ಅರೆಯೂರು ವೈದ್ಯನಾಥೇಶ್ವರ ಸನ್ನಿಧಿ..
"ನನಗೆ ವೈರಸ್ ಖಾಯಿಲೆಯಾಗಿ ಕೈ ಕಾಲುಗಳು ಸ್ವಾಧೀನವಿಲ್ಲದೆ ನಡೆದಾಡಲು ಆಗುತ್ತಿರಲಿಲ್ಲ. ಪರಿಣತ ತಜ್ಞ ವೈದ್ಯರಿಗೆ ತೋರಿಸಿ ಔಷಧೋಪಚಾರ ಪಡೆದರೂ ಸಹ ಗುಣಕಾಣಲಿಲ್ಲ. ನನ್ನ ಪರವಾಗಿ ನನ್ನ ಸ್ನೇಹಿತರಾದ ಮೈದಾಳದ ಶ್ರೀ ಪುಟ್ಟರೇವಯ್ಯನವರು ಶ್ರೀ ಸ್ವಾಮಿಗೆ ಪೂಜೆ ಮಾಡಿಸಿ ಪ್ರಾರ್ಥಿಸಿಕೊಂಡಿದ್ದರಿಂದ ನನಗೆ ಗುಣವಾಗಿದೆ". ಇವು ಕುಣಿಗಲ್ ನ
ವಿ. ಕೃಷ್ಣ ಮೂರ್ತಿರವರ ಕೃತಜ್ಞತಾಪೂರ್ವಕ ಮಾತುಗಳು .
"ನನಗೆ ಮೂತ್ರಕೋಶದ ಖಾಯಿಲೆಯಾಗಿ ಮೂತ್ರದ ಜೊತೆಯಲ್ಲಿ ರಕ್ತ ಹೋಗುತ್ತಿತ್ತು. ಬಹಳ ನೋವು ಆಗುತ್ತಿತ್ತು. ತಜ್ಞ ವೈದ್ಯರಿಂದ ಔಷಧೋಪಚಾರ ಮಾಡಿಸಿಕೊಂಡರೂ ಸಹ ವಾಸಿಯಾಗಲಿಲ್ಲ. ಆದರೆ ಸ್ವಾಮಿಯ ದೇವಸ್ಥಾನಕ್ಕೆ ಪೂಜೆ ಮಾಡಿಸಿ ಅಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡು ಆಗಾಗ್ಗೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಖಾಯಿಲೆ ವಾಸಿ ಮಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ ನನ್ನ ಖಾಯಿಲೆ ಶೇ.75 ಭಾಗ ವಾಸಿಯಾಗಿದೆ. ಪೂರ್ಣ ವಾಸಿಯಾಗುತ್ತದೆ ಎಂಬ ನಂಬಿಕೆ ನನಗಿದೆ" ದೇವರ ಮಹಿಮೆಯ ಕುರಿತು ಹೆಗ್ಗೆರೆಯ ಪುಟ್ಟ ಹನುಮಯ್ಯನವರು ಹೇಳಿದ ಮಾತುಗಳು.
ಈಗ ನಿಮಗೂ ಕುತೂಹಲವಾಗಿದೆ! ಯಾವುದು ಈ ಪವಾಡದ ದೇವರು ಎಂಬ ಪ್ರಶ್ನೆ ನಿಮ್ಮಲ್ಲಿ ಬಂದಿದೆ.
ಹೌದು ತುಮಕೂರು ತಾಲ್ಲೂಕಿನ ಭವರೋಗ ವೈದ್ಯ, ಸರ್ವ ವ್ಯಾಧಿ ನಿವಾರಕ ಶ್ರೀ ವೈದ್ಯನಾಥೇಶ್ವರನೇ ಆ ದೈವ ! ಅರೆಯೂರಿನ ಈ ದೈವ ನಮ್ಮ ನಾಡು ಅಷ್ಟೇ ಅಲ್ಲ ಹೊರರಾಜ್ಯದ ಭಕ್ತರನ್ನು ಸಹ ಕಾಪಾಡುತ್ತಿದ್ದಾರೆ.
ನನ್ನ ಸಹೋದ್ಯೋಗಿ ಮಿತ್ರರು ಆಗಾಗ್ಗೆ ಈ ದೇವಾಲಯ ಮತ್ತು ಸ್ವಾಮಿಯ ಬಗ್ಗೆ ಹೇಳಿದ್ದರು .ಭೇಟಿ ನೀಡಲು ಆಗಿರಲಿಲ್ಲ .ಈ ಭಾನುವಾರ ಆತ್ಮೀಯರಾದ ಶಂಕರಾನಂದ ರವರ ಜೊತೆಯಲ್ಲಿ ಬೈಕ್ ಏರಿ ಅರೆಯೂರಿನ ಕಡೆ ಪಯಣ ಆರಂಭಿಸಿಯೇಬಿಟ್ಟೆವು. ಹೊನ್ನಾವರ ಹೈವೆಯ ಮೂಲಕ ಸಂಚರಿಸಿ ಮಲ್ಲಸಂದ್ರದಿಂದ ಎಡಭಾಗಕ್ಕೆ ತಿರುವು ಪಡೆದು ಪಯಣ ಮುಂದುವರೆಸಿದ ನಮಗೆ ಅರೆಮಲೆನಾಡಿನ ಪರಿಸರ ಮನಸೆಳೆಯಿತು ಅಡಿಕೆ ತೆಂಗು ತೋಟಗಳು ಹೊಂಬಾಳೆಯಿಂದ ಕಂಗೊಳಿಸುತ್ತಿದ್ದವು.ಆ ಹೊಂಬಾಳೆಯಿಂದ ಬರುವ ಸುವಾಸನೆ ಸವಿಯುವುದೇ ಒಂದು ಆನಂದ! ಅರ್ಧ ಗಂಟೆಯ ಬೈಕ್ ಸವಾರಿಯ ನಂತರ ಕೆರೆ ಏರಿಯ ಮೇಲೆ ಒಂದು ದೊಡ್ಡ ಗೋಪುರ ನಮಗೆ ಗೋಚರವಾಯಿತು . ಆ ಕಡೆ ತೆರಳಿದೆವು ಅದೇ ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸನ್ನಿಧಿ.
ತುಮಕೂರಿಗೆ ಬಂದು ಮೂರು ವರ್ಷ ಕಳೆದರೂ ನಗರದಿಂದ ಕೇವಲ ಹದಿನೆಂಟು ಕಿಲೋಮೀಟರ್ ದೂರದಲ್ಲಿರುವ ಇಂತಹ ಪವಿತ್ರ ಪುಣ್ಯಕ್ಷೇತ್ರ ನೋಡಿರಲಿಲ್ಲವಲ್ಲ ಎಂಬ ಭಾವನೆ ಕಾಡಿತು .
ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾದ ನಾವು ಆ ಸನ್ನಿಧಿಯ ಬಗ್ಗೆ ಅಲ್ಲಿರುವ ಹಿರಿಯರನ್ನು ಮಾತನಾಡಿಸಿದಾಗ ಆಶ್ಚರ್ಯಕರ ಸಂಗತಿಗಳು ನಮಗೆ ತಿಳಿದವು.
ವೈದ್ಯನಾಥೇಶ್ವರಸ್ವಾಮಿ ದೇವಸ್ಥಾನವಿರುವ ಪ್ರದೇಶವು ಒಂದು ತಪೋಭೂಮಿಯಾಗಿದೆ. ಅರೆಯೂರಿನಲ್ಲಿರುವ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನಗಳು ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಹಿಂದಿನವುಗಳು. ಆದರೆ ಈ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಶಿಲಾಶಾಸನವಾಗಲಿ, ಅಥವಾ ಅಧಿಕೃತ ಆಧಾರಿತ ಗ್ರಂಥಗಳಾಗಲಿ ದೊರೆತಿರುವುದಿಲ್ಲ. ಆದರೆ ಅಂದಿನಿಂದ ಇಂದಿನವರೆವಿಗೂ ಮೌಖಿಕವಾಗಿ ಜನರ ಬಾಯಿಂದ ಬಾಯಿಗೆ ಬಂದು ಪ್ರಚಾರದಲ್ಲಿರುವ ಮಾಹಿತಿಗಳ ಪ್ರಕಾರ ಈ ದೇವಸ್ಥಾನಗಳು ಇರುವ ಪ್ರದೇಶವು ಮೊದಲು ದಟ್ಟವಾದ ಅರಣ್ಯ ಪ್ರದೇಶವಾಗಿತ್ತಂತೆ. ಇಲ್ಲಿ ಕಾಡು ಗೊಲ್ಲರು ಅಲ್ಲಲ್ಲಿ ವಾಸ ಮಾಡಿಕೊಂಡು ಇದ್ದರಂತೆ. ಹಿಮಾಲಯ ಪರ್ವತದ ಕಡೆಯಿಂದ ಶ್ರೀ ದಧೀಚಿ ಮಹರ್ಷಿ ಹಾಗೂ ಇತರ ಋಷಿಗಳು ಬಂದು ಇಲ್ಲಿ ಆಶ್ರಮ ಮಾಡಿಕೊಂಡು, ತಪಸ್ಸು ಮಾಡಿಕೊಂಡು ಇದ್ದರಂತೆ, ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿರುವ ಜ್ಯೋತಿರ್ಲಿಂಗುವನ್ನು ಪ್ರತಿಷ್ಠಾಪಿಸಿ ಒಂದಂಕಣದ ಚಿಕ್ಕದಾದ ಗರ್ಭಗುಡಿಯನ್ನು ಮಾತ್ರ ಕಟ್ಟಿದ್ದರಂತೆ. ಚೋಳ ರಾಜರ ಕಾಲದಲ್ಲಿ ದೇವಸ್ಥಾನವನ್ನು ವಿಸ್ತರಿಸಿ ಕಟ್ಟಿಸಿದರಂತೆ. ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನವಿರುವ ಕಡೆ ಒಂದು ದಿವ್ಯ ಔಷಧಿ ಮರ ಬೆಳೆದಿತ್ತಂತೆ. ಋಷಿಗಳ ಆಶ್ರಮಕ್ಕೆ ಬರುವ ರೋಗಿಗಳಿಗೆ ಋಷಿಗಳು ದಿವ್ಯ ಔಷಧದ ಮರದ ಎಲೆಗಳಿಂದ ಆಯುರ್ವೇದ ಔಷಧಿ ತಯಾರಿಸಿಕೊಟ್ಟು ಅವರ ಖಾಯಿಲೆಗಳನ್ನು ವಾಸಿ ಮಾಡುತ್ತಿದ್ದರಂತೆ.
ಭಕ್ತರು ಇಲ್ಲಿಗೆ ಬಂದು ದೇವರಿಗೆ ಪೂಜೆ-ಅಭಿಷೇಕ ಮಾಡಿಸಿ, ದೇವರಲ್ಲಿ "ನನ್ನ ಖಾಯಿಲೆ ವಾಸಿಯಾಗುತ್ತದೆಯೇ? ನನ್ನ ಇಷ್ಟಾರ್ಥಗಳು ಈಡೇರುತ್ತವೆಯೇ?" ಎಂಬ ಪ್ರಶ್ನೆಗಳನ್ನು ಮನಸ್ಸಿನಲ್ಲೇ ಕೇಳಿಕೊಂಡು ಅರ್ಚಕರಿಗೆ ದೇವರ ಮೇಲಣ ಪ್ರಸಾದ ಕೊಡುವಂತೆ ವಿನಂತಿಸಿದರೆ ಅರ್ಚಕರು ಭಕ್ತಿಯಿಂದ ಲಿಂಗುವಿನ ಮೇಲೆ ಇಟ್ಟಿರುವ ಬಿಡಿ ಹೂವುಗಳನ್ನು ಮೂರು ಬೆರಳಿನಲ್ಲಿ ಪ್ರಸಾದ ರೂಪದಲ್ಲಿ ತಂದುಕೊಡುತ್ತಾರೆ.
ಆಗ ನಮಗೆ ಪ್ರಸಾದವಾಗಿ ಬಂದ ಹೂವುಗಳು "ಬೆಸಸಂಖ್ಯೆ"ಯಲ್ಲಿ (Odd numbers) ಅಂದರೆ 1, 3, 5, 7, 9, .. ರಂತೆ ಇದ್ದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಅರ್ಥ. ಅದೇ "ಸಮಸಂಖ್ಯೆ"ಯಲ್ಲಿ (Even Numbers) ಅಂದರೆ 2, 4, 6, 8, .. ರಂತೆ ಹೂವುಗಳು ಬಂದರೆ ಖಾಯಿಲೆ ವಾಸಿಯಾಗುವುದಿಲ್ಲ ಅಥವಾ ಕಾರ್ಯ ಆಗುವುದಿಲ್ಲ.
ಆದರೂ ಬಿಡದೆ ಭಕ್ತರು ದೃಢಭಕ್ತಿಯಿಂದ ಆಗಾಗ್ಗೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ದೇವರಿಗೆ ಅಭಿಷೇಕ ಮಾಡಿಸುತ್ತಿದ್ದರೆ 5-6 ತಿಂಗಳಲ್ಲಿ ಶುಭ ಸೂಚನೆ ಕಂಡು ಬಂದು ದೇವರ ಅನುಗ್ರಹ ಆಗುತ್ತದೆ.
ವೈದ್ಯನಾಥೇಶ್ವರ ದರ್ಶನ ಪಡೆದು ಸನಿಹದಲ್ಲೇ ಇರುವ ಹಾಲು ಮಲ್ಲೇಶ್ವರ ದೇವಾಲಯಕ್ಕೆ ತರಳಿ ದೇವರ ಆಶೀರ್ವಾದ ಪಡೆದೆವು .ಅಲ್ಲಿ ಅರ್ಚಕರು ಕೆಲ ಮಾಹಿತಿಗಳನ್ನು ನೀಡಿದರು.
ದೇವಾಲಯದ ಜಾಗದಲ್ಲಿ ಒಂದು ದೈವಸರ್ಪ ವಾಸಿಸುತ್ತಿದ್ದು ಅದು ಶ್ರೀ ಕ್ಷೇತ್ರವನ್ನು ಕಾಯುತ್ತಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಸರ್ಪವು ಶ್ರೀ ಹಾಲು ಮಲ್ಲೇಶ್ವರಸ್ವಾಮಿ ದೇವಸ್ಥಾನದಿಂದ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ರಾತ್ರಿ ವೇಳೆಯಲ್ಲಿ ಕೆರೆಯ ನೀರಿನ ಮೇಲೆ ಈಜಾಡಿಕೊಂಡು ಬಂದು ಸ್ವಲ್ಪ ಕಾಲ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದ್ದು ಹೋಗುತ್ತದೆ. ಹೀಗೆ ಬರುವುದನ್ನು ಅರೆಯೂರಿನ ಅನೇಕ ಜನ ನೋಡಿರುತ್ತಾರೆ. ಒಮ್ಮೊಮ್ಮೆ ಅದು ಜ್ಯೋತಿರ್ಲಿಂಗದ ಸುತ್ತಲೂ ಸುತ್ತಿಕೊಂಡು ಹೆಡೆ ಬಿಚ್ಚಿ ದೊಡ್ಡದಾಗಿ ಕಾಣುತ್ತಿರುತ್ತದಂತೆ. ಮಿಕ್ಕ ಸಮಯದಲ್ಲಿ ಈ ಸರ್ಪವು ಸಾಮಾನ್ಯ ಸಣ್ಣ ಹಾವಿನಂತೆ ಕಾಣುತ್ತದೆಯಂತೆ.
ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಪೂಜೆ ಮಾಡುವ ಅರ್ಚಕರು ದೇವಾಲಯಕ್ಕೆ ಬರುವಾಗ ಅವರಿಗೇ ಗೊತ್ತಿಲ್ಲದೆ ಏನಾದರೂ ಅಂಟು ಮುಂಟು ಮೈಲಿಗೆ ಉಂಟಾದರೇ ಈ ಸರ್ಪವು ಅವರಿಗೆ ಗೋಚರಿಸಿ ದೇವಸ್ಥಾನದ ಬಾಗಿಲು ತೆಗೆಯದಂತೆ ದೇವಸ್ಥಾನದ ಒಳಗಡೆಯಿಂದ ಸರ್ಪವು ಬಾಗಿಲಿಗೆ ಅಡ್ಡಲಾಗಿ ಮಲಗಿರುತ್ತದೆ. ಇದು ಅರ್ಚಕರಿಗೆ ಸರ್ಪವು ಕೊಡುವ ಎಚ್ಚರಿಕೆ. ಆಗ ಅರ್ಚಕರು ಮತ್ತೆ ಸ್ನಾನ ಮಾಡಿಕೊಂಡು ಮಡಿಯಿಂದ ಮತ್ತೆ ನೈವೇದ್ಯವನ್ನು ಮಾಡಿಕೊಂಡು ಬಂದು ತಪ್ಪಾಯಿತೆಂದು ಬಾಗಿಲಿನ ಹೊರಗಡೆ ಕರ್ಪೂರ ಹಚ್ಚಿ ಕ್ಷಮೆಯಾಚಿಸಿ ಬಾಗಿಲು ತೆರೆದರೆ ಸರ್ಪ ಹೊರಟು ಹೋಗುತ್ತದೆ.
1986 ನೇ ಇಸವಿಯಲ್ಲಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ನಡೆಯುತ್ತಿದ್ದಾಗ ನಡೆದ ಘಟನೆಯನ್ನು ನೋಡಿದರೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವರೇ ತನ್ನ ಸೇವಾಕಾರ್ಯಗಳನ್ನು ಭಕ್ತರಿಂದ ಮಾಡಿಸಿಕೊಳ್ಳುತ್ತಿರುತ್ತಾನೆಂದು ಹೇಳಬಹುದು. ಅದು ಹೇಗೆಂದರೆ ಸಿದ್ದಪ್ಪನಪಾಳ್ಯದ ಭಕ್ತ ಶ್ರೀ ಗುರುಬಸಪ್ಪನವರು ತಮ್ಮ ಸ್ವಇಚ್ಛೆಯಿಂದ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವನ್ನು ಮಾಡಿಸುತ್ತಿದ್ದರು. ಇವರಿಗೆ ಕರಡಗೆರೆಯ ಶ್ರೀ ಎಸ್.ವಿ. ಶಂಕರಪ್ಪನವರು ಸಹಕಾರ ಹಾಗೂ ಸಹಾಯ ನೀಡುತ್ತಿದ್ದರು. ಒಂದು ಸಾರಿ ಶ್ರೀ ಗುರುಬಸಪ್ಪನವರಿಗೂ ಅರೆಯೂರಿನ ಗ್ರಾಮಸ್ಥರಿಗೂ ಭಿನ್ನಾಭಿಪ್ರಾಯಗಳು ಬಂದು ಶ್ರೀ ಗುರುಬಸಪ್ಪನವರು ತಾನು ಮಾಡಿಸುತ್ತಿದ್ದ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ, ತಾನು ನಾಳೆಯಿಂದ ಕೆಲಸವನ್ನು ಮಾಡಿಸುವುದಕ್ಕೆ ದೇವಸ್ಥಾನಕ್ಕೆ ಬರುವುದಿಲ್ಲವೆಂದು ಹೇಳಿ ಹೊರಟುಹೋದರು.
ಬೆಳಗ್ಗೆ ಅರ್ಚಕರು ದೇವಸ್ಥಾನಕ್ಕೆ ಪೂಜೆ ಮಾಡುವುದಕ್ಕೆ ಬಂದು ನೋಡಿದಾಗ ಒಂದು ಸರ್ಪವು ದೇವಸ್ಥಾನದ ಬಾಗಿಲಿಗೆ ಅಡ್ಡಲಾಗಿ ತೆಕ್ಕೆ ಹಾಕಿಕೊಂಡು ಮಲಗಿದೆ. ಅರ್ಚಕರು ಊರಿನವರಿಗೆ ಈ ವಿಚಾರವನ್ನು ತಿಳಿಸಲಾಗಿ ಊರಿನವರು ಸಹ ಬಂದು ನೋಡಿದರು. ಗಲಾಟೆ ಮಾಡಿದರೂ ಸಹ ಸರ್ಪವು ಹೋಗುವ ಲಕ್ಷಣಗಳು ಕಾಣಲಿಲ್ಲವಾದ್ದರಿಂದ ಕೆಲವರು ಒಂದು ಹಿತ್ತಾಳೆ ಬೋಗಣಿಯಲ್ಲಿ ಹಾಲನ್ನು ತಂದಿಟ್ಟರು ಸರ್ಪವು ಹೆಡೆ ಎತ್ತಿ ನೋಡಿ ಹಾಲನ್ನು ಕುಡಿದು ಹಾಗೆಯೇ ಮಲಗಿತು. ಹೀಗೆ ಮೂರು ದಿವಸ ಸರ್ಪವು ಮುಷ್ಕರ ಮಾಡಿದಂತೆ ಮಲಗಿರುವುದನ್ನು ನೋಡಿದ ಶ್ರೀ ಗುರುಬಸಪ್ಪನವರು ತಾನು ಜೀರ್ಣೋದ್ಧಾರ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಹೋದುದರಿಂದ ಸರ್ಪವು ಈ ರೀತಿ ಬಂದು ಮಲಗಿರಬಹುದೆಂದು ಯೋಚಿಸಿ, ದೇವರಿಗೆ ಪೂಜೆ ಮಾಡಿಸಿ, ಕೆಲಸವನ್ನು ಪೂರ್ಣಗೊಳಿಸುತ್ತೇನೆಂದು ಮಂಗಳಾರತಿಯನ್ನು ತೆಗೆದುಕೊಂಡ ತಕ್ಷಣ ಸರ್ಪವು ಚಲಿಸಿದಂತೆ ಕಾಣಿಸಿತು. ಆದರೆ ನೂರಾರು ಜನರು ನೋಡುತ್ತಿದ್ದರೂ ಸಹ ಯಾರೊಬ್ಬರ ಕಣ್ಣಿಗೂ ಕಾಣಿಸದಂತೆ ಮಾಯವಾಯಿತಂತೆ.
ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವಿರುವ ಜಾಗದಲ್ಲಿ ಸಾವಿರಾರು ವರ್ಷಗಳ ಹಿಂದೆ ವಾಸಿಸುತ್ತಿದ್ದ ಋಷಿಗಳ ತಪೋತರಂಗಗಳ ಪ್ರಭಾವ ಈಗಲೂ ಇರಬಹುದಾದ ಸಾಧ್ಯತೆ ಇದ್ದು ಋಷಿ ಮುನಿಗಳು ಈಗಲೂ ಇಲ್ಲಿ ಸೂಕ್ಷ್ಮ ಶರೀರಧಾರಿಗಳಾಗಿ ವಾಸಿಸುತ್ತಿದ್ದಾರೆ ಎಂಬ ಪ್ರತೀತಿಯಿದೆ. ಅದರಲ್ಲೂ ಮುಖ್ಯವಾಗಿ ಇಲ್ಲಿರುವ ಜ್ಯೋತಿರ್ಲಿಂಗದಲ್ಲಿನ ವಿಶ್ವಸ್ಥ ದಿವ್ಯ ಶಕ್ತಿಯ (Cosmic Divine Power) ಹೆಚ್ಚಿನ ಪ್ರಭಾವವಿದೆ. ಋಷಿ ಮುನಿಗಳ ತಪೋತರಂಗಗಳ ಹಾಗು ಜ್ಯೋತಿರ್ಲಿಂಗದಲ್ಲಿನ ವಿಶ್ವಸ್ಥ ದಿವ್ಯ ಶಕ್ತಿಯ ಪ್ರಭಾವಗಳಿಂದ ರೋಗಾಣುಗಳು ನಾಶವಾಗಿ ಖಾಯಿಲೆಗಳು ವಾಸಿಯಾಗುತ್ತವೆ ಎಂದು ಜ್ಞಾನಿಗಳು ಹೇಳುತ್ತಾರೆ.
ಹಿಂದಿನ ಕಾಲದಲ್ಲಿ ಈ ಗ್ರಾಮದಲ್ಲಿ ಖಾಯಿಲೆಯಾದವರನ್ನು ಕರೆತಂದು ಈ ದೇವಸ್ಥಾನದ ಪ್ರಾಂಗಣದಲ್ಲಿ ಹತ್ತಾರು ದಿವಸ ವಾಸವಾಗಿದ್ದು ತಮ್ಮ ಖಾಯಿಲೆಗಳನ್ನು ವಾಸಿ ಮಾಡಿಕೊಂಡು ಹೋಗುತ್ತಿದ್ದರು ಎಂದು ಸ್ಥಳಿಯರು ಹೇಳುತ್ತಾರೆ.
ದೇವಾಲಯದ ದರ್ಶನ ಪಡೆದು ಸ್ಥಳ ಮಹಾತ್ಮೆ ತಿಳಿದು ನಿತ್ಯ ಅನ್ನ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿದೆವು .ಉತ್ತಮ ಗುಣಮಟ್ಟದ ಪ್ರಸಾದ ಮತ್ತು ಸ್ವಚ್ಚತೆಯ ವಾತಾವರಣ ಗಮನ ಸೆಳೆಯಿತು.
ಅರೆಯೂರಿನ ವೈದ್ಯನಾಥೇಶ್ವರ ದೇವಾಲಯ ಸಂಕೀರ್ಣ ದರ್ಶನದ ನಂತರ ಮನಸ್ಸಿಗೆ ನೆಮ್ಮದಿ ಉಂಟಾಗಿ ಮನೆಯ ಕಡೆ ಹೊರಟ ನಾವು ಮತ್ತೊಮ್ಮೆ ನಮ್ಮ ಕುಟುಂಬದ ಜೊತೆಯಲ್ಲಿ ಸ್ವಾಮಿಯ ಸನ್ನಿಧಿಗೆ ಬರಲು ತೀರ್ಮಾನಿಸಿದೆವು.ನೀವೂ ಒಮ್ಮೆ ಈ ವೈದ್ಯನಾಥೇಶ್ವರ ಸನ್ನಿಧಿಗೆ ಭೇಟಿ ನೀಡಲು ಬಯಸಿದರೆ ತುಮಕೂರಿನಿಂದ ಗಂಟೆಗೊಮ್ಮೆ ರಾಜ್ಯ ರಸ್ತೆ ಸಾರಿಗೆ ಬಸ್ ವ್ಯವಸ್ಥೆ ಇದೆ. ಸ್ವಂತ ವಾಹನದಲ್ಲಿ ಪ್ರಯಾಣಿಸುವವರು ತುಮಕೂರಿನಿಂದ ಹೊನ್ನಾವರ ಹೈವೆಯಲ್ಲಿ ಪ್ರಯಾಣಿಸಿ ಮಲ್ಲಸಂದ್ರ ಗ್ರಾಮದಲ್ಲಿ ಎಡಕ್ಕೆ ಚಲಿಸಿದರೆ ಅರೆಯೂರಿನ ವೈದ್ಯನಾಥೇಶ್ವರ ಸನ್ನಿಧಿ ತಲುಪಬಹುದು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment