21 January 2020

ಜಗವು ಜಗಮಗಿಸಲಿ (ಕವನ)


*ಜಗವು ಜಗಮಗಿಸಲಿ*

ಜಗವನುದ್ದರಿಸಿದವಳು ಜಗಜ್ಜನನಿ
ತನ್ನ ಮಕ್ಕಳಿಗೆ ಸೃಷ್ಟಿ ಸ್ಥಿತಿ ಲಯದ
ಅಧಿಕಾರವ ನೀಡಿ ಜಗವ ನಡೆಸಲು
ಬ್ರಹ್ಮ ,ವಿಷ್ಣು,,ಮಹೇಶ್ವರರ  ನೇಮಿಸಿಹಳು.
ಜಗ ಸಮತೋಲನದಿಂದಿರುವುದು ದೇವಿಯ ಕೃಪೆ ಎಂದರು ಮುನಿಗಳು.

ಮುನಿದ ವಿಜ್ಞಾನಿ 
ಜಗದ ಮೂಲ ಅಣು, ಪರಮಾಣು,
ಬಿಗ್ ಬ್ಯಾಂಗ್ ನಿಂದ ಉಗಮ
ಸೃಷ್ಟಿ ವೈಜ್ಞಾನಿಕ ಸ್ಥಿತಿ ಸಂಶೋಧನಾ ಫಲ.
ನಾಶವಾದರೆ ಪರಮಾಣುಬಾಂಬು ಅಸ್ತ್ರಗಳಿಂದ, ಇದರಲ್ಲಿ ದೇವಿಯ ಪಾತ್ರವೆಲ್ಲಿ ದೈವದ ನಿಯಮವೆಲ್ಲಿ? ಎಂದರು.

ಇವರೀರ್ವರಲಿ ಯಾರು ಸರಿ? 
ಯಾರು ತಪ್ಪು ?
ಗೊಂದಲದ ಗೂಡಾದ ಮನ 
ಕೊಂಚ ಯೋಚಿಸಿ ಇಂತೆಂದಿತು.

ಆದ್ಯಾತ್ಮ ಇಲ್ಲದ ವಿಜ್ಞಾನ ಕುರುಡು
ವಿಜ್ಞಾನವಿಲ್ಲದ ಆದ್ಯಾತ್ಮ ಬರಡು 
ವಿಜ್ಞಾನಿಗಳ ಹೃದಯದಿ ಆದ್ಯಾತ್ಮ  ಉದಿಸಲಿ.
ಸಂತರು ವೈಜ್ಞಾನಿಕ ದೃಷ್ಟಿಕೋನ ಬೆಳಸಲಿ.
ಆದ್ಯಾತ್ಮ ಮತ್ತು ವಿಜ್ಞಾನ ಸಂಗಮವಾಗಲಿ
ಜಗವು ಜಗಮಗಿಸಲಿ.

ಸಿಹಿಜೀವಿ
*ಸಿ.ಜಿ ವೆಂಕಟೇಶ್ವರ*
ತುಮಕೂರು
9900925529

No comments: