ಭಕ್ತಿ ಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಕ್ತಿ ಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

10 ಅಕ್ಟೋಬರ್ 2021

ಕೂಶ್ಮಾಂಡಾದೇವಿ.


 *ಕೂಶ್ಮಾಂಡಾ ದೇವಿಗೆ ನಮನ*


ನವರಾತ್ರಿಯ ನಾಲ್ಕನೇ ದಿನದಿ

ಕೂಶ್ಮಾಂಡಾ ದೇವಿಯ ಭಜಿಸೋಣ

ಆದಿ ಶಕ್ತಿಯ ಕರುಣೆಯ ಪಡೆದು

ನೆಮ್ಮದಿಯ ಜೀವನ ಪಡೆಯೋಣ.


ಸಕಲ ಸೃಷ್ಟಿಯ ಮೂಲರೂಪಿಣಿ

ಆದಿಮಾತೆಗೆ ನಮಿಸೋಣ

ಸಂತಾನ ದೇವತೆ, ಆರೋಗ್ಯದಾತೆಗೆ

ಕೈಮುಗಿದು ವರಗಳ ಬೇಡೋಣ.


ಅನಂತ ಗರ್ಭದ ಬ್ರಹ್ಮಾಂಡ ಸೃಷ್ಟಿಯ

ಅಮ್ಮನ ನಾಮವ ಸ್ಮರಿಸೋಣ 

ತಾರಕಾಸುರರ ಸಂಹಾರ ಮಾಡಿಸಿದ

ಶಾಂತಿದೂತಳಿಗೆ ಶಿರಬಾಗೋಣ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

9900925529

21 ಅಕ್ಟೋಬರ್ 2020

ಸ್ಕಂದಮಾತೆ ( ಭಕ್ತಿ ಗೀತೆ)


 *ಸ್ಕಂದ ಮಾತೆ*


ಸ್ಕಂದ ಮಾತೆಯೆ ನಮಿಪೆವು

ನಾವು ತಲೆಬಾಗಿ

ಅಭಯ ಹಸ್ತವ ನೀಡಮ್ಮ

ನಮಗೆ ತಾಯಾಗಿ


ಸಿಂಹದ ಮೇಲೆ ಕುಳಿತು

ಅಭಯವ ನೀಡುತಿರುವೆ

ಸ್ಕಂದನ ತೊಡೆಯ  ಮೇಲೆ

ಕೂರಿಸಿಕೊಂಡು ಆಡಿಸುತಿರುವೆ.


ಕಮಲ ಗುಲಾಬಿ ಪುಷ್ಪಗಳ

ಪ್ರಿಯೆ ನೀನು ನನ್ನಮ್ಮ

ದುರಿತಗಳ ತರಿಯುತ 

ಸರಿದಾರಿಯ ನಮಗೆ ತೋರಮ್ಮ.


ಹಣೆಯಲಿರುವ ಮುಕ್ಕಣ್ಣನ 

ಕಣ್ಣಲಿ ನೀ ನೋಡು

ಪದ್ಮಾಸನ ಪ್ರಿಯೆ ಚತುರ್ಭುಜೆ

ನಮ್ಮನು ಹರಸಿ ಕಾಪಾಡು


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

07 ಆಗಸ್ಟ್ 2020

ನೀನೇ ಶ್ರೀರಾಮ

 

26 ಜುಲೈ 2020

ನಡೆದಾಡುವ ದೇವರು


*ನಡೆದಾಡುವ ದೇವರು* 

ಸಿದ್ದರ ನಾಡಲಿ ಸಿದ್ದಿಯ
ಮಾರ್ಗವ ತೋರಿದ ದೇವ
ಗಂಗೆಯಂತೆ ನಮ್ಮ ಮಲಿನವ
ತೊಳೆದು ಮರೆಸಿದಿರಿ ನೋವ.

ಬಡವರ ಪಾಲಿಗೆ ಬದುಕುವ
ದಾರಿಯನು ತೋರಿದಿರಿ
ನರನ ಸೇವೆಯೇ ನಾರಾಯಣ
ಸೇವೆಯೆಂಬ ನೀತಿಯ ಸಾರಿದಿರಿ .

ನಡೆಯ ತಪ್ಪಿದವರಿಗೆ ಬುದ್ದಿ
ಕಲಿಸಿದ ನಡೆದಾಡುವ ದೇವರು
ಸಿದ್ದಗಂಗೆಯಾಯಿತು ಇಂದು
ಜ್ಞಾನ  ಅನ್ನ ,ವಿದ್ಯೆಯ ತವರು .

ಮಾನವ ರೂಪದಿ ಬಂದ
ಧರೆಗವತರುಸಿದ ಶಿವಪ್ಪನೇ ನೀವು
ಸಕಲರ ಮನದಲಿ ಎಂದಿಗೂ
ಇರುವಿರಿ ಮರೆಯುವುದಿಲ್ಲ ನಾವು .

*ಸಿ ಜಿ ವೆಂಕಟೇಶ್ವರ*
*ತುಮಕೂರು*
೯೯೦೦೯೨೫೫೨೯

08 ಜೂನ್ 2020

ವಿಘ್ನ ನಿವಾರಕ



*ವಿಘ್ನ ನಿವಾರಕ*

ಪೂಜೆಗೆ ಬಂದಿಹೆ
ವರವನು ಕರುಣಿಸೋ
ಮೊರದಗಲ ಕಿವಿಯ
ವಿನಾಯಕನೆ.

ಹೂಮಾಲೆ ಕಟ್ಟಿ
ಗಂಧ ,ಧೂಪದಿ
ಅರ್ಚಿಸುವೆ ಕಾಪಾಡೋ
ವಕ್ರತುಂಡನೆ.

ಪಾರಿವಾಳದ ಪರಿವಾರ
ಬಂದಿದೆ ನೋಡಿಲ್ಲಿ
ಪ್ರಾಣಿ ಪಕ್ಷಿಗಳ ರಕ್ಷಿಸು
ಲಂಬೋದರನೆ.

ಜಗವು ನಡುಗುತಿದೆ
ಅಗೋಚರ ಜೀವಿಗೆ
ಕಾಪಾಡು ನಮ್ಮನ್ನು
ವಿಘ್ನನಿವಾರಕನೆ.

*ಸಿ ಜಿ ವೆಂಕಟೇಶ್ವರ*

11 ಫೆಬ್ರವರಿ 2020

ವೀಣಾಪಾಣಿ(ಭಕ್ತಿಗೀತೆ)




*ವೀಣಾಪಾಣಿ*

ಸುಜ್ಞಾನದಾಯಿಕೆ ಶಾರದಾ ಮಾತೆ
ವಂದಿಪೆ ನಿನಗೆ ಹೇ ಜಗನ್ಮಾತೆ
ವಿದ್ಯೆ ಬುದ್ಧಿಯ ನೀಡುವ ತಾಯಿ
ಹರಸುತ ನಮ್ಮನ್ನು ನೀ ಕಾಯಿ.

ಸುವಿಮಳ ಚರಿತೆ  ನಮಿಪೆ ನಿನಗೆ
ಗೆಲುವನು ಕರುಣಿಸು ನಮಗೆ
ಶ್ವೇತ ವಸ್ತ್ರ ದ   ಶಾರದಾ ಮಾತೆ
ಜ್ಞಾನವ ನೀಡಮ್ಮ ವಾತ್ಸಲ್ಯದಾತೆ.

ವಾಣಿ ವೀಣಾಪಾಣಿಯೆ ಭಕ್ತಿದಾತೆ
ತಮವ ತೊರೆಯಮ್ಮ ಮುಕ್ತಿದಾತೆ
ಕರದಲಿ ಪುಸ್ತಕವ ಹಿಡಿದಿರುವೆ
ಶರಣೆಂದರೆ ಪೊರೆದು‌ ಕಾಯುವೆ.

ಧರಸಿರುವೆ ಹೊಳೆವ ವರಮಣಿ
ಅಜನ ರಾಣಿ ಕರುಣಿಸು ವಾಣಿ
ಅರಿವನು ನೀಡುವ ತಾಯಿಸರಸ್ವತಿ
ನಿನ್ನ ಮಕ್ಕಳಿಗೆ ನೀಡು ಸದಾ ಸನ್ಮತಿ .

*ಸಿ ಜಿ ವೆಂಕಟೇಶ್ವರ*


15 ಜನವರಿ 2020

ಹಬ್ಬವ ಮಾಡೋಣ( ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು)

*ಮಕರ  ಸಂಕ್ರಾಂತಿ ಹಬ್ಬದ ಶುಭಾಶಯಗಳು*

*ಹಬ್ಬವ ಮಾಡೋಣ*

ಹಬ್ಬವ ಮಾಡೋಣ
ಬನ್ನಿ ಹಬ್ಬವ ಮಾಡೋಣ||

ಸಂಕ್ರಮಣ ದಿನದಿ
ರವಿಯನು ಪೂಜಿಸಿ
ಕಹಿಯನು ತೊಲಗಿಸಿ
ಸಿಹಿಯನು ಪಡೆಯಲು
ಎಳ್ಳು ಬೆಲ್ಲವ ಹಂಚಿ
ಒಳ್ಳೆಯ ಮಾತನಾಡುತ
ಸಂಕ್ರಾಂತಿ ಹಬ್ಬವ ಮಾಡೋಣ||೧||

ವ್ರತವನು ಮಾಡುತ
ಹದಿನೆಂಟು ಮೆಟ್ಟಿಲ
ಒಡೆಯನ ನೆನೆಯುತ
ಇರುಮುಡಿ ಗಂಟನು ಹೊತ್ತು
ಮಕರ ಜ್ಯೋತಿಯ
ದರುಶನ ಮಾಡುತ
ಸಂಕ್ರಾಂತಿ ಹಬ್ಬವ ಮಾಡೋಣ||೨||

ಬೇಯಿಸಿ ಅವರೆ
ಕಡಲೆಯ ತಿಂದು
ಸುಗ್ಗಿಯ ಹಾಡನು
ಹಾಡುತ ನಾವು
ರಾಸುಗಳನ್ನು ಪೂಜಿಸಿ
ಕಿಚ್ಚು ಹಾಯಿಸಿ
ಸಂಕ್ರಾಂತಿ ಹಬ್ಬವ ಮಾಡೋಣ||೩||

*ಸಿ ಜಿ ವೆಂಕಟೇಶ್ವರ*

01 ಸೆಪ್ಟೆಂಬರ್ 2019

ಸುಭಿಕ್ಷವ ನೀಡು

*ಗೌರಿ ಗಣೇಶ ಹಬ್ಬದ ಶುಭಾಶಯಗಳು*

*ಸುಭಿಕ್ಷವ ನೀಡು*

ಗಣನಾಯಕ ಬೆನಕನೆ
ನೀಡುವೆ ನಿನಗೆ ಕಡುಬನ್ನ
ಮೂಷಿಕವಾಹನ ಮೋದಕಹಸ್ತನೆ
ಕರಿಮುಖ ಕಾಯೋ ನಮ್ಮನ್ನ.

ಗೌರಿಯ ಪುತ್ರ ,ಮೊದಲವಂದಿಪ
ಸಂಕಷ್ಟಗಳ ನೀ ನೀಗು
ಸುಬ್ರಹ್ಮಣ್ಯ ಸೋದರ ಗಣಪನೆ
ನಮ್ಮಯ ಬಾಳಿಗೆ ಬೆಳಕಾಗು.

ಗೌರಿತನಯ ವಿಶ್ವ ವಂದ್ಯನೆ
ನಮ್ಮನೆಲ್ಲರ ಒಂದುಗೂಡಿಸು
ಎಕದಂತ ವಕ್ರತುಂಡನೆ
ವಿದ್ಯೆ ಬುದ್ದಿಯ ನೀಡಿ ಹರಸು

ಚಾಮರ ಕರ್ಣ ಶಿವಸುತನೆ
ಭಕ್ತಿಯಲಿ ಹಾಡುವೆ ಈ ಹಾಡು
ವಿಘ್ನವಿನಾಯಕ ಗಜಾನನ
ಧರೆಯಲೆಲ್ಲಾ ಸುಭಿಕ್ಷವ ನೀಡು

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*





11 ಮೇ 2019

ನಾವೆಲ್ಲ ಒಂದು(ದೇಶ ಭಕ್ತಿ ಗೀತೆ)

*ನಾವೆಲ್ಲ ಒಂದು*

ಬನ್ನಿ ಸೇವೆ ಮಾಡೋಣ
ತಾಯ ಸೇವೆ ಮಾಡೋಣ

ಯಾರೂ ಇಲ್ಲ ಹಿಂದೆ ಮುಂದು
ಕೂಗಿ ಹೇಳಿ ನಾವೆಲ್ಲ ಒಂದು

ಭಾರತಾಂಭೆ ಪುತ್ರರು ನಾವು
ಕೊಡದಿರೋಣ ಮಾತೆಗೆ ನೋವು

ಸರ್ವ ಜನಾಂಗದ ಬೀಡಿದು
ಸಾಧು ಸಂತರ ನಾಡಿದು

ಹಚ್ಚೋಣ ದೇಶಭಕ್ತಿಯ ದೀವಿಗೆ
ಜಯಘೋಷ ಮೊಳಗಲಿ ತಾಯಿಗೆ

ದೇಶಭಕ್ತಿ ಇರಲಿ ಕಣ ಕಣದಲಿ
ಮಾತೆಗೆ ನಮಿಸೋಣ ತನು ಮನದಲಿ‌


*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

04 ಮಾರ್ಚ್ 2019

ಶಿವ ಶಿವ ಎನ್ನೋಣ (ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು)

   *ಶಿವ ಶಿವ ಎನ್ನೋಣ*

ಶಿವ ಶಿವ ಎನ್ನೋಣ
ಹರ ಹರ ಎನ್ನೋಣ

ಅಣ್ಣಾಮಲೆಯಲಿ ನೆಲೆಸಿರುವ
ಅರುಣಾಚಲೇಶ್ವರಗೆ
ಶಿವ ಶಿವ ಎನ್ನೋಣ

ಗೋಕರ್ಣದಲಿ‌ ಹರಸುತಿಹ
ಗೋಕರ್ಣೇಶ್ವರಗೆ
ಹರ ಹರ ಎನ್ನೋಣ

ಧರ್ಮಸ್ಥಳದಲಿ ನೆಲೆಸಿರುವ
ಮಜುನಾಥ ಸ್ವಾಮಿಗೆ
ಶಿವ ಶಿವ ಎನ್ನೋಣ

ವಾರಣಾಸಿಯಲಿ ನಿಂತಿರುವ
ಕಾಶಿವಿಶ್ವೇಶ್ವರನಿಗೆ
ಹರ ಹರ ಎನ್ನೋಣ

ಶ್ರೀಶೈಲದ ನೆಲೆಸಿರುವ
ಮಲ್ಲಿನಾಥ ಸ್ವಾಮಿಗೆ
ಶಿವ ಶಿವ ಎನ್ನೋಣ

ಕಠ್ಮಂಡುವಲಿ‌ ನಿಂತಿರುವ
ಪಶುಪತಿನಾಥಗೆ
ಹರ ಹರ ಎನ್ನೋಣ



*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*











15 ಫೆಬ್ರವರಿ 2019

ಜೈ ಭಾರತಾಂಭೆ ( ಹುತಾತ್ಮ ಯೋಧರಿಗೆ ನಮನ)

*ಜೈ ಭಾರತಾಂಬೆ*

ನರಿಬುದ್ದಿಯ ಉಗ್ರರೇ
ನಾಚಿಕೆಯಿಲ್ಲದ ನೀವು
ಮನುಷ್ಯರೇ?

ಎದುರು ನಿಲ್ಲಲು
ಅದುರುವ ನೀವು
ಬೆನ್ನಿಗೆ ಚೂರಿ ಹಾಕುವಿರಾ?
ಭಾರತೀಯರ ಕಿಚ್ಚು
ಜ್ವಾಲೆಯಾಗಿ ಉರಿದರೆ
ನೀವು ಉಳಿಯುವಿರಾ?

ಸಮರದಲಿ ಸೋತು
ಸುಣ್ಣವಾದ ಪಾಪಿಸ್ತಾನದ
ಪಾಪಿಗಳೇ, ರಕ್ತಪಿಪಾಸುಗಳೇ
ನಮ್ಮನು ಕೆಣಕಿದ್ದೀರಿ
ಮುಂದೆ ವಿಶ್ವ ಭೂಪಟದಲಿ
ನಿಮ್ಮ ದೇಶವನ್ನು ಹುಡುಕುತ್ತೀರಿ

ನಮ್ಮ ಯೋಧರ ಪ್ರಾಣಹರಣಮಾಡಿದ
ನಿಮ್ಮನು ಸುಮ್ಮನೆ ಬಿಡೆವು
ಶಾಂತವಾಗಿರುವುದು
ನಮ್ಮ ದೌರ್ಬಲ್ಯವಲ್ಲ
ಹುಲಿಯನ್ನು ಕೆಣಕಿದ
ನಿಮಗೆ ಉಳಿಗಾಲವಿಲ್ಲ
ದಿಟ್ಡತನದಿ ನಿಮ್ಮ ಹುಟ್ಟಡಗಿಸಿ
ಘರ್ಜಿಸುವೆವು ಜೈ ಭಾರತಾಂಬೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*






25 ಜನವರಿ 2019

ದೇವರು(ಶಿವಕುಮಾರ ಸ್ವಾಮೀಜಿ ರವರಿಗೆ ನುಡಿ ನಮನ)

                 *ದೇವರು*

ದೇವರು ನೀನು ನಿಜವಪ್ಪ
ಮಾನವ ರೂಪದ ಶಿವಪ್ಪ
ನಿನ್ನೀ  ಸೇವೆಗೆ ಕೊನೆಯಿಲ್ಲ
ನೀನಿರದೇ ಬೆಳಕು ಮೂಡಲ್ಲ |ಪ|

ಅನ್ನದಾಸೋಹವ ನೀನಿತ್ತೆ
ಅಕ್ಷರ ಕಲಿಸಲು ಪಣತೊಟ್ಟೆ
ಜ್ಞಾನದ ಆಂದೋಲನ ನಿನ್ನಿಂದ
ನಿನ್ನ ನೆನೆದರೆ ನಮಗಾನಂದ.
 |ದೇವರು|

ಸರ್ವಜನಾಂಗದ ಸಂಗಮವು
ನೀನೆಲೆಸಿರುವ ಆ ಮಠವು
ಹೋಲಿಕೆ ನಿನಗೆ ಯಾರಿಲ್ಲ
ನಿನ್ನನು ಮರೆತು ಬಾಳಲ್ಲ .
|ದೇವರು|

ಬಡವರ ಪಾಲಿನ ಬಂಧುವುನೀ
ಅಶಕ್ತರಿಗೆ ಆಧಾರವು ನೀ
ಸೇವೆಯ ಅರ್ಥವು ನೀನಪ್ಪ
ನಿನ್ನ ದಾರಿಯಲಿ ನಡೆಸಪ್ಪ .
|ದೇವರು|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 ಜನವರಿ 2019

ಸಿಹಿಜೀವಿಯ ಕಣ್ಣೀರ ಹನಿಗಳು(ಹನಿ ಹನಿ‌ಬಳಗದಿಂದ ಅತ್ಯುತ್ತಮ ಹನಿಗಳು ಎಂದು ಪುರಸ್ಕೃತ) ಶಿವಕುಮಾರ ಸ್ವಾಮೀಜಿಗಳಿಗೆ ನುಡಿನಮನ

                  ಸಿಹಿಜೀವಿಯ ಕಣ್ಣೀರ ಹನಿಗಳು

ಶಿವಕುಮಾರ ಸ್ವಾಮೀಜಿಗಳಿಗೆ  ನುಡಿನಮನ

*೧*

*ಎಂದು?*

ಜನತಾಜನಾರ್ಧನನ
ಸೇವೆ ಮಾಡಲು‌ನೋಡಲಿಲ್ಲ
ಹಿಂದು ಮುಂದು
ಪ್ರತಿ ಪಾದಿಸಿದಿರಿ
ನಾವೆಲ್ಲರೂ ಒಂದು
ಸೇವಾ ವರ್ಷಗಳು
ನೂರ ಹನ್ನೊಂದು
ನಿಮಗಾಗಿ ಕಾತುರದಿ
ಕಾಯುವೆವು
ಭುವಿಗೆ ಮತ್ತೆ
ಆಗಮಿಸುವಿರಿ ಎಂದು?

*೨*

*ಶ್ರೀಸಿದ್ದಗಂಗಾ*

ಮಿಂದರೆ
ಪಾಪ ಕಳೆವಳು
ಉತ್ತರದ ಗಂಗಾ
ನಿಂದರೆ ನೆನೆದರೆ
ಪಾಪ ನಾಶ
ದಕ್ಷಿಣದ ಗಂಗಾ
ಶ್ರೀಸಿದ್ದಗಂಗಾ

*೩*

*ಅನಾಥರಾದೆವು*

ವಿದ್ಯೆ ಬುದ್ದಿ ನೀಡಿದ
ಭಕ್ತರ ಪಾಲಿನ
ಬುದ್ದಿ ಇನ್ನಿಲ್ಲ
ಅನಾಥರಾದೆವು
ಸ್ವಾಮಿಗಳಿಲ್ಲದೆ
ನಾವೆಲ್ಲ

*೪*

*ಶಿವಧ್ಯಾನ*

ಕುಮಾರನಾಗಿ
ಶಿವನ ಧ್ಯಾನವ
ಮಾಡಿದಿರಿ
ಅವನು ಕರೆದರೆ
ನಗುತಲಿ ಕೈಲಾಸಕ್ಕೆ
ತೆರಳಿದಿರಿ
ನಮಗಾರು ಗತಿ
ನೀವೇ ಹೇಳಿರಿ

*೫*

*ಬಹುವಿಧ ದಾಸೋಹಿ*

ಹರನೇನಾದರು ದೊರೆತರೆ
ಕೇಳುವೆನು
ಎಲ್ಲೆಡೆ ಎಲ್ಲರಿಗೂ
ಅನ್ನ,ವಿಧ್ಯೆ ಸಿಗುತಿಲ್ಲ
ಬಹುವಿಧ ದಾಸೋಹಿ
ಸ್ವಾಮೀಜಿಯನೇತಕೆ
ಧರೆಯಲಿ  ಬಿಡಲಿಲ್ಲ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*








13 ಸೆಪ್ಟೆಂಬರ್ 2018

ವಿನಾಯಕ ನಮ್ಮ ಕಾಪಾಡು( ಕವನ) ನನ್ನ ಬ್ಲಾಗ್ ನ 400 ನೇ ಪೋಸ್ಟ್ ಓದಿ ಪ್ರೋತ್ಸಾಹ ನೀಡುತ್ತಿರುವ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು


                           

                *ವಿನಾಯಕ ನಮ್ಮ ಕಾಪಾಡು*

*ವಿ* ಘ್ನ ವಿನಾಯಕ ಕಾಪಾಡು ನಮ್ಮನು
*ವಿ* ನಯದಿ ಬಾಗುವೆವು  ನಮ್ಮನರಸು
*ವಿ* ಧ ವಿಧ ಪೂಜೆ ಮಾಡುವೆವು
*ವಿ* ಜಯವ ನೀಡುತ  ರಕ್ಷಿಸು


*ನಾ* ನಾ ಹೆಸರಿನ ದೇವನು ನೀನು
*ನಾ* ಮವ ಭಜಿಸುವೆವು  ಕಾಪಾಡು
*ನಾ* ವಿಕ ನಾಗು ನಮ್ಮ ಬಾಳಿಗೆ
*ನಾ* ಡಿಗೆ ಒಳಿತು ನೀ ಮಾಡು


*ಯ* ತಿಗಳ ಪ್ರೀತಿಯ ಸ್ವಾಮಿಯೆ
*ಯ* ಶಸ್ಸನ್ನು ನೀಡಿ ಹಾರೈಸು
*ಯ* ಜಮಾನ ನಮಗೆ ನೀನಾಗು
*ಯ* ತ್ನ ಮಾಡುವೆವು ಆಶೀರ್ವದಿಸು


*ಕ* ವಿಜನ ವಂದಿತ  ಗಜವದನ
*ಕ* ಷ್ಟಗಳನ್ನು ನೀ ದೂಡು
*ಕ* ತ್ತಲು ನೀಗಿ ಬೆಳಕನು ನೀಡಿ
*ಕ* ರಿಮುಖ ನಮ್ಮನು  ಕಾಪಾಡು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

*ಸರ್ವರಿಗೂ  ಗಣೇಶ ಚತುರ್ಥಿಯ ಶುಭಾಶಯಗಳು🙏🙏🙏*

25 ಮಾರ್ಚ್ 2018

ಬಾ ಶ್ರೀ ರಾಮ (ಭಕ್ತಿ ಗೀತೆ)

*ಬಾ ಶ್ರೀ ರಾಮ*

ಮತ್ತೊಮ್ಮೆ ಬಾ ಶ್ರೀ ರಾಮ ಭುವಿಗೆ
ನೀಡು ಸಮಾಧಾನ ನಮ್ಮ ನೋವಿಗೆ |ಪ|

ಅಧಿಕಾರಕ್ಕಾಗಿ ಕಚ್ಚಾಟ ಕೆಸರೆರಚಾಟ
ಯಾವ ಮಾರ್ಗವಾದರೂ ಸರಿ
ವಾಮಮಾರ್ಗವೂ ಅಯಿತು
ಅಧಿಕಾರದ ಬೆನ್ನ ಹತ್ತದೇ ಭರತನಿಗೆ
ರಾಜ್ಯ ಅಧಿಕಾರ ನೀಡಿದ ನೀ
ಭಾರತ ಕ್ಕೆ ಮತ್ತೆ ಬಾ ಶ್ರೀ ರಾಮ|೧|

ಅತ್ಯಾಚಾರ ಅನಾಚಾರ ಮಹಿಳೆಯರ
ಶೋಷಣೆ ಎಲ್ಲೆಲ್ಲೂ ಅವ್ಯಾಹತ
ಏಕಪತ್ನಿ ವೃತಸ್ತ ತಾಯಿಮಾತಿನ
ಪರಿಪಾಲಕನಾದ ನೀನು ನಮಗೆ ಮಾದರಿ
ಸಂಬಂಧಗಳ ಬೆಲೆ ತಿಳಿಸಿಕೊಡಲು
ಮತ್ತೆ ಧರೆಗೆ ಬಾ ಶ್ರೀ ರಾಮ|೨|

ಎಲ್ಲೆಲ್ಲೂ ಅಪಮೌಲ್ಯ ಅಧರ್ಮ
ದುಷ್ಟ ಶಕ್ತಿಗಳ ಅಟ್ಟಹಾಸ
ಮೌಲ್ಯವನ್ನು ಎತ್ತಿ ಹಿಡಿಯಲು
ಧರ್ಮಮಾರ್ಗದಿ ನಡೆಸಲು
ರಾಮರಾಜ್ಯವನು ಕರುಣಿಸಲು
ಮರಳಿ ಇಳೆಗೆ ಬಾ ಶ್ರೀ ರಾಮ|೩|

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

*ಸರ್ವರಿಗೂ ‌ಶ್ರೀರಾಮ‌ನಮವಿ ಹಬ್ಬದ ಶುಭಾಶಯಗಳು*

11 ಮಾರ್ಚ್ 2018

ಪರಮಾತ್ಮನಲಿ ಮನಸಿಡು (ಆಧ್ಯಾತ್ಮಿಕ ಕವನ)

*ಪರಮಾತ್ಮನಲಿ ಮನಸಿಡು*

ಇನ್ನೆಷ್ಟು ಕಾಲ ಬಿದ್ದು ಒದ್ದಾಡುವೆ
ಎದ್ದು ಆತ್ಮವನುದ್ದರಿಸಿಕೋ
ಸ್ವಾರ್ಥ ಲೋಭಗಳ ಬಿಡು
ಜಗದ ಜಂಜಡವ ಬಿಡು
ಸಿಧ್ಧಿಯೆಡೆಗೆ ಮನಸಿಡು|೧|

ಕಾಮದ ಬಲೆಯಲಿ ಸಿಲುಕಿ
ಬಿಡಿಸಿಕೊಳ್ಳದೆ ನಲುಗಿ
ಇಂದ್ರಿಯ ಸುಖದಿ ಮುಳುಗಿ
ಅಂಧನಾಗುವುದ ಬಿಡು
ಭಗವಂತನಲಿ ಮನಸಿಡು|೨|

ಕ್ರೋಧದಿಂದಲಿ  ಎಗರಾಡಿ
ಮಾಡಿಕೊಂಡು ಜೀವನ ರಾಡಿ
ಮತ್ಸರದಿಂದಲಿ  ಬಡಿದಾಡಿ
ಕತ್ತಿ ಮಸೆಯುವುದ ಬಿಡು
ಸರ್ವಶಕ್ತನಲಿ  ಮನಸಿಡು|೩|

ಮೋಹದಿ ಮೈಮರೆತು
ನಾನು ನನದೆಂದು ಅಬ್ಬರಿಸಿ
ಲೌಕಿಕವೆ ದಿಟವೆಂದು ತಿಳಿದು
ಮರುಳಾಗುವುದ ಬಿಡು
ಪರಮಾತ್ಮನಲಿ  ಮನಸಿಡು|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

21 ಫೆಬ್ರವರಿ 2018

ನಮನ (ಕವನ)

*ನಮನ*

ಗೊಮ್ಮಟ ದೇವಗೆ ನಮನ
ಯುದ್ದವ ಗೆದ್ದವಗೆ  ನಮನ |ಪ|

ವೈರಾಗ್ಯ ಮೂರ್ತಿ ಹಬ್ಬಿದೆ
ಎಲ್ಲೆಡೆ ನಿನ್ನ ಕೀರುತಿ
ಭರತನ ಗೆದ್ದೆ ನೀನು
ಭಾರತದಾಚೆ ಬೆಳೆದೆ|೧|

ಕಾಮ ಕ್ರೋಧ ಮದಗಳ
ತ್ಯಜಿಸಿದ ನೀನು
ಅತಿಯಾಸೆ ಪಡುವವರಿಗೆ
ಮಾದರಿ ನೀನು|೨|

ಮನುಜನ ತೊರೆದು
ಬೆಟ್ಟದಿ ನೆಲೆಸಿದೆ
ಎಲ್ಲವ ತೊರೆದು
ಗೊಮ್ಮಟ ಮೂರುತಿಯಾದೆ|೩|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ಫೆಬ್ರವರಿ 2018

ಶಿವನಾಮಾವಳಿ ( ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ಉತ್ತಮ ಭಕ್ತಿ ಗೀತೆ ಪುರಸ್ಕಾರ ಪಡೆದ ಗೀತೆ)


*ಶಿವನಾಮಾವಳಿ*

ಶಿವನೊಲಿದರೆ ನಮಗೆ ಭಯವಿಲ್ಲ
ಶಿವ ನಾಮ ಭಜಿಸೋಣ ನಾವೆಲ್ಲ|ಪ|

ಶಂಕರ ಶಶಿಧರ  ಎನ್ನೋಣ
ಗೌರಿಯ ಪತಿಯನು ಭಜಿಸೋಣ
ಗಣೇಶನ ಪಿತನ ನನೆಯೋಣ
ಜಾಗರಣೆಯಲಿ ಪಾಲ್ಗೊಳ್ಳೋಣ|೧|

 ಹರ ನಮ್ಮನು ಕಾಯುವನು
ನಮ್ಮೆಲ್ಲರನು ಪೊರೆಯುವನು
ದುಷ್ಟರ ಶಿವನು ಸಂಹರಿಸುವನು
ಗಂಗೆಯ ಭುವಿಗೆ ಕಳಿಸಿಹನು|೨|

ನೀಡು   ಮುಕ್ಕಣ್ಣ ಅಭಯವ
ನಿನ್ನೊಲುಮೆಯಿದ್ದರೆ ಇಲ್ಲ ಭಯ
ನೀನಿದ್ದರೆ ಜಗವು ಸುಂದರವು
ನಮ್ಮಯ ಜೀವನ ಪಾವನವು|೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 ಜನವರಿ 2018

*ಯರಬಳ್ಳಿ ಮಾರಮ್ಮ*(ಭಕ್ತಿಗೀತೆ)

*ಯರಬಳ್ಳಿ ಮಾರಮ್ಮ*

ನಮ್ಮ ಕಾಪಾಡಲು  ಬಾರಮ್ಮ
ಯರಬಳ್ಳಿಯ ದೇವಿ  ಮಾರಮ್ಮ|ಪ|

ಯರಬಳ್ಳಿಯಲಿ ನೆಲೆಸಿಹ ತಾಯಿ
ನಮ್ಮೆಲ್ಲರ ಹರಸು ಮಹಾತಾಯಿ
ತಳಿರು ತೋರಣವ  ಕಟ್ಟುವೆವು
ತಂಬಿಟ್ಟು ಆರತಿ ಬೆಳಗುವೆವು|೧|

ವರುಷದ ಜಾತ್ರೆಯ ಮಾಡುವೆವು
ಗಾವು ಸಿಡಿ ಸೇವೆ ಅರ್ಪಿಸುವೆವು
ಜಲದಿ ಉತ್ಸವಕೆ ನಗುತ ಸಾಗು
ನಮ್ಮಯ ದುರಿತಗಳ  ನೀ ನೀಗು|೨|

ಹೊಳೆಯ ಪೂಜೆಯ ಮಾಡುವೆವು
ಹಳೆ ಕೊಳೆ ಕಳೆಯಲು ಬೇಡುವೆವು
ಬಾನಗುರಿ ಸೇವೆಯ ಮಾಡುವೆವು
ಊರ ಸುತ್ತ ತಳಿಯ  ಹಾಕುವೆವು|೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 ಅಕ್ಟೋಬರ್ 2017

ದೀನದಯಾಳು (ಕವನ)

                *೧*
*ದೀನದಯಾಳು*

ಸ್ವಾಮಿಯೇ ದೇವನೆ ಓ ತಿರಮಲನೆ
ಭಕ್ತರ ಕಾಯುವ ಕರುಣಾಕಾರನೆ

ಏಳು ಬೆಟ್ಟಗಳೊಡೆಯ ನಮ್ಮನರಸು
ಭವದ ಬಂಧನದಿಂದ ಬಿಡಿಸು
ಸವಿ ಮಾತನಾಡಲು ಕಲಿಸು
ಎಲ್ಲರೊಳಗೊಂದಾಗಿ ಬೆರಸು /

ಬಾಲಜಿ ಗೋವಿಂದ ನಾಮ ಪಡೆದವನೆ
ಭಕ್ತರಕ್ಷಕ ದೀನದಯಾಳು ಎನಿಸಿದವನೆ
ಪ್ರಾರ್ಥನೆಗೆ ಮೆಚ್ಚಿ ಓಗೊಡುವವನೆ
 ಕಾಪಾಡು ನಮ್ಮನೆಲ್ಲರ  ಸುಮ್ಮನೆ /

ವೆಂಕಟರಮಣನು  ಸಂಕಟಹರಣನು
ಸಂಕಷ್ಟ ಹರಿಸಿ ಕಾಪಾಡುವನು
ಅಲಂಕಾರ ಪ್ರಿಯ ಇವನು
ಪದ್ಮಾವತಿಯ ಪ್ರಿಯರಮಣನು /

ವರಕೊಡು ನಾಡು ಸುಭಿಕ್ಷವಾಗಲಿ
 ಸಕಲ   ಚರಾಚರಗಳಿಗೆ ಒಳಿತಾಗಲಿ
ಕಲಿಯುಗದ ಕಾಮಧೇನು ನೀನು
ವರಕೊಟ್ಟು ಹರಸು ನಮ್ಮೆಲ್ಲರನು /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*