30 December 2018

ಭಾರತದ ನಡಿಗೆ ಸ್ವಚ್ಚತೆಯ ಕಡೆಗೆ (ಲೇಖನ)

  *ಭಾರತದ ನಡಿಗೆ*
*ಸ್ವಚ್ಛತೆಯ ಕಡೆಗೆ*

ಮಾಲಿನ್ಯದ ವಿರುದ್ಧ ಪದವಾದ ಸ್ವಚ್ಚತೆಯು ಇಂದು ‌ಎಲ್ಲಾ ಕಡೆ ಹೆಚ್ಚು ಚರ್ಚಿತವಾಗುತ್ತಿರುವ ವಿಷಯ.
ನಮ್ಮ ಸುತ್ತ ಮುತ್ತ ಇರುವ ಮನೆ ಪರಿಸರ ಸ್ವಚ್ಛ ಮಾಡುವುದು ನಮ್ಮ ಆದ್ಯತೆ ಆಗಿರಬೇಕು .ಹಾಗೆ ನೋಡಿದರೆ ಇಂದು ಮಾತ್ರ ಸ್ವಚ್ಚತಾ ಪರಿಕಲ್ಪನೆ ಇಲ್ಲ ಹಿಂದಿನಿಂದಲೂ ನಮ್ಮ ಪೂರ್ವಿಕರು ಸ್ವಚ್ಛಗೊಳಿಸುವ ಕಾಯಕ ಮಾಡಿದರು ಗಾಂಧೀಜಿಯವರು ಸಹ ಸ್ವಚ್ಛತೆ ಆಂದೋಲನದ ಮೂಲಕ ಸ್ವಚ್ಚತಾ ಅಭಿಯಾನ ಆರಂಬಿಸಿದರು.
ಪ್ರಸ್ತುತ ಪ್ರಾಧಾನಿಗಳಾದ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿ ದೇಶವಾಸಿಗಳಲ್ಲಿ ನೈರ್ಮಲ್ಯದ ಮಹತ್ವ ಸಾರಿ ಜನಜಾಗೃತಿ ಮೂಲಕ ಕಾರ್ಯ ಮಾಡಿದ್ದಾರೆ.
ಕೇವಲ ಭೌತಿಕ ಸ್ವಚ್ಛಗೊಳಿಸುವ ಕಾರ್ಯ ಆದರೆ ಸಾಲದು ಮಾನಸಿಕ ಸ್ವಚ್ಛಗೊಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗುತ್ತದೆ. ಆದುನಿಕ ಜೀವನದಲ್ಲಿ ನಾವು ದ್ವೇಷ ,ಅಸೂಯೆ, ಹಿಂಸೆ ,ಕ್ರೌರ್ಯ, ಅನೈತಿಕತೆ ,ಯುದ್ಧ, ಸ್ವಾರ್ಥ ಇವುಗಳು ತಾಂಡವ ಆಡುತ್ತಿವೆ .ಈ ಎಲ್ಲಾ ಪ್ರಕ್ರಿಯೆ ಗಳು ನಮ್ಮ ಮನದಲ್ಲಿ ಸುಳಿದು ಅವು ಮನುಕುಲದ ನಾಶಕ್ಕೆ ಕಾರಣವಾಗುತ್ತದೆ ಆದ್ದರಿಂದ ಆಗಾಗ ಇಂತಹ ಮಾನಸಿಕ ಮಾಲಿನ್ಯ ಕಾರಕಗಳನ್ನು  ನಮ್ಮ ಮನಸ್ಸಿನಲ್ಲಿ ಬಂದಾಗ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಲಗಬೇಕಿದೆ .ಆಗ ಮಾತ್ರ ಸಂಪುರ್ಣವಾದ ಸ್ವಚ್ಛಗೊಳಿಸುವ ಕಾರ್ಯ ಆಗಿ ಜಗತ್ತಿನಲ್ಲಿ ನೈರ್ಮಲ್ಯದ ವಾತಾವರಣ ಉಂಟಾಗಿ ಎಲ್ಲೆಡೆಯೂ ನಂದನವನವೇ ಕಾಣುವುದು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 December 2018

ನಮನ ( ರಸ ಋಷಿಗೆ ನುಡಿ ನಮನ)

           

*ನಮನ*

ಜಗದ ಕವಿ ಯುಗದ ಕವಿ
ನಿಮಗೆ ನಮನ
ಜನಮಾನಸದಿ ನೆಲಸಿದ
ಅಕ್ಷರ ಮಾಂತ್ರಿಕರೆ
ನಿಮಗೆ ನಮನ

ಪ್ರಕೃತಿಯ ಆರಾಧಿಸಿ
ವಿಕೃತಿಯ ವಿರೋಧಿಸಿ
ಸಮಬಾಳು ಸಮಪಾಲು
ಬೋಧಿಸಿದ ರಸ ಋಷಿಯೆ
ನಿಮಗೆ ನಮನ

ನೇಗಿಲ ಯೋಗಿಗೆ ನಮಿಸಿ
ವಿವೇಕಾನಂದರ ಭಜಿಸಿ
ಕೊಳಲನಾದವ ಸುರಿಸಿ
ಪಕ್ಷಿಕಾಶಿಯ ತೋರಿದ
ರಾಷ್ಟ್ರ ಕವಿಯೇ ನಿಮಗೆ ನಮನ

ಮಲೆಗಳಲಿ ಮದುಮಗಳ ತೋರಿಸಿ
ರಾಮಯಣದ ದರ್ಶನ ಮಾಡಿಸಿದ
ಕನ್ನಡಮ್ಮನ ಹೆಮ್ಮೆಯ ಕುವರ
ನಿಮಗೆ ನಮನ

ಕವಿಯಾಗಿ ,ಗುರುವಾಗಿ,ಪರಿಸರ
ಪ್ರಿಯಯೋಗಿಯಾಗಿ
ದಕ್ಷ ಆಡಳಿತ ಗಾರನಾಗಿ
ಜ್ಞಾನ ಪೀಠವ ಏರಿದರೂ
ವಿಶ್ವಮಾನವ ಸಂದೇಶ ನೀಡಿದ
ಅನಿಕೇತನ ಶಕ್ತಿಯೇ
ನಿಮಗೆ ನಮನ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

17 December 2018

ಕಪ್ಪು ಬಿಳುಪು ( ಕವನ )

*ಕಪ್ಪು-ಬಿಳುಪು*

ಹೊರಗಿನ ಲೋಕಕೆ
ನನ್ನ ಬದುಕು ಬಣ್ಣದ್ದು
ಒಳಗೆ ಕಪ್ಪು ಬಿಳುಪು
ಯಾರಿಗೆ ಹೇಳಲಿ
ಹೊಳೆವ ನನ್ನ ಮೈಮಾಟ
ನೋಡಲು ಕಾತರ ಅವರಿಗೆ
ನನ್ನ ಕಣ್ಣಲ್ಲಿ ಕಣ್ಣಿಟ್ಟು
ನೋಡುವವರಾರು ಇಲ್ಲ .
ಮನದಲಿರುವ ದುಗುಡಗಳು
ನೂರಾರು ತೋರಲಾಗುತ್ತಿಲ್ಲ
ವೇದನೆಯ ಬಚ್ಚಿಡಲೂ
ಆಗುತ್ತಿಲ್ಲ
ಮನದ ದುಗುಡ ಹೇಳಲು
ಹನಿಯೊಂದು ಬಂದಿದೆಯಲ್ಲ
ಅದು ಯಾರಿಗೂ ಕಾಣುತ್ತಿಲ್ಲ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

04 December 2018

ಪಾಡೇನು(ಹನಿಗವನ)

               *ಪಾಡೇನು*

ಕರ್ನಾಟಕದ ನಂತರ
ಗುಜರಾತ್‌ ನಲ್ಲೂ
ಪೊಲೀಸ್ ನೇಮಕಾತಿ
ಪ್ರಶ್ನೆ ಪತ್ರಿಕೆ ಲೀಕ್ ಆಗಿ
ಪರೀಕ್ಷೆ ಮುಂದಕ್ಕೆ
ಹೋಗಿದೆಯಂತೆ
ಗೊತ್ತೇನು ?
ಭದ್ರತೆ ಕೊಡುವ
ಪೋಲಿಸರ ಪತ್ರಿಕೆಯೇ
ಲೀಕಾದರೆ ಬೇರೆ
ಪತ್ರಿಕೆಗಳ ಪಾಡೇನು ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಅವಕಾಶ ಕೊಡಿ (ಚುಟುಕು)

               *ಅವಕಾಶ ಕೊಡಿ*

ಅಬಲರು ನಾವಲ್ಲ ಭಿಕ್ಷುಕರು ಅಲ್ಲವೇ ಅಲ್ಲ
ಚೇತನವಿರುವ ವಿಶೇಷ ಚೇತನರು ನಾವು
ಕರುಣೆ ತೋರಿ ಕಂಬನಿ ಮಿಡಿಯುವುದು ಬೇಡ
ಅವಕಾಶ ಕೊಟ್ಟ ಪ್ರೋತ್ಸಾಹಿಸಿ ನೋಡಿ ನೀವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 December 2018

ಪ್ರೋತ್ಸಾಹಿಸಿ ( ವಿಶ್ವ ವಿಕಲಚೇತನ ದಿನಾಚರಣೆಯ ಪ್ರಯುಕ್ತ)

                  *ಪ್ರೋತ್ಸಾಹಿಸಿ*
(ವಿಶ್ವ ವಿಕಲಚೇತನ ದಿನಾಚರಣೆಯ ಪ್ರಯುಕ್ತ)

ಬೈಯದಿರಿ ನೊಯಿಸದಿರಿ
ದಿವ್ಯಾಂಗರ ಮನಗಳ
ಬಯಸಿ ಯಾರೂ
ವಿಕಲಚೇತನರಾಗಲ್ಲ
ಎಲ್ಲರಲೂ ಚೇತನವಿದೆ.

ಎಲ್ಲಾ ಇರುವವರು
ಇಲ್ಲದವರ ಜಾಗದಿ
ನಿಂತು ಯೋಚಿಸಿ .
ಮುತ್ತು ರತ್ನ ಬೇಡ
ವಜ್ರ ಹವಳ ಬೇಡ
ಕರುಣೆ ಅನುಕಂಪ
ಅವರಿಗೆ ಬೇಡವೆ ಬೇಡ.

ಎಲ್ಲರಂತೆ ಬಾಳಲು
ಅವಕಾಶಗಳ ನೀಡಿ
ಅವರನು ಪ್ರೋತ್ಸಾಹಿಸಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ದಾರಿದೀಪ (ಚುಟುಕು)

           *ದಾರಿದೀಪ*

ದಾರಿಗಳು ನೂರಾರು ಬದುಕಿ ಬಾಳಲು
ಸಾವಿರ ದಾರಿಗಳಿವೆ ಇಂದು ಹಾಳಾಗಲು
ಅಡ್ಡ ದಾರಿಯ ಪಯಣ ಕೊನೆಗೊಳ್ಳಲಿ
ನಿನ್ನ ಬದುಕು ಇತರರಿಗೆ ದಾರಿದೀಪವಾಗಲಿ

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*