11 December 2019

ಮನದ ಪ್ರಶ್ನೆಗಳು (ಕವನ)

*ಮನದ ಪ್ರಶ್ನೆಗಳು*

ನಾ ಸಾಯ ನೀ ಸಾಯ ಮನೆ ಮಂದಿಯಲ್ಲಾ ಸಾಯ ಬೇಸಾಯ
ಸಾಲದಲಿ ಹುಟ್ಟಿ ಸಾಲದಿ ಬೆಳೆದು ಸಾಲದಲಿ  ಮರಣಿಸುವ ಚಿತ್ರಣಗಳು
ಆಳುವವರಿಗೆ ಸಾಲುತ್ತಿಲ್ಲವೆ? ಇನ್ನೆಷ್ಟು ಬಲಿ ಬೇಕು?

ಭರವಸೆಯ ಮಾತುಗಳು ಭರಪೂರ ಆಶ್ವಾಸನೆಗಳಿಗೆ ಬರವಿಲ್ಲ
ಒಳಗಿನ ನೋವ ನುಂಗಿ ಹೊರಗೆ ನಗುವ
ಕಣ್ಣಲಿ ರೈತಕಣ್ಣೀರು ಸುರಿಸುವ ರೈತನ  ಗೋಳು ಕೇಳುವವರು ಯಾರೂ ಇಲ್ಲವೆ?

ಮಳೆರಾಯನೊಡನೆ ಜೂಜಾಡಿ
ಇಳೆಯನೇ ನಂಬಿ ಕಾಯಕ ಮಾಡಿ
ದೇಹ ಕೃಶವಾದರೂ ಕೃಷಿಯ ಬಿಡದೇ
ದುಡಿದು ತಿನ್ನು ಎಂದು ಸಾರುವ
ಅನ್ನದಾತನು ಖುಷಿಯಾಗುವುದು ಯಾವಾಗ?

ರಾಜ್ಯಗಳುದಿಸಿ ರಾಜ್ಯಗಳಳಿದರೂ
ರಾಜರಿಗನ್ನವ ನೀಡುವ ಇವನು
ಕೋಟಿಜನರ ಜೀವದ ಒಡೆಯ
ಮೇಟಿ ವಿದ್ಯೆಬಲ್ಲ ವ್ಯವಸಾಯಗಾರನ ಬವಣೆ  ನೀಗುವುದು ಯಾವಾಗ?

*ಸಿ ಜಿ ವೆಂಕಟೇಶ್ವರ*

No comments: