28 ಏಪ್ರಿಲ್ 2026

ಮಾಪ್ಲಾಂಗ್ ದೇವರ ಕಾಡು.


 


ಮಾಪ್ಲಾಂಗ್ ದೇವರ ಕಾಡು.


ನಮ್ಮ ಕರ್ನಾಟಕದ ‌ಕೊಡುಗು ಮುಂತಾದ ಕಡೆಗಳಲ್ಲಿ ದೇವರ ಕಾಡು ಪರಿಕಲ್ಪನೆ ಇದೆ. ಇತ್ತೀಚಿನ ದಿನಗಳಲ್ಲಿ ‌ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಂಡ ಕಾಂತಾರ ಸರಣಿಯ ಚಿತ್ರಗಳಲ್ಲಿ ಕೂಡಾ ದೈವದ ಹೆಸರಿನಲ್ಲಿ ಕಾಡಿನ ಸಂರಕ್ಷಣಾ ಸಂದೇಶಗಳನ್ನು ಕಾಣಬಹುದು. ಇಂತದೇ ಸಂದೇಶ ಸಾರುವ ದೇವರ ಕಾಡು ಮೇಘಾಲಯದಲ್ಲಿ ಇದೆ.  ಅದೇ ದೇವರ ಕಾಡು ಅಥವಾ ಮಾಪ್ಲಾಂಗ್ ಕಾಡು.

ಈಶಾನ್ಯ ಭಾರತದ ಪ್ರವಾಸ ಸಮಯದಲ್ಲಿ ‌ಮೇಘಾಲಯದ ಶಿಲ್ಲಾಂಗ್ ನಿಂದ ಹೊರಟು ಎಲಿಫೆಂಟ್ ಜಲಪಾತದ ಸೌಂದರ್ಯವನ್ನು ಸವಿದು ನಾವು ತಲುಪಿದ ತಾಣವೇ ಈ ದೇವರ ಕಾಡು.
ನಾವು ದೇವರ ಕಾಡು ತಲಪಿದಾಗ ಸೂರ್ಯ ದೇವ ನಿಧಾನವಾಗಿ ಬಾನದಾರಿಯಲ್ಲಿ ಜಾರಿದ್ದ.ಆದರೂ ದೇವರ ಕಾಡೊಳಗೆ ಹೆಜ್ಜೆ ಹಾಕುತ್ತಾ ಗೈಡ್ ಸಹಾಯದಿಂದ ಕಾಡನ್ನು ಅಲ್ಲಿನ ಸಂಪ್ರದಾಯ ಆಚರಣೆಗಳ ಬಗ್ಗೆ ಮಾಹಿತಿಯನ್ನು ಪಡೆದೆವು.

  ಶಿಲ್ಲಾಂಗ್‌ನಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್‌ಗಳ ದೂರದಲ್ಲಿರುವ ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳ ಮಡಿಲಿನಲ್ಲಿರುವ  ಈ ಕಾಡಿನ ಪ್ರಕೃತಿಯ ಮೌನವು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತದೆ. ಈ ನಾಡಿನ ಪ್ರತಿ ಕಲ್ಲಿಗೂ ಒಂದು ಕಥೆಯಿದೆ. ಸ್ಥಳೀಯ ಖಾಸಿ ಭಾಷೆಯಲ್ಲಿ 'ಮಾ'  ಎಂದರೆ ಕಲ್ಲು 'ಮಾಫ್ಲಾಂಗ್' ಎಂದರೆ 'ಹುಲ್ಲಿನ ಕಲ್ಲು' ಎಂದರ್ಥ. ಈ ಹಸಿರು ಹಾಸಿನ ಮೇಲೆ ತಲೆ ಎತ್ತಿ ನಿಂತಿರುವ ಏಕಶಿಲೆಗಳೇ  ಈ ಗ್ರಾಮಕ್ಕೆ ಆ ಹೆಸರನ್ನು ತಂದಿವೆ.
ಪ್ರವಾಸಿಗರು ಈ ತಾಣವನ್ನು ಪವಿತ್ರ ವನ ಅಥವಾ 'ಸೇಕ್ರೆಡ್ ಗ್ರೋವ್' ಎಂದು ಕರೆದರೆ  ಅಲ್ಲಿನ ಜನರು ಇದನ್ನು 'ಲಾ ಲಿಂಗ್ಡೋ'  ಎಂದು ಕರೆಯುತ್ತಾರೆ. ನೂರಾರು ವರ್ಷಗಳಿಂದ ಅಸ್ಪೃಶ್ಯವಾಗಿ ಉಳಿದಿರುವ ಈ ಕಾಡು ಕೇವಲ ಮರಗಿಡಗಳ ಗುಂಪಲ್ಲ, ಬದಲಿಗೆ ಖಾಸಿ ಜನರ ನಂಬಿಕೆಯ ಸಂಕೇತ. ಜೈಂತಿಯಾ ಮೂಲದ 'ಇಯಾಂಗ್‌ಬ್ಲಾ' ಎಂಬ ಪಂಗಡವು ಈ ವನವನ್ನು 'ಯು ಬಾಸಾ'  ಅಥವಾ 'ಯು ರಂಗ್‌ಕ್ಯೂ'   ಎಂಬ ರಕ್ಷಕ ಆತ್ಮದ ವಾಸಸ್ಥಾನವಾಗಿ ಪ್ರತಿಷ್ಠಾಪಿಸಿದೆ ಎಂದು ಇಲ್ಲಿನ ಜನಪದ ಕಥೆಗಳು ಹೇಳುತ್ತವೆ. ಈ ಪವಿತ್ರ ಕಾಡಿನಿಂದ ಒಂದು ಎಲೆಯನ್ನು ಅಥವಾ ರೆಂಬೆಯನ್ನು ಕಿತ್ತರೂ ಇಲ್ಲಿನ ಕಾವಲು ದೇವತೆಯು ಕೋಪಗೊಳ್ಳುತ್ತಾನೆ ಮತ್ತು ಶಿಕ್ಷಿಸುತ್ತಾನೆ ಎಂಬ ಗಾಢವಾದ ನಂಬಿಕೆ ಇಂದಿಗೂ ಜೀವಂತವಾಗಿದೆ.
ಈ ಹಸಿರು ಕಾನನದ ಪಕ್ಕದಲ್ಲೇ 'ಖಾಸಿ ಹೆರಿಟೇಜ್ ವಿಲೇಜ್' (Khasi heritage village) ಇದೆ. ಇದು ಖಾಸಿ ಸಂಸ್ಕೃತಿಯ ಕೇಂದ್ರಬಿಂದು ಎಂದು ಹೆಸರುವಾಸಿಯಾಗಿದೆ. ಆದರೆ ಸಮಯದ ಅಭಾವದಿಂದ ‌ನಾವು ಹಳ್ಳಿಗೆ ಹೋಗಲಾಗಲಿಲ್ಲ.






ಮಾಫ್ಲಾಂಗ್ ಇತಿಹಾಸದ ಪುಟಗಳಲ್ಲೂ ತನ್ನ ಗುರುತು ಮೂಡಿಸಿದೆ. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ  ಇದು ವೇಲ್ಸ್‌ನ ಪ್ರೆಸ್‌ಬಿಟೇರಿಯನ್ ಚರ್ಚ್‌ನ ಮಿಷನರಿ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. 1878ರಲ್ಲಿ ಡಾ. ಗ್ರಿಫಿತ್ ಗ್ರಿಫಿತ್ಸ್ ಎಂಬುವವರು ಇಲ್ಲಿ ಚಿಕಿತ್ಸಾಲಯವನ್ನು ಸ್ಥಾಪಿಸಿ ಸ್ಥಳೀಯರಿಗೆ ಸೇವೆ ಸಲ್ಲಿಸಿದ್ದರು. ಅವರೂ ಸೇರಿದಂತೆ ಅನೇಕ ಮಿಷನರಿಗಳು ಇದೇ ಮಣ್ಣಿನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬುದು ಈ ಗ್ರಾಮದ ಐತಿಹಾಸಿಕ ಮಹತ್ವವನ್ನು ಸಾರುತ್ತದೆ.

ಈ   ಮಾಫ್ಲಾಂಗ್‌ನ ಪವಿತ್ರ ಕಾಡಿನಿಂದ ಸ್ಥಳೀಯರು ಹಾಗೂ ಪ್ರವಾಸಿಗರು  ಏನನ್ನೂ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಒಂದು ಬೆಣಚುಕಲ್ಲು ಅಥವಾ ಒಣಗಿದ ಮರದ ರೆಂಬೆ,ಹಣ್ಣು ಎಲೆಗಳು ಹೀಗೆ ಯಾವುದೇ ವಸ್ತುಗಳನ್ನು ಕಾಡಿನಿಂದ ಹೊರಗೆ ತರುವುದಿಲ್ಲ.
ಪ್ರವಾಸಿಗರಿಗೆ ಇಲ್ಲಿ ಫುಲ್ ಟ್ರಕ್ ಮಾಡಲು ಅವಕಾಶ ನೀಡಲಾಗುತ್ತದೆ. ಅದು ಇಡೀ ಕಾಡಿನಲ್ಲಿ ಗೈಡ್ ಸಹಾಯದಿಂದ ವಾಕ್ ಮಾಡುವ ಅನುಭವ.ಸಂಜೆಯಾಗಿ ಕ್ರಮೇಣ ಕತ್ತಲಾವರಿಸಿದ್ದರಿಂದ
ನಾವು ಹಾಫ್  ಟ್ರಕ್ ಮಾಡಿ ಕಾಡಿನಲ್ಲಿ ಒಂದು ಸುತ್ತ ಹಾಕಿದಾಗ ಆ ಕಾಡು ಮಾನವನ  ನಿರ್ನಾಮ ಚಟುವಟಿಕೆಗಳಿಂದ ದೂರವಿರುವುದು ಕಂಡುಬಂದಿತು.

ನಮ್ಮ ಗೈಡ್ ಕೆರಿ  ಹಳೆಯ ಕಾಲದ ಖಾಸಿ ಜನಾಂಗದ ಮುಖಸ್ಥನ    ಪಟ್ಟಾಭಿಷೇಕ ಮತ್ತು ತ್ಯಾಗದ ಸ್ಥಳಗಳ ತೋರಿಸಿ ಮಾಹಿತಿ ನೀಡಿದರು.ಇಲ್ಲಿ ಖಾಸಿ ರಾಜರು  ನಾಯಕರು  ಅವರ ಸಭೆಗಳನ್ನು ಮಾಡುತ್ತಿದ್ದರು ಎಂಬ ಮಾಹಿತಿ ತಿಳಿಸಿದರು. ನಾವು ಆ ಕಾಡಿಗೆ ತರಳಿದಾಗ ಸಂಜೆ ಯಾಗಿದ್ದರಿಂದ ಬೇಗನೆ ಹಿಂತಿರುಗಬೇಕಾಯಿತು.ಮುಂದೆ ಸಮಯ ಸಿಕ್ಕರೆ ಆ ಕಾಡಿನಲ್ಲಿ ಪೂರ್ಣ ಟ್ರೆಕ್ಕಿಂಗ್ ಮಾಡುವಾಸೆಯುಂಟಾಯಿತು.ನಮ್ಮ ‌ಗೈಡ್  ಅಲ್ಲಲ್ಲಿ‌ ಇರುವ ರುದ್ರಾಕ್ಷಿ ಮರಗಳನ್ನು ತೋರಿಸಿ ಕೆಳಗೆ ಬಿದ್ದ ರುದ್ರಾಕ್ಷಿ ಗಳನ್ನು ಯಾರೂ ಮುಟ್ಟದಂತೆ  ನಮಗೆ ತಾಕೀತು ಮಾಡಿದ.


ಪವಿತ್ರ ವನದ ಕಗ್ಗತ್ತಲ ದಾರಿಯಲ್ಲಿ ನಡೆಯುವಾಗ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧದ ಅರಿವಾಗುತ್ತದೆ. ಮಾಫ್ಲಾಂಗ್ ಕೇವಲ ಪ್ರವಾಸಿ ತಾಣವಲ್ಲ, ಅದು ಆಧುನಿಕತೆಯ  ಸುಳಿಗೆ ಸಿಲುಕದ ಸಂಪ್ರದಾಯಗಳ ಜೀವಂತ ಪಾಠಶಾಲೆ. ಇಂತಹ  ಸಂಪ್ರದಾಯಗಳಿಂದಲಾದರೂ ನಮ್ಮ ಪ್ರಕೃತಿಯಲ್ಲಿ ಸಮತೋಲನ ‌ಉಂಟಾದರೆ. ಬಹಳಷ್ಟು ಪ್ರಾಕೃತಿಕ ವಿಕೋಪಗಳು ಕಡಿಮೆಯಾಗಿ.ನಮ್ಮ ಧರಣಿ ಸ್ವರ್ಗವಾಗುವುದರಲ್ಲಿ ಸಂದೇಹವಿಲ್ಲ.


ಇದೇ ಭಾವನೆಗಳನ್ನು ಹೊತ್ತು ಪವಿತ್ರ ಕಾಡಿನಿಂದ‌ ಹೊರಬಂದು ನಮ್ಮ ಬಸ್ ಹೊಕ್ಕು ಕುಳಿತೆವು.ಅರ್ಧ ಗಂಟೆಯ ದಾರಿ ಕ್ರಮಿಸಿ ಶಿಲಾಂಗ್ ತಲುಪಿದೆವು. ಶಿಲಾಂಗ್ ನಗರದ ಟ್ರಾಫಿಕ್ ಬೆಂಗಳೂರಿಗಿಂತ ಹೆಚ್ಚಾಗಿತ್ತು. ಶಿಲಾಂಗ್ ನಗರದಲ್ಲಿನ ಐದು ಕಿಲೋಮೀಟರ್ ದೂರದಲ್ಲಿನ ನಮ್ಮ ಲಾಡ್ಜ್ ತಲುಪಲು ಬರೋಬ್ಬರಿ ಒಂದು ಗಂಟೆಯಾಯಿತು ಎಂದರೆ ನೀವು ನಂಬಲ್ಲ. ಆಗ  ಮಾಪ್ಲಾಂಗ್ ಪವಿತ್ರ ಕಾಡು ಮತ್ತೆ ನೆನಪಾಯಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ