29 March 2023

ಒಳನಾಡಿನ ಒಡನಾಟ... ಪ್ರವಾಸ ಕಥನದ ವಿಮರ್ಶೆ.

 


ಒಳನಾಡಿನ ಒಡನಾಟ..
ಪ್ರವಾಸ ಕಥನ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ 
ಸಿದ್ದಗಂಗಯ್ಯ ಹೊಲತಾಳ್ ರವರ ಕೃತಿಗಳಾದ ಸಿಂಗಾರಿ ಮತ್ತು  ಸುವರ್ಣಮುಖಿ ಓದಿದ್ದೆನು.
ಇವರ ಹೊಸ ಕೃತಿಯಾದ "ಒಳನಾಡಿನ ಒಡನಾಟ " ಪುಸ್ತಕ ಒದಿದೆ.ಪ್ರವಾಸದ ಬಗ್ಗೆ  ಮೊದಲಿನಿಂದಲೂ ಆಸಕ್ತಿ ಇರುವ ನನಗೆ ಈ ಕೃತಿ ಬಹಳ ಇಷ್ಟವಾಯಿತು.

ಡಾ. ಸಿದ್ಧಗಂಗಯ್ಯ ಹೊಲತಾಳರು
ಹುಟ್ಟಿದ್ದು 1954ರಲ್ಲಿ.ತುಮಕೂರಿಗೆ 25 ಕಿ.ಮೀ. ದೂರದಲ್ಲಿರುವ ಸಿದ್ಧರಬೆಟ್ಟದ ದಕ್ಷಿಣ ತಪ್ಪಲಿನಲ್ಲಿರುವ ಹೊಲತಾಳಿನಲ್ಲಿ ವಿದ್ಯಾಭ್ಯಾಸ ಕುರಂಕೋಟೆಯಲ್ಲಿ ಪ್ರಾಥಮಿಕ ಶಾಲೆ ಸಿದ್ಧಗಂಗೆಯಲ್ಲಿ ಹೈಸ್ಕೂಲ್, ಪಿಯುಸಿ  ತುಮಕೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಮೈಸೂರಿನ ಸೋಮಾನಿ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ನಲ್ಲಿ ಬಿ.ಇಡಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಎಂ.ಎ,ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಡಿ.ಲಿಟ್, ಪದವಿ ಪಡೆದ ಇವರು
ಮೈಸೂರಿನ ಸರಸ್ವತಿಪುರಂನ ಜೆಎಸ್ಎಸ್ ಬಾಲಕಿಯರ ಹೈಸ್ಕೂಲ್ ನಲ್ಲಿ ಅಧ್ಯಾಪಕರಾಗಿ, ಚಿಕ್ಕಮಗಳೂರು ಜಿಲ್ಲೆಯ ಆಸಂದಿಯ ಹೈಸ್ಕೂಲ್ ನಲ್ಲಿ ಅಧ್ಯಾಪಕರಾಗಿ,  ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯ ಪದವಿ ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ತುಮಕೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಮತ್ತು  ಮುಖ್ಯಸ್ಥರಾಗಿ , ಕಲ್ಪತರು ಸಂಶೋಧನಾ ಅಭಿವೃದ್ಧಿ ಮತ್ತು ಕೈಗಾರಿಕಾ ಸಲಹಾ ಕೇಂದ್ರದಲ್ಲಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ ಇವರು ನಾಡಿನ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನಗೈದಿದ್ದಾರೆ.

ಇವರು ಸಾಹಿತ್ಯ ಕ್ಷೇತ್ರದಲ್ಲೂ ಉತ್ತಮ ಕೃತಿಗಳನ್ನು ನಮಗೆ ನೀಡಿದ್ದಾರೆ. ಅವುಗಳೆಂದರೆ ..
'ಕಾವ್ಯ ಸಂವಹನ': ಕಾದಂಬರಿ 'ತಿರುವು: ಆಕಾಶವಾಣಿ ಮಾತು 'ಕಿರಣ'; ಅನುವಾದ “The Song of Silence' 'A Handful of Water; ವೋ ಅಲ್ಬರ್ಟ್', 'ಕಾವ್ಯಾಭ್ಯಾಸ : ವಿದ್ಯಾರ್ಥಿಗಳಿಗಾಗಿ *The Use of English", "English for Communication', 'ಸ್ವಾತಂತ್ರ್ಯ ಹೋರಾಟದ ಮಹಾಚೇತನಗಳು', "The Great Spirits of Freedom Struggle. ' '. "Essential Writing Skill: ಪರಿಸರದೆಡೆಗೆ', 'ಹೊಳತಾಳ ಹಾದಿ' 'ವೈವಿಧ್ಯ' ಇತ್ಯಾದಿ. ಸಂಪಾದನೆ: ಜೀವನ ಚರಿತ್ರೆ ಮಾಲೆ (50), ಕಾಂಕ್ರೀಟ್ ಕಾಡಿನ ದಿನಚರಿ, ಕನ್ನಡದ ಮೂಲಕ ಇಂಗ್ಲಿಷ್ ಕಲಿಕೆ ಮಾಲೆ' (10), 'ಸುವರ್ಣಮುಖಿ', 'ಸಿಂಗಾರಿ', ಒಳನಾಡಿನ ಒಡನಾಟ,

ಸುವರ್ಣ ಮುಖಿ ಮತ್ತು ಸಿಂಗಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.ಪ್ರಸ್ತುತ  ಒಳನಾಡಿನ ಒಡನಾಟ ಕೃತಿಗೆ  ತುಮಕೂರು ಜಿಲ್ಲಾ ಸಾಹಿತ್ಯ ಪರಿಷತ್ ನ  ದೇವಪ್ರಕಾಶ್ ದತ್ತಿ ಪ್ರಶಸ್ತಿ ಲಭಿಸಿದೆ.

308 ಪುಟಗಳ ಈ ಬೃಹತ್ ಪುಸ್ತಕ ಮೂರು ಭಾಗಗಳಲ್ಲಿ ನೂರು ಅಧ್ಯಾಯಗಳಲ್ಲಿ ನಮ್ಮನ್ನು ಒಳನಾಡಿನ ಸಾಮಾಜೋ,ಆರ್ಥಿಕ, ಶೈಕ್ಷಣಿಕ, ಪರಿಸರ ಕಾಳಜಿಯ ಅಧ್ಯಯನ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಪೂರಕವಾದ ಬಣ್ಣದ ಚಿತ್ರಗಳು ಮನಮೋಹಕವಾಗಿವೆ.

2022 ರ ಜೂನ್ ಜುಲೈ ತಿಂಗಳ ಎಡಬಿಡದೆ ಧಾರಾಕಾರವಾಗಿ ಸುರಿದ  ಮಳೆ ,ಮೈಕೊರೆವ ಚಳಿ ಬಯಲು ಸೀಮೆಯನ್ನು ಅಕ್ಷರಶಃ ಕಾಶ್ಮೀರದ ವಾತಾವರಣವಿರುವಂತೆ ಮಾಡಿತ್ತು.ಅಂತಹ ಸಂಧರ್ಭದಲ್ಲಿ ನಾವು ಬೆಚ್ಚಗಿನ ಮನೆಯಲ್ಲಿ ಬಿಸಿಯಾದ ಊಟ ತಿಂದು ಬೆಚ್ಚಗೆ  ಮನೆಯಲ್ಲಿ ಮುದುರಿಕೊಂಡು ಮಲಗಲು ಇಚ್ಛಿಸಿದರೆ ಎಪ್ಪತ್ತರ ಹಾಸುಪಾಸಿನ ಚಿರಯುವಕ ಹೊಲತಾಳರು ಚಳಿ,ಮಳೆ, ಗಾಳಿ ಲೆಕ್ಕಿಸದೇ ಒಳನಾಡಿನೊಂದಿಗೆ  ಒಡನಾಡಲು ಹೊರಟೇಬಿಟ್ಟರು.ಅವರನ್ನು ಬೆರಗುಗಣಗಣ್ಣಿನಿಂದ ನೋಡುತ್ತಿದ್ದೆ.ತಮ್ಮ ಪ್ರವಾಸದ ಅನುಭವವನ್ನು ಈ ಪುಸ್ತಕ ಪ್ರಕಟವಾಗುವ ಮೊದಲೇ  ಹೈಲೈಟ್ಸ್ ಮೂಲಕ ನಮಗೆ ಹೇಳಿದ್ದರು .
ಪ್ರವಾಸ ಪ್ರಿಯನಾದ ನಾನು ಈ ವರ್ಷ ಕ್ಯಾತ್ಸಂದ್ರ ಟು ಕ್ಯಾತನಮಕ್ಕಿ ಎಂಬ ಪುಸ್ತಕ ಪ್ರಕಟ ಮಾಡಿರುವೆ.ಹೊಲತಾಳರ ಪ್ರವಾಸ ಕಥನ ಶೈಲಿ ನನಗೆ ಹಿಡಿಸಿತು ಅವರ ಹಾಗೆ ನಾನೂ ಕೂಡಾ ಒಂದು  ಸಮಗ್ರ ಪ್ರವಾಸ ಕಥನ ಬರೆಯಲು ಮನಸ್ಸು ಮಾಡಿರುವೆ.

ಡಾ.ಸಿದ್ಧಗಂಗಯ್ಯ ಹೊಲತಾಳರು
ಕರ್ನಾಟಕದ ಹಲವು ಜಿಲ್ಲೆಗಳ  ಒಳಹೊಕ್ಕು ಒಡನಾಟವಾಡಿ ಬರೆದ ಈ  ವಿಶಿಷ್ಟ ಕೃತಿಯಲ್ಲಿ  ನಾಡಿನ ನೆಲ-ಹೊಲ-ಜಲ-ಕೃಷಿ ಖುಷಿ ವಿಚಾರಗಳನ್ನೂ, ಸಹೃದಯರನ್ನು ಸಂಧಿಸಿ ನಡೆಸಿದ ಮುಕ್ತ ಮಾತುಕತೆಗಳನ್ನು ಇಲ್ಲಿ ದಾಖಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ.
ಇವರ ಒಳನಾಡಿನ ಪ್ರವಾಸ ಮೊದಲಿಗೆ ಯರಬಳ್ಳಿಯ ಸಾಹಸಿ ರೈತ ಮಹಿಳೆ ಅರುಣ ಅವರ ಭೇಟಿಯೊಂದಿಗೆ ಆರಂಭವಾಗುತ್ತದೆ.  ಇವರೊಂದಿಗೆ ಜಿಂಗಾಡೆ ನಾಗೇಂದ್ರ, ಸ್ಟೀಲ್ ಪಾತ್ರೆ ಅಂಗಡಿ ಬಸವರಾಜು ಸಹ ಇರುತ್ತಾರೆ. ಇವರ ಪ್ರವಾಸ ಓಮಿನಿ ಕಾರ್ನಲ್ಲಿ ಆರಂಭವಾಗುತ್ತದೆ. ಬೆಟ್ಟಗುಡ್ಡಗಳ ನಡುವಿನ ಯರಬಳ್ಳಿಯ ಅರುಣ ಅವರ ತೋಟಕ್ಕೆ ಭೇಟಿ ನೀಡುತ್ತಾರೆ. 4 ಎಕರೆ ಭೂಮಿಯಲ್ಲಿನ ತರಕಾರಿ, ಹಣ್ಣು, ಮೆಣಸು, ಏಲಕ್ಕಿ, ಅರಿಶಿನ, ಪಪ್ಪಾಯಿ, ಕೋಕೊ, ಬಾಳೆಯೊಂದಿಗೆ ಹಸು, ಕುರಿ, ಕೋಳಿ ಸಾಕಾಣಿಕೆ ಕಂಡು ಸೋಜಿಗಪಡುತ್ತಾರೆ. ಅಡಿಕೆ, ತೆಂಗು, ಸೀಬೆ, ಮಾವು, ಕಿತ್ತಳೆ, ನಿಂಬೆ, ಅಂಜೂರ, ಎಳ್ಳಿ ಮುಂತಾದ ಬೆಳೆಯನ್ನು ಅಲ್ಲಿ ಕಾಣುತ್ತಾರೆ. ಜೇನು ಸಾಕಾಣಿಕೆ ವಿಧಾನ ಕಂಡು ಬೆರಗಾಗುತ್ತಾರೆ. ವಾರ್ಷಿಕ ಆದಾಯ ಎಂಟತ್ತು ಲಕ್ಷಕ್ಕೂ ಅಧಿಕ ಎಂದು ತಿಳಿದು ಬೀಗುತ್ತಾರೆ. ರಾಸಾಯನಿಕ ಗೊಬ್ಬರ ಬಳಸದೆ ಬೆಳೆದ ರೀತಿ ನೀತಿ ಅರಿಯುತ್ತಾರೆ. ತಂದೆಯಿಲ್ಲದ ಅರುಣ ತಾಯಿಯನ್ನು ಪೋಷಿಸುತ್ತಾ, ಸೋದರಿಯರಿಬ್ಬರಿಗೂ ವಿವಾಹ ಮಾಡಿ, ತಾನು ವಿವಾಹವಾಗದೆ ಇರುವ ಆಕೆಯ ಕೃಷಿಕಾಯಕ ಕಂಡು ಮೂಕರಾಗುತ್ತಾರೆ. ಆಕೆಯ ಸಾಧನೆ ಕಂಡು ಮನದಲ್ಲೇ ಧನ್ಯತಾ ಭಾವ ವ್ಯಕ್ತಪಡಿಸುತ್ತಾರೆ. ನಮ್ಮ ನಾಡಿನ ಹೆಣ್ಣು ಮಕ್ಕಳು ಹೀಗಾಗಬಾರದೆ' ಎಂದು  ಅನಿಸದೇ ಇರದು. 

ಎರಡನೆ ಭೇಟಿ ಸೀಗೇನಹಳ್ಳಿಯ ಎಸ್.ಕೆ. ಸಿದ್ಧಪ್ಪ ಅವರ ಹಲಸು ಬೆಳೆವ ತೋಟಕ್ಕೆ ನೀಡುತ್ತಾರೆ. ವಾರ್ಷಿಕ ಆದಾಯ 10 ಲಕ್ಷ ರೂ. ಎಂದು ತಿಳಿದು ಬರುವ ಸಂಗತಿ ನಮಗೆ  ಕೌತುಕ ಮೂಡಿಸುತ್ತದೆ. ಅವರ 25 ಎಕರೆಯ ಮಾವಿನ ತೋಟ ನೋಡಿ, ಅದರ ಆದಾಯ ಕೇಳಿ ಬೆರಗಾಗುತ್ತಾರೆ. ಮುಂದುವರೆದು ಅಮ್ಮನಘಟ್ಟದ ಮಿಯಾವಾಕಿ ಕಾಡಿಗೆ ಭೇಟಿ ನೀಡಿ, ಅಲ್ಲಿನ ನೈಸರ್ಗಿಕ ಬೇಸಾಯ ಕುರಿತು ಅಪೂರ್ವ ಮಾಹಿತಿಗಳನ್ನು ಕಲೆ ಹಾಕುತ್ತಾರೆ. ಮುಂದೆ ಬುಕ್ಕಾಪಟ್ಟಣದ ಶ್ರೀಗಂಧದ ಬೆಳೆಯ ಮಾಹಿತಿ ಸಂಗ್ರಹಿಸುತ್ತಾರೆ. ಜಲಸಂವರ್ಧನೆ ಬಗ್ಗೆ ಸಂವಾದ ಮಾಡಿ ಹೊಸ ಹೊಸ ಮಾಹಿತಿ ನೀಡುತ್ತಾರೆ. ಡಾ. ವೀಣಾ ಅವರು ಶ್ರೀಗಂಧದ ಬಗ್ಗೆ ಅದ್ಭುತ ಮಾಹಿತಿ ನೀಡುತ್ತಾರೆ. ಅಡಿಗಡಿಗೂ ಓದುಗರಲ್ಲಿ ಕೌತುಕ ಹುಟ್ಟಿಸುವಂತಿದೆ.

ಲೇಖಕರು ತಮ್ಮ ಪ್ರವಾಸ ಕಾಲದಲ್ಲಿ ಹಲವು ಶಾಲಾ ಕಾಲೇಜುಗಳನ್ನೂ, ಸಂಘಸಂಸ್ಥೆಗಳನ್ನೂ, ಸಮಾಜ ಸೇವಕರನ್ನು, ರೈತಾಪಿ ವರ್ಗವನ್ನು, ಬರಹಗಾರರನ್ನು ಭೇಟಿ ಮಾಡಿದ್ದಾರೆ. ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜರಾವ್, ತಿಮ್ಮನಹಳ್ಳಿ ವೇಣುಗೋಪಾಲ್, ಜೆ.ಸಿ. ಪುರದ ಶಿವನಂಜಯ್ಯ ಬಾಳೆಕಾಯಿ, ಬಿದುರೆಗುಡಿ ವಿಜ್ಞಾನ ಕೇಂದ್ರ, ವನಶ್ರೀಯ: ಡಾ. ಜಿ.ಎನ್.ಎಸ್. ರೆಡ್ಡಿ, ಸಂತೆಶಿವರದ ಕೃಷಿಕ ಬಸವರಾಜು, ಲಕ್ಕಿಹಳ್ಳಿ ಬೈಫ್ ಕ್ಯಾಂಪಸ್ನ ಪ್ರಕಾಶ್, ನೀರುಗುಂದದ ಜಯಣ್ಣ, ಸಾಣೆಹಳ್ಳಿ ಶ್ರೀಗಳು, ಗಿರಿಯಾಪುರದ ರೈತ ಕಾಶೀನಾಥ್, ಕುಮಾರ ಚಲ್ಯ, ಬಿ.ಆರ್. ಪ್ರಾಜೆಕ್ಟ್ನ ದಾಳೇಗೌಡ, ಗೋಪಾಳದ ಚಂದ್ರೇಗೌಡ, ಕಾಸರಗೋಡಿನ ಕುಳಮರ್ವ, ಕೆ. ರಾಧಾಕೃಷ್ಣ ಉಳಿಯತ್ತಡ್ಕ, ಸ್ವಾಮಿ ಆನಂದ್, ಎ.ಪಿ. ಚಂದ್ರಶೇಖರ, ಟಿ.ಎಸ್. ಲೋಹಿತಾಶ, ಶ್ರೀ ಶಿವಾಚಾರ್ಯ ಸ್ವಾಮೀಜಿ ಹೀಗೆ ಹಲವಾರು ಪ್ರಮುಖರನ್ನು ಸಂಧಿಸಿ ಅಮೂಲ್ಯವಾದ ಮಾಹಿತಿ ಸಂಗ್ರಹಿಸಿದ್ದಾರೆ.

ಲೇಖಕರು ಸಾಧಕ ವ್ಯಕ್ತಿಗಳನ್ನಲ್ಲದೆ, ಅಮ್ಮನಘಟ್ಟದ ಮಿಯಾವಾಕಿ ಕಾಡು, ಡಾ. ಎಸ್.ಎಲ್ ಭೈರಪ್ಪನವರು ನಿರ್ಮಿಸಿರುವ ವಾಚನಾಲಯ, ಕಂಚಾಘಟ್ಟದ ತೋಟದ ಮನೆ, ಗರ್ಜೆ ಈಶ್ವರಪ್ಪನ ಎರೆಹುಳು ತೋಟ, ಮಂಡಿಮನೆ ಫಾರಂ, ಶಾಂತಿನಗರಗುಡ್ಡ, ಸಿಂಗನಮನೆ, ಪೊಸಡಿ ಗುಂಪೆ, ಮೈಸೂರು ಮುಂತಾದ ಪ್ರದೇಶ, ಊರುಗಳಿಗೆ ಭೇಟಿ ನೀಡಿ ಅತ್ಯಮೂಲ್ಯವಾದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಇವರು ಸಂಗ್ರಹಿಸಿದ ವಿಚಾರ ಓದುಗರನ್ನು ಬೆರಗುಗೊಳಿಸುತ್ತದೆ. ಗ್ರಾಮೀಣ ವ್ಯಕ್ತಿಗಳ ಶಕ್ತಿ ಕಂಡು ಓದುಗರು ಮನಸೋಲುವುದು ಖಂಡಿತ, ಸರಳವಾದ ನಿರೂಪಣೆ, ಆಕರ್ಷಕ ಬರೆಹ, ಸಂಗ್ರಹಿಸಿರುವ ಸಂಪತ್ತು ಮನಸೂರೆಗೊಳ್ಳುತ್ತದೆ.

ಹೊಲತಾಳರು ಮೈಸೂರು, ನಂಜನಗೂಡು, ವಿಧುರಾಶ್ವತ್ಥ, ತೊಂಡೆಕೆರೆ, ಚನಗ ನಿಜಗಲ್, ದೇವರಾಯನದುರ್ಗ, ಕಬಿನಿ ಡ್ಯಾಂ, ಕಳಲವಾಡಿ ಇಂದ್ರಪ್ರಸ್ಥ ಹೀಗೆ ಒಳನಾಡಿನ ಒಡನಾಟದಲ್ಲಿ ಸುಮಾರು 100 ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಹಿರಿಮೆ ಗರಿಮೆಗಳನ್ನು ಸಾರ ಸಂಗ್ರಹವಾಗಿ ನೀಡಿದ್ದಾರೆ. ಧ್ವನ್ಯಾಲೋಕ ಕಂಡು ಇವರ ಮನ ಹಿಗ್ಗಿನ ಬುಗ್ಗೆಯಾದರೆ, ಕಾಸರಗೋಡಿನ ಪರಿಸರ ಕಂಡು ಮನಸೋತು ಹೋಗುತ್ತಾರೆ. ಹೊಲ, ಗದ್ದೆ, ತೋಟ, ವನ, ಬನ, ಜಲಸಿರಿ, ಊರು, ಕೇರಿ, ನಗರ, ಮನೆ ಮಠಗಳು, ಕೆರೆ ಕಟ್ಟೆ ಕಾಲುವೆಗಳು ಕಣಟ್ಟಿ ನಿಲ್ಲುತ್ತವೆ. ಕವಿಗಳ ಕವಿತೆಗಳು ಆಪ್ಯಾಯಮಾನವಾಗಿವೆ. ಇತಿಹಾಸದ ಗತವೈಭವಗಳು ಮನದಲ್ಲಿ ಮನೆ ಮಾಡುತ್ತವೆ.

ಈ ಪುಸ್ತಕಕ್ಕೆ ನಮ್ಮ ನಾಡಿನ ಹೆಸರಾಂತ ಸಾಹಿತಿಗಳಾದ ವಿದ್ಯಾವಾಚಸ್ಪತಿ ಡಾ. ಕವಿತಾ ಕೃಷ್ಣರವರು ಮುನ್ನುಡಿ ಬರೆದಿದ್ದು ಪುಸ್ತಕದ ಸಮಗ್ರ ನೋಟ ನೀಡಿದೆ.
ಕವಿ ವಿಮರ್ಶಕರಾದ ಡಾ.ಕೆ ಪಿ ನಟರಾಜ್ ರವರು,ಜಾನಪದ ತಜ್ಞರಾದ ಡಾ, ಬಸವರಾಜ ನೆಲ್ಲಿಸರ ರವರು ಪುಸ್ತಸುರಿಬ್ಗೆ ತಕದ ಬಗಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ಧಾರೆ.
ನಿಮಗೂ ಒಳನಾಡಿನೊಂದಿಗೆ ಒಡನಾಟವಾಡಬೇಕು ಎನಿಸಿದರೆ  ಆರೆಂಜ್ ಬುಕ್ಸ್  ನ ಪ್ರಕಾಶಕರನ್ನು ಸಂಪರ್ಕಿಸಿ 400 ರೂಪಾಯಿಗಳನ್ನು ಕೊಟ್ಟು ಖರೀದಿಸಿ ಓದಬಹುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.

No comments: