ಚಿತ್ರ ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚಿತ್ರ ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

26 ಏಪ್ರಿಲ್ 2021

ಜೀವನ ಕಲೆ .ಕವನ


 



*ಜೀವನ ಕಲೆ*


ನಾವುಗಳು ಕೆಂಪಿರುವೆಗಳು

ಹಸುರಿನ ಎಲೆಯ ಮೇಲೆ

ವೃತ್ತಾಕಾರದಿ ಸೇರಿಹೆವವು.


ನಮ್ಮ ಚಿತ್ತವೆಲ್ಲವೂ

ಜೇನ ಹನಿಯ ಮೇಲೆ

ನೋಡಿ ನಮ್ಮ ಲೀಲೆ.


ಸಮಾನತೆಗೆ ಹೆಸರೇ ನಾವು

ಸಮಾನವಾಗಿ ಸೇವಿಸುವೆವು

ಇದು ನಾವು ಕಲಿತ ಕಲೆ.


ಮೂಢ ಮಾನವನೆ

ಕಲಿತುಕೋ ನಮ್ಮಿಂದ

ನೀ ಜೀವನ ಕಲೆ .



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

28 ಫೆಬ್ರವರಿ 2021

ಓ ಗಿಳಿರಾಮ ... ಕವನ


 




*ಓ ಗಿಳಿರಾಮ*


ಓ ಗಿಳಿರಾಮ ....

ಎಲ್ಲಿರುವನು ನನ್ನ ರಾಮ

ತಿಳಿಸಿಬಿಡು ಸಲ್ಲಿಸುವೆ 

ನಿನಗೆ ನನ್ನ ಪ್ರಣಾಮ .


ದಿನಪ ಬರುವ ಮೊದಲೇ

ದಿನವೂ ಬಂದು

ಕದ್ದು ನೋಡುತ್ತಿದ್ದ, ಈಗೀಗ

ಅವನ ಸುದ್ದಿಯಿಲ್ಲ ನೀನೇ ಹೇಳು 

ನಲ್ಲನಿಲ್ಲದೆ ಹೇಗಿರಲಿ?


ಮಣಿ ಸರವ ನೀಡಿ

ಹಣೆಗೊಂದು ಮುತ್ತನಿತ್ತು 

ಸ್ವರ್ಗಕ್ಕೆ ಕರೆದೊಯ್ದಿದ್ದನು

ಕಣಿ ಹೇಳು ನನಗಿಂದು 

ಅವನೆಂದು ಬರುವನು ?


ಅಕ್ಕರೆಯ ಮಾತನಾಡಿ

ಸಕ್ಕರೆಯ ಸವಿ ನೀಡಿ 

ಪ್ರೇಮ ಲೋಕ ಸೃಷ್ಟಿಸಿದ್ದ ನನಗಾಗಿ

ಸಿಕ್ಕರೆ ನನ್ನ ಮಾರನಿಗೇಳು

ಕಾಯುತಿಹಳು ನಿನ್ನರಸಿ ನಿನಗಾಗಿ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


14 ಡಿಸೆಂಬರ್ 2020

ಸಾಲದರೆಡು ಕಣ್ಣು (ಕವನ)




*ಸಾಲದರೆಡು ಕಣ್ಣು*


ಭುವಿಯಲಿ ಬ್ರಹ್ಮನ  ಸೃಷ್ಟಿಯ

ಸೌಂದರ್ಯವೇ  ಈ ಹೆಣ್ಣು

ಮೂಗುತಿ ಧರಿಸಿದ ಅವಳ

ನೋಡಲು ಸಾಲದೆರಡು ಕಣ್ಣು.


ಧರಿಸಿ  ಬಂದರೆ ಯುವತಿಯರು

ಚಿನ್ನ, ಬೆಳ್ಳಿ ,ವಜ್ರದ  ನತ್ತು

ನೋಡುವ ಸೌಂದರ್ಯೋಪಾಸಕರಿಗೆ 

ಕಳೆದು ಹೋದದ್ದೆ ಗೊತ್ತಾಗೊಲ್ಲ ಹೊತ್ತು. 


ಕಾಲ್ಬೆರಳಿಗೆ ಹಾಕಿದ ಕಾಲುಂಗುರ

ಮುತ್ತೈದೆಯರ ಪಾಲಿಗೆ ಸೌಭಾಗ್ಯ

ನೀರೆಯರ ಕಾಲ್ಬೆರಳ ಅಲಂಕರಿಸಿದ

ಕಾಲುಂಗುರದ ಭಾಗ್ಯವೋ ಭಾಗ್ಯ.


ಕಾಲಂದುಗೆಯ ಧರಿಸಿ ಘಲ್ ಘಲ್

ಸದ್ದು ಮಾಡಿ ನಾರಿ ಬಂದರೆ ಬೀದಿಯಲಿ

ಸಂಗೀತದ ಸರಿಗಮಗಳು ಉಲಿದಂತೆ

ಭಾಸವಾಗುವುದು ನಮ್ಮ ಕಿವಿಗಳಲಿ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ








16 ಜೂನ್ 2020

ಪುಟ್ಟನ ಮೀನುಗಳು ( ಶಿಶುಗೀತೆ)



*ಪುಟ್ಟನ ಮೀನುಗಳು*

ಬೆಟ್ಟ ಗುಡ್ಡಗಳ ದಾಟುತ
ಕೋಳದ ಬಳಿ ಪುಟ್ಟ ನಡೆದನು
ಟಾಮಿಯ ಸಂಗಡ ಮೀನಿಗೆ
ಗಾಳ ಹಾಕಿ ಕುಳಿತನು.

ಒಂದು ಎರಡು ಮೀನು
ಹಿಡಿದು ಬುಟ್ಟಿಗೆ ಹಾಕಿದ
ಹಿಂದೆ ಕುಳಿತ ಟಾಮಿ
ಅವನು ಹೊಟ್ಟೆಗೆ ಇಳಿಸಿದ.

ಗಾಳ ಹಾಕಿ ಪುಟ್ಟನು  ಪ್ರಕೃತಿ
ಸೌಂದರ್ಯವನು ಸವಿದ
ಹಿಂದೆ ಕುಳಿತ ಟಾಮಿ
ಮೀನ ರುಚಿಯ ನೋಡಿದ

ಕೊಳದ ಬಳಿಯ ಗುಡಿಸಲಲ್ಲಿ
ಮೀನು ಸುಡಲು ಆಸೆ ಪಟ್ಟನು
ಒಂದೊಂದೆ ಮೀನು ತಿಂದ
ಟಾಮಿ ಡರ್.. ಎಂದು ತೇಗಿದನು.

ಖಾಲಿಬುಟ್ಟಿಯನ್ನು ನೋಡಿ ಪುಟ್ಟ
ಸಿಟ್ಟಿನಿಂದ ಕೋಲು‌ ಎತ್ತಿದ
ಕುಯ್ ..ಗುಡುತ ಟಾಮಿ
ಬಾಲ ಎತ್ತಿ ದೂರಕೆ ಓಡಿದ.

*ಸಿ ಜಿ ವೆಂಕಟೇಶ್ವರ*
*ತುಮಕೂರು*






08 ಜೂನ್ 2020

ವಿಘ್ನ ನಿವಾರಕ



*ವಿಘ್ನ ನಿವಾರಕ*

ಪೂಜೆಗೆ ಬಂದಿಹೆ
ವರವನು ಕರುಣಿಸೋ
ಮೊರದಗಲ ಕಿವಿಯ
ವಿನಾಯಕನೆ.

ಹೂಮಾಲೆ ಕಟ್ಟಿ
ಗಂಧ ,ಧೂಪದಿ
ಅರ್ಚಿಸುವೆ ಕಾಪಾಡೋ
ವಕ್ರತುಂಡನೆ.

ಪಾರಿವಾಳದ ಪರಿವಾರ
ಬಂದಿದೆ ನೋಡಿಲ್ಲಿ
ಪ್ರಾಣಿ ಪಕ್ಷಿಗಳ ರಕ್ಷಿಸು
ಲಂಬೋದರನೆ.

ಜಗವು ನಡುಗುತಿದೆ
ಅಗೋಚರ ಜೀವಿಗೆ
ಕಾಪಾಡು ನಮ್ಮನ್ನು
ವಿಘ್ನನಿವಾರಕನೆ.

*ಸಿ ಜಿ ವೆಂಕಟೇಶ್ವರ*

03 ಜೂನ್ 2020

ಸೈಕಲ್ ಹೊಡೆಯೋಣ (ಇಂದು ವಿಶ್ವ ಸೈಕಲ್ ದಿನ)

*ಸೈಕಲ್ ಹೊಡೆಯೋಣ*

(ಇಂದು ವಿಶ್ವ ಸೈಕಲ್ ದಿನ )

ಹೊಡೆಯೋಣ ಸೈಕಲ್‌
ಗಟ್ಟಿಯಾಗಿಸೋಣ ಕೈಕಾಲ್

ಇಂದೇ ಸೈಕಲ್ ಹತ್ತಿಬಿಡೋಣ
ಅತಿಯಾದ ತೂಕವ
ಇಳಿಸಲು ಪಣ ತೊಡೋಣ

ನಮ್ಮಯ ಬಲವೆ ಇಂಧನ
ಸ್ನಾಯುಬಲ  ಹೆಚ್ಚಿಸಿಕೊಳ್ಳಲು
ಇಂದೇ ಸೈಕಲ್ ತುಳಿಯೋಣ

ಸೈಕಲ್ ಬೇಕು ನಮಗೆ
ಮನದ ಉಲ್ಲಾಸಕೆ ಮೆದಳಿನ
ಚುರುಕಿಗೆ ಸೈಕಲ್ ಹೊಡೆಯೋಣ.

ಶ್ವಾಸಕೋಶ ಬಲಗೊಳ್ಳಲು
ದೇಶವ ಸುತ್ತಲು ಮನವನು
ತಣಿಸಲು ಸೈಕಲ್ ಹೊಂದೋಣ

ಪರಿಸರ ಉಳಿಸಲು 
ಮಲಿನತೆತೊಡೆಯಲು
ಜಾಗೃತರಾಲು ಸೈಕಲ್ ಕೊಳ್ಳೋಣ

*ಸಿ ಜಿ ವೆಂಕಟೇಶ್ವರ*

27 ಮೇ 2020

ರಕ್ಷಕರು ( ಕವನ)


*ರಕ್ಷಕರು*


ರಕ್ಷಕರು ನಾವು
ಆರಕ್ಷಕರು ನಾವು||

ಕಣ್ಣಿಗೆ ಕಾಣುವ ಕಳ್ಳರ
ದುರುಳರ ಹಿಡಿಯುವೆವು
ಕಣ್ಣಿಗೆ ಕಾಣದ ಅಣುಗಳ
ಮಣಿಸಲು ಹೋರಾಡುವೆವು||

ಹಗಲಿರುಳೆನ್ನದೆ ಜನಗಳ
ಸೇವೆಗೆ ಸಿದ್ದರು ನಾವು
ಕಾನೂನು ಸುವ್ಯವಸ್ಥೆ
ಕಾಪಾಡಲು ಬದ್ದರು ನಾವು||

ವೈರಾಣು ಮಣಿಸಲು
ಮನೆಯನು ತೊರೆದಿಹೆವು
ನಮ್ಮನೆ ಹೊಸ್ತಿಲಿ ನಿಂತು
ಹೆಂಡತಿ ಮಕ್ಕಳ ನೋಡುವೆವು.||

ತ್ಯಾಗವ ಮಾಡಿರುವೆವು ನಮ್ಮ
ಸುಖವ ನಿಮ್ಮೊಳಿತಿಗೆ
ಕೈ ಜೋಡಿಸಿ ನಮ್ಮೊಂದಿಗೆ
ನೀವು ಸಕಲರ  ಒಳಿತಿಗೆ.||

*ಸಿ ಜಿ ವೆಂಕಟೇಶ್ವರ*

25 ಮೇ 2020

ನೆನಪು ಸುಂದರ ( ಕವನ)



*ನೆನಪು ಸುಂದರ*

ಸ್ಲೇಟು ಬಳಪ ಹಿಡಿದು
ಬರೆದ ನೆನಪು ಸುಂದರ
ಪಾಟಿ ಚೀಲ ಹೊತ್ತು
ನಡೆದ ಬಾಲ್ಯ ಸುಮಧುರ

ಪೆನ್ ಪೆನ್ಸಿಲ್ ಹಿಡಿದು
ಬರೆಯಲೇನೋ  ಆನಂದ
ನೆಲದ ಮೇಲೆ ಕುಳಿತು
ಓದಿದ್ದೆ ಬಲು ಚೆಂದ

ಗಡಿಗೆ ನೀರು ಇತ್ತು
ಅಂದು ತಣಿಸಲು ದಾಹ
ಪುಸ್ತಕದ ಬಗ್ಗೆ ನನಗೆ
ಇತ್ತು ಏನೋ ಮೋಹ

ಲಾಟೀನು‌ ನೀಡುತಿತ್ತು
ಓದಲು ರಾತ್ರಿ ಬೆಳಕು
ಇವೆಲ್ಲ ಸೇರಿ ರೂಪಿಸಿವೆ
ನನ್ನ ಸುಂದರ ಬದುಕು

ಸಿ ಜಿ ವೆಂಕಟೇಶ್ವರ
ತುಮಕೂರು

24 ಮೇ 2020

ಮಹಾಸಂತ ( ಕವನ)


*ಮಹಾಸಂತ*
ಸ್ವಾಮಿ ವಿವೇಕಾನಂದ

ವಿಶ್ವವ ಬೆಳಗಿದ ಪುಣ್ಯಾತ್ಮ
ಜಾಗೃತವಾಯಿತು ನಮ್ಮಾತ್ಮ||

ವಿಶ್ವನಾಥ, ಭುವನೇಶ್ವರಿ
ದೇವಿಯ ವರದಾನ
ಜನರ ಸೇವೆಯ ಮಾಡುತ
ಕಂಡಿರಿ ಅವರಲೆ ಜನಾರ್ಧನ||

ನಮ್ಮ ಸಂಸ್ಕೃತಿಯನ್ನು
ವಿಶ್ವಕೆ ಸಾರಿದ ಧೀಮಂತ
ಆತ್ಮೋಧ್ದಾರಕೆ ಕರೆ ನೀಡಿದ
ಯುಗದ ಮಹಾ ಸಂತ||

ರಾಮಕೃಷ್ಣರ ಆಧ್ಯಾತ್ಮ
ಪಾಲಿಸಿ ತೊರಿಸಿದಿರಿ ಆನಂದ
ಜನಮನದಲ್ಲಿ ನೆಲೆಸಿದ
ನೀವೇ ಸ್ವಾಮಿ ವಿವೇಕಾನಂದ||

 *ಸಿ ಜಿ‌ ವೆಂಕಟೇಶ್ವರ*

19 ಮೇ 2020

ತಾರೆಗಳು



"ತಾರೆಗಳು*

ತಾವರೆ ಕೊಳದ
ತಾರೆಗಳು ನಾವು
ಹೂಗಳ ನೋಡಿ
ಮೈಮರೆಯುವೆವು||

ದಿನಪನ‌ ಕಂಡ
ಕಮಲದ ಹಾಗೆ
ನಗುತಲಿ ನಾವು
ಬಾಳುವೆವು ಹೀಗೆ||

ಬಡವರೆ ಆದರೂ
ನಗುವೆವು ನಾವು
ನಮ್ಮಯ ಸಿರಿತನ
ನೋಡಿರಿ ನೀವು||

ನಮ್ಮಯ ಜೀವನ
ಹೂವಿನ ರೀತಿ
ಹೊಸಕಿ ಹಾಕದಿರಿ
ತೋರಿಸಿ ಪ್ರೀತಿ||

ಸಿ ಜಿ ವೆಂಕಟೇಶ್ವರ




15 ಮೇ 2020

ಉಳಿಸೋಣ ಸಂಬಂಧ ( ಇಂದು ವಿಶ್ವ ಕುಟುಂಬ ದಿನ)

*ಉಳಿಸೋಣ ಸಂಬಂಧ*

(ಇಂದು ವಿಶ್ವ ಕುಟುಂಬ ದಿನ)

ಬೆಸೆಯೋಣ ಬಂಧ
ಉಳಿಸೋಣ ಸಂಬಂಧ|ಪ|

ತೊಲಗಲಿ‌ ಬೇಸರ
ಎಲ್ಲರ ಮನದಲಿ
ತುಂಬಲಿ ಸಂತಸ
ಎಲ್ಲರ ಮನೆಯಲಿ|೧|

ರಸವಿರಲಿ ಮಾತಲಿ
ದ್ವೇಷವ ಮರೆಯೋಣ
ಸಮರಸವಿರಲಿ ನಮ್ಮಲಿ
ಸಹಬಾಳ್ವೆ ಮಾಡೋಣ|೨|

ಬೆಳೆಯಲಿ ಎಲ್ಲೆಡೆ
ಮಾನವೀಯ  ಮೌಲ್ಯಗಳು
ಉಳಿಯಲಿ ಕೌಟುಂಬಿಕ
ಸಿಹಿ ಸಂಬಂಧಗಳು|೩

ನಿಸ್ವಾರ್ಥ ,ಒಗ್ಗಟ್ಟು
ಎಲ್ಲರೂ ಪಾಲಿಸೋಣ
ಸುಂದರ ಕುಟುಂಬಕ್ಕೆ
ಬುನಾದಿ ಹಾಕೋಣ|೪|

*ಸಿ‌ ಜಿ‌ ವೆಂಕಟೇಶ್ವರ*

03 ಮೇ 2020

ಹರಿತವಾಗಲಿ ಲೇಖನಿ ಇಂದು ವಿಶ್ವ ಪತ್ರಿಕೆಯ ಸ್ವಾತಂತ್ರ್ಯ ದಿನ

*ಹರಿತವಾಗಲಿ ಲೇಖನಿ*

ಹರಿತವಾಗಲಿ
ಲೇಖನಿ
ಒರೆಸಲಿ ಶೋಷಿತರ
ಕಂಬನಿ
ಮಾನವೀಯತೆಯು ತೊರೆಯಾಗಿ ಹರಿಯಲಿ
ಸೇರಿ ಹನಿ ಹನಿ
ಎಲ್ಲೆಡೆ ಅನುರಣಿಸಲಿ
ಸಮಾನತೆಯ ಧ್ವನಿ

*ಸಿ ಜಿ ವೆಂಕಟೇಶ್ವರ*

02 ಮೇ 2020

ಬರುವನೆ ದೀನಬಂಧು (ಕವನ)

*ಬರುವನೇ ದೀನಬಂಧು*

ಮನೆ ಎಲ್ಲಿದೆ ಮಠ ಎಲ್ಲಿದೆ ನಮಗೆ
ಕೊನೆ ಎಲ್ಲಿದೆ ನೆಲೆ ಎಲ್ಲಿದೆ  ಬಾಳಿಗೆ
ಮಾಸಿರುವ ಬಟ್ಟೆಗಳೇ ವಸ್ತ್ರಗಳು
ಕಾಣುತಿಲ್ಲ ಬಟ್ಟೆ ತೋರುವ ಹಸ್ತಗಳು.

ಮುಖ ಮೇಲೆ ಮಾಡಿ ಕುಳಿತ ಅಪ್ಪ
ಮಕ್ಕಳಿಗೆ ಚಿಂತೆ ನಮಗೇಕಿಲ್ಲ ತುಪ್ಪ
ಅಮ್ಮನಿಗೋ ಮಕ್ಕಳ ಭವಿಷ್ಯದ ಚಿಂತೆ
ಒಳಗೊಳಗೆ ದಹಿಸುತಿದೆ ನೋವಿನ ಚಿತೆ.

ಟಾಕುಟೀಕಾಗಿಹರು ಮಹಲಿನವರು
ನಾವೇಕೆ ಇಲ್ಲಹೆವು ಊರಿಲ್ಲದವರು
ಕಾರಲೇ ಹೋಗುವ ಆ ಮನೆಯ ಪಾಪ
ಕಾರಿರುಳಲಿಹೆವು ನಮಗೇಕೆ ಈ ಶಾಪ

ಪಾತ್ರೆ ಪಗಡಗಳು ತುಂಬುವುದು ಎಂದು
ಎಲ್ಲಿಹರು ನಮ್ಮ ಸಲಹುವ ಬಂಧು
ಕನಸುಗಳು ಬತ್ತಿಲ್ಲ ನಮಗೆ ಇಂದು
ಕಾಯುತಿಹೆವು ಬರುವನೇ ದೀನಬಂಧು

*ಸಿ ಜಿ ವೆಂಕಟೇಶ್ವರ*
*ತುಮಕೂರು*


01 ಮೇ 2020

ಸಿಹಿಜೀವಿಯ ಎರಡು ಹನಿಗಳು

ಹನಿಗಳು

*೧*

*ದೃಷ್ಟಿ*

ನೋಡುವ ದೃಷ್ಟಿ
ಸರಿಯಿದ್ದರೆ
ಎಲ್ಲಾ ಚೆಲುವು
ಒಲವಿನಿಂದ ಮಾಡಿದ
ಕಾರ್ಯಕೆ ಸದಾ ಗೆಲುವು.

*೨*

*ಕಾರಣ*

ಒಲವಿನ ಮಾತನಾಡುತ
ಸಲುಗೆಯಲಿ ಕೇಳಿದ
ನನ್ನ ಪ್ರೀತಿಸುವೆಯಾ
ಗೆಲುವಿನ ಸರದಾರ
ನಿನ್ನ ಪ್ರೀತಿಸದಿರಲು
ಕಾರಣ ತಿಳಿಸುವೆಯಾ?

*ಸಿ ಜಿ ವೆಂಕಟೇಶ್ವರ*

30 ಏಪ್ರಿಲ್ 2020

ಬರಬಾರದೆ ( ಭಾವಗೀತೆ )

*ಬರಬಾರದೆ* (ಹೆಣ್ಣಿನ ಸ್ವಗತ)
ಭಾವಗೀತೆ

ನನ್ನ ಇನಿಯ,ಮನದ ಗೆಳೆಯ, ಕಾದಿರುವೆ ನಾ, ನೀನೀಗ ಬರಬಾರದೆ |
ಕನಸಲ್ಲೂ ನೀ  ಮನದಲ್ಲೂ ನೀ,ಬಂದು ಈಗ
ಬಿಗಿದಪ್ಪಿಕೊಳಬಾರದೆ|
ನೀ ಇರುವ ಕ್ಷಣವು,ಸ್ವರ್ಗವು ಧರೆಗಿಳಿಯದೆ?||ಪ||

ನೀನಿರಲು ಗೆಲುವು,ನೀನೇನೆ ಒಲವು,ಪ್ರೀತಿಗೆ ಆಶಾಕಿರಣ|
ಒಲವಿನ ರಾಜ ,ಚೆಲುವಿನ ಸ್ನೇಹಿತ,
ನೀ ನನ್ನಯ ಅರುಣ|
ನೀನೇನೆ ಮಾರ, ಜೊತೆಯಾಗು ಬಾರ||
ಮನದನ್ನೆಯ ವರಿಸು ಬಾ|
ಧಿಕ್ಕರಿಸಿದೆ ನಾನು, ಅಪರಂಜಿಯು ನೀನು|
ಬದಲಾದ ಗೆಳತಿಗೆ
ಅವಕಾಶ ಕೊಡಬಾರದೆ|| ಪ||

ಆ ನಿನ್ನ ಸ್ಪರ್ಶ ,ನೀ ಕೊಟ್ಟು ಮುತ್ತು, ಎಡೆಬಿಡದೇ ನೆನೆಪಾಗಿದೆ|
ನಿದಿರೆ ಬರುತಿಲ್ಲ ,ಏನೂ ರುಚಿಸಲ್ಲ
ಏನೆಂದು ನಾ ಹೇಳಲಿ|
ಬರದಿದ್ದರೆ ನೀನು ,ನಾ ಬಾವಿ ಪಾಲು||
ಬರದೇ ನೀನಿರುವೆಯಾ?
ನೀ  ಬಂದೇ ಬರುವೆ ಪ್ರೇಮಾಮೃತ ತರುವೆ|
ಭರವಸೆಯು ನನಗಿದೆ
ನೀ ಬೇಗ ಬರಬಾರದೆ||ಪ||

*ಸಿ ಜಿ ವೆಂಕಟೇಶ್ವರ*
*ತುಮಕೂರು*

26 ಏಪ್ರಿಲ್ 2020

ತವರ ಕಾಪಾಡು ( ಜನಪದ ಗೀತೆ) ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ ಜಾನಪದ ಗೀತೆ


ಜನಪದ ಗೀತೆ

*ತವರ ಕಾಪಾಡು*

ನನ್ನಯ ತವರೂರ ನಾಹ್ಯಾಗೆ ಮರೆಯಲಿ
ಚಿನ್ನಕ್ಕಿಂತಲೂ  ಮೇಲು| ಕೇಳೆ ಗೆಳತಿ
ರನ್ನದ ಗುಣದ ನನ್ನಪ್ಪ.||

ಅಮ್ಮನ ಕೈತುತ್ತು ಅಮೃತಕೆ ಸಮಾನ
ಕಮ್ಮನೆಯ ಕುರುಕಲು ನೀಡುತ್ತ| ದಿನಕೊಂದು
ಹಣ್ಣು ತಿನಿಸಿ ನಲಿಯೋಳು||


ಕೀಟಲೆ ಮಾಡುತ್ತ ತಮ್ಮ ಬರುತಿದ್ದ
ಕ್ವಾಟಲೆ ಕೊಟ್ಟರೂ ನನ್ನ ಪ್ರಾಣ|ಅಂತಹವನು
ಕೋಟಿ ಕೊಟ್ಟರೂ ಸಿಗೋದಿಲ್ಲ||

ಸಣ್ಣವನು ಅಲ್ಲ ನನ್ನ ಅಣ್ಣ
ಕಣ್ಣ ರೆಪ್ಪೆ ಹಂಗೆ ಕಾಪಾಡಿದ|ಅವನು
ಕೊಟ್ಟ ಉಡುಗೊರೆಗೆ ಸಮವಿಲ್ಲ||


ಇಂದ್ರನ ಅರಮನೆ ನನ್ನ ತವರ್ಮನೆ
ಚಂದಾಗಿ ಹಾಲ್ಕೊಡುವ ಕಾಮಧೇನು|ನಮ್ಮನೆ
ನಾರಾಯಣನ ಹ್ಯಾಗೆ ಮರೆಯಲಿ||

ಬಂಗಾರ ಬೆಳ್ಳಿ ಬ್ಯಾಡ ತವರಿಂದ
ತೊಂದರೆಯು ಬರದಂತೆ| ಶಿವನೆ
ನನ ತವರ ಕಾಪಾಡು||


18 ಏಪ್ರಿಲ್ 2020

ಶಿಲಾಬಾಲಿಕೆ(ವಿಶ್ವ ಪಾರಂಪರಿಕ ದಿನದ ಹನಿ)

*ಶಿಲಾಬಾಲಿಕೆ*

ಯಾವಾಗ ನೋಡಿದರೂ
ಅದೇ ಸೌಂದರ್ಯ
ಅದೇ ಲವಲವಿಕೆ
ಅವಳೇ ನಮ್ಮ
ನಾಡಿನ ಹೆಮ್ಮೆ
ಬೇಲೂರು ಶಿಲಾಬಾಲಿಕೆ.

(ಇಂದು ವಿಶ್ವ ಪಾರಂಪರಿಕ ದಿನ)

*ಸಿ ಜಿ ವೆಂಕಟೇಶ್ವರ*
*ತುಮಕೂರು*

16 ಏಪ್ರಿಲ್ 2020

ಸಿಹಿಜೀವಿಯ ೫ ಹನಿಗಳು

*ಸಿಹಿಜೀವಿಯ ೫ ಹನಿಗಳು*

*೧*

*ನಾರಾಯಣ*

ಜಂಬದಿ ಡಂಬದಿ
ಏತಕೆ ಮಾಡುವೆ
ದೇವರ ಪಾರಾಯಣ|
ಹಸಿದ ಹೊಟ್ಟೆಗೆ
ಅನ್ನವ ನೀಡು
ಅಲ್ಲೇ ಇರುವ
ನಮ್ಮ ನಾರಾಯಣ||

*೨*

*ಗೆಲುವು*


ಸಿಕ್ಕೇ ಸಿಗುವುದು
ನೀನೆಣಿಸಿದ ಗೆಲುವು
ಇದ್ದರೆ ನಿನಗೆ
ಜ್ಞಾನದ ಹಸಿವು


*೩*
*ಪಾಲು*

ಗೆಲುವು ಬಂತೆಂದು
ಹಿರಿಹಿರಿ ಹಿಗ್ಗಬೇಡ
ಅದರಲ್ಲಿ ಸೋಲಿನ
ಪಾಲಿದೆ ಮರೆಯಬೇಡ.

*೪*

*ಜೇಡ*

ಸೋತೆನೆಂದು
ಎಂದಿಗೂ ಕುಗ್ಗಬೇಡ
ಬಿಡುವುದೇ
ಬಲೆ ಹೆಣೆವುದ
ಸೋತ ಜೇಡ?

*೫*

*ಕನ್ನಡಿ*

ಬರುವುದು ಗೆಲುವು ಒಂದು ದಿನ
ಪ್ರಯತ್ನ ಮಾಡು ಪ್ರತಿ ದಿನ
ಸೋಲೇ ಗೆಲುವಿನ ಮುನ್ನುಡಿ
ಪ್ರಯತ್ನ ಯಶಸ್ವಿನ ಕನ್ನಡಿ.


*ಸಿ ಜಿ ವೆಂಕಟೇಶ್ವರ*
*ತುಮಕೂರು*


ಮರೆಯದಿರು (ಬಹುಮಾನ ಪಡೆದ ಚುಟುಕು)

*ಮರೆಯದಿರು* 
(ಹನಿ ಹನಿ ವಿಸ್ಮಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಚುಟುಕು )

ಸೋತೆನೆಂದು ಚಿಂತಿಸುತ ನೀ ಕೂರುವೆ ಏಕೀಗ
ಬಿದ್ದರು ಬಲೆಯನು ಹೆಣೆಯುವ ಜೇಡವ ನೋಡೀಗ
ನಿನ್ನೊಳಗಿರುವ ಶಕ್ತಿಯು ಹೆಚ್ಚಿದೆ ಮರೆಯದಿರು
ಗೆಲುವದು ಬಂದಾಗ ಹುಚ್ಚಾಗಿ ಮೆರೆಯದಿರು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

15 ಏಪ್ರಿಲ್ 2020

ಆರೈಕೆ ಮಾಡು(ಕವನ)



*ಆರೈಕೆ ಮಾಡು*

ನೀನು ಒಂದು ದಿನ
ಆಗುವೆ ಮುದುಕ
ಆಗ ನೀನು ಅರಿತು
ಕೊಳ್ಳುವೆ  ಬದುಕ

ಯೌವನ ಯಾರಿಗೂ
ಶಾಶ್ವತವಲ್ಲ
ಮಗನೆ ವೃದ್ಧಾಪ್ಯ
ಇದು ತಪ್ಪಲ್ಲ

ಹಣ್ಣೆಲೆ ಉದರುವ
ಕಾಲವು ಬಂದಿದೆ
ಚಿಗುರೆಲೆ ನಗುವ
ನೋಡಿ ನಲಿದಿದೆ

ಬಾಲ್ಯದಿ ನಡೆದೆನು
ಆಡಿಸಿ‌ ಕೈಕಾಲು
ಈಗ ಬಂದಿದೆ
ನೋಡಿಲ್ಲಿ ಕೈಕೋಲು

ಆರೈಕೆ ಮಾಡು
ಈ ಅಪ್ಪನನು
ಮಗನು ಹಿಡಿವ
ನಿನ್ನ ದಾರಿಯನು.

*ಸಿ ಜಿ ವೆಂಕಟೇಶ್ವರ*
*ತುಮಕೂರು*