17 ಅಕ್ಟೋಬರ್ 2025

ಹೇಳಿಕೊಳ್ಳುವಂತಹ ಸಿನಿಮಾ "ಏಳು ಮಲೆ"




ಹೇಳಿಕೊಳ್ಳುವಂತಹ ಸಿನಿಮಾ "ಏಳು ಮಲೆ"

ಅನಿವಾರ್ಯ ಕಾರಣದಿಂದ ಥಿಯೇಟರ್ ನಲ್ಲಿ ಏಳುಮಲೆ ಸಿನಿಮಾ ನೋಡಲಾಗಿರಲಿಲ್ಲ.ಇಂದು ಓಟಿಟಿ ಯಲ್ಲಿ ನೋಡಿದೆ.ಬಹಳ ಅಚ್ಚುಕಟ್ಟಾಗಿ ಚಿತ್ರಕತೆ ಬರೆದು ನಿರ್ದೇಶನ ಮಾಡಿದ ಪುನಿತ್ ರಂಗಸ್ವಾಮಿಯವರು ಕನ್ನಡ ಚಿತ್ರ ರಂಗಕ್ಕೆ ಸಿಕ್ಕ ಮತ್ತೊಬ್ಬ ಭರವಸೆಯ ನಿರ್ದೇಶಕ ಎಂದೆನಿಸಿತು.ಇಂತಹ ಹೊಸಬರನ್ನು ಪ್ರೋತ್ಸಾಹ ಮಾಡಿ ತೆರೆಮರೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿದ ಕ್ರಿಯೇಟಿವ್ ಹೆಡ್ ಕಂ ನಿರ್ಮಾಪಕರಾದ ತರುಣ್ ಕಿಶೋರ್ ಸುಧೀರ್ ಮುಂದೆಯೂ ಇಂತಹ ಸಿನಿಮಾ ನೀಡಲೆಂದು ಆಶಿಸುವೆ.
ಕಥೆಯೇನೂ ಹೊಸದಲ್ಲ.ಅದೇ ಮೇಲ್ವರ್ಗದ ಹುಡುಗಿ ಬಡ ಹುಡುಗ, ಬೇರೆ ಭಾಷೆ, ನಾಡಿನ ಪ್ರೇಮಿಗಳ ಕಥೆ.ಮನೆಯವರ ವಿರೋಧ ಪ್ರೇಮಿಗಳ ಹೋರಾಟ.ಆದರೆ ಆ ಕಥೆಯನ್ನು ನಿರೂಪಿಸಿರುವ ರೀತಿ ಬಹಳ ಚೆನ್ನಾಗಿದೆ.ಆರಂಭದಲ್ಲಿ ಮನೆಯಲ್ಲಿ ಆರಾಮಾಗಿ ಮಲಗಿಕೊಂಡು ಸಿನಿಮಾ ನೋಡುತ್ತಿದ್ದ ನಾನು ಅರ್ಧ ಸಿನಿಮಾ ಆದಾಗ ನನಗರಿವಿಲ್ಲದೇ ಎದ್ದು ಕೂತಿದ್ದೆ. ಪ್ರತಿ ಹತ್ತು ನಿಮಿಷಕ್ಕೊಂದು ಟ್ವಿಸ್ಟ್ ಗಳು  ಉಸಿರು ಬಿಗಿ ಹಿಡಿದು ಸಿನಿಮಾ ನೋಡುವಂತೆ ಮಾಡಿದವು.ಕೊನೆಯ ಶಾಟ್ ನಲ್ಲೂ ಏನೋ ಟ್ವಿಸ್ಟ್ ಇದೆ ಅಂತ ಊಹೆ ಮಾಡುವಾಗಲೇ ಟೈಟಲ್ ಕಾರ್ಡ್ ಬಂತು.ಅಂದರೆ ಪಾರ್ಟ್ ಟೂ   ಬರಬಹುದು ಎಂದು ನನ್ನ ನಿರೀಕ್ಷೆ.


ಮೊದಲ ಸಿನಿಮಾಗಿಂತ ಈ ಸಿನಿಮಾದಲ್ಲಿ ಡಿ ಗ್ಲಾಮ್ ಪಾತ್ರದಲ್ಲಿ ರಾಣಾ ನಟನೆಯಲ್ಲಿ ಪಳಗಿದ್ದಾರೆ. ಕಷ್ಟ ಕಾಲದಲ್ಲಿ ಪ್ರೇಮಿಯ ಸೇರುವ ಅವರ ಕಾತುರದ ಅಭಿನಯ ನೋಡಿದ ನೋಡುಗರು ಜಗ್ಗಪ್ಪ, ಮತ್ತು ಕಿಶೋರ್ ಅವರನ್ನು ಬೈಯ್ದುಕೊಳ್ಳುವ ರೇಂಜ್ ಗೆ ಅಭಿನಯ ಮಾಡಿದ್ದಾರೆ. ಎಂದಿನಂತೆ ಕಿಶೋರ್ ತಮ್ಮ ಅಭಿನಯದ ಮೂಲಕ ನೆಗೆಟಿವ್ ಶೇಡ್ ನ ಪೋಲಿಸ್ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅನುಭವಸ್ಥ ಹೆಡ್ ಕಾನ್ಸ್‌ಟೇಬಲ್ ಆಗಿ ನಾಗಾಭರಣ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ತೆಲುಗಿನ ಜಗಪತಿ ಬಾಬು ಕೆಲವೇ ದೃಶ್ಯಗಳಲ್ಲಿ ಬಂದರೂ ಅವರ ಅಭಿನಯ ಸೂಪರ್. ಚಿತ್ರದ ನಡುವೆ ಕಾಡುಗಳ್ಳ ವೀರಪ್ಪನ್ ಹತನಾಗುವ ದೃಶ್ಯಗಳನ್ನು ಬ್ಲೆಂಡ್ ಮಾಡಿರುವುದು ವರ್ಕ್ ಔಟ್ ಆಗಿದೆ.  ಸಿನಿಮಾದ ಗೆಲುವಿನಲ್ಲಿ ಛಾಯಾಗ್ರಾಹಕ ಅದ್ವೈತ ಗುರು ಮೂರ್ತಿ ಕೊಡುಗೆ ಮರೆಯಲಾಗದು.ಡಿ ಇಮ್ಮಾನ್ ರವರ ಹಾಡುಗಳು ಸಂದರ್ಭಕ್ಕೆ ತಕ್ಕಂತೆ ಹೊಂದಿಕೆಯಾಗಿವೆ.ಹಿನ್ನೆಲೆಯಲ್ಲಿ ಅವರು ನೀಡಿದ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.
ಒಟ್ಟಾರೆ ಕುಟುಂಬ ಸಮೇತ ನೋಡಬಹುದಾದ ಚಿತ್ರ ಏಳುಮಲೆ.ನೀವು ನನ್ನ ಹಾಗೆ ಥಿಯೇಟರ್ ನಲ್ಲಿ ಚಿತ್ರ ಮಿಸ್ ಮಾಡಿಕೊಂಡಿದ್ದರೆ.ಜೀ5ನಲ್ಲಿ ನೋಡಿ..

ಸಿಹಿಜೀವಿ ವೆಂಕಟೇಶ್ವರ.
ತುಮಕೂರು


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ