ವಚನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಚನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

28 ಮಾರ್ಚ್ 2026

Ipl ಫ್ಯಾನ್ ಪಾರ್ಕ್ ತುಮಕೂರಲ್ಲಿ..


 

ತುಮಕೂರಿನಲ್ಲಿ 
ಕಳೆದ ವರ್ಷ ನಾನು‌ IPL ಫ್ಯಾನ್ ಪಾರ್ಕ್ ಬಗ್ಗೆ ವೀಡಿಯೋ ಹಾಕಿದ್ದೆ  ಬಹಳಷ್ಟು ಮುಖಪುಟದ ಬಂಧುಗಳು ಪ್ಯಾನ್ ಪಾರ್ಕ್ ಗೆ ಬರಲು ಉತ್ಸುಕರಾಗಿದ್ದರು. ಇಂದು ಮತ್ತು ನಾಳೆ ಮಾತ್ರ ತುಮಕೂರಿನಲ್ಲಿ ಫ್ಯಾನ್ ಪಾರ್ಕ್ ಇರುತ್ತದೆ.ಅಂದರೆ 28 ಮತ್ತು 29 ದಿನಾಂಕ ಮಾತ್ರ. ಇಂದು ನಮ್ಮ RCB ಮತ್ತು ಹೈದರಾಬಾದ್ ನಡುವಿನ ಪಂದ್ಯವನ್ನು ದೊಡ್ಡ ಪರದೆಯ ಮೇಲೆ ಅಲ್ಲಿಯೇ ನೋಡೋಣ ಬನ್ನಿ..
ಬರಲಾಗದವರು
ನನ್ನ sihijeeviya payana ಯೂಟ್ಯೂಬ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು..

#TataIPL #IPLMatches #TumkurFanPark #RCB #Hyderabad #Sihijeevi #SihijeeviyaPayana #CricketFan #MatchDay #IPL2023 #RoyalChallengersBangalore #CricketLovers #LiveCricket #FanExperience #SportsFan #CricketInIndia #GameDay #CheerForRCB #LovelyIndia #TeamRCB

24 ಮಾರ್ಚ್ 2026

ಪಾರೋದ ಐತಿಹಾಸಿಕ ರಿನ್ ಪುಂಗ್ ಕೋಟೆ.


  

 
ಪಾರೋದ   ಐತಿಹಾಸಿಕ ರಿನ್ ಪುಂಗ್ ಕೋಟೆ.


ಭೂತಾನ್ ನ ಥಿಂಪು ನಂತರ ಸುಂದರ ‌ನಗರ ಪಾರೋ. ಇಡೀ ದೇಶದಲ್ಲಿ ಇಲ್ಲಿ ಮಾತ್ರ ಏರ್ಪೋರ್ಟ್ ಇರುವುದು.   ನಮ್ಮ ಪ್ರವಾಸದ ಎರಡನೇ ದಿನ ನಾವು  ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ  ರಿನ್ ಪುಂಗ್ ಝಾಂಗ್ ನೊಡಲು ಹೊರಟೆವು.    ರಿನ್ ಪುಂಗ್ ಕೋಟೆ. ಕೆಲವರು  ಹಾಗೂ  ಪಾರೋ ಝಾಂಗ್ ಎಂದು ಕರೆತ್ತಾರೆ. ಇದು ಭೂತಾನಿನ ಪಾರೋ ಜಿಲ್ಲೆಯ ಕಾಗ್ಯು ಶಾಲೆಯ ಡ್ರುಕ್ಪಾ ವಂಶಾವಳಿಯ ಒಂದು ದೊಡ್ಡ ಕೋಟೆಯಾಗಿದೆ.

ನಾವು ಈ ಕೋಟೆಗೆ ಹಿಂದಿನ ಭಾಗದಿಂದ ಪ್ರವೇಶ ಪಡೆದೆವು.ಈ ಕೋಟೆಗೆ ಹೋಗುವ ಮೊದಲು ನಮ್ಮ ಗೈಡ್ ತೆಂದಿನ್ ಒಂದು ರೀತಿಯ ವಿಶೇಷವಾದ ವೇಲ್ ರೀತಿಯ ಬಟ್ಟೆಯನ್ನು ಹಾಕಿದರು.ಇದರ ಬಗ್ಗೆ ಕೇಳಿದಾಗ ಭೂತಾನ್ ನ ಜನತೆ ಅವರ ಪ್ರಮುಖ ದೇವಾಲಯ, ಬೌದ್ಧ ಸ್ತೂಪ, ಸರ್ಕಾರಿ ಕಛೇರಿ ,ಸಂಸತ್ ಗೆ ಭೇಟಿ ನೀಡುವಾಗ ಈ ರೀತಿಯ ವಿಶೇಷವಾದ ಅಡ್ಡ ವಸ್ತ್ರಗಳನ್ನು ಹಾಕಬೇಕು ಇದರಲ್ಲಿ ಮೂರು ಬಗೆಯ ವಸ್ತ್ರಗಳನ್ನು ಅವರ ಆಕರ್ಷಣೀಯ ಮತ್ತು ಹುದ್ದೆಗಳ ಆಧಾರದ ಮೇಲೆ ಹಾಕಲಾಗುತ್ತದೆ.

 ರಿನ್ ಪುಂಗ್ ಕೋಟೆಯು ಕೇವಲ ಕೋಟೆಯಾಗಿರದೇ ಇದು  ಬೌದ್ಧ ಮಠವೂ ಹೌದು ಹಾಗೂ  ಜಿಲ್ಲಾ ಸನ್ಯಾಸಿಗಳ ಮಂಡಳಿ ಮತ್ತು ಪಾರೋ ಝಾಂಗ್‌ಖಾಗ್‌ನ ಸರ್ಕಾರಿ ಆಡಳಿತ ಕಚೇರಿಗಳನ್ನು ಹೊಂದಿದೆ. ಇದನ್ನು ಯುನೆಸ್ಕೋ  ಸಾಂಸ್ಕೃತಿಕ ಪರಂಪರೆಯ ತಾಣವಾಗಿ   ಸೇರ್ಪಡೆಗಾಗಿ ಭೂತಾನ್‌ನ ತಾತ್ಕಾಲಿಕ ಪಟ್ಟಿಯಲ್ಲಿ ತಾತ್ಕಾಲಿಕ ತಾಣವಾಗಿ ಪಟ್ಟಿ ಮಾಡಲಾಗಿದೆ. ಆದಷ್ಟು ಬೇಗ ಇದು ಯುನೆಸ್ಕೋ ಸಾಂಸ್ಕೃತಿಕ ತಾಣವಾಗಿ ಸೇರ್ಪಡೆಯಾಗಲಿ ಎಂದು ಆಶಿಸೋಣ.



ಈ ಕೋಟೆಯ ಪ್ರವೇಶ ದ್ವಾರದಲ್ಲಿ ನಮ್ಮನ್ನು ತಪಾಸಣೆ ಮಾಡಿ ಒಳಗೆ ಬಿಡುತ್ತಿದ್ದರು.ಆ ಸಮಯದಲ್ಲಿ ಸಭ್ಯ ಉಡುಪು ಧರಿಸಿದವರನ್ನು ಮಾತ್ರ ಒಳಗೆ ಬಿಡುತ್ತಿದ್ದರು.ನಮ್ಮ ತಂಡದ ಸ್ನೇಹಿತರಲ್ಲಿ ಒಬ್ಬರು ಬರ್ಮುಡ ಧರಿಸಿದ್ದರು ಅವರನ್ನು ಒಳಗಡೆ ಬಿಡಲಿಲ್ಲ. ಅಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಅಲ್ಲಿ ಪಾಲಿಸಲಾಗುತ್ತದೆ.   ಜೊತೆಯಲ್ಲಿ ನಾವು ಆ ಕೋಟೆಯಲ್ಲಿ ಪ್ರಶಾಂತವಾಗಿ ಇರುವಂತೆ ಸೂಚನೆ ನೀಡಿದರು.

ಪಾರೋ ಝೋಂಗ್‌ನ ಐತಿಹಾಸಿಕ ದಾಖಲೆಗಳ ಪ್ರಕಾರ  ಈ ಸ್ಥಳದ ಕೆಳಗಿನ ಬಂಡೆಯ ಮುಖವನ್ನು 8 ನೇ ಶತಮಾನದಲ್ಲಿ ಗುರು ರಿನ್‌ಪೋಚೆರವರು ಈ ಸ್ಥಳವನ್ನು   ರಿಂಗ್‌ಪಂಗ್ ಎಂದು ಕರೆದರು. ನಂತರ ಈ ಸ್ಥಳದಲ್ಲಿ ಝೋಂಗ್ ಅನ್ನು ನಿರ್ಮಿಸಿದಾಗ ಅದು   ರಿಂಗ್ ಫಂಗ್ ಝೋಂಗ್   ಎಂದು ಕರೆಯಲ್ಪಟ್ಟಿತು.
15 ನೇ ಶತಮಾನದಲ್ಲಿ ಸ್ಥಳೀಯ ಸಮುದಾಯವು ಪಾರೊದಲ್ಲಿರುವ ಹಂಗ್ರೆಲ್ ಬಂಡೆಯನ್ನು ಫಾಜೊ ಡ್ರುಗೊಮ್ ಝಿಗ್ಪೊ ಅವರ ವಂಶಸ್ಥ ಲಾಮಾ ಡ್ರುಂಗ್ ಡ್ರುಂಗ್ ಗಯಾಲ್‌ಗೆ ಅರ್ಪಿಸಿತು. ಡ್ರುಂಗ್ ಡ್ರುಂಗ್ ಗಯಾಲ್ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದರು.  ನಂತರ ಹಂಗ್ರೆಲ್ ಡ್ಜಾಂಗ್ ಎಂದು ಕರೆಯಲ್ಪಡುವ ಐದು ಅಂತಸ್ತಿನ ಕೋಟೆಯನ್ನು ನಿರ್ಮಿಸಿದರು.
17 ನೇ ಶತಮಾನದ ವೇಳೆಗೆ ಹಂಗ್ರೆಲ್‌ನ ಪ್ರಭುಗಳು ಎಂದು ಕರೆಯಲ್ಪಡುವ ಅವರ ವಂಶಸ್ಥರು ಈ ಕೋಟೆಯನ್ನು ಏಕೀಕೃತ ಭೂತಾನ್ ರಾಜ್ಯದ ಸ್ಥಾಪಕ ಮತ್ತು ಡ್ರುಕ್ಪಾ ವಂಶಾವಳಿಯ ಮುಖ್ಯಸ್ಥ ಝಬ್ಡ್ರಂಗ್ ನ್ಗಾವಾಂಗ್ ನಮ್ಗ್ಯಾಲ್‌ಗೆ ಅವರ ಧಾರ್ಮಿಕ ಮತ್ತು ರಾಜಕೀಯ ಅಧಿಕಾರವನ್ನು ಗುರುತಿಸಿ ಅರ್ಪಿಸಿದರು. 1644 ರಲ್ಲಿ ಝಬ್ಡ್ರಂಗ್ ಹಳೆಯ ರಚನೆಯನ್ನು ಕೆಡವಿ ಹೊಸ ಝೋಂಗ್‌ಗೆ ಅಡಿಪಾಯ ಹಾಕಿದರು. 


23 ನೇ ಪೆನ್‌ಲೋಪ್ ದಾವಾ ಪೆಂಜೋರ್‌ನ ಆಳ್ವಿಕೆಯಲ್ಲಿ  ಮೊದಲ ರಾಜ ಗೊಂಗ್ಸಾ ಉಗ್ಯೆನ್ ವಾಂಗ್‌ಚುಕ್ ಸಿಂಹಾಸನಾರೋಹಣ ಮಾಡುವ ಮೊದಲು ಕೋಟೆಯು  ಬೆಂಕಿಯಿಂದ ತೀವ್ರವಾಗಿ ಹಾನಿಗೊಳಗಾಯಿತು.20 ಮೀಟರ್ ಅಗಲದ ಥೊಂಗ್‌ಡ್ರೆಲ್ ಹೊರತುಪಡಿಸಿ, ಹೆಚ್ಚಿನ ಅವಶೇಷಗಳು ಮತ್ತು ಪ್ರತಿಮೆಗಳು ನಾಶವಾದವು. ಥೊಂಗ್‌ಡ್ರೆಲ್‌ಗೆ ಗೌರವ ಸಲ್ಲಿಸುವುದರಿಂದ ಆಧ್ಯಾತ್ಮಿಕ ಅರ್ಹತೆ ಮತ್ತು ವಿಮೋಚನೆಯ ಸಾಮರ್ಥ್ಯ ಬರುತ್ತದೆ ಎಂದು ಭಕ್ತರು ನಂಬಿದ್ದಾರೆ. 1993 ರ ಚಲನಚಿತ್ರ ಲಿಟಲ್ ಬುದ್ಧದ ಹಲವಾರು ದೃಶ್ಯಗಳನ್ನು ಪಾರೋ ರಿನ್‌ಪುಂಗ್ ಝೋಂಗ್‌ನಲ್ಲಿ ಚಿತ್ರೀಕರಿಸಲಾಗಿದೆ.

ಈ ಕೋಟೆಯಲ್ಲಿರುವ ಪ್ರಮುಖ ಸ್ಮಾರಕಗಳನ್ನು ನಮಗೆ ನಮ್ಮ ಗೈಡ್ ನಮಗೆ ತೋರಿಸುತ್ತಾ ವಿವರಣೆ ನೀಡುತ್ತಾ ಕೋಟೆಯಲ್ಲಿ ಒಂದು ಸುತ್ತು ಹಾಕಿಸಿ ನಮಗೆ ಕೋಟೆಯ ಪರಿಚಯ ಮಾಡಿಸಿದರು.ಸೂರ್ಯಾಸ್ತದ ಸಮಯದಲ್ಲಿ ರಿನ್‌ಪುಂಗ್ ಡ್ಜಾಂಗ್ ಮತ್ತು ನೇಮಿ ಝಾಮ್ ಸೇತುವೆ
ರಿನ್‌ಪುಂಗ್ ಡ್ಜಾಂಗ್ ಒಳಗೆ ಹದಿನಾಲ್ಕು ದೇವಾಲಯಗಳು ಮತ್ತು ಪ್ರಾರ್ಥನಾ ಮಂದಿರಗಳಿವೆ. ಅವೆಂದರೆ ಕುಂಗರ್ವ,ಸನ್ಯಾಸಿಗಳ ಸಭಾ ಭವನ,ಶ್ರೀಗಂಧದ ಸ್ತೂಪ,ರಕ್ಷಕ ದೇವಾಲಯ,ಗುರುವಿನ ಎಂಟು ಅಭಿವ್ಯಕ್ತಿಗಳ ದೇವಾಲಯ,ಲಾಮಾ ಮುಖ್ಯಸ್ಥರ ಪ್ರಾರ್ಥನಾ ಮಂದಿರ,ಅಮಿತಾಯಸ್ ಪ್ರಾರ್ಥನಾ ಮಂದಿರ,ದಿ ಕ್ಲಿಯರ್ ಕ್ರಿಸ್ಟಲ್ ಶ್ರೈನ್,ಹನ್ನೊಂದು ಮುಖದ ಅವಲೋಕಿತೇಶ್ವರನ ಪ್ರಾರ್ಥನಾ ಮಂದಿರ,ಅಬಾಟ್‌ನ ಅಪಾರ್ಟ್‌ಮೆಂಟ್‌ಗಳು,ಅಕ್ಷೋಭ್ಯ ದೇಗುಲ,ನಿಧಿ ಬಹಿರಂಗಪಡಿಸುವವರ ದೇವಾಲಯ,ರಾಜನ ಅಪಾರ್ಟ್‌ಮೆಂಟ್‌ಗಳು,ಬುರ್ಸಾರನ ದೇವಾಲಯ
ಮುಖ್ಯ ಝೊಂಗ್‌ನ ಹೊರಗೆ ದೇಯಾಂಗ್ಖಾ ದೇವಸ್ಥಾನವಿದೆ.
ರಿನ್‌ಪುಂಗ್ ಡ್ಜಾಂಗ್ ಮೇಲಿನ ಬೆಟ್ಟದ ಮೇಲೆ 1649 ರಲ್ಲಿ ನಿರ್ಮಿಸಲಾದ ಏಳು ಅಂತಸ್ತಿನ ಕಾವಲು ಗೋಪುರ ಕೋಟೆ ಅಥವಾ ಟಾ ಡ್ಜಾಂಗ್ ಇದೆ. 1968 ರಲ್ಲಿ ಇದನ್ನು ಭೂತಾನ್ ರಾಷ್ಟ್ರೀಯ ವಸ್ತುಸಂಗ್ರಹಾಲಯದ ನೆಲೆಯಾಗಿ ಸ್ಥಾಪಿಸಲಾಯಿತು .
ರಿನ್‌ಪುಂಗ್ ಡ್ಜಾಂಗ್‌ನ ಸ್ವಲ್ಪ ಕೆಳಗೆ ಸಾಂಪ್ರದಾಯಿಕ ಮುಚ್ಚಿದ ಕ್ಯಾಂಟಿಲಿವರ್ ಸೇತುವೆ ಇದೆ.
ಈ ಕೋಟೆಯ ಸೌಂದರ್ಯವನ್ನು ಸವಿಯುತ್ತಾ ಸಾಗಿದ ನಮ್ಮನ್ನು  ನಮ್ಮ ಗೈಡ್ ಮಿಲೆನಿಯಮ್ ವ್ಯೂ ಪಾಯಿಂಟ್ ಬಳಿ ಕರೆದುಕೊಂಡು ಹೋದರು.ಅದು ಬಹಳ ಸುಂದರವಾದ ದೃಶ್ಯಗಳನ್ನು ಹೊಂದಿ ನಮ್ಮ ಮನ ತಣಿಸಿತು. ಪಾರೋ ಏರ್ಪೋರ್ಟ್, ನದಿ ಕಣಿವೆ, ಕಾಡುಗಳು, ಮನೆಗಳು ಮುಂತಾದ ಸೀನರಿಗಳು ನೋಡುಗರನ್ನು ಸೆಳೆಯುತ್ತವೆ.ಅದೇ ಪ್ರದೇಶದಲ್ಲಿ ಇರುವ ಒಂದು ಮನೆಯ ಕಡೆ ತೋರಿಸಿದ ನಮ್ಮ ‌ಗೈಡ್ ಆ ಮನೆಯು ರಾಜ ಮನೆತನದವರು ಪಾರೋಗೆ ಬಂದಾಗ ಉಳಿದುಕೊಳ್ಳಲು ಇರುವ ಮನೆ. ಭಾರತದಲ್ಲಿ  ಇಂದಿರಾಗಾಂಧಿ ರವರ ಹತ್ಯೆ ಆದಾಗ ರಾಜೀವ್ ಗಾಂಧಿಯವರನ್ನು ಆ ಮನೆಯಲ್ಲಿ ಸುರಕ್ಷಿತವಾಗಿ ಇಟ್ಟಿದ್ದರು ಎಂದು ಹೇಳಿದರು.



ಆ ಕೋಟೆಯಲ್ಲಿ ಇರುವ ಕೆಲ ವಿಶೇಷವಾದ ಪೋಟೋಗಳ ಕಡೆಗೆ ನಮ್ಮ ಗಮನ ಸೆಳೆದ ನಮ್ಮ ಗೈಡ್ ತೆಂದಿನ್ ಆ ಕೋಟೆಯಲ್ಲಿ ವಾರ್ಷಿಕವಾಗಿ ನಡೆಯುವ ಧಾರ್ಮಿಕ ಆಚರಣೆಗಳ ಬಗ್ಗೆ ತಿಳಿಸಿದರು.

ಸಾಂಪ್ರದಾಯಿಕ ಭೂತಾನೀಸ್ ಚಂದ್ರಮಾನ  ಕ್ಯಾಲೆಂಡರ್‌ನ ಎರಡನೇ ತಿಂಗಳಿನ ಹನ್ನೊಂದನೇ ತಾರೀಖಿನಿಂದ ಹದಿನೈದನೇ ದಿನದವರೆಗೆ ಅಂದರೆ ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್‌ನ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ  ರಿನ್‌ಪುಂಗ್ ಕೋಟೆಯಲ್ಲಿ ಒಂದು ದೊಡ್ಡ ವಾರ್ಷಿಕ ಉತ್ಸವ ಅಥವಾ ತ್ಶೆಚು ನಡೆಯುತ್ತದೆ. ಈ ಸಂದರ್ಭದಲ್ಲಿ ಪವಿತ್ರ ಚಿತ್ರಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದರ ನಂತರ ಧಾರ್ಮಿಕ ಕಥೆಗಳನ್ನು ತಿಳಿಸುವ ಸಾಂಪ್ರದಾಯಿಕ ಮುಖವಾಡ ನೃತ್ಯಗಳ ಸರಣಿಯನ್ನು ಸನ್ಯಾಸಿಗಳು ಹಲವಾರು ದಿನಗಳವರೆಗೆ ಪ್ರದರ್ಶಿಸುತ್ತಾರೆ.
ಹದಿನೈದನೇ ದಿನದ ಬೆಳಗಿನ ಜಾವದಲ್ಲಿ, ಪದ್ಮಸಂಭವನ ಎಂಟು ಅವತಾರಗಳಾದ     ಗುರು ಪೆಮಾ ಜಂಗ್ನಿ, ಗುರು ನಿಮಾ ಯೋಯೆಜರ್, ಗುರು ಸಿಂಗ್ಯೆ ಡ್ರಾಡ್ರಾಂಗ್, ಗುರು ತ್ಶೋಕಿ ದೋರ್ಜಿ, ಗುರು ಶಾಚಾ ಸಿಂಗ್ಯೆ, ಗುರು ಪೆಮಾ ಗೈಲ್ಪೋ, ಗುರು ದೋರ್ಜಿ ಡೋಲೋ ಮತ್ತು ಗುರು ಲೋಡನ್ ಚೋಕ್ಸೆ ಗಳನ್ನು ಚಿತ್ರಿಸುವ ಒಂದು ದೊಡ್ಡ ಪವಿತ್ರ ಥೋಂಗ್ಡ್ರೆಲ್ ಬ್ಯಾನರ್ ಥಂಗ್ಕಾವನ್ನು  ಬೆಳಗಿನ ಜಾವದಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ. ಸೂರ್ಯನ ಬೆಳಕು ಅದರ ಮೇಲೆ ಬೀಳಲು ಬಿಡದಿರುವ ಸಂಪ್ರದಾಯವನ್ನು ಉಳಿಸಿಕೊಳ್ಳಲು ಬೌದ್ಧ  ಸನ್ಯಾಸಿಗಳು ಮುಖವಾಡ ನೃತ್ಯ ಮಾಡುವ ನೆಲವನ್ನು ದೆಯಾಂಗ್ಖಾ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಕೋಟೆಯ ಐತಿಹಾಸಿಕ ಜಾಗೂ ಧಾರ್ಮಿಕ ಮಹತ್ವ ತಿಳಿದ ನಾವು ಕೋಟೆಯ ಒಳಭಾಗ ಹಾಗೂ ಹೊರಭಾಗದಲ್ಲಿ ನಮ್ಮ ತಂಡದ ಜೊತೆಯಲ್ಲಿ ನೆನಪಿಗಾಗಿ ಪೋಟೋ ತೆಗೆದುಕೊಂಡು ಭೂತಾನ್ ನ ಮತ್ತೊಂದು ದೇಗುಲ ಕಿಚು ಲಕಾಂಗ್ ಕಡೆಗೆ ಪಯಣ ಬೆಳೆಸಿದೆವು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು.

28 ಜೂನ್ 2025

ಶೆಟ್ಟಿ ಹಳ್ಳಿ ಆಂಜನೇಯಸ್ವಾಮಿ ದೇವಾಲಯ.


 ಶೆಟ್ಟಿ ಹಳ್ಳಿ ಆಂಜನೇಯಸ್ವಾಮಿ ದೇವಾಲಯ.


 ಪ್ರಸಿದ್ಧ ಇತಿಹಾಸ ಹೊಂದಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯವು ತುಮಕೂರಿನಿಂದ 3 ಕಿ.ಮೀ. ದೂರದ ಆಗ್ನೇಯ ದಿಕ್ಕಿನಲ್ಲಿರುವ ಶೆಟ್ಟಿಹಳ್ಳಿ ಗ್ರಾಮದಲ್ಲಿದೆ. ಜಾತಿ, ಧರ್ಮ ಭೇದವಿಲ್ಲದೆ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ನಂಬಿದವರ ಬೇಡಿಕೆಗಳನ್ನು ಈಡೇರಿಸುತ್ತಾನೆಂಬ ನಂಬಿಕೆಯಿಂದ ಭಕ್ತರು ಆಗಮಿಸುತ್ತಾರೆ.

  ಚೈತ್ರ ಮಾಸದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಮಹಾಭಾರತ ಕಾವ್ಯದಲ್ಲಿ ಬರುವ ಜನಮೇಜಯ ಮಹಾರಾಜ ಯಾಗ ಮಾಡುವ ಮುನ್ನ ವಿಘ್ನಗಳು

ಬಾರದಂತೆ ಈ ಆಂಜನೇಯನನ್ನು ಪ್ರತಿಷ್ಠಾಪನೆ ಮಾಡಿಸಿದರೆಂದು ಸ್ಥಳ ಪುರಾಣ ಹೊಂದಿರುವ ಈ ಪ್ರತಿಮೆಯು ಸುಮಾರು 10 ಅಡಿ ಎತ್ತರ ಹಾಗೂ 6 ಅಡಿ ಅಗಲವಾಗಿದ್ದು ಮುಳಬಾಗಿಲಿನಲ್ಲಿರುವ ಹನುಮಂತನನ್ನು ಬಿಟ್ಟರೆ ಎತ್ತರದಲ್ಲಿ ಎರಡನೇ ಆಂಜನೇಯಸ್ವಾಮಿ ಆಗಿದೆ. ಈ ಆಂಜನೇಯನ ಕೈಯಲ್ಲಿ ಮಾವಿನಹಣ್ಣುಗಳನ್ನು ಹಿಡಿದಿರುವುದು ವಿಶೇಷ,


1893 ರಲ್ಲಿ ಮೈಸೂರು ಪ್ರಾಂತ್ಯದ ಚೌಬೀನೆ ನಾಗ ಕುಮಾರಯ್ಯನವರು ಈ ದೇವಾಲಯದ ಜೀರ್ಣೋದ್ಧಾರ ಮಾಡಿದರೆಂದು ದೇವಾಲಯದಲ್ಲಿರುವ ಶಿಲಾಫಲಕವೊಂದು ತಿಳಿಸುತ್ತದೆ.


#shettihally #anjaneya 

#AnjaneyaTempleTumkur #TumkurTemples #IndianTemples #Anjaneya #DevotionalJourney #Spirituality #TemplesofIndia #VinayakaChaturthi #LocalTemples #ExploringTempleArchitecture #SacredSite #DivineVibes #CulturalHeritage #TempleVisiting #Pilgrimage #Devotees #GodsAndGoddesses #SpiritualTour #TumkurTourism

01 ಮೇ 2025

ಅಂಚೆ ಇಲಾಖೆಯಿಂದ ಪಠ್ಯ ಪುಸ್ತಕ ಹಾಗೂ ಪುಸ್ತಕ ರವಾನೆಗೆ ‘ಜ್ಞಾನ ಅಂಚೆ’

 ಅಂಚೆ ಇಲಾಖೆಯಿಂದ ಪಠ್ಯ ಪುಸ್ತಕ ಹಾಗೂ ಪುಸ್ತಕ ರವಾನೆಗೆ ‘ಜ್ಞಾನ ಅಂಚೆ’

ಪಠ್ಯಪುಸ್ತಕ ಹಾಗೂ ಸಾಹಿತ್ಯ ಕೃತಿಗಳು ಹಾಗೂ ಇತರೆ ಮುದ್ರಿತ ಪುಸ್ತಕಗಳ ರವಾನೆಗಾಗಿ ಅಂಚೆ ಇಲಾಖೆ ನೂತನವಾಗಿ ಜ್ಞಾನ ಆಂಚೆ (ಗ್ಯಾನ್ ಪೋಸ್ಟ್) ಎಂಬ ಸೇವೆಯನ್ನು ಆರಂಭಿಸಿದೆ ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರಾದ ಹರೀಶ್ ತಿಳಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಮೇ 1 ರಿಂದ ಆರಂಭವಾಗಿರುವ ಈ ಸೇವೆಯ ಅಡಿಯಲ್ಲಿ ಪ್ರಕಾಶಕರು, ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು, ಸರ್ಕಾರದ ಸ್ವಾಯತ್ತ ಸಂಸ್ಥೆಗಳು, ಓದುಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ರವಾನಿಸಲು ಅನೂಕೂಲವಾಗಲಿದ್ದು ಈ  ಸೇವೆಯು ಎಲ್ಲಾ ಅಂಚೆ ಕಚೇರಿಗಳಲ್ಲಿ ಲಭ್ಯವಿದೆ ಎಂದು ಹೇಳಿದ್ದಾರೆ.

ಈ ಸೇವೆಯ ಅಡಿಯಲ್ಲಿ ಪುಸ್ತಕಗಳನ್ನು ಕಳುಹಿಸುವವರು ಪಾರ್ಸಲ್ ಮೇಲೆ “ಜ್ಞಾನ ಅಂಚೆ” ಎಂದು ಕಡ್ಡಾಯವಾಗಿ ಬರೆದಿರಬೇಕು. ಯಾವುದೇ ವಾಣಿಜ್ಯ ಉದ್ದೇಶದ ಕರಪತ್ರ ಅಥವಾ ಬರಹದ ಸಂದೇಶ ಪತ್ರಗಳನ್ನು, ಬಿಲ್ ಬುಕ್ಸ್, ಆಹ್ವಾನ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಈ ಸೇವೆಯಲ್ಲಿ ಕಳುಹಿಸಲು ಅವಕಾಶವಿರುವುದಿಲ್ಲ. ಕನಿಷ್ಠ 300 ಗ್ರಾಂ ನಿಂದ ಗರಿಷ್ಠ 5 ಕೆ.ಜಿಯವರೆಗೂ ಈ ವ್ಯವಸ್ಥೆಯಲ್ಲಿ ಪುಸಕ್ತಗಳನ್ನು ಕಳುಹಿಸಬಹುದು ಎಂದು ತಿಳಿಸಿರುವ ಅವರು ಪುಸ್ತಕಗಳನ್ನು ಕಳುಹಿಸುವವರ ಮತ್ತು ವಿಳಾಸದಾರರ ಸಂಪೂರ್ಣ ಅಂಚೆ ವಿಳಾಸವನ್ನು ದೂರವಾಣಿ ಸಂಖ್ಯೆಯೊಂದಿಗೆ ಕಡ್ಡಾಯವಾಗಿ ನಮೂದಿಸಬೇಕು ಎಂದು ಹೇಳಿದ್ದಾರೆ. 

ಜ್ಞಾನ ಅಂಚೆಯ ಶುಲ್ಕ ವಿವರ

ತೂಕ ಶುಲ್ಕ

300 ಗ್ರಾಂವರೆಗೆ ರೂ.20

301-500 ಗ್ರಾಂವರೆಗೆ ರೂ.25

501-1000 ಗ್ರಾಂವರೆಗೆ ರೂ.35

1001-2000 ಗ್ರಾಂವರೆಗೆ ರೂ.50

2001-3000 ಗ್ರಾಂವರೆಗೆ ರೂ.65

3001-4000 ಗ್ರಾಂವರೆಗೆ ರೂ.80

4001-5000 ಗ್ರಾಂವರೆಗೆ ರೂ.100

02 ಜನವರಿ 2024

ಅಂತರ್ಮುಖಿಗಳಿಗೊಂದು ದಿನ


 


ಅಂತರ್ಮುಖಿಗಳಿಗೊಂದು ದಿನ 


ಕೆಲವರು ಮಾತನಾಡುತ್ತಿದ್ದರೆ ನಾನ್ ಸ್ಟಾಪ್... ಅಂತಹ ವ್ಯಕ್ತಿಗಳ ಕಂಡು   ಅವರು ಕಲ್ಲನ್ನು ಬೇಕಾದರೂ ಒಮ್ಮೆ ಮಾತನಾಡಿಸಬಲ್ಲರು ಎಂದು ಜೋಕ್ ಮಾಡುವುದುಂಟು. ಇದಕ್ಕೆ ವಿರುದ್ಧವಾಗಿ ಕೆಲವರನ್ನು ಎಷ್ಟು   ಮಾತನಾಡಿಸಿದರೂ ಅವರ ಕಡೆಯಿಂದ ಬೇಗ ಪ್ರತಿಕ್ರಿಯೆ ಬರುವುದೇ ಇಲ್ಲ. ಅಯ್ಯೋ ಮಾತಾಡು ಬಾಯಿಂದ ಮುತ್ತೇನು ಉದುರೋಲ್ಲ ಎಂದು ಇಂತವರ ಕಿಚಾಯಿಸುವುದೂ ಉಂಟು ಇಂತಹ ಮೂಡಿಯಾಗಿರುವ ,ಕಡಿಮೆ ಪ್ರತಿಕ್ರಿಯೆ ನೀಡುವ, ಆಗೊಂದು ಈಗೊಂದು ಮಾತನಾಡುವ , ಎಲ್ಲರೊಡನೆ ಕಡಿಮೆ ಬೆರೆಯುವವರನ್ನು ಅಂತರ್ಮುಖಿಗಳು ಎಂದು ಕರೆಯಬಹುದು.

ಬೇರೆಯರೊಂದಿಗೆ ಬೆರೆಯದೇ ಮಂಕಾಗಿರುವ ಇವರು ದಡ್ಡರೆಂದು ನೀವು ಭಾವಿಸಲೇಬಾರದು ಡಾರ್ವಿನ್ ನಿಂದ ಹಿಡಿದು  ಐನ್ಸ್ಟೈನ್ ನಂತಹ ಮಾಹಾನ್ ವಿಜ್ಞಾನಿಗಳು ಕೂಡಾ ಅಂತರ್ಮುಖಿ ವ್ಯಕ್ತಿತ್ವಕ್ಕೆ ಉದಾಹರಣೆ ಎಂಬುದು ನೆನಪಿರಲಿ.

ಪ್ರತಿವರ್ಷ ಜನವರಿ 2 ರಂದು ವಿಶ್ವ ಅಂತರ್ಮುಖಿ ದಿನವನ್ನು ಆಚರಿಸಲಾಗುತ್ತದೆ.

ಅಂತರ್ಮುಖಿಗಳು ಏಕಾಂಗಿಯಾಗಿ ಇರುತ್ತಾರೆಂದು ಅವರ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಲಾಗಿದೆ. ನಮ್ಮ ಸಮಾಜ ಅಂತರ್ಮುಖಿಗಳನ್ನು ದುರಹಂಕಾರಿ, ನಿರಾಸಕ್ತಿ, ಅಂಜಿಕೆಯುಳ್ಳವರು ಎಂದು ತಪ್ಪಾಗಿ ನಿರ್ಣಯಿಸಲಾಗುತ್ತದೆ. ಈ ದಿನವು ಜನರು ಇಂತಹವರನ್ನು ಹೆಚ್ಚಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹೆಸರಾಂತ ಮನಶಾಸ್ತ್ರಜ್ಞರಾದ 

ಕಾರ್ಲ್ ಜಂಗ್ ರವರು ಮೊದಲ ಬಾರಿಗೆ    1921ರಲ್ಲಿ  "ಸೈಕಲಾಜಿಕಲ್ ಟೈಪ್ಸ್" ಎಂಬ ಪುಸ್ತಕದಲ್ಲಿ   ಅಂತರ್ಮುಖಿ ಪರಿಕಲ್ಪನೆಯನ್ನು ಮೊದಲು ವ್ಯಾಖ್ಯಾನಿಸಿದರು.  ಪ್ರತಿಯೊಬ್ಬ ವ್ಯಕ್ತಿಯು ಅಂತರ್ಮುಖಿ ಮತ್ತು ಬಹಿರ್ಮುಖಿ ಎಂಬ ಎರಡು ವರ್ಗಗಳಾಗಿ ಬರುತ್ತಾರೆ ಎಂದು ಅವರು ಪ್ರತಿಪಾದಿಸಿದರು. ಜಂಗ್ ಅಂತರ್ಮುಖಿಗಳನ್ನು ಗ್ರೀಕ್ ದೇವರು ಅಪೊಲೊಗೆ ಹೋಲಿಸಿದ್ದಾರೆ. 

ಅಪೊಲೊ ತಿಳುವಳಿಕೆ ಮತ್ತು ಜ್ಞಾನೋದಕ್ಕೆ ಪ್ರಸಿದ್ಧಿ.  ಅಪೊಲೊ ಅಂತರ್ಮುಖಿಗಳು ತಮ್ಮ ಆಂತರಿಕ ಪ್ರಪಂಚದ ಪ್ರತಿಬಿಂಬ, ಕನಸು ಮತ್ತು ದೃಷ್ಟಿಯ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ವಿವರಿಸಿದರು.

ಅಂತರ್ಮುಖಿಗಳು ಏಕಾಂಗಿಯಾಗಿರುವುದನ್ನು ಹೆಚ್ಚಾಗಿ ಆನಂದಿಸುತ್ತಾರೆ. ಅಂತಹವರು ಮೌನವಾಗಿರುವುದೇ ಹೆಚ್ಚು, ಆದರೆ ಒರಟರಾಗಿವುದಿಲ್ಲ. ಅವರು ಸಾಮಾಜಿಕವಾಗಿ ಉತ್ತಮರಾಗಿರುತ್ತಾರೆ. ಅವರು ಅತ್ಯಂತ ಉತ್ಸಾಹಿಗಳಾಗಿದ್ದು, ಅನ್ವೇಷಕರಾಗಿರುತ್ತಾರೆ. ಎಷ್ಟೋ ಸಲ ಅಂತರ್ಮುಖಿಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. 


ಅಂತರ್ಮುಖಿಗಳು ಹೊಸ ಮಾಹಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ನಿಧಾನ ಮಾಡುವರು. 

ಅಂತರ್ಮುಖಿಗಳು ಯಾರ ವಿರೋಧಿಗಳಾಗಿರುವುದಿಲ್ಲ, ಆದರೆ ಅವರು ಹೆಚ್ಚು ಜಾಗರೂಕರಾಗಿರುತ್ತಾರೆ ಮತ್ತು ಅವರು ತೆಗೆದುಕೊಳ್ಳುವ .

ಅಂತರ್ಮುಖಿಗಳು ಆಳವಾದ ಚಿಂತಕರು ಮತ್ತು ಹೆಚ್ಚು ಸೃಜನಶೀಲರು.

ಆದ್ದರಿಂದ ನಮ್ಮ ಸುತ್ತ ಮುತ್ತ ಇರುವ ಅಂತರ್ಮುಖಿಗಳನ್ನು ಗೌರವಿಸೋಣ.ಅವರ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವರ ಪಾಡಿಗೆ ಅವರನ್ನು ಬಿಟ್ಟು ಬಿಡೋಣ ತನ್ಮೂಲಕ ಅವರ ಸಂತಸವನ್ನು ಅನುಭವಿಸಲು ಬಿಡೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

26 ಸೆಪ್ಟೆಂಬರ್ 2021

ನನ್ನ ಪುತ್ರಿಯರು


 




ವಿಶ್ವ ಹೆಣ್ಣುಮಕ್ಕಳ ದಿನದ ನೆನಪಿಗಾಗಿ 


"ಚುಟುಕುಗಳು*



ನನಗೆ ಬಹಳ ಹೆಮ್ಮೆ

ನಮ್ಮನೆಯಲಿವೆ ಮುತ್ತು

ರತ್ನಗಳು |

ಅವರೇ ನನ್ನೆರಡು ಕಣ್ಣುಗಳಾದ 

ಹೆಣ್ಣು ಮಕ್ಕಳು ||



ಜ್ಞಾನ ,ವಿನಯ, ಭಕ್ತಿ ಸದ್ಗುಣದಲಿ

ಅವರಿಗೆ ಸಾಟಿ ಇನ್ನಾರು|

ಸಮಯ ಬಂದರೆ ಗುರುವಿಗೆ ಗುರು ನನ್ನ ಪುತ್ರಿಯರು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ





08 ಸೆಪ್ಟೆಂಬರ್ 2021

ಸಿಹಿಜೀವಿಯ ನುಡಿ


 



ಸಿಹಿಜೀವಿಯ ನುಡಿ


ಜಗತ್ತಿನ ಎಲ್ಲಾ ಕೆಲಸಗಳು ಅತ್ಯದ್ಭುತ

ನಾವು ಆ ಕೆಲಸ ಮಾಡುವ ರೀತಿ

ಕೌಶಲ್ಯ ಪ್ರಾಮಾಣಿಕತೆ ಸೇವಾಮನೋಭಾವ ಇವುಗಳು ನಮ್ಮ ಕೆಲಸದ ದಕ್ಷತೆ ಹೆಚ್ಚಿಸಿ ನಮಗೆ ಆತ್ಮ ತೃಪ್ತಿ ನೀಡುತ್ತದೆ. ಗೀತಾಚಾರ್ಯ ಹೇಳಿದಂತೆ ಶ್ರದ್ಧೆಯಿಂದ ಪ್ರತಿಫಲಾಪೇಕ್ಷೆಯಿರದೇ ಯಾವುದೇ ಕಾರ್ಯ ಮಾಡಿದರೂ ಒಂದಲ್ಲ ಒಂದು ದಿನ ಅದಕ್ಕೆ ಸೂಕ್ತ ಪ್ರತಿಫಲ ಸಿಕ್ಕೇ ಸಿಗುವುದು ತನ್ಮೂಲಕ ಸಮಾಜ ನಮ್ಮನ್ನು ಗುರ್ತಿಸುತ್ತದೆ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

05 ಸೆಪ್ಟೆಂಬರ್ 2021

ಶಿಕ್ಷಕನಾಗಿ ಮಕ್ಕಳಿಗೆ ಹತ್ತು ಸಲಹೆಗಳು


 



ಶಿಕ್ಷಕರ ದಿನದ ಶುಭಾಶಯಗಳು



ಶಿಕ್ಷಕನಾಗಿ ಮಧ್ಯಮ ವಯಸ್ಸಿನ ಹಿರಿಯನಾಗಿ 

ಮಕ್ಕಳಿಗೆ ನೀಡುವ ೧೦  ಸಲಹೆಗಳು 


೧ ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ

೨ ಗುರು ಹಿರಿಯರ ಗೌರವಿಸಿ

೩ ಸುಲಭವಾಗಿ ಸೋಲು ಒಪ್ಪಬೇಡಿ

೪ ಯಶಸ್ವಿಯಾಗಿ ಮುಂದಡಿ ಇಡಿ

೫ ಯಶಸ್ಸಿಗೆ ಅಡ್ಡ ದಾರಿ ಇಲ್ಲ ಪರಿಶ್ರಮ ಮರೆಯದಿರಿ

೬ ನಿಮ್ಮಿಷ್ಟದ ಗುರಿ ಆರಿಸಿಕೊಂಡು ಅದನ್ನು ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡಿ

೭ ಇತರರಿಂದ ಸ್ಪೂರ್ತಿ ಪಡೆಯಿರಿ ಆದರೆ ಹೋಲಿಕೆ ಮಾಡಿಕೊಳ್ಳಬೇಡಿ

೮ ನಾಡು ನುಡಿಯ ಬಗ್ಗೆ ಗೌರವವಿರಲಿ

೯ ನಮ್ಮ ಸಂಸ್ಕೃತಿ ಮತ್ತು ಪ್ರಕೃತಿ ಸಂರಕ್ಷಣೆ ಗೆ ಮುಂದಾಗಿ

೧೦ ಜವಾಬ್ದಾರಿಯುತ ನಾಗರಿಕರಾಗಿ


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

15 ಅಕ್ಟೋಬರ್ 2020

ಮಳೆ ಹನಿಯ ಬಗ್ಗೆ ಸಿಹಿಜೀವಿಯ ಹನಿಗಳು


 *ಹನಿಗಳ ಮೇಲೆ ಸಿಹಿಜೀವಿಯ ಹನಿಗಳು*



ಹನಿ೧


*ನಿಲ್ಲಿಸು*


ವರುಣ ತೋರು ಕರುಣ  

ಬರಲಿ ಬಿಡು ಅರುಣ

ನಿಲ್ಲಿಸು ನಿನ್ನಾರ್ಭಟವ

ಕೊಡದಿರು ಕಾಟವ 



ಹನಿ೨


*ನೆಲೆ ಎಲ್ಲಿ?*


ವರುಣನ ಆಗಮನ

ಜೀವಸಂಕುಲದ ನಮನ

ವರಣಾರ್ಭಟವಾಗಲು 

ಬದುಕು ಚೆಲ್ಲಾಪಿಲ್ಲಿ.

ಜೀವಿಗಳಿಗೆ ನೆಲೆ ಎಲ್ಲಿ?


ಹನಿ೩


*ನಿಶ್ಶೇಷ*


ತೂತು ಬಿದ್ದಿರಬಹುದು 

ಆಕಾಶ 

ರೈತರ ಮನದಿ ಕ್ಲೇಶ |

ಬೆಳೆ ಮತ್ತು ಬಾಳಾಗಬಹುದು

ನಿಶ್ಶೇಷ||



ಹನಿ೪


*ಮಳೆ*


ನಮಗೂ ಬೇಕೇ ಬೇಕು

ಮಳೆ |

ಅತಿಯಾದರೆ ?

ಹೊಡೆದುಬಿಡುವುದೇನೋ 

ರೈತರ ಶವಪೆಟ್ಟಿಗೆಗೆ ಕೊನೆಯ

ಮಳೆ|| 



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.

04 ಮೇ 2019

ವಚನ೫

*ವಚನ೫*

ಗುರಿಯಿರಲಿ ಬಾಳಿಗೆ
ಗುರಿಯ ತಲುಪಲು
ದಾರಿಯು ಶುದ್ದವಿರಲಿ
ಸರಿತಪ್ಪಿನ ಅರಿವಿರಲಿ
ಅರಿತು ಮುನ್ನಡೆ ಬಾಳಲಿ
ಹರಿಯ ಕರುಣೆಯಿಂದ
ಬಾಳು ಬಂಗಾರವಾಗುವುದು
ನೋಡಾ ಶ್ರೀದೇವಿತನಯ

 *ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


03 ಮೇ 2019

ಶ್ರೀದೇವಿ ತನಯನ ವಚನಗಳು

*ಶ್ರೀದೇವಿ ತನಯನ ವಚನಗಳು*

*ವಚನ೧*

ನೂರೂರು ಸುತ್ತಿ
ನೂರ್ಕಾಸು ಕಳೆದು
ನದಿಗಳಲಿ ಮಿಂದು
ದೇವ ದೇವತೆಗಳ
ನೋಡುವ ಬದಲು
ನಿನ್ನ ಅಂತರಂಗದ
ರಂಗನ ನೆನೆಯೆಂದ
ಶ್ರೀದೇವಿತನಯ

*ವಚನ೨*

ನಾನು ನನ್ನದು
ನಮ್ಮವರು ಎಂಬ
ಬಂಧನದಿ ಬಿದ್ದು
ನರಳದಿರು ನೀ
ಬನ್ನಪಡುವಾಗ
ಬಂಧುಗಳ ಸದ್ದಿಲ್ಲ
ಕರೆಯದೇ ಬಂದು
ಕಾಪಾಡುವ ನಮ್ಮ
ಹರಿಯಲಿ ಮನಸಿಡು
ಎಂದ ಶ್ರೀದೇವಿತನಯ

*ವಚನ೩*

ವಂಚಕರಿಹರು ಜಗದಲಿ
ಸಂಚುಮಾಡಿ ಮೆರೆವರು
ಕೊಂಚವೂ ವಿಚಲಿತನಾಗಬೇಡ
ಮಿಂಚಿನಂತೆ ಕಾರ್ಯಮಾಡುತ
ಅಂಜದಲೆ  ಮುನ್ನಡೆ
ನಂಜನುಂಡ ಹರ ಕಾಯವನು
ಶ್ರೀದೇವಿತನಯನ ದಯವಿವುದು


*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

ವಚನ (ಗೋವಿಂದ)

*ವಚನ*

ವ್ಯಸನವಾಗಲಿ ಹರಿಯ
ನಾಮಸ್ಮರಣೆ
ಹಸಿವು ನಿದಿರೆಯ ಪರಿವೆಯಿರದೆ
ನೆನಯಬೇಕವನ
ಬಸಿದರೆ ಭಕ್ತಿಯ ಜಲ
ಹಸಿದಿರುವೆಯಾ ಶ್ರೀದೇವಿತನಯ
ಎಂದು ಬರದಿರನು ಗೋವಿಂದ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 ಏಪ್ರಿಲ್ 2019

ವಚನ ೧ ( earth day)

           *ವಚನ೧*

ಮರಗಿಡ ಕಡಿದು
ಕಟುಕರಾಗದೆ
ಪರಿಸರ ಉಳಿಸಲು
ಕಟಿಬದ್ದರಾದರೆ
ಧರೆಯೆ ಸ್ವರ್ಗವು
ನೋಡು ಶ್ರೀದೇವಿತನಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
(ಇಂದು ವಿಶ್ವ ಭೂ ದಿನ)



11 ಫೆಬ್ರವರಿ 2018

ಹನಿಗವನಗಳು ( ವಿಶ್ವ ಮದುವೆ ದಿನದ ವಿಶೇಷ)



*ಹನಿಗವನಗಳು*

*೧*

ಅಭಿಶೇಕ್ ಮತ್ತು ಪ್ರಿಯ
ಪ್ರತಿದಿನ ತಪ್ಪದೇ ಶಿವನ
ದೇವಾಲಯ ದರ್ಶನ
ಮಾಡುತ್ತಿದ್ದರು
ಕಾರಣ
ನಮ್ಮ ಶಿವ
ಅಭಿಶೇಕ ಪ್ರಿಯ

*೨*

*ಹೇಗೆ?*
(ಇಂದು ವಿಶ್ವ ಮದುವೆ ದಿನ ಅದರ ಪ್ರಯುಕ್ತ)

ಹರಿಹರರೆ ನಿಮಗಿದೋ
ದೊಡ್ದ ನಮಸ್ಕಾರ
ಶಿವನೇ ತಿಳಿಸು ನನಗೆ
ಹೇಗೆ ಬಾಳಿಸಿದೆ
ಇಬ್ಬರು ಹೆಂಡಿರ
ಹರಿಯೆ ಅರುಯೆನಗೆ
ಹೇಗೆ ನಿಬಾಯಿಸಿದೆ
ಹದಿನಾರು ಸಾವಿರ

*೩*

*ಶಿವನಪಾದ*

ಇಂದು ವಿಶ್ವ ಗುಂಡಿಗೆ ಬಿದ್ದದಿನ
ಗುಂಡಿಗೆ ಇರುವ ಗಂಡಂದಿರು
ಗುಂಡಿಯನು ಎದುರಿಸಿ
ಬಾಳುತ್ತಿದ್ದಾರೆ .
ಗುಂಡಿಗೆ ದುರ್ಬಲವಾದ
ಗಂಡಂದಿರು ಗುಂಡಿನ
ಮೊರೆ ಹೋಗಿದ್ದಾರೆ.
ಗುಂಡಿಗೆ ಅತಿದುರ್ಬಲವಿರುವ
ಗಂಡಂದಿರು ಶಿವನಪಾದ
ಸೇರಿದ್ದಾರೆ .


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*