03 ಏಪ್ರಿಲ್ 2026

ತುಮಕೂರು ಜಿಲ್ಲೆಯಲ್ಲೊಂದು ಚಿಕ್ಕತಿರುಪತಿ!


 ತುಮಕೂರು ಜಿಲ್ಲೆಯಲ್ಲೊಂದು   ಚಿಕ್ಕತಿರುಪತಿ!




ತುಮಕೂರು ಜಿಲ್ಲೆಯಲ್ಲೊಂದು ಚಿಕ್ಕ ತಿರುಪತಿ ಇದೆ. ದಿನವೂ  ಭಕ್ತಾದಿಗಳು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸ್ವಾಮಿ ನೆಲೆಸಿರುವ ಚಿಕ್ಕತಿರುಪತಿ ಎಂದು ಹೆಸರಾದ ತಾಣವೇ ಸಿದ್ದನಹಳ್ಳಿ.     ಶಿರಾ ತಾಲ್ಲೂಕಿನ ಸಿದ್ದನಹಳ್ಳಿಯು ತಾಲ್ಲೂಕು ಕೇಂದ್ರದಿಂದ 14 ಕಿಲೋಮೀಟರ್ ಅಂತರದಲ್ಲಿದೆ.ಶಿರಾದಿಂದ‌  ಅಮರಾಪುರ ರಸ್ತೆಯ ಮೂಲಕ  12 ಕಿಲೋಮೀಟರ್ ಚಲಿಸಿ   ತಿರುವಿನಲ್ಲಿ 2 ಕಿಲೋಮೀಟರ್ ದಾರಿ ಕ್ರಮಿಸಿದರೆ ಸಿಗುವುದೇ   ಸಿದ್ದನಹಳ್ಳಿ ಶ್ರೀಕ್ಷೇತ್ರ. ಇದಕ್ಕೆ ವೆಂಕಟೇಶ್ವರ ದೇವಾಲಯ ಹಾಗೂ ತಿಮ್ಮಪ್ಪ ದೇವಾಲಯ   ಎಂತಲೂ ಕರೆಯುತ್ತಾರೆ. ಈ  ಕ್ಷೇತ್ರದಲ್ಲಿ ಶ್ರೀತಿಮ್ಮಪ್ಪ ಸ್ವಾಮಿಯು 200 ವರ್ಷಗಳಿಂದ ನೆಲೆಗೊಂಡಿದ್ದಾರೆ.  1992ರಿಂದ 1995ರವರೆಗೆ ನವೀನ ‌ದೇವಾಲಯ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ.

1995ರಲ್ಲಿ ತಿರುಮಲ ತಿರುಪತಿದೇವಸ್ಥಾನಂ ವತಿಯಿಂದ ಕೊಡುಗೆಯಾಗಿ 5 ಆಡಿ ಎತ್ತರ ಸುಂದರ ಕೃಷ್ಣಶೀಲಾಮೂರ್ತಿ ಶ್ರೀ ವೆಂಕಟರಮಣಸ್ವಾಮಿ ವಿಗ್ರಹವನ್ನು ನೀಡಲಾಗಿದೆ. ಶ್ರೀಸ್ವಾಮಿಯು ಹಸನ್ಮುಖಿಯಾಗಿ ಭಕ್ತರನ್ನು ಸೆಳೆಯುತ್ತಾ ಕಷ್ಟಕಾರ್ಪಣ್ಯವನ್ನು ನಿವಾರಿಸುತ್ತಾ ರಾಜ್ಯದ ನಾನಾ ಭಾಗಗಳಿಂದ ಬರುವ  ಭಕ್ತರಿಗೆ ದರ್ಶನ ಕರುಣಿಸಿ ಅವರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ. ವರ್ಷವಿಡೀ ಎಲ್ಲಾ ಹಬ್ಬ ಹರಿದಿನಗಳಲ್ಲಿ ಧಾರ್ಮಿಕ ಕಾರ್ಯಕಲಾಪಗಳು ನೆಡೆಯುತ್ತಿವೆ. ದಿವಂಗತ ಶಿಕ್ಷಕರಾದ  ಶ್ರೀಬಿ.ನಂಜಯ್ಯ ರವರು ಜವಾಬ್ದಾರಿ ವಹಿಸಿಕೊಂಡು ಮತ್ತು ಸಂಸ್ಥಾಪಕ ಅಧ್ಯಕ್ಷರಾಗಿ ತನ್ನ ಆಪ್ತ ಶಿಷ್ಯರ  ಸಹಕಾರದಿಂದ ಭಕ್ತರಿಂದ ದೇಗುಲ ನಿರ್ಮಾಣ ಮಾಡಲು ಸಾಧ್ಯವಾಯಿತು. ಜೊತೆಗೆ ತಮ್ಮ ಸಮುದಾಯದ ಗುಡಿಕಟ್ಟಿನ ಅಣ್ಣತಂದಿರುಗಳ ಹಾಗೂ ಕಾರ್ಯಕಾರಿ ಸಮಿತಿಯ ಮತ್ತು ಗ್ರಾಮದ ಭಕ್ತರ ಸರ್ವವಿಧವಾದ ಸಹಕಾರ ಸಿಕ್ಕಿತ್ತು.

1995 ಮೇ 10, 11, 12, ಮೂರು ದಿನಗಳ ಕಾಲ ವಿಜೃಂಭಣೆಯಿಂದ ಉನ್ನತ ವೇದೋಕ್ತ ವಿದ್ವಾಂಸರಿಂದ ಹೋಮ, ಹವನಾದಿಗಳು-ಪಾರಾಯಣಗಳು, ಅಧಿವಾಸಗಳು, ಧಾರ್ಮಿಕ ಪೂಜಾವಿಧಿವಿಧಾನಗಳೊಂದಿಗೆ ಪರಮ ಪೂಜ್ಯ ಶ್ರೀಶ್ರೀಗಳ ದಿವ್ಯಸಾನಿದ್ಯದಲ್ಲಿ ಬೆಂಗಳೂರು ಜಿಲ್ಲೆ, ಬಸವನಹಳ್ಳಿಯ ಪಾಂಚರಾತ್ರಗಮ ಉ।ವೇ॥ಪು॥ವಿದ್ವಾನ್ ಶ್ರೀ ರಾಮಕೃಷ್ಣಚಾರ್ಯರ ಮತ್ತು 11 ಜನರ ಆಗಮಿಕರ ತಂಡದೊಂದಿಗೆ ಶ್ರೀಸ್ವಾಮಿಯ ಸ್ಥಿರಮೂರ್ತಿ ಪ್ರತಿಷ್ಟಾಪನೆ ಕಾರ್ಯ ನೆರವೇರಿತು.


ವಿಮಾನಗೋಪುರ, ಕಳಸಪ್ರತಿಷ್ಠೆ, ಮತ್ತು ಕುಂಭಾಭಿಷೇಕದ ಕಾರ್ಯವನ್ನು ನೆರವೇರಿಸುವಾಗ ವಿಷ್ಣುವಿನ ವಾಹನವಾದ ಶ್ರೀ ಗರುಡಸ್ವಾಮಿಯು ಗೋಪುರವನ್ನು ಮೂರು ಬಾರಿ ಪ್ರದಕ್ಷಿಣೆ ಬಂದು ಆಶಿರ್ವಾದ ಮಾಡಿದನ್ನ ಜನ ಇನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸುಮಾರು 8 ರಿಂದ 10 ಸಾವಿರ ಜನರ ಸಮಕ್ಷಮದಲ್ಲಿ ಈ ಮಹಾಕಾರ್ಯ ಅಂದು ನಿರ್ವಿಘ್ನವಾಗಿ ನೆರವೇರಿತು.

ಸಿದ್ದನಹಳ್ಳಿಯ ಗ್ರಾಮದೇವತೆ ಶ್ರೀ ದುರ್ಗಮ್ಮ ದೇವರಿಗೆ ಆರತಿ ಉತ್ಸವನ್ನು ಸಂಭ್ರಮದಿಂದ ಗ್ರಾಮದ ಜನತೆ, ಹಿರಿಯರು, ಮಹಿಳೆಯರು ಭಕ್ತಿಪೂರ್ವಕವಾಗಿ ನೆರವೇರಿಸಿದರು. ಅಂದು ಸಾಂಕೇತಿಕವಾಗಿ ಉಚಿತ ವಿವಾಹ ನೆರವೇರಿಸಲಾಯಿತು. ನಂತರ 48 ದಿನ ವಿವಿಧ ಭಕ್ತಮಹಾಷಯರು ಮಂಡಲ ಪೂಜೆಯನ್ನು ನೆರವೇರಿಸಿದರು. ಅಂದಿನಿಂದ ಇಲ್ಲಿಯವರೆಗೆ ಪ್ರತಿವರ್ಷವು ವೈಶಾಖಮಾಸ ಶುದ್ಧ ಚಾಂದ್ರಮಾನ ಶ್ರೀ ವೈಷ್ಣವ ಜಯಂತಿ ಚಿತ್ತಾ ನಕ್ಷತ್ರದಂದು ಶ್ರೀ ವೆಂಕಟೇಶ್ವರಸ್ವಾಮಿಯ ವಾರ್ಷಿಕೋತ್ಸವನ್ನು ವೈಭವದೊಂದಿಗೆ ನಡೆಸುತ್ತಾ ಬರಲಾಗಿದೆ.

ಜೊತೆಗೆ ಪ್ರತಿವರ್ಷವೂ ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಲಡ್ಡು-ತೀರ್ಥ ಪ್ರಸಾದವೂ ವಿತರಣೆಯಾಗುತ್ತಿದೆ. ತುಮಕೂರು ಜಿಲ್ಲೆಗೆ ಪ್ರಪ್ರಥಮವಾಗಿ ತಿರುಪತಿಯಿಂದ ಬಂದ ಸ್ವಾಮಿ ಇದಾಗಿರುತ್ತದೆ. ಧಾರ್ಮಿಕ ಸಮಾರಂಭಗಳಲ್ಲಿ ಗ್ರಾಮದ ಹಿರಿಯರಿಗೆ, ಸಮುದಾಯದ ಗಣ್ಯರನ್ನು  ಗೌರವಿಸುತ್ತಾ ಪ್ರತಿವರ್ಷವೂ ಪೂಜ್ಯಶ್ರೀಗಳನ್ನ ಕರೆಸಿ ಪಾದಪೂಜೆಯೊಂದಿಗೆ ಕಲಾಪ ಜರುಗುತ್ತಿದೆ. ಸದರಿ ದೇವಾಲಯದಲ್ಲಿ ಮದುವೆ ನಾಮಕರಣ, ಚೌಲೋಪನಯನ ಕಾರ್ಯಗಳು ಜರುಗುತ್ತಿವೆ. ವೈಕುಂಠ ಏಕಾದಶಿ ಸೇರಿದಂತೆ ವಿವಿಧ ಹಬ್ಬ ಹರಿದಿನಗಳಲ್ಲಿ ದೇವಾಲಯದಲ್ಲಿ ವಿಶೇಷವಾಗಿ ಅಲಂಕರಿಸಿ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಹೊರಗಡೆಯಿಂದ ಬರುವ ಭಕ್ತರ ಅನುಕೂಲಕ್ಕೆ ಉಳಿದುಕೊಳ್ಳಲು ಸರ್ಕಾರ ಅನುದಾನವಿಲ್ಲದೆ ಬರೀ ಗ್ರಾಮೀಣ ಭಕ್ತರುಗಳ ಗುಡಿಕಟ್ಟಿನ ಅಣ್ಣತಮ್ಮಂದಿರ ಸಹಕಾರದಿಂದ ವಿಶ್ರಾಂತಿಗೃಹ ನಿರ್ಮಾಣವಾಗಿದೆ. ಈ ದೇಗುಲಕ್ಕೆ ಸರ್ಕಾರದಿಂದ ಸರ್ಕಾರೇತರ ಸಹಕಾರ ಸಿಕ್ಕಿದಲ್ಲಿ ಉತ್ತಮ ಕಾರ್ಯಗಳು ನಡೆದು ಧಾರ್ಮಿಕ ಸೊಗಡು ಹೆಚ್ಚಿ ಉತ್ತಮ ಕ್ಷೇತ್ರವಾಗುವುದರಲ್ಲಿ ಸಂದೇಹವೇವಿಲ್ಲ.

ಗ್ರಾಮೀಣ ಜನತೆ, ಮಕ್ಕಳಲ್ಲಿ ಭಕ್ತಿ-ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ಧರ್ಮವನ್ನು ರಕ್ಷಿಸಿದ್ದೇ ಆದಲ್ಲಿ ಧರ್ಮವು ನಮ್ಮನ್ನು ಕಾಪಾಡುವುದರಲ್ಲಿ ಸಂದೇಹವಿಲ್ಲ  ಇಂತಹ ಚಿಕ್ಕ ತಿರುಪತಿಗೆ ಒಮ್ಮೆಯಾದರು ಹೋಗಿ ಸ್ವಾಮಿಯ ದರ್ಶನ ಪಡೆದರೆ ಜೀವನ ಸಾರ್ಥಕವಾದೀತು. ಈ ದೇಗುಲಕ್ಕೆ ಮಾಜಿ ಸಚಿವರು ಕರ್ನಾಟಕ ಸರ್ಕಾರದ ‌ದೆಹಲಿ‌ಯಲ್ಲಿ ವಿಶೇಷ ಪ್ರತಿನಿಧಿಯಾದ ಟಿ ಬಿ ಜಯಚಂದ್ರ ಹಾಗೂ ಮಾಜಿ ಶಾಸಕರಾದ ರಾಜೇಶ್ ಗೌಡರ ಕೊಡುಗೆಗಳನ್ನು ಟ್ರಸ್ಟ್ ನ ಪದಾಧಿಕಾರಿಗಳು ಮನದುಂಬಿ ಸ್ಮರಿಸಿಕೊಳ್ಳುತ್ತಾರೆ. ಇದೇ ರೀತಿಯಲ್ಲಿ   ಭಕ್ತರ ಹಾಗೂ ಜನಪ್ರತಿನಿಧಿಗಳ ಸಹಕಾರ ದೊರೆತರೆ ಈ ಕ್ಷೇತ್ರ ಬೆಳೆಯುತ್ತಾ ಬೆಳಗುವಲ್ಲಿ ಸಂದೇಹವಿಲ್ಲ.

ಈ ವರ್ಷದ 31 ನೇ ವಾರ್ಷಿಕೋತ್ಸವದ ಹಾಗೂ ಸಾಮೂಹಿಕ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವು ತಿರುಮಲ ತಿರುಪತಿ ದೇವಸ್ಥಾನದ ಅನುಗ್ರಹದೊಂದಿಗೆ ಏಪ್ರಿಲ್ 11 ಮತ್ತು 12 ರಂದು ನಡೆಯಲಿದೆ. ಮಹಾಶರಣ ಶ್ರೀ ಕಮ್ಮಾರ ಕಲ್ಲಯ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು  ನಿಟ್ಟರಹಳ್ಳಿಯ ನಿಜಶರಣ ಕಮ್ಮಾರ ಕಲ್ಲಯ್ಯ ಶ್ರೀಮಠದ ಪೀಠಾದ್ಯಕ್ಷರಾದ ಪರಮ ಪೂಜ್ಯ
  ಶ್ರೀ ‌ಶ್ರೀ ಶ್ರೀ ಡಾ. ನೀಲಕಂಠಾಚಾರ್ಯ ಸ್ವಾಮೀಜಿ ಹಾಗೂ ಪಟ್ಟನಾಯಕನ ಹಳ್ಳಿಯ  ಸ್ಪಟಿಕಪುರಿ ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ
  ಶ್ರೀ ‌ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿ ರವರು ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ದೇವಾಲಯದ ವತಿಯಿಂದ ಗೌರವ ಶ್ರೀರಕ್ಷೆ ನೀಡಲಾಗುತ್ತದೆ. ತುಮಕೂರಿನ ಸಾಧಕ ರತ್ನ ಶ್ರೀ ಗುರುಮೂರ್ತಿ, ಸಾಹಿತಿಗಳಾದ ಶ್ರೀಮತಿ ರತ್ನಮ್ಮ ಹಾಗೂ ಸಾಹಿತಿಗಳು ಶಿಕ್ಷಕರೂ ಆದ ಸಿಹಿಜೀವಿ ವೆಂಕಟೇಶ್ವರ ರವರು ಈ ಬಾರಿಯ ಶ್ರೀರಕ್ಷೆ ಪಡೆಯಲಿದ್ದಾರೆ.
ವೇದಿಕೆ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ವೆಂಕಟೇಶ್ವರ ಸ್ವಾಮಿಯ ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಲು ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಲ್ ಎನ್ ಮಂಜುನಾಥ್ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಬನ್ನಿ ಚಿಕ್ಕ ತಿರುಪತಿ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗೋಣ.


ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು ಹಾಗೂ ಸಾಹಿತಿಗಳು
ತುಮಕೂರು
9900925529

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ