ಮಂತ್ರಮುಗ್ದಗೊಳಿಸುವ ಮೇಘಾಲಯದ ಉಮ್ಮಿಯಾಮ್ ಸರೋವರ
ಈಶಾನ್ಯ ರಾಜ್ಯಗಳನ್ನು ನೆನೆದರೇನೊ ಪುಳಕ. ಬಹು ಕಾಲದಿಂದ ಈಶಾನ್ಯ ರಾಜ್ಯಗಳಿಗೆ ಪ್ರವಾಸ ಹೊರಡಬೇಕೆಂಬ ಕನಸು ಕೊನೆಗೂ ನನಸಾಗಿತ್ತು. ಅಸ್ಸಾಂನ ಗುವಾಹಟಿ ನಗರದಿಂದ ನಮ್ಮ ಪ್ರವಾಸ ತಂಡದೊಂದಿಗೆ ಹೊರಟ ನಾವು ಮೇಘಾಲಯದ ಪ್ರಕೃತಿ ಸೌಂದರ್ಯ ಸವಿಯಲು ಸಿದ್ದವಾಗಿತ್ತು. ಬೆಟ್ಟ ಗುಡ್ಡಗಳ ರಸ್ತೆಯಲ್ಲಿ ಚಲಿಸಲು ಸೂಕ್ತವಾದ ಎರಡು ಟೆಂಪೋ ಟ್ರಾವೆಲರ್ಸ್ ಏರಿ ಉತ್ತಮ ರಸ್ತೆಯಲ್ಲಿ ನಮ್ಮ ಪಯಣ ಮುಂದುವರೆಯಿತು. ರಸ್ತೆಯ ಎಡಬಲಗಳಲ್ಲಿ ಕಾಣುವ ದೃಶ್ಯಗಳನ್ನು ಸವಿಯುತ್ತಾ ಸುಮಾರು ಎರಡು ಗಂಟೆಗಳ ಪ್ರಯಾಣದ ನಂತರ ಕಂಡ ಮೊದಲ ಸ್ವರ್ಗ ಸದೃಶ ತಾಣವೇ ಉಮಿಯಾಮ್ ಸರೋವರ!
ಮೊದಲ ಬಾರಿಗೆ ಕೇಳಿದಾಗ ನನಗೂ ಈ ಸ್ಥಳದ ಉಚ್ಚಾರಣೆ ವಿಚಿತ್ರ ಎನಿಸಿದರೂ ಅದರ ಅದ್ಭುತ ದೃಶ್ಯಗಳನ್ನು ನಾನು ಕಣ್ತುಂಬಿಕೊಂಡಾಗ ಬಣ್ಣದ ಚಿತ್ರಗಳು ಈಗಲೂ ನನ್ನ ನೆನಪಿನ ಕೋಶದಲ್ಲಿ ಅಚ್ಚಳಿಯದೇ ಉಳಿದಿವೆ.
ಶಿಲ್ಲಾಂಗ್ ನಗರಕ್ಕೆ ಹೋಗುವ ದಾರಿಯಲ್ಲಿ ಬೆಟ್ಟಗಳ ನಡುವೆ ನೀಲಿ ಬಣ್ಣದಲ್ಲಿ ಮಿನುಗುತ್ತಿರುವ ಉಮಿಯಾಮ್ ಸರೋವರದ ಮೊದಲ ನೋಟವೇ ನನ್ನನ್ನು ಮಂತ್ರಮುಗ್ಧನನ್ನಾಗಿ ಮಾಡಿತು. ಸ್ಥಳೀಯರು ಇದನ್ನು “ಬಾರಾ ಪಾನಿ” ಎಂದೂ ಕರೆಯುತ್ತಾರೆ. ಹೆಸರೇ ಹೇಳುವಂತೆ ಇದೊಂದು ವಿಶಾಲವಾದ ಮಾನವ ನಿರ್ಮಿತ ನೀರಿನ ಸಾಗರ!
ನಗರದಿಂದ ಸುಮಾರು 15 ಕಿಮೀ ದೂರದಲ್ಲಿ ಹರಡಿಕೊಂಡಿರುವ ಈ ಜಲಾಶಯವನ್ನು 1960ರ ದಶಕದಲ್ಲಿ ಅಣೆಕಟ್ಟು ನಿರ್ಮಿಸಿ ಸೃಷ್ಟಿಸಲಾಗಿದೆ. ಬೆಟ್ಟಗಳು, ಹಸಿರು ಕಾಡುಗಳು ಮತ್ತು ನೀರಿನ ನೀಲಿ ಪ್ರತಿಬಿಂಬ ಇವುಗಳ ಸಮನ್ವಯವು ಈ ಸ್ಥಳವನ್ನು ಸ್ವರ್ಗಸಮಾನವಾಗಿಸುತ್ತದೆ.
ಬೆಳಿಗ್ಗೆ ಹೊತ್ತು ಸರೋವರದ ತೀರದಲ್ಲಿ ನಿಂತಾಗ ಮಂಜಿನ ಚಾದರ ನೀರಿನ ಮೇಲೆ ಹರಡಿಕೊಂಡ ಸೂರ್ಯೋದಯದ ಕಿರಣಗಳು ನೀರಿನ ಮೇಲೆ ಬಂಗಾರದ ಹಚ್ಚನ್ನು ಹಚ್ಚಿದಂತೆ ಕಾಣುವ ದೃಶ್ಯಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಆ ಕ್ಷಣದಲ್ಲಿ ಕಾಲವೇ ನಿಂತಂತಾಯಿತು.
ಸ್ಥಳೀಯ ಮಾರ್ಗದರ್ಶಕನಿಂದ ತಿಳಿದುಕೊಂಡಾಗ ಈ ಸರೋವರದ ಹಿಂದೆ ಒಂದು ದೊಡ್ಡ ಕಥೆಯಿದೆ ಎಂದು ಅರಿತುಕೊಂಡೆ. ಈ ಲೇಕ್ ಜಲವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಲಾದ ಈಶಾನ್ಯ ಭಾರತದ ಮೊದಲ ಮಹತ್ವದ ಜಲಾಶಯ ಯೋಜನೆಗಳಲ್ಲಿ ಒಂದಾಗಿದೆ.
ಒಮ್ಮೆ ಇಲ್ಲಿ ಖಾಸಿ ಸಮುದಾಯದ ಗ್ರಾಮಗಳು ನೆಲೆಸಿದ್ದವು. ಅಣೆಕಟ್ಟು ನಿರ್ಮಾಣದಿಂದಾಗಿ ಕೆಲವು ಕುಟುಂಬಗಳು ಸ್ಥಳಾಂತರಗೊಳ್ಳಬೇಕಾಯಿತು. ಈ ವಿಚಾರ ತಿಳಿದಾಗ ಪ್ರಕೃತಿ ಸೌಂದರ್ಯದ ಹಿಂದೆ ಇರುವ ಮಾನವ ಕುಲದ ಮನ ಕಲಕುವ ಕಥೆಗಳು ನನ್ನ ಮನಸ್ಸನ್ನು ಸ್ಪರ್ಶಿಸಿದವು. ಹೀಗೆ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಕುಟುಂಬಗಳನ್ನು ಸ್ಥಳಾಂತರ ಮಾಡುವುದು ಈಗಲೂ ಮುಂದುವರೆದಿರುವುದನ್ನು ಕಾಣುತ್ತೇವೆ.
ಉಮಿಯಾಮ್ ಸರೋವರ ಪ್ರವಾಸಿಗರಿಗೆ ಕೇವಲ ದೃಶ್ಯ ಸೌಂದರ್ಯವಲ್ಲ ಸಾಹಸಕ್ಕೂ ಪ್ರಸಿದ್ಧ ಎಂದು ನಮ್ಮ ಟೂರ್ ಗೈಡ್ ಬೆಳಿಗ್ಗೆ ಹೇಳಿದ್ದ ಮಾತು ಕೇಳುತ್ತಾ ನಾನು ಕಯಾಕಿಂಗ್ ಮಾಡಲು ನಿರ್ಧರಿಸಿದ್ದೆ. ನೀರಿನ ಮಧ್ಯೆ ತೇಲುತ್ತಾ ಬೆಟ್ಟಗಳ ನಡುವೆ ನನ್ನ ಸಣ್ಣ ದೋಣಿ ಸಾಗುತ್ತಿದ್ದ ಕ್ಷಣವನ್ನು ಕಲ್ಪಿಸಿಕೊಂಡು ಮನದಲ್ಲೇ ಖುಷಿ ಪಟ್ಟಿದ್ದೆ ಆದರೆ ಆ ಸ್ಥಳಕ್ಕೆ ಹೋದಾಗ ನನ್ನ ಆಸೆ ಈಡೇರದೇ ಭ್ರಮನಿರಸನಗೊಂಡೆ.
ವಾಟರ್ ಸೈಕ್ಲಿಂಗ್, ಬೋಟ್ ರೈಡ್, ಸ್ಕೂಟಿಂಗ್ ಎಲ್ಲವೂ ಇಲ್ಲಿ ಲಭ್ಯ. ಕುಟುಂಬ ಸಮೇತ ಬಂದ ಪ್ರವಾಸಿಗರು ಹರ್ಷದಿಂದ ಕಾಲ ಕಳೆಯಲು ಅವಕಾಶವಿದೆ ಅದರೆ ನಮ್ಮ ದುರಾದೃಷ್ಟಕ್ಕೆ ಅಂದು ಆ ಎಲ್ಲಾ ಜಲಕ್ರೀಡೆಗಳನ್ನು ಬಂದ್ ಮಾಡಿದ್ದರು.ಆದರೆ ಪ್ರಕೃತಿ ಸೌಂದರ್ಯ ಬಂದ್ ಮಾಡಲು ಸಾಧ್ಯವೆ? ಇನ್ನಷ್ಟು ನಿಸರ್ಗದ ದೃಶ್ಯಗಳನ್ನು ನನ್ನ ಮನದಲ್ಲಿ ತುಂಬಿಕೊಂಡು ಆನಂದಿಸಿದೆ.
ಮಾಮೂಲಿನಂತೆ ನಾವು ಮಾನವರು ಸುಂದರ ತಾಣಗಳನ್ನು ಸುಂದರವಾಗಿರಲು ಎಲ್ಲಿ ಬಿಟ್ಟಿದ್ದೇವೆ? ಈ ಸುಂದರ ಸರೋವರವೂ ಸವಾಲುಗಳನ್ನು ಎದುರಿಸುತ್ತಿದೆ. ನಗರದ ವೃದ್ಧಿಯಾಗುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಮಾಲಿನ್ಯ ಸಮಸ್ಯೆ ಗಂಭೀರವಾಗಿದೆ. ಸರೋವರಕ್ಕೆ ಸೇರುವ ವಾಹ್ ಉಮ್ಖ್ರಾ ಮತ್ತು ವಾಹ್ ಉಮ್ಶಿರ್ಪಿ ನದಿಗಳು ನಗರ ಒಳಚರಂಡಿಯನ್ನು ತರುತ್ತಿವೆ ಎಂದು ತಿಳಿದು ಬೇಸರವಾಯಿತು.
ಮೊದಲು ಡೀಸೆಲ್ ಚಾಲಿತ ದೋಣಿಗಳನ್ನು ಮನರಂಜನೆಗಾಗಿ ಬಳಸಲಾಗುತ್ತಿತ್ತು.
2023ರಲ್ಲಿ ಮೇಘಾಲಯ ಸರ್ಕಾರ ಸೌರಶಕ್ತಿ ಚಾಲಿತ AI ದೋಣಿಯನ್ನು ನಿಯೋಜಿಸಿದೆ ಎಂಬುದು ಆಶಾದಾಯಕ ಸುದ್ದಿ ಕೇಳಿ ಸಂತಸವಾಯಿತು. ಈ ನವೀನ ಪ್ರಯತ್ನವು ಸರೋವರದ ಸ್ವಚ್ಛತೆಯನ್ನು ಕಾಪಾಡಲು ಮಹತ್ವದ ಹೆಜ್ಜೆಯಾಗಿದೆ.
ಸಂಜೆ ಸಮಯದಲ್ಲಿ ಸರೋವರದ ಲೇಕ್ ವ್ಯೂ ಪಾಯಿಂಟ್‌ನಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡಲು ಸಾವಿರಾರು ಪ್ರವಾಸಿಗರು ಬರುತ್ತಾರೆ. ಆಕಾಶ ಕೆಂಪು-ಕಿತ್ತಳೆ ಬಣ್ಣಗಳಿಂದ ತುಂಬಿಕೊಂಡ. ನೀರಿನ ಮೇಲಿನ ಪ್ರತಿಬಿಂಬ ಚಿತ್ರಕಾರನ ಕಲಾಕೃತಿಯಂತೆ ಕಾಣುತ್ತದೆ. ಇದು ಕೇವಲ ಜಲಾಶಯವಲ್ಲ. ಇದು ಪ್ರಕೃತಿಯ ಮಹತ್ವದ ಪಾಠ. ಮಾನವ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ನಡುವೆ ಸಮತೋಲನ ಅಗತ್ಯ ಎಂಬ ಸಂದೇಶ ಈ ಸರೋವರ ನೀಡುತ್ತದೆ.
ಉಮಿಯಾಮ್ ಸರೋವರ ಪ್ರವಾಸವು ನನಗೆ ಪ್ರಕೃತಿಯ ಸೌಂದರ್ಯ, ಇತಿಹಾಸದ ಸ್ಪರ್ಶ ಮತ್ತು ಪರಿಸರ ಜಾಗೃತಿ ಮೂರನ್ನೂ ಒಟ್ಟಿಗೆ ನೀಡಿದ ಅನುಭವ ನೀಡಿತು. ಮೇಘಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಈ ಸ್ಥಳವನ್ನು ತಪ್ಪದೇ ನೋಡಬೇಕು ಎಂದು ನಾನು ಮನಪೂರ್ವಕವಾಗಿ ಸಲಹೆ ನೀಡುತ್ತೇನೆ.
ಬೆಟ್ಟಗಳ ನಡುವೆ ಮೌನವಾಗಿ ಮಲಗಿರುವ ಆ ನೀಲಿ ಸರೋವರ ನನ್ನ ಮನಸ್ಸಿನಲ್ಲಿ ಸದಾ ಜೀವಂತವಾಗಿಯೇ ಇರುತ್ತದೆ. ಆ ತಾಣದಲ್ಲಿ ನಾನು ಮಿಸ್ ಮಾಡಿಕೊಂಡ ವಾಟರ್ ಸ್ಪೋರ್ಟ್ಸ್ ಆಡಲು ಮತ್ತು ಸನ್ ಸೆಟ್ ನೋಡಲು ಮತ್ತೊಮ್ಮೆ ಉಮ್ಮಿಯಾಮ್ ಸರೋವರಕ್ಕೆ ಹೋಗಲು ನನ್ನ ಮನ ಹಾತೊರೆಯುತ್ತಿದೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ