19 August 2020

ಉದಕದೊಳಗಿನ ಕಿಚ್ಚು. ಕಾದಂಬರಿಯ ಭಾಗ ೧೨

    

"ಏ ಸತೀಶ ಇಬೂತಿ ತಾಂಬ ,ಆ ಕಡೆ ಮೀಸ್ಲು ನೀರು ಐತೆ ನೋಡು ತಗ, ಅರುಷ್ಣ ಕುಂಕುಮ ಹಚ್ಚು ,ಕಾಯ್ ಒಡಿ ಅಲ್ಲೇ ಕನಗ್ಲು ಐದಾವೆ ನೋಡು ಮುಡ್ಸು ,ಊದ್ಗಡ್ಡಿ ತಾಂಬ ಹಚ್ಚ್ಕೊಡ್ತೀನಿ ಟೈಮ್ ಆತು ಒಂಭತ್ತುವರೆ ಒಳಗೆ ಟೈಮ್ ಚೆನ್ನಗೈತಂತೆ ಐತಾರಪ್ಪ ಹೇಳವ್ರೆ ಬೇಗ ಪೂಜೆ ಮಾಡು " ಬಿಳಿಯಪ್ಪ ಹೇಳುತ್ತಲೇ ಇದ್ದ  ಒಂದೇ ಸಮನೆ ಹೇಳುವ ರೀತಿಯ ಕೇಳಿ ಗೊಂದಲಕ್ಕೆ ಒಳಗಾದರೂ ಪೂಜೆ  ಮಾಡುವಲ್ಲಿ ಸತೀಶ ನಿರತನಾಗಿದ್ದ ಕೆಲವೊಮ್ಮೆ ಮನದಲ್ಲೇ ಯಾಕೆ ಇಷ್ಟು ಬೇಗ ಪರೀಕ್ಷೆ ಮುಗಿತೋ ?ಯಾಕೆ ಬೇಗ ರಜಾ ಕೊಟ್ಟರೋ? ಮೂರು ದಿನದಿಂದ ಸುಜಾತ ನೋಡಕ್ಕಾಗಲಿಲ್ಲ ಸ್ಕೂಲ್ ಇದ್ದಿದ್ದರೆ ದಿನಾಲೂ ನೋಡ್ತಿದ್ದೆ.ಯಾವಾಗ ಪಾಸು ಪೇಲು ಹೇಳ್ತಾರೋ ಏನೋ " ಏ ಎಷ್ಟೊತ್ತಲೆ ಎತ್ತಿಗೆ ಪೂಜೆ ಮಾಡು ನಗಕ್ಕೆ ಊದಗಡ್ಡಿ ಬೆಳಗು" ಎಂದು ಬಿಳಿಯಪ್ಪ ಗದರಿದಾಗ ವಾಸ್ತವಕ್ಕೆ ಬಂದು ಪೂಜೆ ಊದುಗಡ್ಡಿ ಬೆಳಗಲು ಶುರುಮಾಡಿದ " ಲೇ ಅದೇನ್ ಪೂಜೆ ಮಾಡಾದ್ ಕಲ್ತಿದೆಯಲೇ ಹಣೆಗೆ ಕುಂಕುಮನೇ ಹಚ್ಕೊಂಡಿಲ್ಲ ಎಂದು ಪೇಪರ್ನಲ್ಲಿರುವ ಕುಂಕುಮ ಹೆಬ್ಬೆರಳಿನಿಂದ  ಹಿಡಿದು ಹಣೆಯ ಉದ್ದಕ್ಕೂ ಬಳಿದ " ಹೇ ಬಿಡು ಮಾಮ ನೀನು ಇಷ್ಟುದ್ದನೇ ಬಳಿಯೋದು" " ಇರಲಿ ಸುಮ್ಕಿರಲ ನೋಡೋ ನಾನು ಹಚ್ಕೊಂಡೆ " ಎಂದು ಹಣೆ ಉದ್ದಕ್ಕೂ ಕುಂಕುಮ ಬಳಿದುಕೊಂಡ  "ನಾವು ಹಿಂದುಗಳು ಕಣ್ಲಾ ಕುಂಕುಮ ಹಚ್ಕೊಳ್ಳಾಕೆ ನಾಚ್ಕೆ ಯಾಕೆ" ಅಂದ .ಬಾ ಇತ್ಲಾಗೆ ಹೊನ್ನರಾ ಹೊಡೆದು ಬತ್ತಿನಿ ಬಿಡು ಆ.. ಎಂದು ಎಡಗೈಯಲ್ಲಿ ಮಡಿಕೆಯ ಮೇಣಿ ಹಿಡಿದು ಬಲಗೈಯಲ್ಲಿ ಬಾರಿಕೋಲು ಹಿಡಿದು ಹೊಲದಲ್ಲಿ ಉಳಲು ಹೊರಟ ಬಿಳಿಯಪ್ಪ.

ಸತೀಶನಿಗೂ ಹೊನ್ನಾರ ಎಂದರೆ ಏನೆಂದು‌ ಗೊತ್ತಿರಲಿಲ್ಲ  ಬಿಳಿಯಪ್ಪ ಮನೆಯಿಂದ ಹೊಲಕ್ಕೆ ಬರುವ ದಾರಿಯಲ್ಲಿ ಹೇಳಿದ್ದ 

ಉಗಾದಿ ಹಬ್ಬದ ನಂತರ ‌ಬರುವ ಶ್ರೀರಾಮ ನವಮಿ ಹಬ್ಬದಂದು ಒಳ್ಳೆಯ ದಿನವಂತೆ  ಅಂದು ಒಳ್ಳೆಯ ಮಹೂರ್ತ ನೋಡಿ ಅವತ್ತು ಭೂಮಿ ತಾಯಿ ಪೂಜೆ ಮಾಡಿ ‌ಒಂದು ಗೀಟಾದ್ರೂ ಬೇಸಾಯ ಹೊಡೆದರೆ ಆ ವರ್ಷದ ಫಸಲು ಹೊನ್ನಂತೆ ಬೆಳೆದು ರೈತರಿಗೆ ಅನುಕೂಲವಾಗುತ್ತದೆ ಎಂಬ ನಂಬಿಕೆ ಇದೂ ಬಹುತೇಕ ನಿಜವೂ ಆಗಿತ್ತು. ಆದ್ದರಿಂದ ಊರಿನ ಎಲ್ಲಾ ರೈತರು ಏನು ಮರೆತರೂ  ಹೊನ್ನಾರ ಹೊಡೆವುದನ್ನು ಮರೆಯುವುದಿಲ್ಲ .


ದೊಡ್ಡಪ್ಪಗಳ ಕೆಂಗಲ ಹೊಲದಲ್ಲಿ ಮಡಿಕೆ ಹೊಡೆದಷ್ಟು ಬೆಣಚುಕಲ್ಲು ಭೂಮಿಯಿಂದ ತೇಲುತ್ತಲೇ ಇದ್ದವು .ಬೆಳಿಗ್ಗೆ ತಿಮ್ಮಕ್ಕ ಸೇರಿ ಸರಸ್ವತಜ್ಜಿ ಬಿಟ್ಟು  ಮನೆಯವರೆಲ್ಲ ಹೋಗಿ ತಂಪು ಹೊತ್ತಿನಲ್ಲಿ ದೊಡ್ಡ ಕಲ್ಲುಗಳನ್ನು ಒಂದೆಡೆ ಗುಡ್ಡೆ ಹಾಕಿ ಒಂದು ಈಚಲ ತೊಟ್ಟಿಯಲ್ಲಿ ತುಂಬಿ ತಲೆಯ ಮೇಲೆ ಹೊತ್ತು ಬದುವಿಗೆ ತಂದು ಹಾಕುತ್ತಿದ್ದರು .ಬೆಣಚುಕಲ್ಲು  ಆಯಿಸುವಾಗ ಎಲ್ಲರ ಕೈಗಳು ಒಂದಲ್ಲ ಒಂದು ಗಾಯವಾಗಿ  ಅಲ್ಲಲ್ಲಿ ಚಿಕ್ಕ ಚಿಕ್ಕ ಗಾಯಗಳಾಗಿ ರಕ್ತ ಬಂದಿತ್ತು .ಸತೀಶ ಅವನ ಕೈಗಾದ ರಕ್ತ ಮತ್ತು ಉಗುರುಗಳಿಂದ ಸಿಬಿರುಗಳನ್ನು ಎದ್ದದ್ದು ಕಂಡು ಯಾಕೋ ಅಂದು ಅಮ್ಮನ ನೆನೆಪಾಯಿತು . ನಮ್ಮಮ್ಮ ಈಗ ಎಲ್ಲಿರುವಳೋ? ಯಾರ ಮನೆಯಲ್ಲಿ ಕೂಲಿ ಮಾಡುವಳೋ? ಅವಳಿಗೂ ಈಗೆ ಗಾಯವಾಗಿರಬಹುದಾ? ಇಮ್ಮೆ ರಾಗಿ ಹೊಲ ಕೊಯ್ಯಲು ಹೋಗಿ ಎಡಗೈ ಕಿರುಬೆರಳು ಕೋಯ್ದುಕೊಂಡು ರಾತ್ರಿಯೆಲ್ಲ ನರಳಿದ್ದು ನೋಡಿ ನನಗೂ ಅಂದು ರಾತ್ರಿ ನಿದ್ರೆ ಬಂದಿರಲಿಲ್ಲ. ಅಮ್ಮ  ಊಟ ಮಾಡಿರುವಳೋ ಇಲ್ಲವೋ? ನನ್ನ ಹಾಗೆ ಅವಳಿಗೂ ನನ್ನ ನೆನಪಾಗುತ್ತಿರಬಹುದೇ? ಆಗದೇ ಏನು ಹೆತ್ತ ಕರುಳಲ್ಲವೇ? ಯಾಕೋ ಬಹಳ ದಿನಗಳ ನಂತರ ಸತೀಶನಿಗೆ ಸುಜಾತಳಿಗಿಂತ ಅಂದು ಅಮ್ಮ ಬಹಳ ನೆನಪಾಗುತ್ತಿತ್ತು.  "ಏ ಸತೀಶ ಬೇಗ ಕಲ್ಲು ಎತ್ತಿ ಹಾಕು ಬಿಸಿಲು ಜಾಸ್ತಿ ಆಗೋದ್ರೊಳಗೆ ಮನೆಗೆ ಹೋಗೋಣ " ಎಂದು ಮುರಾರಿ ಹೇಳುತ್ತಲೆ ಆತು ಮಾಮಾ ಎಂದು ತೊಟ್ಟಿ ಹೊತ್ತು ಬದುವಿನ ಕಡೆ ನಡೆದ.


ರಾತ್ರಿ ಅಮ್ಮನಿಗೆ ಅಂದಿನ ಹೊಲದಲ್ಲಿ ಮಾಡಿದ ಕೆಲಸದ ವರದಿ ಒಪ್ಪಿಸಿದ ಮುಕುಂದಯ್ಯ ನಾಳೆ ಏನು ಮಾಡಲಿ ಎಂಬುದನ್ನು ಅಮ್ಮನೇ ಹೇಳಲಿ ಎಂದು ಬಯಸಿದರು. ಮನೆಯಲ್ಲಿ ಕೊಟ್ಟು ತರುವುದು ಹಣಕಾಸಿನ ವ್ಯವಹಾರಗಳ ಮುಕುಂದಯ್ಯ ಮಾಡಿದರೂ ಹೊಲಮನೆಯ ಕೆಲಸಗಳನ್ನು ಹೇಗೆ ಮಾಡಬೇಕು? ಯಾವಾಗ ಮಾಡಬೇಕು ? ಎಲ್ಲಿಗೆ ಹೋಗಬೇಕು? ಮುಂತಾದವುಗಳನ್ನು ಅಮ್ಮನ ಕೇಳಿಯೇ ಮಾಡುತ್ತಿದ್ದರು.

" ಮಳೆ ಬರೋದ್ರೊಳಗೆ ತಿಪ್ಪೆಲಿರೋ ಗೊಬ್ರನ ಹೊಲಕ್ಕೇರಿ ,ಹಳ್ಡಿ ಕಬ್ಬುಣುದ್ ನೇಗಿಲೊಡಿಬೇಕು ,ಈ ವರ್ಷ ಕೆಂಗ್ಲೊಲ್ದಾಗೆ ಕಡ್ಲೆಕಾಯಿ ಹಾಕನಾ ,ಈ ವರ್ಸ ಭರಣಿ ಮಳೆ ಸೆನ್ನಾಗಿ  ಬರ್ಬೋದು ಸೇರಿಗ್ ಮಣ ಕಡ್ಲೇಕಾಯಿ ಆದರೆ ಒಳ್ಳೆ ಬೆಳೆ ಬರುತ್ತೆ ನಮ್ ಕೆಲ್ಸ ನಾವು ಮಾಡಾನ ಭೂಮ್ತಾಯಿ ಕೈ ಬಿಡಲ್ಲ  ಎಲ್ಲಾ ಆ ದೇವಿ ಒಳ್ಳೇದು ಮಾಡ್ತಾಳೆ " ಎಂದು  ಸರಸ್ವತಜ್ಜಿ ಹೇಳುತ್ತಲೆ " ಕೂಲೇರು ಯಾರೂ ಬರಲ್ಲ ಕಣವ್ವ ಎಲ್ಲ ಗೊಬ್ಬರ ಹೊಡಿತೈದಾರೆ " ಅಂದ ಬಿಳಿಯಪ್ಪ . ಆ ಮೂಲೆ ಮನೆ ಸೀತಪ್ಪನ ಮಗಳು ಶೀಲ ಗೊಬ್ಬರ ಹೊರತಾಳೆ ಗಾಡಿಗೆ ತುಂಬಾಕ್ ಸಾಕು ಅವರಪ್ಪ ಇವತ್ತು ಸಿಕ್ಕಿದ್ದ ಅವ್ರುದು ಗೊಬ್ಬರ ನಾಕು ಗಾಡಿ ಆಗುತ್ತಂತೆ ಅವ್ರುದು ಗಾಡಿ ಇಲ್ಲ ಅವಳು ಬದ್ಲಾಳು (ಬದಲಿ ಆಳು) ಬತ್ತಾಳೆ ಅವರ ಹೊಲಕ್ಕೆ ಗೊಬ್ಬರ ಹೊಡ್ಕೊಡಿ." ಆದೇಶ ನೀಡಿದರು ಅಜ್ಜಿ ಶೀಲಾಳ ಹೆಸರನ್ನು ಕೇಳಿದಾಕ್ಷಣ ಬಿಳಿಯನ ಕಣ್ಣಲ್ಲಿ ಮಿಂಚು, ಒಳಗೊಳಗೆ ಯಾವುದೊ ಲೆಕ್ಕಾಚಾರ, ಏನೋ ಅವ್ಯಕ್ತ ಸಂತೋಷ ,ಬೇಡವೆಂದರೂ ಹೊಂಗೆ ಮರದಡಿಯ ಶೃಂಗಾರ, ಬಿಸಿಯುಸಿರು, ಹಿತವಾದ ಮೈನೋವು, ನೆನಪಾಗುತ್ತಿತ್ತು." "ಏನೊ ಬಿಳಿಯ ಹೇಳಿದ್ದು ಕೇಳ್ತಾ " 

ಆತಮ್ಮ ಬೆಳಿಗ್ಗೆ ಬೇಗ ಎದ್ದು ಗೊಬ್ಬರ ಹೊಡಿಯಾಕೆ ಗಾಡಿ ಊಡ್ತೀನಿ"ಎಂದು ಚಾಪೆ ದುಪ್ಪಡಿ ತೆಗೆದುಕೊಂಡು ಅಂಗಳದಲ್ಲಿ ಹಾಕಿಕೊಂಡು ಆಕಾಶ ನೋಡುತ್ತಿದ್ದ ನಕ್ಷತ್ರಗಳ ಬದಲಾಗಿ ಶೀಲಾ ಕಾಣುತ್ತಿದ್ದಳು.


ಯಾಕೋ ಅಂದು ಬಿಳಿಯಪ್ಪನಿಗೆ ಸರಿಯಾಗಿ ನಿದ್ರೆ ಹತ್ತಲಿಲ್ಲ ಅಂದು ಅಜ್ಜಿ ಎಬ್ಬಿಸೋ ಮೊದಲೇ ಎದ್ದು ಜಾಲಿ ಮರದ ಕೆಳಗೆ ನಿಲ್ಲಿಸಿದ ಎತ್ತಿನ ಗಾಡಿಯ ಹತ್ತಿರ ಹೋದ. ಗಾಡಿಯ ಮೂಕಿಗೆ ನೊಗವನ್ನು ಹಗ್ಗದಿಂದ ಬಿಗಿದ ,ಏ ಗುರುಸಿದ್ದ ಎಷ್ಟೋತ್ತು ಸಗಣಿ ಬಾಸ್ತಿಯಲೆ ಆ ಮೂಲೇಲಿ ಕಣಿಗೆ ಐದಾವೆ ತಗಂಬಾರಲೆ ಅಂದ ಬಿಳಿಯಪ್ಪ ಸುಮಾರು ನಾಲ್ಕೈದು ಅಡಿ ಉದ್ದದ ಮೂರು ಬೆರಳುಗಳ ಗಾತ್ರದ ಎಂಟತ್ತು  ಕಟ್ಟಿಗೆ ತಂದು "ಅಣ್ಣ ಎಲ್ಲಿಡಲಿ" ಅಂದ "ನನ್ ತಲೆಮೇಲಿಡು ಲೇ ಗಾಡಿಯ ಎಳ್ಡೂ ಸೈಡ್ನಲ್ಲಿ ತೂತು ಅದವಾಲ್ಲ ಅದರಲ್ಲಿ ಒಂದೊಂದು ಸಿಗುಸಿ ಹೋಗು ಎಲ್ಲಾ ಬಿಡಿಸಿ ಹೇಳ್ಬೇಕು ಇವನಿಗೆ " ಎಂದು ಗೊನಗುತ್ತಾ ನೊಗದ ಹಗ್ಗ ಬಿಗಿ ಮಾಡಿದ ಬಿಳಿಯಪ್ಪ. 

ಮುರಾರಿ ಈಚಲ ಮರದ ಏಳು ಅಡಿ ಉದ್ದದ ನಾಲ್ಕು ಅಡಿ  ಅಗಲದ ಎರಡು ತಡಿಕೆಗಳನ್ನು ತಂದು ಗುರುಸಿದ್ದ ಇಟ್ಟ ಕಣಿಗೆಗಳ ಪಕ್ಕಕ್ಕೆ ಇಟ್ಟು ಏ ಬಿಳಿಯ ದಾರ ತಂದು ಈ ಕಣಿಗೆ ಮತ್ತು ತಡಿಕೆಗೆ ಬಿಳಿಯ ಲೇ ಅಂದರು " ಗಾಡಿಯ ಮುಂದೆ ಮತ್ತು ಹಿಂದೆ ತೆಂಗಿನ ಗರಿ ಇಟ್ಟು ."ಅಣ್ಣ ಕೀಲೆಣ್ಣೆ ಹಾಕ್ಬೇಕೇನಣ್ಣ ಅಚ್ಚಿಗೆ " ಕೇಳಿದ ಬಿಳಿಯಪ್ಪ ಹೂ ಮತ್ತೆ ಎಣ್ಣಿ ಹಚ್ಚಿ ತಿಂಗಳಾತು ತಾಂಬ ಎಣ್ಣಿ ಎಂದು ಚಕ್ರದ ಕಾಡಾಣಿ( ಚಕ್ರ ಹೊರಗೆ ಬರದಿರಲು ಸಿಗಸಿದ ಕಬ್ಬಿಣದ ಮೊಳೆ) ತೆಗೆದು ತನ್ನ ಹೆಗಲನ್ನು ಗಾಡಿಯ ಒಂದು ಬದಿಗೆ ಕೊಟ್ಟು ಮೆಲ್ಲಗೆ ಎತ್ತಿ ." ಚಕ್ರ ನಿಧಾನವಾಗಿ ಕಿತ್ತುಕೊಂಡು ಎಣ್ಣಿ ಅಚ್ಚು ಅಂದರು ಅದಕ್ಕೆ ಒಂದು ಡಬ್ಬಿಯಲ್ಲಿ ಎಣ್ಣೆ ಮತ್ತು ಕಬದಬೆ ಮೊಳೆಗೆ ಬಟ್ಟೆ ಕಟ್ಟಿದ್ದರು ಅದನ್ನು ಎಣ್ಣೆಗೆ ಹಾಕಿ ಗಾಡಿಯ ಅಚ್ಚು ಮತ್ತು ಚಕ್ರದ ಒಳಗೆ ಬಳಿದು ಮತ್ತೆ ಒಳಗೆ ತಳ್ಳಿದರು ಮತ್ತೊಂದು ಚಕ್ರಕ್ಕೆ ಹಾಗೆ ಎಣ್ಣೆ ಹಚ್ಚಿದರು.


ಸೂರ್ಯ ಇನ್ನೂ ರಂಗಪ್ಪನ ಪೌಳಿ ದಾಟಿ ಮೇಲೆ ಬಂದಿರಲಿಲ್ಲ ಬಿಳಿಯಪ್ಪ ಆತುರದಿಂದ ಎತ್ತುಗಳಿಗೆ ಕಡಲೆ ಕಾಯಿ ಇಂಡಿ ನೀರು ಕುಡಿಸಿ ,ಗಾಡಿಯ ನೊಗಕ್ಕೆ ಜೋಡಿಸಿ ಹಗಡನ್ನು ( ಎತ್ತಿನ ಕತ್ತಿನ ಮಧ್ಯೆ ಭಾಗಕ್ಕೆ ನೊಗಕ್ಕೆ ಸಿಗಿಸುವ ಕಡ್ಡಿ)  ಸಿಗಿಸಿ ,

ಸಲಿಕೆ ಗುದ್ದಲಿ ,ನಾಲ್ಕು ಈಚಲ ತಟ್ಟಿಗಳು ,ಮತ್ತು ಕೊಪ್ಪೆ ಮಾಡಿಕೊಳ್ಳಲು ನಾಲ್ಕು ಹಳೆಯ ಗೋಣಿ ಚೀಲಗಳನ್ನು  ಗಾಡಿಯಲ್ಲಿ ಹಾಕಿಕೊಂಡು 

ಮುರಾರಿ ಮತ್ತು ಸತೀಶನನ್ನು ಗಾಡಿಯಲ್ಲಿ ಕೂರಿಸಿಕೊಂಡು ಊರ ಬಾಗಿಲು ದಾಟಿ ತೋಪಿನ ಕಡೆ ಶರವೇಗದಲ್ಲಿ ಗಾಡಿ ಓಡಿಸಲು ಆರಂಬಿಸಿದ ಅದಕ್ಕಿಂತ ವೇಗವಾಗಿ ತೋಪಿ‌ನಲ್ಲಿ ಅವನ ಮನಸು ಯಾರನ್ನೋ ಹುಡುಕುತ್ತಿತ್ತು


ಬೇರೆ ಊರುಗಳಲ್ಲಿ ಅಂದಿನ ಕಾಲದಲ್ಲಿ ಇದ್ದ ತೋಪಿಗಿಂತ ಸುಂದರ ತೋಪು ಎಂದರೂ ತಪ್ಪಾಗಲಾರದು ಮಾರಮ್ಮನ ದೇವಸ್ಥಾನ ಎದುರಿನ ರಸ್ತೆಯ ದಾಟಿದರೆ ಸುಮಾರು ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಬೇವಿನ ಮರ ,ಹುಣಸೆ ಮರಗಳಿಂದ ಕೂಡಿದ ಸುಂದರ ವನವೇ ಯರಬಳ್ಳಿ ತೋಪು . ಯಾವ ಪುಣ್ಯಾತ್ಮರು ನೆಟ್ಟು ಪೋಷಣೆ ಮಾಡಿದರೋ ಇಂದು ಬೃಹದಾಕಾರದಲ್ಲಿ ಬೆಳೆದು ಎಲ್ಲಾ ಕಾಲದಲ್ಲೂ ಹಚ್ಚ ಹಸುರಾಗಿ ನಳನಳಿಸುತ್ತಿವೆ. ಬಿಸಿಲಿನಲ್ಲಿ ಧಣಿದು ಬಂದವರಿಗೆ ನೆರಳು ನೀಡುತ್ತಿವೆ, ಮೇ ತಿಂಗಳಲ್ಲಿ ವರ್ಷಕ್ಕೊಮ್ಮೆ ನಡೆವ ಮಾರಮ್ಮನ ಜಾತ್ರೆಯ ಸಮಯದಲ್ಲಿ ಪರಸ್ಥಳದಿಂದ ಬರುವ ಭಕ್ತಾದಿಗಳಿಗೆ ಆಶ್ರಯ ತಾಣಗಳು, ಜಾತ್ರೆಯ ಸಮಯದಲ್ಲಿ ರಾಜಾರೋಷವಾಗಿ ,ಜಾತ್ರೆ ನಂತರ ಕದ್ದುಮುಚ್ಚಿ ಎಡ್ಡು ಇಸ್ಪೀಟು ಆಡಲು ಸಹ ಈ‌ತೋಪು ಜಾಗ ನೀಡಿದೆ . ಕೆಲ  ಪ್ರೇಮಿಗಳ ಪಾಲಿನ ಉದ್ಯಾನವನವೂ ಹೌದು .ಅದೇ ತೋಪಿನ ಆಗ್ನೇಯ ಭಾಗದಲ್ಲಿ ಕಂಬಣ್ಣನ ಹೆಂಡದ ಅಂಗಡಿಗೂ ಈ ತೋಪು‌ ಜಾಗ ನೀಡಿದೆ  ಊರಿನ ಬಹುತೇಕ ಮನೆಗಳ ಸಗಣಿ ತಿಪ್ಪೆಗಳು ಕೂಡ ಇದೇ ತೋಪಿನಲ್ಲಿವೆ  ಒಟ್ಟಿನಲ್ಲಿ ಯರಬಳ್ಳಿ ಊರಮುಂದಿನ ತೋಪಿನಲ್ಲಿ ಏನುಂಟು? ಏನಿಲ್ಲ?ಸಕಲವಿರುವ ಸಕಲರಿಗೆ ಬೇಕಾದ ವಿಸ್ಮಯ ತಾಣ ಎನ್ನಬಹುದು.



ತೋಪಿಗೆ ‌‌ ಎತ್ತಿನ ಗಾಡಿ ತಂದು ತಿಪ್ಪೆಯ ಹತ್ತಿರ ನಿಲ್ಲಿಸಿ ತಟ್ಟಿ, ಸಲಿಕೆ, ಗುದ್ದಲಿ ಹಾಕಿ ಗಾಡಿಗೆ ತುಂಬಲು ಸಿದ್ದರಾದರು ಆಗ ಬಿಳಿಯಪ್ಪ ಹುಡುಕುತ್ತಿದ್ದ ಹೆಣ್ಣು ಬಂದೇ ಬಿಟ್ಟಳು ,ದೂರದಿಂದಲೇ "ಏ ಗಿಡ್ಡಿ ಏಟೊತ್ತಿಗೆ ಬರೋದು ಜಲ್ದು ಬಾ," ಗಿಡ್ಡಿ ಬುಡ್ಡಿ ಅಂದ್ರೆ ಸೆನಾಗಿರಲ್ಲ ನೋಡಣ್ಣ ಮುರಾರಿ ಅಣ್ಣ" ಎಂದು ಹತ್ತಿರ ಬಂದು ತುಂಬಿದ ಗೊಬ್ಬರದ ತಟ್ಟಿ ತಲೆಯ ಮೇಲೆ ಇಟ್ಟುಕೊಂಡು  ತಂದು ಎತ್ತಿನ ಗಾಡಿಯಲ್ಲಿ  ಹಾಕುತ್ತಿದ್ದಳು. ಮುರಾರಿ ಅವರಿಗೆ ಸಹಾಯ ಮಾಡುತ್ತಿದ್ದ. ಸತೀಶ ಎತ್ತುಗಳ ಹಗ್ಗ ಹಿಡಿದು ಮುಂದೆ ಕುಳಿತಿದ್ದ. 

ಗಾಡಿ ತುಂಬಿದ ಮೇಲೆ ಯಾರಾದರೂ ಒಬ್ಬರು ಹೊಲಕ್ಕೆ ಗಾಡಿ‌ ಜೊತೆಗೆ ಬರ್ರಿ ತುಂಬಿದ ಗಾಡಿ ಸುರುವಾಕೆ ಬೇಕು ಎಂದು ಮನದಲ್ಲೇ ಶೀಲಾಳನ್ನು ಕರೆದುಕೊಂಡು ಹೋಗಲು ಹಾತೊರೆದ "ನಾನ್ ಬತ್ತೀನ್ ಮಾವ" ಎಂದ ಸತೀಶ " ಬ್ಯಾಡ ಸುಮ್ಕೀರು ಗಾಡಿ ಚಕ್ರ ಸಿಕ್ಕೆಂಡ್ರೆ ಚಕ್ರ ಹೊಡಿಬೇಕು ಗಾಡಿ ಹಾರ್ಬಿಡಬೇಕು ನಿನಗೆಆಗಲ್ಲ  ಎಂದ ಬಿಳಿಯಪ್ಪ. "ನಾನೇ ಹೊಲಕ್ಕೆ ಬತ್ತೀನಿ ನಡಿ "ಎಂದ  ಮುರಾರಿ ಅಣ್ಣನ ಮಾತಿಗೆ ಎದುರಾಡದೆ ರಾತ್ರಿಯೆಲ್ಲಾ ಕನಸು ಕಂಡಂತೆ ಇಂದು ಹೊಂಗೆ ಮರದ ತಂಪಲ್ಲಿ ಮತ್ತೊಮ್ಮೆ ಮೈ ಬಿಸಿಮಾಡಿಕೊಳ್ಳುವ ಅವಕಾಶ ತಪ್ಪಿದ್ದಕ್ಕೆ ಒಳಗೊಳಗೆ ಬೇಸರವಾಗಿದ್ದ ಬಿಳಿಯಪ್ಪನ ನೋಡಿ ಶೀಲಾ ಮುಸಿ ಮುಸಿ ನಗಲಾರಂಬಿಸಿದಳು. 


ಅಮ್ಮನ ಅಣತಿಯಂತೆ ಕಬ್ಬಿಣದ ನೇಗಿಲ ಹೊಡೆಯಲು  ತಮ್ಮ ಒಂದು ಜೊತೆ ಎತ್ತುಗಳ ಜೊತೆ ಐದು ಜೊತೆ ಎತ್ತು ಮತ್ತು ಕಬ್ಬಿಣದ ನೇಗಿಲಿನೊಂದಿಗೆ ಕೋಳಿ‌ಕೂಗುವ ಮೊದಲೇ ಹೊಲದಲ್ಲಿ ಹಾಜರಾಗಿ ಒಂದು ರೀತಿಯ ವಿಶೇಷವಾಗಿ ಸದ್ದು ಮಾಡುತ್ತಾ ಒಂದರ ಹಿಂದೊಂದು ಜೊತೆ ಎತ್ತು ಕಟ್ಟಿ ಕೊನೆಗೆ ಕಬ್ಬಿಣದ ನೇಗಿಲಿಗೆ ಕಟ್ಟಲಾಗಿತ್ತು .ಆ ನೇಗಿಲು ಸುಮಾರು ಎರಡರಿಂದ ಮೂರು ಅಡಿ ಮಣ್ಣನ್ನು ತಿರಿವಿಹಾಕುತ್ತಿತ್ತು . " ಮೊನ್ನೆ ಗೊಬ್ಬರ ಸೆಲ್ಲಿದ್ದೀಯಾ ಈಗ ಕಬ್ಬಿಣದ ನೇಗಲು ಹೊಡಿತೀಯ ಬಿಳಿಯ ಈ ನೆಲಕ್ಕೆ ನೀನು ಕಡ್ಲೇಕಾಯಿ ಹಾಕಿದರೆ ಬಂಪರ್ ಬೆಳೆ ಬೆಳಿತಿಯ ಕಣೋ ಎಂದ " ಎರಡನೇ ಜೊತೆ ಎತ್ತು ಹೊಡೆಯುವ ಗುಂಡಣ್ಣ. 

ಸೂರ್ಯ ನೆತ್ತಿಗೆ ಬಂದಂತೆಲ್ಲಾ ಎತ್ತುಗಳು ಚಲಿಸುವ ವೇಗ ಕಡಿಮೆಯಾಗಿ ನೇಗಿಲು ಹಿಡಿವ ರಾಮನಿಗೂ ಸುಸ್ತಾದಂತೆ ಕಂಡ .ಅಲ್ಲಿಗೆ ಅಂದಿನ ಮಡಿಕೆ ( ನೇಗಿಲು) ಹೊಡೆವುದು ನಿಲ್ಲಿಸಿ ಮನೆ ಕಡೆ ನಡೆದರು.


ಸರಸ್ವತಜ್ಜಿಯ ಆಸೆ ,ದೇವಿಯ ಕೃಪೆ ಆ ವರ್ಷ ಕಾಲ ಕಾಲಕ್ಕೆ  ಒಳ್ಳೆಯ ಮಳೆಯಾಗಿ  ಕಡ್ಲೇ ಕಾಯಿ ಬೆಳೆ ಬಂಪರ್ ಬಂತು. ಸೇರು ಬೀಜಕ್ಕೆ  ಒಂದೂವರೆ ಮಣ ಕಡ್ಲೆಕಾಯಿ ಬೆಳೆದ ದೊಡ್ಡಪ್ಪಗಳ ಬಗ್ಗೆ ಊರಲ್ಲೆಲ್ಲಾ ಮೆಚ್ಚುಗೆ ಮಾತನಾಡುತ್ತಿದ್ದರು. ಮನೆಯ ತುಂಬೆಲ್ಲ ಕಡಲೆಕಾಯಿ ಚೀಲಗಳನ್ನು ನೋಡಿ ಮನೆ ಮಂದಿಯ ಖುಷಿಗೆ ಪಾರವೇ ಇರಲಿಲ್ಲ. ಆದರೆ ಬಿಳಿಯಪ್ಪನ ಮನದಲ್ಲಿ ಯಾಕೋ ದುಗುಡ .ನಿನ್ನೆ ಶೀಲಾಳ ಮನೆಗೆ ಹೊರಕೆರೆದೇವರ ಪುರದ ಒಂಭತ್ತು ಜನ ಬಂದು ಹೋಗಿದ್ದರಂತೆ ಎಂಬ ಸುದ್ದಿಯನ್ನು ಗುರುಸಿದ್ದ ಹೇಳಿದ್ದ.

ಅಂದು ಚಾಪೆ ಹಾಕಿಕೊಂಡು ಅಂಗಳದಲ್ಲಿ ಅಂಗಾತ ಮಲಗಿ ಆಕಾಶ ನೋಡಿದ ಅಲ್ಲಿ ಬರೀ ನಕ್ಷತ್ರಗಳಿದ್ದವು ,ಶೀಲಾ ಕಾಣಿಸುತ್ತಿರಲಿಲ್ಲ.




ಮುಂದುವರೆಯುವುದು.....


ಸಿ ಜಿ ವೆಂಕಟೇಶ್ವರ


No comments: