28 ಮೇ 2025

ಸಿಹಿಜೀವಿಯ ನುಡಿ

 


ಸಿಹಿಜೀವಿಯ ನುಡಿ.


ಬದ್ಧತೆ ಇಲ್ಲದಿದ್ದರೆ ಯಾವುದೇ 

ಕೆಲಸ ಆರಂಭ ಮಾಡಲಾಗದು|

ನಿರಂತರ ಪ್ರಯತ್ನ ಇಲ್ಲದಿದ್ದರೆ

ಯಾವುದೇ ಗುರಿ ಮುಟ್ಟಲಾಗದು||


ಸಿಹಿಜೀವಿ ವೆಂಕಟೇಶ್ವರ

17 ಮೇ 2025

ಕೋಳಿಯ ಜೀವನ ಪಾಠ.


 


ಕೋಳಿಯ ಜೀವನ ಪಾಠ.


ಕೋಳಿಯೆಂದರೆ ನಮಗೆ ನೆನಪಾಗುವುದು ಮುಂಜಾನೆಯ ಕೂಗು, ಇಲ್ಲವೇ ಮೊಟ್ಟೆ, ಇಲ್ಲಾ ಅಂದ್ರೆ ಕಬಾಬ್, ಬಿರ್ಯಾನಿ, ಅಷ್ಟೇ. 

ಆದರೆ ಕೋಳಿಯಿಂದಲೂ ನಾವು ಜೀವನದ ಪಾಠಗಳನ್ನು ಕಲಿಯಬಹುದು ಅವ್ಯಾವು ನೋಡೋಣ ಬನ್ನಿ.

ಕೋಳಿ ಮೊದಲು ಮೊಟ್ಟೆ ಇಟ್ಟು ಅವುಗಳ ಮೇಲೆ ಕುಳಿತುಕೊಳ್ಳುವ ಮೂಲಕ ಅದರ  ಉತ್ತಮ ಯೋಜನೆಯನ್ನು ನಾವು ಗಮನಿಸಬೇಕು.

 

ಕೋಳಿಯು ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಡಲಾರಂಭಿಸಿದಾಗ  ಅದು ಚಲನೆಯನ್ನು ಕಡಿಮೆ ಮಾಡುತ್ತದೆ ಇದು ಶಿಸ್ತುಬದ್ಧ ನಡವಳಿಕೆ. ನಾವು ಸಹ ಏನಾದರೂ ಅಸಾಧಾರಣ ಸಾಧನೆ ಮಾಡುವಾಗ ಅನವಶ್ಯಕ ತಿರುಗಾಟ ಕಡಿಮೆ ಮಾಡಿ ಶಿಸ್ತು ರೂಢಿಸಿಕೊಳ್ಳಬೇಕು. ಅದು ಕಾವು ಕೊಡುವ ವೇಳೆ  ಕಡಿಮೆ ಆಹಾರ ಸೇವನೆಯಿಂದಾಗಿ ಅದು ತನ್ನ ಮೊಟ್ಟೆಗಳ ಮೇಲೆ ಕುಳಿತಾಗ ದೈಹಿಕವಾಗಿ ತೂಕವನ್ನು ಕಳೆದುಕೊಳ್ಳುತ್ತದೆ ಇದು 

ತ್ಯಾಗ ಮತ್ತು ಪರಹಿತಚಿಂತನೆಗೆ ಉದಾಹರಣೆ. ಇದರ ಜೊತೆಯಲ್ಲಿ ಇಲ್ಲಿ ಉಲ್ಲೇಖಿಸಬೇಕಾದ ಮತ್ತೊಂದು ಅಂಶವೆಂದರೆ ಒಂದು ಕೋಳಿಯು ಮತ್ತೊಂದು ಕೋಳಿಯ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಟ್ಟು ಮರಿ ಮಾಡುವುದನ್ನು ನಾವು ನೋಡಿದ್ದೇವೆ.ಇದು ಕೋಳಿಯ   ಉದಾರ ಮತ್ತು ನಿಸ್ವಾರ್ಥ ಮನಸ್ಸಿಗೆ ಸಾಕ್ಷಿ.

 ಅದು 21 ದಿನಗಳ ಕಾಲ ಮೊಟ್ಟೆಗಳ ಮೇಲೆ ಕುಳಿತು ತಾಳ್ಮೆಯಿಂದ ಕಾಯುತ್ತದೆ ಮತ್ತು ಅವು ಮರಿಯಾಗದಿದ್ದರೂ ಅದು ಮತ್ತೆ ಮೊಟ್ಟೆಗಳನ್ನು ಇಡುತ್ತದೆ ಇದು ನಂಬಿಕೆ, ಭರವಸೆ ಮತ್ತು ಧೈರ್ಯಕ್ಕೆ ಉದಾಹರಣೆ.

ಇದು ಫಲವತ್ತಾಗಿಸದ ಮೊಟ್ಟೆಗಳನ್ನು ಪತ್ತೆ ಮಾಡುತ್ತದೆ 

ಸೂಕ್ಷ್ಮ ಮತ್ತು ವಿವೇಚನಾಶೀಲ ಕೋಳಿಯು  ಕೊಳೆತ ಮೊಟ್ಟೆಗಳನ್ನು ತ್ಯಜಿಸುತ್ತದೆ ಮತ್ತು ಮೊಟ್ಟೆಯೊಡೆದ ಮರಿಗಳನ್ನು ಅದು ಒಂದೇ ಆಗಿದ್ದರೂ ಸಹ ನೋಡಿಕೊಳ್ಳಲು ಪ್ರಾರಂಭಿಸುತ್ತದೆ.ಇದು ಕೋಳಿಯ 

ಬುದ್ಧಿವಂತಿಕೆ,ಪ್ರಜ್ಞೆ ಮತ್ತು ವಾಸ್ತವಿಕತೆಯನ್ನು ಪ್ರತಿನಿಧಿಸುತ್ತದೆ.


 ಅದು ಮರಿಯ ಹಾರೈಕೆ ಮಾಡುವಾಗ ಅದರ ಮರಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ.ಅದು

ರಕ್ಷಣಾತ್ಮಕ ಪ್ರೀತಿ.

ಅದು ತನ್ನ ಎಲ್ಲಾ ಮರಿಗಳನ್ನು ಒಟ್ಟುಗೂಡಿಸುತ್ತಾ  ಏಕತೆಯ ಸಂದೇಶವನ್ನು ಸಾರುತ್ತದೆ.ಮರಿಗಳನ್ನು ಪ್ರೌಢಾವಸ್ಥೆಗೆ ತರುವ ಮೊದಲೇ ಎಂದಿಗೂ  ಕೈಬಿಡದೇ ಉತ್ತಮ ಮಾರ್ಗದರ್ಶನ ನೀಡುತ್ತದೆ.


ಹೀಗೆ ಕೋಳಿಯಂತಹ ಸಾಮಾನ್ಯ ಜೀವಿಯು ತನಗರಿವಿಲ್ಲದೇ ಎಂತಹ ಅಮೂಲ್ಯವಾದ ಸಂದೇಶಗಳನ್ನು ನೀಡುತ್ತದೆ. ಇಂತಹ ಸಂದೇಶಗಳನ್ನು ನಾವೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜನ್ನ ಸಾರ್ಥಕ ಪಡಿಸಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಐತಿಹಾಸಿಕ ತಾಣ ದೇವರಾಯ ಪಟ್ಟಣ.


 


ಐತಿಹಾಸಿಕ ತಾಣ ದೇವರಾಯ ಪಟ್ಟಣ.


ಇತ್ತೀಚೆಗೆ  ನಮ್ಮ ಇಲಾಖೆಯ ನಿಯೋಜಿತ ಕಾರ್ಯನಿಮಿತ್ತವಾಗಿ ತುಮಕೂರಿನ ಸಮೀಪದ ದೇವರಾಯ ಪಟ್ಟಣಕ್ಕೆ  ಹೋಗಿದ್ದೆ. ಬೈಕ್ ನಲ್ಲಿ ಹೊರಟ ನನ್ನನ್ನು "ದೇವಾಲಯಗಳ ಊರು ದೇವರಾಯ ಪಟ್ಟಣಕ್ಕೆ ಸ್ವಾಗತ" ಎಂಬ ಸ್ವಾಗತ ಕಮಾನು ಸ್ವಾಗತಿಸಿತು. ಸಿದ್ದಿವಿನಾಯಕ ಮತ್ತು ವೀರಾಂಜನೇಯ ದೇವಾಲಯಗಳಲ್ಲಿ ದೇವರ ದರ್ಶನ ಪಡೆದು ಐತಿಹಾಸಿಕ ಹರಿಹರೇಶ್ವರ ದೇಗುಲದ ಕಡೆ ಹೊರಟೆ.ತುಸು ದಿಬ್ಬದ ಮೇಲೆ ನನ್ನ ಗಾಡಿ ಚಲಿಸಿದ ನಂತರ ಎರಡು ಕಲ್ಲಿನ ರಚನೆಗಳು ನನ್ನ ಕಣ್ಣಿಗೆ ಬಿದ್ದವು. ಅದರಲ್ಲಿ ಮೊದಲನೇ ಸ್ಮಾರಕವೇ ಹರಿಹರೇಶ್ವರ ದೇವಾಲಯ. ಅದರ ಮುಂದಿನದು ವಿಶ್ರಾಂತಿ ಗೃಹದಂತಹ ರಚನೆ. ಈ ಎರಡೂ ಸ್ಮಾರಕಗಳ ಮುಂದಿನ ಜಲರಾಶಿಯು ಪ್ರವಾಸಿಗರ ಪ್ರಮುಖವಾದ ಆಕರ್ಷಣೆ ಅದೇ ದೇವರಾಯ ಪಟ್ಟಣದ ಕೆರೆ.

 

 ಹರಿಹರೇಶ್ವರ ದೇವಾಲಯವು ಸುಮಾರು ಐನೂರು ವರ್ಷಗಳಷ್ಟು ಹಳೆಯದಾದ ಪ್ರಾಚೀನ ದೇಗುಲವಾಗಿದ್ದು ಈಗಲೂ ಪೂಜೆ ಪುರಸ್ಕಾರಗಳು ನಡೆಯುತ್ತವೆ. ಗರ್ಭಗುಡಿಯಲ್ಲಿ  ಹರಿ ಹರರ ಸಂಯೋಜಿತ ಆಕರ್ಷಕ ವಿಗ್ರಹವಿದೆ. ಆದ್ದರಿಂದ ಈ ದೇವಸ್ಥಾನಕ್ಕೆ ಹರಿಹರೇಶ್ವರ ದೇವಾಲಯ ಎಂಬ ಹೆಸರು ಬಂದಿದೆ.

ದೇವಾಲಯದ ಒಳಗಿನ ಒಂದು ಶಾಸನವು ಈ ಪ್ರಾಚೀನ ದೇವಾಲಯವನ್ನು ನವೀಕರಿಸಲು 1913 ರಲ್ಲಿ ತಾಲ್ಲೂಕು ಆದೇಶವನ್ನು ಹೊರಡಿಸಲಾಗಿದೆ ಎಂದು ದಾಖಲಿಸುತ್ತದೆ. 

ಸ್ಥಳೀಯ ಮುಖಂಡರನ್ನು ಮಾತನಾಡಿಸಿದಾಗ ಈ ದೇವಾಲಯ ಚೋಳರ ಅವಧಿಯಲ್ಲಿ ನಿರ್ಮಾಣವಾಗಿದೆ ಎಂದರು.ದೇವರಾಯ ಪಟ್ಟಣದ ನಾಗರೀಕರ ಬಾಯಲ್ಲಿ ಈ ಗುಡಿಯನ್ನು ಚೋಳರ ಗುಡಿ ಎಂದು ಜನಜನಿತವಾಗಿದೆ.

 

ದೇವಾಲಯದ ಮೂಲವು ಅಸ್ಪಷ್ಟವಾಗಿದ್ದರೂ ದೇವರಾಯಪಟ್ಟಣವು 500 ವರ್ಷಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಎಪಿಗ್ರಾಫಿಯಾ ಕರ್ನಾಟಿಕಾ ಪ್ರಕಾರ  ಶ್ರೀ ತಿಮ್ಮಣ್ಣ ನಾಯಕ ಈ ಅವಧಿಯಲ್ಲಿ ದೇವರಾಯಪಟ್ಟಣದ ಮುಖ್ಯಸ್ಥರಾಗಿದ್ದರು. ಅವರ ಮಗ ಕೆಂಚ ಸೋಮಣ್ಣ ನಾಯಕ ರಾಜನ ವಿಶ್ವಾಸಾರ್ಹ ಸೇನಾಧಿಪತಿಯಾದರು.

1513 ರಲ್ಲಿ, ಕೆಂಚ ಸೋಮಣ್ಣ ತನ್ನ ಕುಟುಂಬಕ್ಕೆ ಕೃಪೆಯನ್ನು ಕೋರಿ ಸ್ಥಳೀಯ ದೇವರಿಗೆ ಒಂದು ಗ್ರಾಮವನ್ನು ದಾನ ಮಾಡಿದನು. ಅವನ ಗೌರವಾರ್ಥವಾಗಿ ಎರಡು ಗ್ರಾಮಗಳಿಗೆ ಕೆಂಚನಪಾಳ್ಯ ಮತ್ತು ಕೆಂಚನಕೋಟೆ ಎಂದು ಮರುನಾಮಕರಣ ಮಾಡಲಾಯಿತು ಎಂಬ ಉಲ್ಲೇಖವಿದೆ.





ದೇವಾಲಯದ ಮುಂದೆ ಇರುವ ಮಂಟಪದಂತಹ ಸ್ಮಾರಕವನ್ನು ಬೃಹತ್ ಕಲ್ಲು ಬಂಡೆಗಳಿಂದ ನಿರ್ಮಿಸಲಾಗಿದೆ.ಚೋಳರ ಕಾಲದಲ್ಲಿ ಸೈನಿಕರ ತಂಗುದಾಣವಾಗಿ ಇದನ್ನು ನಿರ್ಮಿಸಲಾಗಿದೆ ಎಂದು ಕೆಲವರು ಹೇಳುತ್ತಾರೆ.

ಹರಿಹರೇಶ್ವರ ದೇವಾಲಯದ ಜೀರ್ಣೋದ್ಧಾರ ಟ್ರಸ್ಟ್ ನವರು ಆಗಾಗ್ಗೆ ಈ ದೇವಾಲಯವನ್ನು  ಜೀರ್ಣೋದ್ಧಾರ ಮಾಡಿದ ಬಗ್ಗೆ ಅಲ್ಲಿನ ಶಿಲಾ ಫಲಕಗಳಲ್ಲಿ ಉಲ್ಲೇಖಿಸಿರುವುದನ್ನು ನಾನು ಗಮನಿಸಿದೆ. ಈಗ ಮತ್ತೊಮ್ಮೆ ಈ ಸ್ಮಾರಕಗಳ ಜೀರ್ಣೋದ್ಧಾರ ಮಾಡುವ ಅಗತ್ಯವಿದೆ.


ಈ ದೇವಾಲಯದ ಎಡಭಾಗದಲ್ಲಿರುವ ಬೃಹತ್ ಏಕಶಿಲೆಯು ಇಲ್ಲಿನ ಮತ್ತೊಂದು ಆಕರ್ಷಣೆ.

ಭಗವಾನ್ ಹನುಮಂತನು ಸಂಜೀವಿನಿ ಪರ್ವತವನ್ನು ಎತ್ತುತ್ತಿರುವ ವಿಗ್ರಹ ಸುಂದರವಾಗಿದೆ. ಅದೇ ಕಲ್ಲಿನ ಮೇಲೆ    ಶ್ರೀಕೃಷ್ಣನು ಕಾಳಿಂಗ ಮರ್ಧನ ಮಾಡುವ ವರ್ಣ ಚಿತ್ರವನ್ನು ಕಲಾವಿದರು ಚಿತ್ರಿಸಿದ್ದಾರೆ ಆ ಕಲಾವಿದರು ಮೆಚ್ಚುಗೆಗೆ ಅರ್ಹ. ಈ ಕಲಾಕೃತಿಗಳನ್ನು ನೋಡಿ ಮುಂದೆ ಸಾಗಿದಾಗ ತಾಯಿಮುದ್ದಮ್ಮ ದೇಗುಲ ನೋಡಬಹುದು. ಅಲ್ಲಿಂದ ಮುಂದೆ ಕರೆಯ ಮೇಲೆ ವಾಯುವಿಹಾರ ಮಾಡಲು ಉತ್ತಮ ಮಾರ್ಗವಿದೆ.ನಾನು ಆ  ಮಾರ್ಗದಲ್ಲಿ ಕೆಲ ಮೀಟರ್ ವಾಕ್ ಮಾಡುತ್ತಾ ಸುತ್ತಲೂ ಇರುವ ಬೆಟ್ಟಗಳು ಮತ್ತು ಕೆರೆಯ ನೀರನ್ನು ಕಂಡು ಸಂತಸ ಪಟ್ಟು ನನ್ನ ಬೈಕ್ ಏರಿ ತುಮಕೂರಿನ ಕಡೆಗೆ ಹಿಂತಿರುಗಿದೆ.

ನಿಮಗೆ ಐತಿಹಾಸಿಕ ತಾಣಗಳ ಬಗ್ಗೆ

ಆಸಕ್ತಿ ಇದ್ದರೆ, ಆಸ್ತಿಕರಾಗಿದ್ದರೆ,ದೈವಭಕ್ತರಾದರೆ ,ಪರಿಸರ ಪ್ರೇಮಿಯಾಗಿದ್ದರೆ ಈ ವೀಕೆಂಡ್ ನಲ್ಲಿ ನೀವು ದೇವರಾಯಪಟ್ಟಣಕ್ಕೆ ಹೋಗಿ ಬನ್ನಿ. 


ಸಿಹಿಜೀವಿ ವೆಂಕಟೇಶ್ವರ

ತುಮಕೂರು


12 ಮೇ 2025

ನಮ್ಮ ಶುಶ್ರೂಷಕರು ನಮ್ಮ ಭವಿಷ್ಯ.


ನಮ್ಮ ಶುಶ್ರೂಷಕರು ನಮ್ಮ ಭವಿಷ್ಯ.


ಪ್ರತಿ ವರ್ಷ ಮೇ 12 ರಂದು, ಪ್ರಪಂಚವು ಅಂತರರಾಷ್ಟ್ರೀಯ ದಾದಿಯರ ದಿನ ಅಥವಾ ಶುಶ್ರೂಷರ ದಿನ  ಆಚರಿಸುತ್ತದೆ.ಇದು ಆಧುನಿಕ ಶುಶ್ರೂಷೆಯ ಪ್ರವರ್ತಕಿ ಎಂದು  ಪರಿಗಣಿಸಲ್ಪಡುವ ಫ್ಲಾರೆನ್ಸ್ ನೈಟಿಂಗೇಲ್  ಅವರ ಜನ್ಮ ವಾರ್ಷಿಕೋತ್ಸವವನ್ನು ಗೌರವಿಸುತ್ತದೆ. ಈ ದಿನವು ಆರೋಗ್ಯ ರಕ್ಷಣೆ, ಸಮಾಜ ಮತ್ತು ವಿಶ್ವ ಆರ್ಥಿಕತೆಯಲ್ಲಿ ದಾದಿಯರು ವಹಿಸುವ ನಿರ್ಣಾಯಕ ಪಾತ್ರಗಳನ್ನು ಗೌರವಿಸುತ್ತದೆ.


1953 ರಲ್ಲಿ ಅಮೆರಿಕದ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಪ್ರತಿನಿಧಿ ಡೊರೊಥಿ ಸದರ್ಲ್ಯಾಂಡ್, ದಾದಿಯರನ್ನು ಗೌರವಿಸಲು ಅಂತರರಾಷ್ಟ್ರೀಯ ದಿನದ ಕಲ್ಪನೆಯನ್ನು ಮೊದಲು ಪ್ರಸ್ತಾಪಿಸಿದರು. ಅವರು ಅಧ್ಯಕ್ಷ ಡ್ವೈಟ್ ಡಿ. ಐಸೆನ್‌ಹೋವರ್ ಅವರಿಗೆ ಈ ಸಲಹೆಯನ್ನು ನೀಡಿದರು. 1965 ರಲ್ಲಿ ಅಂತರರಾಷ್ಟ್ರೀಯ ದಾದಿಯರ ದಿನವನ್ನು ಅಂತರರಾಷ್ಟ್ರೀಯ ದಾದಿಯರ ಮಂಡಳಿ (ICN) ಔಪಚಾರಿಕವಾಗಿ ಆರಂಬಿಸಲು ಪ್ರಸ್ತಾಪಿಸಿತು ಆದರೂ ಆ ಸಮಯದಲ್ಲಿ ಈ ಪ್ರಸ್ತಾಪವನ್ನು ಅಂಗೀಕರಿಸಲಿಲ್ಲ. 1974 ರಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದೊಂದಿಗೆ ಹೊಂದಿಕೆಯಾಗುವ ನಿಗದಿತ ದಿನಾಂಕವಾಗಿ ಮೇ 12 ಅನ್ನು ಆಯ್ಕೆ ಮಾಡಿದಾಗ ಅವರ ಪರಂಪರೆ ಮತ್ತು ಜಾಗತಿಕವಾಗಿ ನರ್ಸಿಂಗ್ ವೃತ್ತಿಯ ಮಹತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲಾಯಿತು.


ಪ್ರತಿ ವರ್ಷ  ಐಸಿಎನ್ ಅಂತರರಾಷ್ಟ್ರೀಯ ದಾದಿಯರ ದಿನದ ಥೀಮ್ ಅನ್ನು ಆಯ್ಕೆ ಮಾಡುತ್ತದೆ, ಇದು ಪ್ರಪಂಚದಾದ್ಯಂತದ ದಾದಿಯರು ಮತ್ತು ಆರೋಗ್ಯ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವ ಪ್ರಮುಖ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಥೀಮ್‌ಗಳು ಜಾಗೃತಿ ಮೂಡಿಸಲು ಸುಧಾರಿತ ಕೆಲಸದ ಪರಿಸ್ಥಿತಿಗಳನ್ನು ಉತ್ತೇಜಿಸಲು ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸುವಲ್ಲಿ ಮತ್ತು ರೋಗಿಗಳ ಫಲಿತಾಂಶಗಳನ್ನು ಹೆಚ್ಚಿಸುವಲ್ಲಿ ದಾದಿಯರು ವಹಿಸುವ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಲು ಪ್ರಯತ್ನಿಸುತ್ತವೆ.

ಈ ವರ್ಷ 2025 ರ ಅಂತರರಾಷ್ಟ್ರೀಯ ದಾದಿಯರ ದಿನದ ಥೀಮ್ "ನಮ್ಮ ದಾದಿಯರು. ನಮ್ಮ ಭವಿಷ್ಯ. ದಾದಿಯರನ್ನು ನೋಡಿಕೊಳ್ಳುವುದು ಆರ್ಥಿಕತೆಯನ್ನು ಬಲಪಡಿಸುತ್ತದೆ" . ಈ ಥೀಮ್ ದಾದಿಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವುದು ಎಷ್ಟು ಮುಖ್ಯ ಎಂಬುದನ್ನು ಎತ್ತಿ ತೋರಿಸುತ್ತದೆ. ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸಲು ಹಾಗೂ ಆರೋಗ್ಯ ವ್ಯವಸ್ಥೆಗಳನ್ನು ಸುಧಾರಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಆರೋಗ್ಯಕರ ಶುಶ್ರೂಷಾ ಕಾರ್ಯಪಡೆ ಎಷ್ಟು ಮುಖ್ಯ ಎಂಬುದನ್ನು ಇದು ಒತ್ತಿಹೇಳುತ್ತದೆ. 



ದಾದಿಯರನ್ನು ಭಾವನಾತ್ಮಕ, ಮಾನಸಿಕ ಮತ್ತು ದೈಹಿಕ ತೊಂದರೆಗಳಿಂದ ರಕ್ಷಿಸಲು ತಕ್ಷಣದ ಹಣಕಾಸು ಮತ್ತು ಕಾರ್ಯಸಾಧ್ಯ ಪರಿಹಾರಗಳನ್ನು ಒದಗಿಸುವುದರ ಜೊತೆಗೆ ಅವರಿಗೆ ಗೌರವ, ಮೌಲ್ಯ ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳುವುದನ್ನು ಈ ಥೀಮ್ ಒತ್ತಾಯಿಸುತ್ತದೆ. ದಾದಿಯರ ಯೋಗಕ್ಷೇಮವನ್ನು ಮೊದಲು ಜಾರಿಗೆ ತರುವ ಮೂಲಕ, ಆರೋಗ್ಯ ವ್ಯವಸ್ಥೆಗಳು ಸಮುದಾಯದ ಫಲಿತಾಂಶಗಳನ್ನು ಸುಧಾರಿಸಬಹುದು ಮತ್ತು ಹೆಚ್ಚು ಸುಸ್ಥಿರ ಆರ್ಥಿಕತೆಯನ್ನು ಸೃಷ್ಟಿಸಬಹುದು.


(ಚಿತ್ರದಲ್ಲಿರುವವರು ನಮ್ಮ ಶುಶ್ರೂಷಕ ಬಂಧುಗಳು)


ಸಿಹಿಜೀವಿ ವೆಂಕಟೇಶ್ವರ


 

05 ಮೇ 2025

ಕನ್ನಡಿಗರ ಅಭಿಮಾನ


 



ಸೋನು ನಿಗಮ್ ನಿನ್ನ ಹೆಸರಿನಲ್ಲಿ ಮಾತ್ರ ಬಂಗಾರವಿದ್ದರೆ ಸಾಲದು|

ಕನ್ನಡಿಗರ ಅವಮಾನಿಸುವ ನಿನಗೆ

ನಮ್ಮ ಅಭಿಮಾನ ದೊರಕದು||