23 January 2020

ನನ್ನಮ್ಮ(ಲೇಖನ)

ತಾಯಿ

ನನಗೆ ನೆನಪಿದೆ ನಾನಿನ್ನು ನಾಲ್ಕು ವರ್ಷದ ಹುಡುಗನಾಗಿದ್ದಾಗ ನನ್ನ ತಂದೆ ಹಾವು ಕಚ್ಚಿ ತೀರಿಕೊಂಡರು. ಆಗ ಮನೆಯಲ್ಲಿ ಶೂನ್ಯ ಆವರಿಸಿದ್ದ ಸ್ಥಿತಿ . ಹಳ್ಳಿಯಲ್ಲಿ ಸ್ವಂತ ಮನೆಯೇನೋ ಇತ್ತು ದೂರದಲ್ಲಿ ನಾಲ್ಕು ಎಕರೆ ಒಣಬೇಸಾಯದ ಭೂಮಿಯು ಇತ್ತು, . ನಮ್ಮ ಅಮ್ಮನಿಗೆ ಒಂದೇ ಚಿಂತೆ ಈ ಇಬ್ಬರು ಮಕ್ಕಳನ್ನು ಹೇಗೆ ಸಾಕಲಿ ,? ಹೇಗೆ ದೊಡ್ಡವರ ಮಾಡಲಿ ? ನಾನು ಹೇಗೆ ದುಡಿಯಲಿ? . ಹೊಲದಲ್ಲಿ ವ್ಯವಸಾಯ ಮಾಡಿ ದುಡಿಯೋಣ ,ಎಂದರೆ ದಾಯಾದಿಗಳ ಉಪಟಳ, ಒಬ್ಬಂಟಿ ಹೆಂಗಸೆಂದು ಹೆದರಿಸಿ ,ಬೆದರಿಸಿ, ಹೊಲದಲ್ಲಿ ‌ಹೆಜ್ಜೆ ಇಡದಂತೆ ಮಾಡಿದರು. ಆಗ ನಮ್ಮ ಅಮ್ನ ಆಯ್ದುಕೊಂಡ ಆಯ್ಕೆ ಕೂಲಿ ಮಾಡಿ ನಮ್ಮ ಸಾಕುವುದು.ಮತ್ತು ಓದಿಸಿ ವಿದ್ಯಾವಂತರ ಮಾಡುವುದು. ಈ ಹಂತದಲ್ಲಿ ನನಗೆ P  ಲಂಕೇಶ್ ರವರ ಅಮ್ಮ‌ ಎಂಬ ಕವನ ನೆನಪಾಗುತ್ತದೆ ಅದರಲ್ಲಿ ಬರುವ ಅಮ್ಮನಂತೆ ನನ್ನಮ್ಮ ಸರೀಕರೊಡನೆ ತನ್ನ ಮಕ್ಕಳನ್ನು ತಲೆ ಎತ್ತುವಂತೆ ಬೆಳೆಸಲು ಪಣ ತೊಟ್ಟಿದ್ದರು. ತಾನು ಹರಿದ‌ ಸೀರೆ ಉಟ್ಟರೂ ನಮಗೆ ಯುಗಾದಿ ಹಬ್ಬಕ್ಕೆ ಎರಡು ಜೊತೆ ಬಟ್ಟೆಗಳನ್ನು ಕೊಡಿಸಲು ಮರೆಯುತ್ತಿರಲಿಲ್ಲ .ನಮಗೆ ಮನೆಯಲ್ಲಿ ರಾತ್ರಿ ಊಟ ಹಾಕಿ .ರಾತ್ರಿಯ ಪಾಳಿಯಲ್ಲಿ ಸುಗ್ಗಿ ಕಣದಲ್ಲಿ ಕೆಲಸ ಮಾಡುತ್ತಿದ್ದರು. ಈಗಲೂ ನನಗೆ ಅನುಮಾನವಿದೆ ನಮ್ಮಮ್ಮನಿಗೆ ಭಗವಂತ ಎಷ್ಟು ಶಕ್ತಿ ಕೊಟ್ಟಿದ್ದ . ಈ ನಡುವೆ ನಮ್ಮ ಅಮ್ಮ ಹೆರಿಗೆ ಮಾಡಿಸುವ ಸೂಲಗಿತ್ತಿಯ ಕೆಲಸ ಮಾಡುತ್ತಿದ್ದರು. ಕೆಲವು ಸಲ  ಹಗಲೆಲ್ಲಾ ಕೂಲಿ ಮಾಡಿ ಸುಸ್ತಾಗಿದ್ಧ ಅಮ್ಮ ನಿದ್ದೆಗೆ ಜಾರಿದಾಗ ಹೊತ್ತಲ್ಲದ ಹೊತ್ತಲ್ಲಿ " ಅಕ್ಕ ನಮ್ಮ ಮಗಳಿಗೆ ಹೆರಿಗೆ ನೋವು ಶುರುವಾಗಿದೆ ಬಾರಕ್ಕ" ಎಂದಾಗ ಅಮ್ಮ  ಮರುಮಾತಾಡದೇ ಎದ್ದು ಹೋದದ್ದೇ ಗೊತ್ತು ಮನೆಗೆ ಯಾವಾಗ ಬಂದು ಮಲಗಿದರೋ ಆದರೆ  ಬೆಳಗಿನ ಜಾವ  ಬೇಗನೆ ಎದ್ದು ಮನೆ ಮುಂದೆ ಕಸ ತೆಗೆದು ನೀರು‌ಹಾಕುವಾಗ ನಮಗೆ ಎಚ್ಚರವಾಗುತ್ತಿತ್ತು.  ಒಮ್ಮೆ ನಾನು ಎಂಟನೇ ತರಗತಿ ಓದುವಾಗ ನನಗೆ ಜ್ವರ ಬಂದು ಅನಾರೋಗ್ಯ ಪೀಡಿತನಾದಾಗ ಎರಡು ಕಿಲೋಮೀಟರಗಿಂತ ಹೆಚ್ಚು ದೂರ ನನ್ನ ಕಂಕುಳಲ್ಲಿ ಎತ್ತಿ ಕೊಂಡು ಹೋಗಿ ನನಗೆ ಡಾಕ್ಟರ್ ಬಳಿ ಚಿಕಿತ್ಸೆ ಕೊಡಿಸಿದರು. ಅಮ್ಮ ನಿನ್ನ ಬಗ್ಗೆ ಬರೆಯಲು ‌ಕುಳಿತರೆ ನಿಮಿಷ ದಿನ ,ವಾರ ,ತಿಂಗಳು ವರ್ಷ ಸಾಲಲ್ಲ ಆದರೂ ಕೆಲವೊಮ್ಮೆ ಹೀಗೆ ನಾಲ್ಕು ಸಾಲು ಬರೆದು ನಿನ್ನ ಜ್ಞಾಪಿಸಿಕೊಂಡರೆ ಎನೋ ಸಮಾಧಾನ.


ಸಿ ಜಿ ವೆಂಕಟೇಶ್ವರ

No comments: