15 ಜನವರಿ 2022

ಉಂಡಾಡಿ ಗುಂಡ .ವಿಮರ್ಶೆ.


 


ಉಂಡಾಡಿ ಗುಂಡ. ಕೃತಿ ವಿಮರ್ಶೆ


ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಲ್ಲಿ ಪರಿಚಿತರಾದ ವಾಸು ಎಂದೇ ಪರಿಚಿತವಾಗಿರುವ ಸಮುದ್ರವಳ್ಳಿ ವಾಸು ರವರ ಮಕ್ಕಳ ಕವನಗಳ ಸಂಕಲನ  ಉಂಡಾಡಿ ಗುಂಡ ಪುಸ್ತಕ ಓದಿದೆ.ಇದರಲ್ಲಿ ಮಕ್ಕಳಿಗೆ ಬಹಳ ಇಷ್ಟವಾಗುವ ಮೂವತ್ತೈದು ಕವನಗಳಿವೆ.ನೀವು ಕೂಡಾ ಓದಿ    ಇವು ದೊಡ್ಡವರಿಗೂ ಇಷ್ಟವಾಗುತ್ತವೆ. 


 ಸಮುದ್ರವಳ್ಳಿ  ವಾಸುರವರು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಸಮುದ್ರವಳ್ಳಿ ಎಂಬ ಗ್ರಾಮದಲ್ಲಿ ಜನಿಸಿದವರು ರೈತ ಕುಟುಂಬದಲ್ಲ ಜನಿಸಿದ ಇವರು ಬಾಲ್ಯದಲ್ಲಿಯೇ ಸಾಹಿತ್ಯಾಸಕ್ತಿಯ ಗೀಳನ್ನು ಹೊಂದಿದ್ದು ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನಗಳು , ಕವಿತೆಗಳು, ಕಥೆಗಳು ಪ್ರಕಟಗೊಂಡಿವೆ. ಈಗಾಗಲೇ ಸಿಹಿಮುತ್ತು ಎಂಬ ಚುಟುಕು ಸಂಕಲನ, ಯಡವಟ್ಟು ವಾಸು ಎಂಬ  ಹಾಸ್ಯ ಲೇಖನ  ಮಕ್ಕಳ ಕಿರುನಾಟಕಗಳು, ಹುಚ್ಚುತ್ತಿ ಎಂಬ ಕಥಾ ಸಂಕಲನ, ಮಲೆನಾಡಿನ ಮಾರ್ಗದಾಳುಗಳು ಎಂಬ  ಕಾದಂಬರಿ,ಧಣ ಢಣ ಘಂಟೆ ಬಾರಿಸಿತು ಎಂಬ ಮಕ್ಕಳ ಕವನಗಳ ಸಂಕಲನ ಸಿಂಗಾರಿ ಎಂಬ  ಕಥಾಕವನ ಸಂಕಲನ , ನನ್ನಾಕೆ ಹೇಳಿದ್ದು ಎಂಬ  ಹನಿಗವನ ಸಂಕಲನ, ಅಂತರಂಗದ ಅಳಲು ಎಂಬ ಕವನ ಸಂಕಲನ ಪ್ರಕಟಮಾಡಿದ್ದಾರೆ ಪ್ರಸ್ತುತ ಉಂಡಾಡಿ ಗುಂಡ ಎಂಬ ಮಕ್ಕಳ ಕವನಗಳು ಮಕ್ಕಳ ಮನಗೆಲ್ಲುವುದರಲ್ಲಿ ಸಂದೇಹವಿಲ್ಲ.   ಇವರ ಮಲೆನಾಡಿನ ಮಾರ್ಗದಾಳುಗಳು ಕಾದಂಬರಿ ಎರಡನೇ ಮುದ್ರಣಗೊಂಡು ಓದುಗರ ಮನಗೆದ್ದ ರೀತಿಯಲ್ಲಿ  ಈ ಪುಸ್ತಕವೂ ಓದುಗರ ತಲುಪಲಿ ಎಂದು ಹಾರೈಸುವೆ .


ಪ್ರಸ್ತುತ ಉಂಡಾಡಿ ಗುಂಡ ಪುಸ್ತಕದ ಬಗ್ಗೆ ಹೇಳುವುದಾದರೆ

ವಾಸು ಅವರು ನಮ್ಮ ನಾಡಿನ  ಹಿರಿಯ ಕವಿಗಳ ಬಗ್ಗೆ ಬರೆಯುವಾಗ ಹಲವಾರು ವಿಚಾರಗಳನ್ನು ಸಂಗ್ರಹಿಸಿದ್ದಾರೆ. ಹಲವು ದಿನ ಕೂತು ಪದ್ಯ ರೂಪ ಕೊಟ್ಟಿದ್ದಾರೆ.


ಮಗ್ಗಿಯ ಮೇಲಿನ ಕವನಗಳು ಮತ್ತಷ್ಟು ಸುಂದರವಾಗಿವೆ. 


'ಹಣ್ಣು' ಕವಿತೆಯಲ್ಲಿ

 "ಬಾಳೆಹಣ್ಣು ತಿಂದು

ಸಹಬಾಳ್ವೆ ಮಾಡಿ ...

ಕಿತ್ತಲೆಹಣ್ಣು ತಿಂದು 

ಕಿತ್ತಾಡದೆ ಒಟ್ಟಾಗಿರಿ "

ಎಂಬ ಒಗ್ಗಟ್ಟಿನ ತತ್ವ ಹೇಳಿದೆ.


'ಪಾಪು' ಕವಿತೆಯಲ್ಲಿ ಬರುವ

"ನಗುವಿನಲೆಯ ಇರುಳ ದೀಪ

 ಬಿದಿಗೆ ಚಂದ್ರನಂತೆ ರೂಪ !"

ಎಂಬ ಪದಗಳು ನಮ್ಮನ್ನು ಸೆಳೆಯುವವು.


ಪೊಲೀಸ್ ಗೆಳೆಯರ ಬಗ್ಗೆ ಬರೆದಿರುವ ಕವನ  ಅಭಿಮಾನದ ನುಡಿಗಳಿಂತಿವೆ.

"ಸಮವಸ್ತ್ರ ಧರಿಸಿ, ತಮೋಗುಣ ಅಳಿಸುವಿರಿ

ಸಹಬಾಳ್ವೆ, ಸಮಾನತೆ ಉಳಿಸುವಿರಿ."


'ಪರೀಕ್ಷೆ' ಕವಿತೆಯಲ್ಲಿ ಮಕ್ಕಳಿಗೆ ಪರೀಕ್ಷೆಗಳ ಬಗ್ಗೆ ಭಯ ಬೇಡ ಎಂಬ ಸಲಹೆ ನೀಡಿರುವರು.

"ಇಷ್ಟದಿ ಕಲಿತರೆ ರಸಗುಲ್ಲ

ಕಷ್ಟದಿ ಕಲಿತರೆ ಕಸ ಎಲ್ಲಾ"


ಪುಟ್ಟನ ಪರಿಸರ ಪ್ರಜ್ಞೆ ನಿಮಗೂ  ಖಂಡಿತಾ ಖುಷಿಕೊಡುತ್ತದೆ.

"ಕೆರೆಗಳ ಹೂಳನು ಎತ್ತೋಣ ಗಿಡಮರಬಳ್ಳಿ ಬೆಳೆಸೋಣ."


ವ್ಯಾಕರಣದ ಬಗೆಗಿನ ಕವಿತೆ ಲಘುಹಾಸ್ಯದ ಮೂಲಕ ಜ್ಞಾನವನ್ನು ನೀಡುತ್ತದೆ. ಉದಾಹರಣೆಗೆ 

"ಸ್ವರಗಳು ಎಂದರೆ ಸರಗಳು ಅಲ್ಲ ವ್ಯಂಜನವೆಂದರೆ ಅಂಜನವಲ್ಲ

ಗಾದೆ ಮಾತಿನಲಿ ಬಾಧೆಯು ಇಲ್ಲ."


 ಹೀಗೆ 35 ಮಕ್ಕಳ ಕವನಗಳು ಭಿನ್ನವಿಭಿನ್ನ ವಸ್ತುವನ್ನು ಒಳಗೊಂಡಿವೆ. ಕೆಲವು ಪದ್ಯ ಗಳಿಗೆ ಛಂದಸ್ಸನ್ನೂ ಬಳಸಲಾಗಿದೆ.ಕೆಲವು ಉತ್ತಮ ಪ್ರಾಸಗಳಿಂದ ಕೂಡಿವೆ .

ಮಕ್ಕಳ ಸಾಹಿತ್ಯ ಕೃತಿಗಳು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಸಮುದ್ರವಳ್ಳಿ ವಾಸು ರಂತವರು ಇನ್ನೂ ಹೆಚ್ಚಿನ ಮಕ್ಕಳ ಪುಸ್ತಕಗಳನ್ನು ಬರೆಯಲಿ ಎಂದು ಹಾರೈಸುವೆ.



ಪುಸ್ತಕ: ಉಂಡಾಡಿ ಗುಂಡ.

ಕವಿ: ಸಮುದ್ರವಳ್ಳಿ ವಾಸು.

ಪ್ರಕಾಶನ: ಯದುನಂದನ ಪ್ರಕಾಶನ

ಬೆಲೆ: 80


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು

9900925529


ಆವಿಷ್ಕಾರದ ಹರಿಕಾರ .ವಿಮರ್ಷೆ





ಆವಿಷ್ಕಾರದ ಹರಿಕಾರ 
ಕೃತಿ ವಿಮರ್ಶೆ

ಅವಿ ಯೋರಿಶ್ ರವರು ಬರೆದಿರುವ
ಆವಿಷ್ಕಾರದ ಹರಿಕಾರ ಪುಸ್ತಕವನ್ನು ವಿಶ್ವೇಶ್ವರ ಭಟ್ ರವರು ಕನ್ನಡಕ್ಕೆ ಬಹು ಸೊಗಸಾಗಿ ಅನುವಾದ ಮಾಡಿದ್ದಾರೆ.
ಅವಿ ಯೋರಿಶ್ ಮೂಲತಃ ಓರ್ವ ಉದ್ಯಮಿ, ಐದು ಪುಸ್ತಕಗಳ  ಲೇಖಕ ಮತ್ತು ಚಿಂತಕ ಅಮೆರಿಕ ಸರ್ಕಾರದ ಹಣಕಾಸು ಮತ್ತು ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿ. ಅಮೆರಿಕ ವಿದೇಶಾಂಗ ನೀತಿ ಮಂಡಳಿಯಲ್ಲಿ ಸೀನಿಯರ್ ಫೆಲೋ, ಕಳೆದ ಇಪ್ಪತ್ತು ವರ್ಷಗಳಲ್ಲಿ, ಅವಿ ಜಗತ್ತಿನಾದ್ಯಂತ ಪ್ರಮುಖ ವೇದಿಕೆಗಳಲ್ಲಿ ಉಪನ್ಯಾಸ ನೀಡಿದವರು 'ದಿ ನ್ಯೂಯಾರ್ಕ್ ಟೈಮ್ಸ್,' 'ದಿ ವಾಲ್ ಸ್ಟ್ರೀಟ್ ಜರ್ನಲ್ ಸೇರಿದಂತೆ ವಿಶ್ವದ ಐವತ್ತಕ್ಕೂ ಹೆಚ್ಚು ಪ್ರಭಾವಿ ಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ಲೇಖನಗಳನ್ನು ಪ್ರಕಟಿಸಿರುವ ಆವಿ , ಸಿಎನ್ಎನ್, ಫಾಕ್ಸ್ ನ್ಯೂಸ್ ಸೇರಿದಂತೆ ಅನೇಕ ಪ್ರಮುಖ ಟಿವಿ ಚಾನೆಲ್ಲುಗಳ ಸಂವಾದದಲ್ಲಿ ಕಾಣಿಸಿಕೊಂಡಿದ್ದಾರೆ. ಮಧ್ಯಪ್ರಾಚ್ಯ ಪರಿಣತರಾಗಿರುವ, ಅವಿ ಅವರ ಪ್ರಸ್ತುತ ಪುಸ್ತಕ, ವಿಶ್ವದ ನಲವತ್ತಕ್ಕೂ ಅಧಿಕ ಭಾಷೆಗಳಿಗೆ ಅನುವಾದವಾಗಿರುವುದು ಅವರ ಚಿಂತನೆಯ ಪ್ರಸ್ತುತತೆ ಮತ್ತು ಮಹತ್ವವನ್ನು ಸಾರುತ್ತವೆ.

ಬುದ್ಧಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ ಎಂಬ ಟ್ಯಾಗ್ ಲೈನ್ ನೊಂದಿಗೆ ಇರುವ ಈ ಪುಸ್ತಕ ಓದಿದಾಗ ಒಂದು ಪುಟ್ಟ ರಾಷ್ಟ್ರ ತನ್ನ ಬದ್ಧತೆ ಮತ್ತು ಛಲದಿಂದ ಹೇಗೆ ಜಗತ್ತಿನಲ್ಲಿ ತನ್ನದೇ ಹೆಸರು ಉಳಿಸಿಕೊಂಡಿದೆ ಎಂಬುದನ್ನು ಮನವರಿಕೆ ಮಾಡುತ್ತಾ  ಆ ದೇಶದ ನಾಗರಿಕರ ದೇಶಭಕ್ತಿಯ ಪರಿಚಯ ಮಾಡಿಸುವುದು ಹಾಗೂ   ನಮ್ಮಲ್ಲೂ ನಮ್ಮ ದೇಶದ ಬಗ್ಗೆ ಇರಬೇಕಾದ  ಗೌರವ ಮತ್ತು ಭಕ್ತಿಯನ್ನು ಬಡಿದೆಬ್ಬಿಸುತ್ತದೆ. 

ಅನುವಾದಕರ ಮಾತಿನಲ್ಲೇ ಹೇಳುವುದಾದರೆ ಹಸಿದ ಹೊಟ್ಟೆ ತುಂಬಿಸಲು, ಅನಾರೋಗ್ಯ ಗುಣಪಡಿಸಲು, ರಕ್ಷಣೆ ಇಲ್ಲದವರ ರಕ್ಷಿಸಲು ಹಾಗೂ ಮರುಭೂಮಿಯನ್ನು ಅರಳಿಸಲು ಇಸ್ರೇಲಿಗರು ಏನೆಲ್ಲಾ ಮಾಡುತ್ತಿದ್ದಾರೆ, ಗೊತ್ತಾ?

ಇಸ್ರೇಲ್ ಎಂಬ ಪುಟ್ಟ ದೇಶದಲ್ಲಿರುವ ಎಲ್ಲಾ ಧರ್ಮಗಳ ಸೃಜನಶೀಲ ಮಿದುಳುಗಳೂ ಹಠಕ್ಕೆ ಬಿದ್ದವರಂತೆ ಜಗತ್ತನ್ನು ಸುಂದರ ತಾಣವನ್ನಾಗಿ ರೂಪಿಸಲು ಪಟ್ಟು ಹಿಡಿದು ಕುಳಿತಿರುವುದು ಏಕೆ? ಜಗತ್ತಿನಾದ್ಯಂತ ನೂರಾರು ಕೋಟಿ ಜನರ ಬದುಕನ್ನು ಇಸ್ರೇಲಿನ ಅದ್ಭುತ ಆವಿಷ್ಕಾರಗಳು ಹೇಗೆ ಬದಲಿಸುತ್ತಿವೆ ಎಂಬುದನ್ನು 'ಈ' ಕೃತಿ ಕಟ್ಟಿಕೊಡುತ್ತದೆ. ಜಗತ್ತನ್ನು ದುರಸ್ತಿ ಮಾಡುವ ಯಹೂದಿಗಳ 'ಟಿಕ್ಕುನ್ ಓಲಮ್' ಎಂಬ ಚಿಂತನೆಯನ್ನು ಬಳಸಿ, ದೇಶದೇಶಗಳ ಆತ್ಮವನ್ನೇ ತಟ್ಟಿ, ಪ್ರಪಂಚದ ಬಹುದೊಡ್ಡ ಸವಾಲುಗಳನ್ನು ಮುಗುಮ್ಮಾಗಿ ಪರಿಹರಿಸಲು ಇಸ್ರೇಲ್ ತನ್ನ ಗಾತ್ರಕ್ಕೆ ಮೀರಿದ ಪಾತ್ರವನ್ನು ನಿಭಾಯಿಸುತ್ತಿದೆ.

ಇಸ್ರೇಲ್ನಲ್ಲಿ ಪರಮಾದ್ಭುತ ಆವಿಷ್ಕಾರಿಗಳಿದ್ದಾರೆ. ಜನರನ್ನು ಉಳಿಸುವ ಹಾಗೂ ಬದುಕಿನ ಉನ್ನತ ಉದ್ದೇಶವನ್ನು ಕಂಡುಕೊಳ್ಳುವ ಸೂತ್ರಕ್ಕೆ ಅವರೆಲ್ಲ ಬಂಧಿಗಳು, ವೈಫಲ್ಯ ಹಾಗೂ ಅಡ್ಡಿ ಆತಂಕಗಳ ಮುಖಕ್ಕೆ ಹೊಡೆದಂತೆ ಈ ಸೃಜನಶೀಲ ಮನಸ್ಸುಗಳು ಅವಕಾಶ ಮತ್ತು ಧೈರ್ಯವನ್ನು ಹುಡುಹುಡುಕಿ ಬಾಚಿಕೊಳ್ಳುತ್ತವೆ. ತನ್ನ ಪಾಲಿಗಿಂತ ಹೆಚ್ಚು ಕತ್ತಲೆಯನ್ನು ಅನುಭವಿಸಿದ ದೇಶಕ್ಕೆ ಈ ಕತೆಗಳೇ ಬೆಳಕಿನ ಕಿರಣಗಳು ಉದ್ಯಮಶೀಲರು, ಸ್ಪಾರ್ಟಪ್ಗಳ ಬಗ್ಗೆ ಆಸಕ್ತಿ ಹೊಂದಿರುವವರು ಹಾಗೂ ಸೃಜನಶೀಲ ಆವಿಷ್ಕಾರಗಳ ಬಗ್ಗೆ ಕುತೂಹಲ ಹೊಂದಿರುವ ಪ್ರತಿಯೊಬ್ಬರೂ ಓದಬೇಕಾದ ಪುಸ್ತಕವಿದು.
ಜಗತ್ತಿನಲ್ಲಿ ಅತಿ ಹೆಚ್ಚು ಅನ್ವೇಷಣೆ ಮತ್ತು ಆವಿಷ್ಕಾರಗಳು ನಡೆಯುವ ದೇಶವೆಂದರೆ ಇಸ್ರೇಲ್, ಇವನ್ನೆಲ್ಲಾ ನೋಡಿದರೆ, 85 ಲಕ್ಷ ಜನರಿರುವ ಆ ಒಂದು ಪುಟ್ಟ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪವಾಡಸದೃಶ, ಕರ್ನಾಟಕದ ಆರು ಜಿಲ್ಲೆಗಳಷ್ಟು ಚಿಕ್ಕದಾಗಿರುವ ಇಸ್ರೇಲ್ನಲ್ಲಿ ಜಗತ್ತಿನ ಯಾವ ದೇಶಗಳಲ್ಲೂ ನಡೆಯುವುದಕ್ಕಿಂತ ಹೆಚ್ಚು ಆವಿಷ್ಕಾರಗಳು, ಸಂಶೋಧನೆಗಳು ನಡೆಯುತ್ತಿವೆ.

ಅತಿ ಕಡಿಮೆ ನೈಸರ್ಗಿಕ ಸಂಪನ್ಮೂಲ, ಕಡಿಮೆ ಜನಸಂಖ್ಯೆ ಮತ್ತು ವೈರಿ ನೆರೆ-ಹೊರೆಗಳನ್ನು ಹೊಂದಿರುವ ಆವಿಷ್ಕಾರಗಳ ಹರಿಕಾರನಾಗಿದ್ದು ಹೇಗೆ? ಭಾರತ, ಕೆನಡ, ಜಪಾನ್, ಕೊರಿಯಾ, ಬ್ರಿಟನ್ಗಳಿಗಿಂತ ಹೆಚ್ಚು ಸ್ಟಾರ್ಟ್ಪ್ಗಳು ಇಸ್ರೇಲಿನಲ್ಲಿರಲು ಸಾಧ್ಯವಾಗಿದ್ದು ಹೇಗೆ ? ಅದು ಜಾಗತಿಕ ಜಲ ಮಹಾಶಕ್ತಿಯಾಗಿ ಹೊರಹೊಮ್ಮಿದ್ದು ಹೇಗೆ? ಆಹಾರ, ನೀರು, ಹೈನು, ಔಷಧ, ರಕ್ಷಣಾ ಉಪಕರಣಗಳಿಗೆ ಬೇರೆ ದೇಶಗಳನ್ನು ಅವಲಂಬಿಸದೇ ಇಂದು ಇಸ್ರೇಲ್ ಸ್ವಾವಲಂಬನೆ ಸಾಧಿಸಿರುವುದು ಹೇಗೆ? ಇದು ನಿಜಕ್ಕೂ ರೋಚಕ ಕಥನ. ಎಂಬುದು ನೀವು ಈ ಪುಸ್ತಕ ಓದಿ ಮುಗಿಸಿದಾಗ ನಿಮಗೆ ಅನ್ನಿಸದೇ ಇರದು.

ಒಟ್ಟು  ೧೮ ಅಧ್ಯಾಯಗಳಿರುವ ಈ ಕೃತಿಯು  ಈಗಾಗಲೇ ಐದು ಬಾರಿ ಮರುಮುದ್ರಣ ಕಂಡಿದೆ ಎಂಬುದು ಪುಸ್ತಕದ ಜನಪ್ರಿಯತೆ ಬಗ್ಗೆ ತಿಳಿಸುತ್ತದೆ. ಯಹೂದಿಗಳು ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ, ಬೈಕ್  ಆ್ಯಂಬುಲೆನ್ಸ್ಗಳ  ಕ್ರಾಂತಿ ನಿಜವಾದ ಉಕ್ಕಿನ ಮನುಷ್ಯರು,
ಮಿದುಳಿಗೊಂದು ಜಿಪಿಎಸ್ ,ಗೋಲ್ಡನ್ ಪೈರ್ ವಾಲ್ , ಬೆನ್ನುಹುರಿಯ ಮೇಲೆ ಕಣ್ಣು,
ಮರೆಯಾದವರಿಗೆ ಮರುಜೀವ ಈ ಅಧ್ಯಾಯಗಳು ನನಗೆ ಬಹಳ ಇಷ್ಟವಾದವು .


ಪುಸ್ತಕದ ಹೆಸರು: ಆವಿಷ್ಕಾರದ ಹರಿಕಾರ.
ಅನುವಾದ : ವಿಶ್ವೇಶ್ವರ ಭಟ್
ಪ್ರಕಾಶನ: ವಿಶ್ವ ವಾಣಿ
ಬೆಲೆ : 350.

ಸಿಹಿಜೀವಿ ಸಿ ಜಿ ವೆಂಕಟೇಶ್ವರ
ತುಮಕೂರು


ಉದಕದೊಳಗಿನ ಕಿಚ್ಚು. ಭಾಗ ೧೪


 ಉದಕದೊಳಗಿನ ಕಿಚ್ಚು ಭಾಗ ೧೪


ಮಾರಮ್ಮನ ಜಾತ್ರೆ ಭಾಗ ೨



"ಏ ರಂಗ ಬಾನ್ಗುರಿ ಇಡ್ಕಂಬಾರ್ಲ" ಗುಡಿಗೌಡ್ರು ಆದೇಶ ನೀಡಿದರು.


"ಅಣ್ಣ ಯಾರ ಮನೆ ಹತ್ರ ಐತಣ್ಣ "


" ಊರಗೊಲ್ಲರ ನಿಜಲಿಂಗಪ್ಪರ ಮನೆ ಹತ್ರ ಐತೆ ಹೋಗಲೆ ಹಿಡಕಂಬಾ "


"ಅಣ್ಣ ಪಟ್ಲಿನಾ ಹೆಣ್ಗುರಿನಾ"


ಲೇ ಇಡ್ಕಂಬಾ ಹೋಗಲೆ ಗೊತ್ತಾಗುತ್ತೆ ನೀನಂತುನು" 


"ಹೇ ಉರುಮೇರಿಗೆ ಏಳೋ ಒಳ್ಳೆ ಟೈಮಿಗೆ ಓಡ್ ಹೋಗ್ತಾರೆ ಹೆಂಡ ಕುಡಿಯಾಕೆ "ಎನ್ನುವಾಗ

 "ಇಲ್ಲೇ ಇದಿವಿ ಗೌಡರೆ "ಎಂದು ಉರಿಮೆ ಬಡಿಯಲು ಸುರು ಮಾಡಿದರು .


ರಂಗ ಹಿಡಿದುಕೊಂಡು ತಂದ ಬಾನಗುರಿಯನ್ನು ಪಾತಲಿಂಗ ನಡು ಹಿಡಿದು ನೀಡಿ " ಒಳ್ಳೆ ಮರಿ ತಂದಿದಿಯಾ ಗೌಡ, ಒಳ್ಳೆ ನೆಣ ಐತೆ. ಇಪ್ಪತ್ತು ಕೇಜಿ ಮಾಂಸಕ್ಕೇನು ಮೋಸ ಇಲ್ಲ "


"ಹುಂ ಹಿಡ್ಕಂಡು ಬಾ "ಎಂದರು ಗೌಡರು.


ಪೂಜಾರಪ್ಪ ಪೂಜೆ ಮಾಡಿ ಅರಿಷಿಣ ,ಬೇವಿನ ಸೊಪ್ಪು, ಕುರಿಯ ತಲೆಗೆ ಇಟ್ಟು, ಅಮ್ಮನ ಮೇಲಿಂದ ತಂದ ಹೂವನ್ನು ಕುರಿಯ ಕೊರಳಿಗೆ ಕಟ್ಟಿ, ಗುಡಿಯ ಒಳಗೆ ಹೋದ ಕೂಡಲೆ ಸಿದ್ದಾನಾಯ್ಕ ಒಂದೇ ಬಾರಿಗೆ ಕಚಕ್ ಎಂದು ಕಡಿದು ಬಿಟ್ಟ.


" ಗೌಡ್ರೆ ಮಚ್ಚು ಬಾಳ ಚೆನ್ನಾಗೈತೆ ಈ ಸತಿ ಕುರಿ ,ಮ್ಯಾಕೆ ಏನು? ಕೋಣಾನೂ ಒಂದೆ  ಏಟೆ" ಎಂದು ಉದ್ದನೆಯ ಗಿರಿಜಾ ಮೀಸೆಯನ್ನು ಎಡಗೈಯಲ್ಲಿ ತೀಡಿದನು ಸಿದ್ದಾನಾಯ್ಕ.


"ಆತಪ್ಪ ....ಹುಸಾರು, ನಿನಂತುನು ಉಪ್ಪರಿಗೇನಹಳ್ಳಿ ಜಾತ್ರೆಲ್ಲಾದ ಸಮಸ್ಯೆ ಗೊತ್ತಲ್ಲ ?ನೀನಂತುನುನು" 


"ಹೇ ಸುಮ್ಕಿರಿ ಗೌಡ್ರೆ ಯಾವಾಗಲೂ ಅದುನ್ನೆ ಹೇಳ್ತಿರಾ,ಯಾವೊನೊ ಅವೋಗ್ಯ ಮಾಡುದ್ರೆ ಎಲ್ಲಾ ಹಂಗೆ ಇರ್ತರಾ?" ಅಂದ ಗೌಡರು ಸುಮ್ಮನಾದರು.


ಬಾನ ಗುರಿ ಕಡಿದ ಮೇಲೆ ಅಮ್ಮನಿಗೆ ನೈವೇದ್ಯ ಮಾಡಿ ಊರ ಸುತ್ತ ತಳಿ ಹಾಕಲು ಕೆಲವರು ಹೋದರೆ ಕೆಲವರು ಸಾಂಬರು ಕಾರ ಜೋಡಿಸಿ ಹೆಂಗಸರಿಗಿಂತ ನಾವೇನು ಕಡಿಮೆಯಲ್ಲ ಭೀಮ ನಳಮಹಾರಾಜರು ಇದ್ದಂಗೆ  ಎಂದು ಕುರಿ ಸಾರು ಅನ್ನ ಮುದ್ದೆ ಮಾಡಿ, ಕೆಲವರು ಬಿಟ್ಟುಕೊಂಡು ತೊದಲುತ್ತಲೆ ಸರೊತ್ತಲ್ಲಿ ಊರ ಮೊದಲು ಜಾತ್ರೆಯ ಸೊಭಗು ಸವಿದರು .ಅಲ್ಲಿದ್ದ ಬೆರಳೆಣಿಕೆಯಷ್ಟು ಜನ.

******************************


ಶುಕ್ರವಾರ ಮಾರಮ್ಮ ತಾಯಿಯ ಜಾತ್ರೆಯ ಪ್ರಮುಖ ದಿನ ಅಂದು ಆರತಿ ಮತ್ತು ಬೇವಿನ ಸೀರೆ ಆಚರಣೆಗೆ ಸಿದ್ದವಾಗುತ್ತಿತ್ತು ಯರಬಳ್ಳಿ.


"ಏ ಬಿಳಿಯ, ಹೊಲಕ್ಕೆ ಹೋಗಿ ಬೇವಿನ್ ಸೊಪ್ಪು ತಾಂಬ. ಈ ವರ್ಸ ಬೇವಿನ್ ಸೀರೆ ಉಡಬೇಕು. ಆವತ್ತು ಸತೀಸ್ಗೆ ಅದೇನೋ ಹುಳ ಮುಟ್ಟಿತ್ತಲ್ಲ ಆವತ್ತು ಹರಕೆ ಹೊತ್ಗಂಡಿದ್ದೆ" ಎಂದರು ಊರಿಂದ ಜಾತ್ರೆಗೆ ಬಂದ ಭೂದೇವಮ್ಮ .


" ನೋಡಕ ಬೇವಿನ ಸೊಪ್ಪು ತತ್ತಿನಿ, ಜಾತ್ರೆ ಖರ್ಚಿಗೆ ನನಗೆ ಏನಾರಾ ಕೊಡಬೇಕು" .


ಎಂದಿದ್ದನ್ನು ಒಳಗಿನ ಮನೆಯಲ್ಲಿ ಕೇಳಿಸಿಕೊಂಡ ಸರಸ್ವತಜ್ಜಿ "ಅಲಾಕ್ದ್ವನೆ ನಿಮ್ಮಕ್ಕನ್ನ  ನೀವು ಹೋಗಿ ಜಾತ್ರೆ ಕರ್ಕಂಡು ಬರ್ಬೇಕಾಗಿತ್ತು. ಪಾಪ ಆ ಹುಡುಗಿನೆ ಬಸ್ಚಾರ್ಜು ಇಟ್ಕೊಂಡು ಬಂದಾವ್ಳೆ  ಅವ್ಳನ್ನೆ ದುಡ್ ಕೇಳ್ತಾನೆ ಅಲ್ಕಾ ನನ್ ಮಗ " ಎಂದು ಗುಡುಗಿದರು " ಏ ನಾನ್ ಸುಮ್ಮನೆ ಅಂಗ್ ಅಂದೆ ಮುದ್ಕಿ ನೀನೇನು ನನ್ ಒದಿಯಾಕೆ ಬತ್ತಿಯಲ್ಲ, ಆತು ಹೋಗ್ತಿನಿ ಬಿಡಮ್ಮ ಬೇವಿನ್ ಸೊಪ್ಪು ತರಕೆ "ಎಂದು ಹೊರಟ ಬಿಳಿಯಪ್ಪ.


*****************************

ಸೂರ್ಯನು ಪೂರ್ವದಿಂದ ಪಶ್ಚಿಮಕ್ಕೆ ತನ್ನ ಪಯಣ ಬೆಳಸುವ ಕಾಲದಲ್ಲಿ ಎಲ್ಲರ ಮನೆಯಲ್ಲಿ ಅಕ್ಕಿಯ ತಂಬಿಟ್ಟನ್ನು ಆಯತಾಕರಾದಲ್ಲಿ ಮಾಡಿ ಅದರ ಮದ್ಯ ದೀಪವಿಡಲು ಜಾಗ ಬಿಟ್ಟು ನಾಲ್ಕು ಕಡೆಯಿಂದ ನಾಲ್ಕು ಅಂಚಿಕಡ್ಡಿ ಮತ್ತು ವಿಳ್ಯೆದೆಲೆ ಇಟ್ಟು ಕಡ್ಡಿಗಳಿಗೆ ಕಣಗಿಲೆ ಹೂ ಅಲಂಕಾರ ಮಾಡಿ ,ಆ ಆರತಿಗಳನ್ನು ಸ್ಟೀಲ್ ಬೇಸನ್ ಅಥವಾ ಪಾತ್ರೆಗಳಲ್ಲಿ ಅಲಂಕಾರ ಮಾಡಿ ,ತಂಬಿಟ್ಟು ಮಾಡಿದ್ದಕ್ಕಿಂತ ಹೆಚ್ಚು ಸಮಯ ತಮ್ಮ ಅಲಂಕಾರಕ್ಕಾಗಿ ಮೀಸಲಿಟ್ಟರು .


ಸಂಜೆಗತ್ತಲಾಗುತ್ತಲೇ ಮನೆಯಲ್ಲಿ ದೀಪ ಮುಡಿಸಿ ,ವಾಲಗದವರು ನಮ್ಮ ಮನೆಗೆ ಯಾವಾಗ ಬರುವರೋ ಎಂದು ಕಾತುರತೆಯಿಂದ ಕಾಯುವ ಹೆಣ್ಣುಮಕ್ಕಳು, ಊರ ಮುಂದೆ ಅಷ್ಟೇ ಯಾರನ್ನೋ ನೋಡಲು  ಕಾತುರತೆಯಿಂದ ಕಾಯುವ ಹುಡುಗರು .


ವಾಲಗದವರ ಜೊತೆ ಮಡಿವಾಳರ ಪಂಜು ಅಗತ್ಯ ಆದರೆ ಒಂದೇ ಬಾರಿ ಎಲ್ಲಾ ಬೀದಿಗಳಲ್ಲಿ ಅಷ್ಟು ಪಂಜು ತರುವುದು ಹೇಗೆ? ಅದಕ್ಕೆ ಕೆಳವರ್ಗದ ಜನ ಪೂರಾ ಒಣಗಿದ ಒಂದು ದಪ್ಪನೆಯ ಕೋಲನ್ನು ಸಿಬಿರು ಮಾಡಿ ಅದಕ್ಕೆ ಬೆಂಕಿ ಹಚ್ಚಿ ಪಂಜು ಮಾಡಿರುವುದು ಒಂದು ಸಂಶೋಧನೆಯೇ ಸರಿ.


ಆರತಿ ಬೆಳಗುವ ಮಹಿಳೆಯರ ಪೈಕಿ  ಕೆಲವರು ಬೇವಿನ ಸೀರೆ ಉಟ್ಟವರು ಇದ್ದರು .


ಬೇವಿನ ಸೊಪ್ಪಿನ‌ ರೆಂಬೆ ಕೊಂಬೆಗಳನ್ನು ಜೋಡಿಸಿ ಅವುಗಳನ್ನು ಟ್ವೈನ್ ದಾರ ಅಥವಾ ತೆಂಗಿನ ಉರಿಯಲ್ಲಿ ಒಂದಕ್ಕೊಂದು ಒತ್ತಾಗಿ ಜೋಡಿಸಿ ನಿರ್ವಸ್ತ್ರರಾಗಿ ಆ ಬೇವಿನ ಸೊಪ್ಪಿನ ಸೀರೆಯನ್ನು ಉಟ್ಟು ಹರಕೆಯಂತೆ ತಾಯಿಗೆ ಆರತಿ ಬೆಳಗುವ ಸಂಪ್ರದಾಯವೇ ಬೇವಿನ ಸೀರೆ ಉತ್ಸವ.



ಮೊದಲು ಮಾರಮ್ಮನಿಗೆ ಆರತಿ ಬೆಳಗಿ ಬೇವಿನ ಸೀರೆ ಉಟ್ಟವರು ಪೌಳಿಯ ಹಿಂದೆ ಹೋಗಿ ಸ್ನಾನ ಮಾಡಿ ಬಟ್ಟೆ ಧರಿಸಿ ತಾಯಿಯ ದರ್ಶನ ಪಡೆಯುವರು. ನಂತರ ರಂಗಪ್ಪನಿಗೆ ಆರತಿ ,ಇತ್ತೀಚಿನ ದಿನಗಳಲ್ಲಿ ಶ್ರೀದೇವಿ ಮಹಾತ್ಮೆ ನಾಟಕ ಆಡುವ ರಂಗಸ್ಥಳದ ಹತ್ತಿರ ಇರುವ ದೇವಿಗೂ ಒಂದು ಆರತಿ ಮಾಡುವುದುಂಟು .


ಪೂಜಾರಪ್ಪನಿಗೆ,ವಾಲಗದವರಿಗೆ,ಅಸಾದಿಗಳಿಗೆ,ತಳವಾರಪ್ಪನಿಗೆ,ತಮ್ಮ ಶಕ್ತಾನುಸಾರ ಮಹಿಳೆಯರು ತಂಬಿಟ್ಟು, ತೆಂಗಿನಕಾಯಿ, ಬಾಳೆಹಣ್ಣು, ಕೆಲವರು ಹಣ ಕೊಟ್ಟು ಮನೆಗೆ ಹಿಂತಿರುಗಿ ಕರಿಗಡುಬೋ ,ಹೋಳಿಗೆಯ ಊಟವನ್ನು ಮಾಡಿದರೆ ಅಲ್ಲಿಗೆ ಮಾರಮ್ಮನಿಗೂ ಸಮಾಧಾನ ಭಕ್ತರಿಗೂ ಸಮಾಧಾನ.


**************************

" ಮಾವ ಪ್ರಾಣಿ ಬಲಿ‌ ನಿಷೇಧಿಸಲಾಗಿದೆ ಎಂದು ನಮ್ಮ ಮೇಷ್ಟ್ರು ಪಾಠ ಮಾಡಿದ್ರು" ಎಂದು ಮಾರಮ್ಮನ ದೇವಸ್ಥಾನದ ಕಡೆಗೆ ಕುರಿಯನ್ನು ಕಡಿಯಲು  ಹೊಡೆದುಕೊಂಡು ಹೋಗುತ್ತಾ ಸತೀಶ ಮುರಾರಿಯನ್ನು ಪ್ರಶ್ನಿಸಿದ" "ಕಾನೂನೇನೋ ಮಾಡವ್ರೆ ಆದರೆ ನಾವು ಅಮ್ಮನಿಗೆ ಮರಿ ಕಡಿದಿದ್ರೆ ಸುಮ್ಮನೆ ಬಿಡ್ತಾಳ? " ಎಂದ ಮುರಾರಿ.



ಶನಿವಾರ ಸೂರ್ಯ ಇನ್ನೂ ಎಚ್ಚರಗೊಂಡಿರಲಿಲ್ಲ ಯರಬಳ್ಳಿಯ ಜನರು ಮನೆಗೊಂದರಂತೆ ಕುರಿ ,ಮೇಕೆ ಹಿಡಿದು ನನ್ನದು ಮೊದಲು ಕಡಿ ಎಂದು ಸಿದ್ದಾನಾಯ್ಕನೊಂದಿಗೆ  ಜಗಳಕ್ಕೆ ನಿಂತಿದ್ದರು. ಮಕ್ಕಳು ಮಾತ್ರ ಅವರ ಜಗಳ ಮತ್ತು ಸಿದ್ದಾನಾಯ್ಕ ಮಚ್ಚು ಹಿಡಿವ ರೀತಿ ,ಒಂದೇ ಬಾರಿಗೆ ಕಚಕ್ ಎಂದು ಕುರಿಗಳ ಕಡಿಯುವದನ್ನು ತದೇಕಚಿತ್ತದಿಂದ ನೋಡುತ್ತಿದ್ದರು. " ಏ ದೂರ ಹೋಗ್ರೊ ಹುಡುಗ್ರ, ಯಾರಿಗಾದರೂ ಮಚ್ಚು ತಗುಲೀತು ಮೊದ್ಲೇ ಗೌಡ್ರು ನೀನಂತುನುನು ಅಂತ ಎಗರಾಡ್ತಾರೆ " ಎಂದು ಮತ್ತೊಂದು ಮೇಕೆ ಕಡಿಯಲು ಕೈ ಮೇಲೆತ್ತಿದ ಸಿದ್ದಾನಾಯ್ಕ.



ಸಾಮಾನ್ಯವಾಗಿ ಕುರಿ ಕೋಳಿನ ಶನಿವಾರ ಸೋಮವಾರ ಕೊಯ್ಯಂಗಿಲ್ಲ ಎಂಬ ಗಾದೆ ಇದೆ ಇದು ಬಹುತೇಕ ಕಡೆ ಜಾರಿಯಲ್ಲಿರುವ ಸಂಪ್ರದಾಯ ಆದರೆ ಈ ಊರಲ್ಲಿ ಶನಿವಾರ ಮಾಂಸಾಹಾರಕ್ಕೆ ಅಡ್ಡಿ ಬಂದಿಲ್ಲ .ಕೆಲವರು ವೆಂಕಟೇಶ್ವರ ಸ್ವಾಮಿಯ ಆರಾಧಕರಿದ್ದು ಬೆಳಿಗ್ಗೆ ಸ್ನಾನ ಮಾಡಿ ಪೂಜೆ ಮಾಡಿ ಏಳು ಕೊಂಡಲವಾಡ ನಿನಗೀಗಾಲೆ ಪೂಜೆ ಮಾಡಿರುವೆ ಇಂದು ಮಟನ್ ಚಿಕನ್ ತಿನ್ನುವೆ ಬೇಜಾರಾಗಬೇಡ ಪ್ಲೀಸ್ ಎಂಬಂತೆ ಪೂಜೆ ಮಾಡಿ ಮೂಳೆ ಕಡಿಯಲು ಸಜ್ಜಾಗುತ್ತಿದ್ದರು.



ಬಿಸಿಲೇರಿದಂತೆ ಒಂದು ಬೀದಿಯಿಂದ ಮತ್ತೊಂದು ಬೀದಿಗೆ ಮಸಾಲೆ ಕಂಪು ಪಸರಿಸುತ್ತಾ ಶೆಟ್ಟರ ಮನೆಯವರೆಗೂ ಹೋದಾಗ  " ಮೂಗು ಮುಚ್ಚಿಕೊಂಡು ಅದೇನ್ ತಿಂತಾರೋ ಈ ಜನ ದರಿದ್ರ ವಾಸನೆ " ಎಂದು ಬೈಯ್ದುಕೊಳ್ಳುತ್ತಿದ್ದರು.



ಸಂಜೆಯ ವೇಳೆಗೆ ಬೇರೆ ಊರುಗಳಿಂದ ನೆಂಟರು ಮಟನ್ ಊಟಕ್ಕಾಗಿಯೇ ಬರುತ್ತಿದ್ದರು. ಅದರಲ್ಲಿ ಕೆಲವರು ಸದ್ದಿಲ್ಲದೆ ಊಟ ಮಾಡಿ ಅಡಿಕೆ ಎಲೆ ಹಾಕಿಕೊಂಡು ಹೊರಟರೆ ,ಕೆಲ ತೀರ್ಥಂಕರರು ಅರೆ ಬರೆ ಊಟಮಾಡಿ ಗಲಾಟೆ ಮಾಡಿ ಚರಂಡಿಯಲ್ಲಿ ಬಿದ್ದು ಒದ್ದಾಡುವುದೂ ಇದೆ. 



ಭಾನುವಾರ ಮೊದಲ ಸಿಡಿ ಉತ್ಸವ ಸೋಮವಾರ ಎರಡನೇ ಸಿಡಿ ಉತ್ಸವ ಮತ್ತು ಕೆಳಜನಾಂಗದವರ ಮಾಂಸದೂಟದ ಸಂಭ್ರಮ.

*****************************

ಮೈಗೆ ಅರಿಶಿಣ ಬಳಿದುಕೊಂಡ ಕೈಯಲ್ಲಿ ಒಂದು ಗುದ್ಬಾಕು ಅದಕ್ಕೆ ನಿಂಬೆಹಣ್ಣು ಸಿಕ್ಕಿಸಿಕೊಂಡು ವಾಲಗದವರ ಜೊತೆಗೆ ಕೆಲ ಮನೆಗಳಿಗೆ ತೆರಳಿ  ಪುನಃ ಗುಡಿಯ ಬಳಿ ಬಂದು ಸಿಡಿ ಮರಕ್ಕೆ ಕೈಮುಗಿದು ನಿಂತ ಸಿಡಿ ಆಡುವವರನ್ನು ಸಿಡಿ ಮರಕ್ಕೆ ಕಟ್ಟಿ ಎತ್ತುಗಳನ್ನು ಹೂಡಿ ಆಸ್ಪತ್ರೆಯ ದಿನ್ನೆಯವರೆಗೆ ಕರೆದುಕೊಂಡು ಹೋಗಿ ಅಲ್ಲಿ ಸಿಡಿಮರ ಬಿಟ್ಟು, ಸಿಡಿಯಾಡುವವರನ್ನು ಮರದಿಂದ ಬಿಚ್ಚಿ ಗುಡಿಗೆ ಹಿಂತಿರುಗಿ ಕೈಮುಗಿದು ಮನೆಗೆ ಹೋಗುತ್ತಿದ್ದರು. ಮರುದಿನ ಬೆಳಿಗ್ಗೆ ಸಿಡಿಮರ ಅಮ್ಮನ ಸನ್ನಿಧಿಗೆ ಹಿಂತಿರುಗುತ್ತಿತ್ತು. ಇದೇ ರೀತಿ ಎರಡು ದಿನ ಉತ್ಸವ ನಡೆಯುತ್ತಿತ್ತು. ಬಹುತೇಕ ಕೆಳವರ್ಗದ ಜನ ಸಿಡಿಮರದ ಉತ್ಸವಕ್ಕೆ ಹರಕೆ ಹೊತ್ತು ಅವರೇ ಸಿಡಿ ಆಡುತ್ತಿದ್ದರು .


ಸಾಮಾನ್ಯವಾಗಿ ಗಂಡಸರು ಸಿಡಿಯಾಡಿದರೆ ಅಪರೂಪಕ್ಕೊಮ್ಮೆ ಹೆಂಗಸರೂ ಸಿಡಿ ಆಡುವುದುಂಟು.



ಸೋಮವಾರ ಕೆಳವರ್ಗದ ಕಾಲೋನಿ ಕಡೆಯಿಂದ ಹಿಂಡು ಹಿಂಡು ಕೋಣಗಳು ಮತ್ತು ಜನರು ಬರುವುದು ನೋಡಿ ಅವರು ಕೋಣ ಮೇಯಿಸಲು  ಹೊರಟಿರುವರು ಎಂದುಕೊಂಡರೆ ತಪ್ಪು!


ಅವರು ಸೀದಾ ಮಾರಮ್ಮನ ಗುಡಿಗೆ ಬಂದು ಎಲ್ಲಾ ಕೋಣಗಳನ್ನು ಪೂಜೆ ಮಾಡಿಸಿ 


" ಸಿದ್ದಣ್ಣ ನಮ್ ಕ್ವಾಣ ಒಂದೇ ಏಟಿಗೆ ಹೋಗ್ಬೇಕು ,ಕಡಿ" ಎಂದ ಗುರುಸಿದ್ದ .



ಹೋದೊರ್ಸ ನಮಗೆ ಕ್ವಾಣ ಕೊಡ್ಲಿಲ್ಲ ನೀವು, ನಾವು ಯಾರ್ಯಾರ ಮನೆಗೆ ಹೋಗಾಕಾಗುತ್ತ ,ನೆಂಟರು ಬತ್ತಾರೆ


ಜಾತ್ರೆಗೆ ಈ ಸಲ ನಮಗೆ ಕ್ವಾಣ ಕೊಡ್ಬೇಕು ಗೌಡರೆ" ಎಂದು ಗುರುಸಿದ್ದನ ತಾಯಿ ಬೇಡಿದ ಪರಿಣಾಮವಾಗಿ ಮುಕುಂದಯ್ಯ ಎರಡು ವರ್ಷದ ಕೋಣ ಮತ್ತು ದವಸ ಧಾನ್ಯಗಳನ್ನು ಕೊಟ್ಟು ಕಳಿಸಿದ್ದ 


ಹೋಗುವಾಗ " ಜಾತ್ರೆನಾಗೆ ನಮ್ ಹುಡ್ಗುಗೆ ರಜೆ ಕೊಟ್ಟು ಮನಿಗ್ ಕಳ್ಸಿ ಸಾಮಿ " ತಲೆಕೆರೆದುಕೊಂಡು ಅಳುಕುತ್ತಲೇ ಕೇಳಿದಳು ರಂಗಮ್ಮ" ದನಗಳನ್ನು ಯಾರ್ ಕಾಯಾಕೋಗ್ತಾರೆ ನಮಗೂ ಜಾತ್ರೆ ಅಲ್ವ? ನೀನ್ ಹೋಗ್ತಿಯಾ? ಬಿಸಿರಕ್ತದ ಬಿಳಿಯಪ್ಪ ಎಗರಿಬಿದ್ದ" ಹೋಗ್ಲಿ ಬಿಡಲೆ ಎಂಗ ಆಗುತ್ತೆ ನೋಡು ರಂಗವ್ವ ನಿಮ್ಮ ಮಟನ್ ದಿನ ಮಾತ್ರ ರಜ ತಗಳ್ಲಿ ಬ್ಯಾರೆ ದಿನ ಕಳ್ಸು ದನ ಮೇಸಿ ಕಟ್ಟಾಕಿ ಬೇಕಿದ್ರೆ ನಿಮ್ ಮನೆಗೆ  ಬರ್ಲಿ " ಆರ್ಡರ್ ಮಾಡಿದರು ಸರಸ್ವತಜ್ಜಿ.



ಅಂದು ಒಂದು ದಿನ‌ ಸಿಕ್ಕಿದ ವರ್ಷದ  ಸ್ವತಂತ್ರವನ್ನು ಅನುಭವಿಸುತ್ತಾ ಸಿದ್ದಾನಾಯ್ಕ ಅವರ ಕೋಣವನ್ನು ಒಂದೇ ಏಟಿಗೆ ಕಡಿದಾಗ ಕುಣಿದು ಕುಪ್ಪಳಿಸಿ ಕೇಕೆ ಹಾಕಿದ ಯಾರೋ ಬೇಕಂತಲೆ "ಅಗ ಬಿಳಿಯಪ್ಪ ಬಂದ" ಅಂದ ತಕ್ಷಣ ಭಯದಿಂದ ಸುಮ್ಮನೆ ನಿಂತ .ಅದು ಸುಳ್ಳು ಎಂದು ಗೊತ್ತಾಗುತ್ತಲೆ ಮತ್ತೆ ಕುಣಿಯುತ್ತ ಕೋಣದ ತಲೆ ಹಿಡಿದುಕೊಂಡು ಮನೆ ಕಡೆ ಹೆಜ್ಜೆ ಹಾಕಿದ .ಅಂದು ಕಾಲೊನಿ ಪೂರಾ ಮಸಾಲೆ ವಾಸನೆ ಜೊತೆಗೆ ಸಂಜೆಯಾಗುತ್ತಲೆ ಕೊಂಚ ಹೆಂಡದ ವಾಸನೆ  ಬೇಡವೆಂದರೂ ನಿಲ್ಲದ ಜಗಳಗಳು ಒಟ್ಟಾರೆ ಮಾರಮ್ಮನ ಜಾತ್ರೆ ಕಾಲೋನಿಯಲ್ಲಿ ಕಳೆಗಟ್ಟಿತ್ತು.


******************************


"ನಾನು ಊರಿಗೆ ಹೋಗಬೇಕು ಹೊರಡುವೆ " ಎಂದು ಭೂದೇವಮ್ಮ ಬ್ಯಾಗ್ ಸಿದ್ದಪಡಿಸುತ್ತಿದ್ದರು


 " ನಿನಗೇನ್ ತಲೆ ಕೆಟೈತಾ ಮಂಗಳವಾರ ಹೆಣ್ಣುಮಕ್ಕಳು ಅಂಗಳ ದಾಟಬಾರದು ,


ಅದೂ ಅಲ್ದೇ ನಾಳೆ ಬುಧವಾರ ಗಾವು ಸಿಗ್ಯಾದಾದ ಮ್ಯಾಕೆ ಜಾತ್ರೆ ಮುಗಿಯಾದು ಅಲ್ಲೇನು ಕೊಳ್ಳೆ ಹೋಗಿಲ್ಲ ಸುಮ್ನೆ ಬಿದ್ದಿರು"

ಸರಸ್ವತಜ್ಜಿ ಮಗಳನ್ನು ಗದರಿದರು.ಭೂದೇವಮ್ಮ ಬ್ಯಾಗ್ ಎತ್ತಿಟ್ಟು, ಉಳಿದ ಚಿಕನ್ ಸಾಂಬಾರ್ಗೆ ಚಪಾತಿ ಮಾಡಲು ತಿಮ್ಮಕ್ಕನಿಗೆ ಸಹಾಯ ಮಾಡಲು ಅಡಿಗೆ ಮನೆಯ ಕಡೆ ಬೇಸರದಿಂದ ನಡೆದರು ಆದರೆ ಸತೀಶನಿಗೆ ಇನ್ನೂ ಒಂದು ದಿನ ಅಮ್ಮ ನನ್ನ ಜೊತೆಗಿರುವಳು ಎಂದು ಸಂತಸದಿಂದ ಕುಣಿದನು.


"ಮಾವ ಅಜ್ಜಿ   ನಾಳೆ ಗಾವು ಸಿಗ್ಯಾದು ಅಂದರಲ್ಲ  ಅಂಗಂದರೇನು? ಎಂದು ಮುಕುಂದಯ್ಯ ನನ್ನು ಕೇಳಿದ ಸತೀಶ.



 "ಪೋತರಾಜರನ್ನು ಮಾರಿಯ ಸೇವೆ ಮಾಡುವ ಆರಾಧಕರೆಂದು ಕರೆಯಲಾಗುತ್ತದೆ. ‘ಪೋತ’ ಎಂದರೆ ‘ಹೋತ’(ಗಂಡು ಮೇಕೆ) ಎಂಬ ಅರ್ಥವಿದೆ. ‘ಪ’ಕಾರ ‘ಹ’ ಕಾರಗಳಿಗಾಗಿ ಬದಲಾದರೂ ‘ಪೋತ’ದ ವೇಷವನ್ನು ಯಾಕೆ ಧರಿಸುತ್ತಾರೆ ಎಂಬುದರ ಒಂದು ಸ್ವಾರಸ್ಯಕರ ಕತೆಯೇ ಇದೆ.


" ಆ ಕಥೆ ಹೇಳು ಮಾವ "


"ಬ್ರಾಹ್ಮಣಳಾದ ಮಾರಮ್ಮನನ್ನು ದಲಿತನೊಬ್ಬ ವಂಚಿಸಿ ಮದುವೆಯಾಗಿರುತ್ತಾನೆ. ‘ಕೋಣ’ದ ರೂಪದಲ್ಲಿ ಮಕ್ಕಳನ್ನು ದೃಷ್ಟಿಮರಿ, ಹೊಳೆಮರಿಗಳ ರೂಪದಲ್ಲಿ ಮಕ್ಕಳ ಬಲಿ ಪಡೆವೆ ಎಂದು ಶಪಥ ಮಾಡಿದ್ದಳು ಮಾರಮ್ಮ. ಅದರಂತೆ ಮೊನ್ನೆ ಗುರುವಾರ ಅಮ್ಮ ಜಲದಿ ಹೊಳೆಯಿಂದ ಬರುವಾಗ    ‘ಹೊಳೆ ಮರಿ’ಯೆಂದು, ಹಿಂತಿರುಗಿ ಬರುವಾಗ ಜನಗಳ ಕಣ್ಣ ದೃಷ್ಟಿ ಪರಿಹಾರಕ್ಕೊಂದು ‘ದೃಷ್ಟಿ ಮರಿ’ಯನ್ನು  ಕಡಿದಿದ್ದು ನೀನು ನೋಡಿದೆಯಲ್ಲ."

"ಹೌದು ಮಾವ ನೋಡಿದೆ ಆ ಮರಿ 

 ಕಳ್ಳು ಪಚ್ಚಿ ಹೊರಕ್ಕೆ ಬಂತು"

"ಜಾತ್ರೆಯ ಕೊನೆ ದಿನ ಮಾರಮ್ಮ 

ಗುಡಿದುಂಬುವ ಮುಂಚೆ ಆಕೆಯ ಕೋಪದ ಶಮನಕ್ಕಾಗಿ ‘ಗಾವು ಮರಿ’ ಯನ್ನು ಈ ಪೋತರಾಜರು ಅದರ ಗಂಟಲಿಗೇ ಬಾಯಿಹಾಕಿ ಕಚ್ಚಿ ಕೊಲ್ಲುವರು."


"ಅಲೆಮಾರಿ ಪಶುಪಾಲಕರ ದೇವತೆ ಹನ್ನೆರಡು ಪೆಟ್ಟಿಗೆ ದೇವರುಗಳಲ್ಲೊಂದಾದ ‘ದಡ್ಲಮಾರಮ್ಮ’ ದನಗಳ ದೊಡ್ಡಿಯಲ್ಲಿ, ಅದೂ ದೇವರ ಎತ್ತುಗಳ ಕಾಲ ಗೊರಸಿನಲ್ಲಿ ಹುಟ್ಟಿದವಳು. ಪಶುಪಾಲಕ ಮಾರಮ್ಮನವರ ಸಂಬಂಧಗಳನ್ನು ಇದು ಸ್ಪಷ್ಟವಾಗಿ ಹೇಳುತ್ತದೆ. ಅಂದರೆ ಮಾರಮ್ಮಗೆ ಪಶುಪಾಲಕರು ತವರು ಮನೆಯವರು ಇದ್ದ ಹಾಗೆ  ಇಂಥ ಮಾರಮ್ಮ ತನ್ನ ಗಂಡನಿಂದ ಅನ್ಯಾಯವಾಯಿತೆಂದು ಉರಿದೆದ್ದಾಗ ಅವಳ ಸಹಾಯಕ್ಕೆ ನಿಂತವರು ತವರು ಸಂಬಂಧದ ಈ ಮ್ಯಾಸಬೇಡರು  ಹೀಗಾಗಿ ಬೇಡರಲ್ಲಿ ಮಾರಮ್ಮನಿಗೆ ಬೆಂಗಾವಲ ಪಡೆಯಂತೆ ರೂಪುಗೊಂಡವರೆ ಪೋತರಾಜರು."


"ಉಂ ಅನ್ನು ಇಲ್ಲ ಅಂದರೆ ನಾನು ಕಥೆ ಹೇಳಲ್ಲ "

ಅಂದರು ಮುಕುಂದಯ್ಯ.


"ಆತು  ಊಂಗುಟ್ಟುತ್ತಿನಿ ಹೇಳು ಮಾವ"


"ಮಾರಮ್ಮನ ಜಾತ್ರೆ ಸಂದರ್ಭದಲ್ಲಿ ಇವರ ಪ್ರಧಾನವಾದ ಕೆಲಸವೆಂದರೆ ‘ಗಾವು ಸಿಗಿಯುವುದು’. ಈ ಸಂದರ್ಭದಲ್ಲಿ ಹೋತದ ರೀತಿಯಲ್ಲಿ ಮುಖವನ್ನು ಅಲಂಕರಿಸಿಕೊಂಡು, ಹೋತವನ್ನೇ ಸಿಗಿಯುವುದು? ‘ಗಾವುಮರಿ’ ಕಡು ಕಪ್ಪು ಅಥವಾ ಬಿಳಿಯ ಬಣ್ಣದ ‘ಹೋತ ಮರಿ’ (ಗಂಡು ಆಡುಮರಿ). ಇದರ ಗಂಟಲನ್ನು ಹಲ್ಲುಗಳಿಂದಲೇ ಕಚ್ಚಿ– ಕಚ್ಚಿ ಅದರ ರಕ್ತ ,ಮಾಂಸಗಳನ್ನು ಕುಡಿದು  ತಿನ್ನುವ ಭೀಕರವಾದ ಆಚರಣೆಯೇ  ‘ಗಾವು ಸಿಗಿಯುವುದು’."


"ಈ ಸಂದರ್ಭದಲ್ಲಿ ಹೋತದ ರೀತಿಯಲ್ಲಿ ಮುಖವನ್ನು ಅಲಂಕರಿಸಿಕೊಂಡು, ಹೋತವನ್ನೇ ಸಿಗಿಯುವುದರಿಂದ ಇವರಿಗೆ ಪೋತರಾಜರು ಎಂಬ ಹೆಸರು ಬಂದಿದೆ .ಹಿಂದಿನ ಕಾಲದಲ್ಲಿ ಆನೆ, ಒಂಟೆ, ಕೋಣ, ಹಂದಿಗಳನ್ನು ‘ಗಾವು ಮರಿ’ಯಾಗಿ ಬಳಸುತ್ತಿದ್ದರಂತೆ. ಮಾರಮ್ಮನ ಜಾತ್ರೆಯ ಉಳಿದ ‘ಬಲಿ’ ಪ್ರಕ್ರಿಯೆಗಳನ್ನು ಪೂರೈಸುವವರು ಮ್ಯಾಸಬೇಡ ಮೂಲದ ತಳವಾರ ನಾಯಕರು.  ಹೀಗೆ ಮಾಡಿದರೆ  ಕೃಷಿ ಮತ್ತು, ಪಶುಸಂಪತ್ತು  ಅಭಿವೃದ್ಧಿಯಾಗುವುದು ಎಂಬ ನಂಬಿಕೆ."



"ಬಲಿಯ ನಂತರ ಚೆಲ್ಲುವ ‘ಸರಗ’(ಚರಗ)ದ ರಕ್ತಬೆರೆತ ಅನ್ನ ಕೃಷಿಮಾತೆ ಭೂತಾಯಿಯ ತಣ್ಣಗೆ ಮಾಡುತ್ತಂತೆ."


"ಗಾವುಗಳಲ್ಲಿ ಎರಡು ಬಗೆ;

ಮೊದಲನೆಯದು ನೆಲಗಾವು,

ನೆಲಗಾವು ಅಂದರೆ ಗಾವು ಮರಿಯನ್ನು ನೆಲದ ಮೇಲೆ ಅಂಗಾತ ಮಲಗಿಸಿ ಚೂರಿಯಿಂದ ಕತ್ತು ಕೊಯ್ಯುವುದು. ಈ ಬಗೆಯ ಬಲಿ ಅಪರೂಪ. 

ಎರಡನೆಯದು ಎದ್ದಗಾವು

ಎದ್ದಗಾವು ಅಂದರೆ ನಿಂತುಕೊಂಡೇ ತನ್ನ ಹಲ್ಲುಗಳಿಂದ ಗಾವು ಮರಿಯ ಗಂಟಲು ಸಿಗಿಯಬೇಕು. ಇದನ್ನು ‘ನಿಂತ ಗಾವು’ಎಂದೂ ಕರೆಯುತ್ತಾರೆ. ನಾಳೆ ನಮ್ಮ ಊರಲ್ಲಿ ಮಾಡುವ ಗಾವು ಇದೇ ತರದ್ದು."


"ಪೋತರಾಜರು ‘ಒಂದೊತ್ತು’ ಇದ್ದು, ಸಂಜೆ ಮ್ಯಾಗಳ ಮನೆ ರಂಗಸ್ವಾಮಿಯವರ ಬಾವಿಗೆ   ಹೋಗಿ ಗಂಗಾಪೂಜೆ ಮಾಡಿ, ಅಲ್ಲಿಯೇ ಪೋತರಾಜರ ವೇಷ ಧರಿಸಿಕೊಳ್ಳುತ್ತಾರೆ. ಒಂಭತ್ತು ಸಂಖ್ಯೆಯಲ್ಲಿರುವ ರುದ್ರಾಕ್ಷಿ ಸರ ಕೊರಳನ್ನು ಅಲಂಕರಿಸಿರುತ್ತದೆ. ಬರೀ ಮೈಯಲ್ಲಿರುವ ಇವರು   ಮೊಣಕಾಲಿನವರೆಗೂ ಕಚ್ಚೆ ಪಂಚೆ   ಧರಿಸಿರುತ್ತಾರೆ. ಅದನ್ನು ‘ಸೆಳ್ಳ’ ಎಂದು ಕರೆಯುತ್ತಾರೆ. ತಲೆಗೆ ಬಿಳಿಯ ಪೇಟ ಕಟ್ಟಿರುತ್ತಾರೆ. ಕೈಯಲ್ಲಿ ಐದಾರು ಅಡಿ ಉದ್ದದ ಚಾಟಿ ಹಿಡಿದಿರುತ್ತಾರೆ. ಆಗಾಗ್ಗೆ ಅದನ್ನು ‘ಛಟೀರ್’ 'ಛಟೀರ್' ... ಎಂದು ಸೆಳೆಯುತ್ತಾ ಶಬ್ದ ಮಾಡುತ್ತಿರುತ್ತಾರೆ.  ಕಾಲಿಗೆ ಸೆಲಿಗೆ ಧರಿಸಿ, ಸೊಂಟಕ್ಕೆ ಗಂಟೆಯ ಸರದ ಚರ್ಮಪಟ್ಟಿಯನ್ನು ಕಟ್ಟಿ, ಮೈತುಂಬಾ ಅರಿಶಿನವನ್ನು ಹಚ್ಚಿಕೊಂಡು, ಮುಖಕ್ಕೆ ಮಾತ್ರ ಹೋತನ ಆಕಾರ ಕಾಣುವ ರೀತಿಯಲ್ಲಿ ಅರಿಶಿನ ಕುಂಕುಮವನ್ನು ಬಳಿದುಕೊಳ್ಳುತ್ತಾರೆ. ‘ಗಿರಿಜಾ ಮೀಸೆ’ ತಿರುವುತ್ತಿದ್ದರೆ ಪೋತರಾಜನ ಕಳೆ ವಿಜೃಂಭಿಸುತ್ತದೆ.ಸಣ್ಣವರಿದ್ದಾಗ ನಾವು ಅವರನ್ನು ನೋಡಿ ಮನೆಯಲ್ಲಿ ಬಚ್ಚಿಟ್ಟುಕೊಂಡು ಅವರು ಹೋದ ನಂತರ ಹೊರಗೆ ಬರುತ್ತಿದ್ದೆವು."



"ಉರುಮೆ ವಾದ್ಯದವರೊಂದಿಗೆ ಅಲ್ಲಿಂದಲೇ ಕುಣಿಯುತ್ತಾ, ಕೇಕೆ ಹಾಕುತ್ತಾ, ವೀರನಾಟ್ಯ ಮಾಡುತ್ತಾ, ಎರಡೂ ಕೈಯಲ್ಲಿರುವ ಚಾಟಿಗಳನ್ನು ಝಳಪಿಸುತ್ತಾ, ಮತ್ತೇರಿದಂತೆ ಆರ್ಭಟಿಸುತ್ತಾ ಮಾರಿಗುಡಿಯ ಮುಂಭಾಗಕ್ಕೆ ಬಂದು ‘ಗಾವು ಸಭೆ’ ನಡೆಸುತ್ತಾರೆ.  ಮೊದಲು  ಹತ್ತರಿಂದ ಇಪ್ಪತ್ತು ಸಂಖ್ಯೆಯಲ್ಲಿ  ಪೋತರಾಜರು ಬಂದು ಗಾವು ಸಿಗಿಯುತ್ತಿದ್ದರು. ಈಗ ಮೂರ್ನಾಕು ಜನ ಬರುತ್ತಾರೆ. ಊರಾಡಿ


ಮಾರಮ್ಮನ ಗುಡಿ ತಲುಪಲು ರಾತ್ರಿ ಏಳೆಂಟು ಗಂಟೆ ಆಗುತ್ತದೆ. ಗುಡಿಯ ಮುಂದೆ ಪೋತರಾಜ’ಕುಳಿತು, ಗಾವು ಸಿಗಿಯಲು ನೆರೆದ ಜನಗಳ ಅಪ್ಪಣೆ ಕೇಳುತ್ತಾನೆ. ಇವನ ಹಿಂದಿರುವ ಇತರೆ ಪೋತರಾಜ ಪಡೆ ಬೇಗ ಅನುಮತಿ ಕೊಡುವಂತೆ ಬೊಬ್ಬೆ ಹಾಕತೊಡಗುತ್ತದೆ."

"ಜನ ಒಪ್ಪಿಗೆ ಕೊಟ್ಟ ನಂತರ ಮಾರಮ್ಮನ ಗುಡಿಯ ಮುಂದೆ ‘ಗಾವಿನ ಗುಂಡಿ’ ತೆಗೆಸಿ, ಅದಕ್ಕೆ ಶಾಸ್ತ್ರೋಕ್ತವಾದ ರೀತಿಯಲ್ಲಿ ಪೂಜೆ ಮಾಡುತ್ತಾರೆ. ಮರಿ ಹೋತವನ್ನು ಗಾವಿನ ಗುಂಡಿಯ ಬಳಿ ತಂದು ಮಂತ್ರ ಹಾಕುತ್ತಾರೆ. ಅದು ಸತ್ತ ಹಾಗೆ ನಿಸ್ತೇಜವಾಗುತ್ತಿದ್ದಂತೆ, ಜನರ ಸಿಳ್ಳು– ಕೇಕೆ ಮುಗಿಲು ಮುಟ್ಟುತ್ತದೆ. ಪೋತರಾಜ ಗಾವಿನ ಮರಿಯನ್ನು ಎದೆಗೆ ಅವುಚಿಕೊಂಡು ಗಾವು ಸಿಗಿಯಲು ಸಿದ್ಧನಾಗುತ್ತಾನೆ. ಇನ್ನುಳಿದ ಸಹಾಯಕ ಪೋತರಾಜರು ವೀರನಾಟ್ಯ ಮಾಡುತ್ತಾ ಅಬ್ಬರಿಸುತ್ತಿರುವಂತೆ, ಗಾವು ಸಿಗಿದು ಅದರ ರಕ್ತ– ಮಾಂಸಗಳನ್ನು ಗಾವಿನ ಗುಂಡಿಗೆ ಉಗಿಯುತ್ತಾನೆ. ರಕ್ತಸಿಕ್ತವಾದ ಪೋತರಾಜನ ಮುಖ ಭಯಾನಕವಾಗಿರುತ್ತದೆ."


"ಕೊನೆಗೆ ಸತ್ತ ಗಾವಿನ ಮರಿಯ ತಲೆ ಕತ್ತರಿಸಿ ಗಾವಿನ ಗುಂಡಿಗೆ ಹಾಕುತ್ತಾರೆ. ಗಾವು ಮರಿಯ ದೇಹವನ್ನು ಉರುಮೆ ಬಡಿಯುವವರಿಗೆ ಪೋತರಾಜರೇ ಕೊಟ್ಟು ಬಿಡುತ್ತಾರೆ. ತಮ್ಮ ಮೈಗೆ ಮೆತ್ತಿಕೊಂಡ ಅರಶಿನ– ಕುಂಕುಮ ತೊಳೆದ ನೀರನ್ನು ಗಾವಿನ ಗುಂಡಿಗೆ ಹರಿಸಿ ಗುಂಡಿ ಮುಚ್ಚಿ ಅನ್ನ– ಮೊಸರಿನ ಎಡೆ ಹಾಕಿ ಶಾಂತಿ ಮಾಡುತ್ತಾರೆ. ನಂತರ ‌ದುಡ್ಡು‌ ದವಸ ಪಡೆದು ಹೊರಡುತ್ತಾರೆ."

ಮಾವನ ಕಥೆ ಕೇಳುತ್ತ ಸತೀಶ ನಿದ್ದೆಗೆ ಜಾರಿದ್ದ.



ರಾತ್ರಿಯೆಲ್ಲಾ‌ ಮಾವ ಹೇಳಿದ ಪೋತರಾಜರ ಕಥೆ ಕೇಳಿ ಮಲಗಿದ ಸತೀಶನಿಗೆ ಪೋತರಾಜರು ಚಾಟಿಯಿಂದ ಛಟೀರ್ ಎಂದು ಬಾರಿಸಿದಂತಾಯಿತು ಅಮ್ಮಾ  ...... ಎಂದು ಕಿರುಚಿಕೊಂಡು ಎದ್ದ .ಭೂದೇವಮ್ಮ ನೀರು ಕುಡಿಸಿ ಸಮಾಧಾನ ಮಾಡಿ ಮಲಗಿಸಿದರು


***************************

ಮರು ದಿನ ಮಾವ ಹೇಳಿದಂತೆ ಪೋತರಾಜರ ವೇಷಭೂಷಣ ನೋಡಿ ಸತೀಶನಿಗೂ ಮೊದಲು ಭಯವಾಯಿತು.

ದೇವಸ್ಥಾನದ ಮುಂದೆ ಜನಜಂಗುಳಿ ಸೇರಿತ್ತು ಗಂಡು ಹೆಣ್ಣು ಎಂಬ ಭೇದವಿರದೆ ಜನರು ಗಾವು ಸಿಗಿಯುವುದನ್ನು ನೋಡಲು ಮುಗಿಬೀಳುತ್ತಿದ್ದರು .


ಬಿಳಿಯಪ್ಪನ ನೋಡಿದ ಶೀಲಾ ಹತ್ತಿರ ಬಂದು ಮೈ ತಾಗಿಸಿ ನಿಂತಳು. ಬಿಳಿಯಪ್ಪನಿಗೆ  ಅವಳ  ಮೆದುವಾದ ಸ್ಪರ್ಶದಿಂದ ಮೈ ಬಿಸಿಯಾಗಿ ಹೊಂಗೆ ಮರದ ಘಟನೆ  ನೆನಪು ಮಾಡಿತ್ತು .ಒಮ್ಮೆಲೆ ಅವರ ಮನೆಗೆ ಗಂಡಿನ ಕಡೆಯವರು ಜಾತ್ರೆಗೆ ಬಂದಿರುವ ಸುದ್ದಿಯ ನೆನೆದು ,ಹಾಗಾದರೆ ಶೀಲಾ ನನಗೆ ಸಿಗುವುದಿಲ್ಲವೆ? ಏಕೆ ಸಿಗುವುದಿಲ್ಲ ನಾಳೆಯೇ ಅವರ ಅಪ್ಪನ ಬಳಿ ಹೋಗಿ ಹೆಣ್ಣು ಕೇಳುವೆ, ಎಂದು ಒಮ್ಮೆ ಯೋಚಿಸುತ್ತಾ, ಬೇಡ ನಮ್ಮ ಅಮ್ಮನ ಮೂಲಕ ಕೇಳಿಸೋಣ, ಅಮ್ಮ ದಿನವೂ ಅವರ ಮನೆಗೆ ಚೌಕಾಬಾರ ಆಡಲು ಹೋಗತ್ತಾಳಲ್ಲ ಅಮ್ಮ ಹೇಳಿದರೆ ಅವರಪ್ಪ  ನಮ್ಮ ಮದುವೆಗೆ ಒಪ್ಪೇ  ಒಪ್ಪುತ್ತಾನೆ . ಒಪ್ಪದಿದ್ದರೆ ? ಮತ್ತೆ ಪ್ರಶ್ನೆಗಳ ಹುತ್ತ ಬೆಳೆಯುತ್ತಿತ್ತು. "ಏ ಬಿಳಿಯ ಬಾರಲೆ ಗಾವು ಮುಗಿತು ಈ ವರ್ಸದ ಜಾತ್ರೆನೂ  ಮುಗಿತು " ಎಂದು ಬ್ರಮ್ಮಿ ಕೂಗಿದಾಗ ಬಿಳಿಯಪ್ಪ ಗುಡಿಯ ಮುಂದೆ ಒಬ್ಬನೆ ನಿಂತಿದ್ದ .ವಾಸ್ತವಕ್ಕೆ ಬಂದ ಬಿಳಿಯಪ್ಪನಲ್ಲಿ ಹಲವಾರು ಪ್ರಶ್ನೆಗಳು ಎದ್ದವು.  ಜನ ಎಲ್ಲಾ   ಯಾವಾಗ ಅವರ ಮನೆಗೆ ಹೋದರು.? ಶೀಲಾ ಯಾವಾಗ ಹೋದಳು ? ಇಂದಿಗೆ ಮಾರಮ್ಮನ ಜಾತ್ರೆ ಮುಗಿಯಿತು.ಅದೇ ರೀತಿ ನನ್ನ ಬಾಳಲ್ಲಿ ಶೀಲಾಳ ಸಂಬಂಧ ಮುಗಿಯುವುದೇ ? ಇಲ್ಲಾ ನಮ್ಮಿಬ್ಬರ ವೈವಾಹಿಕ ಜೀವನದ ಮೊದಲ ಪುಟ ಆರಂಭವಾಗುವುದೆ? ಬರೀ ಪ್ರಶ್ನೆಗಳು ಬಿಳಿಯಪ್ಪನ ಬಾಳಲ್ಲಿ ಉತ್ತರ ಸಿಗುವುದು ಯಾವಾಗ?




ಮುಂದುವರೆಯುವುದು.....



ಸಿ ಜಿ ವೆಂಕಟೇಶ್ವರ


14 ಜನವರಿ 2022

ವೈಫಲ್ಯವೂ ಬೇಕು

 




ವೈಫಲ್ಯಗಳಿಲ್ಲದೇ ಸಾಫಲ್ಯ ಕಾಣುವುದು ಬಹುಶಃ ಕನಸಿನಲ್ಲಿ ಅಥವಾ ಮೂರ್ಖರ ನಿಘಂಟಿನಲ್ಲಿ ಮಾತ್ರ. ವೈಫಲ್ಯಗಳು ನಮ್ಮ ಸಾಮರ್ಥ್ಯಕ್ಕೆ ಸವಾಲೊಡ್ಡುತ್ತವೆ .ಆ ಸವಾಲುಗಳನ್ನು  ಧೈರ್ಯದಿಂದ ಸ್ವೀಕರಿಸಿ ಮುನ್ನುಗ್ಗಲು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪರೋಕ್ಷವಾಗಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತವೆ ಎಂದರೆ ತಪ್ಪಾಗಲಾರದು. 


ಇನ್ನೂ ಕೆಲವೊಮ್ಮೆ ಈ ವೈಫಲ್ಯಗಳು ಮಾನವ ಸಹಜವಾದ   ನಮ್ಮ ಅಹಂ ಮೇಲೆ ಪೆಟ್ಟು ನೀಡಿ ತಲೆಯ ಮೇಲೆ ಒಂದು ಮೊಟಕಿ ನಮ್ಮ ವ್ಯಕ್ತಿತ್ವ ಉತ್ತಮ ಪಡಿಸಲೂ ಸಹಾಯಕವಾಗುತ್ತವೆ .


ಒಟ್ಟಿನಲ್ಲಿ ಸಾಫಲ್ಯದ ಸೌಧಕ್ಕೆ  ವೈಫಲ್ಯಗಳೆಂಬ ಇಟ್ಟಿಗೆಗಳೆ ಬುನಾದಿ ಕಲ್ಲುಗಳು . ನಮಗೆ ಪಾಠ ಕಲಿಸುವ ಅಂತಹ ವೈಫಲ್ಯಗಳಿಗೆ ಧನ್ಯವಾದಗಳ ಹೇಳುತ್ತಾ ಸಾಗಬೇಕಿರುವುದು ಅಪೇಕ್ಷಣೀಯ.    ನಮ್ಮ ವೈಫಲ್ಯಗಳಿಗೆ ಕುಂದದೇ ಸಾಫಲ್ಯದೆಡೆಗೆ ಹೆಜ್ಜೆ ಹಾಕೋಣ ನಮ್ಮ ಬದುಕನ್ನು ಹಸನು ಮಾಡಿಕೊಳ್ಳೋಣ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

10 ಜನವರಿ 2022

ದೇಶ,ಭಾಷೆ ವೇಷ. ಹನಿಗಳು


 

ಸಿಹಿಜೀವಿಯ ಹನಿಗಳು


ದೇಶ 

ಜಗದಿ ಸರ್ವರಿಗೂ ಹೆಸರಿಗೆ 
ಇದೆ ಒಂದೊಂದು ದೇಶ|
ವಸು ದೈವ ಕುಟುಂಬ ಎಂದು
ಬಿಟ್ಟು ಬಿಡೋಣ ದ್ವೇಷ||


ಭಾಷೆ 

ನನ್ನ ಹೆತ್ತಮ್ಮ ಕಲಿಸಿದಳು 
ಅದು ತಾಯಿ ಭಾಷೆ|
ಅದನ್ನು ಉಳಿಸಿ ಬೆಳೆಸಲು
ಕನ್ನಡಮ್ಮನಿಗೆ ಕೊಡುವೆ ಭಾಷೆ||


ವೇಷ

ಉದರ ನಿಮಿತ್ತವಾಗಿ 
ಹಾಕುವೆವು ದಿನಕ್ಕೊಂದು ವೇಷ|
ವೇಷಗಳು ಮಿತಿಮೀರಿದರೆ 
ತಪ್ಪದು ವಿನಾಶ ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು