ಉಸಿರುಗಟ್ಟುವ ವಾತಾವರಣ ತ್ಯಜಿಸಿ ಉಸಿರಾಡೋಣ.
ನಾವು ಕೊಳ್ಳುಬಾಕ ಸಂಸ್ಕೃತಿಯ ದಾಸರಾಗಿ ವಿವಿಧ ಆನ್ಲೈನ್ ಪ್ಲಾಟ್ ಫಾರ್ಮ್ ಮೂಲಕ ಹಬ್ಬ, ಹುಟ್ಟು ಹಬ್ಬ, ಮದುವೆ, ಮುಂಜಿ ಹೀಗೆ ವಿವಿಧ ಕಾರಣದಿಂದಾಗಿ ಬೇಕಿದ್ದು ಬೇಡವಾದ್ದು ಖರೀದಿಸಿ ನಮ್ಮ ಬೀರುಗಳು,ವಾರ್ಡ್ ರೋಬ್ ಗಳು ತುಂಬಿ ತುಳುಕುವಷ್ಟು ಶಾಪಿಂಗ್ ಮಾಡುತ್ತೇವೆ.ಹಣ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಬಳಸಿಯಾದರೂ ಕೊಳ್ಳುತ್ತೇವೆ. ಕೊಂಡ ವಸ್ತುಗಳನ್ನು ಮನೆಯಲ್ಲಿ ಪೇರಿಸಿಕೊಂಡು ಇ ಎಂ ಐ ಕಟ್ಟುತ್ತಾ, ಸಾಲ ತೀರಿಸುವ ಟನ್ಷನ್ ನಲ್ಲಿ ಕೆಲವೊಮ್ಮೆ ಉಸಿರುಗಟ್ಟಿದ ವಾತಾವರಣದಲ್ಲಿ ಜೀವಿಸುತ್ತೇವೆ. ಮಾಲ್ ಸಂಸ್ಕೃತಿ ಇದಕ್ಕೆ ಪ್ರಚೋದನಕಾರಿ. ಹಾಗೆಂದ ಮಾತ್ರಕ್ಕೆ ನೀವು ಕಂಜ್ಯೂಸ್ ಆಗಿ ಎಂತಲೂ ನಾನು ಹೇಳುವುದಿಲ್ಲ.
ಬೇಕಾದ್ರೆ ಉಪಯೋಗಕ್ಕೆ ಎನ್ನುವ ಡಬ್ಬಿಗಳು, ನೆನಪಿಗೂ ಬರದ ಹಳೆಯ ಸ್ಮರಣಿಕೆಗಳು. ನಾವು ಖರೀದಿಸುತ್ತೇವೆ. ಸಂಗ್ರಹಿಸುತ್ತೇವೆ.ಅಪ್‌ಗ್ರೇಡ್ ಮಾಡುತ್ತೇವೆ.ಆದರೆ ಕೊನೆಗೆ ಯಾವುದೋ ನಮಗಿಷ್ಟದ ಹಳೆ ಶರ್ಟ್ ಹುಡುಕಿ ಇದೊಂದೇ ಸಾಕು ಎಂದು ಹಾಕಿಕೊಂಡು ನಡೆದುಬಿಡುತ್ತೇವೆ. ಇವೆಲ್ಲವುಗಳ ಬಗ್ಗೆ
ಜೆಮ್ಸ್ ವಾಲ್ಮನ್ ರವರು “Stuffocation” ಎಂಬ ಪುಸ್ತಕದಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ.
ನಾವೆಲ್ಲರೂ ಸಂತೋಷವನ್ನು ವಸ್ತುಗಳನ್ನು ಹೆಚ್ಚು ಗುಡ್ಡೇ ಹಾಕುವುದರಲ್ಲಿ ಬೇರೆಯವರಿಗಿಂತ ಹೆಚ್ಚು ವಸ್ತುಗಳನ್ನು ಶೇಖರಣೆ ಮಾಡುವುದರಲ್ಲಿ ಹುಡುಕುವ ಭರದಲ್ಲಿ ನಿಜಕ್ಕೂ ಈ ವಸ್ತುಗಳ ಅಗತ್ಯ ನನಗಿದೆಯಾ? ಎಂಬು ಸ್ವಯಂ ಪ್ರಶ್ನಿಸಿಕೊಳ್ಳುವ ಮನೋಭಾವ ಕಾಣೆಯಾಗಿದೆ.
ಗ್ರಾಹಕ ಕೇಂದ್ರಿತ ಕನಸುಗಳಿಂದ ತುಂಬಿರುವ ಮನೆಗಳು, ಸ್ಥಾನಮಾನಕ್ಕಾಗಿ ಕಟ್ಟಲ್ಪಟ್ಟ ದೊಡ್ಡ ಕಚೇರಿಗಳು ಇಂದಿನ ಟ್ರೆಂಡ್. ಹೆಚ್ಚು ವಸ್ತುಗಳಿದ್ದರೆ ಉತ್ತಮ ಜೀವನ ಎಂಬ ಭ್ರಮೆಯಲ್ಲಿ ಸಿಕ್ಕಿಹಾಕಿಕೊಂಡು ಜೀವಿಸುತ್ತಿದ್ದೇವೆ.
ವಸ್ತುಗಳು ಕೇವಲ ನಮ್ಮ ಕೋಣೆ ಮತ್ತು ಕಟ್ಟಡಗಳನ್ನು ತುಂಬಿಸಬಹುದು.ಆದರೆ ಆ ವಸ್ತುಗಳನ್ನು ಬಳಸಿದ ನೆನಪುಗಳು ವಸ್ತುವಿಗಿಂತ ಹೆಚ್ಚು ದೀರ್ಘಕಾಲದ ಸಂತೋಷವನ್ನು ನೀಡುತ್ತವೆ. ಉದಾಹರಣೆಗೆ ನಾವು ಖರೀದಿಸಿದ ಬೂಟುಗಳನ್ನು ನೆನಪಿಡುವುದಿಲ್ಲ. ಆದರೆ ಅವುಗಳನ್ನು ಧರಿಸಿ ನೃತ್ಯ ಮಾಡಿದ ಆ ರಾತ್ರಿ ಎಂದಿಗೂ ಮರೆಯಲಾಗುವುದಿಲ್ಲ. ಅನುಭವಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ.
ನಾವು ನಮ್ಮಲ್ಲಿರುವ ಆಸ್ತಿ ಅಂತಸ್ತು ಸಂಪತ್ತು ಪ್ರದರ್ಶನಕ್ಕೆ ಹಾತೊರೆಯುತ್ತೇವೆ. ತೋರಿಸಬೇಕಾದದ್ದು ಸ್ಥಾನಮಾನಗಳನ್ನಲ್ಲ.ಬದಲಿಗೆ ನಮ್ಮ ಜೀವನವನ್ನು ಪ್ರವಾಸಗಳು, ಆಳವಾದ ಸ್ನೇಹಗಳು, ಕಲಿತ ಕೌಶಲ್ಯಗಳು, ನೋಡಿದ ಸ್ಥಳಗಳಿಂದ ಅರ್ಥಪೂರ್ಣ ಮಾಡಿಕೊಳ್ಳಬೇಕು. ಇವೇ ನಿಜವಾದ ಟ್ರೋಫಿಗಳು!
ನಾವು ಸರಳವಾದಂತೆ ಜೀವನ ವಿಸ್ತರಿಸುತ್ತದೆ.
ಅವ್ಯವಸ್ಥೆ ಹೋಗಿ ಶಕ್ತಿ ಮರಳುತ್ತದೆ. ಬಯಕೆಗಳು ಕಡಿಮೆಯಾದಾಗ ಕೃತಜ್ಞತೆ ಬೆಳೆಯುತ್ತದೆ. ಹೆಚ್ಚು ಬೇಕು ಎಂದು ಓಡುವುದನ್ನು ನಿಲ್ಲಿಸಿದಾಗ ಸಾಕು ಎಂಬುದನ್ನು ಅರಿಯುತ್ತೇವೆ.ಇನ್ನಾದರೂ ನಾವು ನಮ್ಮದೇ ಅತಿಯಾದ ವಸ್ತುಗಳಿಂದ ನಮಗರಿವಿಲ್ಲದೇ ಉಸಿರುಗಟ್ಟುವುದನ್ನು ತಪ್ಪಿಸಿಕೊಂಡು ಅರ್ಥಪೂರ್ಣವಾಗಿ ಜೀವಿಸೋಣ.
ನಮ್ಮ ಯಶಸ್ಸಿನ ಮಾನಕಗಳು ಎಷ್ಟು ವಸ್ತುಗಳನ್ನು ಹೊಂದಿದ್ದೇವೆ ಎಂಬುದಲ್ಲ. ಎಷ್ಟು ಕಾಲ ಸಂತಸದಿಂದ ಬದುಕಿದ್ದೇವೆ ಎಂಬುದರಿಂದ ಅಳೆಯಬೇಕಾಗಿದೆ.
ಅದನ್ನು ಅರಿತ ಕ್ಷಣ ನಿಜವಾಗಿಯೂ ಮತ್ತೆ ನಾವು ಹೊಸದಾಗಿ ಉಸಿರಾಡಲು ಆರಂಭಿಸಿದಂತಾಗುತ್ತದೆ. ಅಂತಹ ಜೀವನದ ಕಡೆ ಸಾಗೋಣ..
ಸಿಹಿಜೀವಿ ವೆಂಕಟೇಶ್ವರ
ತುಮಕೂರು

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ