04 May 2024

ನಮ್ಮುಳಿವಿಗಾಗಿ ಬೆಳೆಸೋಣ ಮರ ಗಿಡ.


 


ನಮ್ಮುಳಿವಿಗಾಗಿ ಬೆಳೆಸೋಣ ಮರ ಗಿಡ.


ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ಒಂದು ಚಿತ್ರ ನನ್ನ ಗಮನ ಸೆಳೆಯಿತು. ಬಹುಶಃ ನೀವೂ ಅದನ್ನು ಗಮನಿಸಿರಬಹುದು. ಆ ಚಿತ್ರದಲ್ಲಿ  ರಸ್ತೆಗಳಲ್ಲಿ ಬೀದಿ ದೀಪಗಳ ಕಂಬಗಳ ಮೇಲೆ ಬೀದಿ ದೀಪದ ಜೊತೆಯಲ್ಲಿ ದೊಡ್ಡ ಫ್ಯಾನ್ ಅಳವಡಿಸಲಾಗಿತ್ತು.ಆ  ಚಿತ್ರದ ಅಡಿಬರಹ ಹೀಗಿತ್ತು.  ಮರಗಳ ಕಡಿದ  ತಪ್ಪಿಗೆ  ಇನ್ನೂ ಕೆಲವೇ ದಿನಗಳಲ್ಲಿ ಈ ಪರಿಸ್ಥಿತಿ ಬರುತ್ತದೆ ಎಚ್ಚರ!


ಕೃತಕವಾಗಿ ಭುವಿಯನು  ತಂಪುಮಾಡಲು ಸಾಧ್ಯವೇನು?|

ಎಲ್ಲಿ ತರುವಿರಿ ಈ ಧರೆಗೆ 

ದೊಡ್ಡದಾದ  ಫ್ಯಾನು?||


ಹೌದಲ್ಲವಾ ಇದ್ದ ಬದ್ದ ಮರಗಿಡ ಕಡಿದು ರಸ್ತೆ, ರೈಲು, ಕಟ್ಟಡ ಕಟ್ಟಲು ನಾವು ಮಾರಣ ಹೋಮ ಮಾಡಿದ ಮರಗಳ ಸಂಖ್ಯೆಗೆ ಲೆಕ್ಕವೇ ಇಲ್ಲ.ಅದರ ಪರಿಣಾಮ ಈಗ ಅನುಭವಿಸುತ್ತಿದ್ದೇವೆ.


ಕೆಲ ದೇಶಗಳಲ್ಲಿ ಪರಿಸರ

ಸಮತೋಲನದಲ್ಲಿದೆ ಕಾರಣ

ಅಲ್ಲಿ ಸಾಕಷ್ಟು ಕಾಡಿದೆ|

ನಮ್ಮ ದೇಶದಲ್ಲಿ ಮರ ಗಿಡ

ಕಡಿದ ಪರಿಣಾಮವಾಗಿ 

ಬಿಸಿಗಾಳಿ ನಮ್ಮ ಕಾಡಿದೆ||


ಈ ಬಿರು ಬೇಸಿಗೆಯ  ಇಂದಿನ ದಿನಗಳಲ್ಲಿ ಕೂಲರ್‌ಗಳು, ಫ್ಯಾನ್‌ಗಳು ಇತ್ಯಾದಿಗಳ ಸಹಾಯದಿಂದ ಜನರು ತಮ್ಮ ಜೀವನವನ್ನು ಕಳೆಯುತ್ತಿದ್ದೇವೆ.  ಇದು ನಾವೇ ಮಾಡಿದ  ತಪ್ಪಿಗೆ ಪ್ರಾಯಶ್ಚಿತ್ತ.  ಇನ್ನೂ ಬರುವ ಸಮಯವು ತುಂಬಾ ಭಯಾನಕವಾಗಿರುತ್ತದೆ.  ಇದು ಊಹಿಸಲು ಅಸಾಧ್ಯವಾಗಿದೆ. ಆದ್ದರಿಂದ ಮುಂಬರುವ ಮಳೆಗಾಲದಲ್ಲಿ ನಾವೆಲ್ಲರೂ ನಮ್ಮ ಸುತ್ತಮುತ್ತ 2 ಸಸಿಗಳನ್ನು  ನೆಡೋಣ ಬರೀ ಸಸಿ ನೆಟ್ಟರೆ ಸಾಲದು ಅದು ಮರವಾಗುವವರೆಗೆ ನಮ್ಮ ಮಕ್ಕಳಂತೆ ಹಾರೈಕೆ ಮಾಡಬೇಕಿದೆ.


ಮರಗಿಡ ಕಡಿದು

ಕಟುಕರಾಗದೆ

ಪರಿಸರ ಉಳಿಸಲು

ಕಟಿಬದ್ದರಾದರೆ

ಭುವಿಯೆ ಸ್ವರ್ಗವು

ನೋಡು ಶ್ರೀದೇವಿತನಯ.





  ಇಂದು  ಭಾರತದ ಜನಸಂಖ್ಯೆಗೆ ಅನುಗುಣವಾಗಿ ಸುಮಾರು 400 ರಿಂದ 500 ಕೋಟಿ ಮರಗಳ ಅಗತ್ಯವಿದೆ. ಪರಿಸರ ತಜ್ಞರ ಪ್ರಕಾರ ನಮ್ಮ ದೇಶದಲ್ಲಿ ಶೇಕಡಾ 3೦ ರಷ್ಟಾದರೂ ಕಾಡಿರಬೇಕು.ಆದರೆ ಅದು ಪ್ರಸ್ತುತ ಇಪ್ಪತ್ತರ ಆಸುಪಾಸಿನಲ್ಲಿದೆ ಅದರ ಪರಿಣಾಮ ಅತಿಯಾದ ಬಿಸಿಲು ಅಕಾಲಿಕ ಮಳೆ ಋತುವಿನಲ್ಲಿ ಏರುಪೇರು. ತಂತ್ರಜ್ಞಾನದ ಬಳಕೆಯಿಂದ ಸಂಪತ್ತಿನ ವಿವೇಚನಾರಹಿತ ಬಳಕೆಯಿಂದ   ಬದುಕನ್ನು ಹುಡುಕುತ್ತಾ ನಾವು ಸಾವಿಗೆ ಎಷ್ಟು ಹತ್ತಿರ ಬಂದಿದ್ದೇವೆ?  ಪರಿಸ್ಥಿತಿ ಹೀಗೆ ಮುಂದುವರೆದರೆ   45 °C ನಿಂದ 50 °C ತಾಪಮಾನ ಸಾಮಾನ್ಯವಾಗುತ್ತದೆ.ಮುಂದೆ ಇದು 55 °C ನಿಂದ 60 °C ಗೆ ಏರಲು  ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮಾನವರು 56 ರಿಂದ 57 °C ನಲ್ಲಿ ಬದುಕುವುದಿಲ್ಲ. ಆದ್ದರಿಂದ ಇದನ್ನು ಅರ್ಥಮಾಡಿಕೊಳ್ಳೋಣ  ಮತ್ತು ಈಗಿನಿಂದ ಸಸ್ಯಗಳನ್ನು ನೆಡಲು ಪ್ರಾರಂಭಿಸೋಣ. 


ಸಮಯ ಕಳೆದದ್ದು ಸಾಕು

ಬೇಗ ಬಾರ|

ನಮ್ಮುಳಿವಿಗಾಗಿ ಬೆಳೆಸೋಣ

ಗಿಡ ಮರ||


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಹಾಗೂ ಸಾಹಿತಿಗಳು

ತುಮಕೂರು

9900925529


22 April 2024

ಚೊಂಬು .ಹನಿಗವನ

 


ಚೊಂಬು


ಇನ್ನೂ ಕಾಲ ಮಿಂಚಿಲ್ಲ

ಚೆನ್ನಾಗಿ ಆಡ್ತಾರೆ 

ಆರ್ ಸಿ ಬಿ ನಂಬು|

ಖಂಡಿತವಾಗಿಯೂ

ತಂದೇ ತರ್ತಾರೆ ಚೊಂಬು||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

21 April 2024

ಭೂದಿನ 2024


 


ಭೂದಿನ 


ಜಗತ್ತಿನ ಎಲ್ಲ ದೇಶಗಳು ಈ ವರ್ಷದ ಜಾಗತಿಕ ತಾಪಮಾನದ ತೊಂದರೆಗಳಿಂದ ಬಳಲಿದ್ದಾರೆ ಎಂದರೆ ತಪ್ಪಾಗಲಾರದು. ಅಕಾಲಿಕ ಮಳೆ ,ಋತುಗಳ  ಏರುಪೇರು, ಉಷ್ಣತೆಯಲ್ಲಿ ಗಣನೀಯ ಹೆಚ್ಚಳ ಇವು ನಾವು ಪ್ರಪಂಚದಾದ್ಯಂತ ಕಾಣುತ್ತಿರುವ ಸಾಮಾನ್ಯ ಸಂಗತಿಗಳು. ಈಗೇಕೆ? ಎಂದು ಪ್ರಶ್ನೆ ಮಾಡಿದರೆ ಬೆರಳು ನಮ್ಮ ಕಡೆಗೆ ತಿರುತ್ತದೆ.

ಈ ನಿಟ್ಟಿನಲ್ಲಿ ಪ್ರತಿವರ್ಷ ಆಚರಿಸಲಾಗುವ ಭೂದಿನದಂದು ನಾವು ಚಿಂತನ ಮಂಥನ ಮಾಡಬೇಕು.

ಪ್ರತಿವರ್ಷ ಭೂ ದಿನವನ್ನು  ಏಪ್ರಿಲ್ 22 ರಂದು ಜಗತ್ತಿನ ಎಲ್ಲಾ ಕಡೆ ಆಚರಿಸಲಾಗುತ್ತದೆ.  ಮೊದಲ ಬಾರಿಗೆ ಏಪ್ರಿಲ್ 22, 1970 ರಂದು ಆಚರಿಸಲಾಯಿತು.

ಪ್ರತಿವರ್ಷ ಒಂದೊಂದು ಥೀಮ್ ಆಧಾರದಲ್ಲಿ ಭೂ ದಿನವನ್ನು ಆಚರಿಸಲಾಗುತ್ತದೆ.


  "ಪ್ಲಾನೆಟ್ ವರ್ಸಸ್ ಪ್ಲ್ಯಾಸ್ಟಿಕ್ಸ್." ಇದು 2024 ರ ಥೀಮ್ ಆಗಿದ್ದು 2040 ರ ಹೊತ್ತಿಗೆ ಶೇಕಡಾ60 ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ಇದಕ್ಕೆ 60×40 ಎಂದು ಸಂಕ್ಷಿಪ್ತವಾಗಿ ಕರೆಯಲಾಗಿದೆ.


ಭೂ ದಿನದ ಹಿನ್ನೆಲೆ.

1969 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಯುನೆಸ್ಕೋ ಸಮ್ಮೇಳನದಲ್ಲಿ   ಶಾಂತಿ ಕಾರ್ಯಕರ್ತ ಜಾನ್ ಮೆಕ್‌ಕಾನ್ನೆಲ್ ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ಒಂದು ದಿನವನ್ನು ಪ್ರಸ್ತಾಪಿಸಿದರು. ಇದನ್ನು ಮೊದಲು ಮಾರ್ಚ್ 21, 1970 ರಂದು ಉತ್ತರ ಗೋಳಾರ್ಧದಲ್ಲಿ ವಸಂತಕಾಲದ ಮೊದಲ ದಿನ ಆಚರಿಸಲಾಗುತ್ತದೆ. ಪ್ರಕೃತಿಯ ಈ ದಿನವನ್ನು ನಂತರ ಮ್ಯಾಕ್‌ಕಾನ್ನೆಲ್ ಬರೆದ ಘೋಷಣೆಯಲ್ಲಿ ಅನುಮೋದಿಸಲಾಯಿತು ಮತ್ತು ಯುನೈಟೆಡ್ ನೇಷನ್ಸ್‌ನಲ್ಲಿ ಪ್ರಧಾನ ಕಾರ್ಯದರ್ಶಿ ಯು ಥಾಂಟ್ ಸಹಿ ಮಾಡಿದರು. ಒಂದು ತಿಂಗಳ ನಂತರ ಯುನೈಟೆಡ್ ಸ್ಟೇಟ್ಸ್ ಸೆನೆಟರ್  ಗೇಲಾರ್ಡ್ ನೆಲ್ಸನ್ ಏಪ್ರಿಲ್ 22, 1970 ರಂದು ರಾಷ್ಟ್ರವ್ಯಾಪಿ ಪರಿಸರ ಆಂದೋಲನ ಕೈಗೊಳ್ಳುವ   ಕಲ್ಪನೆಯನ್ನು ಪ್ರಸ್ತಾಪಿಸಿದರು. ಅವರು ಯುವ ಕಾರ್ಯಕರ್ತ ಡೆನಿಸ್ ಹೇಯ್ಸ್ ಅವರನ್ನು ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಿಕೊಂಡರು. ನೆಲ್ಸನ್ ಮತ್ತು ಹೇಯ್ಸ್ ಈವೆಂಟ್ ಅನ್ನು "ಅರ್ಥ್ ಡೇ" ಎಂದು ಮರುನಾಮಕರಣ ಮಾಡಿದರು. ಡೆನಿಸ್ ಮತ್ತು ಅವರ ಸಿಬ್ಬಂದಿ  ಸಂಘಟಿಸಿದ  ಕಾರ್ಯಕ್ರಮದಲ್ಲಿ  20 ದಶಲಕ್ಷಕ್ಕೂ ಹೆಚ್ಚು ಜನರು ಬೀದಿಗಳಲ್ಲಿ ಸೇರಿದರು, ಮತ್ತು ಮೊದಲ ಭೂ ದಿನವು ಮಾನವ ಇತಿಹಾಸದಲ್ಲಿ ಅತಿದೊಡ್ಡ ಏಕದಿನ ಪ್ರತಿಭಟನೆಯಾಗಿ ಉಳಿಯುವಂತೆ ಮಾಡಿದರು. 

 2016 ರ ಭೂ ದಿನವು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಅಂದು ದಿನದಂದು, ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಚೀನಾ ಮತ್ತು 120 ಇತರ ದೇಶಗಳು ಈ ಒಪ್ಪಂದಕ್ಕೆ  ಸಹಿ ಹಾಕಿದವು. 

ಇದುವರೆಗಿನ ಭೂ ದಿನದ ಆಚರಣೆಯ ಫಲಶ್ರುತಿ ಏನು ಎಂಬುದನ್ನು ಕೆಲವರು ಪ್ರಶ್ನಿಸುತ್ತಾರೆ.

ಕ್ಲೀನ್ ಏರ್ ಆಕ್ಟ್‌ನಂತಹ ಹಲವಾರು ಪರಿಸರ ಕಾನೂನುಗಳನ್ನು ಸ್ಥಾಪಿಸಲಾಯಿತು ಅಥವಾ ಗಮನಾರ್ಹವಾಗಿ ಬಲಪಡಿಸಲಾಯಿತು.

ಇತ್ತೀಚಿನ ಘಟನೆಗಳು ನೂರಾರು ಮಿಲಿಯನ್ ಮರಗಳನ್ನು ನೆಡುವುದು, ಸುಸ್ಥಿರ ಕೃಷಿ ಪದ್ಧತಿಗಳೊಂದಿಗೆ ರೈತರನ್ನು ಬೆಂಬಲಿಸುವುದು ಮತ್ತು ಪ್ರಪಂಚದಾದ್ಯಂತ ಹವಾಮಾನ ಸಾಕ್ಷರತಾ ಯೋಜನೆಗಳನ್ನು ಪ್ರಾರಂಭಿಸುವುದು ಸೇರಿವೆ.

ನಾವೂ ಸಹ ಭೂದಿನವನ್ನು ಪರಿಸರಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸೋಣ.


ಮರಗಿಡ ಕಡಿದು

ಕಟುಕರಾಗದೆ

ಪರಿಸರ ಉಳಿಸಲು

ಕಟಿಬದ್ದರಾದರೆ

ಭುವಿಯೆ ಸ್ವರ್ಗವು

ನೋಡು ಶ್ರೀದೇವಿತನಯ


ಸಿಹಿಜೀವಿ ವೆಂಕಟೇಶ್ವರ

ತುಮಕೂರು





ಸಂತಸದ ಮಾರ್ಗ

 



ಸಂತಸದ ಮಾರ್ಗ 


ಎಂದಿಗೂ ಅಳಲು ಬೇಡ

ಜಗಳವಾಡಲೇ ಬೇಡ 

ಇತರರ ಕೆಣಕಬೇಡ 

ಇದೇ ಸಂತಸದ ಮಾರ್ಗ ನೋಡ


ಸಿಹಿಜೀವಿ ವೆಂಕಟೇಶ್ವರ

ತುಮಕೂರು 

ಇಂಧನ ,ಧನ .(ಹನಿಗವನ)

 


ಇಂಧನ 


ಪ್ರಮಾಣಿಕತೆ, ಬದ್ದತೆ,ಮೌಲ್ಯಗಳು

ಪ್ರಜಾಪ್ರಭುತ್ವ ಮತ್ತು ಚುನಾವಣೆಗೆ ಇಂಧನ|

ಈಗೀಗ ಇವೆಲ್ಲವೂ ಗೌಣ 

ಇವಿರದಿದ್ದರೂ ಚಿಂತೆಯಿಲ್ಲ 

ಇದ್ದರೆ  ಸಾಕು ಧನ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು