ಪ್ರಮೇಯ.ಇದು ಅಳಿದವರ ಕಥೆಯಲ್ಲ ಅಳೆದವರ ಕಥೆ
ಹೈಸ್ಕೂಲ್ ನಲ್ಲಿ ಓದುವಾಗಿನಿಂದ ಗಣಿತವೆಂದರೆ ಅಷ್ಷಕಷ್ಟೆ ಅದರಲ್ಲೂ ಪ್ರಮೇಯ ತಲೆಗೆ ಹತ್ತುವುದು ಕೊಂಚ ನಿಧಾನವಾಗುತ್ತಿತ್ತು .ಮೊನ್ನೆ ಗಜಾನನ ಶರ್ಮ ಅವರ ಪ್ರಮೇಯ ಕಾದಂಬರಿ ಓದಲು ಕೈಗೆತ್ತಿಕೊಂಡಾಗ ಮುಖಪುಟ ನೋಡಿದಾಗ ಅದರ ಮೇಲಿನ ತ್ರಿಕೋನ ,ರೇಖೆಗಳು ರೇಖಾಗಣಿತ ಜ್ಞಾಪಿಸಿದವು. ಪುಸ್ತಕ ಓದಲು ಹಿಂದೇಟು ಹಾಕಿದೆ. ಅದರ ಹಿನ್ನೆಲೆ ಯಲ್ಲಿರುವ ಭಾರತದ ಭೂಪಟವು ಇತಿಹಾಸದ ಬಗ್ಗೆ ಆಸಕ್ತಿ ಇರುವ ನನಗೆ ತುಸು ಸಮಾಧಾನ ತಂದಿತು . ಧೈರ್ಯ ಮಾಡಿ ಪುಸ್ತಕ ಓದಲು ಶುರು ಮಾಡಿಯೇ ಬಿಟ್ಟೆ. ಪುಸ್ತಕ ಓದುತ್ತಾ ಇದು ಆಳಿದವರ ಕಥೆಯಲ್ಲ ಅಳೆದವರ ಕಥೆ ಎಂಬುದು ಮನವರಿಕೆಯಾಯಿತು .ಮಾಪನ ಕಾರ್ಯದ ಮಹತ್ವ ಅದಕ್ಕೆ ಬಂದೊದಗುವ ಅಡಚಣೆಗಳು ,ಮಾಪಕರ ಬದ್ಧತೆ ಮುಂತಾದವುಗಳನ್ನು ಈ ಕಾದಂಬರಿಯಲ್ಲಿ ಬಹಳ ಸೊಗಸಾಗಿ ಚಿತ್ರಿಸಿದ್ದಾರೆ ಕಾದಂಬರಿಕಾರರಾದ ಗಜಾನನ ಶರ್ಮ ರವರು .
ಈಗಿನ ಮುಂದುವರಿದ ತಂತ್ರಜ್ಞಾನದ ಸಹಾಯದಿಂದ ನ್ಯಾನೋ ಮೀಟರ್ ನ್ನು ಸಹ ಅಕ್ಯುರೇಟ್ ಆಗಿ ಅಳೆದುಕೊಡಬಹುದು .ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನದಲ್ಲಿ ಅಳೆಯುವವರು ಗುಡ್ಡ,ಕಾಡುಗಳನ್ನು ಅಲೆಯುತ್ತಾ ಪರ್ವತಗಳನ್ನು ಏರಿ ಇಳಿದು ಮಾಪನ ಮಾಡಿದ ಕಥೆ ಓದುವುದೇ ರೋಚಕ.
ಈ ಕಾದಂಬರಿ ಬರೆಯುವ ಮುನ್ನ ಕಾದಂಬರಿಕಾರರು ತಮ್ಮ ಕುಟುಂಬದ ಸಮೇತ ಟ್ರಿಗ್ನಾಮೆಟ್ರಿಕ್ ಸರ್ವೆ ನಡೆದ ಸ್ಥಳಗಳಲ್ಲಿ ಓಡಾಡಿ ಬಂದುದು ಅವರ ಅನುಭವ ಜನ್ಯ ಬರಹವು ಹೆಚ್ಚು ಆಪ್ತವಾಗಿ ಕಾಣುತ್ತದೆ
ಈ ಪುಸ್ತಕಕ್ಕೆ ಬೆನ್ನುಡಿ ಬರೆದಿರುವ ಜೋಗಿರವರ ಅಭಿಪ್ರಾಯಗಳು ಪುಸ್ತಕ ಓದುತ್ತಿದ್ದಾಗ ಮತ್ತೆ ಮತ್ತೆ ನೆನಪಾಗುತ್ತವೆ ಅವರು ಹೇಳಿದಂತೆ
"ಭಾರತದ ಮಹಾಮಾಪನದ ಕತೆಯನ್ನು ಹೇಳುತ್ತಲೇ, ಭಾರತೀಯ ಮನಸ್ಸು, ದೈವಿಕತೆ, ಅಧ್ಯಾತ್ಮವನ್ನು ಹೇಳುವ ಕಾದಂಬರಿ ಪ್ರಮೇಯ, ಇದರ ಹರಹು ಮತ್ತು ಆಳ ನನ್ನನ್ನು ಅಚ್ಚರಿಗೊಳಿಸಿದೆ. ಇದು ಹಿಮಾಲಯವನ್ನು ಅಳೆದ ಕತೆ, ಅಳೆದವರ ಕತೆ, ಅಳೆದು ಉಳಿದವರ ಕತೆ, ವೈಜ್ಞಾನಿಕ ಜಗತ್ತು ಭಾರತದ ಮಹಾಮಾಪನವನ್ನು ಗ್ರೇಟ್ ಟ್ರಿಗ್ನೋಮೆಟ್ರಿಕ್ ಸರ್ವೆ ಎಂದು ಕರೆಯಿತು. ಆ ಯೋಜನೆಯನ್ನು ಮುನ್ನಡೆಸಿದ ಕರ್ನಲ್ ಲ್ಯಾಂಬ್ಟನ್, ಜಾರ್ಜ್ ಎವರೆಸ್ಟ್, ಆಂಡ್ರೂ, ವಾ, ಥಾಮಸ್ ಜಾರ್ಜ್ ಮಾಂಟ್ಗೋಮರಿ ಮತ್ತು ನೈನ್ ಸಿಂಗರ ಕಷ್ಟಸುಖದ ಕತೆಯನ್ನು ಹೇಳುತ್ತಲೇ ಭಾರತದ ಕತೆಯನ್ನೂ ಗಜಾನನ ಶರ್ಮರು ಹೇಳುತ್ತಾರೆ.
ಇಂಥದ್ದೊಂದು ವಸ್ತುವನ್ನು ಆಧರಿಸಿದ ಮೊದಲ ಭಾರತೀಯ ಕಾದಂಬರಿ ಇದು. ಚರಿತ್ರೆ ಮತ್ತು ಕಲ್ಪನೆ ಎರಡನ್ನೂ ಹದವಾಗಿ ಬೆರೆಸುತ್ತಾ, ಚಾರಿತ್ರಿಕ ವಿವರಗಳಿಗೆ ಅಪಚಾರ ಆಗದಂತೆ, ಕಲಾನುಭವಕ್ಕೆ ಕುಂದಾಗದಂತೆ ಈ ಕತೆಯನ್ನು ಗಜಾನನ ಶರ್ಮರವರು ನಿರೂಪಿಸಿದ್ದಾರೆ. ಸಣ್ಣ ವಿವರ, ಸ್ಪಷ್ಟ ಮಾಹಿತಿ, ಸಮರ್ಪಕ ಕ್ಷೇತ್ರಾಧ್ಯಯನ, ಮತ್ತು ಸರಳ ಭಾಷೆಯಿಂದ ಗಮನಸೆಳೆಯುವ ಕಾದಂಬರಿ ಇದು.
ಗಜಾನನ ಶರ್ಮರವರೆ ಹೇಳಿರುವಂತೆ ಇದು ಶೂನ್ಯದಿಂದ ಆರಂಭವಾಗಿ ಅನಂತದೆಡೆಗೆ ಅಳೆಯುವ ಒಂದು ಮಾನ, ಸಾಂತದಿಂದ ಅನಂತಕ್ಕೆ ಸಾಗುವಾಗು ನಡೆಯುವ ಘಟನೆಗಳಾಗಿದ್ದರೆ ಅಷ್ಟೇನೂ ಮಹತ್ವವಿರುತ್ತಿರಲಿಲ್ಲ.ಆದರೆ ನಾವು ದಿನನಿತ್ಯ ನಮ್ಮ ದೇಶದ ಭೂಭಾಗವನ್ನು ವಿವರಿಸುತ್ತಾ ಹಿಮಾಲಯದಿಂದ ಆರಂಭಿಸಿ ದಕ್ಷಿಣದ ಸಾಗರದ ತನಕ ಇರುವ ಭೂಮಿ ಭಾರತ.' ಎಂದು ಸಹಜವಾಗಿ ಹೇಳಿಬಿಡುತ್ತೇವೆ. ಇಂತಹದ್ದೊಂದು ಕಾದಂಬರಿ ಓದುವವರೆಗೆ ಹೆಚ್ಚಿನವರಿಗೆ ಈ ಸರ್ವೆ ಎಂದರೆ ಏನು ಎನ್ನುವುದರ ಅರ್ಥ ತಿಳಿದಿರುವುದಿಲ್ಲ.ಈ ಕಾದಂಬರಿಯನ್ನು ಓದುತ್ತಾ ನಾವು ಮಾಂಟ್ಗೋಮರಿ,ಲ್ಯಾಂಬ್ಟನ್, ನೈನ್ಸಿಂಗ್ ರವರ ಜೊತೆ ಸರ್ವೆ ಮಾಡಿದ ಅನುಭವವಾಗುತ್ತದೆ.
ಡಾ. ಗಜಾನನ ಶರ್ಮರವರು . ಈ ಕೃತಿಗಾಗಿ ಹನ್ನೆರಡು ಸಾವಿರ ಅಡಿಗೂ ಎತ್ತರದ ಕಾಶ್ಮೀರದ ಹಿಮ ಪರ್ವತದ ಸುತ್ತಲೂ ಕುಟುಂಬ ಸಮೇತ ಒಡಾಡಿ ಅಧ್ಯಯನ ಮಾಡಿ ಬಂದಿದ್ದಾರೆ. ಒಂದು ಮಹಾ ಅಭಿಯಾನವನ್ನು ಕಾದಂಬರಿಯಾಗಿ ರೂಪಿಸಿ ಅದಕ್ಕೆ ಸಾಹಿತ್ಯದ ಜೊತೆಗೆ ರಮ್ಯತೆಯನ್ನು ಸೇರಿಸಿ ಒಂದು ಸುಂದರ ಕೃತಿಯನ್ನು ನೀಡಿದ್ದಾರೆ.
ಈ ಕಾದಂಬರಿಯಲ್ಲಿ ನನ್ನ ಬಹುವಾಗಿ ಕಾಡಿದ ಪ್ರಸಂಗವೆಂದರೆ ಅದು ಹರ್ಮುಖ ಅವರೋಹಣದ ನಂತರ ನಡೆದ ಕೆಲ ಘಟನೆಗಳು.
ಹರಮುಖ ಪರ್ವತವನ್ನು ಹತ್ತಿ ಅದನ್ನು ಅಪವಿತ್ರಗೊಳಿಸಿದ ಎನ್ನುವ ಸವಾಲನ್ನು ಮಾಂಟ್ಗೋಮರಿ ಎದುರಿಸುವ ಘಟನೆ ಸಾಮಾನ್ಯವಾದುದಲ್ಲ. ಇದು ಕಾದಂಬರಿಯುದ್ದಕ್ಕೂ ಪ್ರತಿಧ್ವನಿಸುತ್ತಾ ಟಿಬೆಟ್ ನ ಸರ್ವೆಯ ಹೊತ್ತಿನಲ್ಲಿ ಮಹಾಸವಾಲಾಗಿ ಪರಿಣಮಿಸುತ್ತದೆ. ಕಾಡಿನೊಂದಿಗೆ ಜೀವನ ಸಾಗಿಸುತ್ತಿರುವ ಗಂಗಾಚರಣ ಧಾರ್ಮಿಕವಾಗಿ ತುಂಬಾ ಶ್ರದ್ಧಾವಂತರು. ಆದರೆ ಅವರಿಗೆ ತನ್ನ ಹಿರಿಯರು ಗೌರವಿಸುತ್ತಿರುವ ಹರಮುಖ ಶಿಖರವನ್ನು ಅಪವಿತ್ರಗೊಳಿಸಿದ ಮಾಂಟ್ಗೋಮರಿಯ ಕುರಿತು ಬೇಸರವಿದ್ದರೂ, ಗಾಯಾಳುವಾದ ಅವನಿಗೆ ಚಿಕಿತ್ಸೆ ನೀಡುವುದು ವೈದ್ಯನಾದವನ ಕರ್ತವ್ಯವೆನ್ನುವ ಮೂಲಕ ಮಾನವೀಯ ಮೌಲ್ಯಗಳ ಎತ್ತಿಹಿಡಿದ್ದು ನನಗೆ ಬಹಳ ಇಷ್ಟವಾಯಿತು. ಇದು ಕ್ರಮೇಣ ವಿಭಿನ್ನ ಆಲೋಚನೆ ಇಬ್ಬರನ್ನೂ ಪರಸ್ಪರ ಅರ್ಥಮಾಡಿಕೊಂಡು
ಅವರ ಮೊಮ್ಮಗ ಕಾಶೀನಾಥನು ಬಿಳಿಯರು ನಮ್ಮ ದೇಶವನ್ನು ಕೊಳ್ಳೆಹೊಡೆಯಲು ಬಂದಿದ್ದಾರೆ
ಎನ್ನುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಜೈಲುಪಾಲಾಗುವನು ಮಾಂಟ್ಗೋಮರಿಯ ಸಹಾಯದಿಂದ ಜೈಲಿನಿಂದ ಬಿಡುಗಡೆಯಾದರೂ 1857 ಪ್ರಥಮ ಸ್ವಾತಂತ್ರ್ಯ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಬ್ರಿಟಿಷರ ಕೊಂದ ತನ್ನ ವಂಶದ ಕುಡಿ ಮಾಡಿದ ತಪ್ಪಿಗಾಗಿ ಆತ್ಮಹತ್ಯೆ ಮಾಡಿಕೊಂಡ ಗಂಗಾಚರಣರ ಪತ್ರ ಓದುವಾಗ ನಮ್ಮ ಕಣ್ಣಲ್ಲಿ ನಾಲ್ಕು ಹನಿಗಳು ಜಿನುಗುತ್ತವೆ.
ಆರಂಭದಲ್ಲಿ ಭಾರತೀಯರ ಕೆಲಸದ ಬಗ್ಗೆ ಅಸಡ್ಡೆ ಮತ್ತು ಮೂದಲಿಕೆ ಮಾತನಾಡುತ್ತಿದ್ದ ಬ್ರಿಟೀಷರು
ನೈನ್ ಸಿಂಗ್ ನಂತಹ ಭಾರತೀಯ ಕೂಲಿಯಾಳುಗಳ ಬದ್ಧತೆ ಮತ್ತು ಮೋಜಣಿಕಾರ್ಯದಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ಅಧಿಕಾರಿಗಳು ಕೊಂಡಾಡಿದ್ದಾರೆ. ವೇಷ ಬದಲಿಸಿಕೊಂಡು ಇಡೀ ಟಿಬೆಟ್ಟನ್ನೇ ನಾಲ್ಕು ಬಾರಿ ಓಡಾಡಿ ಅಳತೆ ಮಾಡುತ್ತ, ಕಾಲಿಗೆ ಸರಪಳಿಯನ್ನು ಕಟ್ಟಿಕೊಂಡು ಅಳೆಯುವ ಅವನ ಸಾಹಸಕಾರ್ಯ ನಮ್ಮನ್ನು ಮೂಕನನ್ನಾಗಿಸುತ್ತದೆ. ಈ ಕಬ್ಬಿಣದ ಸರಪಳಿ ಎಷ್ಟೇ ನೋವು ಕೊಟ್ಟರೂ ಅದು ನಮ್ಮವರೇ ಮಾಡುವ ಅವಮಾನದ ನೋವನ್ನು ಸರಿಗಟ್ಟಲಾರದು ಎನ್ನುವ ನೈನ್ ಸಿಂಗನ ಮಾತು ಮನಸ್ಸಿನಲ್ಲಿ ಮಡುಗಟ್ಟಿ ನಿಂತುಬಿಡುತ್ತವೆ. ಇನ್ನೇನು ಟಿಬೆಟ್ ನಲ್ಲಿ ಸಿಕ್ಕುಬಿದ್ದು ನಂತರ ತಪ್ಪಿಸಿಕೊಂಡರೂ ಆತ ತನ್ನ ಕರ್ತವ್ಯದಲ್ಲಿ ಹಿಂದೆ ಬೀಳದೇ ಮತ್ತೆ ಮತ್ತೆ ಹಿಮಾಲಾಯದ ಭಾಗದಲ್ಲಿ ಓಡಾಡಿ ಟಿಬೆಟ್ ನ ಸಾಂಗ್ಪೊ ನದಿಯೇ ಬ್ರಹ್ಮಪುತ್ರಾ ನದಿಯೆಂದು ಕಂಡು ಹಿಡಿಯುತ್ತಾನೆ. ಆತನಿಗೆ ತನ್ನ ಸಾಧನೆಗಳಿಗೆ ಪ್ರಚಾರ ಸಿಗಬೇಕೆನ್ನುವ ಆಸೆಯಿಲ್ಲ ಇಂತಹ ಸಾಧನೆಗೆ ಸಾತ್ ನೀಡಿದ ನೈನ್ ಸಿಂಗನ ಸಾಧನೆಯನ್ನು ಬೆಳಕಿಗೆ ತರಲು ಮಾಟ್ಗೋಮರಿ ಯು ಲಂಡನ್ನಿನ ಜಿಯಾಗ್ರಫಿಕಲ್ ಸೊಸೈಟಿಯ ಜರ್ನಲ್ಲಿನಲ್ಲಿ 'ಪೋರ್ಟ್ ಆಫ್ ಎ ರೂಟ್ ಸರ್ವೆ ಮೇಡ್ ಬೈ ಪಂಡಿತ್' ಎನ್ನುವ ಲೇಖನದಲ್ಲಿ ನೈನ್ ಸಿಂಗನ ಸಾಧನೆಯನ್ನು ಹೊಗಳಿ ಅವನ ಸಿಗಬೇಕಾದ ಮನ್ನಣೆ ಸಿಗುವಂತೆ ನೋಡಿ ಕೊಳ್ಳುತ್ತಾನೆ. ಅಂತಹ ಬ್ರಿಟಿಷ್ ಅಧಿಕಾರಿಗಳ ಬಗ್ಗೆ ಮನದಲ್ಲೇ ಗೌರವ ಮೂಡುತ್ತದೆ.
ಒಂದು ವಿಶಿಷ್ಠವಾದ ವಸ್ತುವನ್ನು ಉತ್ತಮ ಮಾಹಿತಿಯೊಡನೆ ಸುಂದರ ನಿರೂಪಣೆ ಮಾಡುತ್ತಾ ನಮ್ಮ ಮನ ಗೆಲ್ಲುವಲ್ಲಿ "ಪ್ರಮೇಯ" ಯಶಸ್ವಿಯಾಗಿದೆ ಎನ್ನಬಹುದು.
ನೀವೂ ಪ್ರಮೇಯ ಓದಬೇಕೆಂದುಕೊಂಡರೆ ಅಂಕಿತಾ ಪ್ರಕಾಶನ ಸಂಪರ್ಕಿಸಿ 395 ರೂಪಾಯಿಗಳನ್ನು ನೀಡಿ ಕೊಂಡು ಕಾದಂಬರಿ ಓದಬಹುದು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment