31 August 2018

ಗಣಪತಿಗೆ ತುಳಸಿ ಅರ್ಪಣೆ ನಿಷಿದ್ಧ ಏಕೆ?*(ಸಂಗ್ರಹ ಲೇಖನ)



          *ಗಣಪತಿಗೆ ತುಳಸಿ ಅರ್ಪಣೆ ನಿಷಿದ್ಧ ಏಕೆ?*

ಬ್ರಹ್ಮ ವೈವರ್ತ ಪುರಾಣದಲ್ಲಿ ಹೀಗೊಂದು ಕಥೆಯಿದೆ. ತುಳಸಿಯು ಗಣಪತಿಯನ್ನು ನೋಡಿ ಬಹಳ ಮೋಹಿತಳಾಗುತ್ತಾಳೆ. ಆದರೆ ಗಣಪತಿಯು ಪರಮ ವೈರಾಗ್ಯ ಮೂರ್ತಿಯಾಗಿ ತಪಸ್ಸನ್ನು ಆಚರಿಸುತ್ತಿರುತ್ತಾನೆ. ಆಗ ತುಳಸಿಯು ಅವನನ್ನು ಒಲಿಸಿಕೊಳ್ಳಲು ಬಹಳ ಪ್ರಯತ್ನವನ್ನು ಪಡುತ್ತಾಳೆ. ಆದರೆ ಗಣಪತಿಯು ಇವಳ ಯಾವ ಚೇಷ್ಟೆಗೂ ಬಗ್ಗದೆ ಇದ್ದಾಗ ತುಳಸಿಯು ಕಾಮನ ಸಹಾಯವನ್ನು ಕೇಳುತ್ತಾಳೆ. ಆಗ ಕಾಮನೂ ಗಣಪತಿಯ ವೈರಾಗ್ಯವನ್ನು ಹಾಳು ಮಾಡಲು ಪರಿಪರಿಯಾಗಿ ಪ್ರಯತ್ನಿಸುತ್ತಾನೆ. ಆದರೆ ಗಣಪತಿಯು ಕಾಮನ ಯಾವುದೇ ಬಾಣಗಳಿಗೆ ಸೋಲುವುದಿಲ್ಲ. ಆಗ ಸೋತ ಕಾಮನು ತುಳಸಿಯಲ್ಲಿ ತನ್ನಿಂದ ಇನ್ನು ಸಾಧ್ಯವಿಲ್ಲ ಎಂದು ಹೇಳಿ ಹೋಗುತ್ತಾನೆ. ಹೀಗೆ ಗಣಪತಿಯು ಇಕ್ಷುಚಾಪನಾದ ಕಾಮನನ್ನು ಗೆಲಿದವನು. ಮುಂದೆ ಸಿಟ್ಟಾದ ತುಳಸಿ ಗಣಪತಿಗೆ ನೀನು ನಿನ್ನ ಸುಂದರ ರೂಪದಿಂದ ಅಹಂಕಾರ ಪಡುತ್ತಿದ್ದೀ. ಆದ್ದರಿಂದ ನಿನ್ನ ಸೌಂದರ್ಯಕ್ಕೆ ಕಾರಣವಾದ ಈ ದಂತಗಳಲ್ಲಿ ಒಂದು ದಂತವು ಮುಂದೆ ನಡೆಯುವ ಯುದ್ಧದಲ್ಲಿ ನಾಶವಾಗಲಿ ಎಂದು ಶಾಪವನ್ನು ಕೊಡುತ್ತಾಳೆ. ಆಗ ಸಿಟ್ಟಾದ ಗಣಪತಿಯು ನೀನು ವೃಕ್ಷವಾಗಿ ಹುಟ್ಟು ಎಂದು ಪ್ರತಿ ಶಾಪವನ್ನು ಕೊಡುತ್ತಾನೆ. ಆಗ ತುಳಸಿಯು ದುಃಖದಿಂದ ಗಣಪತಿಯನ್ನು ಕ್ಷಮೆ ಕೇಳಿ ನನಗೆ ಅನುಗ್ರಹ ಮಾಡಬೇಕು ಎಂದು ಪ್ರಾರ್ಥಿಸುತ್ತಾಳೆ. ಆಗ ಗಣಪತಿಯು ನೀನು ವೃಕ್ಷವಾಗಿ ಹುಟ್ಟಿದರೂ ವಿಷ್ಣುವಿಗೆ ಅತ್ಯಂತ ಪ್ರಿಯಳಾಗುತ್ತೀ. ಆದರೆ ನಾನು ಮಾತ್ರ ಎಂದೆಂದಿಗೂ ನಿನ್ನನ್ನು ಸ್ವೀಕರಿಸುವುದಿಲ್ಲ ಎಂದು ಹೇಳುತ್ತಾನೆ. ಆದ್ದರಿಂದ ಗಣಪತಿಗೆ ತುಳಸಿ ಹಾಕಬಾರದು ಎಂದು ಸಂಪ್ರದಾಯ ಬಂದಿದೆ. ವಾದಿರಾಜರೂ ತಮ್ಮ ಲಕ್ಷ್ಮೀಶೋಭಾನೆಯಲ್ಲಿ ಲಕ್ಷ್ಮಿಯು ಹಿಡಿದ ಹಾರದಲ್ಲಿ ತುಳಸಿಯು ಇರುವುದರಿಂದ ಇದು ಗಣಪತಿಗೆ ಯೋಗ್ಯವಲ್ಲ ಎಂದು ಯೋಚಿಸುತ್ತಾಳೆ ಎಂದು ಹೇಳಿದ್ದಾರೆ. (ಬಹಳ ಹಿಂದೆ ಇಲ್ಲಿ ಗಣಪತಿಗೆ ತುಳಸಿ ಯಾಕೆ ಹಾಕಬಾರದು ಎಂದು ಯಾರೋ ಒಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ಸೇರಿ ಈ ಲೇಖನ) ಅನೇಕ ಹಿರಿಯ ವಿದ್ವಾಂಸರ ಪ್ರಕಾರ ವಿಷ್ಣುವಿಗೆ ಅರ್ಪಿತವಾದ ಹರಿನಿರ್ಮಾಲ್ಯ ರೂಪವಾದ ತುಳಸಿಯನ್ನು ಗಣಪತಿಗೆ ಅರ್ಪಿಸಬಹುದು. ಆದರೆ ನೇರವಾಗಿ ಅರ್ಪಿಸಬಾರದು.

ಸಂಗ್ರಹ ಲೇಖನ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: