ಆರಂಭದಲ್ಲಿ ನಮ್ಮನ್ನು ಬೆಂಬಲಿಸಲು
ಯಾರು ಇಲ್ಲದಿದ್ದರೂ ಚಿಂತೆ ಬೇಡ|
ಪ್ರಖರವಾದ ಸೂರ್ಯನ ಬೆಳಕನ್ನು ಎಷ್ಟು ಕಾಲ ತಡೆಯಬಲ್ಲದು ಮೋಡ||
ಸಿಹಿಜೀವಿ ವೆಂಕಟೇಶ್ವರ.
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಆರಂಭದಲ್ಲಿ ನಮ್ಮನ್ನು ಬೆಂಬಲಿಸಲು
ಯಾರು ಇಲ್ಲದಿದ್ದರೂ ಚಿಂತೆ ಬೇಡ|
ಪ್ರಖರವಾದ ಸೂರ್ಯನ ಬೆಳಕನ್ನು ಎಷ್ಟು ಕಾಲ ತಡೆಯಬಲ್ಲದು ಮೋಡ||
ಸಿಹಿಜೀವಿ ವೆಂಕಟೇಶ್ವರ.
ಗುಟ್ಟೊಂದು ಹೇಳುವೆ ಕೇಳಿ....
ಗುಟ್ಟೊಂದ ಹೇಳುವೆ ಕೇಳಿ ಮಕ್ಕಳೆ
ಸಾಧಕರಾಗಿ ,ಮುಂದೆ ನಿಮ್ಮದೇ ಇಳೆ||
ಆಹಾರದಲ್ಲಿ ಇರಲಿ ಹಿತಮಿತ
ನಿನ್ನದಾಗುವುದು ಆರೋಗ್ಯಪಥ ||
ಯಶಸ್ಸಿಗೆ ವಾಮಮಾರ್ಗಗಳಿಲ್ಲ
ಪ್ರಾಮಾಣಿಕ ಪ್ರಯತ್ನಕ್ಕೆ ಸೋಲಿಲ್ಲ ||
ರೂಢಿಸಿಕೊಳ್ಳಿ ಸರಳಜೀವನ
ಗೌರವಿಸುವರು ನಿನ್ನ ಸಕಲಜನ ||
ಪೂಜಿಸದಿದ್ದರೂ ತಪ್ಪಿಲ್ಲ ದೇವರ
ಗೌರವಿಸುವುದ ಕಲಿ ಗುರುಹಿರಿಯರ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
#ಕನಸು_ಕಂಗಳ_ಎಳೆಯರು_ನಾವು
ಎಳೆಯರು ನಾವು
ಗೆಳೆಯರು ನಾವು
ಕಣಿದಾಡುವೆವು
ನಲಿದಾಡುವೆವು.
ಅತಿಯಾಸೆ ನಮಗಿಲ್ಲ
ಸವಿವೆವು ತುಂಡುಬೆಲ್ಲ
ನಾವು ಚಿಕ್ಕವರಲ್ಲ
ಎಲ್ಲರಿಗಿಂತ ದೊಡ್ಡವರಲ್ಲ
ನಮ್ಮ ಬಾಲ್ಯ ನಮಗಿರಲಿ
ಏನೇನೋ ಕಟ್ಟಳೆ ನಿಮಗಿರಲಿ
ಜಾತಿ ಮತಗಳ ಹಂಗು ಬೇಡ
ನಮ್ಮದು ಸುಂದರ ತೋಟ
#ಸಿಹಿಜೀವಿ
ಶಿಶುಗೀತೆ
ಒಂದು ಕಾಡಿನಲಿ ಕೋಳಿಯು
ಬೆಟ್ಟವು ಉಭಯ ಕುಶಲ
ಮಾತಾಡಿದವು .
ಕೋಳಿಯು ಬೆಟ್ಟಕೆ
ಬೇಸರದಿ ಹೇಳಿತು
ನೀನು ಎತ್ತರ ನಾನೇಕೆ
ಕುಳ್ಳ ಎಂದು ಕರುಬಿತು.
ಬೇಡ ನೀನು ನೀನಾಗಿರು
ಎಂಬ ಬೆಟ್ಟದ ಸಲಹೆ
ಕೋಳಿಗೆ ರುಚಿಸಲಿಲ್ಲ
ಕಾಳು ಕಡಿತಿಂದು
ಬೆಟ್ಟದೆತ್ತಕೇರುವ ಪ್ರಯತ್ನ
ನಿಲ್ಲಿಸಲಿಲ್ಲ .
ಶಕ್ತಿ ಪಡೆದು ಹಂತ ಹಂತದಿ
ಮರವನೇರಿ ಬೆಟ್ಟದ ಸಮಕ್ಕೆ
ಏರಲು ಎತ್ತರದ ಕೊಂಬೆ ತಲುಪಿತು .
ನಾನೂ ಎತ್ತರದಲ್ಲಿರುವೆ
ಎಂದು ಸಂತಸದಿ ಬೀಗಿತು.
ಬೇಟೆಗಾರ ಎತ್ತರದಲ್ಲಿರುವ ಕೋಳಿ
ನೋಡಿ ಕೋವಿಯಿಂದ ಕೊಂದ
ಬೆಟ್ಟ ಮರುಗಿ ಜಗಕೆ ಸಾರಿತು
ನೀವು ನೀವಾಗಿ ಅದೇ ಆನಂದ .
ಸಿಹಿಜೀವಿ
*ಸಿ.ಜಿ.ವೆಂಕಟೇಶ್ವರ*
ತುಮಕೂರು
#ಮಕ್ಕಳಕವನ
#ಆಡಿನ_ಆಟ
ಆಡುತ ಬಂದು ಮೋಟಾರು
ಮೇಲೆ ಕುಳಿತಿದೆ ನೋಡು ಆಡೊಂದು
ಹಾಡುತ ಬಂದ ಬಾಲಕ ನೋಡಿ
ಅಚ್ಚರಿ ಪಟ್ಟನು ಕೇಳಿಂದು .
ಕೇಳಿದ ಬಾಲಕ ಇದು
ನಮ್ಮಯ ವಾಹನ ಮೇಲೇಳು
ಒಂದಿನ ಕುಳಿತಿಹೆ ಸುಮ್ಮನಿದ್ದು ಬಿಡು
ನೋಯುತಿವೆ ನನ್ನ ಕಾಲ್ಗಳು.
ಅಪ್ಪನ ಜೊತೆಗೆ ಶಾಲೆಗೆ ಹೋಗುವೆ
ಜಾಗ ಬಿಡು ಈಗಲೆ
ನಮ್ಮಮ್ಮ ಬರೋವರೆಗೂ ಏಳಲ್ಲ
ಸುಮ್ಮನೆ ನೀನು ಕಾಯಲೆ.
ಉಪಾಯ ಮಾಡಿ ಸೊಪ್ಪನು
ತಂದು ಹಿಡಿದನು ಬಾಲಕನು
ಸ್ಕೂಟರ್ ಇಳಿದೇ ಬಿಟ್ಟಿತು
ಆಡು ತಿನ್ನಲು ಸೊಪ್ಪನ್ನು .
ಹೊಟ್ಟೆಗೆ ಇಂಧನ ಬೀಳಲು
ಆಡು ಹೊರಟಿತು ಹೊಲದ ಕಡೆ
ಅಪ್ಪನ ಕರೆದ ಬಾಲಕ ಸ್ಕೂಟರ್
ಏರಿ ಹೊರಟ ಶಾಲೆ ಕಡೆ .
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಏಕಲವ್ಯ .
ಬಿಲ್ಲು ವಿದ್ಯೆ ಕಲಿವ ಆಸೆಯಿಂದ
ಏಕಲವ್ಯ ಬಂದನು
ದ್ರೋಣರನ್ನು ಕಂಡು ತನ್ನ
ಮನದ ಬಯಕೆ ಹೇಳಿದನು.
ನಿರಾಕರಿಸಿ ದ್ರೋಣರೆಂದರು ನನ್ನ ವಿದ್ಯೆ ಕ್ಷತ್ರಿಯರಿಗೆ ಮಾತ್ರ ಮೀಸಲು
ಬೇಸರದಿ ಹಿಂದೆ ತಿರುಗಿ ಹೊರಟ
ಅವನು ಸ್ವಯಂ ವಿದ್ಯೆ ಕಲಿಯಲು .
ದ್ರೋಣರ ವಿಗ್ರಹವನು ಪ್ರತಿಷ್ಠಾಪಿಸಿ
ಬಿಲ್ವಿದ್ಯೆ ಕಲಿಯಲಾರಂಭಿಸಿದ
ಶಬ್ಧವೇದಿ ವಿದ್ಯೆ ಕಲಿತು ಬಿಲ್ಲಿನಿಂದ
ಪ್ರಾಣಿಯನ್ನು ವಧಿಸಿದ .
ಅರ್ಜುನನಿಗೆ ವಿಷಯ ತಿಳಿದು
ಹೊಟ್ಟೆಯುರಿಯಲಿ ಬೆಂದನು
ದ್ರೋಣರಿಗೆ ಚಾಡಿ ಹೇಳಿ
ಏಕಲವ್ಯನ ಹೆಬ್ಬೆಟ್ಟನು ಪಡೆದನು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಶಿಶುಗೀತೆ ೩೧
ಅಮ್ಮಾ ಅಮ್ಮಾ ಬಾರಮ್ಮ
ಚಂದಮಾಮನ ತೋರಮ್ಮ.
ಬೆಳ್ಳಿಯ ಮೊಗದ ರಾತ್ರಿಯ ದೀಪ
ಕಳ್ಳರ ವೈರಿಯ ತೋರಮ್ಮ.
ಕತ್ತಲ ಜಗದ ಭಯವನು ತೊರೆಯಲು
ಸುತ್ತಲು ಬೆಳಗುವವನ ತೋರಮ್ಮ.
ಒಂದಿನ ಹಿಗ್ಗಿ ಒಂದಿನ ಕುಗ್ಗಿದರೂ
ಕಂದೀಲಿನಂತಿರುವವನ ತೋರಮ್ಮ.
ಜಗದ ಜನರ ಮನಗೆದ್ದ ಸುಂದರ
ಮೊಗದಲಿ ಜಿಂಕೆಯಿರುವವನ ತೋರಮ್ಮ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
9900925529
*ನಾವು ಎಳೆಯರು*
ನಾವು ಗೆಳೆಯರು ನಾವು ಎಳೆಯರು
ಜೊತೆ ಜೊತೆಯಲೇ ಬೆಳೆವೆವು
ಸ್ನೇಹದಿಂದಲಿ ಕೂಡಿ ಬಾಳುತ
ಹೊಸ ನಾಡನೊಂದ ಕಟ್ಟುವೆವು.
ಎಲ್ಲ ಸೇರಿ ಅಟಗಳನಾಡುತ
ಬೇಧ ಭಾವ ಮರೆವೆವು
ಜಾತಿ ಮತದ ಹೊಟ್ಟ ತೂರಿ
ಒಂದಾಗಿ ಬಾಳುವೆವು.
ಬಣ್ಣ ಬಣ್ಣದ ಬಟ್ಟೆಗಳ ತೊಟ್ಟು
ಕುಣಿದು ನಲಿಯುವೆವು
ಎಲ್ಲಾ ಬಣ್ಣ ಸೇರಿ ಬಿಳಿಯ
ಬಣ್ಣವೆಂದು ಕಲಿತಿಹೆವು .
ಮೇಲು ಕೀಳು ನಮ್ಮಲಿಲ್ಲ ನಾವು
ಸಮಾನತೆಯ ರಾಯಬಾರಿಗಳು
ಭವಿಷ್ಯದ ಸುಂದರ ತೋಟದ
ಈಗ ಬೆಳೆಯುತಿರುವ ಸಸ್ಯಗಳು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
9900925529
*ಚಿನ್ನಮ್ಮನ ಸೈಕಲ್*
ಮೂರು ಗಾಲಿಯ ಸೈಕಲ್
ತುಳಿಯುತ ಬಂದಳು ಚಿನ್ನಮ್ಮ
ಹಿಂದಕೆ ಮುಂದಕೆ ಚಲಿಸಿ
ನಲಿಯುತ ಇದ್ದಳು ಕಂದಮ್ಮ||
ಟ್ರಿಣ್ ಟ್ರಿಣ್ ಬೆಲ್ಲು ಒತ್ತುತಾ
ಮನೆಯಲ್ಲೆಲ್ಲಾ ಸುತ್ತಿದಳು
ಸಂತಸದಿಂದ ನಕ್ಕು ನಲಿಯುತ
ನಗುವಿನ ವದನ ತೋರಿದಳು||
ಜೋರಾಗಿ ತುಳಿಯುತ ಮುಗುಚಿ
ಬಿದ್ದಿತು ಸೈಕಲ್ಲು
ಅಪ್ಪ ಎತ್ತಿದರು ನೋಡಿದರಾಗ
ಮುರಿದು ಬಿದ್ದಿತ್ತು ಒಂದಲ್ಲು||
ಅಳುತಲಿ ಅಮ್ಮನ ಮಡಿಲು
ಸೇರಿದಳು ಚಿನ್ನಮ್ಮ
ಕೋಲನು ಎತ್ತುತಾ ಸೈಕಲ್ಗೆ
ಎರಡೇಟು ಕೊಟ್ಟರು ಅವರಮ್ಮ ||
ಅಪ್ಪ ಹೇಳಿದರು ಮತ್ತೆ ತುಳಿ
ಅದೇ ಸೈಕಲ್ಲು
ತಲೆಯಾಡಿಸುತಾ ಮಗಳು
ತೋರಿದಳು ಮುರಿದ ಹಲ್ಲು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಓಡುವುದು*
ಬಂದಿದೆ ನಮಗೆ ಕಷ್ಟದ
ಕಾಲವೆಂದು ಕೊರಗದಿರಿ
ಕಾಣದ ವೈರಾಣುವ ಸೋಲಿಸಿ
ಜಗ್ಗದೆ ಮುನ್ನೆಡೆಯಿರಿ.
ದೈಹಿಕ ಅಂತರವು ನಮ್ಮ
ನಿತ್ಯ ಮಂತ್ರವಾಗಲಿ
ಪದೇ ಪದೇ ಕೈತೊಳೆಯುವುದು
ನಮ್ಮ ಹವ್ಯಾಸವಾಗಲಿ.
ಅನವಶ್ಯಕವಾಗಿ ಮನೆಯಿಂದ
ಹೊರಗೆ ಬರದಿರಿ
ರೋಗನಿರೋಧಕ ಶಕ್ತಿ
ಹೆಚ್ಚಿಸಿಕೊಳ್ಳಲು ಮರೆಯದಿರಿ.
ವೈರಾಣುವಿಗೆ ಅಂಜುತ
ಎದೆಗುಂದದೆ ಧೈರ್ಯವಾಗಿರಿ
ಲಸಿಕೆ ಪಡೆದರೆ ಅದು
ಓಡುವುದು ನೋಡುತ್ತಿರಿ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಶಿಶುಗೀತೆ
*ನನ್ನಮ್ಮ*
ಇವಳೇ ನೋಡು ನನ್ನಮ್ಮ
ನನ್ನಯ ಪಾಲಿನ ದೈವವಮ್ಮ.
ಅಮ್ಮನೆ ನನಗೆ ಮೊದಲ ಗುರು
ಅಮ್ಮ ಕಾಣದಿರೆ ನನಗೆ ಬೋರು.
ನೀಡುವಳು ನನಗೆ ಅಕ್ಕರೆ
ಅವಳ ಮಾತುಗಳೆ ಸಕ್ಕರೆ .
ವಿಧ ವಿಧ ತಿಂಡಿ ನೀಡುವಳು
ತಪ್ಪು ಮಾಡಿದರೆ ಗದರಿಸುವಳು.
ಪೂಜೆ ಪುನಸ್ಕಾರಗಳ ಮಾಡುವಳು
ಸಂಸ್ಕೃತಿ, ಸಂಸ್ಕಾರಗಳ ಕಲಿಸುವಳು.
ಅಮ್ಮನ ಮಾರ್ಗದಿ ನಡೆಯುವೆನು
ನಮ್ಮನೆ ಗೌರವ ಉಳಿಸುವೆನು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಅತಿಯಾಸೆ ಗತಿಗೇಡು*
ಶಿಶುಗೀತೆ
ರಾಮನಳ್ಳಿಯಲ್ಲಿ ರಾಮಪ್ಪನೆಂಬ
ರೈತನಿದ್ದನು
ಬೇಸಾಯದೊಂದಿಗೆ ಒಂದು
ಕೋಳಿ ಸಾಕಿದ್ದನು.
ಕೋಳಿ ಬೆಳೆದು ಮೊಟ್ಟೆ
ಇಡಲು ಶುರು ಮಾಡಿತು
ಅಚ್ಚರಿಯೆಂಬಂತೆ ಬಂಗಾರದ
ಮೊಟ್ಟೆ ಇಟ್ಟಿತು.
ಕೋಳಿ ದಿನವೂ ಬಂಗಾರದ
ಮೊಟ್ಟೆಯನು ಇಟ್ಟಿತು
ರಾಮಪ್ಪನ ಮನವು
ಸಂತೋಷದಿ ಕುಣಿದಾಡಿತು.
ಅವನಲಿ ಅತಿಯಾಸೆಯ
ಬೀಜವೊಂದು ಮೊಳಕೆಯೊಡೆಯಿತು
ಒಂದೆ ದಿನ ಎಲ್ಲಾ ಮೊಟ್ಟೆಗಳ
ಪಡೆಯಲು ಆಸೆಯಾಯಿತು.
ಕೋಳಿ ಹಿಡಿದು ಚೂರಿಯಿಂದ
ಹೊಟ್ಟೆ ಬಗೆದನು
ಬಂಗಾರವಿಲ್ಲ ಬರೀ ಕರುಳು
ಮಾಂಸವನ್ನು ಕಂಡನು.
ನಿರಾಸೆಯಿಂದ ಅಳುತಲಿ
ಜನರ ನೋಡಿದ
ಅತಿಯಾಸೆ ಪಡದಿರೆಂದು
ಜನಕೆ ಬುದ್ದಿ ಹೇಳಿದ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಒಗ್ಗಟ್ಟಿನಲ್ಲಿ ಬಲವಿದೆ*
ಒಂದು ಊರಿನಲ್ಲಿ ಒಬ್ಬ
ರೈತನಿದ್ದನು
ಅವನಿಗೆ ಮೂರು ಗಂಡು
ಮಕ್ಕಳಿದ್ದರು.
ದಿನವು ಅವರು ತಮ್ಮ ತಮ್ಮಲ್ಲೆ
ಕಚ್ಚಾಡುತ್ತಿದ್ದರು
ಅಪ್ಪನ ಕಿವಿಮಾತು ಕೇಳದೆ
ಬಡಿದಾಡುತ್ತಿದ್ದರು.
ಮಕ್ಕಳಿಗೆ ಬುದ್ದಿ ಹೇಳಲು
ಅಪ್ಪ ಯೋಚಿಸಿದ
ಒಂದು ಉಪಾಯವನ್ನು
ಅವನು ಯೋಜಿಸಿದ.
ಮೂರು ಕಡ್ಡಿಯ ಗಂಟನ್ನು
ಅವರಿಗೆ ನೀಡಿದನು
ಒಬ್ಬೊಬ್ಬರು ಮುರಿಯಲು
ಪ್ರಯತ್ನಿಸಲು ಹೇಳಿದನು.
ಕಷ್ಟಪಟ್ಟರೂ ಯಾರಿಗೂ
ಮುರಿಯಲಾಗಲಿಲ್ಲ
ಮಕ್ಕಳ ಪೆಚ್ಚು ಮೋರೆ
ಅಪ್ಪಗೆ ನೋಡಲಾಗಲಿಲ್ಲ.
ಅಪ್ಪನೆದರು ಮೂವರು
ತಲೆ ತಗ್ಗಿಸಿ ನಿಂತರು
ದಾರಬಿಚ್ಚಿದ ಒಂದೊಂದು
ಕಟ್ಟಿಗೆಯ ಪಡೆದರು.
ಈಗ ಮುರಿಯಿರೆಂದು
ಅಪ್ಪ ಆಜ್ಞೆ ನೀಡಿದರು
ಸುಲಭವಾಗಿ ಮಕ್ಕಳು ಕಟ್ಟಿಗೆ
ಮುರಿದು ಹಾಕಿದರು.
ಒಗ್ಗಟ್ಟಿನಲ್ಲಿ ಬಲವಿದೆ ಎಂದು
ಅಪ್ಪ ಹೇಳಿದರು
ಜಗಳವಾಡದೆ ಬದುಕುವುದನು
ಮಕ್ಕಳು ಕಲಿತರು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಪುಟ್ಟನ ಜಾತ್ರೆ
ಅಪ್ಪನ ಜೊತೆಯಲಿ ಜಾತ್ರೆಗೆ
ಹೋಗಿ ಗೊಂಬೆಗಳ ಕೊಳ್ಳುವೆನು
ಅವುಗಳ ಜೊತೆಯಲ್ಲಿ ಆಟವನಾಡಿ
ಸಂತಸ ಪಡೆಯುವೆನು.
ಕೀಲಿ ಕೊಟ್ಟರೆ ಡೋಲು ಬಡಿಯುವ
ಗೊಂಬೆಯ ಕೊಳ್ಳುವೆನು
ಕಿಟಿ ಕಿಟಿ ಸದ್ದನು ಮಾಡುವ
ಆಟಿಕೆ ಕೇಳುವೆನು.
ಗಾಳಿಯ ಊದುತ ಬೆರಳನು
ಒತ್ತುವ ಕೊಳಲು ಕೊಳ್ಳುವೆನು
ಮುಳ್ಳುಗಳಿದ್ದರೂ ಟಿಕ್ ಟಿಕ್
ಎನ್ನುವ ಗಡಿಯಾರ ಕೇಳುವೆನು
ಬಣ್ಣ ಬಣ್ಣದ ಬಸ್ಸು ಲಾರಿ
ಕಾರನು ಕೊಳ್ಳುವೆನು
ಗಾಳಿಯ ಊದಿದ ದೊಡ್ಡದಾದ
ಬಲೂನು ಕೊಳ್ಳುವೆನು
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ನಮ್ಮಯ ಕಂದ*
ನಮ್ಮಯ ಕಂದನ ಲೀಲೆಯ ನೋಡಲು
ಕಣ್ಣಿಗೆ ಹಬ್ಬವು
ಕಣ್ಣನು ಮಿಟುಕುಸಿ ಆಡುವ ಆಟವ
ನೋಡಲು ಆನಂದವು.
ಗೊಂಬೆಗಳೊಂದಿಗೆ ಆಟವನಾಡುತ
ಕಿಲ ಕಿಲ ನಗುವುದು
ಆಟದ ವಸ್ತುವು ಕೈಜಾರಿದರೆ
ರಚ್ಚೆ ಹಿಡಿಯುವುದು.
ಅಮ್ಮನು ತೋರುವ ಚಂದ್ರನ ನೋಡುತ
ಕೈತುತ್ತು ತಿನ್ನುವುದು
ಆಗಸದ ಬಿಳಿಯ ಚೆಂಡನಿಡಿಯಲು
ಕೈಯ ಚಾಚುವುದು.
ತೊಟ್ಟಿಲು ಕಂಡರೆ ಕೈಯನು ತೋರುತ
ಆ ಕಡೆ ಓಡುವುದು
ಅಮ್ಮನ ಲಾಲಿಯ ಹಾಡನು ಕೇಳುತ
ನಿದ್ದೆಗೆ ಜಾರುವುದು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಶಿಶುಗೀತೆ
ಸರ್ವರಿಗೂ ಹೋಳಿ ಹಬ್ಬದ ಶುಭಾಶಯಗಳು💐💐
ಬಾರೋ ಗೆಳೆಯ ಬಾರೋ ಗೆಳೆಯ
ಹೋಳಿ ಆಡೋಣ
ವಿಧ ವಿಧ ಬಣ್ಣವ ಎರಚುತ ನಾವು
ಹಬ್ಬವ ಮಾಡೋಣ
ಸರ್ವಕಾಲಕೂ ಉಲ್ಲಾಸವಾಗಿರಲೆಂದು
ಕೆಂಪು ಬಣ್ಣ ಎರಚೋಣ
ಭುವಿಯಲಿ ಸಮೃದ್ಧಿ ನೆಲೆಸಲಿ ಎನುತಾ
ಹಸಿರನು ಹಚ್ಚೋಣ.
ಸಕಲರ ಜೀವನದಿ ಸಂಭ್ರಮ ಉಳಿಸಲು
ಹಳದಿಯ ಬಳಿಯೋಣ
ನೋವುಂಡವರಿಗೆ ಸಂತೋಷ ಹಂಚಲು
ಗುಲಾಬಿಯ ಹಚ್ಚೋಣ.
ದೀನ ದಲಿತರಿಗೆ ಸಂಪತ್ತು ನೀಡಲು
ನೇರಳೆ ಎರಚೋಣ
ನಕಾರ ಭಾವನೆ ತೊಲಗಿಸಲು
ನೀಲಿಯ ಹಚ್ಚೋಣ.
ಬಣ್ಣಗಳೇಳು ಇರಲಿ ಎಂದಿಗೂ
ನಮ್ಮಯ ಜೀವನದಿ
ಬಣ್ಣ ಬಣ್ಣದಲಿ ಕಂಗೊಳಿಸುತಾ
ಹರಿಯುತಿರಲಿ ಜೀವ ನದಿ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
🔴🟠🟡🟢🔵
*ಆಟಗಳ ಆಡೋಣ*
ಶಿಶುಗೀತೆ
ಭಾನುವಾರ ರಜೆಯು ನಮಗೆ
ಆಟವಾಡಲು ನಾವ್ ರೆಡಿ
ಒಂದು ದಿನ ಪೆನ್ನು ಪುಸ್ತಕ
ಪಾಠದ ಚಿಂತೆಯ ಬಿಡಿ.
ಮರವನತ್ತಿ ಇಳಿಯುತ ಮರಕೋತಿ
ಆಟವನು ಆಡೋಣ
ವೃತ್ತದಿ ನಿಂತು ಹುಲಿ ಹಸು
ಆಟವಾಡುತ ಕುಣಿಯೋಣ.
ಸಾಲಾಗಿ ನಿಂತು ಕೆರೆ ದಡ
ಆಟದಿ ನಲಿಯೋಣ
ಗೋಲಿ,ಲಗೋರಿ,ಚಿನ್ನಿದಾಂಡು
ಎಲ್ಲಾ ಆಟಗಳ ಆಡೋಣ.
ಸಂಜೆಯಾಗುತ ಆಟದಿ ದಣಿದು
ಮನೆಕಡೆ ಓಡೋಣ
ಕೈಯನು ತೊಳೆದು ಸಾಲಾಗಿಕುಳಿತು
ಅಮ್ಮನ ಕೈತುತ್ತು ತಿನ್ನೋಣ.
ಊಟದ ನಂತರ ನಾವು
ಅಮ್ಮನ ಮಡಿಲಲಿ ಮಲಗೋಣ
ಸೋಮವಾರ ಮತ್ತೆ ಸಿದ್ದವಾಗಿ
ಶಾಲೆ ಕಡೆ ನಡೆಯೋಣ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ನಮ್ಮನೆ ಕೂಸು*
ನಮ್ಮ ಮನೆಯಲೊಂದು ಪುಟ್ಟ
ಕೂಸು ಇರುವುದು
ಅಂಬೆಗಾಲನಿಟ್ಟು ನಡೆದು
ಮುದವ ನೀಡುವುದು.
ಕೈಯ ತಟ್ಟಿ ಕೇಕೆಹಾಕಿ
ನಕ್ಕು ನಲಿವುದು
ಬಾಲ ಭಾಷೆ ನುಡಿದು
ನಮಗೆ ಖುಷಿಯ ತರುವುದು.
ಸಿಕ್ಕಿದ್ದೆಲ್ಲವನ್ನು ಹಿಡಿದು
ಬಾಯಲಿಟ್ಟುಕೊಳುವುದು
ಗದರಿದಾಗ ನಗುತ ನಮ್ಮ
ಕೋಪ ಮರೆಸುವುದು.
ಹೊಟ್ಟೆ ಹಸಿಯೆ ಜೋರಾಗಿ
ಅಳುತಲಿರುವುದು
ಅಮ್ಮ ಕಂಡರೆ ತಟ್ಟನೆ
ಅಳು ನಿಲ್ಲಿಸುವುದು.
*ವನಮಹೋತ್ಸವ*
ಶಿಶುಗೀತೆ
ರಾಮ ರಹೀಮ ಬೇಗನೆಬಾರೋ
ಒಂದೊಂದು ಗಿಡವ ಹಾಕೋಣ
ಹಾಕಿದ ಗಿಡಗಳ ಮರಗಳನಾಗಿಸಿ
ವನಮಹೋತ್ಸವ ಆಚರಿಸೋಣ.
ಬೇವು ,ಹಲಸು, ತೇಗ ಹೊನ್ನೆ
ಗಂಧದ ಮರಗಳ ಬೆಳೆಸೋಣ
ಕಾಡಿನ ಕಿಚ್ಚನು ತಡೆಯುತ
ವನ ಸಂರಕ್ಷಣೆ ಮಾಡೋಣ.
ವನ್ಯಜೀವಿಗಳ ಕಾಡದೆ ನಾವು
ಕಾಡಲೇ ಇರಲು ಬಿಡೋಣ
ನಾಡಲೂ ಕಾಡನು ಬೆಳಸಿ
ಪ್ರಕೃತಿಯನ್ನು ಉಳಿಸೋಣ.
ಕಾಡನು ಕಡಿಯುವ ಮನಗಳಿಗೆ
ಬುದ್ದಿಯ ಮಾತನು ಹೇಳೋಣ
ಕಾಡು ಇದ್ದರೆ ನಾಡು ಎನ್ನುತ
ಪರಿಸರ ಗೀತೆಯ ಹಾಡೋಣ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ