11 ಡಿಸೆಂಬರ್ 2025

ಗಾಂಧಾರಿ ಕಲೆ ಯಿಂದ ಶಾಲಾ ಕಾಲೇಜುಗಳಲ್ಲಿ ಕಾಪಿ ತಡೆಯಬಹುದು!


 ಪರೀಕ್ಷೆಗಳಲ್ಲಿ ಕಾಪಿ ಮಾಡುವುದು  ದೊಡ್ಡ ಪಿಡುಗಾಗಿದ್ದು ಕೆಲ ಪರೀಕ್ಷೆಗಳಿಗೆ ಸಿ ಸಿ ಟಿ‌ವಿ ಕ್ಯಾಮರಾ ಹಾಕಿ ವೆಬ್ ಕಾಸ್ಟ್ ಮಾಡಿದರೂ ಕೆಲವೆಡ ನಕಲಾಗುತ್ತಿರುವ ಈ ಕಾಲದಲ್ಲಿ  ಬಳ್ಳಾರಿಯಲ್ಲಿ  ಓರ್ವ ವಿದ್ಯಾರ್ಥಿನಿ  ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರಾಮಾಣಿಕತೆಯಿಂದ  ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ಸರ್ವರ ಮೆಚ್ಚುಗೆ ಗಳಿಸಿದ್ದಾಳೆ.


  ಹಿಮಾಬಿಂದು ಎಂಬ ಈ ವಿದ್ಯಾರ್ಥಿನಿ
'ಗಾಂಧಾರಿ' ವಿದ್ಯೆ ಕಲಿತು  ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ 8ನೇ ತರಗತಿಯ ಎಫ್‌ಎ 4ರ ಆರು ವಿಷಯ ಗಳ ಪರೀಕ್ಷೆ ಬರೆದು  ಗಮನ ಸೆಳೆದಿದ್ದಾಳೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶ, ವಾಸನೆ ಹಾಗೂ ಶಬ್ದದಿಂದಲೇ ವ್ಯಕ್ತಿ ಹಾಗೂ ವಸ್ತುಗಳನ್ನು ಗುರುತಿಸುವ ಅಪರೂಪದ 'ಗಾಂಧಾರಿ ಕಲೆ' ಕರಗತ ಮಾಡಿಕೊಂಡಿರುವುದು ವಿಶೇಷ.

ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ರಾಮಾಂಜಿನಿ ಹಾಗೂ ಕವಿತಾ ದಂಪತಿ ಹಿರಿಯ ಮಗಳು ಹಿಮಾಬಿಂದು, ಪದ್ಮನಾಭ ಗುರೂಜಿ ಆನ್‌ಲೈನ್‌ನಲ್ಲಿ ನೀಡಿದ ಪಾಠಗಳ ನೆರವಿನಿಂದ ಈ ವಿದ್ಯೆ ಕಲಿತಿದ್ದಾಳೆ.

"ನನ್ನ ಮಗಳು ನಾಲ್ಕನೇ ತರಗತಿ ಯಲ್ಲಿದ್ದಾಗ ಕಲಿಕೆಯಲ್ಲಿ ಬಹಳ ಹಿಂದುಳಿದಿದ್ದಳು. ಗಾಂಧಾರಿ ವಿದ್ಯೆ ಕಲಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಸದಾ ಕ್ರಿಯಾಶೀಲರಾಗಿ ಇರುತ್ತಾರೆ ಎನ್ನುವ ಸ್ನೇಹಿತರ ಸಲಹೆ ಮೇರೆಗೆ ಈ ವಿದ್ಯೆ ಕಲಿಸಿದೆ. ಈ ಪ್ರಯೋಗದ ನಂತರ ಕ್ಲಾಸ್‌ಗೆ ಪ್ರಥಮ ಸ್ಥಾನದಲ್ಲಿ ಬರುತ್ತಿದ್ದಾಳೆ,'' ಎಂದು ಆ ವಿದ್ಯಾರ್ಥಿನಿಯ ತಂದೆ  ರಾಮಾಂಜಿನಿ ರೆಡ್ಡಿ ಸಂತಸ ಹಂಚಿಕೊಂಡಿದ್ದಾರೆ.

ಎಲ್ಲಾ ಸ್ತರಗಳ ಪರೀಕ್ಷೆಯಲ್ಲಿ ಇಂತಹ ಗಾಂಧಾರಿ ವಿದ್ಯೆ ಅಳವಡಿಸಿದರೆ ಹೇಗೆ? ಸಿ ಸಿ ಟಿ ವಿ ಪರೀಕ್ಷಾ ಸಿಬ್ಬಂದಿ ಇತರೆ ಖರ್ಚನ್ನು ಉಳಿಸಬಹುದೇ? ಈ ವಿಷಯದ ಬಗ್ಗೆ ಚರ್ಚೆ ಅಗತ್ಯವಿದೆ.ನೀವೇನಂತೀರಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

21 ನವೆಂಬರ್ 2025

ಡಾಲ್ಬಿ ಅಟ್ಮಾಸ್ ನಲ್ಲಿ ಸಿನಿಮಾ ನೋಡೋದೆ ಮಜಾ...





ತಾವು ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ತಮ್ಮ ಮನರಂಜನೆಗೆ ಮೀಸಲಿಡುವ ಜನರಲ್ಲಿ ನಾನೂ ಒಬ್ಬ.ಉತ್ತಮ ಕಥೆ, ಬಿಗಿಯಾದ ಚಿತ್ರಕಥೆ, ಹಿನ್ನೆಲೆ ಸಂಗೀತ, ಮಧುರವಾದ ಹಾಡು ಹಾಸ್ಯ ಇರುವ ಚಿತ್ರ ಯಾವುದಾದರೂ ಯಾವುದೇ ಭಾಷೆಯಾದರೂ ನಾನು ಥಿಯೇಟರ್‌ ಗೆ ಹೋಗುತ್ತೇನೆ‌.ಕೆಲವೊಮ್ಮೆ ಕುಟುಂಬ ಸಮೇತ ಕೆಲವೊಮ್ಮೆ ಒಂಟಿಯಾಗಿಯೇ ಸಿನಿಮಾ ವೀಕ್ಷಣೆ ಮಾಡಲು ಹೊರಡುವೆ.ಹತ್ತಾರು ಓಟಿಟಿ ನೂರಾರು ವೆಬ್ಸೈಟ್ ಗಳಲ್ಲಿ ಸಿನಿಮಾ ಲಭ್ಯವಿದ್ದರೂ ನಾನು ಅಲ್ಲಿ ಸಿನಿಮಾ ನೋಡಲು ಇಚ್ಚಿಸುವುದಿಲ್ಲ. ಸಿನಿಮಾ ಮಂದಿರದಲ್ಲಿ  ಡಾಲ್ಬಿ ಅಟ್ಮಾಸ್  ಎಫೆಕ್ಟ್ ನಲ್ಲಿ ಸಿನಿಮಾ ಎಂಜಾಯ್ ಮಾಡುವುದೇ ಇಂದು ಸುಂದರ ಅನುಭೂತಿಯನ್ನು ನೀಡುತ್ತದೆ.



ಸಿಹಿಜೀವಿ ವೆಂಕಟೇಶ್ವರ...

ತುಮಕೂರು

11 ನವೆಂಬರ್ 2025

ಅಮ್ಮ ಮಗನಿಗೆ ನಮನಗಳು..

ಕರುನಾಡಿನ ಜನತೆಯಾದ ನಾವು ಸದಾ ಕೃತಜ್ಞತೆ ಸೂಚಿಸಿ  ಸ್ಮರಿಸುವ ಹೆಸರುಗಳಲ್ಲಿ ಈ ಚಿತ್ರದಲ್ಲಿರುವ ತಾಯಿ ಮಗನ ಹೆಸರು ಅಗ್ರ ಸ್ಥಾನದಲ್ಲಿರುತ್ತದೆ.ಅಂದಿನ ನಮ್ಮ ಮೈಸೂರು ಸಂಸ್ಥಾನವನ್ನು ಮಾದರಿ ರಾಜ್ಯ ಮಾಡುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹಳ ಉತ್ತಮ ಕಾರ್ಯ ಮಾಡಿದ್ದಾರೆ.ಚಿಕ್ಕ ವಯಸ್ಸಿನಲ್ಲೇ ರಾಜನಾದ ಮಗನಿಗೆ  ಬಾಲ್ಯದಿಂದಲೂ   ಉತ್ತಮ ಶಿಕ್ಷಣ ನೀಡಿ ಒಬ್ಬ ಆಡಳಿತಗಾರನಾಗಿ ಮಾಡುವ ಕಾರ್ಯ ಮಾಡುತ್ತಲೇ ತಾನೂ ಓರ್ವ ಶ್ರೇಷ್ಠ ಆಡಳಿತಗಾರ್ತಿ ಎಂದು ತೋರಿದ ವಾಣಿ ವಿಲಾಸ ಕೆಂಪರಾಜ ನಂಜಮ್ಮಣ್ಣಿ ರವರನ್ನು ನಾವು ದಿನವೂ ನೆನೆಯಬೇಕು.ಇತ್ತೀಚಿಗೆ ವಾಣಿ ವಿಲಾಸ ಪುರಕ್ಕೆ ಕುಟುಂಬ ಸಮೇತ ಭೇಟಿ ನೀಡಿದಾಗ ಈ ಪುತ್ತಳಿಗಳನ್ನು ಕಂಡು ಪುಳಕಗೊಂಡು ಮನದುಂಬಿ ನಮಿಸಿದೆ.ನಮ್ಮ ಮಕ್ಕಳಿಗೆ ಅವರ ಬಗ್ಗೆ ಹೆಮ್ಮೆಯಿಂದ ಪರಿಚಯ ಮಾಡಿದೆ..

ಹಿರಿಯೂರು ತಾಲ್ಲೂಕಿನ ರೈತರು ಇವರನ್ನು ಪೂಜಿಸುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗದ ವಿವಿಧ ನಗರಗಳು ಸಹ ಮಾರಿ ಕಣಿವೆ ನೀರನ್ನು ಕುಡಿಯುತ್ತಿದ್ದಾರೆ.

ಅಮ್ಮ ಮಗನಿಗೆ ಎಲ್ಲರ ಪರವಾಗಿ ಧನ್ಯವಾದಗಳು..

#VvSagarDam #Hiriyur #Chitradurga #Vanivilaasa #TravelDiaries #NatureLovers #ExploreIndia #WaterDam #AdventureAwaits #LandscapePhotography #IncredibleIndia #HiddenGems #VisitKarnataka #TouristAttraction #TravelGoals #ScenicViews #DiscoverMore #BeautifulDestinations #KarnatakaTourism


 #VvSagarDam #Hiriyur #Chitradurga #Vanivilaasa #TravelDiaries #NatureLovers #ExploreIndia #WaterDam #AdventureAwaits #LandscapePhotography #IncredibleIndia #HiddenGems #VisitKarnataka #TouristAttraction #TravelGoals #ScenicViews #DiscoverMore #BeautifulDestinations #KarnatakaTourism

31 ಅಕ್ಟೋಬರ್ 2025

ಕರುನಾಡ ಕಣ್ಮಣಿಗಳು.. ಭಾಗ ೧ ಸಿದ್ದಪ್ಪ ಕಂಬಳಿ

 


ಕರುನಾಡ ಕಣ್ಮಣಿಗಳು..

ಭಾಗ ೧

ಸಿದ್ದಪ್ಪ ಕಂಬಳಿ





ಕರ್ನಾಟಕದ ಏಕೀಕರಣದ ಕನಸು ಕಂಡು ಆ ನಿಟ್ಟಿನಲ್ಲಿ ಹೋರಾಟ ಮಾಡಿದ ಅನೇಕ ಮಹನೀಯರಲ್ಲಿ ಸಿದ್ದಪ್ಪ ಕಂಬಳಿ ಕೂಡಾ ಒಬ್ವರು. ನಮ್ಮ ನಾಡಿನ ಜನರ ಶಿಕ್ಷಣಕ್ಕಾಗಿ ಅನೇಕ  ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಸಿದ್ದಪ್ಪ ನವರನ್ನು ಇಂದು ನಾವೆಲ್ಲರೂ ಕೃತಜ್ಞತೆಯಿಂದ ನೆನೆಯಬೇಕಿದೆ.

ತೋಟಪ್ಪ ಮತ್ತು ಗಂಗಮ್ಮ ದಂಪತಿಗಳ ಮಗನಾಗಿದ್ದ ಸಿದ್ದಪ್ಪ ರವರು 1882ರಲ್ಲಿ ಜನಿಸಿದರು. ಈ ದಂಪತಿಗಳು ಕಂಬಳಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಶ್ರೀ ಸಿದ್ಧಾರೂಢರ ಆಶೀರ್ವಾದದಿಂದ ಸಿದ್ದಪ್ಪ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು ಮತ್ತು ಸಮಾಜದ ಬಡ ವರ್ಗಗಳಿಗೆ ಸೇವೆ ಸಲ್ಲಿಸುವಲ್ಲಿ ನಂಬಿಕೆ ಇಟ್ಟ ವ್ಯಕ್ತಿಯಾಗಿ ವಿಕಸನಗೊಂಡರು. ಹುಬ್ಬಳ್ಳಿ ಮತ್ತು ಧಾರವಾಡದ ಕನ್ನಡ ಮಾತನಾಡುವ ಪ್ರದೇಶಗಳಲ್ಲಿಯೂ ಮರಾಠಿ ಪ್ರಾಬಲ್ಯ ಹೊಂದಿದ್ದ ಸಮಯದಲ್ಲಿ, ಸಿದ್ದಪ್ಪ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಐತಿಹಾಸಿಕ ಪಟ್ಟಣವಾದ ಲಕ್ಕುಂಡಿಯಲ್ಲಿ ಮುಗಿಸಿದರು. ನಂತರ ಧಾರವಾಡದಲ್ಲಿ ಪ್ರೌಢಶಾಲೆಗೆ ಹೋಗಿ ಪುಣೆಯಲ್ಲಿ ಪದವಿ ಪಡೆದರು. ಅವರು ಬಾಂಬೆಯ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದು  ಪ್ರಸಿದ್ಧ ವಕೀಲರಾದರು. ಕಾಲ ಕಳೆದಂತೆ ಅವರು ದೀನದಲಿತರ ಪರವಾಗಿ ಹೋರಾಡಿದರು.  ಅನೇಕ ಕನ್ನಡ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕಂಬಳಿಯವರು
1917 ರಲ್ಲಿ  ಆಗಿನ  ಹುಬ್ಬಳ್ಳಿ  ಪುರಸಭೆಯ ಸದಸ್ಯರಾಗಿ ಆಯ್ಕೆಯಾದರು. 1921 ರಲ್ಲಿ CMC ಯ ಕಾನೂನು ಸಲಹೆಗಾರರಾದರು.ವಕೀಲರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಮಂಡಳಿಯ ಅಧ್ಯಕ್ಷರಾಗಿ ಜಾಗೂ  ಬಾಂಬೆ ಪ್ರಾಂತೀಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಶಿಕ್ಷಕರ ತರಬೇತಿ ಅಗತ್ಯ ಕಂಡ ಅವರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಕರ ತರಬೇತಿ ಕಾಲೇಜನ್ನು ಸ್ಥಾಪಿಸಿದರು. ಆದರೆ, ಸರ್ಕಾರವು ಕಠಿಣ ಕ್ರಮಗಳನ್ನು ಉಲ್ಲೇಖಿಸಿ 1922 ರಲ್ಲಿ ಅದನ್ನು ಮುಚ್ಚಿತು. ಕಾಲೇಜನ್ನು ಮತ್ತೆ ತೆರೆಯುವಂತೆ ಕಂಬಳಿಯವರು ನೋಡಿಕೊಂಡರು. 
ಹರಿದು ಹಂಚಿಹೋಗಿದ್ದ ನಮ್ಮ ನಾಡಿನ ಎಕೀಕರಣ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸಿದ ಅವರು
1926 ರಲ್ಲಿ ಕರ್ನಾಟಕ ಏಕೀಕರಣ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಆಗಿನ  ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಅವರ ಕರ್ತವ್ಯ, ಕಾರ್ಯವೈಖರಿ, ಅಧ್ಯಯನಶೀಲತೆ ಮತ್ತು ಸಮರ್ಪಣೆಯಿಂದ ಬ್ರಿಟಿಷರು ಬೆರಗಾದರು. ವೆಚ್ಚವನ್ನು ಉಳಿಸಲು ಸರ್ಕಾರ ಧಾರವಾಡದ ಕರ್ನಾಟಕ ಕಾಲೇಜನ್ನು ಮುಚ್ಚಲು ಯೋಜಿಸುತ್ತಿತ್ತು ಆದರೆ ಕಾಲೇಜು ಮುಚ್ಚಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಂಬಳಿಯವರು  ಕಠಿಣ ನಿಲುವು ತೆಗೆದುಕೊಂಡರು.
ಈ ಕಾಲೇಜನ್ನು ಸರ್ಕಾರಿ ನಿಧಿಯಿಂದ ಸ್ಥಾಪಿಸಲಾಗಿಲ್ಲ, ಬದಲಾಗಿ ಜನರ ಕೊಡುಗೆಯಿಂದ ಸ್ಥಾಪಿಸಲಾಗಿದೆ ಎಂದು ಹೇಳುವ ಮೂಲಕ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಕಾಲೇಜು ಮುಚ್ಚಿದರೆ ಜನರು ತಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದರು. ಅವರ ಒತ್ತಾಯದ ಮೇರೆಗೆ ಸರ್ಕಾರ ಕಾಲೇಜನ್ನು ಮುಚ್ಚುವ ಕ್ರಮವನ್ನು ಕೈಬಿಟ್ಟಿತು. ನಂತರದ ದಿನಗಳಲ್ಲಿ ಈ ಸಂಸ್ಥೆಯು ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿ ಪ್ರಗತಿ ಸಾಧಿಸಿತು. 


ಕರ್ನಾಟಕದ ಏಕೀಕರಣವು ಸಿದ್ದಪ್ಪರವರ ಬಹುಕಾಲದ ಕನಸಾಗಿತ್ತು. ದುರದೃಷ್ಟವಶಾತ್ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದರು.  ಆರು ವರ್ಷಗಳ ಅನಾರೋಗ್ಯದ ನಂತರ ಏಪ್ರಿಲ್ 1956 ರಲ್ಲಿ ನಿಧನರಾದರು. ಕೆಲವು ತಿಂಗಳುಗಳ ನಂತರ, ನವೆಂಬರ್ 1956 ರಲ್ಲಿ ಏಕೀಕೃತ ಕರ್ನಾಟಕ ಉದಯವಾದಾಗ ಅವರ ಕನಸು ನನಸಾಗಿತ್ತು.  ಆದರೆ ಅದನ್ನು ನೋಡಲು ಅವರಿರಲಿಲ್ಲ.
ಇಂದಿನ ‌ಕಲುಷಿತ ರಾಜಕೀಯ ವ್ಯವಸ್ಥೆಯನ್ನು ನೀಡಿದಾಗ
ರಾಜಕೀಯ ಪ್ರವೇಶಿಸಲು ಯೋಜಿಸುತ್ತಿರುವ ಯುವಕರಿಗೆ ಕಂಬಳಿಯವರು  ನೀಡಿದ ಸಂದೇಶವು ಗಮನ ಸೆಳೆಯುತ್ತದೆ. "ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಪೋಷಿಸಲು ನಿಮಗೆ ಸಾಧನವಿದ್ದರೆ ಮಾತ್ರ ನೀವು ರಾಜಕೀಯಕ್ಕೆ ಧುಮುಕಿ. ಇಲ್ಲದಿದ್ದರೆ, ರಾಜಕೀಯ ಪ್ರವೇಶಿಸುವ ಕನಸು ಕಾಣಬೇಡಿ. ಸುರಕ್ಷಿತ ಮತ್ತು ಸುಸ್ಥಿರ ಆದಾಯದ ಮೂಲವಿಲ್ಲದ ರಾಜಕಾರಣಿ ಭ್ರಷ್ಟನಾಗುತ್ತಾನೆ" ಅವರ ಮಾತುಗಳು ಎಷ್ಟು ಸತ್ಯ ಎಂಬುದಕ್ಕೆ ಇಂದಿನ ರಾಜಕಾರಣಿಗಳೇ ಜೀವಂತ ಸಾಕ್ಷಿ.



ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು  ಸಿದ್ದಪ್ಪ ಕಾಂಬ್ಳಿಯವರ ಪ್ರತಿಮೆಯನ್ನು ಸ್ಥಾಪಿಸಿದೆ. ರಸ್ತೆಯೊಂದಕ್ಕೆ ಅವರ ಹೆಸರನ್ನಿಟ್ಟು ಗೌರವಿಸಿದೆ. ಧಾರವಾಡದ ಕರ್ನಾಟಕ ಕಾಲೇಜಿನ ಆವರಣದಲ್ಲಿ ಕಾಂಬ್ಳಿಯವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
 
ಇಂತಹ ಮಹಾನ್ ನಾಯಕರ ಆದರ್ಶಗಳನ್ನು ನಮ್ಮ ಯುವಕರು ಇಂದು ಮೈಗೂಡಿಸಿಕೊಳ್ಳಲಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

30 ಅಕ್ಟೋಬರ್ 2025

ಉಸಿರುಗಟ್ಟುವ ವಾತಾವರಣ ತ್ಯಜಿಸಿ ಉಸಿರಾಡೋಣ. (ಲೇಖನ)

 


ಉಸಿರುಗಟ್ಟುವ ವಾತಾವರಣ ತ್ಯಜಿಸಿ ಉಸಿರಾಡೋಣ.


ನಾವು ಕೊಳ್ಳುಬಾಕ ಸಂಸ್ಕೃತಿಯ ದಾಸರಾಗಿ ವಿವಿಧ ಆನ್ಲೈನ್ ಪ್ಲಾಟ್ ಫಾರ್ಮ್ ಮೂಲಕ ಹಬ್ಬ, ಹುಟ್ಟು ಹಬ್ಬ, ಮದುವೆ, ಮುಂಜಿ   ಹೀಗೆ ವಿವಿಧ ಕಾರಣದಿಂದಾಗಿ ಬೇಕಿದ್ದು ಬೇಡವಾದ್ದು  ಖರೀದಿಸಿ  ನಮ್ಮ  ಬೀರುಗಳು,ವಾರ್ಡ್ ರೋಬ್ ಗಳು ತುಂಬಿ ತುಳುಕುವಷ್ಟು ಶಾಪಿಂಗ್ ಮಾಡುತ್ತೇವೆ.ಹಣ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಬಳಸಿಯಾದರೂ ಕೊಳ್ಳುತ್ತೇವೆ.  ಕೊಂಡ ವಸ್ತುಗಳನ್ನು ಮನೆಯಲ್ಲಿ ಪೇರಿಸಿಕೊಂಡು   ಇ ಎಂ ಐ ಕಟ್ಟುತ್ತಾ, ಸಾಲ ತೀರಿಸುವ ಟನ್ಷನ್ ನಲ್ಲಿ ಕೆಲವೊಮ್ಮೆ ಉಸಿರುಗಟ್ಟಿದ ವಾತಾವರಣದಲ್ಲಿ ಜೀವಿಸುತ್ತೇವೆ. ಮಾಲ್ ಸಂಸ್ಕೃತಿ ಇದಕ್ಕೆ ಪ್ರಚೋದನಕಾರಿ. ಹಾಗೆಂದ ಮಾತ್ರಕ್ಕೆ ನೀವು ಕಂಜ್ಯೂಸ್ ಆಗಿ ಎಂತಲೂ ನಾನು ಹೇಳುವುದಿಲ್ಲ.

ಬೇಕಾದ್ರೆ ಉಪಯೋಗಕ್ಕೆ ಎನ್ನುವ ಡಬ್ಬಿಗಳು, ನೆನಪಿಗೂ ಬರದ ಹಳೆಯ ಸ್ಮರಣಿಕೆಗಳು. ನಾವು ಖರೀದಿಸುತ್ತೇವೆ. ಸಂಗ್ರಹಿಸುತ್ತೇವೆ.ಅಪ್‌ಗ್ರೇಡ್ ಮಾಡುತ್ತೇವೆ.ಆದರೆ   ಕೊನೆಗೆ  ಯಾವುದೋ ನಮಗಿಷ್ಟದ ಹಳೆ  ಶರ್ಟ್ ಹುಡುಕಿ ಇದೊಂದೇ ಸಾಕು ಎಂದು ಹಾಕಿಕೊಂಡು ನಡೆದುಬಿಡುತ್ತೇವೆ. ಇವೆಲ್ಲವುಗಳ ಬಗ್ಗೆ
ಜೆಮ್ಸ್ ವಾಲ್ಮನ್ ರವರು “Stuffocation”  ಎಂಬ ಪುಸ್ತಕದಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ.

ನಾವೆಲ್ಲರೂ ಸಂತೋಷವನ್ನು ವಸ್ತುಗಳನ್ನು ಹೆಚ್ಚು ಗುಡ್ಡೇ ಹಾಕುವುದರಲ್ಲಿ ಬೇರೆಯವರಿಗಿಂತ ಹೆಚ್ಚು ವಸ್ತುಗಳನ್ನು ಶೇಖರಣೆ ಮಾಡುವುದರಲ್ಲಿ ಹುಡುಕುವ ಭರದಲ್ಲಿ ನಿಜಕ್ಕೂ ಈ ವಸ್ತುಗಳ ಅಗತ್ಯ ನನಗಿದೆಯಾ? ಎಂಬು ಸ್ವಯಂ ಪ್ರಶ್ನಿಸಿಕೊಳ್ಳುವ ಮನೋಭಾವ ಕಾಣೆಯಾಗಿದೆ.

   ಗ್ರಾಹಕ ಕೇಂದ್ರಿತ  ಕನಸುಗಳಿಂದ ತುಂಬಿರುವ ಮನೆಗಳು, ಸ್ಥಾನಮಾನಕ್ಕಾಗಿ ಕಟ್ಟಲ್ಪಟ್ಟ ದೊಡ್ಡ  ಕಚೇರಿಗಳು ಇಂದಿನ ಟ್ರೆಂಡ್. ಹೆಚ್ಚು ವಸ್ತುಗಳಿದ್ದರೆ  ಉತ್ತಮ ಜೀವನ  ಎಂಬ  ಭ್ರಮೆಯಲ್ಲಿ ಸಿಕ್ಕಿಹಾಕಿಕೊಂಡು ಜೀವಿಸುತ್ತಿದ್ದೇವೆ. 


ವಸ್ತುಗಳು ಕೇವಲ ನಮ್ಮ ಕೋಣೆ ಮತ್ತು ಕಟ್ಟಡಗಳನ್ನು ತುಂಬಿಸಬಹುದು.ಆದರೆ  ಆ ವಸ್ತುಗಳನ್ನು ಬಳಸಿದ   ನೆನಪುಗಳು  ವಸ್ತುವಿಗಿಂತ ಹೆಚ್ಚು ದೀರ್ಘಕಾಲದ ಸಂತೋಷವನ್ನು ನೀಡುತ್ತವೆ. ಉದಾಹರಣೆಗೆ   ನಾವು ಖರೀದಿಸಿದ ಬೂಟುಗಳನ್ನು ನೆನಪಿಡುವುದಿಲ್ಲ. ಆದರೆ ಅವುಗಳನ್ನು ಧರಿಸಿ ನೃತ್ಯ ಮಾಡಿದ ಆ ರಾತ್ರಿ ಎಂದಿಗೂ ಮರೆಯಲಾಗುವುದಿಲ್ಲ. ಅನುಭವಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ.


ನಾವು ನಮ್ಮಲ್ಲಿರುವ ಆಸ್ತಿ   ಅಂತಸ್ತು  ಸಂಪತ್ತು ಪ್ರದರ್ಶನಕ್ಕೆ ಹಾತೊರೆಯುತ್ತೇವೆ. ತೋರಿಸಬೇಕಾದದ್ದು ಸ್ಥಾನಮಾನಗಳನ್ನಲ್ಲ.ಬದಲಿಗೆ ನಮ್ಮ ಜೀವನವನ್ನು ಪ್ರವಾಸಗಳು, ಆಳವಾದ ಸ್ನೇಹಗಳು, ಕಲಿತ ಕೌಶಲ್ಯಗಳು, ನೋಡಿದ ಸ್ಥಳಗಳಿಂದ ಅರ್ಥಪೂರ್ಣ ಮಾಡಿಕೊಳ್ಳಬೇಕು. ಇವೇ ನಿಜವಾದ ಟ್ರೋಫಿಗಳು!

  ನಾವು  ಸರಳವಾದಂತೆ  ಜೀವನ ವಿಸ್ತರಿಸುತ್ತದೆ.
ಅವ್ಯವಸ್ಥೆ ಹೋಗಿ  ಶಕ್ತಿ ಮರಳುತ್ತದೆ. ಬಯಕೆಗಳು ಕಡಿಮೆಯಾದಾಗ ಕೃತಜ್ಞತೆ ಬೆಳೆಯುತ್ತದೆ. ಹೆಚ್ಚು ಬೇಕು ಎಂದು ಓಡುವುದನ್ನು   ನಿಲ್ಲಿಸಿದಾಗ  ಸಾಕು ಎಂಬುದನ್ನು ಅರಿಯುತ್ತೇವೆ.ಇನ್ನಾದರೂ ನಾವು ನಮ್ಮದೇ ಅತಿಯಾದ  ವಸ್ತುಗಳಿಂದ ನಮಗರಿವಿಲ್ಲದೇ  ಉಸಿರುಗಟ್ಟುವುದನ್ನು ತಪ್ಪಿಸಿಕೊಂಡು ಅರ್ಥಪೂರ್ಣವಾಗಿ ಜೀವಿಸೋಣ.
ನಮ್ಮ ಯಶಸ್ಸಿನ ಮಾನಕಗಳು    ಎಷ್ಟು ವಸ್ತುಗಳನ್ನು ಹೊಂದಿದ್ದೇವೆ ಎಂಬುದಲ್ಲ. ಎಷ್ಟು ಕಾಲ   ಸಂತಸದಿಂದ  ಬದುಕಿದ್ದೇವೆ ಎಂಬುದರಿಂದ  ಅಳೆಯಬೇಕಾಗಿದೆ.
ಅದನ್ನು ಅರಿತ ಕ್ಷಣ ನಿಜವಾಗಿಯೂ ಮತ್ತೆ ನಾವು ಹೊಸದಾಗಿ ಉಸಿರಾಡಲು ಆರಂಭಿಸಿದಂತಾಗುತ್ತದೆ. ಅಂತಹ ಜೀವನದ ಕಡೆ ಸಾಗೋಣ..

ಸಿಹಿಜೀವಿ ವೆಂಕಟೇಶ್ವರ
ತುಮಕೂರು

26 ಅಕ್ಟೋಬರ್ 2025

ಬೆಲೆ. ಹನಿಗವನ


 

ಬೆಲೆ

ಜಂಭ ಕೊಚ್ಚಿಕೊಳ್ಳುತ್ತಾ ಹೇಳಿಕೊಳ್ಳಬೇಡ ಎಲ್ಲರೂ ನನ್ನನ್ನೇ ಇಷ್ಟಪಡುತ್ತಾರೆಂದು| ಕೆಲವೊಮ್ಮೆ ಕಡಿಮೆ ಕಿಮ್ಮತ್ತಿನ ವಸ್ತುಗಳನ್ನು ಕೊಳ್ಳಲು ಜನ ಮುಗಿ ಬೀಳುತ್ತಾರೆ ನಾ ಮುಂದು,ತಾ ಮುಂದು||

ಸಿಹಿಜೀವಿ ವೆಂಕಟೇಶ್ವರ #QuoteSubhashitha #Sihijeevi #Venkateswara #WisdomInKannada #LifeLessons #InspirationalQuotes #SpiritualWisdom #MotivationalQuotes #KannadaCulture #QuoteOfTheDay #SubhashithaWisdom #KannadaProverbs #SelfAwareness #SoulfulQuotes #PositiveVibes #LifeInspired #Venkateswar

22 ಅಕ್ಟೋಬರ್ 2025

ದೋಸೆ ಹಾಕಿ ವಿಶ್ವ ದಾಖಲೆ ನಿರ್ಮಿಸಿದ ವಿಷ್ಣು!


 ಬಹಳಷ್ಟು ಜನರಿಗೆ ದೋಸೆಯೆಂದರೆ ಪ್ರಾಣ.ತರಾವರಿ‌ ದೋಸೆಗಳು ಜನರ ಬಾಯಲ್ಲಿ ನೀರೂರಿಸುತ್ತವೆ.ನನಗೆ ವೈಯಕ್ತಿಕವಾಗಿ ಬೆಣ್ಣೆ ದೋಸೆ,ಈರುಳ್ಳಿ ದೋಸೆ ಇಷ್ಟವಾದರೆ ನಮ್ಮ ಮನೆಯವರಿಗೆ ಮಸಾಲೆ ದೋಸೆ ಇಷ್ಟ.

ಇಲ್ಲೊಬ್ಬರು ರೆಕಾರ್ಡ್ ನಿರ್ಮಿಸಿದ್ದಾರೆ. ದೋಸೆ ತಿನ್ನುವುದರಲ್ಲಿ  ಅಲ್ಲ. ದೋಸೆ ಮಾಡುವುದರಲ್ಲಿ.

ಹೌದು ಈ ದಾಖಲೆಯನ್ನು ನಿರ್ಮಿಸಿದವರು ಭಾರತದ ಪ್ರಸಿದ್ಧ ಬಾಣಸಿಗ ವಿಷ್ಣು ಮನೋಹರ್!


25 ಗಂಟೆಗಳಲ್ಲಿ 15,773 ದೋಸೆಗಳನ್ನು ಹಾಕಿ    ವಿಷ್ಣು ಮನೋಹರ್ ರವರು ತಮ್ಮದೇ  ಹೆಸರಲ್ಲಿ ಇದ್ದ ದಾಖಲೆಯನ್ನು ಮುರಿದು   ಹೊಸ ವಿಶ್ವ ದಾಖಲೆ ನಿರ್ಮಿಸಿದರು. ಇಷ್ಟಕ್ಕೆ ಸುಮ್ಮನಾಗದ ಅವರು ಅಮೆರಿಕದಲ್ಲಿ ಮತ್ತೊಂದು ದಾಖಲೆ ನಿರ್ಮಿಸಲು ಕಾತರರಾಗಿದ್ದಾರೆ.

 


 ಪ್ರಸಿದ್ಧ ಶೆಫ್ ವಿಷ್ಣು ಮನೋಹರ್ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ನಿರಂತರವಾಗಿ 25 ಗಂಟೆಗಳ ಕಾಲ 15,773 ದೋಸೆಗಳನ್ನು ತಯಾರಿಸಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈಗ ಅವರು ಅಮೆರಿಕಾದಲ್ಲಿ 26 ಗಂಟೆಗಳ ದೋಸೆ ಮ್ಯಾರಥಾನ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ವರ್ಷ, ಅವರು ನಾಗಪುರದಲ್ಲಿ 24 ಗಂಟೆಗಳಲ್ಲಿ 14,400 ದೋಸೆಗಳನ್ನು ತಯಾರಿಸಿ ದಾಖಲೆ ಮಾಡಿದ್ದರು.


  ಅಕ್ಟೋಬರ್ 2025 ರ  ಶನಿವಾರ ಬೆಳಗ್ಗೆ 7 ಗಂಟೆಗೆ ದೋಸ ತಾವಾ  ಲಾನ್‌ನಲ್ಲಿ ದೋಸೆ ತಯಾರಿಕೆ ಪ್ರಾರಂಭಿಸಿದರು. ಭಾನುವಾರ ಬೆಳಗ್ಗೆ 6 ಗಂಟೆಗೆ ಅವರು ಹಿಂದಿನ ದಾಖಲೆಯನ್ನು ಮುರಿದು 15,700 ದೋಸೆಗಳನ್ನು ತಯಾರಿಸಿದರು. 20 ನಿಮಿಷಗಳ ಅಧಿಕೃತ ವಿರಾಮದ ನಂತರ, ಅವರು ಮತ್ತೆ ಕೆಲಸಕ್ಕೆ ಮುಂದಾಗಿ ಅಮರಾವತಿ ಜನತೆಗೆ ಬಿಸಿ ಬಿಸಿ ದೋಸೆಗಳನ್ನು ನೀಡಿದರು.


ಬೆಳಗ್ಗೆ 8 ಗಂಟೆಗೆ ಅವರು 15,773ನೇ ದೋಸೆಯನ್ನು ತಯಾರಿಸಿ ಹೊಸ ದಾಖಲೆಯನ್ನು ಅಧಿಕೃತವಾಗಿ ಮುಗಿಸಿದರು. ಅದೇ ವೇಳೆ, ಇಂಡಿಯಾ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿ ಪ್ರವೀಣ್ ರಾಉತ್ ಅವರು ಮನೋಹರ್ ಅವರಿಗೆ ಪದಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಿದರು.


ಈ ಸಂದರ್ಭದಲ್ಲಿ ಅಮರಾವತಿ ಜನರಿಂದ ದೋಸೆ ತಿನ್ನಲು ಹಾಗೂ ದಾಖಲೆಯನ್ನು ನೋಡಲು ಭಾರಿ ಪ್ರತಿಕ್ರಿಯೆಯು ವ್ಯಕ್ತವಾಯಿತು.ಶನಿವಾರ ಬೆಳಗ್ಗೆ 7 ಗಂಟೆಯಿಂದ ಮನೋಹರ್ ದೋಸೆ ತಯಾರಿಕೆ ಪ್ರಾರಂಭಿಸಿದ ನಂತರ ಸಾವಿರಾರು ಜನರು ಸಾಲಿನಲ್ಲಿ ನಿಂತು ದೋಸೆ ಸವಿದರು. ರಾತ್ರಿ 3 ರಿಂದ 5ರವರೆಗೆ ಜನರ ಸಂಖ್ಯೆ ಸ್ವಲ್ಪ ಕಡಿಮೆಯಾದರೂ, ಬೆಳಗ್ಗೆ 5 ರಿಂದ 8ರವರೆಗೆ ಮತ್ತೆ ಉತ್ಸಾಹ ತುಂಬಿತು.


ಈ ದಾಖಲೆಯ ಕಾರ್ಯಕ್ರಮದಲ್ಲಿ 30,000ಕ್ಕೂ ಹೆಚ್ಚು ಜನರು ಮನೋಹರ್, ಅವರ ಪತ್ನಿ ಅಪರ್ಣಾ, ಮತ್ತು ತಂಡ ತಯಾರಿಸಿದ ದೋಸೆಗಳನ್ನು ಸವಿದರು. ಭಾನುವಾರ ರಾತ್ರಿ ಬದ್ನೇರಾ ಶಾಸಕ ರವಿ ರಾಣಾ ಕೂಡ ಸ್ಥಳಕ್ಕೆ ಬಂದು ಸ್ವತಃ ಕೆಲವು ದೋಸೆಗಳನ್ನು ತಯಾರಿಸಿದರು. ಎಲ್ಲರಿಗೂ ಉಚಿತ ದೋಸೆಗಳನ್ನು ವಿತರಿಸಲಾಯಿತು.

ಈ ದಾಖಲೆಯ ದೋಸೆ ತಯಾರಿಸಲು ಅವರು ಒಂದೇ ಸಮಯದಲ್ಲಿ ನಾಲ್ಕು ತವಾಗಳಲ್ಲಿ  ದೋಸೆ ತಯಾರಿಸಲಾಯಿತು. ಪ್ರತಿ ಎರಡು ನಿಮಿಷಕ್ಕೆ ಸುಮಾರು 28 ಡೋಸೆ ಸಿದ್ಧವಾಗಿ ತಿನ್ನವವರ ಹೊಟ್ಟೆ ಸೇರಿದವು  ಇದಕ್ಕಾಗಿ  500 ಕೆ.ಜಿ. ದೋಸೆ ಹಿಟ್ಟನ್ನು ಮತ್ತು 800 ಕೆ.ಜಿ. ಚಟ್ನಿಯನ್ನು ಬಳಸಲಾಯಿತು


#Dosa #Food #WorldRecord #VishnuManohar #IndianCuisine #StreetFood #CulinaryArts #FoodLovers #Foodiegram #FoodInspiration #GourmetDosa #CulturalHeritage #TastyTreats #DosaLove #ChefVishnu #EpicureanDelight #GlobalCookoff #FoodChallenge #RecordBreakingFood

18 ಅಕ್ಟೋಬರ್ 2025

ದೀಪ..


 ದೀಪ..


ಹಣ ಅಂತಸ್ತು ನೋಡುತಾ
ಮಾಡದಿರು ಎಂದಿಗೂ ತರತಮ|
ದೀಪವ ನೋಡಿ ಕಲಿ ಅದು
ಓಡಿಸುವುದು ದೀನ ದಲಿತರ
ಮನೆ ಮನಗಳ  ತಮ||

ಸಿಹಿಜೀವಿ ವೆಂಕಟೇಶ್ವರ

17 ಅಕ್ಟೋಬರ್ 2025

ಹೇಳಿಕೊಳ್ಳುವಂತಹ ಸಿನಿಮಾ "ಏಳು ಮಲೆ"




ಹೇಳಿಕೊಳ್ಳುವಂತಹ ಸಿನಿಮಾ "ಏಳು ಮಲೆ"

ಅನಿವಾರ್ಯ ಕಾರಣದಿಂದ ಥಿಯೇಟರ್ ನಲ್ಲಿ ಏಳುಮಲೆ ಸಿನಿಮಾ ನೋಡಲಾಗಿರಲಿಲ್ಲ.ಇಂದು ಓಟಿಟಿ ಯಲ್ಲಿ ನೋಡಿದೆ.ಬಹಳ ಅಚ್ಚುಕಟ್ಟಾಗಿ ಚಿತ್ರಕತೆ ಬರೆದು ನಿರ್ದೇಶನ ಮಾಡಿದ ಪುನಿತ್ ರಂಗಸ್ವಾಮಿಯವರು ಕನ್ನಡ ಚಿತ್ರ ರಂಗಕ್ಕೆ ಸಿಕ್ಕ ಮತ್ತೊಬ್ಬ ಭರವಸೆಯ ನಿರ್ದೇಶಕ ಎಂದೆನಿಸಿತು.ಇಂತಹ ಹೊಸಬರನ್ನು ಪ್ರೋತ್ಸಾಹ ಮಾಡಿ ತೆರೆಮರೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿದ ಕ್ರಿಯೇಟಿವ್ ಹೆಡ್ ಕಂ ನಿರ್ಮಾಪಕರಾದ ತರುಣ್ ಕಿಶೋರ್ ಸುಧೀರ್ ಮುಂದೆಯೂ ಇಂತಹ ಸಿನಿಮಾ ನೀಡಲೆಂದು ಆಶಿಸುವೆ.
ಕಥೆಯೇನೂ ಹೊಸದಲ್ಲ.ಅದೇ ಮೇಲ್ವರ್ಗದ ಹುಡುಗಿ ಬಡ ಹುಡುಗ, ಬೇರೆ ಭಾಷೆ, ನಾಡಿನ ಪ್ರೇಮಿಗಳ ಕಥೆ.ಮನೆಯವರ ವಿರೋಧ ಪ್ರೇಮಿಗಳ ಹೋರಾಟ.ಆದರೆ ಆ ಕಥೆಯನ್ನು ನಿರೂಪಿಸಿರುವ ರೀತಿ ಬಹಳ ಚೆನ್ನಾಗಿದೆ.ಆರಂಭದಲ್ಲಿ ಮನೆಯಲ್ಲಿ ಆರಾಮಾಗಿ ಮಲಗಿಕೊಂಡು ಸಿನಿಮಾ ನೋಡುತ್ತಿದ್ದ ನಾನು ಅರ್ಧ ಸಿನಿಮಾ ಆದಾಗ ನನಗರಿವಿಲ್ಲದೇ ಎದ್ದು ಕೂತಿದ್ದೆ. ಪ್ರತಿ ಹತ್ತು ನಿಮಿಷಕ್ಕೊಂದು ಟ್ವಿಸ್ಟ್ ಗಳು  ಉಸಿರು ಬಿಗಿ ಹಿಡಿದು ಸಿನಿಮಾ ನೋಡುವಂತೆ ಮಾಡಿದವು.ಕೊನೆಯ ಶಾಟ್ ನಲ್ಲೂ ಏನೋ ಟ್ವಿಸ್ಟ್ ಇದೆ ಅಂತ ಊಹೆ ಮಾಡುವಾಗಲೇ ಟೈಟಲ್ ಕಾರ್ಡ್ ಬಂತು.ಅಂದರೆ ಪಾರ್ಟ್ ಟೂ   ಬರಬಹುದು ಎಂದು ನನ್ನ ನಿರೀಕ್ಷೆ.


ಮೊದಲ ಸಿನಿಮಾಗಿಂತ ಈ ಸಿನಿಮಾದಲ್ಲಿ ಡಿ ಗ್ಲಾಮ್ ಪಾತ್ರದಲ್ಲಿ ರಾಣಾ ನಟನೆಯಲ್ಲಿ ಪಳಗಿದ್ದಾರೆ. ಕಷ್ಟ ಕಾಲದಲ್ಲಿ ಪ್ರೇಮಿಯ ಸೇರುವ ಅವರ ಕಾತುರದ ಅಭಿನಯ ನೋಡಿದ ನೋಡುಗರು ಜಗ್ಗಪ್ಪ, ಮತ್ತು ಕಿಶೋರ್ ಅವರನ್ನು ಬೈಯ್ದುಕೊಳ್ಳುವ ರೇಂಜ್ ಗೆ ಅಭಿನಯ ಮಾಡಿದ್ದಾರೆ. ಎಂದಿನಂತೆ ಕಿಶೋರ್ ತಮ್ಮ ಅಭಿನಯದ ಮೂಲಕ ನೆಗೆಟಿವ್ ಶೇಡ್ ನ ಪೋಲಿಸ್ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅನುಭವಸ್ಥ ಹೆಡ್ ಕಾನ್ಸ್‌ಟೇಬಲ್ ಆಗಿ ನಾಗಾಭರಣ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ತೆಲುಗಿನ ಜಗಪತಿ ಬಾಬು ಕೆಲವೇ ದೃಶ್ಯಗಳಲ್ಲಿ ಬಂದರೂ ಅವರ ಅಭಿನಯ ಸೂಪರ್. ಚಿತ್ರದ ನಡುವೆ ಕಾಡುಗಳ್ಳ ವೀರಪ್ಪನ್ ಹತನಾಗುವ ದೃಶ್ಯಗಳನ್ನು ಬ್ಲೆಂಡ್ ಮಾಡಿರುವುದು ವರ್ಕ್ ಔಟ್ ಆಗಿದೆ.  ಸಿನಿಮಾದ ಗೆಲುವಿನಲ್ಲಿ ಛಾಯಾಗ್ರಾಹಕ ಅದ್ವೈತ ಗುರು ಮೂರ್ತಿ ಕೊಡುಗೆ ಮರೆಯಲಾಗದು.ಡಿ ಇಮ್ಮಾನ್ ರವರ ಹಾಡುಗಳು ಸಂದರ್ಭಕ್ಕೆ ತಕ್ಕಂತೆ ಹೊಂದಿಕೆಯಾಗಿವೆ.ಹಿನ್ನೆಲೆಯಲ್ಲಿ ಅವರು ನೀಡಿದ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.
ಒಟ್ಟಾರೆ ಕುಟುಂಬ ಸಮೇತ ನೋಡಬಹುದಾದ ಚಿತ್ರ ಏಳುಮಲೆ.ನೀವು ನನ್ನ ಹಾಗೆ ಥಿಯೇಟರ್ ನಲ್ಲಿ ಚಿತ್ರ ಮಿಸ್ ಮಾಡಿಕೊಂಡಿದ್ದರೆ.ಜೀ5ನಲ್ಲಿ ನೋಡಿ..

ಸಿಹಿಜೀವಿ ವೆಂಕಟೇಶ್ವರ.
ತುಮಕೂರು


 

26 ಸೆಪ್ಟೆಂಬರ್ 2025

ನನ್ನ ಅಕೌಂಟ್ ನಲ್ಲಿ ಒಂದು ಪೈಸೇನೂ ಇರಬಾರದು!


 ನನ್ನ ಅಕೌಂಟ್ ನಲ್ಲಿ ಒಂದು ಪೈಸೇನೂ ಇರಬಾರದು!



ಎಸ್ ಎಲ್ ಬೈರಪ್ಪನವರು ಓರ್ವ ಶ್ರೇಷ್ಠ ಕಾದಂಬರಿಕಾರ ಎಂಬುದು ಎಷ್ಟು ಸತ್ಯವೋ ಅವರೊಬ್ಬ ದಾರ್ಶನಿಕ, ಸಂಸ್ಕೃತಿ ಪರಿಚಾರಕ, ನೇರ ನಡೆ ನುಡಿಯ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬಾಳಿದ ಮಹಾನ್ ಚೇತನ ಎಂಬುದು ಅಷ್ಟೇ ಸತ್ಯ.
ಭೈರಪ್ಪ ರವರ ಬಹುತೇಕ ಕೃತಿಗಳನ್ನು ಓದಿರುವೆ.ಕೆಲವನ್ನು ಮತ್ತೆ ಮತ್ತೆ ಓದಿದ್ದೇನೆ. ಕೆಲ ಕೃತಿಗಳ ಬಗ್ಗೆ ನನ್ನ ಲಿಖಿತ ಅಭಿಪ್ರಾಯಗಳನ್ನು ಬರೆದು ಪತ್ರಿಕೆ ಮತ್ತು ಪುಸ್ತಕಗಳಲ್ಲೂ ಪ್ರಕಟಿಸಿರುವೆ.
ಬೈರಪ್ಪ ರವರ ನಿಷ್ಠುರವಾದ ಮಾತುಗಳು ನನ್ನ ಗಮನ ಸೆಳೆದವು.  ಇತರರು ಏನೆಂದು ಕೊಂಡಾರು ಎಂದು ಯೋಚಿಸದೇ ಆನೆ ನಡೆದದ್ದೇ ದಾರಿ ಎಂದು ಬದುಕಿ ತೋರಿಸಿದರು.
ಇತ್ತೀಚಿನ ದಿನಗಳಲ್ಲಿ ಅವರೊಂದು ಹೇಳಿಕೆ ನೀಡಿದರು."ನಾನು ಸಾಯೋವಾಗ ನನ್ನ ಅಕೌಂಟ್ ನಲ್ಲಿ ಒಂದು ಪೈಸೆಯೂ‌ ಇರಬಾರದು ಎಲ್ಲವನ್ನೂ ಫ್ಲಷ್  ಮಾಡಿಬಿಡಬೇಕು" ಈ ಮಾತು ಕೇಳಿ ಭೈರಪ್ಪನವರ ಬಗ್ಗೆ ಇದ್ದ ಅಭಿಮಾನ ನೂರ್ಮಡಿಯಾಯಿತು. ಹೌದು ಅದರಂತೆ ನಡೆದು ತೋರಿಸಿದರು. ಅವರ ಇದುವರೆಗಿನ ಸಂಪಾದನೆ ಮತ್ತು ಮುಂದೆ ಅವರ ಪುಸ್ತಕಗಳಿಂದ ಬರುವ ರಾಯಲ್ಟಿ ಹಣವನ್ನು ಒಂದು ಟ್ರಸ್ಟ್ ಗೆ  ವರ್ಗಾಯಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗವಾಗಲು ಕ್ರಮ ಕೈಗೊಂಡಿದ್ದಾರೆ. ತನ್ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಅನವಶ್ಯಕವಾಗಿ ಎಸ್ ಎಲ್ ಬಿ ಯವರನ್ನು ಟೀಕಿಸುವ ಪೂರ್ವಾಗ್ರಹ ಪೀಡಿತರೂ ಸಹ ಇವರ ಇಂತಹ ಜನೋಪಯೋಗಿ ನಡೆಗಳನ್ನು ಕಂಡು ಬಾಯಿ ಮುಚ್ಚಿಕೊಂಡು ಮೆಚ್ಚುಗೆ ಸೂಚಿಸಿದ ಪ್ರಸಂಗಗಳಿವೆ.
ಡಾಲರ್ ಗಟ್ಟಲೆ ಸಂಪಾದಿಸಿ ಐಶಾರಾಮಿ ಜೀವನ ನಡೆಸಲು ಉನ್ನತ ಹುದ್ದೆಗೆ ಏರಲು ಅವಕಾಶಗಳಿದ್ದರೂ ನಯವಾಗಿ ನಿರಾಕರಿಸಿ ಲಕ್ಷ್ಮಿಯ ಹಿಂದೆ ಹೋಗದೇ  ಸರಸ್ವತಿ ಸೇವೆಯನ್ನು ಮಾಡಿದ್ದಕ್ಕಾಗಿ ಕರ್ನಾಟಕಕ್ಕೆ ಮೊದಲ‌ "ಸರಸ್ವತಿ ಸಮ್ಮಾನ್" ಹುಡುಕಿಕೊಂಡು ಬಂತು. ನಾನೂ ಬಾಲ್ಯದಲ್ಲಿ ಹಲವು ಸಂಕಷ್ಟಗಳನ್ನು ಅನುಭವಿಸಿದರೂ ಬೈರಪ್ಪರವರ ಬಾಲ್ಯದ ಕಷ್ಟಗಳ ಮುಂದೆ ನನ್ನದೇನೂ ಅಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವೆ.ಆನಂದಸ್ವಾಮಿಯವರ ಪುಸ್ತಕಗಳು, ಅವರ ಫಿಲಾಸಫಿ ಗುರುಗಳಾದ ಯಮುನಾಚಾರ್ಯ ರವರು ಅವರ ಮೇಲೆ ಬಹು ಪ್ರಭಾವ ಬೀರಿದ ವ್ಯಕ್ತಿತ್ವಗಳು ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು.ಇದರ ಜೊತೆಯಲ್ಲಿ ಅವರ ದೇಶ ಸುತ್ತುವ, ಕೋಶ ಓದುವ, ಸಾಮಾನ್ಯ ಜನರೊಂದಿಗೆ ಬೆರಯುವ, ಕ್ಷೇತ್ರಕಾರ್ಯವನ್ನು ಮಾಡಿ ಅನುಭವದ ಮೂಲಕ ಬರೆಯುತ್ತಿದ್ದ ರೀತಿಗೆ ಇಂದು ನಮ್ಮ ಮುಂದೆ ಕ್ಲಾಸಿಕ್ ಕೃತಿಗಳಿವೆ.ನಮ್ಮ ದೇಶದ ಬೇರೆ ಭಾಷೆಗಳು, ಅಷ್ಟೇ ಏಕೆ ವಿದೇಶಿ ಭಾಷೆಗಳಿಗೂ ಅವರ ಕೃತಿಗಳು ಅನುವಾದಗೊಂಡು ಈಗಲೂ ಅವರ ಕೃತಿಗಳನ್ನು ಓದುತ್ತಿದ್ದಾರೆ.ಆ ಮೂಲಕ ಭೈರಪ್ಪನವರು ಚಿರಂಜೀವಿಯಾಗಿರುತ್ತಾರೆ.
ಭೈರಪ್ಪನವರ ಮತ್ತೊಂದು ಮಾತನ್ನು ನಾನು ಆಗಾಗ್ಗೆ ಜ್ಞಾಪಿಸಿಕೊಂಡು ನನಗೆ ನಾನೇ ಎಚ್ಚರಿಸಿಕೊಳ್ಳುತ್ತೇನೆ. ಅದೇನೆಂದರೆ "ಊರ ದೇವರು ಊರಾಡಿದಷ್ಟೂ ಮೂಲ ವಿಗ್ರಹಕ್ಕೆ ಬೆಲೆ ಕಡಿಮೆ ಆಗುತ್ತದೆ" ನಮ್ಮಲ್ಲಿ ಬಹಳ ಜನ ನಮ್ಮ ನೈಜ ಸಾಹಿತ್ಯ ಶಕ್ತಿಯನ್ನು ಹೊರತರುವ ಬದಲಿಗೆ ಅಲ್ಪ ಬರೆದು ಅದನ್ನೇ ವಿಜೃಂಭಿಸುವ ಮತ್ತು ಸೆಲಬ್ರೇಟ್ ಮಾಡಿಕೊಂಡು  ಸೆಲೆಬ್ರಿಟಿಯಾಗಿ ಸ್ವಯಂ ಬಿಂಬಿಸಿಕೊಳ್ಳುವವರಿಗೆ ಅವರ ಮಾತುಗಳು ನೆನಪಾಗಬೇಕು.
  ಭಾರತೀಯ ತತ್ತ್ವಶಾಸ್ತ್ರದಲ್ಲಿ ಬರುವ   ಮತ್ತೊಂದನ್ನು ಅವರು ಆಗಾಗ್ಗೆ ಹೇಳುತ್ತಿದ್ದ ಮಾತು ನನಗೆ ಪದೇ ಪದೇ ನೆನಪಾಗುತ್ತದೆ.ಅದು" The lower value should always  serve the higher, the higher is always valuable than lower "

ಸಮಾಜದಲ್ಲಿ ಮೌಲ್ಯಗಳ ಅಧಃಪತನವಾಗುತ್ತಿರುವ ಈ ಕಾಲಘಟ್ಟದಲ್ಲಿ ಭೈರಪ್ಪನವರ ಜೀವನವು ನಮಗೆ ಪ್ರೇರಣೆಯಾಗಲಿ.

ಸಿಹಿಜೀವಿ ವೆಂಕಟೇಶ್ವರ.

16 ಸೆಪ್ಟೆಂಬರ್ 2025

ಇಂದು ಓಜೋನ್ ದಿನ .


 ಪ್ರತಿವರ್ಷ ಸೆಪ್ಟೆಂಬರ್ 16ರಂದು ವಿಶ್ವ ಓಜೋನ್ ದಿನವನ್ನು ಆಚರಿಸಲಾಗುತ್ತದೆ.

ಓಜೋನ್ ಒಂದು ಅನಿಲ (Gas). ಇದರ ರಾಸಾಯನಿಕ ಸೂತ್ರ O₃ ಅಂದರೆ    ಮೂರು ಆಮ್ಲಜನಕ ಅಣುಗಳು!

ಬಣ್ಣವಿಲ್ಲದ, ಆದರೆ ಸ್ವಲ್ಪ “ಹುರಿ” ವಾಸನೆಯಿರುವ ಅನಿಲ.

ಇದು ವಾತಾವರಣದಲ್ಲಿ ಸಹಜವಾಗಿ ಉಂಟಾಗುತ್ತದೆ.


ಭೂಮಿಯ ವಾತಾವರಣದ ಸ್ಟ್ರಾಟೋಸ್ಫಿಯರ್ (Stratosphere) ಭಾಗದಲ್ಲಿ (ಸುಮಾರು 10–50 ಕಿಮೀ ಎತ್ತರದಲ್ಲಿ) ಓಜೋನ್ ಹೆಚ್ಚು ಸಾಂದ್ರತೆಯಲ್ಲಿ ಇರುತ್ತದೆ.

ಈ ಪದರವನ್ನು ಓಜೋನ್ ಪದರ (Ozone Layer) ಎಂದು ಕರೆಯಲಾಗುತ್ತದೆ.

ಇದು ಸೂರ್ಯನಿಂದ ಬರುವ ಅಲ್ಟ್ರಾ ವೈಲೆಟ್ (UV) ಕಿರಣಗಳನ್ನು ಶೋಷಿಸುತ್ತದೆ, ಭೂಮಿಯ ಜೀವಿಗಳಿಗೆ ರಕ್ಷಣೆ ನೀಡುತ್ತದೆ  ಕುಡಿಯುವ ನೀರಿನ ಸ್ವಚ್ಛತೆಗೆ ಓಜೋನ್ ಬಳಸಲಾಗುತ್ತದೆ. ಗಾಳಿ ಮತ್ತು ವಸ್ತುಗಳನ್ನು ಹಾನಿಕಾರಕ ಜೀವಾಣುಗಳಿಂದ ಮುಕ್ತಗೊಳಿಸಲು ಸಹ ಓಜೋನ್ ಉಪಯುಕ್ತ.


ಕೈಗಾರಿಕೆಯಲ್ಲಿ ಬಳಸುವ CFCs (Chlorofluorocarbons), ಏರ್‌ಕಂಡಿಷನರ್, ಫ್ರಿಜ್ ಗ್ಯಾಸ್‌ಗಳು, ಸ್ಪ್ರೆಗಳಲ್ಲಿ ಬಳಸುವ ರಾಸಾಯನಿಕಗಳು ಓಜೋನ್ ಪದರವನ್ನು ಹಾನಿಗೊಳಿಸುತ್ತವೆ.


ನಮ್ಮ ಓಜೋನ್ ಪದರ ರಕ್ಷಿಸೋಣ ತನ್ಮೂಲಕ ನಮ್ಮ ರಕ್ಷಣೆ ಮಾಡಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

11 ಸೆಪ್ಟೆಂಬರ್ 2025

ಕುಲದೀಪ.


 


ಕುಲದೀಪ..

ಭಾರತದ ವಿರುದ್ಧ ಯು ಎ ಇ
ಹೀನಾಯವಾಗಿ ಸೋತರು ಪಾಪ!
ಇದಕ್ಕೆ ಪ್ರಮುಖ ಕಾರಣ
ನಮ್ಮ ಸ್ಪಿನ್ ಬೌಲರ್  ಕುಲದೀಪ!!

ಸಿಹಿಜೀವಿ ವೆಂಕಟೇಶ್ವರ
ತುಮಕೂರು
KuldeepYadav #AsiaCupCricket #TeamIndia #ICC #BCCI #CricketHighlights #CricketLovers #IndiaWins #SpinMaster #CricketFans #Cupphaven #CrickerLife #IndianCricket #SportingMoments #BCCI2023 #AsiaCup2023 #FoundationOfWinners #CricketPassion #KuldeepMagic #Champions

09 ಸೆಪ್ಟೆಂಬರ್ 2025

ವಿಶೇಷ ಚೇತನನಾದರೂ ಬಹುಮುಖ ಪ್ರತಿಭೆಯಾಗಿ ಪ್ರಕಾಶಿಸುತ್ತಿರುವ ಪ್ರಕಾಶ್.


 




ವಿಶೇಷ ಚೇತನನಾದರೂ ಬಹುಮುಖ ಪ್ರತಿಭೆಯಾಗಿ ಪ್ರಕಾಶಿಸುತ್ತಿರುವ ಪ್ರಕಾಶ್.

ಸರ್ವಾಂಗಗಳೂ ಸುಸ್ಥಿತಿಯಲ್ಲಿದ್ದರೂ ಸೋಮಾರಿಗಳಾಗಿ ಕಾಲ ಹರಣ ಮಾಡುವ ಹಲವಾರು ಜನರ ನಡುವೆ ತಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಸಮಾಜದಲ್ಲಿ ತಲೆ ಎತ್ತಿಕೊಂಡು ಜೀವನ ಸಾಗಿಸುವ ವಿಶೇಷ ಚೇತನಗಳು ನಮ್ಮ ಮಧ್ಯ ಇರುವುದನ್ನು ಕಾಣುತ್ತೇವೆ.ಅಂತಹ ವಿಶೇಷ ಚೇತನ ಸಾಧಕರೊಬ್ಬರನ್ನು ಇಂದು ನಾನು ನಿಮಗೆ ಪರಿಚಯ ಮಾಡಿಕೊಡುವೆ.

ಹೆಸರು  ಪ್ರಕಾಶ್ ಆರ್ ಸಾಹಿತ್ಯ ವಲಯದಲ್ಲಿ ಅಮೃತ ಹಸ್ತ ಪ್ರಕಾಶ್ ಎಂದು ಗುರ್ತಿಸಿಕೊಂಡ ಇವರು ಕ್ರೀಡಾ ಕ್ಷೇತ್ರದಲ್ಲಿ ದಿವ್ಯಾಂಗ  ಸ್ಪೋರ್ಟ್ಸ್ ಪ್ರಕಾಶ್ ಎಂದು ಹೆಸರು ಮಾಡಿದ್ದಾರೆ.
ಬಾಲ್ಯದಲ್ಲಿ ಸಾಮಾನ್ಯ ಬಾಲಕನಾಗಿದ್ದ ಪ್ರಕಾಶ್ ಚುರುಕಿನ ಚಟುವಟಿಕೆಗಳಿಂದ ನೆರೆಹೊರೆಯವರ ಗಮನ ಸೆಳೆದಿದ್ದರು.ವಿಧಿಯ ಕ್ರೂರತೆಯು ಕೆಲವೊಮ್ಮೆ ನಮ್ಮ ಜೀವನದಲ್ಲಿ ಕೆಟ್ಟ ಘಳಿಗೆ ತಂದು ನಮ್ಮ ಆತ್ಮ ಶಕ್ತಿಗೆ ಸವಾಲಾಗಿ ನಿಲ್ಲುತ್ತದೆ. ಅಂತದೇ ಘಟನೆ ನಮ್ಮ ಪ್ರಕಾಶ್ ರವರ ಜೀವನದಲ್ಲೂ ಆಯಿತು. ಇದ್ದಕ್ಕಿದ್ದಂತೆ ಅವರ ಕಾಲುಗಳು ಸ್ವಾಧೀನ ಕಳೆದುಕೊಂಡವು. ಪೋಷಕರು ಆಘಾತದಿಂದ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿದರೂ ಉಪಯೋಗವಾಗಲಿಲ್ಲ.ವೀಲ್ ಚೇರ್ ಏರಿ ಶಾಲೆಯಲ್ಲಿ ಕಲಿತ ಪ್ರಕಾಶ್ ರವರಿಗೆ ಮತ್ತೊಂದು ಆಘಾತ ಕಾದಿತ್ತು. ಕ್ರಮೇಣವಾಗಿ ಅವರ  ಕಿವಿಗಳು ತಮ್ಮ ಗ್ರಹಣ ಶಕ್ತಿಯನ್ನು ಕಳೆದುಕೊಂಡವು.ಎದೆಗುಂದದ ಅವರು ತಮ್ಮ ಪೋಷಕರ ಬೆಂಬಲದಿಂದ ವಿದ್ಯಾಭ್ಯಾಸ ಮುಂದುವರೆಸಿ ಗೌರಿಬಿದನೂರಿನ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕಾರ್ಯ ಮಾಡಲು ಶುರುಮಾಡುತ್ತಾರೆ.ಆಗಲೇ ಅವರು ನನಗೆ ಪರಿಚಯವಾಗಿದ್ದು.ಹನಿ ಹನಿ ಇಬ್ಬನಿ ಸಾಹಿತ್ಯ ಬಳಗದಿಂದ ನಮ್ಮ ಪರಿಚಯ ಸ್ನೇಹವಾಗಿ ಮಾರ್ಪಾಡಾಗಿ ಇಂದಿಗೂ ಮುಂದುವರೆದಿದೆ.





ಗೌರಿಬಿದನೂರಿನಿಂದ ಪ್ರಕಾಶ್ ತುಮಕೂರಿಗೆ ಬಂದರು.ನಾನೂ ಬಂದೆ.ಗೌರಿಬಿದನೂರಿನಲ್ಲಿ ವಿಶೇಷ ಚೇತನ ಪ್ರಕಾಶ್ ಶಿಕ್ಷಕ ಹಾಗೂ ಕವಿಯಾಗಿ ಗುರ್ತಿಸಿಕೊಂಡಿದ್ದರೆ ತುಮಕೂರಿಗೆ ಬಂದು ಓರ್ವ ದಿವ್ಯಾಂಗ ಕ್ರೀಡಾಪಟುವಾಗಿ,ಸಮಾಜ ಸೇವಕನಾಗಿ ಸಂಘಟಕನಾಗಿ ಹೊರಹೊಮ್ಮಿದ್ದಾರೆ.ಅವರ ಸಾಧನೆಗಳು ಇತರ ದಿವ್ಯಾಂಗರಿಗೆ ಪ್ರೇರಣೆಯಾಗಿವೆ.



ತುಮಕೂರು ಡಿಸ್ಟ್ರಿಕ್ಟ್  ದಿವ್ಯಾಂಗ ಸ್ಪೋರ್ಟ್ಸ್ ಅಸೋಸಿಯೇಷನ್
ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ 
ವಿದ್ಮಹಿ ವಿಕಲಚೇತನರ ಸೇವಾ ಟ್ರಸ್ಟ್  ಸಂಸ್ಥಾಪಕ  ಅಧ್ಯಕ್ಷರಾಗಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ವಿಶೇಷ ಚೇತನರಿಗೆ ಚೇತನರಾಗಿ ನಿಂತಿದ್ದಾರೆ.ತುಮಕುರು  ಜಿಲ್ಲೆಯಲ್ಲೇ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಆಡಿದ ಮೊದಲಿಗರಾಗಿ ಗುರ್ತಿಸಿಕೊಂಡ ಪ್ರಕಾಶ್
ಜಿಲ್ಲೆಯಲ್ಲಿ ದಿವ್ಯಾಂಗರ ಕ್ರೀಡೆಯನ್ನು ಪರಿಚಯಿಸಿ ಕತ್ತಲಲ್ಲಿರುವ ದಿವ್ಯಾಂಗರನ್ನು ಬೆಳಕಿಗೆ ತರಲು ತುಮಕೂರು ಜಿಲ್ಲಾ ದಿವ್ಯಾಂಗ  ಸ್ಪೋರ್ಟ್ಸ್ ಅಕಾಡೆಮಿಯನ್ನು  ತೆರೆದು 30 ಕ್ಕೂ ಹೆಚ್ಚು ದಿವ್ಯಾಂಗರಿಗೆ ಕ್ರೀಡಾ ತರಬೇತಿ ನೀಡಿ ರಾಷ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುವಂತೆ ಮಾರ್ಗದರ್ಶನ ನೀಡಿದ್ದಾರೆ. ಇವರ ನೇತೃತ್ವದಲ್ಲಿ
ಬೆಳಗಾವಿಯಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್  ವೀಲ್ ಚೇರ್ ಕ್ರಿಕೆಟ್ ಹಾಗೂ
ಭದ್ರಾವತಿಯಲ್ಲಿ ನಡೆದ ರಾಜ್ಯ ಮಟ್ಟದ ಕ್ರಿಕೆಟ್‌ ಟೂರ್ನಮೆಂಟ್ಗಳಲ್ಲಿ
ತುಮಕೂರು ಜಿಲ್ಲೆಗೆ  ದ್ವಿತೀಯ ಸ್ಥಾನ ಲಭಿಸಿದೆ






ಇದರ ಜೊತೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ದಿವ್ಯಾಂಗರ ವೀಲ್ ಚೇರ್ ಪ್ಯಾರ ಬ್ಯಾಡ್ಮಿಟನ್ ನಲ್ಲಿ ಭಾಗವಹಿಸಿದ್ದಾರೆ.
ರಾಜ್ಯ ಮಟ್ಟದ ದಿವ್ಯಾಂಗರ ಕ್ರೀಡೆಗಳನ್ನು ನಡೆಸುವ ಮೂಲಕ ದಿವ್ಯಾಂಗರಲ್ಲಿ ಆತ್ಮಸ್ಪೈರ್ಯ ತುಂಬುತ್ತಿದ್ದಾರೆ ಇವರ ಪರಿಶ್ರಮದಿಂದ
ತುಮಕುರು ಜಿಲ್ಲೆಯಿಂದ  ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ  8 ಜನ ಆಯ್ಕೆ ಆಯ್ಕೆಯಾಗಿದ್ದಾರೆ.
ದಿವ್ಯಾಂಗರ ಕ್ರೀಡಾ ಪಟುಗಳಿಗೆ ಅಗತ್ಯವಾದ  ಶೂಸ್ ಮತ್ತು ಟೀ ಶರ್ಟ್ ಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ ಮುಂಬೈನಲ್ಲಿ ನಡೆದ ನ್ಯಾಷನಲ್ ವೀಲ್ ಚೆರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯವನ್ನು   ಪ್ರತಿನಿಧಿಸಿದ್ದಾರೆ.ತುಮಕೂರು ಡಿಸ್ಟ್ರಿಕ್ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿಯ ಮೂಲಕ ವಿಕಲಚೇತನರ ಕ್ರೀಡಾ ಕಾರ್ಯಕ್ರಮಗಳನ್ನು ಅಯೋಜಿಸಿದ್ದಾರೆ.
ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಮಟ್ಟದ ವೀಲ್ ಚೇರ್ ವಾಲಿಬಾಲ್ ಪಂದ್ಯಾವಳಿಯನ್ನು ನಡೆಸುವ ಮೂಲಕ ರಾಜ್ಯಕ್ಕೆ  ಮಾದರಿಯಾಗಿದ್ದಾರೆ.

ನ್ಯಾಷನಲ್  ಬ್ಯಾಸ್ಕೆಟ್ಬಾಲ್ ಚಾಂಪಿಯನ್ಶಿಪ್ ನಲ್ಲಿ  ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 
ನ್ಯಾಷನಲ್ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ  ಕರ್ನಾಟಕ ತಂಡಕ್ಕೆ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದಾರೆ.
2025 ರ ಅಗಸ್ಟ್ 15ನೇ ತಾರೀಕು  ರಾಜ್ಯ ಮಟ್ಟದ  ವೀಲ್ ಚೇರ್ ಬ್ಯಾಸ್ಕೆಟ್ಬಾಲ್  ತರಬೇತಿ ಶಿಬಿರವನ್ನು ಆಯೋಜಿಸಿದರು.ಇದೇ ವರ್ಷ ಪ್ಯಾರಾಸಿಟ್ಟಿಂಗ್ ಥ್ರೋ ಬಾಲ್ ನಲ್ಲಿ ನಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಶ್ರೀ ಲಂಕಾ ದಲ್ಲಿ ನಡೆಯುವ ಅಂತರಾಷ್ಟ್ರೀಯ ಪ್ಯಾರಾಸಿಟ್ಟಿಂಗ್ ತ್ರೋ ಬಾಲ್ ಗೆ ಆಯ್ಕೆ ಆಗುವ ಮೂಲಕ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಆಗಿ ಹೊರ ಹೊಮ್ಮಿದ್ದಾರೆ.





ಇನ್ನೂ ಸಾಹಿತ್ಯ ಕ್ಷೇತ್ರದಲ್ಲಿಯೂ ಪ್ರಕಾಶ್ ರವರ ಸಾಧನೆಯೇನು ಕಡಿಮೆಯಿಲ್ಲ.  ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ 100  ಕ್ಕೂ ಹೆಚ್ಚು ಕವಿಗೋಷ್ಠಿಗಳಿಗೆ ಆಯ್ಕೆ ಆಗಿ ಕವನ ವಾಚಿಸಿದ್ದಾರೆ.ನಾನೂ ಇವರೊಂದಿಗೆ ಹಲವಾರು ವೇದಿಕೆಗಳಲ್ಲಿ ಕವಿತೆ ವಾಚಿಸಿದ್ದೇನೆ. ಇವರ ಕವನಗಳು
ಹಲವಾರು ಪತ್ರಿಕೆಗಳಲ್ಲಿ ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ.ತುಮಕೂರಿನ ಕನ್ನಡ ಭವನದಲ್ಲಿ ಇವರ ಚೊಚ್ಚಲ ಕೃತಿ
ಅಮೃತಹಸ್ತ 2019 ರಲ್ಲಿ ಬಿಡುಗಡೆಯಾಗಿ ಓದುಗರ ಮೆಚ್ಚುಗೆಯನ್ನು ಗಳಿಸಿದೆ.
ಅಮೃತಹಸ್ತ ಪುಸ್ತಕದ ಮಾರಾಟದಿಂದ ಬಂದ ಹಣದಿಂದ ಅಂಧ ಮಕ್ಕಳಿಗೆ ಸಹಾಯ ಮಾಡಿದ್ದಾರೆ.
ಪ್ರೇಮ ಕಾದಂಬರಿ ಮತ್ತು ದಿವ್ಯಾಂಗರ ಕ್ರೀಡಾ ಲೋಕದ ಕುರಿತು ಕಾದಂಬರಿ ಪ್ರಕಟಣೆ ಗೆ ಸಿದ್ಧವಾಗಿವೆ.

ಪ್ರಕಾಶ್ ರವರ ಸಾಧನೆ ಇಲ್ಲಿಗೇ ನಿಂತಿಲ್ಲ.ಸಮಾಜ ಸೇವೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ
ಅಮೃತಹಸ್ತ ಸಂಸ್ಥೆಯ ಮೂಲಕ
  ಬಡತನದಲ್ಲಿರುವ ದಿವ್ಯಾಂಗರಿಗೆ  ವೀಲ್ ಚೇರ್ ಕೊಡಿಸುವ   ಶೂಸ್ ಮತ್ತು ಟೀ ಶರ್ಟ್ ಗಳನ್ನು ಕೊಡಿಸುವ, ಅನಾಥ ಮಕ್ಕಳಿಗೆ ಸಹಾಯ ಮಾಡುವ ಕಾಯಕ ಮಾಡುತ್ತಿದ್ದಾರೆ.ಅಮೃತಸಿಂಚನ ಸಂಸ್ಥೆ ಜೊತೆ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ವಿಕಲ ಚೇತನ ಮಕ್ಕಳಿಗೆ  ನೋಟ್ ಪುಸ್ತಕ ಬ್ಯಾಗ್ ಗಳನ್ನು ಕೊಡಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ.

ದಾನಿಗಳ ಸಹಕಾರದಿಂದ  "ಒಂದು ಜೊತೆ ಬಟ್ಟೆ" ಅಭಿಯಾನದಲ್ಲಿ ಭಾಗವಹಿಸಿ ಬಡವರಿಗೆ ಬಟ್ಟೆ ವಿತರಿಸಿದ್ದಾರೆ.ಅಂಧ ಮಕ್ಕಳಿಗೆ ಪ್ರತಿ ವರ್ಷ ಊಟ ಮತ್ತು ಸಿಹಿ ಹಂಚುತ್ತ ಬರುತ್ತಿದ್ದಾರೆ.
ಇವರು ಕ್ರೀಡೆ, ಸಾಹಿತ್ಯ ಮತ್ತು ಸಮಾಜ ಸೇವೆ ಗುರ್ತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಮತ್ತು ಪುರಸ್ಕಾರ ನೀಡಿ ಗೌರವಿಸಿದ್ದಾರೆ‌
ಕಸ್ತೂರಿ ಸಿರಿಗನ್ನಡ ವೇದಿಕೆಯು ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಿದರೆ  ಬೆಂಗಳೂರಿನ ಕವಿವೃಕ್ಷ ವೇದಿಕೆಯು ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಕರ್ನಾಟಕ ಚಲನಚಿತ್ರ ಮಂಡಳಿ ಯುವರತ್ನ ಪ್ರಶಸ್ತಿ ನೀಡಿದೆ.ಧಾರವಾಡದ ಚೇತನ ಫೌಂಡೇಶನ್  ರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ.
ಚಿತ್ರೋದ್ಯಮ ತಂಡವು  75 ಸೈನಿಕರೊಂದಿಗೆ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ದಾವಣಗೆರೆಯ ಸಾಧನ ಚಾರಿಟೇಬಲ್ ಟ್ರಸ್ಟ್  ನವರು ಸಾಧನ ರತ್ನ ಪ್ರಶಸ್ತಿ ನೀಡಿದ್ದಾರೆ.
ಬೆಂಗಳೂರಿನ  ಸ್ನೇಹಜೀವಿ ಗೆಳೆಯರ   ಬಳಗವು  ಸ್ನೇಹಜೀವಿ ದಿವ್ಯಾಂಗ ಕ್ರೀಡೆ ರತ್ನ ಪ್ರಶಸ್ತಿ  ನೀಡಿದರೆ
ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನವರು ಕಾಯಕ ಶ್ರೀ ಹಾಗೂ ಪ್ರಶಸ್ತಿ ನೀಡಿದ್ದಾರೆ.
ಕಾವ್ಯ ಶ್ರೀ ಚಾರಿಟೇಬಲ್  ಟ್ರಸ್ಟ್  ನವರು ಸುವರ್ಣ ಕನ್ನಡಿಗ ಪ್ರಶಸ್ತಿ  ನೀಡಿ ಗೌರವಿಸಿದ್ದಾರೆ.
ಚಂದನ ಸಾಹಿತ್ಯ ವೇದಿಕೆಯಿಂದ ಚಂದನ ಕ್ರೀಡಾ ರತ್ನ ಪ್ರಶಸ್ತಿ ,
ಚೇತನ ಸೋಶಿಯಲ್ ಕ್ಲಬ್ ನವರು  ಬಾರತ ಭೂಷಣ ನ್ಯಾಷನಲ್ ಅವಾರ್ಡ್ ನೀಡಿ ಪುರಸ್ಕಾರಿಸಿದ್ದಾರೆ.

ಇಂತಹ ಅಸಮಾನ್ಯ ಸಾಧನೆ ಮಾಡಿರುವ ವಿಶೇಷ ಚೇತನ ಪ್ರಕಾಶ್ ರವರ ಸಾಧನೆ ಶ್ಲಾಘನೀಯ. ಅವರ ಸಾಧನೆಗೆ ಮೆಚ್ಚುಗೆ ಸೂಚಿಸಲು ಮತ್ತು ಅವರ ಸಮಾಜಮುಖಿ ಕಾರ್ಯಗಳಿಗೆ ಜೊತೆಗೂಡಲು ಅವರ ಈ  8861443413 ನಂಬರ್ ಗೆ ಸಂಪರ್ಕಿಸಬಹುದು.


ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

17 ಆಗಸ್ಟ್ 2025

ಕೋಟಿ ಜನರ ಹೃದಯ ಗೆದ್ದು ಕೋಟಿ ಸಂಪಾದಿಸಿದ ಡ್ರೈವರ್..


ಅವರೊಬ್ಬ ಸಾಮಾನ್ಯ ಲಾರಿ ಚಾಲಕ   ದಿನಕ್ಕೆ ₹150 ಮಾತ್ರ ಸಂಪಾದಿಸುತ್ತಿದ್ದ ‌ಅವರ ಬ್ರಾಂಡ್ ಮೌಲ್ಯ ಈಗ 5 ಕೋಟಿ ಇದೊಂತರ ನಮ್ಮ ವಿ ಅರ್ ಎಲ್ ಓನರ್ ವಿಜಯ್ ಸಂಕೇಶ್ವರ ಕಥೆಯಂತಿದ್ದರೂ ಸ್ವಲ್ಪ ವಿಭಿನ್ನ. ನಾನೀಗ ನಿಮಗೆ ಪರಿಚಯ ಮಾಡುವ ವ್ಯಕ್ತಿಯ ಹೆಸರು ರಾಜೇಶ್!  ಜಾರ್ಖಂಡ್ ಮೂಲದ ರಾಜೇಶ್ ರವರ ಪೂರ್ಣ ಹೆಸರು ರಾಜೇಶ್ ರವಾನಿ.  ಈಗಲೂ ಲಾರಿ ಚಾಲಕನಾಗಿ ಕೆಲಸ ಮಾಡುತ್ತಾರೆ. ಬರೀ ಲಾರಿ ಡ್ರೈವರ್ ಆಗಿದ್ರೆ ಅವರು ಲಕ್ಷದಲ್ಲಿ ಒಬ್ಬ ಸಾಮಾನ್ಯ ಡ್ರೈವರ್ ಆಗಿರುತ್ತಿದ್ದರು ಆದರೆ ಯೂಟ್ಯೂಬ್ ಅವರನ್ನು ಸ್ಟಾರ್ ಆಗಿ ಪರಿವರ್ತಿಸುವ ಮೂಲಕ ಕೋಟಿ ಸಂಪಾದಿಸುವ ಡಿಜಿಟಲ್ ಕ್ರಿಯೇಟರ್,ಹಾಗೂ ಯೂಟ್ಯೂಬರ್ ಆಗಿ ಪರಿವರ್ತಿಸಿದೆ.

ಬಿಸಿಲು, ಮಳೆ,ಚಳಿ,ಹಗಲು,ರಾತ್ರಿಗಳ ಪರಿವೆ ಇಲ್ಲದೆ ಸಂಸಾರದಿಂದ ವಾರ, ಮಾಸಗಳ ಕಾಲ ದೂರವಿರುವ ಲಾರಿ ಡ್ರೈವರ್ ಗಳ ಲೋಕವೇ ವಿಶಿಷ್ಟ. ಅಂತಹ ಕಾಯಕ ಮಾಡುವ ರಾಜೇಶ್ ಒಮ್ಮೆ ಕುತೂಹಲಕ್ಕೆ ತನ್ನ ಲಾರಿ ಡ್ರೈವಿಂಗ್ ಅನುಭವಗಳನ್ನು ಪುಟ್ಟ ವೀಡಿಯೋ ಮಾಡಿ ಹರಿಬಿಟ್ಟರು. ಜನರು ಅವರ ವೀಡಿಯೋ ನೋಡಿ ಖುಷಿ ಪಟ್ಟು ಸಬ್ಸ್ಕ್ರೈಬ್ ಲೈಕ್ ಶೇರ್ ಮಾಡಿ ಬೆಂಬಲಿಸಿದರು.ಅಲ್ಲೊಂದು ಪವಾಡವೇ ಜರುಗಿತು.ಈಗ ಅವರ "ಆರ್ ರಾಜೇಶ್ ವ್ಲಾಗ್" ಹೆಸರಿನ ಯೂಟ್ಯೂಬ್ ಚಾನೆಲ್ ಗೆ ಬರೋಬ್ಬರಿ ಕಾಲು ಕೋಟಿ ಚಂದಾದಾರರರು.ಎಂಬತ್ತು ಕೋಟಿಗಿಂತ ಹೆಚ್ಚು ವೀಕ್ಷಣೆ ಕಂಡ ಅವರ ಸಂಪಾದನೆ ತಿಂಗಳಿಗೆ ಐದರಿಂದ ಹತ್ತು ಲಕ್ಷಗಳು!


ರಾಜೇಶ್ ತಮ್ಮ ವ್ಲಾಗ್ ಗಳಲ್ಲಿ  ಚಾಲಕರ ದಿನನಿತ್ಯದ ಸಂಕಷ್ಟಗಳು, ರಸ್ತೆಗಳಲ್ಲಿ ಕಂಡುಬರುವ ಅದ್ಭುತ ದೃಶ್ಯಗಳು, ವಾಹನ ಸಂಬಂಧವಾದ ಸಲಹೆಗಳು, ರಸ್ತೆ ಸುರಕ್ಷತಾ ಮಾಹಿತಿಗಳನ್ನು ಅವರು ಹಂಚಿಕೊಳ್ಳುತ್ತಿದ್ದರು. ಮೊದಲಿಗೆ ಕೆಲವರು ಮಾತ್ರ ನೋಡುತ್ತಿದ್ದರು, ಆದರೆ ನಿಧಾನವಾಗಿ ಸಾವಿರಾರು ಜನರು ಅವರ ವಿಡಿಯೋಗಳನ್ನು ನೋಡಲು ಪ್ರಾರಂಭಿಸಿದರು.


ರಾಜೇಶ್ ಅವರ ಸರಳತೆ, ನಿಜವಾದ ಅನುಭವ ಮತ್ತು ಮನಸಾರೆ ಆಡುವ  ಮಾತುಗಳು ಜನರನ್ನು ಆಕರ್ಷಿಸಿದವು. ಅತಿರೇಕವಿಲ್ಲದೆ ತಾನು ಬದುಕುತ್ತಿದ್ದ ಜೀವನವನ್ನೇ ಜನರಿಗೆ ತೋರಿಸುತ್ತಿದ್ದುದರಿಂದ ಎಲ್ಲರೂ ಅವರಿಗೆ ಹತ್ತಿರವಾದರು.


ಕಾಲಕಳೆದಂತೆ ಅವರ ಯೂಟ್ಯೂಬ್ ಚಾನೆಲ್ ಬೆಳೆಯಿತು. ಹವ್ಯಾಸವಾಗಿ ಪ್ರಾರಂಭಿಸಿದ ಕೆಲಸವೇ ಅವರಿಗೆ ಎರಡನೇ ಉದ್ಯೋಗವಾಯಿತು. ಈಗ ಬ್ರಾಂಡ್‌ಗಳು ಅವರನ್ನು ಸಂಪರ್ಕ ಮಾಡಿ  ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತವೆ.ಯಾಕೆಂದರೆ ಈಗ ಅವರೇ ಒಂದು ಬ್ರಾಂಡ್!

ದುಡ್ಡು ಬಂತು ಎಂದು ರಾಜೇಶ್ ಅರ್ಧ ರಾತ್ರಿಯಲ್ಲಿ ಛತ್ರಿ ಹಿಡಿಯಲಿಲ್ಲ ಬದಲಿಗೆ 

ಇಂದಿಗೂ ರಾಜೇಶ್ ತಮ್ಮ ಲಾರಿಯನ್ನು ಓಡಿಸುತ್ತಲೇ ಇದ್ದಾರೆ. ಜೊತೆಗೆ ಸಾವಿರಾರು ಜನರಿಗೆ ಪ್ರೇರಣೆಯೂ ಆಗಿದ್ದಾರೆ. ಮೋಟಾರು ವಾಹನ ತಯಾರಿಕಾ ದೈತ್ಯ ಕಂಪನಿಯ ಮಾಲಿಕರಲ್ಲಿ ಒಬ್ಬರಾದ ಆನಂದ್ ಮಹಿಂದ್ರ ರಾಜೇಶ್ ರವರನ್ನು ಮನಸಾರೆ ಹೊಗಳಿದ್ದಾರೆ.ಪ್ರಸ್ತುತ ಅವರು ಒಂದು ಕೋಟಿ ಬೆಲೆ ಬಾಳುವ ಮನೆಯನ್ನು ಕಟ್ಟಿಸಿದ್ದಾರೆ.ಅವರ ಮೂವರು ಮಕ್ಕಳು ಅವರ ಯೂಟ್ಯೂಬ್ ವೀಡಿಯೋಗಳನ್ನು ಎಡಿಟ್ ಮಾಡುವ ಪ್ರಮೋಟ್ ಮಾಡುವಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದಾರೆ.

ಯಾವುದೇ ಕೆಲಸವನ್ನು ಶ್ರದ್ಧೆ, ಮತ್ತು ಅಚ್ಚುಕಟ್ಟಾಗಿ ಮಾಡಿದರೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಯೂಟ್ಯೂಬ್ ನಂತಹ ವೇದಿಕೆಗಳು ಹೇಗೆ ನಮ್ಮ ಜೀವನವನ್ನು ಧನಾತ್ಮಕವಾಗಿ ಬದಲಾಯಿಸುತ್ತವೆ ಎಂಬುದಕ್ಕೆ ರಾಜೇಶ್ ರವರ ಬದುಕೇ ಉದಾಹರಣೆ. ಇಂದಿನ ಯುವ ಜನರಿಗೆ ರಾಜೇಶ್ ಬಹುದೊಡ್ಡ ಪ್ರೇರಣೆ. ನಮ್ಮ ಹಿನ್ನಲೆ ಏನೇ ಇರಲಿ ಕೆಲಸದೆಡೆಗಿನ  ಒಲವು ಮತ್ತು ನಿರಂತರ ಪರಿಶ್ರಮ ಇದ್ದರೆ ಜೀವನವನ್ನು ಬದಲಾಯಿಸಬಹುದು ಎಂಬುದನ್ನು ರಾಜೇಶ್ ಸಾಬೀತು ಮಾಡಿದ್ದಾರೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು






 

30 ಜುಲೈ 2025

ಸರ್ಕಾರಿ ಕೆಲಸ ಪಡೆದ ರೈತನ ಮೂರೂ ಮಕ್ಕಳು.


 



 ಕೆಲಸ ಸಿಗಲಿಲ್ಲ  ಎಂದು ಪರಿತಪಿಸುತ್ತಾ  ಸರ್ಕಾರಿ ಉದ್ಯೋಗ ಪಡೆಯಲು  ಪರದಾಡುತ್ತಿರುವ ಮಧ್ಯೆಸಾಮಾನ್ಯ ರೈತ ಕುಟುಂಬದ ಮೂವರು ಒಡಹುಟ್ಟಿದವರು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಗಮನ ಸೆಳೆದಿದ್ದಾರೆ. ಈ ಮೂಲಕ ತಂದೆಯ ಕನಸನ್ನು ಈ  ಮೂವರು ಮಕ್ಕಳು ಈಡೇರಿಸಿದ್ದಾರೆ.


ಕರೀಂನಗರ ಜಿಲ್ಲೆಯ ವೀನವಂಕ ಬಳಿಯ ರೆಡ್ಡಿಪಲ್ಲಿ ಗ್ರಾಮದ ಪೊತುಲು ಇಂದಿರಾ ಮತ್ತು ಚಂದ್ರೈ ದಂಪತಿಯ ಮೂವರೂ ಮಕ್ಕಳು ಸರ್ಕಾರಿ  ಹುದ್ದೆ ಪಡೆದಿದ್ದಾರೆ. 2 ಎಕರೆಯಲ್ಲಿ ದಂಪತಿ ಕೃಷಿ ಜೊತೆಗೆ ಕೂಲಿ ಕೆಲಸ ಮಾಡುತ್ತಾ ಕಷ್ಟಪಟ್ಟು ಮಕ್ಕಳನ್ನು ಓದಿಸಿದ್ದರು. ಎಲ್ಲ ಪೋಷಕರು ಬಯಸುವಂತೆ  ತಮ್ಮ ಮಕ್ಕಳನ್ನು ಸರ್ಕಾರಿ ಕೆಲಸಕ್ಕೆ ಸೇರಿಸಬೇಕು ಎಂದು ತಂದೆ ಕನಸು ಕಂಡಿದ್ದರು.


ಸರ್ಕಾರಿ ಶಾಲೆಯಲ್ಲೇ ಕಲಿತು ಸರ್ಕಾರಿ ಉದ್ಯೋಗ ಪಡೆದ ಮಕ್ಕಳ ಸಾಧನೆ ಕಂಡ ಪೋಷಕರು ಆನಂದ ಭಾಷ್ಪ ಸುರಿಸಿದ್ದಾರೆ.

 ಓರ್ವ ಮಗ ಸಿಆರ್​ಪಿಎಫ್ ಅಸಿಸ್ಟಂಟ್ ಕಮಾಂಡರ್, ಇನ್ನೊಬ್ಬ ಸಿಐಎಸ್​ಪಿ ಕಾನ್ಸ್​ಟೇಬಲ್ ಮತ್ತು ಪುತ್ರಿ ಅಬಕಾರಿ ಕಾನ್ಸ್​ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.


ಈ ರೈತನ ಹಿರಿಯ ಮಗ ಎಂ ಬಿ ಬಿ ಎಸ್ ಓದಿದದರೂ ಸರ್ಕಾರಿ ಹುದ್ದೆ ಸಿಗದ ಕಾರಣದಿಂದ ಡಾಕ್ಟರ್ ಹುದ್ದೆ ತೊರೆದು ತಂದೆಯ ಆಸೆಯಂತೆ ಸರ್ಕಾರಿ ಕೆಲಸ ಪಡೆದಿದ್ದಾರೆ.

 ಅಜಯ್ ಕರೀಂ ನಗರದ ಪ್ರತಿಮಾ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಇವರು ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಯದೇ ಅಪ್ಪನ ಆಸೆಯಂತೆ ಪೊಲೀಸ್ ಸಮವಸ್ತ್ರ ಧರಿಸಬೇಕೆಂದು ನಿರ್ಧರಿಸಿದ್ದರು. ಅಂತೆಯೇ ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸಿಆರ್​ಪಿಎಫ್ ಅಸಿಸ್ಟಂಟ್ ಕಮಾಂಡರ್ ಆಗಿ ಆಯ್ಕೆ ಆಗಿದ್ದಾರೆ.


"ಚೆನ್ನಾಗಿ ಓದಿ ಪೊಲೀಸ್ ಅಧಿಕಾರಿಯಾಗುವಂತೆ ನಮ್ಮ ತಂದೆ ನನಗೆ ಬಾಲ್ಯದಿಂದಲೂ ಹೇಳುತ್ತಿದ್ದರು. ಆದರೆ ಡಾಕ್ಟರ್ ಆಗಬೇಕೆಂಬ ನನ್ನ ಕನಸು ಪೂರೈಸಿಕೊಳ್ಳಲು ಎಂಬಿಬಿಎಸ್ ಮಾಡಿದೆ.  ತಂದೆಯ ಮಾತು ನನ್ನನ್ನು ಕಾಡುತ್ತಿತ್ತು. ಆದ್ದರಿಂದ ಸ್ಫರ್ಧಾತ್ಮಕ ಪರೀಕ್ಷೆ ಪಡೆದು ಕಮಾಂಡರ್ ಆಗಿ ತಂದೆಯ ಕನಸು ನನಸು ಮಾಡಿರುವೆ" ಎಂದು ಅಜಯ್ ತಿಳಿಸಿದ್ದಾರೆ.


 ಅಜಯ್ ಅವರ ತಂಗಿ ನವಥಾ ಸರ್ಕಾರಿ ಶಾಲೆಯಲ್ಲಿ ಕಲಿತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಕೂಡ ನೇಮಕಾತಿ ಪರೀಕ್ಷೆಯಲ್ಲಿ ಪಾಸಾಗಿ ಅಬಕಾರಿ ಇಲಾಖೆಯಲ್ಲಿ ಕಾನ್ಸ್​ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಇವರ ಸಹೋದರ ಶ್ರವಣ ಕೂಡ ಉತ್ತರ ಪ್ರದೇಶದ ಲಖನೌದಲ್ಲಿ ಸಿಐಎಸ್​ಎಫ್ ಕಾನ್ಸ್​ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ.



ತಂದೆ ತಾಯಿಗಳು ಕಷ್ಟ ಪಟ್ಟು ಶಿಕ್ಷಣ ನೀಡಿದರು. ಅದಕ್ಕೆ ತಕ್ಕಂತೆ ಮಕ್ಕಳು ಸತತ ಪ್ರಯತ್ನ ಮತ್ತು ಪರಿಶ್ರಮದಿಂದ  ಸರ್ಕಾರಿ ಉದ್ಯೋಗ ಪಡೆದರು.

ಮಧ್ಯಮ ವರ್ಗದ ಕುಟುಂಬದ ಗ್ರಾಮೀಣ ಹಿನ್ನೆಲೆಯಿಂದ ಬಂದ ಈ  ಮೂವರ ಸಾಧನೆ ಇತರರಿಗೆ ಪ್ರೇರಣೆಯಾಗಿದೆ.


ಸಿಹಿಜೀವಿ ವೆಂಕಟೇಶ್ವರ


19 ಜುಲೈ 2025

ಲಲಿತಾಸನಲ್ಲಿ ಕುಳಿತ ಶ್ರೀಕೃಷ್ಣ.


 



ಸಾಮಾನ್ಯ ಶಕ ವರ್ಷ 

950 ರ ಕಾಲದ 

ಚೋಳರ ಕಾಲಕ್ಕೆ ಸೇರಿದ ಈ  ವಿಷ್ಣುವಿನ ವಿಶೇಷವಾದ ಮೂರ್ತಿ ಪ್ರಸ್ತುತ ಬ್ರಿಟಿಷ್‌ ಮ್ಯೂಸಿಯಂ ನಲ್ಲಿದೆ.


 ಲಂಬವಾದ ಅಡ್ಡ ಪಟ್ಟಿಗಳನ್ನು ಹೊಂದಿರುವ ಮೆಟ್ಟಿಲು ಸಿಂಹಾಸನದ ಮೇಲೆ ಲಲಿತಾಸನದಲ್ಲಿ ಕುಳಿತಿರುವ, ಅಗಲವಾದ ಭುಜಗಳು ಮತ್ತು ಕಿರಿದಾದ ಸೊಂಟವನ್ನು ಹೊಂದಿರುವ ಕಿರೀಟಧಾರಿ ವಿಷ್ಣುವಿನ ಕಂಚಿನ ಆಕೃತಿಯು ಆ ಕಾಲದ  ಶಿಲ್ಪಿಗಳ ಚಾಕಚಕ್ಯತೆಗೊಂದು ಉದಾಹರಣೆ.

ನಮ್ಮ ಸಾಂಸ್ಕೃತಿಕ ಪರಂಪರೆ

ನಮ್ಮ ಹೆಮ್ಮೆ..


ಸಿಹಿಜೀವಿ ವೆಂಕಟೇಶ್ವರ.


#CulturalHeritage #HeritagePreservation #CulturalDiversity #Tradition #CulturalIdentity #History #Authenticity #CulturalAwareness #ArtAndCulture #WorldHeritage #CulturalLegacy #RichHeritage #CulturalMapping #CulturalExpression #Folklore #PreserveOurHeritage #CulturalRoots #CulturalFestival #Ethnic

Diversity


14 ಜುಲೈ 2025

ನಾಲ್ಕು ಸೇಬುಗಳ ಕಥೆ.



ನಾಲ್ಕು ಸೇಬುಗಳ ಕಥೆ


ಆರು ವರ್ಷದ ಮಗುವಿಗೆ ಗಣಿತ ಕಲಿಸುತ್ತಿದ್ದ ಶಿಕ್ಷಕಿಯೊಬ್ಬರು "ನಾನು ನಿನಗೆ ಒಂದು ಸೇಬು, ಮತ್ತೊಂದು ಸೇಬು ಹಾಗೂ ಮತ್ತೊಂದು ಸೇಬು ಕೊಟ್ಟರೆ ನಿನ್ನಲ್ಲಿ ಎಷ್ಟು ಸೇಬು ಇರುತ್ತವೆ?" ಎಂದು ಕೇಳಿದರು.

ಮನದಲ್ಲೇ ಲೆಕ್ಕ ಹಾಕಿ 

ಕೆಲವು ಸೆಕೆಂಡುಗಳಲ್ಲಿ ಹುಡುಗ ಆತ್ಮವಿಶ್ವಾಸದಿಂದ, "ನಾಲ್ಕು!" ಎಂದು ಉತ್ತರಿಸಿದನು.


ನಿರಾಶೆಗೊಂಡ ಶಿಕ್ಷಕಿಯು   ಸರಿಯಾದ ಉತ್ತರ ಮೂರನ್ನು  ನಿರೀಕ್ಷಿಸುತ್ತಿದ್ದರು.

 ಮಗು ಸರಿಯಾಗಿ ಕೇಳದಿರಬಹುದೆಂದು ಯೋಚಿಸಿ

ಪ್ರಶ್ನೆಯನ್ನು ಪುನರಾವರ್ತಿಸಿದರು"ದಯವಿಟ್ಟು ಎಚ್ಚರಿಕೆಯಿಂದ ಆಲಿಸು‌

ಇದು ತುಂಬಾ ಸರಳವಾಗಿದೆ. ನೀನು ಎಚ್ಚರಿಕೆಯಿಂದ ಆಲಿಸಿದರೆ ಸರಿಯಾದ ಉತ್ತರ ನೀಡಬಹುದು" ಎಂದು 

"ನಾನು ನಿನಗೆ ಒಂದು ಸೇಬು, ಮತ್ತೊಂದು ಸೇಬು ಹಾಗೂ  ಮತ್ತೊಂದು ಸೇಬು ಕೊಟ್ಟರೆ, ನಿನ್ನಲ್ಲಿ ಎಷ್ಟು ಸೇಬು ಇರುತ್ತವೆ?"


ಹುಡುಗನು ತನ್ನ ಶಿಕ್ಷಕಿಯ ಮುಖದಲ್ಲಿನ  ನಿರಾಶೆಯನ್ನು ಕಂಡು ಮತ್ತೆ ತನ್ನ ಬೆರಳುಗಳ ಮೇಲೆ ಲೆಕ್ಕ ಹಾಕಿದನು. ತನ್ನ ಶಿಕ್ಷಕಿಯನ್ನು ಸಂತೋಷಪಡಿಸುವ ಉತ್ತರವನ್ನು ಹುಡುಕುತ್ತಿದ್ದನು.

ಈ  ಬಾರಿ ಸ್ವಲ್ಪ ಹಿಂಜರಿಕೆಯಿಂದ ಅವನು "ನಾಲ್ಕು..." ಎಂದು ಉತ್ತರಿಸಿದನು.

 ಶಿಕ್ಷಕಿಯ ಮುಖದಲ್ಲಿ ನಿರಾಶೆ ಎದ್ದು ಕಾಣುತ್ತಿತ್ತು.

ಪ್ರಯತ್ನ ಬಿಡದ ಶಿಕ್ಷಕಿ 

ಆ ಹುಡುಗನಿಗೆ ಸೇಬು ಇಷ್ಟವಿಲ್ಲ ಆದರೆ ಸ್ಟ್ರಾಬೆರಿಗಳು ತುಂಬಾ ಇಷ್ಟ ಎಂದು  ನೆನಪಿಸಿಕೊಂಡು ಪ್ರಶ್ನೆ ಕೇಳಲು ಶುರುಮಾಡಿದಳು .


ಈ ಬಾರಿ ಶಿಕ್ಷಕಿಯು ಉತ್ಸಾಹ ಮತ್ತು ಮಿನುಗುವ ಕಣ್ಣುಗಳೊಂದಿಗೆ ಕೇಳಿದರು.

“ನಾನು ನಿನಗೆ ಒಂದು ಸ್ಟ್ರಾಬೆರಿ,ಮತ್ತೊಂದು ಸ್ಟ್ರಾಬೆರಿ ಹಾಗೂ ಮತ್ತೊಂದು ಸ್ಟ್ರಾಬೆರಿ ಕೊಟ್ಟರೆ, ನಿನ್ನಲ್ಲಿ ಎಷ್ಟು ಸ್ಟ್ರಾಬೆರಿ ಇರುತ್ತವೆ ?”

 

ಶಿಕ್ಷಕಿ ಸಂತೋಷವಾಗಿರುವುದನ್ನು ನೋಡಿ,  ಹುಡುಗ ಮತ್ತೆ ತನ್ನ ಬೆರಳುಗಳ ಮೇಲೆ ಲೆಕ್ಕ ಹಾಕಿದನು.

ಅವನ ಮೇಲೆ ಯಾವುದೇ ಒತ್ತಡವಿರಲಿಲ್ಲ, ಆದರೆ ಶಿಕ್ಷಕಿಯ ಮೊಗದಲ್ಲಿ ಸರಿ ಉತ್ತರ ನೀಡುವನೋ ಇಲ್ಲವೋ ಎಂಬ    ಒತ್ತಡ ಕಾಣುತ್ತಿತ್ತು.


ಅವಳು ತನ್ನ ಹೊಸ ವಿಧಾನವು ಯಶಸ್ವಿಯಾಗಬೇಕೆಂದು ಬಯಸಿದ್ದಳು.

ಹಿಂಜರಿಯುತ್ತಲೇ  ನಗುವಿನೊಂದಿಗೆ ಚಿಕ್ಕ ಹುಡುಗ "ಮೂರು?" ಎಂದು ಉತ್ತರಿಸಿದನು.

ಶಿಕ್ಷಕಿಗೆ ಈಗ ಸಂತಸಗೊಂಡು  ನಕ್ಕರು. ಅವರ ವಿಧಾನವು ಯಶಸ್ವಿಯಾಗಿತ್ತು.

ಅವರ ತನ್ನನ್ನು ತಾನೇ ಅಭಿನಂದಿಸಿಕೊಂಡು  ಕೊನೆಯದಾಗಿ ಸೇಬಿ‌ನ ಉದಾಹರಣೆ ಮೂಲಕ ಪ್ರಶ್ನೆ ಕೇಳಿ ಉತ್ತರ ಪಡೆಯಲು ಮುಂದಾದರು.

"ನಾನು ನಿನಗೆ ಒಂದು ಸೇಬು, ಮತ್ತೊಂದು ಸೇಬು ಹಾಗೂ  ಮತ್ತೊಂದು ಸೇಬು ಕೊಟ್ಟರೆ, ನಿನ್ನಲ್ಲಿ ಎಷ್ಟು ಸೇಬು ಇರುತ್ತವೆ?"


ತಕ್ಷಣ ಹುಡುಗ ಆತ್ಮವಿಶ್ವಾಸದಿಂದ   “ನಾಲ್ಕು!” ಅಂದುಬಿಟ್ಟ.

ಶಿಕ್ಷಕಿ ಸಿಟ್ಟಿನಿಂದ ಅದೇಗೆ ನಾಲ್ಕು ಹೇಳು ನೋಡೋಣ ಅಂದರು. 


ಆ ಹುಡುಗ ಪಿಳಿ ಪಿಳಿ ಕಣ್ಣು ಬಿಡುತ್ತಾ "ಏಕೆಂದರೆ ನನ್ನ ಚೀಲದಲ್ಲಿ ಈಗಾಗಲೇ ಒಂದು ಸೇಬು ಇದೆ"  ಮೆಲುದನಿಯಲ್ಲಿ ಉತ್ತರಿಸಿದನು.


ನಾವೂ ಹಾಗೆಯೇ ಯಾರಾದರೂ ನಾವು ನಿರೀಕ್ಷಿಸುವುದಕ್ಕಿಂತ ಭಿನ್ನವಾದ ಉತ್ತರವನ್ನು ನೀಡಿದಾಗ  ಅವರು  ತಪ್ಪು‌ ನಾವು ಮಾತ್ರ ಸರಿ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ಅವರ ಉತ್ತರದಲ್ಲಿ

ನಾವು ಅರ್ಥಮಾಡಿಕೊಳ್ಳದೇ ಇರುವ ಮತ್ತೊಂದು ಕೋನ ಇರಬಹುದು.ಆದ್ದರಿಂದ

ವಿಭಿನ್ನ ದೃಷ್ಟಿಕೋನಗಳನ್ನು ಪ್ರಶಂಸಿಸಲು ಮತ್ತು ಅರ್ಥಮಾಡಿಕೊಳ್ಳಲು ನಾವು ಕಲಿಯಬೇಕು.

ಆಗಾಗ್ಗೆ ನಾವು ನಮ್ಮ ದೃಷ್ಟಿಕೋನಗಳನ್ನು ಇತರರ ಮೇಲೆ ಹೇರಲು ಪ್ರಯತ್ನಿಸುತ್ತೇವೆ.ಇದು ಸಲ್ಲ.

ಯಾರಾದರೂ ನಮಗಿಂತ ವಿಭಿನ್ನ ದೃಷ್ಟಿಕೋನದ ಮಾತುಗಳನ್ನು ಆಡಿದಾಗ  ಕುಳಿತು ನಿಧಾನವಾಗಿ ಕೇಳೋಣ ಇತರರ ತಾರ್ಕಿಕ ಹಾಗೂ ಮೌಲಿಕ ಮಾತುಗಳು ಮತ್ತು ವಿಚಾರಗಳಿಗೆ ಕಿವಿಯಾಗೋಣ.ನಮ್ಮ ವ್ಯಕ್ತಿತ್ವವನ್ನು ಉತ್ತಮ ಪಡಿಸಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

 #PersonalDevelopment #PersonalGrowth #LifeJourney #SelfImprovement #Motivation #Inspiration #GrowthMindset #Resilience #OvercomingObstacles #TransformationStory #SelfDiscovery #Empowerment #SuccessJourney #MindsetMatters #LifeLessons #GoalSetting #AchieveYourDreams #Positiv

11 ಜುಲೈ 2025

ಆತ್ಮೀಯ ಗೆಳೆಯ..


 

ಇತ್ತೀಚೆಗೆ ಮೈಸೂರಿಗೆ ಹೋದಾಗ ಬಿ ಎಡ್ ಮಾಡುವಾಗ ಜೊತೆಯಲ್ಲಿ ಓದಿದ ಗೆಳೆಯ ಸುರೇಶ್ ಸಿಕ್ಕಿದ್ದರು. ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ನನ್ನ ಜೊತೆಗಿದ್ದು ನನ್ನ ಸಂಭ್ರಮವನ್ನು ಇಮ್ಮಡಿಗೊಳಿಸಿದ ಸ್ನೇಹಜೀವಿ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿದ,ಒಡನಾಡಿದ, ಸಂತಸದ ಕ್ಷಣಗಳನ್ನು ಮೆಲುಕು ಹಾಕಿದೆವು. ಸುರೇಶ್ ಈಗ P D O ಆಗಿ ಕಾರ್ಯ ಮಾಡುತ್ತಾರೆ.ಬಿ ಎಡ್ ಓದುವಾಗಲೇ   ನಾನು ಅವರಿಗೆ ತಲೈವ ಎಂದಿದ್ದು ಈಗ ನಿಜಕ್ಕೂ ತಲೈವ ಆಗಿದ್ದಾರೆ. ನಾನೀಗ 27 ಪುಸ್ತಕ ಬರೆದಿರುವ ಲೇಖಕ, ಕವಿ ಎಂಬುದನ್ನು ತನ್ನ ಮಡದಿ ಮಕ್ಕಳಿಗೆ ಹೆಮ್ಮೆಯಿಂದ ಪರಿಚಯಿಸಿದರು.ಒಳ್ಳೆಯ ಬಿರಿಯಾನಿ ಊಟ ಹಾಕಿಸಿದ ಗೆಳೆಯ ಕಳೆದ  ತೊಂಬತ್ತರ ದಶಕದ ನಮ್ಮ ದುರಿತ ಕಾಲ,ಹಾಗೂ ಆ ಕಾಲದಲ್ಲೂ ಎಂಜಾಯ್ ಮಾಡಿದ ಸವಿ ಕ್ಷಣಗಳನ್ನು ನೆ‌ನಪು ಮಾಡಿದರು. ಅವರ ಮಕ್ಕಳಿಗೆ ನನ್ನ ಕೃತಿಗಳನ್ನು ನೀಡಿ ಓದಲು ಹೇಳಿದೆ.ಧನ್ಯವಾದಗಳು🙏🙏 ತಲೈವ ಮತ್ತೊಮ್ಮೆ ಮಗದೊಮ್ಮೆ ಸಿಗೋಣ.ನಮ್ಮ ಸ್ನೇಹವನ್ನು ಸಂಭ್ರಮಿಸೋಣ...

ಇಂತಿ ನಿನ್ನ ಗೆಳೆಯ

ಸಿಹಿಜೀವಿ ವೆಂಕಟೇಶ್ವರ.

#FriendshipGoals #CherishedFriends #FriendshipMatters #BestiesForLife #TrueFriendship #FriendsForLife #BondingTime #BFFs #FriendshipVibes #MakingMemories #GoodFriends #FriendshipForever #UnderstoodByYou #LifelongFriends #CrazyAdventures #SupportSystem #FriendshipLove #DynamicDuos #FriendshipMoments #TogetherAlways

10 ಜುಲೈ 2025

ಗುರು ಪೂರ್ಣಿಮೆ


 ಇಂದಿನ ಸುಭಾಷಿತ:-


 "ಗು"ಕಾರಶ್ಚಾಂಧಕಾರಃ ಸ್ಯಾತ್ "ರು"ಕಾರಸ್ತನ್ನಿರೋಧಕಃ । ಅಂಧಕಾರ ನಿರೋಧಿತ್ವಾತ್ "ಗುರು"ರೀತ್ಯಭಿಧೀಯತೇ ।। ಗುರು ಎಂಬ ಪಾದದಲ್ಲಿ ಗುಕಾರವು ಅಂಧಕಾರವನ್ನು ಸೂಚಿಸುತ್ತದೆ. ರುಕಾರವು ನಿರೋಧವನ್ನು ಸೂಚಿಸುತ್ತದೆ. ಹೀಗಾಗಿ ಗುರು ಶಬ್ದಕ್ಕೆ ಅಂಧಕಾರವನ್ನು ನಾಶಮಾಡುವವನು ಎಂದರ್ಥ.


#TeacherLife #TeachersofInstagram #TeachingTips #InspireTeachers #TeacherAppreciation #ClassroomCommunity #TeacherGoals #EducationMatters #FutureLeaders #TeachTheFuture #EducatorLife #PassionForTeaching #TeacherTravel #LearnThroughPlay #ClassroomStories #TeachingInspiration #BackToSchool #TeachAndInspire #CultivatingYoungMinds

03 ಜುಲೈ 2025

ಸಿಹಿಜೀವಿಯ ಹನಿ


 



ಆರಂಭದಲ್ಲಿ ನಮ್ಮನ್ನು ಬೆಂಬಲಿಸಲು

ಯಾರು ಇಲ್ಲದಿದ್ದರೂ ಚಿಂತೆ ಬೇಡ|

ಪ್ರಖರವಾದ ಸೂರ್ಯನ ಬೆಳಕನ್ನು ಎಷ್ಟು ಕಾಲ ತಡೆಯಬಲ್ಲದು ಮೋಡ||


ಸಿಹಿಜೀವಿ ವೆಂಕಟೇಶ್ವರ. 

02 ಜುಲೈ 2025

DHL ನ ಸ್ಪೂರ್ತಿದಾಯಕ ಕಥೆ


  DHL ನ ಸ್ಪೂರ್ತಿದಾಯಕ ಕಥೆ 1969 ರಲ್ಲಿ ಮೂವರು ಯುವಕರು ತಮ್ಮಲ್ಲಿದ್ದ ಅಲ್ಪಸ್ವಲ್ಪ ಹಣದಲ್ಲಿ ತಮ್ಮ ವಿತರಣಾ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದರು. ಮೊದಲನೆಯವನ ಹೆಸರು ಆಡ್ರಿಯನ್ ಡಾಲ್ಸಿ.ಎರಡನೆಯವ ಲ್ಯಾರಿ ಹಿಲ್ಬ್ಲೋಮ್. ಮೂರನೆಯವ ರಾಬರ್ಟ್ ಲಿನ್. ಹೀಗೇ ಆ ಮೂವರ ಹೆಸರಿನಲ್ಲಿ ಒಂದೊಂದು ಪದ ತೆಗೆದುಕೊಂಡು ಆರಂಭಿಸಿದ ಕಂಪನಿಯೇ DHL ! . 55 ವರ್ಷಗಳ ನಂತರ ಇಂದು DHL ಕಂಪನಿ 250 ವಿಮಾನಗಳನ್ನು ಹೊಂದಿದೆ. 32,000 ವಾಹನಗಳು, 550,000 ಉದ್ಯೋಗಿಗಳಿಗೆ ಉದ್ಯೋಗ ನೀಡಿದೆ. ಇಂದು DHL ಪ್ರಪಂಚದ ಎಲ್ಲೆಡೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.ಅದರ ಆದಾಯ ನೂರಾರು ಶತಕೋಟಿ ಡಾಲರ್‌ಗಳು! ಜೀವನದಲ್ಲಿ ಯೋಜನೆಗಳು, ವ್ಯವಹಾರ, ಯಶಸ್ಸು, ಕನಸುಗಳು, ಗುರಿಗಳ ಬಗ್ಗೆ ಮಾತನಾಡುವ ಜನರು ಯಾವಾಗಲೂ ನಿಮ್ಮ ಸುತ್ತ ಮುತ್ತ ಇರಲಿ. ನಕಾತ್ಮಕ, ಭಯಭೀತ, ಸೋಮಾರಿ ಜನರಿಂದ ದೂರವಿರಿ. ನೀವು ವ್ಯವಹಾರಕ್ಕೆ ಇಳಿದರೆ.ದೃಢವಾಗಿ ಇರಿ. ಅಂದಿನ DHL ಇಂದಿನ DHL ಆಗಲು 55 ವರ್ಷಗಳು ಬೇಕಾಯಿತು. ಯಶಸ್ಸಿಗೆ ಸಮಯ, ಶ್ರಮ, ಬುದ್ಧಿವಂತಿಕೆ ಮತ್ತು ತಾಳ್ಮೆ ಬೇಕು. ಯಶಸ್ಸು ನಿಮ್ಮದಾಗಲಿ... ಸಿಹಿಜೀವಿ ವೆಂಕಟೇಶ್ವರEntrepreneurship #EntrepreneurMindset #StartUpLife #BizTips #EntrepreneurJourney #SmallBusinessSuccess #GrowthMindset #InnovativeThinking #HustleAndGrind #BusinessMotivation #Suc

ಚಾಣಕ್ಯ ನೀತಿ ಶ್ಲೋಕ:


 ಚಾಣಕ್ಯ ನೀತಿ ಶ್ಲೋಕ:-


 ರೂಪಯೌವನ ಸಂಪನ್ನಾ ವಿಶಾಲಕುಲ ಸಂಭವಾ |

 ವಿದ್ಯಾಹೀನಾ ನ ಶೋಭಂತೇ ನಿರ್ಗಂಧಾ ಇವ ಕಿಂಶುಕಾಃ || 


  ಸೌಂದರ್ಯದಿಂದಲೂ ಯೌವನದಿಂದಲೂ ಯುಕ್ತರು ಮಹಾಕುಲೀನರೂ ವಿದ್ಯಾ ವಿಹೀನರಾದರೆ ಪರಿಮಳವಿಲ್ಲದ  ಪುಷ್ಪಗಳಂತೆ ಸ್ವಲ್ಪವೂ ಶೋಭಿಸುವುದಿಲ್ಲ.ಅಂದರೆ ಯಾರಿಂದಲೂ ಆದರಿಸಲ್ಪಡುವುದಿಲ್ಲ.

01 ಜುಲೈ 2025

ನುಡಿ ತೋರಣ ಸಮಾಗಮ..


 
ನುಡಿತೋರಣ ಮೊದಲ ಸಮಾಗಮದಲ್ಲಿ ಅನಿವಾರ್ಯ ಕಾರಣದಿಂದಾಗಿ ಭಾಗವಹಿಸಿರಲಿಲ್ಲ.ಎರಡು ಮತ್ತು ಮೂರನೇ ಸಮಾವೇಶದಲ್ಲಿ ಪಾಲ್ಗೊಂಡ ಸವಿನೆನಪುಗಳನ್ನು ಈಗಲೂ ಮೆಲುಕು ಹಾಕುತ್ತಿರುವೆ... ಮೂರನೇ ಸಮಾವೇಶದ ದಿನ ಆರಕ್ಕೆ ತುಮಕೂರು ಬಿಟ್ಟು ಒಂಭತ್ತಕ್ಕೆ ಸಾಹಿತ್ಯ ಪರಿಷತ್ತು ಸೇರಿ ಕಿರಣ್ ಸರ್ ಮತ್ತು ನುಡಿ ಬಂಧುಗಳೊಂದಿಗೆ ಬೆಳಗಿನ ಉಪಹಾರ ಸೇವಿಸಿ ಚಿನ್ನು ಪ್ರಿಯ ಸರ್ ರವರೊಂದಿಗೆ ಕನ್ನಡ ಹಾಡು ಹಾಡಿದ್ದು ಖುಷಿ ನೀಡಿತು.ಕಡೆಯ ಕ್ಷಣಗಳಲ್ಲಿ ಪುಸ್ತಕ ಬಿಡುಗಡೆಗೆ ಮನಸ್ಸು ಮಾಡಿದೆ. ನಮ್ಮ ಬಳಗದ ಮುಂದೆ ನನ್ನ ಕೃತಿ ಲೋಕಾರ್ಪಣೆಗೊಂಡಿದ್ದು ಖುಷಿ ನೀಡಿತು. ಹಲವಾರು ಸಾಹಿತ್ಯ ಬಂಧುಗಳನ್ನು ಭೇಟಿ ಮಾಡಿದ್ದು ಸಂತಸ ತಂದಿತು. ಜಿ ಬಿ ಹರೀಶ್ ಸರ್, ಮತ್ತು ಸೇತೂರಾಮ್ ಸರ್ ರವರ ಮಾತು ನೇರವಾಗಿ ಕೇಳಿ ಪುಳಕಗೊಂಡೆ. ನನ್ನ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಕೊಂಡ ನಮ್ಮ ನುಡಿ ಬಂಧುಗಳಿಗೆ ನಮನಗಳನ್ನು ಸಲ್ಲಿಸಲೇಬೇಕು. ನುಡಿ ತಾಂಬೂಲ ವಿಶೇಷವಾಗಿತ್ತು. ನಮ್ಮ ಮನೆಯವರ ಮೆಚ್ಚುಗೆ ಗೆ ಪಾತ್ರವಾಗಿದೆ. ಒಟ್ಟಾರೆ ಒಂದು ಉತ್ತಮ ಕೌಟುಂಬಿಕ ಭಾವನಾತ್ಮಕ ನುಡಿ ಹಬ್ಬದಲ್ಲಿ ಪಾಲ್ಗೊಂಡ ಸಾರ್ಥಕ ಭಾವನೆ ನನ್ನದು.... ನಿಮ್ಮ... ಸಿಹಿಜೀವಿ ವೆಂಕಟೇಶ್ವರ
#Bangalore #BangaloreEvents #BookLaunch #AuthorMeet #LiteratureLovers #BookDiscussion #WritersCommunity #ReadingNook #CulturalScene #M

30 ಜೂನ್ 2025

ಮಕ್ಕಳಿಗಾಗಿ ಮಾಹಾತ್ಮರ ಮಾತುಗಳು ಕೃತಿ ಲೋಕಾರ್ಪಣೆ...


 


ಯುವ ಕವಿಗಳು ಮತ್ತು ಲೇಖಕರು ನಮ್ಮ ಪ್ರಾಚೀನ ಕವಿಗಳ ಸಾಹಿತ್ಯ ಓದಬೇಕು.ಆಗಮಾತ್ರ ಉತ್ತಮ ಸಾಹಿತ್ಯ ಹೊರಹೊಮ್ಮಲು ಸಾಧ್ಯ. ಅವಸರದ ಸಾಹಿತ್ಯಕ್ಕೆ ಆಯುಷ್ಯ ಕಡಿಮೆ ಎಂದು ಸಾಹಿತಿಗಳಾದ 

ಡಾ ಕಬ್ಬಿನಾಲೆ ವಸಂತ್ ಭಾರದ್ವಾಜ್ ರವರು ಹೇಳಿದರು. ಶುಭ ಕೋರಿ ಇನ್ನೂ ಹೆಚ್ಚಿನ ಕೃತಿಗಳು ಅವರಿಂದ 

  ಬೆಂಗಳೂರಿನ  ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನುಡಿತೋರಣ ಬಳಗದ ವತಿಯಿಂದ ನಡೆದ ವಾರ್ಷಿಕೋತ್ಸವದ ಅಂಗವಾಗಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. 


ಇದೇ ಸಂದರ್ಭದಲ್ಲಿ ಸಿಹಿಜೀವಿ ವೆಂಕಟೇಶ್ವರ ರವರ 27 ನೇ ಕೃತಿ ಮಕ್ಕಳಿಗಾಗಿ ಮಹಾತ್ಮರ ಮಾತುಗಳು, ಕಿರಣ್ ಹಿರಿಸಾವೆ ರವರ ಹರಿವು ಕಾದಂಬರಿ ಹಾಗೂ ಡಾ ಗೀತಾ ಎನ್ ರವರ ಮುಕ್ತಕ ಮಂಜೂಷ ಕೃತಿಗಳು ಲೋಕಾರ್ಪಣೆಗೊಂಡವು.

 ಲೇಖಕರಿಗೆ ಶುಭ ಕೋರಿ ಇನ್ನೂ ಹೆಚ್ಚಿನ ಕೃತಿಗಳು ಅವರಿಂದ ಹೊರಹೊಮ್ಮಲಿ ಎಂದು ಆಶಿಸಿದರು.ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳು ಹಾಗೂ ಪಿಟೀಲು ವಾದಕರಾದ ಶ್ಯಾಮ್ ಸುಂದರ್ ರವರು, ಲೇಖಕರಾದ ಧನಂಜಯ ಜೀವಾಳ, ಸಾಹಿತಿಗಳು ಹಾಗೂ ಪ್ರಕಾಶಕರಾದ ಚಿನ್ನುಪ್ರಿಯ, ಸಾಹಿತಿಗಳಾದ ತ ನಾ ಶಿವಕುಮಾರ್,ಅನುಸೂಯ ಸಿದ್ದರಾಮ, ನೇತ್ರ ತಜ್ಞರಾದ ಉದಯ್ ಪಾಟೀಲ್, ಶ್ರೀಕಾಂತ್ ಪತ್ರೆಮರ, ರಾಸು ವೆಂಕಟೇಶ್  ಹಾಗೂ ನುಡಿ ಬಂಧುಗಳು ಉಪಸ್ಥಿತರಿದ್ದರು.


28 ಜೂನ್ 2025

ಶೆಟ್ಟಿ ಹಳ್ಳಿ ಆಂಜನೇಯಸ್ವಾಮಿ ದೇವಾಲಯ.


 ಶೆಟ್ಟಿ ಹಳ್ಳಿ ಆಂಜನೇಯಸ್ವಾಮಿ ದೇವಾಲಯ.


 ಪ್ರಸಿದ್ಧ ಇತಿಹಾಸ ಹೊಂದಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯವು ತುಮಕೂರಿನಿಂದ 3 ಕಿ.ಮೀ. ದೂರದ ಆಗ್ನೇಯ ದಿಕ್ಕಿನಲ್ಲಿರುವ ಶೆಟ್ಟಿಹಳ್ಳಿ ಗ್ರಾಮದಲ್ಲಿದೆ. ಜಾತಿ, ಧರ್ಮ ಭೇದವಿಲ್ಲದೆ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ನಂಬಿದವರ ಬೇಡಿಕೆಗಳನ್ನು ಈಡೇರಿಸುತ್ತಾನೆಂಬ ನಂಬಿಕೆಯಿಂದ ಭಕ್ತರು ಆಗಮಿಸುತ್ತಾರೆ.

  ಚೈತ್ರ ಮಾಸದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಮಹಾಭಾರತ ಕಾವ್ಯದಲ್ಲಿ ಬರುವ ಜನಮೇಜಯ ಮಹಾರಾಜ ಯಾಗ ಮಾಡುವ ಮುನ್ನ ವಿಘ್ನಗಳು

ಬಾರದಂತೆ ಈ ಆಂಜನೇಯನನ್ನು ಪ್ರತಿಷ್ಠಾಪನೆ ಮಾಡಿಸಿದರೆಂದು ಸ್ಥಳ ಪುರಾಣ ಹೊಂದಿರುವ ಈ ಪ್ರತಿಮೆಯು ಸುಮಾರು 10 ಅಡಿ ಎತ್ತರ ಹಾಗೂ 6 ಅಡಿ ಅಗಲವಾಗಿದ್ದು ಮುಳಬಾಗಿಲಿನಲ್ಲಿರುವ ಹನುಮಂತನನ್ನು ಬಿಟ್ಟರೆ ಎತ್ತರದಲ್ಲಿ ಎರಡನೇ ಆಂಜನೇಯಸ್ವಾಮಿ ಆಗಿದೆ. ಈ ಆಂಜನೇಯನ ಕೈಯಲ್ಲಿ ಮಾವಿನಹಣ್ಣುಗಳನ್ನು ಹಿಡಿದಿರುವುದು ವಿಶೇಷ,


1893 ರಲ್ಲಿ ಮೈಸೂರು ಪ್ರಾಂತ್ಯದ ಚೌಬೀನೆ ನಾಗ ಕುಮಾರಯ್ಯನವರು ಈ ದೇವಾಲಯದ ಜೀರ್ಣೋದ್ಧಾರ ಮಾಡಿದರೆಂದು ದೇವಾಲಯದಲ್ಲಿರುವ ಶಿಲಾಫಲಕವೊಂದು ತಿಳಿಸುತ್ತದೆ.


#shettihally #anjaneya 

#AnjaneyaTempleTumkur #TumkurTemples #IndianTemples #Anjaneya #DevotionalJourney #Spirituality #TemplesofIndia #VinayakaChaturthi #LocalTemples #ExploringTempleArchitecture #SacredSite #DivineVibes #CulturalHeritage #TempleVisiting #Pilgrimage #Devotees #GodsAndGoddesses #SpiritualTour #TumkurTourism

ಸಿಹಿಜೀವಿಯ ಹನಿ...


ಗುರಿಯೆಡೆಗೆ ನಡೆ

ಎಷ್ಟೇ ಬಂದರೂ ಅಡೆ ತಡೆ ನೋಡದಿರು ಸೋಮಾರಿಗಳ ಕಡೆ। ನಿಲ್ಲದಿರಲಿ ಗುರಿಯೆಡೆಗೆ ನಡೆ||

ಸಿಹಿಜೀವಿ ವೆಂಕಟೇಶ್ವರ

26 ಜೂನ್ 2025

ಪ್ರತಿಭೆಗಳನ್ನು ಗೌರವಿಸೋಣ..


 ತನ್ನ ಪಾಡಿಗೆ ತಾನು  ಹೊಳೆಯುತ್ತಾ ಬದುಕಿದ್ದ ಮಿಂಚುಹುಳವನ್ನು ಹಾವೊಂದು ಬೆನ್ನಟ್ಟಲು ಪ್ರಾರಂಭಿಸಿತು. ಮಿಂಚುಹುಳು ನಿಂತು ಹಾವಿಗೆ ಕೇಳಿತು

"ನಾನು ನಿನ್ನ ಬಳಿ ಮೂರು ಪ್ರಶ್ನೆಗಳನ್ನು ಕೇಳಬಹುದೇ?"


ಹಾವು, "ಕೇಳು " ಎಂದಿತು.


ನಾನು ನಿನ್ನ ಆಹಾರ ಸರಪಳಿಗೆ ಸೇರಿದವನೇ?


ಹಾವು, "ಇಲ್ಲ" ಎಂದಿತು.


ನಾನು ನಿನಗೆ ಏನಾದರೂ ಮಾಡಿದೆಯೇ?


ಹಾವು, "ಇಲ್ಲ" ಎಂದಿತು.


ಹಾಗಾದರೆ ನೀನು ನನ್ನನ್ನು ಏಕೆ ನುಂಗಲು ಬಯಸುತ್ತೀಯ?

 ಆಗ ಹಾವು ಉತ್ತರ ನೀಡಿತು "ನೀನು ಹೊಳೆಯುವುದನ್ನು ನೋಡಿ ನನಗೆ ಸಹಿಸಲಾಗುತ್ತಿಲ್ಲ!" 


ನಮ್ಮಲ್ಲೂ ಅದೇ ಕಥೆ. ಕೆಲವರು ತಮ್ಮ ಶ್ರಮ ಸಹಜ ಪ್ರತಿಭೆಯಿಂದ ಸಾಧನೆ ಮಾಡಿ ಹೆಸರು ಹಣ ಸಂಪಾದನೆ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಕಂಡರೆ ಕೆಲ ಸಂಕುಚಿತ ಮನೋಭಾವದವರಿಗೇನೋ ಸಂಕಟ. ಹೊಟ್ಟೆ ಉರಿ.

ಅವರ ಏಳಿಗೆಯನ್ನು ಹೊಳೆಯುವಿಕೆಯನ್ನು ನೋಡಲಾರರು. ಸಹಿಸಲಾರರು. ಇಂತಹ ಗುಣಗಳನ್ನು ತ್ಯಜಿಸೋಣ ಪ್ರತಿಭೆಗಳನ್ನು ಗೌರವಿಸೋಣ.ನಾವು ಬೆಳೆಯೋಣ ಇತರರನ್ನು ಬೆಳೆಸೋಣ.ಏನಂತೀರಾ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

25 ಜೂನ್ 2025

ನಮ್ಮ ದಾರಿ...


 


ತಲುಪಲು ನಮ್ಮ 

ಜೀವನದ ಗುರಿ। 

ನಾವೇ ಸವೆಸಬೇಕು 

ನಮ್ಮ ದಾರಿ|


ಸಿಹಿಜೀವಿ ವೆಂಕಟೇಶ್ವರ


#KannadaKavana #Kavana #KannadaPoetry #KannadaLiterature #PoetryLovers #KannadaWriters #LiteraryArt #WrittenWord #IndianPoetry #CulturalHeritage #Verses #CreativeWriting #SpokenWord #ArtInWords #PoeticExpressions #LanguageOfLove #Storytelling #Inspiration


24 ಜೂನ್ 2025

ಸಂತೆ


 ನಮ್ಮ ಬಾಲ್ಯದ ದಿನಗಳಲ್ಲಿ  ಶನಿವಾರ ಬಂತು ಅಂದ್ರೆ ಏನೋ ಖುಷಿ.ಅದ್ರಲ್ಲೂ ಅಮ್ಮ ಸಂತೆಗೆ ಹೋಗ್ತಾರೆ ಅಂದ್ರೆ   ಖುಷಿಯು ಇಮ್ಮಡಿಯಾಗ್ತಿತ್ತು.ಯಾಕಂದ್ರೆ ಸಂತೆಯಿಂದ ಅಮ್ಮ ತರಕಾರಿ ಕಮ್ಮಿ ತಂದ್ರೂ ಕಾರ ಮಂಡಕ್ಕಿ ಪಕ್ಕಾ ತರ್ತಿದ್ರು.ನಿನ್ನೆ ಅದೇ   ಸಂತೆಗೆ ಅಮ್ಮನೊಂದಿಗೆ ಅಣ್ಣ ನಾನು ಹೋಗಿದ್ವಿ. ಅಮ್ಮ ಅನಾರೋಗ್ಯ ನಿಮಿತ್ತ ಕಾರಲ್ಲೇ ಕೂತಿದ್ರು.ಅಣ್ಣ ತರಕಾರಿ ತಂದ್ರು.ಕಾರ ಮಂಡಕ್ಕಿ ಮಾತ್ರ ತರಲಿಲ್ಲ.ಯಾಕಂದ್ರೆ ಅಮ್ಮ ಕಾರಮಂಡಕ್ಕಿ ತಿನ್ನೋ ಸ್ಥಿತಿಯಲ್ಲಿರಲಿಲ್ಲ."ನೀವ್ ತಿನ್ವಂತ್ರಿ ಕಾರ ಮಂಡಕ್ಕಿ ತಕ್ಕಳ್ರಪ್ಪ" ಅಂದ್ರು ಅಮ್ಮ  ನಮ್ಮತ್ರ ದುಡ್ಡಿದ್ರೂ ಅವತ್ತು  ನಾವು ಕಾರ ಮಂಡಕ್ಕಿ ತೊಗೊಳ್ಳಲಿಲ್ಲ.

#ChildhoodMemories #Nostalgia #RetroVibes #ThrowbackThursday #HappyTimes #ChildhoodAgain #MemoriesMatter #FondMemories #InnocenceLost #MemoryLane #GoodOldDays #BlastFromThePast #PreciousMoments #ThrowbackMemories #LifeAsAKid #JoyfulDays #GrowingUp #CherishedTimes #ForeverYoung

ಸುಭಾಷಿತ

ಇಂದಿನ ಸುಭಾಷಿತ:- 

ಅನಭಿಜ್ಞಾಯ ಶಾಸ್ತ್ರಾರ್ಥಾನ್ ಪುರುಷಾಃ ಪಶುಬುದ್ಧಯಃ | ಪ್ರಾಗಲ್ಭ್ಯಾದ್ ವಕ್ತುಮಿಚ್ಛಂತಿ ಮಂತ್ರೇಷ್ವಭ್ಯಂತರೀಕೃತಾಃ || || ೨ || ರಾಮಾಯಣ, ಯುದ್ಧಕಾಂಡ, ೬೩-೧೪ 

 "ಮಂತ್ರಿಗಳಲ್ಲಿ ಪಶುಬುದ್ಧಿಯ ಜನರೂ ಸೇರಿಕೊಂಡಿರುತ್ತಾರೆ. ಅವರು ಯಾವ ಶಾಸ್ತ್ರಾರ್ಥವನ್ನೂ ತಿಳಿಯದೆ ದುಡುಕಿನ ವಾಗ್ಜಾಲದಿಂದ ಮಾತಾಡಲು, ಸಲಹೆ ಕೊಡಲು ಬಯಸುತ್ತಾರೆ.
#KannadaQuotes #KannadaWisdom #KannadaLove #KannadaInspiration #QuoteOfTheDay #WisdomInKannada #MotivationalQuotes #KannadaCulture #KannadaLiterature #InspirationalKannada #LifeQuotes #KannadaLanguage #QuotesInKannada #KarnatakaPride #KannadaSayings #KarnatakaCulture #Encouragement #LifeLessons #PositiveVibes #KannadaHeritage



23 ಜೂನ್ 2025

ಸುಭಾಷಿತ


 ಸತ್ಯೇನ ರಕ್ಷತೇ ಧರ್ಮ: ವಿದ್ಯಾ ಯೋಗೇನ ರಕ್ಷ್ಯತೇ | ಮೃಜಯಾ ರಕ್ಷತೇ ರೂಪಂ ಕುಲಂ ವೃತ್ತೇನ ರಕ್ಷತೇ ||

-

  "ಸತ್ಯದಿಂದ ಧರ್ಮವು ರಕ್ಷಿತವಾಗುತ್ತದೆ. ವಿದ್ಯೆಗೆ ಯೋಗದಿಂದ, ಸ್ವಚ್ಛತೆಯಿಂದ ರೂಪಕ್ಕೆ ರಕ್ಷಣೆಯೊದಗುತ್ತದೆ. ಸದ್ವರ್ತನೆಯಿಂದ ಕುಲದ ರಕ್ಷಣೆಯಾಗುತ್ತದೆ."

31 ಮೇ 2025

ಚಾಣಕ್ಯ ನೀತಿ ಶ್ಲೋಕ:-


 ಚಾಣಕ್ಯ ನೀತಿ ಶ್ಲೋಕ:- 


ಅನಂತಶಾಸ್ತ್ರಂ ಬಹುಲಾಶ್ಚ ವಿದ್ಯಾ: ಅಲ್ಪಶ್ಚ ಕಾಲೋ ಬಹುವಿಘ್ನತಾ ಚ |ವತ್ಸಾರಭೂತಂ ತದುಪಾಸನೀಯಂ ಹಂಸಾಂ ಯಥಾಕ್ಷೀರ ಮಿವಾಂಬುಮಧ್ಯಾತ್ || 

 ಶಾಸ್ತ್ರಗಳು ಆನಂತವಾಗಿವೆ. ವಿದ್ಯೆಗಳಂತೂ ಲೆಕ್ಕವಿಲ್ಲದಷ್ಟಿವೆ. ನಮಗೆ ಇರುವ ಕಾಲಾವಕಾಶವೂ ಬಹಳ ಕಡಿಮೆ. ಜೊತೆಗೆ ವಿಘ್ನಗಳು ಬೇರೆ. ಆದುದರಿಂದ ಹಂಸವು ನೀರಿನ ಮಧ್ಯದಲ್ಲಿ ಹಾಲನ್ನು ಮಾತ್ರ ಸ್ವೀಕರಿಸುವಂತೆ ಸಾರವಾದುದನ್ನು ಮಾತ್ರ ಗ್ರಹಿಸಬೇಕು.

ಅಹಲ್ಯಾ ಬಾಯ್ ಹೋಳ್ಕರ್..



ಮರಾಠ ಮನೆತನದ ಮಹಾರಾಣಿ ತನ್ನ ಗಂಡ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡರೂ ಧೃತಿಗೆಡದೆ ದಿಟ್ಟ ಆಡಳಿತ ನೀಡಿದ ಮಹಾಸಾದ್ವಿ ಅಹಲ್ಯ ಬಾಯ್ ಹೋಳ್ಕರ್.ಕಲೆ, ಸಂಸ್ಕೃತಿ, ವಾಸ್ತುಶಿಲ್ಪಕ್ಕೆ ಅವರ ಕೊಡುಗೆ ಅಪಾರ.ಇಂದು ಅವರ 300 ನೇ ಜಯಂತಿ ಇಂತಹ ಮಹಾನ್ ಆದರ್ಶ ಮಹಿಳೆಯನ್ನು ನೆನೆಯುತ್ತಾ ಅವರಿಗೆ ಜನ್ಮ ದಿನದ ಶುಭಾಶಯಗಳನ್ನು ಕೋರೋಣ.


 

29 ಮೇ 2025

ನಿಂದಕರಿರಬೇಕು!


 



ನಿಂದಕರಿರಬೇಕು.


ಬಿರು ಮಳೆಗಾಲದಲ್ಲಿ ಹೊಲಗಳಲ್ಲಿ  ಕೆಲಸ ಮಾಡುವ  ಕೆಲವು ಹುಡುಗರನ್ನು ಒಬ್ಬ ವೃದ್ಧ ನೋಡಿದರು. ಅವರಲ್ಲಿ ಒಬ್ಬ ಹುಡುಗ ಶೂಗಳನ್ನು ಧರಿಸಿರಲಿಲ್ಲ.  ದಪ್ಪ ಉಣ್ಣೆಯ ಸಾಕ್ಸ್‌ಗಳನ್ನು ಮಾತ್ರ ಧರಿಸಿದ್ದ.   ಅವನನ್ನು ಕರೆದು

"ಬರಿಗಾಲಲ್ಲಿ ಕೆಲಸ ಮಾಡಿದರೆ   ಕಾಲುಗಳಿಗೆ  ಗಾಯಗಳಾಗುತ್ತವೆ.  ನೀನು ನಿನ್ನ ಬೂಟುಗಳನ್ನು ಏಕೆ ಧರಿಸಿಲ್ಲ?"ಎಂದು ಕೇಳಿದರು.

ಹುಡುಗ ಪ್ರತಿಕ್ರಿಯಿಸಿ

"ನಾನು ಎರಡು ವಾರಗಳ ಹಿಂದೆ ನನ್ನ ಬೂಟುಗಳನ್ನು ಕಳೆದುಕೊಂಡೆ. ಅಂದಿನಿಂದ ನಾನು ಯಾವಾಗಲೂ ಗಾಯಗೊಂಡ ಕಾಲುಗಳ ಜೊತೆಗೆ ಮನೆಗೆ ಹಿಂತಿರುಗುವೆ ಅದಕ್ಕೆ ಈ ಬಟ್ಟೆಗಳನ್ನು ಪಾದಗಳಿಗೆ ಕಟ್ಟಿಕೊಂಡಿರುವೆ" ಎಂದನು. 

ಮುದುಕ ಒಂದು ಕ್ಷಣ ಯೋಚಿಸಿ ನಂತರ ತನ್ನ ಚೀಲದಿಂದ ನಾಲ್ಕು ಬೂಟುಗಳನ್ನು ಹೊರತೆಗೆದನು. ಒಂದು ಜೋಡಿ ಸ್ವಚ್ಛ ಮತ್ತು ಸುಂದರವಾಗಿತ್ತು, ಆದರೆ ಇನ್ನೊಂದು ಜೋಡಿ ಕೊಳಕು ಮತ್ತು ಮಣ್ಣಾಗಿತ್ತು. ನಂತರ ಅವನು ಹುಡುಗನನ್ನು ಕೇಳಿದನು.

"ಶುದ್ಧ ಬೂಟುಗಳು ಅಥವಾ ಕೊಳಕು ಬೂಟುಗಳು? ಒಂದನ್ನು ಆರಿಸಿಕೋ"

ಹುಡುಗ ಶೂಗಳತ್ತ ಕಣ್ಣು ಹಾಯಿಸಿ ನಂತರ ಉತ್ತರಿಸಿದನು.

"ನನಗೆ ಕೊಳಕು ಬೂಟುಗಳು ಹೆಚ್ಚು ಇಷ್ಟ ಸರ್."

ಮುದುಕನು ದಿಗ್ಭ್ರಮೆಗೊಂಡನು ಮತ್ತು ಅವನ ಉತ್ತರ ಕೇಳಿ ಆಶ್ಚರ್ಯಚಕಿತನಾಗಿ ಕೇಳಿದರು.

"ನೀನು ಸ್ವಚ್ಛವಾದ ಬೂಟುಗಳಿಗಿಂತ ಕೊಳಕು ಬೂಟುಗಳನ್ನು ಏಕೆ ಆಯ್ಕೆ ಮಾಡಿದೆ?"

 ಹುಡುಗ ಮುಗುಳ್ನಗುತ್ತಾ ಹೇಳಿದ

"ನಾನು ಹೊಲ ಗದ್ದೆಗಳಲ್ಲಿ  ಕೆಲಸ ಮಾಡುತ್ತೇನೆ. ಆದ್ದರಿಂದ ನನಗೆ ಸ್ವಚ್ಛವಾದ ಶೂಗಳ ಅಗತ್ಯವಿಲ್ಲ. ನಾನು ಸ್ವಚ್ಛವಾದ ಶೂಗಳೊಂದಿಗೆ ಕೆಲಸ ಮಾಡಿದರೆ ಅವು ಕೊಳಕು ಮತ್ತು ಮಣ್ಣಾಗುತ್ತವೆ. ಮತ್ತು ಮುಖ್ಯವಾಗಿ ಈ  ಕೊಳಕಾಗಿ ಕಾಣುವ  ಶೂಗಳು ಚರ್ಮದಿಂದ ಮಾಡಲ್ಪಟ್ಟಿರುತ್ತವೆ. ಆದರೆ ಸ್ವಚ್ಛವಾದ ಶೂಗಳು ಸಿಂಥೆಟಿಕ್ ನಿಂದ ಮಾಡಿವೆ. ಚರ್ಮವು ಶೂಗಳನ್ನು ತಯಾರಿಸಲು ಲಭ್ಯವಿರುವ ಅತ್ಯಂತ ಬಾಳಿಕೆ ಬರುವ ವಸ್ತುವಾಗಿದೆ. ಅವು ಇತರ ಆಯ್ಕೆಗಳಿಗಿಂತ ಹೆಚ್ಚು ಕಾಲ ಉಳಿಯುತ್ತವೆ. ಆದ್ದರಿಂದ ಚರ್ಮದ ಶೂಗಳು ಎಷ್ಟೇ ಕೊಳಕಾಗಿದ್ದರೂ ನಾನು ಅವುಗಳನ್ನು ಶುದ್ಧವಾದ ಸಿಂಥೆಟಿಕ್ ಶೂಗಳಿಗಿಂತ ಹೆಚ್ಚು ಮೆಚ್ಚುತ್ತೇನೆ."

 ಬಾಲಕನ ಉತ್ತರ ಕೇಳಿದ ಮುದುಕ ವಿಶಾಲವಾಗಿ ಮುಗುಳ್ನಕ್ಕು  ಬಾಲಕನ ಬುದ್ದಿವಂತಿಕೆ ಮೆಚ್ಚಿ ಅವನು ಇಚ್ಛೆ ಪಟ್ಟ ಶೂ ನೀಡಿ ಮುಂದೆ ಸಾಗಿದರು.


ನಮ್ಮ ಜೀವನದಲ್ಲೂ   ಕೆಲವೊಮ್ಮೆ ಜನರು ನಮ್ಮ ಹೆಸರನ್ನು ಹಾಳುಮಾಡಲು, ನಮ್ಮ ವ್ಯಕ್ತಿತ್ವವನ್ನು ಕೆಡಿಸಲು ಮತ್ತು ನಮ್ಮ ಬಗ್ಗೆ ವದಂತಿಗಳನ್ನು ಸೃಷ್ಟಿಸಲು ಹೊಟ್ಟೆ ಕಿಚ್ಚಿನ ಜನ ಅವರ ಕೈಲಾದಷ್ಟು ಪ್ರಯತ್ನ ಮಾಡುತ್ತಾರೆ. ಅವರು ನಿಮ್ಮ ವ್ಯಕ್ತಿತ್ವವನ್ನು ಹಾಳುಮಾಡುವ ಕೊಳಕು ಚರ್ಮದ ಬೂಟುಗಳಂತೆ ನಿಮ್ಮನ್ನು ಕೊಳಕು ಎಂದು ತೋರಿಸಲು ಸುಳ್ಳು ಆಪಾದನೆಗಳ  ಕೆಸರನ್ನು ನಮ್ಮಡೆ ಎಸೆಯುತ್ತಾರೆ. ಅವರು ನಮ್ಮ ಮೇಲೆ ಮಣ್ಣನ್ನು ಎಸೆಯಲಿ,ಕೆಸರು ಎಸೆಯಲಿ ಅವರು ಏನು ಬೇಕಾದರೂ ಹೇಳಲಿ. ಏಕೆಂದರೆ ಅವರು ನಮ್ಮನ್ನು ಟೀಕಿಸಲು ಯಾವುದೇ ರೀತಿಯ ಪದಗಳನ್ನು ಬಳಸಿದರೂ ಅವರು ನಮ್ಮ ನಿಜವಾದ ಒಳ್ಳೆಯ ವ್ಯಕ್ತಿತ್ವವನ್ನು ಕೀಳಾಗಿ ಕಾಣಲು ಅಥವಾ ನಾಶಮಾಡಲು ಸಾಧ್ಯವಿಲ್ಲ.  ಅವರು ನಮ್ಮ ಒಳ್ಳೆಯ ಕಾರ್ಯಗಳನ್ನು ಎಂದಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನಾವು ಯಾವಾಗಲೂ ಇರುವಂತೆಯೇ ಇನ್ನೂ ಹೊಳೆಯುತ್ತೇವೆ. ನಮ್ಮನ್ನು ನಿಜವಾಗಿಯೂ ಚೆನ್ನಾಗಿ ತಿಳಿದಿರುವವರು ನಮ್ಮನ್ನು ಇನ್ನೂ ಮೆಚ್ಚುತ್ತಾರೆ. ಅವರು ನಮ್ಮ ಮೌಲ್ಯವನ್ನು ಗುರುತಿಸುತ್ತಾರೆ ಮತ್ತು ಅವರು ನಮ್ಮನ್ನು ಪ್ರಶಂಸಿಸುತ್ತಾರೆ. ಹಾಗಾಗಿ ನಿಂದಕರ ಬಗ್ಗೆ ತಲೆಕೆಡಿಸಿಕೊಳ್ಳದೇ ನಮ್ಮತನ ಬಿಡದೆ ನಮ್ಮ ಪಾಡಿಗೆ ನಾವು ಕಾಯಕ ಮಾಡುತ್ತ ಸಾಗೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

28 ಮೇ 2025

ಸಿಹಿಜೀವಿಯ ನುಡಿ

 


ಸಿಹಿಜೀವಿಯ ನುಡಿ.


ಬದ್ಧತೆ ಇಲ್ಲದಿದ್ದರೆ ಯಾವುದೇ 

ಕೆಲಸ ಆರಂಭ ಮಾಡಲಾಗದು|

ನಿರಂತರ ಪ್ರಯತ್ನ ಇಲ್ಲದಿದ್ದರೆ

ಯಾವುದೇ ಗುರಿ ಮುಟ್ಟಲಾಗದು||


ಸಿಹಿಜೀವಿ ವೆಂಕಟೇಶ್ವರ

17 ಮೇ 2025

ಕೋಳಿಯ ಜೀವನ ಪಾಠ.


 


ಕೋಳಿಯ ಜೀವನ ಪಾಠ.


ಕೋಳಿಯೆಂದರೆ ನಮಗೆ ನೆನಪಾಗುವುದು ಮುಂಜಾನೆಯ ಕೂಗು, ಇಲ್ಲವೇ ಮೊಟ್ಟೆ, ಇಲ್ಲಾ ಅಂದ್ರೆ ಕಬಾಬ್, ಬಿರ್ಯಾನಿ, ಅಷ್ಟೇ. 

ಆದರೆ ಕೋಳಿಯಿಂದಲೂ ನಾವು ಜೀವನದ ಪಾಠಗಳನ್ನು ಕಲಿಯಬಹುದು ಅವ್ಯಾವು ನೋಡೋಣ ಬನ್ನಿ.

ಕೋಳಿ ಮೊದಲು ಮೊಟ್ಟೆ ಇಟ್ಟು ಅವುಗಳ ಮೇಲೆ ಕುಳಿತುಕೊಳ್ಳುವ ಮೂಲಕ ಅದರ  ಉತ್ತಮ ಯೋಜನೆಯನ್ನು ನಾವು ಗಮನಿಸಬೇಕು.

 

ಕೋಳಿಯು ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಡಲಾರಂಭಿಸಿದಾಗ  ಅದು ಚಲನೆಯನ್ನು ಕಡಿಮೆ ಮಾಡುತ್ತದೆ ಇದು ಶಿಸ್ತುಬದ್ಧ ನಡವಳಿಕೆ. ನಾವು ಸಹ ಏನಾದರೂ ಅಸಾಧಾರಣ ಸಾಧನೆ ಮಾಡುವಾಗ ಅನವಶ್ಯಕ ತಿರುಗಾಟ ಕಡಿಮೆ ಮಾಡಿ ಶಿಸ್ತು ರೂಢಿಸಿಕೊಳ್ಳಬೇಕು. ಅದು ಕಾವು ಕೊಡುವ ವೇಳೆ  ಕಡಿಮೆ ಆಹಾರ ಸೇವನೆಯಿಂದಾಗಿ ಅದು ತನ್ನ ಮೊಟ್ಟೆಗಳ ಮೇಲೆ ಕುಳಿತಾಗ ದೈಹಿಕವಾಗಿ ತೂಕವನ್ನು ಕಳೆದುಕೊಳ್ಳುತ್ತದೆ ಇದು 

ತ್ಯಾಗ ಮತ್ತು ಪರಹಿತಚಿಂತನೆಗೆ ಉದಾಹರಣೆ. ಇದರ ಜೊತೆಯಲ್ಲಿ ಇಲ್ಲಿ ಉಲ್ಲೇಖಿಸಬೇಕಾದ ಮತ್ತೊಂದು ಅಂಶವೆಂದರೆ ಒಂದು ಕೋಳಿಯು ಮತ್ತೊಂದು ಕೋಳಿಯ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಟ್ಟು ಮರಿ ಮಾಡುವುದನ್ನು ನಾವು ನೋಡಿದ್ದೇವೆ.ಇದು ಕೋಳಿಯ   ಉದಾರ ಮತ್ತು ನಿಸ್ವಾರ್ಥ ಮನಸ್ಸಿಗೆ ಸಾಕ್ಷಿ.

 ಅದು 21 ದಿನಗಳ ಕಾಲ ಮೊಟ್ಟೆಗಳ ಮೇಲೆ ಕುಳಿತು ತಾಳ್ಮೆಯಿಂದ ಕಾಯುತ್ತದೆ ಮತ್ತು ಅವು ಮರಿಯಾಗದಿದ್ದರೂ ಅದು ಮತ್ತೆ ಮೊಟ್ಟೆಗಳನ್ನು ಇಡುತ್ತದೆ ಇದು ನಂಬಿಕೆ, ಭರವಸೆ ಮತ್ತು ಧೈರ್ಯಕ್ಕೆ ಉದಾಹರಣೆ.

ಇದು ಫಲವತ್ತಾಗಿಸದ ಮೊಟ್ಟೆಗಳನ್ನು ಪತ್ತೆ ಮಾಡುತ್ತದೆ 

ಸೂಕ್ಷ್ಮ ಮತ್ತು ವಿವೇಚನಾಶೀಲ ಕೋಳಿಯು  ಕೊಳೆತ ಮೊಟ್ಟೆಗಳನ್ನು ತ್ಯಜಿಸುತ್ತದೆ ಮತ್ತು ಮೊಟ್ಟೆಯೊಡೆದ ಮರಿಗಳನ್ನು ಅದು ಒಂದೇ ಆಗಿದ್ದರೂ ಸಹ ನೋಡಿಕೊಳ್ಳಲು ಪ್ರಾರಂಭಿಸುತ್ತದೆ.ಇದು ಕೋಳಿಯ 

ಬುದ್ಧಿವಂತಿಕೆ,ಪ್ರಜ್ಞೆ ಮತ್ತು ವಾಸ್ತವಿಕತೆಯನ್ನು ಪ್ರತಿನಿಧಿಸುತ್ತದೆ.


 ಅದು ಮರಿಯ ಹಾರೈಕೆ ಮಾಡುವಾಗ ಅದರ ಮರಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ.ಅದು

ರಕ್ಷಣಾತ್ಮಕ ಪ್ರೀತಿ.

ಅದು ತನ್ನ ಎಲ್ಲಾ ಮರಿಗಳನ್ನು ಒಟ್ಟುಗೂಡಿಸುತ್ತಾ  ಏಕತೆಯ ಸಂದೇಶವನ್ನು ಸಾರುತ್ತದೆ.ಮರಿಗಳನ್ನು ಪ್ರೌಢಾವಸ್ಥೆಗೆ ತರುವ ಮೊದಲೇ ಎಂದಿಗೂ  ಕೈಬಿಡದೇ ಉತ್ತಮ ಮಾರ್ಗದರ್ಶನ ನೀಡುತ್ತದೆ.


ಹೀಗೆ ಕೋಳಿಯಂತಹ ಸಾಮಾನ್ಯ ಜೀವಿಯು ತನಗರಿವಿಲ್ಲದೇ ಎಂತಹ ಅಮೂಲ್ಯವಾದ ಸಂದೇಶಗಳನ್ನು ನೀಡುತ್ತದೆ. ಇಂತಹ ಸಂದೇಶಗಳನ್ನು ನಾವೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜನ್ನ ಸಾರ್ಥಕ ಪಡಿಸಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು