*ನನ್ನ ದುರ್ಗ*
ಮದಿಸಿದ ಕರಿಯ ಮದವಡಗಿಸಿದ
ಹೈದರಾಲಿಯ ಸೊಕ್ಕು ಮುರಿದ
ರಿಪುಗಳಿಗೆ ಸಿಂಹಸ್ವಪ್ನವಾಗಿದ್ದ
ನಾಯಕರಾಳಿದ ಕೋಟೆಯೇ ನನ್ನ ದುರ್ಗ
ಏಕನಾಥೇಶ್ವರಿಯ ಪುಣ್ಯಭೂಮಿ
ಒಬವ್ವಳ ಶೌರ್ಯಕೆ ಹೆಸರಾದ ತಾಣವಿರುವ
ಕಲ್ಲು ಕಥೆ ಹೇಳುವ ಕಲ್ಲಿನ ಕೋಟೆಯೇ ನನ್ನ ದುರ್ಗ
ಅಕ್ಕ ತಂಗಿಯರ ಹೊಂಡವಿರುವ
ಉಯ್ಯಾಲೆ ಕಂಬವಿರುವ
ಆನೆಯ ಕುದುರೆಯ ಹೆಜ್ಜೆಗಳ ಹೊಂದಿದ
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆಯೇ ನನ್ನ ದುರ್ಗ
ಹದ್ದುಮೀರಿದ ಅರಿಗಳ ತರಿದ
ಮದ್ದಿನ ಮನೆಯಿರುವ
ಸದ್ದು ಮಾಡಿದ ಪುಂಡರ
ಸದ್ದಡಗಿಸಿ ಜನರ ಕಾಪಾಡಿದ ಕೋಟೆಯೇ ನನ್ನ ದುರ್ಗ
ರಂಗಯ್ಯನ ಬಾಗಿಲು ಆನೆಬಾಗಿಲು
ಬುರುಜು ಬತೇರಿ ಗುಪ್ತದ್ವಾರಗಳು
ಆಹಾರದ ಕಣಜ,ನೀರಿನ ಹೊಂಡವ
ಹೊಂದಿದ ಏಳು ಸುತ್ತಿನ ಕೋಟೆಯೇ ನನ್ನ ದುರ್ಗ
*ಸಿ.ಜಿ ವೆಂಕಟೇಶ್ವರ*