27 ಜನವರಿ 2018

ಹನಿಗವನಗಳು ( ಗಣರಾಜ್ಯ ದಿನ)

ಹನಿಗವನಗಳು ( ಗಣರಾಜ್ಯ ದಿನ)

*೧*
*ಎಚ್ಚರಿಕೆ*

ನಾವೆಲ್ಲರೂ ಸೇರಿ
ಒಟ್ಟಾಗಿ ಆಚರಿಸಿದರೆ
ಗಣತಂತ್ರ ದಿನ
ಒಗ್ಗಟ್ಟಿಲ್ಲದೇ ಕಿತ್ತಾಡಿ
ಬಡಿದಾಡಿಕೊಂಡರೆ
ಮುಂದೆ ಬರುವುದು
ಅತಂತ್ರ ದಿನ

*೨*

*ಅಸಹಾಯಕರು*


ನಮ್ಮ ಗಣರಾಜ್ಯೋತ್ಸವದಲ್ಲಿ
ಪಾಲ್ಗೊಂಡರು ೧೦ ದೇಶದ
ನಾಯಕರು
ಹುಲಿಯಂತೆ ಗರ್ಜಿಸುತ್ತಿದ್ದ
ನಮ್ಮ ವೈರಿದೇಶಗಳಿಗೆ
ಅನಿಸುತಿದೆ
ನಾವೀಗ ಬರೀ
ಅಸಹಾಯಕರು

*೩*

*ತಾಕತ್ತು*

ಗಣರಾಜ್ಯೋತ್ಸವದಲ್ಲಿ
ಈಬಾರಿ ಪಾಲ್ಗೊಂಡ
ವಿದೇಶಿ ನಾಯಕರು
ಹತ್ತು
ನಮ್ಮ ವೈರಿದೇಶಗಳು
ಸುಸ್ತಾಗಿವೆ
ಅತ್ತು ಅತ್ತು
ಇದು ಭಾರತದ
ತಾಕತ್ತು

 *ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 ಜನವರಿ 2018

*ಯರಬಳ್ಳಿ ಮಾರಮ್ಮ*(ಭಕ್ತಿಗೀತೆ)

*ಯರಬಳ್ಳಿ ಮಾರಮ್ಮ*

ನಮ್ಮ ಕಾಪಾಡಲು  ಬಾರಮ್ಮ
ಯರಬಳ್ಳಿಯ ದೇವಿ  ಮಾರಮ್ಮ|ಪ|

ಯರಬಳ್ಳಿಯಲಿ ನೆಲೆಸಿಹ ತಾಯಿ
ನಮ್ಮೆಲ್ಲರ ಹರಸು ಮಹಾತಾಯಿ
ತಳಿರು ತೋರಣವ  ಕಟ್ಟುವೆವು
ತಂಬಿಟ್ಟು ಆರತಿ ಬೆಳಗುವೆವು|೧|

ವರುಷದ ಜಾತ್ರೆಯ ಮಾಡುವೆವು
ಗಾವು ಸಿಡಿ ಸೇವೆ ಅರ್ಪಿಸುವೆವು
ಜಲದಿ ಉತ್ಸವಕೆ ನಗುತ ಸಾಗು
ನಮ್ಮಯ ದುರಿತಗಳ  ನೀ ನೀಗು|೨|

ಹೊಳೆಯ ಪೂಜೆಯ ಮಾಡುವೆವು
ಹಳೆ ಕೊಳೆ ಕಳೆಯಲು ಬೇಡುವೆವು
ಬಾನಗುರಿ ಸೇವೆಯ ಮಾಡುವೆವು
ಊರ ಸುತ್ತ ತಳಿಯ  ಹಾಕುವೆವು|೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 ಜನವರಿ 2018

ಪುಟ್ಟನ ಶಿಕ್ಷಣ (ಶಿಶುಗೀತೆ)

ಶಿಶುಗೀತೆ

*ಪುಟ್ಟನ ಶಿಕ್ಷಣ*

ಒಂದು ಎರಡು
ಶಾಲೆಗೆ ಹೊರಡು

ಮೂರು ನಾಲ್ಕು
ಪಾಠವು ಬೇಕು

ಐದು ಆರು
ಗೆಳೆಯರ ಸೇರು

ಏಳು ಎಂಟು
ಆಟವು ಉಂಟು

ಒಂಭತ್ತು ಹತ್ತು
ಅರಿವನು ಬಿತ್ತು

ಒಂದರಿಂದ ಹತ್ತು  ಹೀಗಿತ್ತು
ಕಲಿಕೆಯ ದಾರಿಯು ಸೊಗವಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

24 ಜನವರಿ 2018

ಹಾಡುವೆನು (ಭಾವಗೀತೆ)ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನಿಂದ ಉತ್ತಮ ಗೀತೆ ಪುರಸ್ಕಾರ ಲಬಿಸಿದೆ


*ಭಾವಗೀತೆ*

*ಹಾಡುವೆನು*

ಹಾಡೊಂದ ನಾ ಹಾಡುವೆನು
ಕೇಳುಗರ ಮನ ತಣಿಸುವೆನು
ನೋವಿದೆ ನಲಿವಿದೆ ಹಾಡಲಿ
ಕೇಳುಗರಿಲ್ಲದೇ ಹೇಗೆ ಹಾಡಲಿ

ನಿಮ್ಮ ಮಂತ್ರಮುಗ್ಧಗೊಳಿಸುವೆ
ರಾಗ ರಸಗಳಲಿ ಮೈಮರೆಸುವೆ
ಮನರಂಜನೆಯನೀಗ ನೀಡುವೆ
ಮನಕಾನಂದವನು ಈಯುವೆನು

ಬೇಧ ಭಾವಗಳಿಲ್ಲ ನನ್ನ ಹಾಡಲ್ಲಿ
ಹಿರಿ ಕಿರಿಯರ ಗೊಡವೆಗಳಿಲ್ಲ
ಸ್ಪೃಶ್ಯಾಸ್ಪೃಶ್ಯತೆ ಗಾನಕೆ ತಿಳಿದಿಲ್ಲ
ಕಿತ್ತಾಟ ಕಚ್ಚಾಟ ಇಲ್ಲವೇ ಇಲ್ಲ

ದೇವನೊಲಿಸುವೆ ನನ್ನ ಹಾಡಲಿ
ದಾನವರ ಹಳಿವೆ ಹಾಡುತ ಜಗದಲಿ
ಕೆಡಿಸುವ ಮಾತಿಲ್ಲ ಗಾಯನದಲಿ
ಕೂಡಿಸುವೆ ಎಲ್ಲರ ನನ್ನ ಹಾಡಲಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

23 ಜನವರಿ 2018

ಹನಿಗವನಗಳು (ಹಾಡು)



ಹನಿಗವನಗಳು

*ಕೈಚಳಕ*

ಹಾಡುಗಾರ ಹಾಡುತ್ತಿದ್ದನು
ತನ್ಮಯದಿಂದ
ಕೇಳುಗರು ಕೇಳುತ್ತಿದ್ದರು
ಆನಂದದಿಂದ
ಕಿಸೆಗಳ್ಳರು ಹಣ ಎಗರಿಸಿದ್ದರು
ಕೈಚಳಕದಿಂದ


*ತಾಕತ್ತು*

ನನ್ನ ಹಾಡಲಿ ಜನರ ಸೆಳೆವ
ಶಕ್ತಿಯಿದೆ
ನೋವ ಮರೆಸುವ
ಔಷಧವಿದೆ
ಎಡವಟ್ಟಾದರೆ ಕೊಳೆತ ಮೊಟ್ಟೆ
ತರುವ ತಾಕತ್ತಿದೆ


*ಭಾವನೆ*

ಗೋಷ್ಠಿ ಮುಗಿಸಿದ ಗಾಯಕ
ಕೇಳಿದ ಸಂಭಾವನೆ
ಆಯೋಜಕನೆಂದನು
ನೀವು ನಮ್ಮವರೆಂಬ
ಭಾವನೆ
ನೀವು ನಮ್ಮ ತಂಗಿಯ
ಮಧುವೆಯಾಗದಿದ್ದರೂ
ನನ್ನ ಭಾವನೇ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*