ಭಾವಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಾವಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

24 ಆಗಸ್ಟ್ 2021

ನೋವುಗಳು ನೂರಿವೆ....



ನನ್ನ ಕಣ್ಣಂಚಲಿ

 ಇಳಿಯುತಿವೆ ನಾಲ್ಕು ಹನಿ

 ಕಾಣಲಾರಿರಿ ನೀವು

 ನನ್ನ ಮನದ ದನಿ. 


ನೋವುಗಳು ನೂರಿವೆ

 ಹೇಳಲಾರೆನು ಎಲ್ಲರಿಗೆ

ನುಂಗಿರುವೆ ಸಾವಿರ

 ಅವಮಾನಗಳು ಗೊತ್ತು ಅವನಿಗೆ

 

ಜೀವನವೇ ಆಟವೆಂಬುದು

 ನನಗೆ ಮೊದಲು ತಿಳಿದಿರಲಿಲ್ಲ

 ನಾಟಕದ ಮಂದಿಯ ಆಟವನ್ನು

 ದಿನವೂ ವೀಕ್ಷಿತಿರುವೆನಲ್ಲ  


ಬಾಳೆಂಬ ನನ್ನ ಬಾಳೆಲೆ

 ಮುಳ್ಳಿನ ಮೇಲಿದೆ

 ಹರಿಯದೆ ಬಿಡಿಸಿಕೊಳ್ಳುವೆ

 ಮನದಲಿ ಆತ್ಮವಿಶ್ವಾಸವಿದೆ. 


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ. 

 

18 ಮೇ 2020

ನೀನೆಂದು ಬರುವೆ ? (ಭಾವಗೀತೆ)


*ನೀನೆಂದು ಬರುವೆ?* ‌ಭಾವಗೀತೆ

ನಲ್ಲೆ  ನೀನೆಂದು ಬರುವೆ
ಕರೆಯಲು ತರಂಗ ಕಳಿಸಿರುವೆ|ಪ|

ಹೃದಯದಾಳದಲಿ ಹುದುಗಿವೆ
ನೂರಾರು ಭಾವನೆಗಳ ಬಣವೆ
ಬಂದು ಬಿಡು ಈಗಲೆ
ಭಾವ ತರಂಗಗಳ ಕಳಿಸಿರುವೆ||

ನನ್ನ ದೇಹದ ಕಣಕಣದಲಿ
ಬರಿ ನೀನೆ ನೆಲೆಸಿರುವೆ
ಪ್ರೇಮಿಯ ಕೂಡಲು ಬಾ
ಪ್ರೇಮ ತರಂಗಗಳ ಕಳಿಸಿರುವೆ||

ನೀ ನನ್ನೆದೆಯ ಹೃದಯ
ವೀಣೆಯಲಿ ನೆಲೆಸಿರುವೆ
ನಿನ್ನ ಕರೆತರಲು ಈಗ
ನಾದತರಂಗಗಳ ಕಳಿಸಿರುವೆ||

*ಸಿ ಜಿ ವೆಂಕಟೇಶ್ವರ*


30 ಏಪ್ರಿಲ್ 2020

ಬರಬಾರದೆ ( ಭಾವಗೀತೆ )

*ಬರಬಾರದೆ* (ಹೆಣ್ಣಿನ ಸ್ವಗತ)
ಭಾವಗೀತೆ

ನನ್ನ ಇನಿಯ,ಮನದ ಗೆಳೆಯ, ಕಾದಿರುವೆ ನಾ, ನೀನೀಗ ಬರಬಾರದೆ |
ಕನಸಲ್ಲೂ ನೀ  ಮನದಲ್ಲೂ ನೀ,ಬಂದು ಈಗ
ಬಿಗಿದಪ್ಪಿಕೊಳಬಾರದೆ|
ನೀ ಇರುವ ಕ್ಷಣವು,ಸ್ವರ್ಗವು ಧರೆಗಿಳಿಯದೆ?||ಪ||

ನೀನಿರಲು ಗೆಲುವು,ನೀನೇನೆ ಒಲವು,ಪ್ರೀತಿಗೆ ಆಶಾಕಿರಣ|
ಒಲವಿನ ರಾಜ ,ಚೆಲುವಿನ ಸ್ನೇಹಿತ,
ನೀ ನನ್ನಯ ಅರುಣ|
ನೀನೇನೆ ಮಾರ, ಜೊತೆಯಾಗು ಬಾರ||
ಮನದನ್ನೆಯ ವರಿಸು ಬಾ|
ಧಿಕ್ಕರಿಸಿದೆ ನಾನು, ಅಪರಂಜಿಯು ನೀನು|
ಬದಲಾದ ಗೆಳತಿಗೆ
ಅವಕಾಶ ಕೊಡಬಾರದೆ|| ಪ||

ಆ ನಿನ್ನ ಸ್ಪರ್ಶ ,ನೀ ಕೊಟ್ಟು ಮುತ್ತು, ಎಡೆಬಿಡದೇ ನೆನೆಪಾಗಿದೆ|
ನಿದಿರೆ ಬರುತಿಲ್ಲ ,ಏನೂ ರುಚಿಸಲ್ಲ
ಏನೆಂದು ನಾ ಹೇಳಲಿ|
ಬರದಿದ್ದರೆ ನೀನು ,ನಾ ಬಾವಿ ಪಾಲು||
ಬರದೇ ನೀನಿರುವೆಯಾ?
ನೀ  ಬಂದೇ ಬರುವೆ ಪ್ರೇಮಾಮೃತ ತರುವೆ|
ಭರವಸೆಯು ನನಗಿದೆ
ನೀ ಬೇಗ ಬರಬಾರದೆ||ಪ||

*ಸಿ ಜಿ ವೆಂಕಟೇಶ್ವರ*
*ತುಮಕೂರು*

22 ಏಪ್ರಿಲ್ 2020

ಸಹನೆ ಬೇಕು (ಭಾವಗೀತೆ)

*ಸಹನೆ ಬೇಕು*

(ಇಂದು ೨೧/೪/೨೦೨೦ ವಿಶ್ವ ಸೃಜನಶೀಲ ದಿನ)

ಕುಂಚವನಿಡಿದು ಬಣ್ಣಗಳ
ಚಿತ್ತಾರದಿಂದ ಚಿತ್ರ ಬಿಡಿಸಬೇಕು
ಆಹಾ ಎನ್ನುವ ಕಲಾಕೃತಿ
ರಚಿಸಲು ಕಲಾವಿದಗೆ ಸಹನೆ ಬೇಕು.

ಶೃತಿ ,ಲಯ, ಯತಿ ಗತಿ
ರಾಗ ತಾಳ ಗೊತ್ತಿರಬೇಕು
ಕಿವಿಗಿಂಪಾದ ಹಾಡು ಹಾಡಲು
ಸಂಗೀತಗಾರನಿಗೆ ಸಹನೆ ಬೇಕು.

ಮುದ್ರೆ, ಭಾವನೆ ತಾಣಗಳ
ಆಳವಾದ ಅಭ್ಯಾಸವಿರಬೇಕು
ಮನತಣಿಸುವ ನರ್ತನ ಮಾಡಲು
ನೃತ್ಯಗಾರ್ತಿಗೆ ಸಹನೆ ಬೇಕು

ಕಗ್ಗಲ್ಲನು  ಕಡೆದು ತಿದ್ದಿ ತೀಡಿ
ಮೂರುತಿ ಕೆತ್ತನೆ ಮಾಡಬೇಕು
ಕಣ್ಮನ ಸೆಳೆವ ಕಲಾಕೃತಿಗಳ
ರಚಿಸಲು ಶಿಲ್ಪಿಗೆ ಸಹನೆ ಬೇಕು.

*ಸಿ ಜಿ ವೆಂಕಟೇಶ್ವರ*
*ತುಮಕೂರು*





18 ಏಪ್ರಿಲ್ 2020

ಕೂಡಿ ಬಾಳೋಣ (ಭಾವಗೀತೆ)

*ಕೂಡಿ ಬಾಳೋಣ*


ಕನಸುಗಳ ಮೂಟೆಯನ್ನು ಹೊತ್ತು
ಮನಸಿಟ್ಟು ಕಾಯಕ ಮಾಡೋಣ
ಮನಸುಗಳನ್ನು  ಬೆಸೆಯುತ್ತಾ
ಕೂಡಿಬಾಳಿ ಸ್ವರ್ಗಸುಖ ಕಾಣೋಣ||

ಸಹನೆಯ ತೋರತ ಸರ್ವರೆಡೆಗೆ
ಸಮರಸದಿ ಬಾಳಿ ಬದುಕೋಣ
ನಾನು ಅವನೆಂಬ ಭೇದ ತೊರೆದು
ಅವನಿಯಲಿ ಕೂಡಿ ಬಾಳೋಣ.||

ಅಸಮಾನತೆಯನ್ನು ತೊರೆಯುತ
ಸಮತೆಯನು ಪ್ರತಿಪಾದಿಸೋಣ
ಆ ಜನ ಈಜನ ಎಂದು ನೋಡದೆ
ಜನಾರ್ದನ ಮೆಚ್ಚುವಂತಿರೋಣ.||

ನಾಕುದಿನದ ಬಾಳಲಿ ಕಚ್ಚಾಟವೇಕೆ?
ಸಹಬಾಳ್ವೆಯನ್ನು ನಡೆಸೋಣ
ಕವಿಜನರು ಕಂಡ ಕನಸಂತೆ
ಭುವಿಯನ್ನು ನಾಕವ ಮಾಡೋಣ.||

*ಸಿ ಜಿ ವೆಂಕಟೇಶ್ವರ*
*ತುಮಕೂರು*

15 ಏಪ್ರಿಲ್ 2020

ಆರೈಕೆ ಮಾಡು(ಕವನ)



*ಆರೈಕೆ ಮಾಡು*

ನೀನು ಒಂದು ದಿನ
ಆಗುವೆ ಮುದುಕ
ಆಗ ನೀನು ಅರಿತು
ಕೊಳ್ಳುವೆ  ಬದುಕ

ಯೌವನ ಯಾರಿಗೂ
ಶಾಶ್ವತವಲ್ಲ
ಮಗನೆ ವೃದ್ಧಾಪ್ಯ
ಇದು ತಪ್ಪಲ್ಲ

ಹಣ್ಣೆಲೆ ಉದರುವ
ಕಾಲವು ಬಂದಿದೆ
ಚಿಗುರೆಲೆ ನಗುವ
ನೋಡಿ ನಲಿದಿದೆ

ಬಾಲ್ಯದಿ ನಡೆದೆನು
ಆಡಿಸಿ‌ ಕೈಕಾಲು
ಈಗ ಬಂದಿದೆ
ನೋಡಿಲ್ಲಿ ಕೈಕೋಲು

ಆರೈಕೆ ಮಾಡು
ಈ ಅಪ್ಪನನು
ಮಗನು ಹಿಡಿವ
ನಿನ್ನ ದಾರಿಯನು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

14 ಏಪ್ರಿಲ್ 2020

ಭಯವನು ತೊಲಗಿಸು (ಭಾವಗೀತೆ) ಹನಿ ಹನಿ ವಿಸ್ಮಯ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದ ಭಾವಗೀತೆ

*ಭಯವನು ತೊಲಗಿಸು*

ಭಯದಲಿ‌ ಕುಳಿತು ಚಿಂತಿಸಬೇಡ
ಕಾಯಕ ಮಾಡಲು ನೀ ಕಲಿ
ನಿರ್ಭಯವಾಗಿ ಮುನ್ನುಗ್ಗಲು
ಯಶಸ್ಸು ಲಬಿಸುವುದು ನೀ ತಿಳಿ.

ವೇದನೆ ಪಡುತಾ ಚಿಂತಿಪೆಯೇಕೆ
ಕಾದುವ ಯೋಧನ ನೋಡಿ ಕಲಿ
ಸಾಧನೆ ಮಾಡಲು ಭಯವೇಕೆ
ಹೇಡಿಯಾಗದಿರು ರಣರಂಗದಲಿ.

ಜಯಗಳಿಸಲು ಇಲ್ಲ ಅಡ್ಡದಾರಿ
ಮಾಡುವ ಕೆಲಸದಿ‌ ಸ್ಪಷ್ಟತೆ ಇರಲಿ
ಧೈರ್ಯವೊಂದೇ ಗೆಲ್ಲುವ ರಹದಾರಿ
ನಾಯಕನಾಗು ಕಠಿಣವಾದ ಕೆಲಸದಲಿ.

ಭಯವನು‌ ತೊಲಗಿಸು ಮನದಿಂದ
ಒಳಗಿನ ಶಕ್ತಿಯು ಜಾಗೃತವಾಗುವುದು
ಅಭಯವನಿತ್ತರೆ ದೇವ ಮುದದಿಂದ
ತಮವು ಕಳೆದು ಜಗಕೆ ಬೆಳಕಾಗುವುದು.






13 ಏಪ್ರಿಲ್ 2020

ಒಳಿತಿಗೆ ಸೋಲಿಲ್ಲ(ಭಾವಗೀತೆ)

*ಒಳಿತಿಗೆ ಸೋಲಿಲ್ಲ*

ಒಳಿತು ಮಾಡು ನೀ ಜಗಕೆ
ಆನಂದ ಸಿಗುವುದು ಮನಕೆ
ಸಹನೆಯ ಗಣಿಯು ನೀನಾಗು
ತಾಳ್ಮೆಯಿದ್ದರೆ ಗೆಲುವೆ ನೀನು.

ಉಳಿಗಳ ಪೆಟ್ಟಿಗೆ ಬೆದರದಿರು
ಬಿರುಗಾಳಿಗೆ  ನೀ ಜಗ್ಗದಿರು
ಅಳಿಯುವ ಜನರಿಗೆ ಕಿವುಡಾಗು
ನಿಧಾನವಾದರೂ ಮುಂದೆ ಸಾಗು.

ಕಷ್ಟಗಳಿದ್ದರೂ ಇರಲಿ ತಾಳ್ಮೆ
ಬಂದೆ ಬರುವುದು ಮುಂದೆ ಬಲ್ಮೆ
ಕಲಿಯಬೇಕು ಸೋಲಿನಲಿ ಸಹನೆ
ಅದುವೆ ಗೆಲುವಿನ ತವರುಮನೆ .

ಅಮೂಲ್ಯವಾದದು ಈ ಜೀವ
ಸಹಿಸಬೇಕು ಬರುವ ನೋವ
ಕೆಡುಕು ದೀರ್ಘಕಾಲ ಬಾಳಲ್ಲ
ಒಳಿತಿಗೆ ಎಂದೂ ಸೋಲಿಲ್ಲ.

11 ಏಪ್ರಿಲ್ 2020

ಗಟ್ಟಿ ಮೇಳ(ಭಾವಗೀತೆ)

*ಗಟ್ಟಿ ಮೇಳ*

ನನ್ನ ತೂಗುವ ತೊಟ್ಟಿಲು ನೀನಲ್ಲವೆ
ನಿನ್ನ ಸಂತೋಷ ಕೋರುವವ ನಾನಲ್ಲವೆ||

ನೀ ಬಳಿಯಿದ್ದರೆ ನನಗರಿವಿಲ್ಲದೆ
ನರ್ತಿಸುವುದೆನ್ನ  ಮನ
ದೂರಾದರೆ ಒಂದರೆಕ್ಷಣ
ಹೃದಯದಲ್ಲಿ ಕಂಪನ||

ಒಲವಿನ ಮಾತುಗಳಾಡುತ
ಬಳಿ ಬಂದರೆ ಜಗವ ಮರೆವೆ
ಕಾಣದೆ ದೂರಾದರೆ ಚಡಪಡಿಸಿ
ಎಲ್ಲಿದ್ದರೂ ಹುಡುಕಲು ಬರುವೆ||

ಸುಳಿದಾಡು ನನ್ನ ಹಿಂದೆ ಮುಂದೆ
ನನಗರಿವಿಲ್ಲದೆ ಎದೆ ತಪ್ಪುವುದು ತಾಳ
ದೇವತೆ ನೀನು ನನ್ನ ಬಾಳಿಗೆ
ಕೈ ಹಿಡಿದಾಗಲೆ ಆಗಿದೆ ಗಟ್ಟಿಮೇಳ||

*ಸಿ ಜಿ ವೆಂಕಟೇಶ್ವರ*
*ತುಮಕೂರು*


10 ಏಪ್ರಿಲ್ 2020

ಮನಸ್ಸು ಮಾಡು (ಭಾವಗೀತೆ)

*ಮನಸ್ಸು ಮಾಡು*

ಚಿಂತಿಪೆ ಏಕೆ ಓ ಗೆಳೆಯ
ಬೆಳಗಬೇಕು ನೀ ಧರೆಯ
ಏಳು ಎದ್ದೇಳು ನಿಲ್ಲದಿರು
ಕೈಲಾಗದವನೆಂದು ಕೊರಗದಿರು.

ಮನಸ್ಸು ಮಾಡು ನೀ ಗೆಳೆಯ
ತೆಗೆದಿಡು ಮನದ ಕೊಳೆಯ
ನಿನ್ನಲಿದೆ ಅಪಾರ ಶಕುತಿ
ಕಾಪಾಡುವಳು ಆ ಪಾರ್ವತಿ.

ಹಿಂದಡಿ‌ ಇಡದಿರು‌ ಎಂದು
ನುಗ್ಗುತಿರು ಜಗ ನಿನ್ನದೆಂದು
ಧೈರ್ಯವಂತರಿಗಿದೆ ದಾರಿ
ಶುರು ಮಾಡು ಮುಟ್ಟುವೆ ಗುರಿ.

ನೀನಾಗು ಒಂದು ಜೀವನದಿ
ಸಮರಸವಿರಲಿ ಜೀವನದಿ
ಅಶಕ್ತರ ಸಹಾಯಕೆ ಸನಿಹವಾಗು
ಮೂಕಪ್ರಾಣಿಗಳ ಸಂರಕ್ಷಕನಾಗು.

*ಸಿ ಜಿ ವೆಂಕಟೇಶ್ವರ*
*ತುಮಕೂರು*






09 ಏಪ್ರಿಲ್ 2020

ಬದುಕಬೇಕು (ಕವನ)

*ಬದುಕಬೇಕು*

ಬದುಕಬೇಕು ನೀನು ಬದುಕಬೇಕು
ಇತರರಿಗೆ ದಾರಿ ದೀಪವಾಗಬೇಕು
ಪ್ರತಿಕ್ಷಣವು ಜೀವಿಸುತಲಿರಬೇಕು
ಶಿವಮೆಚ್ಚಿ ಅಹುದಹುದು ಎನ್ನಬೇಕು.

ಅವರಿವರ ತೆಗೆಳಿಕೆಗೆ ಕಿವಿಗೊಡಬೇಡ
ಸರಿದಾರಿಯಲಿ ನಡೆವುದ ಮರೆಯಬೇಡ
ಅನವರತ ನಡೆ ಗುರಿ ಮುಟ್ಟುವೆ ನೋಡ
ನೀ ಹಾಡು ನಿನ್ನೆದೆಯ ಗೆಲುವ ಹಾಡ.

ಜೀವನವಿದು ಮೂರು ದಿನದ ಬಾಳು
ಇರುವುದು ಬಾಳಲ್ಲಿ  ಏಳು ಬೀಳು
ನಿನ್ನಂತೆ ಇತರರ ಬಾಳು ಕೇಳು
ಸಕಲ ಚರಾಚರದೊಂದಿಗೆ ಬಾಳು.

ಸೋತೆನೆಂದು ಮೂಲೆಯಲಿ ಕೂರದಿರು
ಗೆಲುವು ಸಿಗದು‌ ಎಂದು ಕೊರಗದಿರು
ನಿನ್ನ ದಾರಿಗೆ ನೀನಾಗು‌ ಗುರು
ಸನ್ಮಾನಿಸುವರು ಗೆದ್ದಾಗ ಜನರು.

ಕಾಯಕದಿ ಕೈಲಾಸವನು ಕಂಡರೆ
ಜನರಲ್ಲಿ‌ ಜನಾರ್ದನನು ಕಂಡರೆ
ಹಂಚಿ‌ ತಿನ್ನುವ ಗುಣವ ನೀ ಕಲಿತರೆ
ನಂದನವಾಗುವುದು ಈ ಧರೆ.

*ಸಿ ಜಿ‌ ವೆಂಕಟೇಶ್ವರ*
*ತುಮಕೂರು*

07 ಏಪ್ರಿಲ್ 2020

ತಣಿಸು ಬಾರೆ ( ಭಾವಗೀತೆ)

*ತಣಿಸು ಬಾರೆ*

ಎಂದು ಆಗಮಿಸುವೆ ಮನದ
ರತಿ ಈ ಮನ್ಮಥನ ಸೇರಲು
ಮುನ್ನ ನೀಡಿದ ಮಧುರ
ವಚನವನು ಉಳಿಸಲು

ದಿನ ಕಳೆದು ಪಕ್ಷ,ಮಾಸಗಳು
ಉರುಳಿದರೂ ಸುಳಿವಿಲ್ಲ
ನಿನ್ನಧರದ ಮಧುಪಾನದ
ಮಧುರ ಮಹೋತ್ಸವ ಮರೆತಿಲ್ಲ

ಬೆಳಗು ಬೈಗೆಂಬ ಪರಿವಿಲ್ಲ
ನಿನ್ನ ಆಗಮನಕೆ ಕಾದಿಹೆನು
ಜೇನಹೊಳೆಯಲಿ ತೇಲಿದ
ಮಾಸದ ನೆನಪಲಿ ಬದುಕಿಹೆನು

ನಿನ್ನ ಸಂಗವು ಪರಮಂಗಲ
ನೀಡು ಪ್ರೇಮದಾಲಿಂಗನ
ನೀನೇ ಅಮೃತ ನನ್ನ ಬಾಳಿಗೆ
ತಣಿಸು ಬಾರೆ ಮೈ ಮನ

*ಸಿ ಜಿ ವೆಂಕಟೇಶ್ವರ*
*ತುಮಕೂರು*






06 ಏಪ್ರಿಲ್ 2020

ಸುಲೋಚನ (ಭಾವಗೀತೆ)

*ಸುಲೋಚನ*

ನಾ ಬಂದಿಹೆ ಬಳಿ ಸಾರಿ
ನಿಂತಿಹೆನು ಪ್ರೀತಿ ಕೋರಿ
ನನ್ನ ಗುಳಿಕೆನ್ನೆಯ ರಾಣಿ
ಮಾಡು ಮುತ್ತಿನ ಬೋಣಿ

ಸುಂದರ ಕಣ್ಗಳ ಸುಲೋಚನ
ಬರುವೆ ಮಾಡದೆ ಆಲೋಚನೆ
ಬೇರಡೆ ಇಲ್ಲ ನನ ಗಮನ
ಬೆರೆಸೋಣ ನಮ್ಮ ಮೈಮನ

ಚಂದ್ರನ ತುಂಡಿನ ನಲ್ಲೆ
ಮೈಮಾಟ ಕಬ್ಬಿನ ಜಲ್ಲೆ
ಕೋಮಲ ಮಧುರ ಮಲ್ಲೆ
ವರಿಸುವೆ ನಾ ನಿನ್ನನು ಇಲ್ಲೆ

ಧರೆಗಿಳಿದವಳೆ ನನ್ನ ರತಿ
ನೀಡುವೆ ಜಗದೆಲ್ಲಾ ಪ್ರೀತಿ
ನೋಡುವುದಿಲ್ಲ ಜಾತೀ ಗೀತಿ
ನೀನಾಗು ಬಾ ನನ್ನ ಸತಿ

*ಸಿ ಜಿ ವೆಂಕಟೇಶ್ವರ*
*ತುಮಕೂರು*

27 ಸೆಪ್ಟೆಂಬರ್ 2019

ಚಾಲಕ (ಭಾವಗೀತೆ)

*ಚಾಲಕ*

ಕತ್ತಲ ಕೂಪದಿಂದ
ನಿನಗೆ ಬಿಡುಗಡೆ ಎಂದು?
ಬೆಳಕಿನೆಡೆ ಸಾಗಲು
ನೀನು ಅಡಿಇಡು ಇಂದು.

ನಿನ್ನಾತ್ಮ ದರ್ಶನಕೆ
ಪರರ ನೆರವೇಕೆ?
ನೆರಳಂತೆ ಕಾಯುವುದು
ಸತ್ಕಾರ್ಯ ಚಿಂತೆಯೇಕೆ?

ಜಗದ ಮೂಲೆಗಳಿಂದ
ಪಡೆ ನೀನು ಜ್ಞಾನ
ಜನ ಮೆಚ್ಚಿ ಹೊಗಳುವರು
ನೀನೆ ಮಹಾಜಾಣ.

ಭಕ್ತಿಯಲಿ ಭಜಿಸಿದರೆ
ಕಾಣುವುದು ಸ್ವರ್ಗ
ಮುಕ್ತಿಯ ಮೂಲ
ಅದುವೆ ಭಕ್ತಿಮಾರ್ಗ.

ಮೇಲು ಕೀಳೆನೆದೆ
ಮಾಡು ನಿನ್ನ ಕಾಯಕ
ನಿನ್ನ ಮೋಕ್ಷದ ಯಾತ್ರಗೆ
ನೀನಾಗುವೆ ಚಾಲಕ.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


02 ಜುಲೈ 2018

ನನಸಾದೀತೇ?(ಭಾವಗೀತೆ)

*ನನಸಾದೀತೆ?*

ಹಸಿವಿನಿಂದ ಸಾಯುವರು ಲಕ್ಷ
ಅಜೀರ್ಣದಿಂದ ಸಾಯವರು ಲಕ್ಷ
ಆಹಾರದ ಪೋಲಾಗುತಿದೆ ಲಕ್ಷ ಲಕ್ಷ
ಆದರೂ ನಾವು ನೀಡಿಲ್ಲ ಅದರೆಡೆ ಲಕ್ಷ್ಯ

ಉದರ ನಿಮಿತ್ತ ಬಹುಕೃತ ವೇಷ
ಕೆಲ ನೀತಿ ನಿಯತ್ತು ಪ್ರಮಾಣಿಕ
ಮತ್ತೆ ಕೆಲವು .ಅನ್ಯಾಯ  ಅಕ್ರಮ
ಇವರ ಕುಲದೇವರೇ ವಂಚಕ

ಅನ್ನದ ಬೆಲೆ ತಿಳಿಯದೆ ಕಾಲಕಸವಾಗಿ
ನೋಡಿ  ತಿಪ್ಪೆಗೆ ಎಸೆಯುತಿಹರು
ಅನ್ನದಾತನು ಒಂದಗಳ ಪಡೆಯಲು
ಪಟ್ಟ ಕಷ್ಟಗಳ ಮರೆಯುತಿಹರು

ಹಸಿವು ಮುಕ್ತ ಕನಸು ನನಸಾದೀತೆ?
ಹಸಿವಿನಿಂದಾಗುವ ಸಾವುಗಳು ನಿಂತೀತೆ  ?
ಸಮುದಾಯಕೆ ಬುದ್ದಿ ಬಂದೀತೆ ?
ಸ್ವಂತಕ್ಕೆ ಸ್ವಲ್ಪ ಜಗಕೆ ಸರ್ವಸ್ವ ಅಂದೀತೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 ಜೂನ್ 2018

ಗುಟ್ಟೇನು (ಭಾವಗೀತೆ)

*ಗುಟ್ಟೇನು*

ಶ್ವೇತ ವಸ್ತ್ರ ದಾರಿ ನೀರೆ
ಹೇಳಿ ಬಿಡೆ ನೀನ್ಯಾರೆ

ಹಸಿರ ವನದಲಿ ಕುಳಿತಿರುವೆ
ಕರದಲಿ ಪುಸ್ತಕ ಹಿಡಿದಿರುವೆ
ಮಸ್ತಕಕೆ ಮೇವು ನೀಡಿರುವೆ
ಸಮಸ್ತದೊಳು ಒಂದಾಗುವ ಪರಿಯ ಹೇಳೆ

ಬಣ್ಣ ಬಣ್ಣದ ಮರದಡಿಯಲಿ
ಬಣ್ಣದ ಕನಸಹರಡಿ ಕುಳಿತ ಬಾಲೆ
ಲೋಕದ  ಜಂಜಡ ತೊರೆದು
ಸುಖವಾಗಿರುವ ರೀತಿ ನಮಗೂ ಹೇಳೆ

ನಿನ್ನೆಗಳ ಗೊಡವೆ ನಿನಗಿಲ್ಲ
ನಾಳೆಗಳ ಚಿಂತೆ ಸುಳಿದಿಲ್ಲ
ವರ್ತಮಾನದಿ ಬದುಕುತಿರುವ
ಮಂದಹಾಸದ  ಗುಟ್ಟೇನು ಹೇಳೆ?

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*





26 ಜೂನ್ 2018

ಮರೆಯುವೆಯಾ ?( ಭಾವಗೀತೆ)

*ಮರೆಯುವೆಯಾ?*

ಹೆತ್ತವರೊಡಲುರಿಸಿ ಮೆರೆಯುವೆಯಾ?
ತುತ್ತನಿತ್ತವರ ಮಮತೆಯ ಮರೆಯುವೆಯಾ?

ಹೆತ್ತು ಹೊತ್ತು ಮುದ್ದು ಮಾಡಿ
ನೋವ ನುಂಗಿ ಪ್ರೀತಿ ನೀಡಿ
ಲಾಲಿ ಹಾಡಿ ತಟ್ಟಿ ಮಲಗಿಸಿ
ಹೊಟ್ಟೆ ಕಟ್ಟಿ ಬೆಳೆಸಿದವರ ಮರೆವೆಯಾ?

ಅಕ್ಕ ಪಕ್ಕ ಸರೀಕರಂತೆ
ಒಪ್ಪವಾಗಿ ಬೆಳೆಸಿ ನಲಿದು
ಚೊಕ್ಕವಾದ ಗುಣವ ಕಲಿಸಿ
ಸ್ವಾರ್ಥವಿರದ ಮುಗ್ದಜೀವಗಳನು ಮರೆವೆಯಾ?

ಉಡುಗೆ ತೊಡುಗೆ ಉಡಿಸಿ ನೋಡಿ
ಹರಿದ ಅರಿವೆ ತೊಟ್ಟು ಬಾಳಿ
ತಾನು ಅನ್ನವುಣದೆ ನಿನಗೆ
ಮೃಷ್ಟಾನ್ನವಿಟ್ಟು ತೃಪ್ತಿ ಕಂಡ ಕೈಗಳ ಮರೆವೆಯಾ ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 ಮೇ 2018

ಪರುಷ (ಭಾವಗೀತೆ)

*ಪರುಷ*
 ಭಾವಗೀತೆ

ಮುಗಿಯಲಿದೆ ದುಃಖದ ಸಂಕೋಲೆ
ಬರಲಿದೆ ನಮ್ಮ ಬಾಳಿಗೆ  ಹರುಷ
ನಾವಾಗುವೆವು  ಅಪ್ಪ ಅಮ್ಮ
ಬರಲಿದೆ ನೋವ ಕಳೆವ ಪರುಷ

ಹತ್ತು ವರ್ಷದ ಕಾಯುವಿಕೆಗೆ
ಇಂದು ಫಲ ಸಿಕ್ಕಿದೆ
ಮನೆಯಲ್ಲಿ ಮಗುವಿನ
ಕಿಲ ಕಿಲ ಕಲರವ ಕೇಳಬೇಕಿದೆ

ದೇವರ ವರವೋ ಹಿರಿಯರ
ಆಶೀರ್ವಾದವೋ ಫಲಿಸಿದೆ
ನಮ್ಮ ಮನೆಯಲಿ ಬೀಸಣಿಗೆ
ಗಾಳಿಯು ಸುಳಿಯಲಿದೆ

ನನ್ನವಳ ಬಂಜೆಯೆಂಬುವ
ಶಾಪ ವಿಮೋಚನೆಯಾಗಲಿದೆ
ಮನ ಮನೆ ಬೆಳಗುವ ದೀಪ
ಶೀಘ್ರ ಆಗಮನವಾಗಲಿದೆ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 ಏಪ್ರಿಲ್ 2018

ಬಳುಕುವ ಬಳ್ಳಿ (ಭಾವಗೀತೆ)

*ಬಳುಕುವ ಬಳ್ಳಿ*

ಶಿಲೆಗಳ ಸಂಗೀತದ ಹಿನ್ನೆಲೆಯಲ್ಲಿ
ಕಲಾದೇವತೆಯ ಸನ್ನಿದಿಯಲ್ಲಿ
ಕಮಲವಿರುವ ಕೊಳದ ಸನಿಹದಲ್ಲಿ
ನಿಂತಿರುವೆ ನಾನು ಬಳುಕುವ ಬಳ್ಳಿ

ಧರಿಸಿರುವೆ ರೇಶಿಮೆಯ ಸೀರೆ
ನಾಚಿ ನಿಂತಿರುವೆ ಕೋಮಲ ನೀರೆ
ಮೈಮೇಲಿನ ನಗವ ನೋಡು ಬಾರೆ
ನಾನಿದ್ದರೆ ಸೊಗಸೆಲ್ಲ ಈ ಧರೆ

ಮೈಮೇಲೆ ಹೊಳೆಯುತಿದೆ ನನ್ನ ನಗ
ಸೌಂದರ್ಯದಿ ಕಂಗೊಳಿಸುತಿದೆ ಮೊಗ
ನೋಡಲು ಬನ್ನಿ ನೀವೆಲ್ಲ ಬೇಗ
ನಾ ಹಚ್ಚಿದ ದೀಪಗಳು ಬೆಳಗಲಿ  ಜಗ

  *ಸಿ.ಜಿ.ವೆಂಕಟೇಶ್ವರ*
  *ಗೌರಿಬಿದನೂರು*