28 ಮಾರ್ಚ್ 2026

Ipl ಫ್ಯಾನ್ ಪಾರ್ಕ್ ತುಮಕೂರಲ್ಲಿ..


 

ತುಮಕೂರಿನಲ್ಲಿ 
ಕಳೆದ ವರ್ಷ ನಾನು‌ IPL ಫ್ಯಾನ್ ಪಾರ್ಕ್ ಬಗ್ಗೆ ವೀಡಿಯೋ ಹಾಕಿದ್ದೆ  ಬಹಳಷ್ಟು ಮುಖಪುಟದ ಬಂಧುಗಳು ಪ್ಯಾನ್ ಪಾರ್ಕ್ ಗೆ ಬರಲು ಉತ್ಸುಕರಾಗಿದ್ದರು. ಇಂದು ಮತ್ತು ನಾಳೆ ಮಾತ್ರ ತುಮಕೂರಿನಲ್ಲಿ ಫ್ಯಾನ್ ಪಾರ್ಕ್ ಇರುತ್ತದೆ.ಅಂದರೆ 28 ಮತ್ತು 29 ದಿನಾಂಕ ಮಾತ್ರ. ಇಂದು ನಮ್ಮ RCB ಮತ್ತು ಹೈದರಾಬಾದ್ ನಡುವಿನ ಪಂದ್ಯವನ್ನು ದೊಡ್ಡ ಪರದೆಯ ಮೇಲೆ ಅಲ್ಲಿಯೇ ನೋಡೋಣ ಬನ್ನಿ..
ಬರಲಾಗದವರು
ನನ್ನ sihijeeviya payana ಯೂಟ್ಯೂಬ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು..

#TataIPL #IPLMatches #TumkurFanPark #RCB #Hyderabad #Sihijeevi #SihijeeviyaPayana #CricketFan #MatchDay #IPL2023 #RoyalChallengersBangalore #CricketLovers #LiveCricket #FanExperience #SportsFan #CricketInIndia #GameDay #CheerForRCB #LovelyIndia #TeamRCB

24 ಮಾರ್ಚ್ 2026

ಪಾರೋದ ಐತಿಹಾಸಿಕ ರಿನ್ ಪುಂಗ್ ಕೋಟೆ.


  

 
ಪಾರೋದ   ಐತಿಹಾಸಿಕ ರಿನ್ ಪುಂಗ್ ಕೋಟೆ.


ಭೂತಾನ್ ನ ಥಿಂಪು ನಂತರ ಸುಂದರ ‌ನಗರ ಪಾರೋ. ಇಡೀ ದೇಶದಲ್ಲಿ ಇಲ್ಲಿ ಮಾತ್ರ ಏರ್ಪೋರ್ಟ್ ಇರುವುದು.   ನಮ್ಮ ಪ್ರವಾಸದ ಎರಡನೇ ದಿನ ನಾವು  ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ  ರಿನ್ ಪುಂಗ್ ಝಾಂಗ್ ನೊಡಲು ಹೊರಟೆವು.    ರಿನ್ ಪುಂಗ್ ಕೋಟೆ. ಕೆಲವರು  ಹಾಗೂ  ಪಾರೋ ಝಾಂಗ್ ಎಂದು ಕರೆತ್ತಾರೆ. ಇದು ಭೂತಾನಿನ ಪಾರೋ ಜಿಲ್ಲೆಯ ಕಾಗ್ಯು ಶಾಲೆಯ ಡ್ರುಕ್ಪಾ ವಂಶಾವಳಿಯ ಒಂದು ದೊಡ್ಡ ಕೋಟೆಯಾಗಿದೆ.

ನಾವು ಈ ಕೋಟೆಗೆ ಹಿಂದಿನ ಭಾಗದಿಂದ ಪ್ರವೇಶ ಪಡೆದೆವು.ಈ ಕೋಟೆಗೆ ಹೋಗುವ ಮೊದಲು ನಮ್ಮ ಗೈಡ್ ತೆಂದಿನ್ ಒಂದು ರೀತಿಯ ವಿಶೇಷವಾದ ವೇಲ್ ರೀತಿಯ ಬಟ್ಟೆಯನ್ನು ಹಾಕಿದರು.ಇದರ ಬಗ್ಗೆ ಕೇಳಿದಾಗ ಭೂತಾನ್ ನ ಜನತೆ ಅವರ ಪ್ರಮುಖ ದೇವಾಲಯ, ಬೌದ್ಧ ಸ್ತೂಪ, ಸರ್ಕಾರಿ ಕಛೇರಿ ,ಸಂಸತ್ ಗೆ ಭೇಟಿ ನೀಡುವಾಗ ಈ ರೀತಿಯ ವಿಶೇಷವಾದ ಅಡ್ಡ ವಸ್ತ್ರಗಳನ್ನು ಹಾಕಬೇಕು ಇದರಲ್ಲಿ ಮೂರು ಬಗೆಯ ವಸ್ತ್ರಗಳನ್ನು ಅವರ ಆಕರ್ಷಣೀಯ ಮತ್ತು ಹುದ್ದೆಗಳ ಆಧಾರದ ಮೇಲೆ ಹಾಕಲಾಗುತ್ತದೆ.

 ರಿನ್ ಪುಂಗ್ ಕೋಟೆಯು ಕೇವಲ ಕೋಟೆಯಾಗಿರದೇ ಇದು  ಬೌದ್ಧ ಮಠವೂ ಹೌದು ಹಾಗೂ  ಜಿಲ್ಲಾ ಸನ್ಯಾಸಿಗಳ ಮಂಡಳಿ ಮತ್ತು ಪಾರೋ ಝಾಂಗ್‌ಖಾಗ್‌ನ ಸರ್ಕಾರಿ ಆಡಳಿತ ಕಚೇರಿಗಳನ್ನು ಹೊಂದಿದೆ. ಇದನ್ನು ಯುನೆಸ್ಕೋ  ಸಾಂಸ್ಕೃತಿಕ ಪರಂಪರೆಯ ತಾಣವಾಗಿ   ಸೇರ್ಪಡೆಗಾಗಿ ಭೂತಾನ್‌ನ ತಾತ್ಕಾಲಿಕ ಪಟ್ಟಿಯಲ್ಲಿ ತಾತ್ಕಾಲಿಕ ತಾಣವಾಗಿ ಪಟ್ಟಿ ಮಾಡಲಾಗಿದೆ. ಆದಷ್ಟು ಬೇಗ ಇದು ಯುನೆಸ್ಕೋ ಸಾಂಸ್ಕೃತಿಕ ತಾಣವಾಗಿ ಸೇರ್ಪಡೆಯಾಗಲಿ ಎಂದು ಆಶಿಸೋಣ.



ಈ ಕೋಟೆಯ ಪ್ರವೇಶ ದ್ವಾರದಲ್ಲಿ ನಮ್ಮನ್ನು ತಪಾಸಣೆ ಮಾಡಿ ಒಳಗೆ ಬಿಡುತ್ತಿದ್ದರು.ಆ ಸಮಯದಲ್ಲಿ ಸಭ್ಯ ಉಡುಪು ಧರಿಸಿದವರನ್ನು ಮಾತ್ರ ಒಳಗೆ ಬಿಡುತ್ತಿದ್ದರು.ನಮ್ಮ ತಂಡದ ಸ್ನೇಹಿತರಲ್ಲಿ ಒಬ್ಬರು ಬರ್ಮುಡ ಧರಿಸಿದ್ದರು ಅವರನ್ನು ಒಳಗಡೆ ಬಿಡಲಿಲ್ಲ. ಅಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಅಲ್ಲಿ ಪಾಲಿಸಲಾಗುತ್ತದೆ.   ಜೊತೆಯಲ್ಲಿ ನಾವು ಆ ಕೋಟೆಯಲ್ಲಿ ಪ್ರಶಾಂತವಾಗಿ ಇರುವಂತೆ ಸೂಚನೆ ನೀಡಿದರು.

ಪಾರೋ ಝೋಂಗ್‌ನ ಐತಿಹಾಸಿಕ ದಾಖಲೆಗಳ ಪ್ರಕಾರ  ಈ ಸ್ಥಳದ ಕೆಳಗಿನ ಬಂಡೆಯ ಮುಖವನ್ನು 8 ನೇ ಶತಮಾನದಲ್ಲಿ ಗುರು ರಿನ್‌ಪೋಚೆರವರು ಈ ಸ್ಥಳವನ್ನು   ರಿಂಗ್‌ಪಂಗ್ ಎಂದು ಕರೆದರು. ನಂತರ ಈ ಸ್ಥಳದಲ್ಲಿ ಝೋಂಗ್ ಅನ್ನು ನಿರ್ಮಿಸಿದಾಗ ಅದು   ರಿಂಗ್ ಫಂಗ್ ಝೋಂಗ್   ಎಂದು ಕರೆಯಲ್ಪಟ್ಟಿತು.
15 ನೇ ಶತಮಾನದಲ್ಲಿ ಸ್ಥಳೀಯ ಸಮುದಾಯವು ಪಾರೊದಲ್ಲಿರುವ ಹಂಗ್ರೆಲ್ ಬಂಡೆಯನ್ನು ಫಾಜೊ ಡ್ರುಗೊಮ್ ಝಿಗ್ಪೊ ಅವರ ವಂಶಸ್ಥ ಲಾಮಾ ಡ್ರುಂಗ್ ಡ್ರುಂಗ್ ಗಯಾಲ್‌ಗೆ ಅರ್ಪಿಸಿತು. ಡ್ರುಂಗ್ ಡ್ರುಂಗ್ ಗಯಾಲ್ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದರು.  ನಂತರ ಹಂಗ್ರೆಲ್ ಡ್ಜಾಂಗ್ ಎಂದು ಕರೆಯಲ್ಪಡುವ ಐದು ಅಂತಸ್ತಿನ ಕೋಟೆಯನ್ನು ನಿರ್ಮಿಸಿದರು.
17 ನೇ ಶತಮಾನದ ವೇಳೆಗೆ ಹಂಗ್ರೆಲ್‌ನ ಪ್ರಭುಗಳು ಎಂದು ಕರೆಯಲ್ಪಡುವ ಅವರ ವಂಶಸ್ಥರು ಈ ಕೋಟೆಯನ್ನು ಏಕೀಕೃತ ಭೂತಾನ್ ರಾಜ್ಯದ ಸ್ಥಾಪಕ ಮತ್ತು ಡ್ರುಕ್ಪಾ ವಂಶಾವಳಿಯ ಮುಖ್ಯಸ್ಥ ಝಬ್ಡ್ರಂಗ್ ನ್ಗಾವಾಂಗ್ ನಮ್ಗ್ಯಾಲ್‌ಗೆ ಅವರ ಧಾರ್ಮಿಕ ಮತ್ತು ರಾಜಕೀಯ ಅಧಿಕಾರವನ್ನು ಗುರುತಿಸಿ ಅರ್ಪಿಸಿದರು. 1644 ರಲ್ಲಿ ಝಬ್ಡ್ರಂಗ್ ಹಳೆಯ ರಚನೆಯನ್ನು ಕೆಡವಿ ಹೊಸ ಝೋಂಗ್‌ಗೆ ಅಡಿಪಾಯ ಹಾಕಿದರು. 


23 ನೇ ಪೆನ್‌ಲೋಪ್ ದಾವಾ ಪೆಂಜೋರ್‌ನ ಆಳ್ವಿಕೆಯಲ್ಲಿ  ಮೊದಲ ರಾಜ ಗೊಂಗ್ಸಾ ಉಗ್ಯೆನ್ ವಾಂಗ್‌ಚುಕ್ ಸಿಂಹಾಸನಾರೋಹಣ ಮಾಡುವ ಮೊದಲು ಕೋಟೆಯು  ಬೆಂಕಿಯಿಂದ ತೀವ್ರವಾಗಿ ಹಾನಿಗೊಳಗಾಯಿತು.20 ಮೀಟರ್ ಅಗಲದ ಥೊಂಗ್‌ಡ್ರೆಲ್ ಹೊರತುಪಡಿಸಿ, ಹೆಚ್ಚಿನ ಅವಶೇಷಗಳು ಮತ್ತು ಪ್ರತಿಮೆಗಳು ನಾಶವಾದವು. ಥೊಂಗ್‌ಡ್ರೆಲ್‌ಗೆ ಗೌರವ ಸಲ್ಲಿಸುವುದರಿಂದ ಆಧ್ಯಾತ್ಮಿಕ ಅರ್ಹತೆ ಮತ್ತು ವಿಮೋಚನೆಯ ಸಾಮರ್ಥ್ಯ ಬರುತ್ತದೆ ಎಂದು ಭಕ್ತರು ನಂಬಿದ್ದಾರೆ. 1993 ರ ಚಲನಚಿತ್ರ ಲಿಟಲ್ ಬುದ್ಧದ ಹಲವಾರು ದೃಶ್ಯಗಳನ್ನು ಪಾರೋ ರಿನ್‌ಪುಂಗ್ ಝೋಂಗ್‌ನಲ್ಲಿ ಚಿತ್ರೀಕರಿಸಲಾಗಿದೆ.

ಈ ಕೋಟೆಯಲ್ಲಿರುವ ಪ್ರಮುಖ ಸ್ಮಾರಕಗಳನ್ನು ನಮಗೆ ನಮ್ಮ ಗೈಡ್ ನಮಗೆ ತೋರಿಸುತ್ತಾ ವಿವರಣೆ ನೀಡುತ್ತಾ ಕೋಟೆಯಲ್ಲಿ ಒಂದು ಸುತ್ತು ಹಾಕಿಸಿ ನಮಗೆ ಕೋಟೆಯ ಪರಿಚಯ ಮಾಡಿಸಿದರು.ಸೂರ್ಯಾಸ್ತದ ಸಮಯದಲ್ಲಿ ರಿನ್‌ಪುಂಗ್ ಡ್ಜಾಂಗ್ ಮತ್ತು ನೇಮಿ ಝಾಮ್ ಸೇತುವೆ
ರಿನ್‌ಪುಂಗ್ ಡ್ಜಾಂಗ್ ಒಳಗೆ ಹದಿನಾಲ್ಕು ದೇವಾಲಯಗಳು ಮತ್ತು ಪ್ರಾರ್ಥನಾ ಮಂದಿರಗಳಿವೆ. ಅವೆಂದರೆ ಕುಂಗರ್ವ,ಸನ್ಯಾಸಿಗಳ ಸಭಾ ಭವನ,ಶ್ರೀಗಂಧದ ಸ್ತೂಪ,ರಕ್ಷಕ ದೇವಾಲಯ,ಗುರುವಿನ ಎಂಟು ಅಭಿವ್ಯಕ್ತಿಗಳ ದೇವಾಲಯ,ಲಾಮಾ ಮುಖ್ಯಸ್ಥರ ಪ್ರಾರ್ಥನಾ ಮಂದಿರ,ಅಮಿತಾಯಸ್ ಪ್ರಾರ್ಥನಾ ಮಂದಿರ,ದಿ ಕ್ಲಿಯರ್ ಕ್ರಿಸ್ಟಲ್ ಶ್ರೈನ್,ಹನ್ನೊಂದು ಮುಖದ ಅವಲೋಕಿತೇಶ್ವರನ ಪ್ರಾರ್ಥನಾ ಮಂದಿರ,ಅಬಾಟ್‌ನ ಅಪಾರ್ಟ್‌ಮೆಂಟ್‌ಗಳು,ಅಕ್ಷೋಭ್ಯ ದೇಗುಲ,ನಿಧಿ ಬಹಿರಂಗಪಡಿಸುವವರ ದೇವಾಲಯ,ರಾಜನ ಅಪಾರ್ಟ್‌ಮೆಂಟ್‌ಗಳು,ಬುರ್ಸಾರನ ದೇವಾಲಯ
ಮುಖ್ಯ ಝೊಂಗ್‌ನ ಹೊರಗೆ ದೇಯಾಂಗ್ಖಾ ದೇವಸ್ಥಾನವಿದೆ.
ರಿನ್‌ಪುಂಗ್ ಡ್ಜಾಂಗ್ ಮೇಲಿನ ಬೆಟ್ಟದ ಮೇಲೆ 1649 ರಲ್ಲಿ ನಿರ್ಮಿಸಲಾದ ಏಳು ಅಂತಸ್ತಿನ ಕಾವಲು ಗೋಪುರ ಕೋಟೆ ಅಥವಾ ಟಾ ಡ್ಜಾಂಗ್ ಇದೆ. 1968 ರಲ್ಲಿ ಇದನ್ನು ಭೂತಾನ್ ರಾಷ್ಟ್ರೀಯ ವಸ್ತುಸಂಗ್ರಹಾಲಯದ ನೆಲೆಯಾಗಿ ಸ್ಥಾಪಿಸಲಾಯಿತು .
ರಿನ್‌ಪುಂಗ್ ಡ್ಜಾಂಗ್‌ನ ಸ್ವಲ್ಪ ಕೆಳಗೆ ಸಾಂಪ್ರದಾಯಿಕ ಮುಚ್ಚಿದ ಕ್ಯಾಂಟಿಲಿವರ್ ಸೇತುವೆ ಇದೆ.
ಈ ಕೋಟೆಯ ಸೌಂದರ್ಯವನ್ನು ಸವಿಯುತ್ತಾ ಸಾಗಿದ ನಮ್ಮನ್ನು  ನಮ್ಮ ಗೈಡ್ ಮಿಲೆನಿಯಮ್ ವ್ಯೂ ಪಾಯಿಂಟ್ ಬಳಿ ಕರೆದುಕೊಂಡು ಹೋದರು.ಅದು ಬಹಳ ಸುಂದರವಾದ ದೃಶ್ಯಗಳನ್ನು ಹೊಂದಿ ನಮ್ಮ ಮನ ತಣಿಸಿತು. ಪಾರೋ ಏರ್ಪೋರ್ಟ್, ನದಿ ಕಣಿವೆ, ಕಾಡುಗಳು, ಮನೆಗಳು ಮುಂತಾದ ಸೀನರಿಗಳು ನೋಡುಗರನ್ನು ಸೆಳೆಯುತ್ತವೆ.ಅದೇ ಪ್ರದೇಶದಲ್ಲಿ ಇರುವ ಒಂದು ಮನೆಯ ಕಡೆ ತೋರಿಸಿದ ನಮ್ಮ ‌ಗೈಡ್ ಆ ಮನೆಯು ರಾಜ ಮನೆತನದವರು ಪಾರೋಗೆ ಬಂದಾಗ ಉಳಿದುಕೊಳ್ಳಲು ಇರುವ ಮನೆ. ಭಾರತದಲ್ಲಿ  ಇಂದಿರಾಗಾಂಧಿ ರವರ ಹತ್ಯೆ ಆದಾಗ ರಾಜೀವ್ ಗಾಂಧಿಯವರನ್ನು ಆ ಮನೆಯಲ್ಲಿ ಸುರಕ್ಷಿತವಾಗಿ ಇಟ್ಟಿದ್ದರು ಎಂದು ಹೇಳಿದರು.



ಆ ಕೋಟೆಯಲ್ಲಿ ಇರುವ ಕೆಲ ವಿಶೇಷವಾದ ಪೋಟೋಗಳ ಕಡೆಗೆ ನಮ್ಮ ಗಮನ ಸೆಳೆದ ನಮ್ಮ ಗೈಡ್ ತೆಂದಿನ್ ಆ ಕೋಟೆಯಲ್ಲಿ ವಾರ್ಷಿಕವಾಗಿ ನಡೆಯುವ ಧಾರ್ಮಿಕ ಆಚರಣೆಗಳ ಬಗ್ಗೆ ತಿಳಿಸಿದರು.

ಸಾಂಪ್ರದಾಯಿಕ ಭೂತಾನೀಸ್ ಚಂದ್ರಮಾನ  ಕ್ಯಾಲೆಂಡರ್‌ನ ಎರಡನೇ ತಿಂಗಳಿನ ಹನ್ನೊಂದನೇ ತಾರೀಖಿನಿಂದ ಹದಿನೈದನೇ ದಿನದವರೆಗೆ ಅಂದರೆ ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್‌ನ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ  ರಿನ್‌ಪುಂಗ್ ಕೋಟೆಯಲ್ಲಿ ಒಂದು ದೊಡ್ಡ ವಾರ್ಷಿಕ ಉತ್ಸವ ಅಥವಾ ತ್ಶೆಚು ನಡೆಯುತ್ತದೆ. ಈ ಸಂದರ್ಭದಲ್ಲಿ ಪವಿತ್ರ ಚಿತ್ರಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದರ ನಂತರ ಧಾರ್ಮಿಕ ಕಥೆಗಳನ್ನು ತಿಳಿಸುವ ಸಾಂಪ್ರದಾಯಿಕ ಮುಖವಾಡ ನೃತ್ಯಗಳ ಸರಣಿಯನ್ನು ಸನ್ಯಾಸಿಗಳು ಹಲವಾರು ದಿನಗಳವರೆಗೆ ಪ್ರದರ್ಶಿಸುತ್ತಾರೆ.
ಹದಿನೈದನೇ ದಿನದ ಬೆಳಗಿನ ಜಾವದಲ್ಲಿ, ಪದ್ಮಸಂಭವನ ಎಂಟು ಅವತಾರಗಳಾದ     ಗುರು ಪೆಮಾ ಜಂಗ್ನಿ, ಗುರು ನಿಮಾ ಯೋಯೆಜರ್, ಗುರು ಸಿಂಗ್ಯೆ ಡ್ರಾಡ್ರಾಂಗ್, ಗುರು ತ್ಶೋಕಿ ದೋರ್ಜಿ, ಗುರು ಶಾಚಾ ಸಿಂಗ್ಯೆ, ಗುರು ಪೆಮಾ ಗೈಲ್ಪೋ, ಗುರು ದೋರ್ಜಿ ಡೋಲೋ ಮತ್ತು ಗುರು ಲೋಡನ್ ಚೋಕ್ಸೆ ಗಳನ್ನು ಚಿತ್ರಿಸುವ ಒಂದು ದೊಡ್ಡ ಪವಿತ್ರ ಥೋಂಗ್ಡ್ರೆಲ್ ಬ್ಯಾನರ್ ಥಂಗ್ಕಾವನ್ನು  ಬೆಳಗಿನ ಜಾವದಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ. ಸೂರ್ಯನ ಬೆಳಕು ಅದರ ಮೇಲೆ ಬೀಳಲು ಬಿಡದಿರುವ ಸಂಪ್ರದಾಯವನ್ನು ಉಳಿಸಿಕೊಳ್ಳಲು ಬೌದ್ಧ  ಸನ್ಯಾಸಿಗಳು ಮುಖವಾಡ ನೃತ್ಯ ಮಾಡುವ ನೆಲವನ್ನು ದೆಯಾಂಗ್ಖಾ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಕೋಟೆಯ ಐತಿಹಾಸಿಕ ಜಾಗೂ ಧಾರ್ಮಿಕ ಮಹತ್ವ ತಿಳಿದ ನಾವು ಕೋಟೆಯ ಒಳಭಾಗ ಹಾಗೂ ಹೊರಭಾಗದಲ್ಲಿ ನಮ್ಮ ತಂಡದ ಜೊತೆಯಲ್ಲಿ ನೆನಪಿಗಾಗಿ ಪೋಟೋ ತೆಗೆದುಕೊಂಡು ಭೂತಾನ್ ನ ಮತ್ತೊಂದು ದೇಗುಲ ಕಿಚು ಲಕಾಂಗ್ ಕಡೆಗೆ ಪಯಣ ಬೆಳೆಸಿದೆವು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು.

21 ಮಾರ್ಚ್ 2026

ನಮ್ಮೂರ ಪಾತೇದೇವರು.

 


ಪಾತಲಿಂಗೇಶ್ವರ ಮಹಿಮೆ.


ನಮ್ಮೂರ ಅಧಿ ದೇವತೆ ಚೌಡೇಶ್ವರಿಯಷ್ಟೇ ಪ್ರಮುಖವಾದ ಮೂರು ದೇವಾಲಯಗಳಲ್ಲಿ ಪಾತಲಿಂಗೇಶ್ವರ ಅಥವಾ ಪಾರ್ಥಲಿಂಗೇಶ್ವರ ಗುಡಿಯು ನಮ್ಮೂರ ಜನರ ಪ್ರಾರ್ಥನಾ ತಾಣವಾಗಿದೆ.
ಬಾಲ್ಯದಲ್ಲಿ  ನಮ್ಮೂರ ಶಾಲೆಯಲ್ಲಿ ಓದುವಾಗ ಸೋಮವಾರ ಮತ್ತು ಪ್ರಮುಖವಾದ ದೇವರ ಕಾರ್ಯವಿದ್ದಾಗ ನಮ್ಮ ಸಹಪಾಠಿ ಚಂದ್ರ ಶಾಲೆಗೆ ಬರುತ್ತಿರಲಿಲ್ಲ. ನಮ್ಮ TNT ಅರ್ಥಾತ್  ತಿಪ್ಪೇಶಪ್ಪ  ‌ಮೇಷ್ಟ್ರು ಚಂದ್ರನ ಅಕ್ಷರಶಃ ಹೊತ್ತುಕೊಂಡು ಬನ್ನಿ ಎಂದು  ನಮ್ಮನ್ನು ಕಳಿಸುತ್ತಿದ್ದರು.ನಾವು ಕೆಲವೊಮ್ಮೆ ಗುರುಗಳ ಮಾತನ್ನು ಶಿರಸಾವಹಿಸಿ ಪಾಲಿಸಿ ಅವನನ್ನು ಎತ್ತಾಕಿಕೊಂಡು ಬಂದಿದ್ದೆವು.ಹೀಗೆ ಒಮ್ಮೆ ಚಂದ್ರನನ್ನು ಎತ್ತಾಕಿಕೊಂಡು ಬರಲು ಹೋದಾಗ ಅವರಪ್ಪ ನಮ್ಮನ್ನು ಗದರಿ ಕಳಿಸಿ‌‌ ಶಾಲೆಗೆ ಬಂದು " ಮೇಷ್ಟ್ರೇ ನಮ್ ಹುಡ್ಗ ಸೋಮಾರ ಇಸ್ಕೂಲ್ ಗೆ ಬರಲ್ಲ ಅಷ್ಟೇ, ಇನ್ಮೇಲೆ ಈ ಹುಡುಗ್ರು ನಮ್ ಮನೆ ಹತ್ರ ಬಂದ್ರೆ ನೆಟ್ಗಿರಲ್ಲ ನೋಡು" ಎಂದು ಗದರಿ ಹೋಗಿದ್ದರು. ಅಲ್ಲಿ ಗೆ ನಮ್ ಮಾಷ್ಟ್ರು ಚಂದ್ರು ಬಂದಾಗ ಬರಲಿ ಎಂದು ತೀರ್ಮಾನಕ್ಕೆ ಬಂದು ಸುಮ್ಮನಾಗಿದ್ದರು.ಚಂದ್ರಪ್ಪನಿಗೆ ಪಾತಲಿಂಗೇಶ್ವರನ ಸೇವೆ ಮಾಡುವ ಪುಣ್ಯ ಲಭಿಸಿತ್ತು.ದೊಡ್ಡಪ್ಪ ಜಡಿಯಪ್ಪ,ಹಾಗೂ  ಅಪ್ಪ ತಮ್ಮಣ್ಣನವರ ದೈವ ಭಕ್ತಿಯಿಂದ ಪ್ರೇರಿತನಾದ ಚಂದ್ರಪ್ಪ ದೇವರ ಪೂಜೆಗೆ ತನ್ನ ‌ಜೀವನ ಮೀಸಲಿಟ್ಟ.ಈಗ ಪಾತಲಿಂಗೇಶ್ವರ ಸ್ವಾಮಿಯ ಪ್ರಮುಖ ಅರ್ಚಕನಾಗಿರುವ ನನ್ನ ಗೆಳೆಯ ಚಂದ್ರಪ್ಪ ನಮ್ಮ  ಪಾತೇದೇವರ ದೈವಿಕ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರುತ್ತಿದ್ದಾನೆ.ಯುಗಾದಿ ಹಬ್ಬಕ್ಕೆ ‌ಊರಿಗೆ ಹೋದಾಗ ಪಾತೇದೇವರ ಗುಡಿಯ  ಬಾಗಿಲು ಮುಚ್ಚಿತ್ತು.ಎಲ್ಲಿದ್ದನೋ ಗೆಳೆಯ ಕ್ಷಣಾರ್ಧದಲ್ಲಿ ಬಂದು  ಬಾಗಿಲು ತೆರೆದು ನಮ್ಮ ಕುಟುಂಬಕ್ಕೆ ಸ್ವಾಮಿಯ ದರ್ಶನ ಮಾಡಿಸಿ ಪ್ರಸಾದ ಕೊಟ್ಟ. ಅದಕ್ಕಿಂತ ಮಿಗಿಲಾಗಿ ಒಂದು ವಿಶೇಷ ಪುಸ್ತಕದ ಪ್ರಸಾದ ನೀಡಿದ. ಅದು ಪಾತಲಿಂಗೇಶ್ವರ ಸ್ವಾಮಿ ಕುರಿತಾಗಿ ನಮ್ಮೂರ ಕಂಡಕ್ಟರ್ ರಾಮಣ್ಣ ಬರೆದ ಪುಸ್ತಕ. ಅದರಲ್ಲಿ ಸ್ವಾಮಿಯ ಜೀವನ ಮತ್ತು ಪವಾಡಗಳ ಕುರಿತಾದ ಹತ್ತಾರು ಪ್ರಸಂಗಗಳಿವೆ.ಮುಂದೆ ಅವುಗಳ ಬಗ್ಗೆ ತಿಳಿಸುವೆ.ಸ್ವಾಮಿಯ ಕೃಪೆಯಾದರೆ ನಾನು ಪಾತೇದೇವರ ಕುರಿತೊಂದು ಪುಸ್ತಕ ಬರೆಯುವ ಬಯಕೆಯಿದೆ.
ಪಾತೇದೇವರು ನಿಮ್ಮನ್ನು ಹರಸಲಿ..

17 ಮಾರ್ಚ್ 2026

SSLC ವಿದ್ಯಾರ್ಥಿಗಳಿಗೆ ಶುಭವಾಗಲಿ...


 










ಶುಭವಾಗಲಿ ವಿದ್ಯಾರ್ಥಿಗಳೇ..


ಆತ್ಮೀಯ sslc ವಿದ್ಯಾರ್ಥಿಗಳೇ ವರ್ಷ ಪೂರ್ತಿ ಬಹಳ ಚೆನ್ನಾಗಿ ಅಭ್ಯಾಸ ಮಾಡಿರುವಿರಿ.ಪರೀಕ್ಷೆ ಬರೆಯುವ ಕ್ರಮ ಅರಿಯಲು ಒಂದು ಅರ್ಧವಾರ್ಷಿಕ ಪರೀಕ್ಷೆ ಮೂರು ಪೂರ್ವ ಸಿದ್ದತಾ  ಪರೀಕ್ಷೆಗಳನ್ನು ಬರೆದು ನಿಮ್ಮ ಆತ್ಮ ವಿಶ್ವಾಸ ವೃಧ್ದಿಸಿಕೊಂಡಿರುವಿರಿ.ನಾಳೆಯಿಂದ ವಾರ್ಷಿಕ ಮುಖ್ಯ ಪರೀಕ್ಷೆ ಆರಂಭವಾಗುತ್ತಿದೆ.ಇದುವರೆಗೆ ಬರೆದ ಪರೀಕ್ಷೆಯಂತೆ ಈ ಪರೀಕ್ಷೆಯನ್ನು ಬರೆಯಿರಿ ಒತ್ತಡಕ್ಕೆ ಒಳಗಾಗದೇ ಪರೀಕ್ಷೆ ಬರೆಯಿರಿ. ಯಶಸ್ಸು ಖಂಡಿತವಾಗಿ ನಿಮ್ಮದಾಗಲಿದೆ. 
ಪರೀಕ್ಷೆ ಕೊಠಡಿಯಲ್ಲಿ ನೀವು ಹೇಗೆ ವರ್ತಿಸುತ್ತೀರಿ ಎಂಬುದು ನಿಮ್ಮ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತದೆ.

ಇಂದು ನಾನು ಪರೀಕ್ಷೆ ಕೊಠಡಿಯಲ್ಲಿ ನೀವು  ಪಾಲಿಸಬೇಕಾದ ಅಂಶಗಳ ಬಗ್ಗೆ ಕೆಲ  ಸಲಹೆಗಳನ್ನು ನೀಡಬಯಸುವೆ.


ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 30 ನಿಮಿಷ ಮುಂಚಿತವಾಗಿ ಬನ್ನಿ.ಇದರಿಂದಾಗಿ ಲೇಟ್ ಆಗಿ ಬಂದು ನಿಮ್ಮ ಕೊಠಡಿ ದೊರಕದೆ ಉದ್ವೇಗಕ್ಕೆ ಒಳಗಾಗುವುದು ತಪ್ಪುತ್ತದೆ.ಕೊಠಡಿ ಪ್ರವೇಶಕ್ಕೆ ಮುನ್ನ ಅಗತ್ಯ ದಾಖಲೆಗಳಾದ ಹಾಲ್ ಟಿಕೆಟ್ , ಪೆನ್ ,ಪೆನ್ಸಿಲ್, ಜಿಯೋಮೆಟ್ರಿ ಬಾಕ್ಸ್ ಮುಂತಾದವುಗಳು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ.

ಕೊಠಡಿ ಪ್ರವೇಶಿದ ಕೂಡಲೇ ನೀವು ಕುಳಿತಿರುವ ಜಾಗ ನಿಮ್ಮದೇ ಎಂದು ನಿಮ್ಮ ಹಾಲ್ ಟಿಕೆಟ್ ಹಾಗೂ ಡೆಸ್ಕ್ ಮೇಲೆ ಇರುವ ರಿಜಿಸ್ಟರ್ ನಂಬರ್ ನಿಮ್ಮದೇ ಎಂದು ನೋಡಿಕೊಂಡು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ. ಪರೀಕ್ಷಾ ಕೊಠಡಿಯಲ್ಲಿ ಇತರೆ ವಿದ್ಯಾರ್ಥಿಗಳ ಜೊತೆಯಲ್ಲಿ ಅನವಶ್ಯಕ ಮಾತು ಬೇಡ. ಆರಂಭದ ಐದು ನಿಮಿಷ  ಶಾಂತತೆ ಕಾಪಾಡಿಕೊಂಡು ಕಣ್ಣು ಮುಚ್ಚಿ ದೀರ್ಘವಾಗಿ ಉಸಿರು ತೆಗೆದುಕೊಂಡು ಉಸಿರು ಬಿಡಿ.


ಈ ಬಾರಿ ಕೊಠಡಿಯಲ್ಲಿ ಮೊದಲು ಪ್ರಶ್ನೆ ಪತ್ರಿಕೆ ನೀಡುವರು ಅದಾಗಿ ಹದಿನೈದು ನಿಮಿಷಗಳ ನಂತರ ಉತ್ತರ ಪತ್ರಿಕೆ ನೀಡುತ್ತಾರೆ.  ಪ್ರಶ್ನೆಪತ್ರಿಕೆಯನ್ನು ಚೆನ್ನಾಗಿ ಓದಿ
ಎಲ್ಲಾ ಪ್ರಶ್ನೆಗಳ ಅರ್ಥವನ್ನು ಸರಿಯಾಗಿ ತಿಳಿದುಕೊಳ್ಳಿ.

ಉತ್ತರ ಪತ್ರಿಕೆ ನೀಡಿದ ಮೇಲೆ ಅದರ ಮೇಲೆ   ನಿಮ್ಮ ರಿಜಿಸ್ಟರ್ ನಂಬರ್ ಸರಿಯಾದ ಜಾಗದಲ್ಲಿ ತಪ್ಪಿಲ್ಲದಂತೆ ಬರೆಯಿರಿ. ಮಾಧ್ಯಮ, ವಿಷಯ, ಮುಂತಾದ ವಿವರಗಳನ್ನು ತಪ್ಪಿಲ್ಲದಂತೆ ಬರೆದು ‌ಕೊಠಡಿ ಮೇಲ್ವಿಚಾರಕರ ಸಹಿ ಪಡೆಯಿರಿ.ನಂತರ
ನಿಮಗೆ ಗೊತ್ತಿರುವ ಪ್ರಶ್ನೆಗಳನ್ನು ಮೊದಲು ಉತ್ತರಿಸಿ.
ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಪ್ರತಿ ಪ್ರಶ್ನೆಗೆ ಸರಿಯಾದ ಸಮಯ ಮೀಸಲಿಡಿ.
ಕೊನೆಯಲ್ಲಿ ಉತ್ತರ ಪರಿಶೀಲನೆಗೆ 5–10 ನಿಮಿಷ ಉಳಿಸಿಕೊಳ್ಳಿ.

ನಿಮ್ಮ ಬರವಣಿಗೆ ಸ್ಪಷ್ಟ ಮತ್ತು ಸ್ವಚ್ಛವಾಗಿರಲಿ ಅದು ಮೌಲ್ಯಮಾಪಕರು ಓದುವಂತಿರಲಿ
ನಿಮ್ಮ ಉತ್ತರಪತ್ರಿಕೆಯು ಅನವಶ್ಯಕ ಚಿತ್ತು ಕಾಟುಗಳಿಂದ ಕೂಡಿರದೇ  ನೀಟ್  ಆಗಿರಲಿ.
ಮುಖ್ಯ ಅಂಶಗಳನ್ನು  ಅಂಡರ್ಲೈನ್ ಹಾಕಿ  ಹೈಲೈಟ್ಸ್ ‌ಮಾಡಬಹುದು.ಪ್ರಶ್ನೆ ಸಂಖ್ಯೆಯನ್ನು  ಮತ್ತು ಉಪಪ್ರಶ್ನೆ ಸಂಖ್ಯೆಯನ್ನು ಸರಿಯಾಗಿ  ಬರೆಯಿರಿ.
ನೀವೂ ಪರೀಕ್ಷಾ ಕೊಠಡಿಯಲ್ಲಿ ಸಿ ಸಿ ಕಣ್ಗಾವಲಿನಲ್ಲಿ ನೇರಪ್ರಸಾರದಲ್ಲಿ ಇರುವ  ಕಾರಣ ಪರೀಕ್ಷಾ ಅಕ್ರಮಗಳಿಂದ  ದೂರವಿರಿ
ನಕಲು  ಮಾಡುವ ಪ್ರಯತ್ನ ಬೇಡವೇ ಬೇಡ.
ಇದು ನಿಮ್ಮ ಭವಿಷ್ಯಕ್ಕೆ ಹಾನಿಕರ.

ಕೆಲ  ಅರ್ಥವಾಗದ ಪ್ರಶ್ನೆಗಳಿದ್ದರೆ ಆತಂಕ ಬೇಡ
ಗೊತ್ತಿಲ್ಲದ ಪ್ರಶ್ನೆ ಬಂದರೆ ತಕ್ಷಣ ಬಿಟ್ಟು ಮುಂದಿನ ಪ್ರಶ್ನೆಗೆ ಹೋಗಿ. ಅದರ ಬಗ್ಗೆ ಯೋಚಿಸಿ ಸಮಯ ವ್ಯರ್ಥ ಮಾಡಬೇಡಿ ಅಂತಹ  ಪ್ರಶ್ನೆಗಳನ್ನು ನಂತರ
ಮತ್ತೆ ಪ್ರಯತ್ನಿಸಿ. ಹೆಚ್ಚುವರಿ ಹಾಳೆ ಬೇಕಾದರೆ ಕೊಠಡಿ ಮೇಲ್ವಿಚಾರಕರನ್ನು ಕೇಳಿ ಪಡೆಯಿರಿ. ಹೆಚ್ಚುವರಿ ಹಾಳೆಯನ್ನು ಮುಖ್ಯ ಉತ್ತರ ಪತ್ರಿಕೆಯ ಜೊತೆಯಲ್ಲಿ ಕಟ್ಟುವುದು ನೆನಪಿರಲಿ. ಗಣಿತದ ವಿಷಯದಲ್ಲಿ ಗ್ರಾಫ್ ಉತ್ತರ ಪತ್ರಿಕೆಯಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳಿ.ಸಮಾಜ ವಿಜ್ಞಾನ ವಿಷಯದ ದಿನ  ಪ್ರಿಂಟೆಡ್ ಭಾರತದ ಮ್ಯಾಪ್ ಪಡೆದು ಸ್ಥಳಗಳನ್ನು ಪೆನ್ಸಿಲ್ ನಿಂದ ಗುರ್ತಿಸಿ ಮುಖ್ಯ ಉತ್ತರ ಪತ್ರಿಕೆಯಲ್ಲಿ ಒಳಭಾಗದಲ್ಲಿ ಇಟ್ಟು ದಾರದಿಂದ ಕಟ್ಟುವುದನ್ನು ಮರೆಯಬೇಡಿ.

ಪರೀಕ್ಷೆಯ   ಕೊನೆಯ ಹದಿನೈದು ನಿಮಿಷಗಳಲ್ಲಿ ನೀವು ಬರೆದ   ಉತ್ತರಗಳನ್ನು ಪರಿಶೀಲಿಸಿ
ತಪ್ಪುಗಳು, ಬಿಟ್ಟ ಪ್ರಶ್ನೆಗಳು ಇರುವುದನ್ನು ಪರಿಶೀಲಿಸಿ.
ಅಗತ್ಯವಿದ್ದರೆ ತಿದ್ದುಪಡಿ ಮಾಡಿರಿ. ಮುಖ್ಯ ಉತ್ತರ ಪತ್ರಿಕೆಯ ಮೊದಲ ಪುಟದಲ್ಲಿ ನಿಗದಿತ ಜಾಗದಲ್ಲಿ   ಎಷ್ಟು ಪುಟಗಳ  ಉತ್ತರ ಬರೆದಿರುವಿರಿ  ಎಂಬ ಮಾಹಿತಿಯನ್ನು ತುಂಬಿ ಕೊನೆಯಲ್ಲಿ ಲಾಂಗ್ ಬೆಲ್ ಆದ ನಂತರ ಕೊಠಡಿ ಮೇಲ್ವಿಚಾರಕರಿಗೆ ನೀಡಿ..

ವರ್ಷ ಪೂರ್ತಿ ಓದಿದ ನೀವು ಅದನ್ನು ಸರಿಯಾಗಿ ಪ್ರಸ್ತುತಪಡಿಸಲು  ಪರೀಕ್ಷೆ ಕೊಠಡಿಯಲ್ಲಿ ಶಿಸ್ತು, ಸಮಯ ನಿರ್ವಹಣೆ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ.ಈ ಮೇಲಿನ ಸಲಹೆಗಳನ್ನು ಪಾಲಿಸಿ ಪರೀಕ್ಷೆ ಬರೆದು ಸಂಭ್ರಮಿಸಿ. ಉತ್ತಮ ಫಲಿತಾಂಶ ನಿಮ್ಮದಾಗಲಿ.ಆಲ್ ದಿ ಬೆಸ್ಟ್...


ಸಿಹಿಜೀವಿ ವೆಂಕಟೇಶ್ವರ
ಸಮಾಜ ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ.


#SchoolAnnouncement #Education #SSLCExam #StudentSuccess #ExamTips #AcademicJourney #FutureLeaders #LearningTogether #MotivationalSpeech #ExamPreparation #SuccessMindset #EducationalGoals #StudentMotivation #ClassroomVibes #AcademicExcellence #ParentsGuide #SchoolLife #AchievementUnlocked #ExamsSeason

14 ಮಾರ್ಚ್ 2026

ರಾಜರ ಅರಮನೆ ಡಬಲ್ ಬೆಡ್ ರೂಂ ಮನೆ!



ರಾಜರ ಅರಮನೆ ಡಬಲ್ ಬೆಡ್ ರೂಂ ಮನೆ!







ಭೂತಾನ್ ನ ರಾಜಧಾನಿ ಥಿಂಪು ನಗರದ ಏಕೈಕ ಹಿಂದೂ ದೇವಾಲಯದ ದರ್ಶನ ಮಾಡಿದ ನಂತರ ಭೂತಾನ್ ನ ರಾಜರ ಮನೆ ಮತ್ತು ಭೂತಾನ್ ಸಂಸತ್ ನೋಡಲು ಹೊರಟೆವು. ನಮ್ಮ ಭೂತಾನ್ ಪ್ರವಾಸದುದ್ದಕ್ಕೂ ನಮ್ಮ ಗೈಡ್ ತೆಂದಿನ್ ಅಲ್ಲಿನ ರಾಜರ ಬಗ್ಗೆ ಬಹಳ ಹೆಮ್ಮೆಯಿಂದ ಹೇಳುತ್ರಿದ್ದ.ಹಾಗಾಗಿ ಭೂತಾನ್ ದೊರೆಯ ಅರಮನೆ ನೋಡಲು ನಾನು ಹಾಗೂ ನನ್ನ ಸ್ನೇಹಿತರು ಕಾತುರರಾಗಿದ್ದೆವು.
ಆದರೆ ಭದ್ರತೆಯ ದೃಷ್ಟಿಯಿಂದ ನಮ್ಮನ್ನು ಆ ಸ್ಮಾರಕಗಳ ಹತ್ತಿರ ಬಿಡಲಿಲ್ಲ. ದೂರದಿಂದಲೇ ಅಲ್ಲಿನ ಸಂಸತ್ ಹಾಗೂ ರಾಜರ  ಅರಮನೆ ನೋಡಿದೆವು. ವಾಸ್ತವವಾಗಿ ಅದು ಅರಮನೆಯಾಗಿರದೇ ಡಬಲ್ ಬೆಡ್ ರೂಂ‌ನ ಮನೆ ಎಂದು ತಿಳಿದು ರಾಜನ ಸರಳ ಜೀವನ ಕಂಡು ಅವರ ಬಗ್ಗೆ ನನಗೂ ಗೌರವ ಭಾವನೆ ಉಂಟಾಯಿತು. ನಮ್ಮಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದರೆ ಅವರ ವರ್ತನೆ, ದರ್ಪ, ತೋರ್ಪಡಿಸುವ ಗುಣಗಳನ್ನು ಕಂಡಿದ್ದೇವೆ.ಇಡೀ ದೇಶಕ್ಕೆ  ನಾಯಕನಾಗಿರುವ ದೊರೆಯ  ಸರಳ ಜೀವನ ಶೈಲಿ ನಮಗೂ ಅನುಕರಣೀಯ.




ಥಿಂಫು ನಗರದ ಉತ್ತರ ಭಾಗದಲ್ಲಿರುವ ಡೆಚೆಂಚೋಲಿಂಗ್ ಅರಮನೆ ಭೂತಾನ್ ರಾಜಕುಟುಂಬದ ಅಧಿಕೃತ ವಾಸಸ್ಥಳವಾಗಿದೆ. ಅರಮನೆಯ ಸುತ್ತಲೂ ವಿಶಾಲವಾದ ಹಸಿರು ತೋಟಗಳು ಮತ್ತು ಭದ್ರತಾ ವ್ಯವಸ್ಥೆ ಇದೆ. ಸಾಂಪ್ರದಾಯಿಕ ಭೂತಾನಿ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಈ ಅರಮನೆ ಬಿಳಿ ಗೋಡೆಗಳು, ಕೆಂಪು ಮೇಲ್ಚಾವಣಿ ಮತ್ತು ನವೀನ ಮರದ ಕೆತ್ತನೆಗಳಿಂದ ಕಂಗೊಳಿಸುತ್ತದೆ.
ಅರಮನೆಯೊಳಗೆ ಪ್ರವೇಶಿಸಲು ಸಾಮಾನ್ಯ ಪ್ರವಾಸಿಗರಿಗೆ ಅವಕಾಶವಿಲ್ಲದಿದ್ದರೂ, ಹೊರಗಿನಿಂದಲೇ ಅದರ ಶಾಂತ ಮತ್ತು ಭವ್ಯ ವಾತಾವರಣ ಗೌರವಭಾವ ಮೂಡಿಸುತ್ತದೆ. ಸ್ಥಳೀಯ ಮಾರ್ಗದರ್ಶಕರು ತಿಳಿಸಿದಂತೆ ಭೂತಾನ್ ರಾಜಮನೆತನ ಜನರೊಂದಿಗೆ ಆಪ್ತ ಸಂಬಂಧ ಹೊಂದಿದೆ. ದೇಶದ ಇಂದಿನ ರಾಜರಾದ ಜನಪ್ರಿಯ ನಾಯಕರೆಂದು ಪರಿಚಿತರು. ಅವರ ಸರಳ ಜೀವನಶೈಲಿ ಮತ್ತು ಶಿಕ್ಷಣಕ್ಕೆ ನೀಡುವ ಮಹತ್ವದ ಬಗ್ಗೆ ಸ್ಥಳೀಯರು ಹೆಮ್ಮೆಪಡುವುದನ್ನು ನಾನು ಕಂಡೆ.





  ದೊರೆಯ ಮನೆಯ ಮುಂಭಾಗದಲ್ಲಿ ಥಿಂಫು ನಗರದ ಪ್ರಮುಖ ಆಕರ್ಷಣೆಯಾದ ಟಾಶಿಚೋ ಜೋಂಗ್ ಕಟ್ಟಡವು ರಾಜಕೀಯ ಮತ್ತು ಧಾರ್ಮಿಕ ಎರಡೂ ಮಹತ್ವವನ್ನು ಹೊಂದಿದೆ. ಇಲ್ಲಿ ಭೂತಾನ್ ಸರ್ಕಾರದ ಕಚೇರಿಗಳು ಮತ್ತು ಧಾರ್ಮಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಕಟ್ಟಡದ ವಿಶಾಲ ಅಂಗಣ, ಸಾಂಪ್ರದಾಯಿಕ ಚಿತ್ರಕಲೆ, ಬೌದ್ಧ ಶೈಲಿಯ ಕಂಬಗಳು ಮತ್ತು ಚಿನ್ನದ ಅಲಂಕಾರಗಳು ಮನಸೆಳೆಯುತ್ತವೆ.
ಭೂತಾನ್ ಸಂಸತ್ ವ್ಯವಸ್ಥೆ ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಇಲ್ಲಿ ದೇಶದ ಕಾನೂನುಗಳು ಮತ್ತು ನೀತಿಗಳ ಚರ್ಚೆ ನಡೆಯುತ್ತದೆ. ಸಾಂಪ್ರದಾಯಿಕ ವೇಷಭೂಷಣದಲ್ಲಿ ಸಂಸತ್ ಸದಸ್ಯರು ಭಾಗವಹಿಸುವ ದೃಶ್ಯ, ಆಧುನಿಕ ಆಡಳಿತ ಮತ್ತು ಸಂಸ್ಕೃತಿಯ ಸಮನ್ವಯವನ್ನು ತೋರಿಸುತ್ತದೆ.



ಭೂತಾನ್ ಒಂದು ಸಾಂವಿಧಾನಿಕ ರಾಜಪ್ರಭುತ್ವವಾಗಿದ್ದು  ಸಂಸದೀಯ ಸ್ವರೂಪದ ಸರ್ಕಾರವನ್ನು ಹೊಂದಿದೆ.ಅಲ್ಲಿನ ಪ್ರಸ್ತುತ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್ ಅವರು ಮಾದರಿ ಆಡಳಿತ ನೀಡುತ್ತಿದ್ದಾರೆ. ಅವರಿಗೆ  ಭೂತಾನ್‌ನ ಪ್ರಸ್ತುತ ಪ್ರಧಾನ ಮಂತ್ರಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕ ತ್ಶೆರಿಂಗ್ ಟೋಬ್ಗೇ ರವರು ಕೈಜೋಡಿಸಿದ್ದಾರೆ. 2008 ರಲ್ಲಿ ಭೂತಾನ್‌ನ ಪ್ರಜಾಸತ್ತಾತ್ಮಕ ಪರಿವರ್ತನೆಯನ್ನು ಕಂಡಿತು. 1907 ರಿಂದ ರಾಜಪ್ರಭುತ್ವದೊಂದಿಗಿನ ಅದರ ಸಾಮಾಜಿಕ ಒಪ್ಪಂದದ ವಿಕಸನವೆಂದು ನೋಡಲಾಗುತ್ತದೆ. ವರ್ಲ್ಡ್ ವರ್ಗೀಕರಣದ ಆಡಳಿತಗಳಲ್ಲಿ ವಿ ಡೆಮ್ ಡೆಮಾಕ್ರಸಿ ಸೂಚ್ಯಂಕಗಳ ಪ್ರಕಾರ 2024 ರ ವರ್ಷದಿಂದ ಭೂತಾನ್ ಅನ್ನು ಚುನಾವಣಾ ಪ್ರಜಾಪ್ರಭುತ್ವ ಎಂದು ವರ್ಗೀಕರಿಸಲಾಗಿದೆ.

ಭೂತಾನ್ ನ   ರಾಜಕೀಯ ವ್ಯವಸ್ಥೆಯು ಸಾರ್ವತ್ರಿಕ ಮತದಾನದ ಹಕ್ಕನ್ನು ನೀಡುತ್ತದೆ. ಇದು 25 ಚುನಾಯಿತ ಸದಸ್ಯರನ್ನು ಹೊಂದಿರುವ ಮೇಲ್ಮನೆಯಾದ ರಾಷ್ಟ್ರೀಯ ಮಂಡಳಿಯನ್ನು ಮತ್ತು ರಾಜಕೀಯ ಪಕ್ಷಗಳಿಂದ 47 ಚುನಾಯಿತ ಶಾಸಕರನ್ನು ಹೊಂದಿರುವ ರಾಷ್ಟ್ರೀಯ ಸಭೆಯನ್ನು ಒಳಗೊಂಡಿದೆ.
ಕಾರ್ಯನಿರ್ವಾಹಕ ಅಧಿಕಾರವನ್ನು ಪ್ರಧಾನ ಮಂತ್ರಿ ನೇತೃತ್ವದ ಮಂತ್ರಿ ಮಂಡಳಿಯು ಚಲಾಯಿಸುತ್ತದೆ. ಶಾಸಕಾಂಗ ಅಧಿಕಾರವು ಸರ್ಕಾರ ಮತ್ತು ರಾಷ್ಟ್ರೀಯ ಸಭೆ ಎರಡರಲ್ಲೂ ಇರುತ್ತದೆ. ನ್ಯಾಯಾಂಗ ಅಧಿಕಾರವು ನ್ಯಾಯಾಲಯಗಳಲ್ಲಿದೆ. ಕಾನೂನು ವ್ಯವಸ್ಥೆಯು ಅರೆ-ದೇವಪ್ರಭುತ್ವವಾದಿ ತ್ಸಾ ಯಿಗ್ ಸಂಹಿತೆಯಿಂದ ಹುಟ್ಟಿಕೊಂಡಿದೆ ಮತ್ತು 20 ನೇ ಶತಮಾನದಲ್ಲಿ ಇಂಗ್ಲಿಷ್ ಸಾಮಾನ್ಯ ಕಾನೂನಿನಿಂದ ಪ್ರಭಾವಿತವಾಗಿದೆ . ಮುಖ್ಯ ನ್ಯಾಯಾಧೀಶರು ನ್ಯಾಯಾಂಗದ ಆಡಳಿತ ಮುಖ್ಯಸ್ಥರಾಗಿದ್ದಾರೆ.
ಅಸೆಂಬ್ಲಿಗೆ ಮೊದಲ ಸಾರ್ವತ್ರಿಕ ಚುನಾವಣೆಗಳು ಮಾರ್ಚ್ 24, 2008 ರಂದು ನಡೆದವು. ಜಿಗ್ಮೆ ಥಿನ್ಲೆ ನೇತೃತ್ವದ ಭೂತಾನ್ ಶಾಂತಿ ಮತ್ತು ಸಮೃದ್ಧಿ ಪಕ್ಷ (ಡಿಪಿಟಿ) ಮತ್ತು ಸಂಗಯ್ ನ್ಗೆಡಪ್ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ) ಪ್ರಮುಖ ಸ್ಪರ್ಧಿಗಳಾಗಿದ್ದವು. ಡಿಪಿಟಿ 47 ಸ್ಥಾನಗಳಲ್ಲಿ 45 ಸ್ಥಾನಗಳನ್ನು ಪಡೆದು ಚುನಾವಣೆಯಲ್ಲಿ ಗೆದ್ದಿತು. ಜಿಗ್ಮೆ ಥಿನ್ಲೆ 2008 ರಿಂದ 2013 ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
2013 ರ ಚುನಾವಣೆಯಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಅಧಿಕಾರಕ್ಕೆ ಬಂದಿತು. ಅದು 32 ಸ್ಥಾನಗಳನ್ನು ಮತ್ತು 54.88% ಮತಗಳನ್ನು ಗಳಿಸಿತು. ಪಿಡಿಪಿ ನಾಯಕಿ ತ್ಸೆರಿಂಗ್ ಟೋಬ್ಗೆ 2013 ರಿಂದ 2018 ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
೨೦೧೮ ರ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಯಲ್ಲಿ ಡ್ರೂಕ್ ನ್ಯಾಮ್ರಪ್ ತ್ಶೋಗ್ಪಾ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರು. ಲೋಟೇ ತ್ಶೆರಿಂಗ್ ಅವರನ್ನು ಪ್ರಧಾನಿ ಹುದ್ದೆಗೆ ಮತ್ತು ಡ್ರೂಕ್ ನ್ಯಾಮ್ರಪ್ ತ್ಶೋಗ್ಪಾ ಅವರನ್ನು ಮೊದಲ ಬಾರಿಗೆ ಸರ್ಕಾರಕ್ಕೆ ಕರೆತಂದರು. 
2024 ರ ಚುನಾವಣೆಯ ನಂತರ ಪಿಡಿಪಿ 30 ಸ್ಥಾನಗಳನ್ನು ಗಳಿಸುವುದರೊಂದಿಗೆ ಟೋಬ್ಗೆ ಪ್ರಧಾನಿಯಾಗಿ ಮತ್ತೆ ಅಧಿಕಾರಕ್ಕೆ ಬಂದು ಪ್ರಸ್ತುತ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ನಮ್ಮ ಗೈಡ್ ಮಾಹಿತಿ ನೀಡಿದರು.ಭೂತಾನ್ ‌ನ ಸಂಸತ್ತು ಮತ್ತು ದೊರೆಯ ಬಗ್ಗೆ ಗೌರವ ಭಾವದಿಂದ ಆ ಪ್ರದೇಶದಿಂದ ಹೊರ ನಡೆದು ಭೂತಾನ್ ನ ಇತರೆ ಸ್ಥಳಗಳನ್ನು ಅನ್ವೇಷಣೆ ಮಾಡಲು ಹೊರಟೆವು.


ಭಾರತದ ನೆರೆಯ ದೇಶವಾದ ಭೂತಾನ್ ನ ಪ್ರಕೃತಿ ಸೌಂದರ್ಯ ಸವಿದಿದ್ದ ನಾವು ಅಲ್ಲಿನ ರಾಜಕೀಯ ವ್ಯವಸ್ಥೆ ಮತ್ತು ಸಂಸತ್ತಿನ ರಚನೆಯ ಬಗ್ಗೆ ತಿಳಿದು ಭೂತಾನ್ ಬಗ್ಗೆ ಇದ್ದ ಗೌರವ  ಇಮ್ಮಡಿಯಾಯಿತು.ನೀವೂ ಭೂತಾನ್ ಪ್ರವಾಸಕ್ಕೆ ಬಂದರೆ ಭೂತಾನ್ ಸಂಸತ್ ಮತ್ತು ದೊರೆಯ ಮನೆ ನೋಡಲು ಮರೆಯದಿರಿ.

ಸಿಹಿಜೀವಿ ವೆಂಕಟೇಶ್ವರ.
ತುಮಕೂರು
9900925529


BhutanTour #KingPalace #Sihijeevi #Sihijeeviya #Payana #TravelBhutan #ExploreBhutan #BhutanAdventures #PalaceTour #CulturalExperience #HimalayanJourney #BhutanDiaries #TouristAttractions #BhutanTravel #DiscoverBhutan #TravelVlog #AdventureTravel #NatureLovers #BucketListTravel

02 ಮಾರ್ಚ್ 2026

ನಮ್ಮ ಟೀಮ್ ಇಂಡಿಯಾ ನಮ್ಮ ಹೆಮ್ಮೆ.


 


ಟಾಸ್ ಗೆದ್ದಾಗಲೇ ನಾವು ಗೆದ್ದಾಗಿತ್ತು.ಹಿಡಿಯುವ ಕ್ಯಾಚ್ ಗಳನ್ನು ನೆಲಕ್ಕೆ ಹಾಕಿದ್ದು ತೂತ್ ಫೀಲ್ಡಿಂಗ್ ಮಾಡಿ ಕನಿಷ್ಟ 25 ಹೆಚ್ಚು ರನ್ ಕೊಟ್ಟಾಗ ನನಗೆ ನಮ್ಮ ಟೀಮ್ ಮೇಲೆ ಕೋಪ ಬಂದಿದ್ದು ನಿಜ.ಆದರೆ ನಾವು ಪಕ್ಕಾ ಚೇಸಿಂಗ್ ಮಾಸ್ಟರ್ಸ್ ಎಂಬುದನ್ನು ಇಡೆನ್ ಗಾರ್ಡನ್ ‌ನಲ್ಲಿ ಮತ್ತೊಮ್ಮೆ ಸಾಬೀತು ಮಾಡಿದ್ದೇವೆ.ಸಂಜು ಸಾಮ್ ಸನ್ ರ ಜವಾಬ್ದಾರಿಯುತ ಆಟಕ್ಕೆ ಮೆಚ್ಚುಗೆ ಸೂಚಿಸಲೇಬೇಕು ಆಫ್ ಕೋರ್ಸ್ ಈ ಗೆಲುವಿಹೆ  ತಂಡದ ಎಲ್ಲರೂ ತಮ್ಮ  ಯೋಗದಾನ ನೀಡಿರುವರು.ಇದೇ ಆತ್ಮವಿಶ್ವಾಸದಿಂದ ಆಂಗ್ಲರನ್ನು ಜಯಿಸೋಣ.ಮತ್ತೆ ಓವರ್ ಕಾನ್ಫಿಡೆನ್ಸ್ ಬೇಡ.ಪ್ರತಿ ಓವರ್ ನಲ್ಲಿ ಉತ್ತಮವಾಗಿ ಆಡೋಣ.ಸೇಮೀಸ್ ಅಷ್ಟೇ ಅಲ್ಲ ಪೈನಲ್ ನಲ್ಲೂ ಗೆಲ್ಲೋಣ.ಈ ಸಲನೂ ಕಪ್ ನಮ್ದೇ...
ಅಭಿನಂದನೆಗಳು ಟೀಮ್ ಇಂಡಿಯಾ ಇನ್ ಅಡ್ವಾನ್ಸ್...
ನೀವೂ ವಿಶ್ ಮಾಡಬಹುದು..
#T20WorldCup #ICC #BCCi #TeamIndia #SihijeeviyaPayana #CricketFever #IndiaCricket #T20Cricket #WorldCup2023 #CricketHighlight #GoIndia #SupportIndia #InternationalCricket #CricketLife #SportsHighlights #PlayBold #ChaseYourDreams #CricketPassion #BlueArmy


ಮಂತ್ರಮುಗ್ದಗೊಳಿಸುವ ಮೇಘಾಲಯದ ಉಮ್ಮಿಯಾಮ್ ಸರೋವರ

 

ಮಂತ್ರಮುಗ್ದಗೊಳಿಸುವ ಮೇಘಾಲಯದ  ಉಮ್ಮಿಯಾಮ್ ಸರೋವರ




ಈಶಾನ್ಯ ರಾಜ್ಯಗಳನ್ನು ನೆನೆದರೇನೊ ಪುಳಕ. ಬಹು ಕಾಲದಿಂದ ಈಶಾನ್ಯ ರಾಜ್ಯಗಳಿಗೆ ಪ್ರವಾಸ ಹೊರಡಬೇಕೆಂಬ ಕನಸು ಕೊನೆಗೂ ನನಸಾಗಿತ್ತು. ಅಸ್ಸಾಂನ  ಗುವಾಹಟಿ ನಗರದಿಂದ ನಮ್ಮ ಪ್ರವಾಸ ತಂಡದೊಂದಿಗೆ ಹೊರಟ ನಾವು ಮೇಘಾಲಯದ ಪ್ರಕೃತಿ ಸೌಂದರ್ಯ ಸವಿಯಲು ಸಿದ್ದವಾಗಿತ್ತು. ಬೆಟ್ಟ ಗುಡ್ಡಗಳ ರಸ್ತೆಯಲ್ಲಿ ಚಲಿಸಲು ಸೂಕ್ತವಾದ ಎರಡು ಟೆಂಪೋ ಟ್ರಾವೆಲರ್ಸ್‌‌ ಏರಿ ಉತ್ತಮ ರಸ್ತೆಯಲ್ಲಿ ನಮ್ಮ ಪಯಣ ಮುಂದುವರೆಯಿತು. ರಸ್ತೆಯ ಎಡಬಲಗಳಲ್ಲಿ ಕಾಣುವ ದೃಶ್ಯಗಳನ್ನು ಸವಿಯುತ್ತಾ ಸುಮಾರು ಎರಡು ಗಂಟೆಗಳ ಪ್ರಯಾಣದ ನಂತರ ಕಂಡ ಮೊದಲ ಸ್ವರ್ಗ ಸದೃಶ ತಾಣವೇ ಉಮಿಯಾಮ್ ಸರೋವರ!



ಮೊದಲ ಬಾರಿಗೆ ಕೇಳಿದಾಗ ನನಗೂ ಈ ಸ್ಥಳದ ಉಚ್ಚಾರಣೆ ವಿಚಿತ್ರ ಎನಿಸಿದರೂ ಅದರ  ಅದ್ಭುತ ದೃಶ್ಯಗಳನ್ನು ನಾನು ಕಣ್ತುಂಬಿಕೊಂಡಾಗ ಬಣ್ಣದ ಚಿತ್ರಗಳು ಈಗಲೂ ನನ್ನ ನೆನಪಿನ ಕೋಶದಲ್ಲಿ ಅಚ್ಚಳಿಯದೇ ಉಳಿದಿವೆ. 
ಶಿಲ್ಲಾಂಗ್ ನಗರಕ್ಕೆ ಹೋಗುವ ದಾರಿಯಲ್ಲಿ ಬೆಟ್ಟಗಳ ನಡುವೆ ನೀಲಿ ಬಣ್ಣದಲ್ಲಿ ಮಿನುಗುತ್ತಿರುವ ಉಮಿಯಾಮ್ ಸರೋವರದ ಮೊದಲ ನೋಟವೇ ನನ್ನನ್ನು ಮಂತ್ರಮುಗ್ಧನನ್ನಾಗಿ ಮಾಡಿತು. ಸ್ಥಳೀಯರು ಇದನ್ನು “ಬಾರಾ ಪಾನಿ” ಎಂದೂ ಕರೆಯುತ್ತಾರೆ. ಹೆಸರೇ ಹೇಳುವಂತೆ ‌ಇದೊಂದು   ವಿಶಾಲವಾದ ಮಾನವ ನಿರ್ಮಿತ  ನೀರಿನ ಸಾಗರ!

ನಗರದಿಂದ ಸುಮಾರು 15 ಕಿಮೀ ದೂರದಲ್ಲಿ ಹರಡಿಕೊಂಡಿರುವ ಈ ಜಲಾಶಯವನ್ನು 1960ರ ದಶಕದಲ್ಲಿ  ಅಣೆಕಟ್ಟು ನಿರ್ಮಿಸಿ ಸೃಷ್ಟಿಸಲಾಗಿದೆ. ಬೆಟ್ಟಗಳು, ಹಸಿರು ಕಾಡುಗಳು ಮತ್ತು ನೀರಿನ ನೀಲಿ ಪ್ರತಿಬಿಂಬ  ಇವುಗಳ ಸಮನ್ವಯವು ಈ ಸ್ಥಳವನ್ನು ಸ್ವರ್ಗಸಮಾನವಾಗಿಸುತ್ತದೆ.
ಬೆಳಿಗ್ಗೆ ಹೊತ್ತು ಸರೋವರದ ತೀರದಲ್ಲಿ ನಿಂತಾಗ ಮಂಜಿನ ಚಾದರ ನೀರಿನ ಮೇಲೆ ಹರಡಿಕೊಂಡ  ಸೂರ್ಯೋದಯದ ಕಿರಣಗಳು ನೀರಿನ ಮೇಲೆ ಬಂಗಾರದ ಹಚ್ಚನ್ನು ಹಚ್ಚಿದಂತೆ ಕಾಣುವ ದೃಶ್ಯಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಆ ಕ್ಷಣದಲ್ಲಿ ಕಾಲವೇ ನಿಂತಂತಾಯಿತು.




ಸ್ಥಳೀಯ ಮಾರ್ಗದರ್ಶಕನಿಂದ ತಿಳಿದುಕೊಂಡಾಗ ಈ ಸರೋವರದ ಹಿಂದೆ ಒಂದು ದೊಡ್ಡ ಕಥೆಯಿದೆ ಎಂದು ಅರಿತುಕೊಂಡೆ.  ಈ ಲೇಕ್  ಜಲವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಲಾದ ಈಶಾನ್ಯ ಭಾರತದ ಮೊದಲ ಮಹತ್ವದ ಜಲಾಶಯ ಯೋಜನೆಗಳಲ್ಲಿ ಒಂದಾಗಿದೆ.
ಒಮ್ಮೆ ಇಲ್ಲಿ ಖಾಸಿ ಸಮುದಾಯದ ಗ್ರಾಮಗಳು ನೆಲೆಸಿದ್ದವು. ಅಣೆಕಟ್ಟು ನಿರ್ಮಾಣದಿಂದಾಗಿ ಕೆಲವು ಕುಟುಂಬಗಳು ಸ್ಥಳಾಂತರಗೊಳ್ಳಬೇಕಾಯಿತು. ಈ ವಿಚಾರ ತಿಳಿದಾಗ ಪ್ರಕೃತಿ ಸೌಂದರ್ಯದ ಹಿಂದೆ ಇರುವ ಮಾನವ ಕುಲದ ಮನ ಕಲಕುವ  ಕಥೆಗಳು ನನ್ನ ಮನಸ್ಸನ್ನು ಸ್ಪರ್ಶಿಸಿದವು. ಹೀಗೆ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಕುಟುಂಬಗಳನ್ನು ಸ್ಥಳಾಂತರ ಮಾಡುವುದು ಈಗಲೂ ಮುಂದುವರೆದಿರುವುದನ್ನು ಕಾಣುತ್ತೇವೆ.




ಉಮಿಯಾಮ್ ಸರೋವರ ಪ್ರವಾಸಿಗರಿಗೆ ಕೇವಲ ದೃಶ್ಯ ಸೌಂದರ್ಯವಲ್ಲ  ಸಾಹಸಕ್ಕೂ ಪ್ರಸಿದ್ಧ ಎಂದು ನಮ್ಮ ಟೂರ್ ಗೈಡ್ ಬೆಳಿಗ್ಗೆ ಹೇಳಿದ್ದ ಮಾತು ಕೇಳುತ್ತಾ  ನಾನು ಕಯಾಕಿಂಗ್ ಮಾಡಲು ನಿರ್ಧರಿಸಿದ್ದೆ. ನೀರಿನ ಮಧ್ಯೆ ತೇಲುತ್ತಾ ಬೆಟ್ಟಗಳ ನಡುವೆ ನನ್ನ ಸಣ್ಣ ದೋಣಿ ಸಾಗುತ್ತಿದ್ದ ಕ್ಷಣವನ್ನು ಕಲ್ಪಿಸಿಕೊಂಡು ಮನದಲ್ಲೇ ಖುಷಿ ಪಟ್ಟಿದ್ದೆ ಆದರೆ ಆ ಸ್ಥಳಕ್ಕೆ ಹೋದಾಗ ನನ್ನ ಆಸೆ ಈಡೇರದೇ ಭ್ರಮನಿರಸನಗೊಂಡೆ.
ವಾಟರ್ ಸೈಕ್ಲಿಂಗ್, ಬೋಟ್ ರೈಡ್, ಸ್ಕೂಟಿಂಗ್  ಎಲ್ಲವೂ ಇಲ್ಲಿ ಲಭ್ಯ. ಕುಟುಂಬ ಸಮೇತ ಬಂದ ಪ್ರವಾಸಿಗರು ಹರ್ಷದಿಂದ ಕಾಲ ಕಳೆಯಲು ಅವಕಾಶವಿದೆ ಅದರೆ ನಮ್ಮ ದುರಾದೃಷ್ಟಕ್ಕೆ ಅಂದು ಆ ಎಲ್ಲಾ ಜಲಕ್ರೀಡೆಗಳನ್ನು ಬಂದ್ ಮಾಡಿದ್ದರು.ಆದರೆ ಪ್ರಕೃತಿ ಸೌಂದರ್ಯ ಬಂದ್ ಮಾಡಲು ಸಾಧ್ಯವೆ? ಇನ್ನಷ್ಟು ನಿಸರ್ಗದ ದೃಶ್ಯಗಳನ್ನು ನನ್ನ ಮನದಲ್ಲಿ ತುಂಬಿಕೊಂಡು ಆನಂದಿಸಿದೆ.


ಮಾಮೂಲಿನಂತೆ ನಾವು ಮಾನವರು ಸುಂದರ ತಾಣಗಳನ್ನು ಸುಂದರವಾಗಿರಲು ಎಲ್ಲಿ ಬಿಟ್ಟಿದ್ದೇವೆ?  ಈ ಸುಂದರ ಸರೋವರವೂ ಸವಾಲುಗಳನ್ನು ಎದುರಿಸುತ್ತಿದೆ. ನಗರದ ವೃದ್ಧಿಯಾಗುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಮಾಲಿನ್ಯ ಸಮಸ್ಯೆ ಗಂಭೀರವಾಗಿದೆ. ಸರೋವರಕ್ಕೆ ಸೇರುವ ವಾಹ್ ಉಮ್ಖ್ರಾ ಮತ್ತು ವಾಹ್ ಉಮ್ಶಿರ್ಪಿ ನದಿಗಳು ನಗರ ಒಳಚರಂಡಿಯನ್ನು ತರುತ್ತಿವೆ ಎಂದು ತಿಳಿದು ಬೇಸರವಾಯಿತು.
ಮೊದಲು ಡೀಸೆಲ್ ಚಾಲಿತ ದೋಣಿಗಳನ್ನು ಮನರಂಜನೆಗಾಗಿ ಬಳಸಲಾಗುತ್ತಿತ್ತು.
2023ರಲ್ಲಿ ಮೇಘಾಲಯ ಸರ್ಕಾರ ಸೌರಶಕ್ತಿ ಚಾಲಿತ AI ದೋಣಿಯನ್ನು ನಿಯೋಜಿಸಿದೆ ಎಂಬುದು ಆಶಾದಾಯಕ ಸುದ್ದಿ ಕೇಳಿ ಸಂತಸವಾಯಿತು. ಈ ನವೀನ ಪ್ರಯತ್ನವು ಸರೋವರದ ಸ್ವಚ್ಛತೆಯನ್ನು ಕಾಪಾಡಲು ಮಹತ್ವದ ಹೆಜ್ಜೆಯಾಗಿದೆ.





ಸಂಜೆ ಸಮಯದಲ್ಲಿ ಸರೋವರದ ಲೇಕ್ ವ್ಯೂ ಪಾಯಿಂಟ್‌ನಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡಲು ಸಾವಿರಾರು ಪ್ರವಾಸಿಗರು ಬರುತ್ತಾರೆ. ಆಕಾಶ ಕೆಂಪು-ಕಿತ್ತಳೆ ಬಣ್ಣಗಳಿಂದ ತುಂಬಿಕೊಂಡ. ನೀರಿನ ಮೇಲಿನ ಪ್ರತಿಬಿಂಬ ಚಿತ್ರಕಾರನ ಕಲಾಕೃತಿಯಂತೆ ಕಾಣುತ್ತದೆ. ಇದು ಕೇವಲ ಜಲಾಶಯವಲ್ಲ. ಇದು ಪ್ರಕೃತಿಯ ಮಹತ್ವದ ಪಾಠ. ಮಾನವ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ನಡುವೆ ಸಮತೋಲನ ಅಗತ್ಯ ಎಂಬ ಸಂದೇಶ ಈ ಸರೋವರ ನೀಡುತ್ತದೆ.

ಉಮಿಯಾಮ್ ಸರೋವರ ಪ್ರವಾಸವು ನನಗೆ ಪ್ರಕೃತಿಯ ಸೌಂದರ್ಯ, ಇತಿಹಾಸದ ಸ್ಪರ್ಶ ಮತ್ತು ಪರಿಸರ ಜಾಗೃತಿ ಮೂರನ್ನೂ ಒಟ್ಟಿಗೆ ನೀಡಿದ ಅನುಭವ ನೀಡಿತು. ಮೇಘಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಈ ಸ್ಥಳವನ್ನು ತಪ್ಪದೇ ನೋಡಬೇಕು ಎಂದು ನಾನು ಮನಪೂರ್ವಕವಾಗಿ ಸಲಹೆ ನೀಡುತ್ತೇನೆ.
ಬೆಟ್ಟಗಳ ನಡುವೆ ಮೌನವಾಗಿ ಮಲಗಿರುವ ಆ ನೀಲಿ ಸರೋವರ ನನ್ನ ಮನಸ್ಸಿನಲ್ಲಿ ಸದಾ ಜೀವಂತವಾಗಿಯೇ ಇರುತ್ತದೆ. ಆ ತಾಣದಲ್ಲಿ  ನಾನು ಮಿಸ್ ಮಾಡಿಕೊಂಡ ವಾಟರ್ ಸ್ಪೋರ್ಟ್ಸ್ ಆಡಲು ಮತ್ತು ಸನ್ ಸೆಟ್ ನೋಡಲು ಮತ್ತೊಮ್ಮೆ ಉಮ್ಮಿಯಾಮ್ ಸರೋವರಕ್ಕೆ ಹೋಗಲು ನನ್ನ ಮನ ಹಾತೊರೆಯುತ್ತಿದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು