30 January 2018

ಮರದ ವ್ಯಥೆ (ಸಂಗ್ರಹ)

ಒಂದು ಮರದ ಮೇಲೆ ಸದಾ ಗೂಬೆಯೊಂದು  ಕೂರುತ್ತಿತ್ತು. ಮರಕ್ಕೆ ಇಷ್ಟವಿರಲಿಲ್ಲ.

ಒಂದು ದಿನ ಬಡಗಿ ಮರವನ್ನು ಕಡಿದು ಹಾಕಿದ. ಮರಕ್ಕೆ ಎಲ್ಲಿಲ್ಲದ ಆನಂದ, ಕೊನೆಗೂ ಗೂಬೆಯಿಂದ ಬಿಡುಗಡೆ ದೊರಕಿತು ಎಂಬ ಖುಷಿ. ಆದರೆ, ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ.

ಬಡಗಿ ಆ ಮರವನ್ನು ಕತ್ತರಿಸಿ
ವಿಧಾನ ಸಭೆಯ ಕುರ್ಚಿಗಳಾಗಿ ಮಾಡಿದ

ಸಂಗ್ರಹ : ಸಿ .ಜಿ ವೆಂಕಟೇಶ್ವರ

ಗಜ಼ಲ್ ೨೨ ( ನನ್ನ ನಿನ್ನ ನಡುವೆ) ಕವಿಬಳಗ ವಾಟ್ಸಪ್ ತಂಡದ ಸ್ಪರ್ಧೆಯಲ್ಲಿ ದ್ವಿತೀಯ ಪುರಸ್ಕಾರ ಪಡೆದ ಗಜ಼ಲ್


*ಗಜ಼ಲ್ ೨೨*


ಎಷ್ಟು ನದಿಗಳು ಹರಿದುಹೋದವು ನನ್ನ ನಿನ್ನ ನಡುವೆ
ಎಷ್ಟು  ಬಿಕ್ಕುಗಳು ಸುಳಿದುಹೋದವು ನನ್ನ ನಿನ್ನ  ನಡುವೆ

ಹಮ್ಮು ಬಿಮ್ಮುಗಳ ತಾಕಲಾಟ ಮುಗಿಯದ ಜೂಟಾಟ
ಸಂಬಂಧಗಳು  ಬಳಲಿಹೋದವು ನನ್ನ ನಿನ್ನ ನಡುವೆ

ಸುಳ್ಳುಗಳ ಬೆಳಕಿನಲಿ ಸತ್ಯದ ಸತ್ಯ ಕ್ಕೆ ಕಾರ್ಮೋಡ ಮುತ್ತಿದವು
ಹಗಲುಗಳಲಿ ಕತ್ತಲು ಕವಿದುಹೋದವು ನನ್ನ ನಿನ್ನ ನಡುವೆ

ದಿನ ಮಾಸ ವರುಷಗಳು ಕಳೆದವು ಅನುಸರಿಸಿ ಒಂದನೊಂದು
ಹೊಂದಾಣಿಕೆಯಿಲ್ಲದೇ ದಿನ ಕಳೆದುಹೋದವು ನನ್ನ ನಿನ್ನ ನಡುವೆ

ಸೀಜೀವಿಗೆ ಮುಗಿಯದ ಆಸೆ ಸಂಬಂಧಗಳ ಉಳಿಸಲು  ಬೆಳೆಸಲು
ಕಟ್ಟಿದ ಸೇತುವೆಗಳೆಲ್ಲಾ ಮುರಿದುಹೋದವು ನನ್ನ ನಿನ್ನ ನಡುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 January 2018

ಭಾಗ್ಯವಿಧಾತ (ಕವನ) "ಕನ್ನಡ ಸಾಹಿತ್ಯ ಲೋಕ " ವಾಟ್ಸಪ್ ಗುಂಪಿನ ವಾರದ ಸ್ಪರ್ಧೆಯಲ್ಲಿ" ಉತ್ತಮ ಕವನ" ಪುರಸ್ಕಾರ ಪಡೆದ ಕವನ




*ಭಾಗ್ಯವಿಧಾತ*

ವಂದಿಪೆನು ನೇತಾಜಿಗೆ 
ನಮಿಪೆನು ವೀರಸಿಂಹನಿಗೆ
ಭಾರತ ರಾಷ್ಟ್ರೀಯ ಸೇನೆ ಕಟ್ಟಿದೆ
ಬ್ರಿಟಿಷರ ಧಿಮಾಕಿಗೆ ಕುಟ್ಟಿದೆ|೧|

ಜೈ ಹಿಂದ್ ಘೋಷ ಮೊಳಗಿಸಿದೆ
ದೇಶ ಭಕ್ತಿಯ ಕಿಚ್ಚು ಹತ್ತಿಸಿದೆ 
ಫಾರ್ವರ್ಡ್ ಬ್ಲಾಕ್ ಹರಿಕಾರ
ಪರಂಗಿಯರ ಎದುರಿಸಿದ ಎದೆಗಾರ|೨|

ಭಾರತ ದೇಶದ ಭಾಗ್ಯವಿಧಾತ 
ತಾಯಿಯ ಋಣವ ತೀರಿಸಿದಾತ
ಶಿಸ್ತಿನ ಸಿಪಾಯಿ ನಮಗೆಲ್ಲ
ಸ್ಪೂರ್ತಿಯ ಸೆಲೆಯು ಜಗಕೆಲ್ಲ|೩|

ಹಾತೊರೆಯಲಿಲ್ಲ ನಿಮ್ಮ ಸುಖಕೆ 
ಹೋರಾಡಿದಿರಿ ನೀವು ಸ್ವಾತಂತ್ರಕೆ 
ಉಳಿದಿದೆ ನಿಮ್ಮೆಸರು ಧರೆಯಲೆಲ್ಲ 
 ನಾವೆಂದಿಗೂ ನಿಮ್ಮನು ಮರೆಯಲ್ಲ|೪|

*ಸಿ.ಜಿ..ವೆಂಕಟೇಶ್ವರ*
*ಗೌರಿಬಿದನೂರು*

28 January 2018

*ಸೊಕ್ಕು ಮುರಿಯೋಣ*( ಕ್ರಾಂತಿ ಗೀತೆ) ಹನಿ ಹನಿ ಇಬ್ನನಿ ಗುಂಪಿನ ಉತ್ತಮ ಗೀತೆ ಪುರಸ್ಕರಿತ

*ಕ್ರಾಂತಿ ಗೀತೆ*

*ಸೊಕ್ಕು ಮುರಿಯೋಣ*

ಎದ್ದು ನಿಲ್ಲುವ ಗೆಲ್ಲಲು
ಒದ್ದು ಬುದ್ದಿ ಕಲಿಸಲು|ಪ|

ಜಾತಿ ಮತವ ಅಳಿಸಿ
ಮಾನವತೆಯ ಉಳಿಸಿ
ನಿಲ್ಲಲಿ ನಮ್ಮ ಶೋಷಣೆ
ಮಾಡಿ ಏಕತೆಯ ಘೋಷಣೆ|೧|

ಮೌನದಲಿದ್ದುದು ಸಾಕು
ಬುಗಿಲೆದ್ದು ನಿಲ್ಲಬೇಕು
ಹಗೆತನ ಬಡಿದೋಡಿಸಿ
ನೀಚರನು ಬಡಿದು ಶಿಕ್ಷಿಸಿ|೨|

ಶುರುವಾಗಲಿ ಸಮರ
ಮದದಿ ಕೊಬ್ಬಿದವರ
ಸೊಕ್ಕು ಮುರಿಯೋಣ
ನಮ್ಮ ಹಕ್ಕು ಕೇಳೋಣ|೩|

ನಾನು ಮನುಜ ತಿಳಿ
ಬಾಳಿ ಬದುಕಲು ಕಲಿ
ನಾನು ನೀನು ಒಂದೆ
ಮಾನವ ಕುಲವೊಂದೆ|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 January 2018

*ಸಜ್ಜೆತೆನೆ ಮತ್ತು ರಾಜಪ್ಪ ಮಾಸ್ಟರ್ (ಕಿರುಗಥೆ) ಕವಿಬಳಗ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದ ಕಥೆ

ಕಿರುಗಥೆ

*ಸಜ್ಜೆತೆನೆ ಮತ್ತು ರಾಜಪ್ಪ ಮಾಸ್ಟರ್*

 ನಮ್ಮ ಊರು ಚೌಡಗೊಂಡನಹಳ್ಳಿ ಶಾಲೆಯಲ್ಲಿ  ನಾಲ್ಕನೇ ತರಗತಿ ಪಾಸಾಗಿ ಎರಡು ಕಿಲೋಮೀಟರ್ ದೂರದ ಉಪ್ಪರಿಗೇನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಹೋದರೆ ಆಗ ಉನ್ನತ ವ್ಯಾಸಂಗಕ್ಕೆ ಬೇರೆ ನಗರಕ್ಕೆ ಹೋದಂತೆ ಕೊಚ್ಚಿಕೊಳ್ಳುತ್ತಿದ್ದೆವು ಕಾರಣ ನಾಲ್ಕನೇ ತರಗತಿ ಪಾಸಾಗುವವರೇ ಅಂದು ವಿರಳ.
ನಾನು ಮತ್ತು ನನ್ನ ಸ್ನೇಹಿತರು ಐದನೇ ತರಗತಿ ಓದಲು ಉಪ್ಪರಿಗೇನಹಳ್ಳಿಗೆ ಪ್ರತಿದಿನ ಎರಡು ಕಿಲೋಮೀಟರ್ ನಡೆದೇ ಹೋಗುತ್ತಿದ್ದೆವು ಆಗ ಸ್ನೇಹಿತರ ಜೊತೆ ನಮ್ಮ ಆಟಗಳಿಗೆ ಕೊನೆ ಇರುತ್ತಿರಲಿಲ್ಲ.
ಒಮ್ಮೆ ಈಗೆ ನಡೆದು ಹೋಗುವಾಗ ಫಲ ಬಿಟ್ಟ ಹೊಲ ನೋಡುವುದೇ ಒಂದು ಆನಂದ. ಬರೀ ನೋಡಿ ಸುಮ್ಮನೆ ಬಿಡುವ ಜಾಯಮಾನವೆ ನಮ್ಮದು ? ಇಲ್ಲ ಪ್ರತಿದಿನ ಜೋಳದ ತೆನೆ ,ಸಜ್ಜೆಯತೆನೆ ಈಗೆ ಒಂದೊಂದು ದಿನ ಒಂದು ತರಹದ ಬೆಳೆ ಕಿತ್ತು ತಿಂದು ಆನಂದ ಪಡುತ್ತಿದ್ದೆವು. ಜೊತೆಗೆ ನಮ್ಮನ್ನು ಯಾರೂ ನೋಡಿಲ್ಲ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದೆವು .
ಒಂದು ದಿನ ಹೊಲದ ಮಾಲಿಕ ಅಣ್ಣಪ್ಪ ನಾವು ಶಾಲೆಗೆ ಹೋಗುವ ಮೊದಲೇ ಮುಖ್ಯ ಶಿಕ್ಷಕರ ಮುಂದೆ ಹಾಜರಾಗಿದ್ದರು ಮತ್ತು ನಮ್ಮ ಪರಾಕ್ರಮ ಅವರಿಗೊಪ್ಪಿಸಿದ್ದರು .
ಪರಿಣಾಮವಾಗಿ ನಮ್ಮ ಕೈಚೀಲ ತಪಾಸಣೆ ಮಾಡಿದಾಗ ಪ್ರತಿ ಬ್ಯಾಗ್ ನಲ್ಲಿ ಎರಡು ಮೂರು ಸಜ್ಜೆ ತೆನೆಗಳು ಸಿಕ್ಕವು .*ನೋಡಿ ಸ್ವಾಮಿ ನಿಮ್ಮ ಹುಡುಗರು ನನ್ನ ಹೊಲ ಹಾಳು ಮಾಡವ್ರೆ ಇದನ್ನೇ ಏನು ನೀವು ಇಸ್ಕೂಲ್ನಾಗೆ ಹೇಳ್ಕೊಡೋದು* ಎಂದು ಅಣ್ಣಪ್ಪ ಅಬ್ಬರಿಸಿದರು .ಅದನ್ನು ಕೇಳಿದ ನಮ್ಮ ರಾಜಪ್ಪ ಮಾಸ್ತರು ಕಚ್ಚೇ ಪಂಚೆ ಎಡಗೈ ನೆರಳಿನಲ್ಲಿ ಸುತ್ತುತ್ತಾ ಹಸಿ ಹುಣಸೇ ಬರಲಿನಿಂದ ನಮ್ಮನ್ನು ಚೆನ್ನಾಗಿ ಬಾರಿಸಿ *ರೈತನು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಇನ್ನೊಮ್ಮೆ ಹಾಳು ಮಾಡಿದರೆ ಇದೇ ತರ ಬೀಳುವುದು* ಎಂದರು ಅಂದಿನಿಂದ ಸಜ್ಜೆ ಹೊಲ ಮತ್ತು ಹುಣಸೇ ಬರಲು(ಕೋಲು) ನೋಡಿದಾಕ್ಷಣ ರಾಜಪ್ಪ ಮಾಸ್ತರ್ ಮತ್ತು ಏಟು ನನೆದು ಮೈ ಸವರಿಕೊಳ್ಳುವೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು ( ಗಣರಾಜ್ಯ ದಿನ)

ಹನಿಗವನಗಳು ( ಗಣರಾಜ್ಯ ದಿನ)

*೧*
*ಎಚ್ಚರಿಕೆ*

ನಾವೆಲ್ಲರೂ ಸೇರಿ
ಒಟ್ಟಾಗಿ ಆಚರಿಸಿದರೆ
ಗಣತಂತ್ರ ದಿನ
ಒಗ್ಗಟ್ಟಿಲ್ಲದೇ ಕಿತ್ತಾಡಿ
ಬಡಿದಾಡಿಕೊಂಡರೆ
ಮುಂದೆ ಬರುವುದು
ಅತಂತ್ರ ದಿನ

*೨*

*ಅಸಹಾಯಕರು*


ನಮ್ಮ ಗಣರಾಜ್ಯೋತ್ಸವದಲ್ಲಿ
ಪಾಲ್ಗೊಂಡರು ೧೦ ದೇಶದ
ನಾಯಕರು
ಹುಲಿಯಂತೆ ಗರ್ಜಿಸುತ್ತಿದ್ದ
ನಮ್ಮ ವೈರಿದೇಶಗಳಿಗೆ
ಅನಿಸುತಿದೆ
ನಾವೀಗ ಬರೀ
ಅಸಹಾಯಕರು

*೩*

*ತಾಕತ್ತು*

ಗಣರಾಜ್ಯೋತ್ಸವದಲ್ಲಿ
ಈಬಾರಿ ಪಾಲ್ಗೊಂಡ
ವಿದೇಶಿ ನಾಯಕರು
ಹತ್ತು
ನಮ್ಮ ವೈರಿದೇಶಗಳು
ಸುಸ್ತಾಗಿವೆ
ಅತ್ತು ಅತ್ತು
ಇದು ಭಾರತದ
ತಾಕತ್ತು

 *ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 January 2018

*ಯರಬಳ್ಳಿ ಮಾರಮ್ಮ*(ಭಕ್ತಿಗೀತೆ)

*ಯರಬಳ್ಳಿ ಮಾರಮ್ಮ*

ನಮ್ಮ ಕಾಪಾಡಲು  ಬಾರಮ್ಮ
ಯರಬಳ್ಳಿಯ ದೇವಿ  ಮಾರಮ್ಮ|ಪ|

ಯರಬಳ್ಳಿಯಲಿ ನೆಲೆಸಿಹ ತಾಯಿ
ನಮ್ಮೆಲ್ಲರ ಹರಸು ಮಹಾತಾಯಿ
ತಳಿರು ತೋರಣವ  ಕಟ್ಟುವೆವು
ತಂಬಿಟ್ಟು ಆರತಿ ಬೆಳಗುವೆವು|೧|

ವರುಷದ ಜಾತ್ರೆಯ ಮಾಡುವೆವು
ಗಾವು ಸಿಡಿ ಸೇವೆ ಅರ್ಪಿಸುವೆವು
ಜಲದಿ ಉತ್ಸವಕೆ ನಗುತ ಸಾಗು
ನಮ್ಮಯ ದುರಿತಗಳ  ನೀ ನೀಗು|೨|

ಹೊಳೆಯ ಪೂಜೆಯ ಮಾಡುವೆವು
ಹಳೆ ಕೊಳೆ ಕಳೆಯಲು ಬೇಡುವೆವು
ಬಾನಗುರಿ ಸೇವೆಯ ಮಾಡುವೆವು
ಊರ ಸುತ್ತ ತಳಿಯ  ಹಾಕುವೆವು|೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 January 2018

ಪುಟ್ಟನ ಶಿಕ್ಷಣ (ಶಿಶುಗೀತೆ)

ಶಿಶುಗೀತೆ

*ಪುಟ್ಟನ ಶಿಕ್ಷಣ*

ಒಂದು ಎರಡು
ಶಾಲೆಗೆ ಹೊರಡು

ಮೂರು ನಾಲ್ಕು
ಪಾಠವು ಬೇಕು

ಐದು ಆರು
ಗೆಳೆಯರ ಸೇರು

ಏಳು ಎಂಟು
ಆಟವು ಉಂಟು

ಒಂಭತ್ತು ಹತ್ತು
ಅರಿವನು ಬಿತ್ತು

ಒಂದರಿಂದ ಹತ್ತು  ಹೀಗಿತ್ತು
ಕಲಿಕೆಯ ದಾರಿಯು ಸೊಗವಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

24 January 2018

ಹಾಡುವೆನು (ಭಾವಗೀತೆ)ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನಿಂದ ಉತ್ತಮ ಗೀತೆ ಪುರಸ್ಕಾರ ಲಬಿಸಿದೆ


*ಭಾವಗೀತೆ*

*ಹಾಡುವೆನು*

ಹಾಡೊಂದ ನಾ ಹಾಡುವೆನು
ಕೇಳುಗರ ಮನ ತಣಿಸುವೆನು
ನೋವಿದೆ ನಲಿವಿದೆ ಹಾಡಲಿ
ಕೇಳುಗರಿಲ್ಲದೇ ಹೇಗೆ ಹಾಡಲಿ

ನಿಮ್ಮ ಮಂತ್ರಮುಗ್ಧಗೊಳಿಸುವೆ
ರಾಗ ರಸಗಳಲಿ ಮೈಮರೆಸುವೆ
ಮನರಂಜನೆಯನೀಗ ನೀಡುವೆ
ಮನಕಾನಂದವನು ಈಯುವೆನು

ಬೇಧ ಭಾವಗಳಿಲ್ಲ ನನ್ನ ಹಾಡಲ್ಲಿ
ಹಿರಿ ಕಿರಿಯರ ಗೊಡವೆಗಳಿಲ್ಲ
ಸ್ಪೃಶ್ಯಾಸ್ಪೃಶ್ಯತೆ ಗಾನಕೆ ತಿಳಿದಿಲ್ಲ
ಕಿತ್ತಾಟ ಕಚ್ಚಾಟ ಇಲ್ಲವೇ ಇಲ್ಲ

ದೇವನೊಲಿಸುವೆ ನನ್ನ ಹಾಡಲಿ
ದಾನವರ ಹಳಿವೆ ಹಾಡುತ ಜಗದಲಿ
ಕೆಡಿಸುವ ಮಾತಿಲ್ಲ ಗಾಯನದಲಿ
ಕೂಡಿಸುವೆ ಎಲ್ಲರ ನನ್ನ ಹಾಡಲಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

23 January 2018

ಹನಿಗವನಗಳು (ಹಾಡು)



ಹನಿಗವನಗಳು

*ಕೈಚಳಕ*

ಹಾಡುಗಾರ ಹಾಡುತ್ತಿದ್ದನು
ತನ್ಮಯದಿಂದ
ಕೇಳುಗರು ಕೇಳುತ್ತಿದ್ದರು
ಆನಂದದಿಂದ
ಕಿಸೆಗಳ್ಳರು ಹಣ ಎಗರಿಸಿದ್ದರು
ಕೈಚಳಕದಿಂದ


*ತಾಕತ್ತು*

ನನ್ನ ಹಾಡಲಿ ಜನರ ಸೆಳೆವ
ಶಕ್ತಿಯಿದೆ
ನೋವ ಮರೆಸುವ
ಔಷಧವಿದೆ
ಎಡವಟ್ಟಾದರೆ ಕೊಳೆತ ಮೊಟ್ಟೆ
ತರುವ ತಾಕತ್ತಿದೆ


*ಭಾವನೆ*

ಗೋಷ್ಠಿ ಮುಗಿಸಿದ ಗಾಯಕ
ಕೇಳಿದ ಸಂಭಾವನೆ
ಆಯೋಜಕನೆಂದನು
ನೀವು ನಮ್ಮವರೆಂಬ
ಭಾವನೆ
ನೀವು ನಮ್ಮ ತಂಗಿಯ
ಮಧುವೆಯಾಗದಿದ್ದರೂ
ನನ್ನ ಭಾವನೇ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

22 January 2018

ನಮಗೆ ಎಂತಹ ಮುಖ್ಯ ಮಂತ್ರಿ ಬೇಕು? (ಸಂಗ್ರಹ ಲೇಖನ)

ಈ ರಾಜ್ಯವನ್ನು ಲಿಂಗಾಯಿತನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಒಕ್ಕಲಿಗನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ದಲಿತನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಬ್ರಾಹ್ಮಣನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಕುರುಬನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಇತರೆ ಯಾವ ಜಾತಿಯವನೂ ಮುನ್ನಡೆಸಬಾರದು.
ಈ ರಾಜ್ಯವನ್ನು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಮುಂತಾದ ಯಾವ ಧರ್ಮದವನೂ ಮುನ್ನಡೆಸಬಾರದು.
ಈ ರಾಜ್ಯವನ್ನು ರೈತ ಕಾರ್ಮಿಕ ವಿಜ್ಞಾನಿ ಸಮಾಜ ಸೇವಕ ಧಾರ್ಮಿಕ ಮುಖಂಡ ಮುಂತಾದ ಯಾರೂ ಮುನ್ನಡೆಸಬಾರದು.
ಏಕೆಂದರೆ ,...
ಇವರು ಯಾರೂ ಪರಿಪೂರ್ಣರಲ್ಲ. ಎಲ್ಲರೂ ತಮ್ಮ ಹಿತದ ಪಕ್ಷಪಾತಿಗಳಾಗುತ್ತಾರೆ. ಅದು ಅವರವರದೇ ಆಡಳಿತವಾಗುತ್ತದೆ.

ಸುಮಾರು ಏಳು ಕೋಟಿ ಜನಸಂಖ್ಯೆಯ ಹೆಚ್ಚು ಕಡಿಮೆ ಜಪಾನ್ ದೇಶದಷ್ಟು ವಿಸ್ತೀರ್ಣದ ವಿಶ್ವದ ಅತ್ಯಂತ ಸುರಕ್ಷಿತ ಪ್ರದೇಶಗಳಲ್ಲಿ ಒಂದಾದ ಅಂಧಾಭಿಮಾನಿಗಳಲ್ಲದ ಉದಾರ ಮನಸ್ಸಿನ  ಈ ನಮ್ಮ ಕರ್ನಾಟಕ ರಾಜ್ಯವನ್ನು ಆಳುವವನು ಮುನ್ನಡೆಸುವವನು ಒಬ್ಬ ಮನುಷ್ಯನಾಗಿರಬೇಕು.

ಹೌದು,
ಇದನ್ನು ಕಲ್ಪಿಸಿಕೊಳ್ಳಲು ಬಹಳ ಜನರಿಗೆ ಸಾಧ್ಯವಾಗುವುದಿಲ್ಲ.
ಏಕೆಂದರೆ ಅವರಿಗೆ ಮನುಷ್ಯರೇ ಕಾಣುತ್ತಿಲ್ಲ. ಎಲ್ಲರೂ ಹುಟ್ಟಿನಿಂದಲೇ ಬಂದ TITLE ಗಳಿಂದಲೇ ಗುರುತಿಸಲ್ಪಡುತ್ತಾರೆ. ತಾವು ಸೃಷ್ಟಿಯ ಸ್ವತಂತ್ರ ಜೀವಿಗಳು ಎಂದು ಮರೆತು ಬಿಟ್ಟಿದ್ದಾರೆ. ಹುಟ್ಟಿದ ಕ್ಷಣವೇ ಅನೇಕ ಬಂಧನಗಳಿಂದ ಬಂಧಿಗಳಾಗುತ್ತಾರೆ.
                         ಅದರೆ ಈಗಲೂ ಕೆಲವು ಮನುಷ್ಯರಿದ್ದಾರೆ. ಈ ಎಲ್ಲವನ್ನೂ ಮೀರಿದವರಿದ್ದಾರೆ. ಅವರನ್ನು ಗುರುತಿಸಬೇಕಿದೆ. ಅವರಿಗೆ ಈ ಸುಂದರ ಪ್ರದೇಶವನ್ನು ಮುನ್ನಡೆಸುವ ಅವಕಾಶ ಕೊಡಬೇಕಾಗಿದೆ. ಮತಭಿಕ್ಷೆಬೇಡಿ ಜನರ ಭಾವನೆಗಳನ್ನು ಕೆರಳಿಸಿ ಸುಳ್ಳುಭರವಸೆ ನೀಡುವವರಿಗಿಂತ ನಾವೇ ಖುದ್ದಾಗಿ ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕಿದೆ.
                             ಆಗ ರಾಮರಾಜ್ಯ ಭೀಮರಾಜ್ಯ ಕಲ್ಯಾಣ ರಾಜ್ಯ ಖಂಡಿತ ಸಾಧ್ಯವಿದೆ. ಕಳ್ಳರಿಲ್ಲದ ವಂಚಕರಿಲ್ಲದ ಭ್ರಷ್ಟರಿಲ್ಲದ ದುರಹಂಕಾರಿಗಳಿಲ್ಲದ ನೆಮ್ಮದಿಯ ಕ್ರಿಯಾತ್ಮಕ ಚಟುವಟಿಕೆಗಳ ಸಾಧಕರ ನಾಡು ಇದಾಗುತ್ತದೆ.

ಅಹಹಹಹಾ.........
ನಿಮ್ಮ ಮನಸ್ಸಿನಾಳದ ಮುಸುನಗೆ ನಿಮ್ಮ ಮುಖದಲ್ಲಿ ನನಗೆ ಕಾಣುತ್ತಿದೆ. ಇದೊಂದು ಹಗಲುಗನಸು ಎಂಬದು ನಿಮ್ಮ ಅನಿಸಿಕೆ.
ಏಕೆ.......ಕೋಟ್ಯಾಂತರ ಮೈಲಿಗಳ ಮಂಗಳನಲ್ಲಿಗೆ ಮುನ್ನುಗ್ಗುತ್ತಿಲ್ಲವೇ -
ಸಾಗರದ ತಳವನ್ನು ಸ್ಪರ್ಶಿಸಿಲ್ಲವೇ - ಸಾವಿರಾರು ಕಿಲೋಮೀಟರ್ ವೇಗದಲ್ಲಿ ಶಬ್ದದ ವೇಗವನ್ನು ಮೀರಿ ಹಾರಾಡುವ ವಿಮಾನವನ್ನು ಕಂಡುಹಿಡಿದಿಲ್ಲವೇ,
ವಿಶ್ವವನ್ನೇ ಏಕಕಾಲದಲ್ಲಿ ಸಂಪರ್ಕಿಸುವ ಸಾಧನ ಸಂಶೋದಿಸಿಲ್ಲವೇ ,
ಇಡೀ ಭೂಮಂಡಲವನ್ನೇ ಕ್ಷಣಾರ್ಧದಲ್ಲಿ  ನಾಶ ಮಾಡುವ ಬಾಂಬ್ ಗಳನ್ನು ಸೃಷ್ಟಿಸಿಲ್ಲವೇ.
   ಇದೆಲ್ಲಾ              ಸಾಧ್ಯವಾಗಿರಬೇಕಾದರೆ ಕೇವಲ ನಮ್ಮದೇ ಮನಸ್ಸುಗಳನ್ನು ನಿಯಂತ್ರಿಸಿ ಸಾಧಿಸಬಹುದಾದ ಆಡಳಿತ ರೂಪಿಸಲು ಸಾಧ್ಯವಿಲ್ಲವೇ.
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಯಾದರೆ ಇದು ಸಾಧ್ಯ.
ಆ ನಿರೀಕ್ಷೆಯಲ್ಲಿ ........
ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
 ಮನಸ್ಸುಗಳ ಅಂತರಂಗದ ಚಳವಳಿ

ಸಂಗ್ರಹ
ಸಿ.ಜಿ.ವೆಂಕಟೇಶ್ವರ
ಕೃಪೆ
ವಿವೇಕಾನ೦ದ. ಹೆಚ್.ಕೆ.

21 January 2018

*ಗಜ಼ಲ್*೨೧ (ಪ್ರೀತಿ ಇಲ್ಲದ ಮೇಲೆ)



*ಗಜ಼ಲ್*೨೧ (ಪ್ರೀತಿ ಇಲ್ಲದ ಮೇಲೆ)

ಚೆಲುವಿಲ್ಲ ಒಲವಿಲ್ಲ ಎಲ್ಲೆಡೆ ಹಣದ ಲೆಕ್ಕಾಚಾರ
ಪ್ರಕೃತಿಯೆಡೆ ಅತ್ಯಾಚಾರ ಲಾಭದ ಲೆಕ್ಕಾಚಾರ

ತಾಯ ಎದೆಹಾಲು ಡಬ್ಬಿ ಬಾಟಲ್ಗಳಲಿ ತುಂಬಿದೆ
ದಂಪತಿಗಳಲಿ ಮೇಲು ಕೀಳಿನ ಮುಗಿಯದ  ಲೆಕ್ಕಾಚಾರ

ಅನಾಥಾಶ್ರಮ  ವೃದ್ದಾಶ್ರಮ ಹೆಚ್ಚಳ ಎಲ್ಲೆಲ್ಲೂ
ಬಾಡಿಗೆ ತಾಯಿ‌ ಬಾಡಿಗೆ ಸಂಬಂಧದ ಲೆಕ್ಕಾಚಾರ

ಧನಕನಕಗಳು ಎಲ್ಲಾ  ಸಂಬಂಧಗಳಿಗೆ ಆಧಾರ
ದನಕರುಗಳು ಕೇವಲ ಮಾಂಸದ ಲೆಕ್ಕಾಚಾರ

ಭುವಿಯಲಿ ಅರಳುವ ಬಂಧಗಳ ಕೊರತೆ
ಸೀಜೀವಿಗೆ  ಪ್ರೀತಿ ತುಂಬಿದ ಜಗದ ಲೆಕ್ಕಾಚಾರ

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

20 January 2018

ಯುವಕರು ಮತ್ತು ಉದ್ಯೋಗ (ಲೇಖನ)

*ಯುವಕರು ಮತ್ತು ಉದ್ಯೋಗ*

ಇಂದಿನ ಯುವ ಜನತೆಯು ಎಷ್ಟೇ ಓದಿದರೂ  ನಿರುದ್ಯೋಗದಿಂದ ಬಳಲುತಿರುತ್ತಾರೆ.ಇದಕ್ಕೆ ಹಲವಾರು ಕಾರಣಗಳಿವೆ, ಉದ್ಯೋಗದ ಕೊರತೆ ಇರಬಹುದು.ಕೆಲವೊಮ್ಮೆ ಉದ್ಯೋಗ ಲಬ್ಯವಿದ್ದರೂ  ಈಗಿನ ಕೆಲ  ಯುವಕರಲ್ಲಿ ಕೆಲಸ ಮಾಡುವ ಆಸಕ್ತಿಯು ಕಡಿಮೆ ಆಗಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ , ಹಾಗೂ ತಮ್ಮ ಭವಿಷ್ಯದ ಬಗ್ಗೆ ಕಾಳಜಿ ಇರದೆ ಇರುವುದು ಸಹ ಕಾರಣವಾಗಿರುತ್ತೆ. ಇದರ ನಡುವೆ ತಮ್ಮ ವಿಧ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗಗಳನ್ನು ಹುಡುಕುವುದರಲ್ಲೆ ಯುವಕರು ಕಾಲಹರಣ ಮಾಡುತ್ತಿದ್ದಾರೆ.
    ಉದ್ಯೋಗಂ ಪುರುಷ ಲಕ್ಷಣಂ,ಎನ್ನುವುದು ಹಳೆಯದಾದ ಮಾತು ಈಗ ಉದ್ಯೋಗಂ ಮಾನವ ಲಕ್ಷಣಂ ಎನ್ನುವಂತಾಗಿದೆ   ಪ್ರತಿಯೊಬ್ಬರೂ ಒಂದಲ್ಲ ಒಂದು ಕಾಯಕ  ಮಾಡಿದರೆ ನಮ್ಮ ಬಾಳು ಹಸನಾಗುವುದು ಬಹಳ ಯುವಕರು  ತಮಗೆ ಸಿಗುವ ಕೆಲಸಗಳಲ್ಲಿ ತೃಪ್ತಿಗೊಳ್ಳುವುದು ಬಿಟ್ಟು,ಬೇರೆ ಶಾಶ್ವತ ಉದ್ಯೋಗಿಗಳಿಗೆ ಪರದಾಡುತ್ತಾರೆ. ಇದು ತಪ್ಪಲ್ಲ ಆದರೆ ಕ್ರಮೇಣ ಕೆಲಸ ಮಾಡುತ್ತಾ ಹುನ್ನತ ಹುದ್ದೆಗಳ ಪಡೆದರೆ ಉತ್ತಮ
   
       ಕೆಲ ಯುವಕರು ತಾವು ಎಷ್ಟೇ ಸಂದರ್ಶನದಲ್ಲಿ ಗ ಭಾಗವಹಿಸಿದರೂ ಕೂಡ ಕೆಲಸ ಸಿಗದೆ ಖಿನ್ನತೆಯಿಂದ ಬಳಲುತಿರುತ್ತಾರೆ, ಅದರ ಬದಲು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಇಂದಿಲ್ಲಾ ನಾಳೆ ನನ್ನ ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತೆ ಅನ್ನೋ ಆತ್ಮ ಬಲ ಹೊಂದಿರಬೇಕು.
ಮರಳಿ ಯತ್ನ ಮಾಡು ಎಂಬಂತೆ  ಸರ್ಕಾರಿ ಅಥವಾ ಖಾಸಗಿ ಯಾವದೇ ಕೆಲಸ ಮಾಡಲು ಸಿದ್ದರಿರಬೇಕು
       ಇತ್ತೀಚಿಗೆ ಕೇಂದ್ರ ಸರ್ಕಾರ ಸ್ಕಿಲ್ ಇಂಡಿಯಾ ಮೇಕ್ ಇನ್ ಇಂಡಿಯಾ ಮುಂತಾದ ಕಾರ್ಯ ಕ್ರಮಗಳ ಮೂಲಕ ಯುವಕರು ಹೆಚ್ಚಾಗಿ ಕೆಲಸವನ್ನು ಪಡೆಯಲು ತರಬೇತು ನೀಡುತ್ತಿದೆ
ಮುದ್ರಾ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲದ ನೆರವು ನೀಡುತ್ತಿದೆ ಇವನ್ನೆಲ್ಲಾ ಬಳಸಿಕೊಂಡು ನಮ್ಮ ಯುವ ಸಮೂಹ ಉದ್ಯೋಗ ಮಾಡಬೇಕು ತನ್ಮೂಲಕ ಭವ್ಯ ಭಾರತದ ನಿರ್ಮಾಣದ ಪಣ ತೊಡಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

18 January 2018

*ಪ್ರಜಾತಂತ್ರ ಗಣರಾಜ್ಯದಲ್ಲಿ ನಮ್ಮ ಜವಾಬ್ದಾರಿ*(ಲೇಖನ)

ಲೇಖನ

*ಪ್ರಜಾತಂತ್ರ ಗಣರಾಜ್ಯದಲ್ಲಿ
ನಮ್ಮ ಜವಾಬ್ದಾರಿ*

ನಾಲ್ಕಾರು ಜನ‌ ಒಂದೆಡೆ ಸೇರಿದರೆ ಮುಗಿಯಿತು "ಈ ಸರ್ಕಾರ ಸರಿಯಿಲ್ಲ ಆ ಸರ್ಕಾರ ಸರಿಯಿಲ್ಲ ಈ ಮುಖ್ಯಮಂತ್ರಿ ಸರಿ ಇಲ್ಲ ಆ ಮಂತ್ರಿ ಉಪಯೊಗ ಇಲ್ಲ ಈ ಎಂ ಎಲ್ ಎ ಬರೀ ಆಶ್ವಾಸನೆ ಕೊಡೋದೆ ಆಯ್ತು " ಈಗೆ ಪುಂಕಾನುಪುಂಕವಾಗಿ ಮಾತನಾಡಿ ವೀರಾವೇಶ ತೋರುವಲ್ಲಿ ಎಲ್ಲರೂ ನಾ ಮುಂದು ತಾ ಮುಂದು ಎಂದು‌  ಬೇರೆಯವರ ತೆಗಳಲು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮನೋಭಾವ ತೋರುವರ ಸಂಖ್ಯೆ ಹೆಚ್ಚಾಗಿದೆ.

ಪ್ರಜಾತಂತ್ರ ಗಣರಾಜ್ಯ ದಲ್ಲಿ  ಪ್ರಜೆಗಳ ಜವಾಬ್ದಾರಿ ಅಗಾಧ. ಅದು ಚುನಾವಣಾ ಕಾರ್ಯದಿಂದ ಹಿಡಿದು ನೀತಿ ನಿರೂಪಣೆಯ ವರೆಗೂ ವಿಸ್ತರಿಸಿದೆ .

ಚುನಾವಣಾ ಸಂದರ್ಭದಲ್ಲಿ ದೇಶದಲ್ಲಿ ಶೇಕಡಾವಾರು ನೂರು ಮತದಾನ ಸ್ವಾತಂತ್ರ್ಯ ಬಂದಾಗಿನಿಂದ ಆಗಿಲ್ಲ .ಶೇಕಡಾ ಎಪ್ಪತ್ತು ಮತದಾನವಾದರೆ ಅದೇ ದಾಖಲೆ  ಉಳಿದ ಮತದಾರರಿಗೆ ಜವಾಬ್ದಾರಿ ಇಲ್ಲವೆ ?ಇಂತವರು ನಾಯಕರ ರಾಜಕಾರಣಿಗಳ ಸರ್ಕಾರಗಳನ್ನು ಯಾವ ನೈತಿಕತೆಯಿಂದ ಟೀಕಿಸುತ್ತಾರೆ.?

ಇನ್ನೂ ಮತದಾನ ಮಾಡುವ ಮಹಾಪ್ರಭುಗಳ ಕಥೆ ಬೇರೆಯೇ ಇದೆ ಮತದಾನಕ್ಕೆ ಮುನ್ನ ಹಣ ಹೆಂಡ ಸೀರೆ ಮುಂತಾದ  ಆಮಿಷಗಳಿಗೆ ಬಲಿಯಾಗಿ ತಮ್ಮ ಮತ ಮಾರಿಕೊಂಡು ಮೊದಲ ಬಾರಿಗೆ ಭ್ರಷ್ಟಾಚಾರ ಬೆಳೆಯಲು ಕಾರಣರಾಗಿ ಮುಂದೆ ಇದೇ ಮತದಾರರು ತಮ್ಮ ನೇತಾರರ ತೆಗಳುವುದೆಷ್ಟು ಸರಿ?

*ಹಾಗಾದರೆ ನಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿ ಯಾಗಿ ನಿಭಾಯಿಸುವುದು ಹೇಗೆ*

* ಮುಂಬರುವ ಎಲ್ಲಾ ಚುನಾವಣೆಯಲ್ಲಿ ಎಲ್ಲರೂ ಮತ ಚಲಾಯಿಸುವ ಪ್ರತಿಜ್ಞೆ ಮಾಡೋಣ

* ಆಮಿಷಕ್ಕೆ  ಬಲಿಯಾಗದೇ ಮತ ಚಲಾಯಿಸೋಣ

* ಶಾಸನ ಮಾಡುವಾಗ ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡು  ನಮ್ಮ ನೀತಿ ನಿಯಮಗಳನ್ನು ನಾವೆ ರೂಪಿಸಿಕೊಳ್ಳಲು ಪಣ ತೊಡೋಣ

* ಸರಿಯಾಗ ಕಾರ್ಯ ನಿರ್ವಿಸದ ನಮ್ಮ ಪ್ರತಿನಿಧಿ ಗಳ ಹಿಂದಕ್ಕೆ ಕರೆಯುವ ಚಳುವಳಿ ರೂಪಿಸೋಣ

* ಕಾರ್ಯಾಂಗದ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಂಬಲ ನೀಡಿ ಆಡಳಿತವನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡಲು ಪ್ರಯತ್ನ ಮಾಡೋಣ

* ನ್ಯಾಯಾಂಗ ಮತ್ತು  ಕಾನೂನು ಗಳನ್ನು ಗೌರವಿಸೋಣ

*ಸರ್ಕಾರದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ವನ್ನು ಸಮಾಜದ ಅಭಿವೃದ್ಧಿ ಗೆ ಬಳಸಿ ಬೆಳೆಸೋಣ

ಈ ಮೇಲಿನ‌ ಸಂಕಲ್ಪ ದೊಂದಿಗೆ ಎಲ್ಲಾ ಭಾರತೀಯರು ಮುನ್ನೆಡದರೆ ಆಗ ಪರಿಣಾಮಕಾರಿ ಗಣತಂತ್ರದ ಮೂಲಕ ನಮ್ಮ ದೇಶ ಪ್ರಪಂಚದಲ್ಲಿ ಮಾದರಿ ಆಗುವುದರಲ್ಲಿ  ಸಂದೇಹವಿಲ್ಲ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 January 2018

ಭಾವಗೀತೆ (ಪ್ರಾರ್ಥನೆ)

ಭಾವಗೀತೆ

*ಪ್ರಾರ್ಥನೆ*

ರವಿ ನೀನು ಬಾರೋ
ನಿನ್ನ ಮೊಗ ತೋರೋ

ಕಾಯತಿಹೆ ನಿನಗಾಗಿ
ಪೂಜಿಸುವೆ ಶಾಂತಿಗಾಗಿ
ಉದಯಿಸು ಕಾದಿರುವೆ
ಅರ್ಘ್ಯವನು ನೀಡಿರುವೆ

ಜಗದ ಶಕ್ತಿಯು ನೀನು
ಯುಗದ ಸಾಕ್ಷಿಯು ನೀನು
ಈಗಲೇ ದಯಮಾಡು
ಜೀವಿಗಳಿಗೆ ಕಳೆ ನೀಡು

ನಿನ್ನ ಬರುವಿಕೆಗಾಗಿ ಕಾದು
ಸಹನೆಯಿಂದಲಿ ನಿಂದು
ಕಣ್ತುಂಬಿಕೊಳ್ಳುವೆ ಈಗ
ಬಾ ತೋರೋ ನಿನ್ನ ಮೊಗ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

16 January 2018

ಹನಿಗವನಗಳು (ಸೌಂದರ್ಯ)

ಹನಿಗವನಗಳು

*ಲಾವಣ್ಯವತಿ*

ನನ್ನವಳು
ಸೌಂದರ್ಯವತಿ
ಲಾವಣ್ಯವತಿ
ಅನುರೂಪವತಿ
ಅಂತೆಯೇ
ಖರ್ಚೂ ಅತಿ

*ಬೇಕು*

ಆ   ಬ್ರಹ್ಮದೇವನು ತನ್ನ
ಸೌಂದರ್ಯವನ್ನು ಒಟ್ಟುಗೂಡಿಸಿ
ನನ್ನವಳ ನಿರ್ಮಿಸಿರಬೇಕು
ಅದಕ್ಕೆ ಇವಳು  ಕೇಳುವಳು
ಅದೂ ಬೇಕು
ಇದೂ ಬೇಕು
ಕಂಡಿದ್ದೆಲ್ಲಾ ಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 January 2018

ಸುಗ್ಗಿ (ಕವನ)

*ಸುಗ್ಗಿ*

ಬಂದಿದೆ ಮಕರ  ಸಂಕ್ರಮಣ
ಹೊರಟ ರವಿ ಉತ್ತರದತ್ತ
ಮಾನವನ ಮುಖ ದಕ್ಷಿಣದತ್ತ
ಅವನ ನಡಿಗೆ ವಿನಾಶದತ್ತ

ಎಳ್ಳು ತಿಂದು ಒಳ್ಳೆ ಮಾತೆಲ್ಲಿ
ಬಾಯಿಬಿಟ್ಟರೆ ಬಣ್ಣಗೇಡು
ಇವರ ಅವ ತೆಗಳುವನು
ಅವರ ಇವ ಬಿಡುವನೆ ?

ಸಂಕ್ರಾಂತಿ ಎಂದರೆ ಸುಗ್ಗಿ
ಬೆಳೆದ ಫಸಲಿಗೆ ಪೂಜೆ
ಈಗ ನಮ್ಮನಾಳುವರಿಗೆ ಸುಗ್ಗಿ
ನಮ್ಮ ಹಣ ಕೊಳ್ಳೆ ಹೊಡೆವ ಸುಗ್ಗಿ

ರಾಸುಗಳಿಗೆ ಕಿಚ್ಚು ಹಾಯಿಸುವ ಕಾಲ
ಈಗೇನಿದ್ದರೂ ಕೆಸರೆರೆಚಾಟಕ್ಕೆ ಸಕಾಲ
ಸೂರ್ಯನ ಪಥ ಬದಲಾಗಿದೆ
ನಮ್ಮದು  ಯಾವಾಗ?

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

*ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು*💐💐💐

10 January 2018

ನೀನಾಗು ಮನುಜ (ಕವನ) "ಕವಿ ಬಳಗ " ವಾಟ್ಸಪ್ ಗುಂಪಿನಲ್ಲಿ ನಡೆದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವನ


*ನೀನಾಗು ಮನುಜ*

ಬಾಳ ದಾರಿಯು ಅನಿಶ್ಚಿತ
ಇಲ್ಲಿ ಕಷ್ಟ ಸುಖವು ನಿಶ್ಚಿತ
ತುಂಬಿದ ಕಡಲು ಒಂದೆಡೆ
ನೀರಿಗೆ ಬರ ಮತ್ತೊಂದೆಡೆ

ಮರಳುಗಾಡ ಒಂಟೆಯಂತೆ
ಕಡಲ  ಈಜುವ ಮೀನಂತೆ
 ಸಂಪರ್ಕ ಸೇತುವೆಯಂತೆ
ನೀ ತೋರು ಸದಾ ಮಾನವತೆ

ಒಮ್ಮೆ ನಳನಳಿಪ ಪರಿಸರ
ಮತ್ತೊಮ್ಮೆ ಬೋಳುಮರ
ನಗು ಅಳು ಬಾಳಲಿ ಸಹಜ
ಎದರಿಸಿ ನೀನಾಗು ಮನುಜ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

09 January 2018

ಸಹಬಾಳ್ವೆ (ಹನಿಗವನ)



*ಹನಿಗವನ*

*ಸಹಬಾಳ್ವೆ*

ಹುಟ್ಟು ಹಾಕು ನೀನು
ಹಿಡಿವೆ ನಾನು ಮೀನು
ಸಾಗರವೆ ನಮ್ಮ ತಾಯಿ
ಅನ್ನ ನೀಡುವ ಮಾಯಿ
ಬೀಸುವೆನೀಗ ಬಲೆಯ
ಕಲಿಸುವೆ ನಿನಗೆ ಕಲೆಯ
ಜೊತೆಗೆ ನಾವು ದುಡಿವ
ಜೊತೆಗೆ ನಾವು ಬಾಳುವ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 January 2018

ಖಚಿತ (ಹನಿಗವನ)

*ಹನಿಗವನ*

*ಖಚಿತ*

ಹಿಂದೊಮ್ಮೆ
ಸಿಗುತ್ತಿತ್ತು ,
ಜ್ಞಾನ, ಆರೋಗ್ಯ ,ಶಿಕ್ಷಣ
ಉಚಿತ
ಈಗ ಇವೆಲ್ಲವೂ ಸಿಗಲು
ನೀಡಲೇಬೇಕು ಹಣ
ಖಚಿತ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

06 January 2018

ಮರೆಯಲಾರೆ (ಭಾವಗೀತೆ)

ಭಾವಗೀತೆ

*ಮರೆಯಲಾರೆ*

ಕೋಪವೇಕೆ ನನ್ನ ನಲ್ಲೆ
ಬಳಿ ಬಾರೆ ಈಗಲೆ ಇಲ್ಲೆ|ಪ|

ಹೂಅರಳಿ ನಲಿಯುತಿದೆ
ತಂಗಾಳಿ ಸುಳಿಯುತಿದೆ
ಹಸಿ ಕೋಪ ನಿನಗೆ ತರವೆ
ಬಾ ನನ್ನ ಮದ್ದಿನ  ಒಲವೆ|೧|

ನನ್ನ ಮನವ ನಿನಗೊಪ್ಪಿಸಿಹೆ
ನೀ ಹುಸಿ ಮುನಿಸ  ತೋರಿಹೆ
ಶಶಿಮುಖಿಯೆ ಶಾಂತಳಾಗು
ನನ್ನ ಕತ್ತಲ ಮನಕೆ ಬೆಳಕಾಗು|೨|

ಸೌಂದರ್ಯದ ಖನಿ ನೀನು
ಸದ್ಗುಣಗಳ ಗಣಿ ನೀನು
ತೊರೆಯದಿರು ನೀ ನನ್ನ
ಮರೆಯಲಾರೆ ನಾ ನಿನ್ನ|೩|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

04 January 2018

ಡ್ರೈವರ್ ಉದ್ದಟತನ ( ಸಂಪಾದಕರಿಗೆ ಪತ್ರ)

ಡ್ರೈವರ್ ಉದ್ತಟತನ
ದಿನಾಂಕ ೪ -೧ ೨೦೧೮ ರಂದು ನಾನು ಬೆಂಗಳೂರಿಗೆ ಪ್ರಯಾಣ ಬೆಳೆಸಲು
ಕೆ ಎ ೪೦
ಎಪ್ ೯೫೩
ನಂಬರ್ ನ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಬಸ್ ನಿಲ್ದಾಣದಲ್ಲಿ ೬- ೩೦ ಕ್ಜೆ ಬಸ್ ಹತ್ತಿ ಕುಳಿತು ಒಂದು ಗಂಟೆಯಾದರೂ ಡ್ರೈವರ್ ಪತ್ತೆ ಇಲ್ಲ ಕೊನೆಗೆ ೭ - ೩೦ ಕ್ಕೆ ಬಂದ ಡ್ರೈವರ್ ಗೆ ಬಸ್ ನ ಪ್ರಯಾಣಿಕರೊಬ್ಬರು  ಸಮಯಕ್ಕೆ ಸರಿಯಾಗಿ ಹೊರಡಿ ನಮಗೆ ಕಛೇರಿ ಕೆಲಸವಿದೆ ಎಂದರೆ .ಉದ್ದಟತನದಿಂದ "ನಾನು ಕರೆದು ಕೊಂಡು ಹೋದಾಗ ಹೋಗಬೇಕು ಇನ್ನೂ ಮಾತಾಡಿದರೆ ಇನ್ನೂ ಲೇಟು ಮಾಡುವೆ ಎಂದರು"ಇಂತಹ ಮನಸ್ಥಿತಿ ಇರುವುದರಿಂದ ಸಂಸ್ಥೆಯ ಗೌರವಕ್ಕೆ ಮತ್ತು ಸಾರ್ವಜನಿಕರ ಘನತೆಗೆ ಧಕ್ಕೆಯಾಗುತ್ತದೆ ಸಂಬಂಧಿಸಿದ ಅಧಿಕಾರಿಗಳು ಇವರಿಗೆ ಬುದ್ದಿ ಹೇಳಬೇಕು.
ರಾಷ್ಟ್ರ ಮಟ್ಟದಲ್ಲಿ  ಹಲವಾರು ಪ್ರಶಸ್ತಿ ಪಡೆದ ಕೆ ಎಸ್ ಆರ್ ಟಿ ಸಿ ಗೆ ತನ್ನದೇ ಆದ ಹೆಸರಿದೆ.ಇದಕ್ಕೆ ಪೂರಕವಾಗಿ ಸೇವಾ ಮನೋಭಾವವನ್ನು ಹೊಂದಿರುವ ಉತ್ತಮ ಡ್ರೈವರ್ ಮತ್ತು ಕಂಡಕ್ಟರ್ ಗಳಿದ್ದಾರೆ.
ಆದರೆ ಇಂತಹ ಕೆಲವೆ ಉದ್ದಟ  ನೌಕರರಿಂದ ಅದು ಮಣ್ಣು ಪಾಲಾಗುವುದು ಬೇಡ
ಇನ್ನೂ ಮುಂದಾದರು ಜನರ ಸೇವೆಯೇ ನಮ್ಮ ಗುರಿ ಎಂಬ ದ್ಯೇಯವಾಕ್ಯ ಪಾಲಿಸಲು ಆ ದೇವರು ಇಂತವರಿಗೆ ಬುದ್ದಿ ನೀಡಲಿ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

03 January 2018

ಮುಖಪುಸ್ತಕ (ಹನಿಗವನ)

ಹನಿಗವನ

*ಮುಖಪುಸ್ತಕ*

ಮುಖ ಪುಸ್ತಕ ಕ್ಕೂ
ಆದಾರ್ ಖಡ್ಡಾಯ?
ಆಧಾರವಿರದ ಮುಖಗಳು
ಹೆಚ್ಚಾಗಿ ಮಾಡದಿರಲು
ವಿಕಾರ ಮತ್ತು ಗೊಂದಲ
ಇನ್ನೂ ಮುಂದಾದರೂ
ಆಗಲಿ ನಕಲಿ‌ ಖಾತೆಗಳಿಗೆ
ವಿದಾಯ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

02 January 2018

ನಗದಿರು ( ಭಾವಗೀತೆ )

ಭಾವಗೀತೆ

*ನಗದಿರು*


ಮನಸೆ ಹೀಗೇಕೆ ನಗುವೆ
ನನ್ನೇಕೆ ಹೀಗೆ ಹಂಗಿಸುವೆ|ಪ|

ಅವಳ ನೆನಪುಗಳ ಮಧುರ
ಕ್ಷಣಗಳ ನೆನದು ನಗದಿರು
ಅವಳ ಮೋಸದ ವೇಷದ
ಮಾತು ನೆನಪಿಸಿ ನಗದಿರು|೧|

ಕೊನೆತನಕ ಇರವೆ ಎಂದು
ಭಾಷೆಕೊಟ್ಟವಳ ಹಂಗಿಸದಿರು
ಅವಳ ತೆಕ್ಕೆಯಲಿ ಮೈಮರೆತ
ನನ್ನ ದಡ್ಡತನ ಹಂಗಿಸದಿರು |೨|

ನಗದು ಇರದವನ ತೊರೆದಳೆಂದು
ಚುಚ್ಚಿ ಗಹಗಹಿಸಿ ನಗದಿರು
ಚಿನ್ನದ ಮನಸಿನ ರನ್ನ ನಂತಹ
ಹುಡಗನ ಮತ್ತೆ ಹಂಗಿಸದಿರು |೩|

ಕೈಕೊಟ್ಟ ಮೋಸಗಾತಿ ನೆನದು
ನೋವನ್ನು ನೀಡಲು ನಗದಿರು
ಬಿಟ್ಟೋದವಳ ಮರೆಯಲಾಗದ
ಹೇಡಿಯೆಂದು ನನ್ನ ಹಂಗಿಸದಿರು|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 January 2018

ಹೊಸ ಕ್ಯಾಲೆಂಡರ್ ವರ್ಷದ ನನ್ನ ನಿರ್ಧಾರಗಳು (ಲೇಖನ)

ಹೊಸ ವರ್ಷದ ನಿರ್ಧಾರಗಳು


೨೦೧೮ ರ ಹೊಸ ವರ್ಷದ ನನ್ನ ನಿರ್ದಾರಗಳು ಈ ಕೆಳಗಿನಂತಿವೆ
೧ ಶಿಕ್ಷಕನಾದ ನಾನು ಈ ವರ್ಷ ಬರುವ ವಿವಿಧ ಹೊಸ ತಂತ್ರಜ್ಞಾನದ ಮೂಲಕ ,ಹಾಗೂ ಹೊಸ ವಿಷಯಗಳ ಕಲಿತು ,ನನ್ನ ಮಕ್ಕಳ ಕಲಿಕೆಯಲ್ಲಿ ಗುಣಾತ್ಮಕ ಕಲಿಕೆ ಉಂಟುಮಾಡಲು ಮತ್ತು ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನ ಮಾಡುವ  ನಿರ್ದಾರ ಕೈಗೊಳ್ಳುವೆ .
೨ ನನ್ನ ಶಾಲೆಯ ಸಹಪಠ್ಯ ಚಟುವಟಿಕೆಗಳಲ್ಲಿ ಎಲ್ಲಾ ಮಕ್ಕಳು ಪಾಲ್ಗೊಳ್ಳಲು ಪ್ರೇರಣೆ ನೀಡಿ ಎಲ್ಲಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಣ ತೊಡುವೆನು
೩ ವೈಯಕ್ತಿಕ ವಾಗಿ ನನ್ನ ಹವ್ಯಾಸಗಳಾದ ಕವನ ,ಹನಿಗವನ, ಲೇಖನ, ಬರೆಯುವ ಮೂಲಕ ಸಾಹಿತ್ಯ ಚಟುವಟಿಕೆಗಳ ಮೂಲಕ ವಿರಾಮ ಕಾಲ ಸದುಪಯೋಗ ಪಡಿಸಿಕೊಂಡು ಕನಿಷ್ಟ ಒಂದು ಕವನ ಸಂಕಲನ ಬಿಡುಗಡೆ ಮಾಡುವ ಗುರಿ ಹೊಂದಿರವೆ .
೪ ಇನ್ನೂ ನನ್ನ ಕುಟುಂಬದ ವಿಷಯಕ್ಕೆ ಬಂದರೆ ನನ್ನ ಹೆಂಡತಿ. ಮಕ್ಕಳು. ಮತ್ತು ಸಂಬಂದಿಕರೊಂದಿಗೆ ಗುಣಮಟ್ಟದ ಹೆಚ್ಚು ಸಮಯ ಕಳೆದು ನನ್ನ ಇರುವಿಕೆ ಮಹತ್ವದ ಬಗ್ಗೆ ಅರಿಯುವೆನು
೫ ಸಮಾಜದಲ್ಲಿ ನಡೆವ ವಿವಿಧ ಕಾರ್ಯಕ್ರಮ ಗಳಲ್ಲಿ ಸಕ್ರೀಯ ವಾಗಿ ಪಾಲ್ಗೊಂಡು ಸಹಬಾಳ್ವೆ, ಸಹಕಾರ,, ಸಹಾಯ ಮುಂತಾದವುಗಳ ಬೆಳವಣಿಗಗೆ ಮತ್ತು ನಮ್ಮ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಪಣ ತೊಡುವೆ .

*ಸಿ.ಜಿ‌ ವೆಂಕಟೇಶ್ವರ*
*ಗೌರಿಬಿದನೂರು*

ಮರಿಬೇಡ ( ಭಾವಗೀತೆ)

ಭಾವಗೀತೆ

*ಮರಿಬೇಡ*

ಕುಣಿಯೋಣ ಬಾ ಗೆಳತಿ
ನಲಿಯೋಣ  ಬಾ  ಗೆಳತಿ |ಪ|

ನೀ ನನ್ನ ಬಾಳಸಂಗಾತಿ
ನೀಡುವೆ ಬಾ ಸಂಪ್ರೀತಿ
ನೋವಿರಲಿ ನಲಿವಿರಲಿ
ಪ್ರೀತಿಯು ಉಕ್ಕುತಿರಲಿ |೧|

ಕಷ್ಟ ಬಂದರೆ  ನನಗಿರಲಿ
ಸುಖ ನಿನಗೆ ಮೀಸಲಿರಲಿ
ಸಖನ ಸಂಗವ ಮರಿಬೇಡ
ಸಖಿ ನನ್ನನ್ಮೇ ನೀ ನೋಡ |೨|

ಲೋಕದ ಗೊಡವೆ ಬೇಕಿಲ್ಲ
ಶೋಕದ ಮಾತೇ ತಿಳಿದಿಲ್ಲ
ಟಾಕುಟೀಕಾಗಿ ಬಾಳೋಣ
ಏಕತೆಯಲಿ ನಾವು ಸಾಗೋಣ|೩|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಶೃಂಗಾರ ಶಿವ (ಭಾವಗೀತೆ.ಹೊಸ ಕ್ಯಾಲೆಂಡರ್ ವರ್ಷದ ಮೊದಲ ಪೋಸ್ಟ್ ಶಿವನಿಗೆ ಅರ್ಪಣೆ)



ಭಾವಗೀತೆ

*ಶೃಂಗಾರ ಶಿವ*

ಮಾರನ ಸುಟ್ಟವನಿಗೆ  ಶಿವೆ ಮಾರುಹೋದಳು
ಮೈ ಮನ ಅವನಿಗೊಪ್ಪಿಸಿ   ಜಾರಿಹೋದಳು|ಪ|

ಬಿಸಿಯುಸಿರು ತಾಗಿ ಏನೋ ರೋಮಾಂಚನ
ಇಬ್ಬರ ದೇಹದಿ ಬೆವರೂಪದಿ ಗಂಗೆಆಗಮನ
ವಶಪಡಿಸಿಕೊಳ್ಳಲು ಹರನು ಪರವಶನಾದನು
ಊಳಿಟ್ಟ ಘೀಳಿಟ್ಟ ಹರ ಮದ್ದಾನೆಯಾದನು|೧|

ಶಿವಲೋಕದಲಿ ಹೊಸ ಲೋಕ ನೋಡಿದರು
ವಾತ್ಸಯಾನನಿಗೆ  ಕಾಮಾಸೂತ್ರ ಹೇಳಿದರು
ಅತಿಕಾಲ ಮೈಮರೆತು ರತಿಮನ್ಮಥರಾದರು
ರಸಗಳಲಿ ಶೃಂಗಾರ ಶ್ರೇಷ್ಠವೆಂದು ತೋರಿದರು|೨|

ಅಧರಾಮೃತ ಸವಿದು ಉದರ ಬಿಸಿಯಾಯಿತು
ಇಬ್ಬರ ಮೈಶಾಖದಲಿ  ನಾಗ ಬುಸ್ ಎಂದಿತು
ಶಿವನು ಮನ್ಮಥನ  ಬಾಣವ  ಬಿಟ್ಟೇ ಬಿಟ್ಟನು
ಶೃಂಗಾರದ ರಸ ತೊಟ್ಟಿಕ್ಕಿಸುತ  ಮೊರೆದನು|೩|

*ಸಿ.ಜಿ .ವೆಂಕಟೇಶ್ವರ*
*ಗೌರಿಬಿದನೂರು*