ.
ನಾಶವಾದರೆ ಪರಮಾಣುಬಾಂಬು ಅಸ್ತ್ರಗಳಿಂದ, ಇದರಲ್ಲಿ ದೇವಿಯ ಪಾತ್ರವೆಲ್ಲಿ ದೈವದ ನಿಯಮವೆಲ್ಲಿ? ಎಂದರು.

ಇವರೀರ್ವರಲಿ ಯಾರು ಸರಿ? 
ಯಾರು ತಪ್ಪು ?
ಗೊಂದಲದ ಗೂಡಾದ ಮನ 
ಕೊಂಚ ಯೋಚಿಸಿ ಇಂತೆಂದಿತು.

ಆದ್ಯಾತ್ಮ ಇಲ್ಲದ ವಿಜ್ಞಾನ ಕುರುಡು
ವಿಜ್ಞಾನವಿಲ್ಲದ ಆದ್ಯಾತ್ಮ ಬರಡು 
ವಿಜ್ಞಾನಿಗಳ ಹೃದಯದಿ ಆದ್ಯಾತ್ಮ  ಉದಿಸಲಿ.
ಸಂತರು ವೈಜ್ಞಾನಿಕ ದೃಷ್ಟಿಕೋನ ಬೆಳಸಲಿ.
ಆದ್ಯಾತ್ಮ ಮತ್ತು ವಿಜ್ಞಾನ ಸಂಗಮವಾಗಲಿ
ಜಗವು ಜಗಮಗಿಸಲಿ.

ಸಿಹಿಜೀವಿ
*ಸಿ.ಜಿ ವೆಂಕಟೇಶ್ವರ*
ತುಮಕೂರು
9900925529

15 January 2020

ಒಳ್ಳೆಯ ಮಾತಾಡು (ನ್ಯಾನೋ ಕಥೆ)

*ಒಳ್ಳೆಯ ಮಾತಾಡು*

"ಏ  ಕಂಡಿದೀನಿ ಕುತ್ಕೊಳ್ಳೋ ---------- ಮಗನೆ, ನಿಂದು ಜಾಸ್ತಿ ಆಯ್ತು,"  ಎಂದು ಏರುಧ್ವನಿಯಲ್ಲಿ ರಮೇಶ ಕಿರುಚುತ್ತಿದ್ದರೆ "ನಾನು ನಿನ್ನ ಬಾಳ ನೊಡಿದ್ದೀನಿ ನಿಮ್ಮ ವಂಶದ ಜಾತಕ ಬಿಚ್ಚಲಾ? ಈಗ ಮುಚ್ಕೊಂಡಿರೋ ------ ಮಗನೆ" ಎಂಬ ಸುರೇಶನ ಮಾತು ಇಡೀ ಬೀದಿಗೆ ಕೇಳುತ್ತಿತ್ತು.ಸಂಜೆಯಾಗುತ್ತ ಕತ್ತಲು ಆವರಿಸುತ್ತಿತ್ತು.ರಮೇಶನ ಮಗ ಅಪ್ಪ ಬಳಸಿದ ಬೈಗುಳಗಳಿಗೆ ಶಬ್ದಕೋಶದಲ್ಲಿ ಅರ್ಥ ಹುಡುಕುತ್ತಿದ್ದ.ಸುರೇಶನ ಮಗಳಿಗೆ ಬೆಳಿಗ್ಗೆ ಅಪ್ಪ ಹೇಳಿದ " ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಎಂಬ ನುಡಿ ಕಿವಿಯಲ್ಲಿ ಮಾರ್ಧನಿಸುತ್ತಿತ್ತು.

*ಸಿ ಜಿ ವೆಂಕಟೇಶ್ವರ*

ಹಬ್ಬವ ಮಾಡೋಣ( ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು)

*ಮಕರ  ಸಂಕ್ರಾಂತಿ ಹಬ್ಬದ ಶುಭಾಶಯಗಳು*

*ಹಬ್ಬವ ಮಾಡೋಣ*

ಹಬ್ಬವ ಮಾಡೋಣ
ಬನ್ನಿ ಹಬ್ಬವ ಮಾಡೋಣ||

ಸಂಕ್ರಮಣ ದಿನದಿ
ರವಿಯನು ಪೂಜಿಸಿ
ಕಹಿಯನು ತೊಲಗಿಸಿ
ಸಿಹಿಯನು ಪಡೆಯಲು
ಎಳ್ಳು ಬೆಲ್ಲವ ಹಂಚಿ
ಒಳ್ಳೆಯ ಮಾತನಾಡುತ
ಸಂಕ್ರಾಂತಿ ಹಬ್ಬವ ಮಾಡೋಣ||೧||

ವ್ರತವನು ಮಾಡುತ
ಹದಿನೆಂಟು ಮೆಟ್ಟಿಲ
ಒಡೆಯನ ನೆನೆಯುತ
ಇರುಮುಡಿ ಗಂಟನು ಹೊತ್ತು
ಮಕರ ಜ್ಯೋತಿಯ
ದರುಶನ ಮಾಡುತ
ಸಂಕ್ರಾಂತಿ ಹಬ್ಬವ ಮಾಡೋಣ||೨||

ಬೇಯಿಸಿ ಅವರೆ
ಕಡಲೆಯ ತಿಂದು
ಸುಗ್ಗಿಯ ಹಾಡನು
ಹಾಡುತ ನಾವು
ರಾಸುಗಳನ್ನು ಪೂಜಿಸಿ
ಕಿಚ್ಚು ಹಾಯಿಸಿ
ಸಂಕ್ರಾಂತಿ ಹಬ್ಬವ ಮಾಡೋಣ||೩||

*ಸಿ ಜಿ ವೆಂಕಟೇಶ್ವರ*

13 January 2020

ಹೀಗೂ ಉಂಟು(ನ್ಯಾನೋ ಕಥೆ)

*ಹೀಗೂ ಉಂಟು*

"ಇಂದು ಬೈಕ್ ಬೇಡ ಮಗಳೆ ಕೇವಲ ಮುನ್ನೂರು ಮೀಟರ್ ತಾನೇ ಇರೋದು ನಡೆದುಕೊಂಡು ಹೋದರೆ ಆರೋಗ್ಯಕ್ಕೆ ಒಳ್ಳೆಯದು" ಎಂದು ಮಗಳ ಮನ ಒಲಿಸಿ ನಡೆದುಕೊಂಡು ಹೋಗಿ ಶಾಲಾ ಬಸ್ ಹತ್ತಿಸಿದ ಅಪ್ಪ .ಆ ಕಡೆಯಿಂದ ಸ್ನೇಹಿತ ಕಾರಿನಲ್ಲಿ ಬಂದ "ಬಾರೋ ಮನೆ ಕಡೆ ಡ್ರಾಪ್ ಮಾಡ್ತೀನಿ" ಎಂದಿದ್ದೆ ತಡ ಕಾರನ್ನೇರಿ ಮನೆ ತಲುಪಿದ .

*ಸಿ.ಜಿ.ವೆಂಕಟೇಶ್ವರ*

10 January 2020

savi savi nenapu


puttamallli puttamalli....


tuttu anna tinnoke.....


e bhumi bannada buburi


odi bareva kaladali


bombe helutaite


khushiyagide eko


song on siddaganga swameeji


ಅಭಯ(ಹನಿ)

*ಅಭಯ*

ಪ್ರತಿ ಕ್ಷಣ. ಪ್ರತಿದಿನ
ಅವ್ಯಕ್ತ ನೋವಿನಲಿ
ಪಡುವೆ ಏಕೆ ಭಯ.
ಶಾಂತ ಚಿತ್ತದಿ
ಗೋವಿಂದನಲಿ ಮನಸಿಡು
ನೀಡುವ ನಿನಗೆ ಅಭಯ .

*ಸಿ ಜಿ‌ ವೆಂಕಟೇಶ್ವರ*

09 January 2020

ಆಹ್ವಾನ (ಹನಿ)

  *ಆಹ್ವಾನ* ಹನಿಗವನ

ವಾಹನಗಳ ಓಡಿಸುವಾಗ,
ಪಾಲಿಸಬೇಕು ಸಂಚಾರನಿಯಮ
ಇರಲೇಬೇಕು ಸಂಯಮ
ಇಲ್ಲವಾದರೆ ನಿಮಗೆ
ಆಹ್ವಾನ ಕೊಟ್ಟೆ ಕೊಡುವನು
ಯಮ

*ಸಿ ಜಿ‌ ವೆಂಕಟೇಶ್ವರ*

04 January 2020

01 January 2020

ದಿನವೂ ಹೊಸ ವರ್ಷ


*ದಿನವೂ ಹೊಸ ವರ್ಷ*

ಹೊಸ ಕ್ಯಾಲೆಂಡರ್ ವರ್ಷ
ಬಂದಿದೆ
*ದಿನ* ಬಂದರೆ ಹೊಸತಾಗಲೇ ಬೇಕು
ದಿನ ಇದ್ದರೆ ಮಾಸವಾಗಲೇ ಬೇಕು
ಮಾಸದಂತೆ ಹಳೆಯ ನೆನಪುಗಳ
ಕಾಪಿಡಬೇಕು

ದಿನಗಳುರುಳಿ *ತಿಂಗಳು*
ಬರಲೇ ಬೇಕು
ನಮಗೆಲ್ಲಾ ತಂಪನೀಯಬೇಕು
ಮಾಸಗಳುರುಳಿದರೆ *ವರ್ಷ*
ಬಂದು ಇಳೆ  ಹರ್ಷಗೊಳ್ಳಬೇಕು
ಪ್ರಕೃತಿಯಲ್ಲಿ ದಿನವೂ ಹೊಸ ವರ್ಷ
ಆದರೂ ಇಂದು ನಾ ಹೇಳುವೆ

ನಿಮಗೆ ಹೊಸ ಕ್ಯಾಲೆಂಡರ್ ವರ್ಷದ
ಶುಭಾಾಶಯಗಳು

*ಸಿ.ಜಿ.ವೆಂಕಟೇಶ್ವರ*
*ತುಮಕೂರು*