This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
26 ಸೆಪ್ಟೆಂಬರ್ 2025
ನನ್ನ ಅಕೌಂಟ್ ನಲ್ಲಿ ಒಂದು ಪೈಸೇನೂ ಇರಬಾರದು!
ನನ್ನ ಅಕೌಂಟ್ ನಲ್ಲಿ ಒಂದು ಪೈಸೇನೂ ಇರಬಾರದು!
ಎಸ್ ಎಲ್ ಬೈರಪ್ಪನವರು ಓರ್ವ ಶ್ರೇಷ್ಠ ಕಾದಂಬರಿಕಾರ ಎಂಬುದು ಎಷ್ಟು ಸತ್ಯವೋ ಅವರೊಬ್ಬ ದಾರ್ಶನಿಕ, ಸಂಸ್ಕೃತಿ ಪರಿಚಾರಕ, ನೇರ ನಡೆ ನುಡಿಯ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬಾಳಿದ ಮಹಾನ್ ಚೇತನ ಎಂಬುದು ಅಷ್ಟೇ ಸತ್ಯ.
ಭೈರಪ್ಪ ರವರ ಬಹುತೇಕ ಕೃತಿಗಳನ್ನು ಓದಿರುವೆ.ಕೆಲವನ್ನು ಮತ್ತೆ ಮತ್ತೆ ಓದಿದ್ದೇನೆ. ಕೆಲ ಕೃತಿಗಳ ಬಗ್ಗೆ ನನ್ನ ಲಿಖಿತ ಅಭಿಪ್ರಾಯಗಳನ್ನು ಬರೆದು ಪತ್ರಿಕೆ ಮತ್ತು ಪುಸ್ತಕಗಳಲ್ಲೂ ಪ್ರಕಟಿಸಿರುವೆ.
ಬೈರಪ್ಪ ರವರ ನಿಷ್ಠುರವಾದ ಮಾತುಗಳು ನನ್ನ ಗಮನ ಸೆಳೆದವು. ಇತರರು ಏನೆಂದು ಕೊಂಡಾರು ಎಂದು ಯೋಚಿಸದೇ ಆನೆ ನಡೆದದ್ದೇ ದಾರಿ ಎಂದು ಬದುಕಿ ತೋರಿಸಿದರು.
ಇತ್ತೀಚಿನ ದಿನಗಳಲ್ಲಿ ಅವರೊಂದು ಹೇಳಿಕೆ ನೀಡಿದರು."ನಾನು ಸಾಯೋವಾಗ ನನ್ನ ಅಕೌಂಟ್ ನಲ್ಲಿ ಒಂದು ಪೈಸೆಯೂ ಇರಬಾರದು ಎಲ್ಲವನ್ನೂ ಫ್ಲಷ್ ಮಾಡಿಬಿಡಬೇಕು" ಈ ಮಾತು ಕೇಳಿ ಭೈರಪ್ಪನವರ ಬಗ್ಗೆ ಇದ್ದ ಅಭಿಮಾನ ನೂರ್ಮಡಿಯಾಯಿತು. ಹೌದು ಅದರಂತೆ ನಡೆದು ತೋರಿಸಿದರು. ಅವರ ಇದುವರೆಗಿನ ಸಂಪಾದನೆ ಮತ್ತು ಮುಂದೆ ಅವರ ಪುಸ್ತಕಗಳಿಂದ ಬರುವ ರಾಯಲ್ಟಿ ಹಣವನ್ನು ಒಂದು ಟ್ರಸ್ಟ್ ಗೆ ವರ್ಗಾಯಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗವಾಗಲು ಕ್ರಮ ಕೈಗೊಂಡಿದ್ದಾರೆ. ತನ್ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಅನವಶ್ಯಕವಾಗಿ ಎಸ್ ಎಲ್ ಬಿ ಯವರನ್ನು ಟೀಕಿಸುವ ಪೂರ್ವಾಗ್ರಹ ಪೀಡಿತರೂ ಸಹ ಇವರ ಇಂತಹ ಜನೋಪಯೋಗಿ ನಡೆಗಳನ್ನು ಕಂಡು ಬಾಯಿ ಮುಚ್ಚಿಕೊಂಡು ಮೆಚ್ಚುಗೆ ಸೂಚಿಸಿದ ಪ್ರಸಂಗಗಳಿವೆ.
ಡಾಲರ್ ಗಟ್ಟಲೆ ಸಂಪಾದಿಸಿ ಐಶಾರಾಮಿ ಜೀವನ ನಡೆಸಲು ಉನ್ನತ ಹುದ್ದೆಗೆ ಏರಲು ಅವಕಾಶಗಳಿದ್ದರೂ ನಯವಾಗಿ ನಿರಾಕರಿಸಿ ಲಕ್ಷ್ಮಿಯ ಹಿಂದೆ ಹೋಗದೇ ಸರಸ್ವತಿ ಸೇವೆಯನ್ನು ಮಾಡಿದ್ದಕ್ಕಾಗಿ ಕರ್ನಾಟಕಕ್ಕೆ ಮೊದಲ "ಸರಸ್ವತಿ ಸಮ್ಮಾನ್" ಹುಡುಕಿಕೊಂಡು ಬಂತು. ನಾನೂ ಬಾಲ್ಯದಲ್ಲಿ ಹಲವು ಸಂಕಷ್ಟಗಳನ್ನು ಅನುಭವಿಸಿದರೂ ಬೈರಪ್ಪರವರ ಬಾಲ್ಯದ ಕಷ್ಟಗಳ ಮುಂದೆ ನನ್ನದೇನೂ ಅಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವೆ.ಆನಂದಸ್ವಾಮಿಯವರ ಪುಸ್ತಕಗಳು, ಅವರ ಫಿಲಾಸಫಿ ಗುರುಗಳಾದ ಯಮುನಾಚಾರ್ಯ ರವರು ಅವರ ಮೇಲೆ ಬಹು ಪ್ರಭಾವ ಬೀರಿದ ವ್ಯಕ್ತಿತ್ವಗಳು ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು.ಇದರ ಜೊತೆಯಲ್ಲಿ ಅವರ ದೇಶ ಸುತ್ತುವ, ಕೋಶ ಓದುವ, ಸಾಮಾನ್ಯ ಜನರೊಂದಿಗೆ ಬೆರಯುವ, ಕ್ಷೇತ್ರಕಾರ್ಯವನ್ನು ಮಾಡಿ ಅನುಭವದ ಮೂಲಕ ಬರೆಯುತ್ತಿದ್ದ ರೀತಿಗೆ ಇಂದು ನಮ್ಮ ಮುಂದೆ ಕ್ಲಾಸಿಕ್ ಕೃತಿಗಳಿವೆ.ನಮ್ಮ ದೇಶದ ಬೇರೆ ಭಾಷೆಗಳು, ಅಷ್ಟೇ ಏಕೆ ವಿದೇಶಿ ಭಾಷೆಗಳಿಗೂ ಅವರ ಕೃತಿಗಳು ಅನುವಾದಗೊಂಡು ಈಗಲೂ ಅವರ ಕೃತಿಗಳನ್ನು ಓದುತ್ತಿದ್ದಾರೆ.ಆ ಮೂಲಕ ಭೈರಪ್ಪನವರು ಚಿರಂಜೀವಿಯಾಗಿರುತ್ತಾರೆ.
ಭೈರಪ್ಪನವರ ಮತ್ತೊಂದು ಮಾತನ್ನು ನಾನು ಆಗಾಗ್ಗೆ ಜ್ಞಾಪಿಸಿಕೊಂಡು ನನಗೆ ನಾನೇ ಎಚ್ಚರಿಸಿಕೊಳ್ಳುತ್ತೇನೆ. ಅದೇನೆಂದರೆ "ಊರ ದೇವರು ಊರಾಡಿದಷ್ಟೂ ಮೂಲ ವಿಗ್ರಹಕ್ಕೆ ಬೆಲೆ ಕಡಿಮೆ ಆಗುತ್ತದೆ" ನಮ್ಮಲ್ಲಿ ಬಹಳ ಜನ ನಮ್ಮ ನೈಜ ಸಾಹಿತ್ಯ ಶಕ್ತಿಯನ್ನು ಹೊರತರುವ ಬದಲಿಗೆ ಅಲ್ಪ ಬರೆದು ಅದನ್ನೇ ವಿಜೃಂಭಿಸುವ ಮತ್ತು ಸೆಲಬ್ರೇಟ್ ಮಾಡಿಕೊಂಡು ಸೆಲೆಬ್ರಿಟಿಯಾಗಿ ಸ್ವಯಂ ಬಿಂಬಿಸಿಕೊಳ್ಳುವವರಿಗೆ ಅವರ ಮಾತುಗಳು ನೆನಪಾಗಬೇಕು.
ಭಾರತೀಯ ತತ್ತ್ವಶಾಸ್ತ್ರದಲ್ಲಿ ಬರುವ ಮತ್ತೊಂದನ್ನು ಅವರು ಆಗಾಗ್ಗೆ ಹೇಳುತ್ತಿದ್ದ ಮಾತು ನನಗೆ ಪದೇ ಪದೇ ನೆನಪಾಗುತ್ತದೆ.ಅದು" The lower value should always serve the higher, the higher is always valuable than lower "
ಸಮಾಜದಲ್ಲಿ ಮೌಲ್ಯಗಳ ಅಧಃಪತನವಾಗುತ್ತಿರುವ ಈ ಕಾಲಘಟ್ಟದಲ್ಲಿ ಭೈರಪ್ಪನವರ ಜೀವನವು ನಮಗೆ ಪ್ರೇರಣೆಯಾಗಲಿ.
ಸಿಹಿಜೀವಿ ವೆಂಕಟೇಶ್ವರ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ