ನವೆಂಬರ್ ಮಾಸದ ನೆನೆಕೆಗಳು...
ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು
"ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಎಂಬ ಆಶಯ ಗೀತೆಯನ್ನು ಬರೆದು ಕರ್ನಾಟಕದ ಏಕೀಕರಣಕ್ಕೆ ಮುನ್ನುಡಿ ಬರೆದ ಚೇತನವೇ ಹುಯಿಲಗೋಳ ನಾರಾಯಣರಾಯರು. ಆ ನಿಟ್ಟಿನಲ್ಲಿ ಹೋರಾಟ ಮಾಡಿದ ಹಲವಾರು ಧೀಮಂತರಲ್ಲಿ ಆಲೂರು ವೆಂಕಟರಾಯರು ಓರ್ವರು.
ಭಾರತೀಯ ಇತಿಹಾಸಕಾರ, ಬರಹಗಾರ ಮತ್ತು ಪತ್ರಕರ್ತ. ಪ್ರತ್ಯೇಕ ಕರ್ನಾಟಕ ರಾಜ್ಯದ ಉದ್ದೇಶಕ್ಕಾಗಿ ಅವರು ನೀಡಿದ ಕೊಡುಗೆಗಾಗಿ ಅವರನ್ನು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಕುಲಪುರೋಹಿತ ಅಥವಾ ಕನ್ನಡ ಕುಟುಂಬದ ಪ್ರಧಾನ ಅರ್ಚಕ ಎಂದು ಹೆಸರಾಗಿದ್ದಾರೆ.
ಇವರ ಮೂಲ ಹೆಸರು ವೆಂಕಟರಾವ್ ಆದರೂ ಇವರು ವೆಂಕಟರಾಯರು ಎಂದೇ ಜನಜನಿತ.
ಭಾರತೀಯ ಇತಿಹಾಸಕಾರರಾಗಿ,ಬರಹಗಾರರಾಗಿ, ಮತ್ತು ಪತ್ರಕರ್ತರಾಗಿ ಚಿರಪರಿಚಿತರು. ಪ್ರತ್ಯೇಕ ಕರ್ನಾಟಕ ರಾಜ್ಯದ ಉದ್ದೇಶಕ್ಕಾಗಿ ಅವರು ನೀಡಿದ ಕೊಡುಗೆಗಾಗಿ ಅವರನ್ನು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಕುಲಪುರೋಹಿತ ಎಂದು ಪೂಜಿಸುತ್ತಿದ್ದೇವೆ.
ವೆಂಕಟರಾವ್ ಅವರು ಜುಲೈ 12, 1880 ರಂದು ಕಂದಾಯ ಇಲಾಖೆಯಲ್ಲಿ ಸಿರಸ್ತೇದಾರ್ ಆಗಿದ್ದ ಭೀಮಾ ರಾವ್ ಅವರಿಗೆ ಜನಿಸಿದರು. ಅವರು ಕರ್ನಾಟಕದ ಬಿಜಾಪುರದಲ್ಲಿ ಸಾಂಪ್ರದಾಯಿಕ ದೇಶಸ್ಥ ಮಾಧ್ವ ಬ್ರಾಹ್ಮಣ ಕುಟುಂಬದವರು. ಅವರು ಫರ್ಗುಸನ್ ಕಾಲೇಜಿನಲ್ಲಿ ಬಿಎ ಮತ್ತು ಎಲ್ಎಲ್‌ಬಿ ಪದವಿಗಾಗಿ ಅಧ್ಯಯನ ಮಾಡಿದರು, ಅಲ್ಲಿ ಅವರು ವಿನಾಯಕ ದಾಮೋದರ್ ಸಾವರ್ಕರ್, ಸೇನಾಪತಿ ಬಾಪಟ್ ಮತ್ತು ಬಾಲಗಂಗಾಧರ ತಿಲಕ್ ಅವರ ಸಂಪರ್ಕಕ್ಕೆ ಬಂದರು. ರಾವ್ ಅವರು ತಿಲಕರ ಆತ್ಮೀಯ ಸ್ನೇಹಿತರಾಗಿದ್ದರು ಮತ್ತು ಅವರ ಗೀತ ರಹಸ್ಯವನ್ನು ಕನ್ನಡಕ್ಕೆ ಅನುವಾದಿಸಿದರು.
ಧಾರವಾಡದಲ್ಲಿ ಆರಂಭದ ಶಿಕ್ಷಣ ಮುಗಿಸಿದ ವೆಂಕಟರಾಯರು ಪುಣೆಯ ಫರ್ಗ್ಯೂಸನ್ ಕಾಲೇಜಿನಿಂದ 1904ರಲ್ಲಿ ಬಿ.ಎ. ಪದವಿ ಪಡೆದರು. 1905ರಲ್ಲಿ ಮುಂಬಯಿಯಲ್ಲಿ ಎಲ್.ಎಲ್.ಬಿ. ಪದವಿಯನ್ನು ಗಳಿಸಿ, ಧಾರವಾಡಕ್ಕೆ ಮರಳಿದರು.
ಸೇನಾಪತಿ ಬಾಪಟ್ ರವರು ಮತ್ತು ವೀರ್ ಸಾವರ್ಕರ್ ರವರು ಇವರ ಸಹಾಧ್ಯಾಯಿಗಳಾಗಿದ್ದರು.
ಒಮ್ಮೆ ಬೇಸಿಗೆ ರಜೆಯಲ್ಲಿ, ನವ ವೃಂದಾವನ, ಆನೆಗೊಂದಿಗಳನ್ನು ಸಂದರ್ಶಿಸಿ ಅಲ್ಲಿಂದ ಹಂಪಿಗೆ ಹೋದರು. ಹಂಪಿಯ ಅವಶೇಷಗಳು ಅವರ ಮನಸ್ಸಿನ ಮೇಲೆ ಅಪೂರ್ವ ಪರಿಣಾಮ ಉಂಟುಮಾಡಿದವು. ಅವರ ಮಾತಿನಲ್ಲೇ ಹೇಳುವುದಾದರೆ: "ನಮ್ಮ ವಿಜಯನಗರವು ಅಲ್ಲಿ ಪ್ರತ್ಯಕ್ಷವಾಗಿಯೂ ವಿಸ್ತಾರವಾಗಿಯೂ ನನ್ನ ಮುಂದೆ ಬಿದ್ದಿದೆ. ಆ ದರ್ಶನವು ನನ್ನ ಮನದಲ್ಲಿ ವಿದ್ಯುತ್ತಿನ ಸಂಚಾರವನ್ನು ಮೂಡಿಸಿತು. ಚಲನಚಿತ್ರ ಪಟದಲ್ಲಿ ವಿದ್ಯುದ್ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡಹತ್ತಿತು. ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿದ ತರಂಗಗಳಿಗೆ ಇಂಬುಗೊಟ್ಟಿತು. ಹೃದಯ ಸಮುದ್ರವು ಅಲ್ಲೋಲ ಕಲ್ಲೋಲವಾಯಿತು. ಆ ದಿವಸವು ನನ್ನ ಜೀವನದ ಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು." ಇದರಿಂದಾಗಿ ಆಲೂರರು ಕರ್ನಾಟಕದ ಇತಿಹಾಸ, ಸಾಹಿತ್ಯಗಳ ವ್ಯಾಸಂಗಕ್ಕೆ ತೊಡಗಿದರು.
ಆ ಕಾಲದಲ್ಲಿ ಮುಂಬಯಿ ಪ್ರಾಂತದಲ್ಲಿದ್ದ ಕನ್ನಡ ಪ್ರದೇಶಗಳಲ್ಲಿ ಮರಾಠಿಯದೆ ಪ್ರಾಬಲ್ಯ. ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಪ್ರವೇಶಿಸಿದರು. ಸಂಘದ ಸ್ಥಿತಿ ಅಷ್ಟೊಂದು ಸಮರ್ಪಕವಾಗಿಲ್ಲದ ಕಾರಣ ಅದರ ಕಾರ್ಯಭಾರವನ್ನು ಹೊತ್ತುಕೊಂಡರು. ಕನ್ನಡಿಗರನ್ನು ಜಾಗೃತಗೊಳಿಸಲು ವೆಂಕಟರಾಯರು 1906ರಲ್ಲಿ ವಾಗ್ಭೂಷಣ ಎಂಬ ಪತ್ರಿಕೆ ಆರಂಭಿಸಿದರು. ತಮ್ಮ ಸಾಮರ್ಥ್ಯದಿಂದ ಆ ಪತ್ರಿಕೆಗೆ ಹೊಸ ರೂಪವನ್ನು ಕೊಟ್ಟರು. ವಕೀಲಿ ವೃತ್ತಿಯನ್ನು ತೊರೆದು ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದರು. 1922 ನವೆಂಬರ್ 4 ರಂದು ಜಯಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆ ಆರು ವರ್ಷಗಳವರೆಗೆ ನಡೆಯಿತು. ಈ ಪತ್ರಿಕೆಗೆ ಬೆಟಗೇರಿ ಕೃಷ್ಣಶರ್ಮ, ದ.ರಾ.ಬೇಂದ್ರೆ ಮೊದಲಾದ ಶ್ರೇಷ್ಠ ಸಾಹಿತಿಗಳು ಸಹಸಂಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದ್ದರು. ಕನ್ನಡಿಗ, ಕರ್ಮವೀರ ಮೊದಲಾದ ಪತ್ರಿಕೆಗಳ ಸಂಪಾದಕತ್ವವನ್ನು ಸಹ ವಹಿಸಿಕೊಂಡಿದ್ದರು.
ಅಂದಿನ ದಿನಗಳಲ್ಲಿ ಕನ್ನಡದಲ್ಲಿ ಪುಸ್ತಕಗಳ ಕೊರತೆಯನ್ನು ನೀಗಿಸಲು ಕರ್ನಾಟಕದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಎರಡು ಬಾರಿ ಗ್ರಂಥಕರ್ತರ ಸಮಾವೇಶವನ್ನು ಕರೆದರು. ಮೂರನೆಯ ಅಧಿವೇಶನ ಬೆಂಗಳೂರಿನಲ್ಲಿ ನಡೆಸಬೇಕೆಂಬ ಆಶಯ ರೂಪುಗೊಂಡಿದ್ದು ಆರು ವರ್ಷಗಳ ನಂತರ. 1915ರಲ್ಲಿ ನಡೆದ ಆ ಘಟನೆ ಕರ್ನಾಟಕ ಸಾಹಿತ್ಯ ಪರಿಷತ್ತಿಗೆ ನಾಂದಿಹಾಡಿತು. ಧಾರವಾಡದಲ್ಲಿದ್ದುಕೊಂಡೆ ಆಲೂರರು ಈ ಕಾರ್ಯವನ್ನು ಆಗು ಮಾಡಿದರು.
ಆಲೂರು ವೆಂಕಟರಾಯರು ಆ ಕಾಲದ ಸಾಮಾಜಿಕ ಚಟುವಟಿಕೆಗಳ ಮುಂಚೂಣಿಯಲ್ಲಿದ್ದರು. 1921ರಲ್ಲಿ ಮಹಾತ್ಮ ಗಾಂಧಿಯವರು ಆರಂಭಿಸಿದ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕದ ಏಕೀಕರಣ, ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾನಿಲಯದ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬದ ಯೋಜನೆ, ಕರ್ನಾಟಕ ವಿದ್ಯಾವರ್ಧಕ ಸಂಘ, ಈ ಎಲ್ಲಾ ಯೋಜನೆಗಳಲ್ಲಿ ಆಲೂರು ವೆಂಕಟರಾಯರು ಮಹತ್ವದ ಪಾತ್ರ ವಹಿಸಿದ್ದಾರೆ. ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಕಾಶಕರಿಗೆ ಅನುಕೂಲವಾಗಲು ಕರ್ನಾಟಕ ಗ್ರಂಥ ಮಂಡಳಿಯನ್ನು ಸ್ಥಾಪಿಸಿದ್ದರು.
ಆಲೂರರ ಉದ್ಯಮಶೀಲತೆ ಅಸಾಧಾರಣವಾದದ್ದು. ತಾವು ಸ್ಥಾಪಿಸಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿಪರ ತರಬೇತಿ ನೀಡುವ ಉದ್ದೇಶದಿಂದ ಬೆಂಕಿಪೆಟ್ಟಿಗೆ ಕಾರ್ಖಾನೆ, ಪೆನ್ಸಿಲ್ ಕಾರ್ಖಾನೆ, ಉಡುಗೆ ಫ್ಯಾಕ್ಟರಿ, ಡ್ರಾಯಿಂಗ್ ಪೆಯಿಂಟಿಂಗ್ ಕ್ಲಾಸು, ಮತ್ತು ಪ್ರಿಂಟಿಂಗ್ ಕ್ಲಾಸುಗಳನ್ನೂ ಪ್ರಾರಂಭಿಸಿದರು. ಆಗಿನ ಬ್ರಿಟಿಷ್ ಆಳ್ವಿಕೆಯ ಹತ್ತಿಕ್ಕುವ ನೀತಿಯಿಂದಾಗಿ ಈ ಸಂಸ್ಥೆಯನ್ನು ಮುಚ್ಚಬೇಕಾಗಿ ಬಂತು. ನಂತರ ಸಕ್ಕರೆ ಕಾರ್ಖಾನೆ, ಬೆಳಗಾವಿಯ ಹತ್ತಿರ ಖಾನಾಪುರದಲ್ಲಿ ಹಂಚಿನ ಕಾರ್ಖನೆ,ಹೊಳೆ ಆಲೂರಿನಲ್ಲಿ ಹತ್ತಿಯ ಮಿಲ್ಲು, ಹೀಗೆ ಒಂದಾದಮೇಲೊಂದು ಉದ್ಯಮಗಳನ್ನು ಹುಟ್ಟುಹಾಕಿದರು. ನಂತರ ಮಿತ್ರರೊಂದಿಗೆ ಅಗ್ರಿಕಲ್ಚರಲ್ ಸೊಸೈಟಿ ತೆರೆದರು. ನಂತರ ಬಟ್ಟೆ ಅಂಗಡಿ ತೆರೆದರು. ತದನಂತರ ಮ್ಯೂಚುವಲ್ ಹೆಲ್ಪ್ ಫಂಡ್ ತೆರೆದರು. ದುರದೃಷ್ಟವಶಾತ್ ಇವು ಯಾವುದೂ ಯಶಸ್ವಿಯಾಗಲಿಲ್ಲ. ಈ ಪ್ರಯತ್ನಗಳಲ್ಲಿ ಬರಿಯ ಲಾಭ ಮಾಡಿಕೊಳ್ಳುವ ದೃಷ್ಟಿಯಿರದೆ, ಅವೆಲ್ಲವುಗಳಲ್ಲಿ ಒಂದು ವಿಶಿಷ್ಟ ರಾಷ್ಟ್ರೀಯ ಸೊಗಡಿದ್ದು, ಭಾರತದ ಔದ್ಯೋಗಿಕ ಪ್ರಗತಿಯ ಅಂಗವಾಗಿದ್ದವು.
ಆಲೂರರು'ಗತವೈಭವ'ದಲ್ಲಿ ಅಂದು ಕನ್ನಡಕ್ಕೆ ಒದಗಿದ ದುರ್ಗತಿಯನ್ನು ಕೆಳಗಿನ ಮಾತುಗಳಲ್ಲಿ ಖಾರವಾಗಿ ಹೇಳಿದ್ದರು. ಅದು ಇಂದಿಗೂ ಪ್ರಸ್ತುತ.
"ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುವುದಿಲ್ಲವೋ ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ; ದೇಹವಲ್ಲ, ಮೋಟು ಮರ".
ಆಲೂರು ವೆಂಕಟರಾಯರು ಸುಮಾರು ಇಪ್ಪತ್ತೈದು ಕೃತಿಗಳನ್ನು ಬರೆದಿದ್ದು ಕೆಲವು ಇಂತಿವೆ
ಶ್ರೀ ವಿದ್ಯಾರಣ್ಯ ಚರಿತ್ರೆ , ಕರ್ನಾಟಕ ಗತವೈಭವ, ಕರ್ನಾಟಕ ವೀರರತ್ನಗಳು, ಶಿಕ್ಷಣ ಮೀಮಾಂಸೆ, ರಾಷ್ಟ್ರೀಯತ್ವದ ಮೀಮಾಂಸೆ, ಕನ್ನಡಿಗರ ಭ್ರಮನಿರಸನ, ಕರ್ನಾಟಕತ್ವದ ವಿಕಾಸ, ಕರ್ನಾಟಕತ್ವದ ಸೂತ್ರಗಳು, ಸ್ವಾತಂತ್ರ್ಯಸಂಗ್ರಾಮ, ಗೀತಾಪ್ರಕಾಶ, ಗೀತಾಸಂದೇಶ, ಗೀತಾಪರಿಮಳ, ಗೀತಾಭಾವ ಪ್ರದೀಪ, ಶ್ರೀ ಮಧ್ವಾಚಾರ್ಯರ ಮೂಲ ಸಿದ್ಧಾಂತ, ಶ್ರೀ ಮಧ್ವಾಚಾರ್ಯರ ಪೂರ್ಣ ಬ್ರಹ್ಮವಾದ. ಆತ್ಮಕಥನ - ನನ್ನ ಜೀವನ ಸ್ಮೃತಿಗಳು ಎಂಬ ಹೆಸರಿನಲ್ಲಿ ಎರಡು ಭಾಗಗಳಲ್ಲಿ ಪ್ರಕಟಿಸಿದ್ದಾರೆ. ಲೋಕಮಾನ್ಯ ತಿಲಕರ ಗೀತಾ ರಹಸ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಆಲೂರು ವೆಂಕಟರಾಯರು ೧೯೩೦ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದ ಜನತೆ ಇವರಿಗೆ ದೇಶಸೇವಾಧುರೀಣ , ಸ್ವಭಾಷಾರಕ್ಷಕ ಎಂದು ಕರೆದು ಸನ್ಮಾನಿಸಿದೆ. ಅಲ್ಲದೆ ಕರ್ನಾಟಕದ ಕುಲಪುರೋಹಿತ ಎಂದು ಗೌರವಿಸಿದೆ.
ವರಕವಿ ದ.ರಾ. ಬೇಂದ್ರೆಯವರು ಅಲೂರರನ್ನು 'ಕರ್ನಾಟಕದ ಪ್ರಾಣೋಪಾಸಕರು' ಎಂದು ಕರೆದದ್ದು ಅರ್ಥಪೂರ್ಣವಾಗಿದೆ. ಬೇಂದ್ರೆಯವರು ಆಲೂರರ ವೈಶಿಷ್ಟ್ಯವನ್ನು ಹೀಗೆ ಗುರುತಿಸಿದ್ದಾರೆ: "ಬಹುಮುಖವಾಗಿಯೂ, ಏಕನಿಷ್ಠೆಯಿಂದಲೂ, ಅನನ್ಯ ಬುದ್ಧಿಯಿಂದಲೂ, ಸತತ ಅನುಸಂಧಾನದಿಂದಲೂ, ಕರ್ನಾಟಕದ ಸಲುವಾಗಿ ವಿಚಾರ ಮಾಡುವವರೂ, ತದನುಸಾರವಾಗಿಯೇ ಆಚರಿಸಲು ಪ್ರಯತ್ನಿಸುವವರೂ ಹಿರಿಯರಾದ ಕನ್ನಡಿಗರಲ್ಲಿ ಇನ್ನೂ ಇವರೊಬ್ಬರೇ! ಅದೇ ಇವರ ತಪಸ್ಸು. ಇವರ ಅದ್ವಿತೀಯವಾದ ಹೆಸರು ಅದರ ಫಲವು. ಇವರಲ್ಲಿ ಬುದ್ದಿಯ ಏಕಾಗ್ರ ವೃತ್ತಿಗಿಂತ ವ್ಯಾಪಕವೃತ್ತಿಯು ಹೆಚ್ಚು, ಮೂರ್ತಿಪೂಜೆಗಿಂತ ತತ್ವಪೂಜೆಯು ಅಧಿಕ. ಆಚಾರ ನಿಷ್ಠೆಗಿಂತ ವಿಚಾರ ನಿಷ್ಠೆ ಬಹಳ. ರಾಷ್ಟ್ರೀಯ ದೃಷ್ಠಿ ಹೆಚ್ಚು; ರಾಷ್ಟ್ರದರ್ಶನ ಕಡಿಮೆ. ಜನೋದ್ದೀಪನ ಹೆಚ್ಚು, ಜನ ನಿರ್ವಹಣ ಶಕ್ತಿ ಕಡಿಮೆ... ಇವರು ಜನನಾಯಕರಾಗದೆ ನೇತ್ರವಾಗಿದ್ದಾರೆ; ಮುಂದಾಳುಗಳಾಗದೆ ಪ್ರತಿನಿಧಿಗಳಾಗಿದ್ದಾರೆ."
1956 ರ ನವೆಂಬರ್ 1 ರಂದು ಕರ್ನಾಟಕ ಏಕೀಕರಣಗೊಂಡಾಗ ರಾವ್ ಅವರು ಸಂತೋಷಪಟ್ಟರು. ಹಂಪಿಗೆ ಹೋಗಿ ವಿರೂಪಾಕ್ಷ ದೇವಸ್ಥಾನದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಕರ್ನಾಟಕದ ಕುಲಪುರೋಹಿತ ಎಂಬ ಹೆಸರು ಪಡೆದರು. ರಾಷ್ಟ್ರಗೀತೆಯಲ್ಲಿ ಉಲ್ಲೇಖಿಸಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರಿಗೆ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡು ಭಾರತದ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಅದರ ಸೇರ್ಪಡೆ ಬಗ್ಗೆ ಪತ್ರ ಬರೆದಿದ್ದರು. 1963 ರಲ್ಲಿ ರಾಜ್ಯ ರಚನೆಯ ಎಂಟನೇ ವಾರ್ಷಿಕೋತ್ಸವದಂದು ಬೆಂಗಳೂರಿನ ರಾಜಧಾನಿಯಲ್ಲಿ ಅವರನ್ನು ಗೌರವಿಸಲಾಯಿತು.
ರಾವ್ ಅವರು 25 ಫೆಬ್ರವರಿ 1964 ರಂದು ಧಾರವಾಡದ ತಮ್ಮ ನಿವಾಸದಲ್ಲಿ ನಿಧನರಾದರು ಮತ್ತು ನಾಲ್ವರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದರು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529