07 ಜನವರಿ 2022

ಮಾಲು .ಹನಿಗವನ


 ವಿದೇಶಿ ಮಾಲುಗಳ ಕೊಳ್ಳಲು

ಕ್ರೆಡಿಟ್ ಕಾರ್ಡ್‌ಗಳನ್ನು ಉಜ್ಜುತ್ತಾ

ಆಗಾಗ್ಗೆ ಭೇಟಿ ನೀಡುತ್ತಿದ್ದ ಅವನು

ಆ ಮಾಲು ಈ ಮಾಲು|

ದುಬಾರಿ ಬೆಲೆಯ ಮಾಲುಗಳ

ಕೊಂಡ ಪರಿಣಾಮವಾಗಿ ಈ 

ಕೈ ಬರಿದಾಗಿ ದೇಶಿಯತೆಗೆ ಮಾರುಹೋಗಿ ಕುಳಿತಿದ್ದಾನೆ 

ತಲೆಯಮೇಲೆ ಹಾಕಿಕೊಂಡು ಟವಾಲು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಗುಂಡಿಗೆ .ಹನಿಗವನ


 



ಗುಂಡಿಗೆ .ಹನಿ


ಆಸ್ಪತ್ರೆಯವನು  ಭಕ್ತಿಯಿಂದ 

ಪೂಜೆ ಮಾಡಿದ ರಸ್ತೆ ಗುಂಡಿಗೆ|

ಗುಂಡಿಯಲ್ಲಿ ಬಿದ್ದು ನರಳಾಡಿ ಆಸ್ಪತ್ರೆ ಸೇರಿ

ಡಿಸ್ಚಾರ್ಜ್ ಆಗುವಾಗ ನೋಡಿ ಬಿಲ್ 

ನಿಂತು ಹೋಯಿತು ಅವನ  ಗುಂಡಿಗೆ||



ಸಿಹಿಜೀವಿ

ನೆನಪಾದ ದಾಸಜ್ಜ .ಆತ್ಮಕಥೆ ೨೧


 



ನೆನಪಾದ ದಾಸಜ್ಜ .ಆತ್ಮಕಥೆ ೨೧


ನಾನು ಚಿಕ್ಕವನಿದ್ದಾಗ ನಮ್ಮ ತಂದೆಯವರ ತಂದೆ ಅಂದರೆ ನಮ್ಮ ತಾತ ದಾಸಜ್ಜ ಆ

ಅದಾಗಲೇ ತೊಂಭತ್ತಕ್ಕೂ ಹೆಚ್ಚು ವಯಸ್ಸಾಗಿ ಬೆನ್ನು ಬಾಗಿ ಮುಖ ಸುಕ್ಕುಗಟ್ಟಿ ಕೈಗೊಂದು ಕೋಲು ಬಂದಿತ್ತು.ಆದರೂ ಅವರ ಕೆಲಸವನ್ನು ಅವರೇ  ಮಾಡಿಕೊಳ್ಳುತ್ತಿದ್ದರು . ಅವರ ಶಿಸ್ತುಬದ್ದ ಜೀವನ ನನಗೆ ಇಂದಿಗೂ ಆದರ್ಶ ಬೆಳಗಿನ ಅವಧಿಯಲ್ಲಿ ನಿತ್ಯಕರ್ಮ ಮುಗಿಸಿ  ದೇವರ ಪೂಜೆ ಮಾಡಿ ಮನೆಯಿಂದ ಹೊರಬಂದು ಸೂರ್ಯನ ಕಡೆ ಮುಖಮಾಡಿ ಐದಾರು ನಿಮಿಷಗಳ ಕಾಲ ಸೂರ್ಯನಿಗೆ ನಮಸ್ಕಾರ ಮಾಡುತ್ತಿದ್ದರು.

ಒಮ್ಮೆ ಅವರ ಎಡ ಕಾಲಿನ ಮೀನ ಖಂಡದಲ್ಲಿ ಬಿಳಿಯ ಹುಳುಗಳು ಕೀವಾದ  ಗಾಯದಿಂದ  ಹೊರಬರುವುದನ್ನು ಕಂಡು ನಾನು ಇದೆಂತಹ ಭಯಾನಕ ಕಾಯಿಲೆ ಎಂದು ನನಗೆ ಭಯದೊಂದಿಗೆ  ಬೇಸರವಾಯಿತು.ಆದರೆ ನಮ್ಮ ತಾತ ಏನೂ ಆಗಿಲ್ಲ ಎಂಬಂತೆ ತಂಗಟೆ ಗಿಡದ ಹೂವಿನ ಔಷದಿ ಮಾಡಿಕೊಂಡು ಅವರೇ ಕಟ್ಟಿಕೊಂಡು ಮಾಮೂಲಿಯಾಗಿ ಕೆಲಸ ಮಾಡುತ್ತಿದ್ದರು. 

ಅದಾಗಿ ನಾಲ್ಕು ವರ್ಷದ ನಂತರ ದಾಸಜ್ಜ ಭಗವಂತನಲ್ಲಿ ಲೀನವಾದರು .

ವಾರದ ಹಿಂದೆ ನನ್ನ ಎಡಗಾಲಿನ ಮೀನ ಖಂಡದ ಬಳಿ ಒಂದು ರಕ್ತದ ಗುಳ್ಳೆಯಾಗಿ ಬಹುವಾಗಿ ನೋವು ಕಾಡಿತು .ಯಾವ್ಯಾವುದೋ ಮುಲಾಮು, ಮಾತ್ರೆ ತೆಗೆದುಕೊಂಡರೂ ಅಸದಳ ನೋವು ನನ್ನ ಕಾಡಿತು ಆಗ ಯಾಕೋ ದಾಸಜ್ಜ ನೆನಪಾದರು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ 

ಮಾಲ್ ಮಾಲ್ ಮಾಲ್ ... ಎಲ್ನೋಡಿ ಮಾಲ್....


 


ಮಾಲ್ ಮಾಲ್ ಮಾಲ್ 


ಮಾಲ್ ಗಳು ಮತ್ತು ಸೂಪರ್ ಮಾರ್ಕೆಟ್ ಗಳು ಮೊದಲು ಕೇವಲ ಮೆಟ್ರೋಪಾಲಿಟನ್ ನಗರಗಳಲ್ಲಿ ಕೇಂದ್ರೀಕೃತವಾಗಿದ್ದವು ಇಂದು ಕ್ರಮೇಣವಾಗಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿಯೂ ಮಾಲ್ ಗಳು ತಲೆ ಎತ್ತಿವೆ .

ಇದು ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದ ಮೇಲೆ ಪರಿಣಾಮಗಳನ್ನು ಬೀರಿರುವುದು ಸುಳ್ಳಲ್ಲ.


ಮಾಲ್ ಗಳ ಅನುಕೂಲಗಳು


೧ ಎಲ್ಲಾ ರೀತಿಯ ಗೃಹಬಳಕೆಯ ವಸ್ತುಗಳು ಒಂದೆಡೆ ಸಿಗುವುದು ಗ್ರಾಹಕರ ಸಮಯದಲ್ಲಿ ಉಳಿತಾಯವಾಗುತ್ತದೆ.

೨ ಸ್ಪರ್ಧಾತ್ಮಕ ಮತ್ತು ಹೋಲ್ಸೇಲ್ ದರಗಳಲ್ಲಿ ವಸ್ತುಗಳು ಲಭ್ಯತೆ ಗ್ರಾಹಕರಿಗೆ  ಆರ್ಥಿಕವಾಗಿ ಲಾಭವಾಗುತ್ತದೆ.

೩ ಕೆಲವು ಮಾಲ್ ಗಳಲ್ಲಿ ಸಿನಿಮಾ, ಆಟಗಳು ಮಕ್ಕಳ ಆಟಿಕೆಗಳು ಲಭ್ಯವಿರುವ ಕಾರಣದಿಂದ ‌ಮನರಂಜನೆಗೆ ಹೇಳಿ ಮಾಡಿಸಿದ ಜಾಗವಾಗಿದೆ.

೪ ಪ್ರಪಂಚದ ಎಲ್ಲಾ ಬ್ರಾಂಡ್ ಗಳ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸಿಗಲಿವೆ .



ಮಾಲ್ ಗಳಿಂದಾಗುವ ದುಷ್ಪರಿಣಾಮಗಳು.


೧ ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿಗಳ ಸೃಷ್ಟಿಸಲು ದಾರಿ ಮಾಡುತ್ತವೆ.

೨  ಬೇಡದಿದ್ದರೂ  ವಿವಿಧ ಬ್ರಾಂಡ್ ನ ವಸ್ತುಗಳನ್ನು  ನೋಡುತ್ತಾ ಅನವಶ್ಯಕವಾಗಿ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ.

೩ ಸಣ್ಣ ಪುಟ್ಟ ಕಿರಾಣಿ ಅಂಗಡಿಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ .ಮತ್ತು ನಷ್ಟ ಅನುಭವಿಸುತ್ತವೆ.

೪ ಬೇಡಿಕೆಯ ಕೊರತೆಯ ಕಾರಣದಿಂದಾಗಿ ಇಂತಹ ಅಂಗಡಿಗಳು ಕ್ರಮೇಣವಾಗಿ ಮುಚ್ಚಲ್ಪಟ್ಟು ನಿರುದ್ಯೋಗಕ್ಕೆ ನಾಂದಿಯಾಗಬಹುದು.

೫ ವಿದೇಶಿ ಮಾಲ್ ಗಳ ಹಾವಳಿಯಿಂದ ನಮ್ಮ ದೇಶದ ಸಂಪತ್ತು ಕ್ರಮೇಣವಾಗಿ ಬೇರೆ ದೇಶಗಳಿಗೆ ಹರಿದು ಇದು ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರಬಹುದು. ಉದಾಹರಣೆಗೆ ಬೆಂಗಳೂರಿನಲ್ಲಿ ಇತ್ತೀಚಿಗೆ ತಲೆಎತ್ತಿರುವ ಲುಲು ಮಾಲ್.


ಎಲ್ಲಾ ವಿಷಯಗಳಂತೆ ಮಾಲ್ ಗಳು ಸಹ ಅನುಕೂಲಗಳು ಮತ್ತು ಅನುಕೂಲಗಳನ್ನು ಹೊಂದಿವೆ .ಮಾಲ್ ಗಳು ಆಧುನಿಕತೆಯ ಪ್ರತಿಬಿಂಬ ಮತ್ತು ಅಭಿವೃದ್ಧಿಯ ಸೂಚಕಗಳೂ ಹೌದು ಹಾಗಾಗಿ ಮಾಲ್ ಗಳನ್ನು ಸಾರಾಸಗಟಾಗಿ ತಿರಸ್ಕಾರ ಮಾಡಲು ಇದು ಶಿಲಾಯುಗವಲ್ಲ. ಆದರೆ ಸರ್ಕಾರಗಳು ಕಾಲಕಾಲಕ್ಕೆ ಇಂತಹ ಮಾಲ್ ಗಳ ಮೇಲೆ ನಿಗಾ ಇಟ್ಟು ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು.ಗ್ರಾಹಕರು ಸಹ ಅಗತ್ಯವಾದ ವಸ್ತುಗಳು ಮತ್ತು ಐಶಾರಾಮಿ ವಸ್ತುಗಳು ಮತ್ತು ಅನಗತ್ಯ ವಸ್ತುಗಳ ನಡುವಿನ  ವ್ಯತ್ಯಾಸದ ಸಣ್ಣ ಗೆರೆಯನ್ನು ಅರಿತು ವಸ್ತುಗಳ ಕೊಳ್ಳಬೇಕಿದೆ. ಕೊಳ್ಳುಬಾಕ ಸಂಸ್ಕೃತಿಯನ್ನು ಕಡಿಮೆ ಮಾಡಿ ಸರಳಜೀವನ ರೂಢಿಸಿಕೊಂಡು ಸುಖೀಜೀವನ ನಡೆಸಬೇಕಿದೆ.


ಮುಗಿಸುವ ಮುನ್ನ..


ವಿದೇಶಿ ಮಾಲುಗಳ ಕೊಳ್ಳಲು

ಕ್ರೆಡಿಟ್ ಕಾರ್ಡ್‌ಗಳನ್ನು ಉಜ್ಜುತ್ತಾ

ಆಗಾಗ್ಗೆ ಭೇಟಿ ನೀಡುತ್ತಿದ್ದ ಅವನು

ಆ ಮಾಲು ಈ ಮಾಲು|

ದುಬಾರಿ ಬೆಲೆಯ ಮಾಲುಗಳ

ಕೊಂಡ ಪರಿಣಾಮವಾಗಿ ಈ 

ಕೈ ಬರಿದಾಗಿ ದೇಶಿಯತೆಗೆ ಮಾರುಹೋಗಿ ಕುಳಿತಿದ್ದಾನೆ 

ತಲೆಯಮೇಲೆ ಹಾಕಿಕೊಂಡು ಟವಾಲು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

06 ಜನವರಿ 2022

ಸೈನಿಕ .ಕಥೆ


 




ಸಹಜ ಸುಂದರ ಸೈನಿಕ ಕಥೆ 


ಮೃತ್ಯುಂಜಯನ ಬಗ್ಗೆ ತನ್ನ ಅಪ್ಪ ಆಗಾಗ ಮನೆಪಾಠ ಮಾಡುವಾಗ ಮಕ್ಕಳಿಗೆ ಅವನ ಬಗ್ಗೆ   ಮೆಚ್ಚುಗೆ ಮಾತುಗಳನ್ನು   ಕೇಳಿ ಕುಮುದಾಳಿಗೆ ತೀವ್ರ ಕುತೂಹಲ ಉಂಟಾಗಿತ್ತು. 

ನಮ್ಮಪ್ಪ ಇಷ್ಟು ಬಿಲ್ಡಪ್ ಕೊಡೋ ಆ ಮೃತ್ಯುಂಜಯ ಹೇಗಿರಬಹುದು? ಎಂಬ ಕುತೂಹಲ ಅವಳಲ್ಲಿ ಮನೆ ಮಾಡಿತ್ತು.

"ಅವನ ಮೈಕಟ್ಟು, ಅವನ ಎತ್ತರ ಅವನ ವ್ಯಕ್ತಿತ್ವ ಎಲ್ಲವೂ ಅತ್ಯುತ್ತಮ ಅದಕ್ಕೆ ಅವನು ಇಂದು ಓರ್ವ ದೇಶಭಕ್ತನಾಗಿ ನಮ್ಮ ದೇಶಕಾಯುವ ಸೈನಿಕನಾಗಿ ಸೇವೆ ಮಾಡುತ್ತಿದ್ದಾನೆ. ಮನೆಯಲ್ಲಿ ಮೂರು ತಲೆಮಾರುಗಳು ಕೂತು ಉಂಡರೂ ಅವರ ಸಂಪತ್ತು ಕರಗಲ್ಲ .ಇಷ್ಟೆಲ್ಲಾ ಇದ್ದರೂ ತಾಯಿ ಸೇವೆಗೆ ಅವನ ತುಡಿತದಿಂದ ಸೈನ್ಯ ಸೇರಿ ನಿಜವಾದ ಭಾರತ ಮಾತೆಯ ಮಗನಾಗಿ ದೇಶಸೇವೆ ಮಾಡುತ್ತಾ ನಮ್ಮೂರ ಕೀರ್ತಿ ಹೆಚ್ಚು ಮಾಡಿರುವನು. ನೀವೂ ಅದೇ ತರಹ ನಮ್ಮೂರ ಹೆಸರು ಉಳಿಸುವ ಕೆಲಸ ಮಾಡಿ " ಎಂದು ಮಕ್ಕಳಿಗೆ  ಅಪ್ಪ  ಮನೆಪಾಠ ಮಾಡುವಾಗ ‌ನೆಪಮಾತ್ರಕ್ಕೆ ಅಂತಿಮ ಪದವಿ ವರ್ಷದ ಭಾರತದ ಸಂವಿಧಾನ ಪುಸ್ತಕ ಹಿಡಿದು ಓದುವ ಕುಮುದಾಗೆ ಅಪ್ಪ ಹೇಳುವ ಮಿಲಿಟರಿ ಹುಡುಗನ ಕಥೆಯ ಕಡೆಗೆ ಗಮನ ಹರಿದು ಪುಸ್ತಕ ಎತ್ತಿಟ್ಟು ಅಡುಗೆ ಮನೆ ಕಡೆ ಹೋಗಿ

"ಅಮ್ಮಾ ಇನ್ನೂ ತಿಂಡಿ ಆಗ್ಲಿಲ್ವ ಕಾಲೇಜ್ ಗೆ ಹೋಗ್ಬೇಕು , ಟೈಮ್ ಆಯ್ತು, ಆ ಗೌಡ್ರ ಗದ್ದೆ ದಾಟಿ ಬಸ್ಟ್ಯಾಂಡ್ ಗೆ ಹೋಗಿ ಬಸ್ ಹತ್ತಿ ಹೋಗೋಷ್ಟರಲ್ಲಿ ನಮ್ ಕಾಲೇಜ್ ನ ಪಸ್ಟ್ ಪಿರೀಯಡ್ ಆಗಿರುತ್ತೆ ." ಎಂದು ತಟ್ಟೆಗೆ ಕೈಹಾಕಿದಳು.


ಗಬ ಗಬ ತಿಂಡಿ ತಿಂದು ನೀರು ಕುಡಿದ ಕುಮುದಾ ಪುಸ್ತಕ ಮತ್ತು ನೋಟ್ ಪುಸ್ತಕ ಎದೆಗವಚಿಕೊಂಡು ಬಾಯ್ ಅಪ್ಪ ,ಬಾಯ್ ಅಮ್ಮ, ಎಂದು ಬಿರಬಿರನೆ ಗದ್ದೆ ದಾರಿಯ ಕಡೆ ಹೆಜ್ಜೆ ಹಾಕಿದಳು ಕುಮುದಾ.


ದಾರಿಯಲ್ಲಿ "ಓ ಮೃತ್ಯುಂಜಯಪ್ಪ ಆರ್ಮಿಯಿಂದ ರಜಾ ಹಾಕಿ ಯಾವಾಗ ಬಂದೆ? ಚೆನ್ನಾಗಿದ್ದೀಯಾ?" ಎಂದು ಗದ್ದೆಯಲ್ಲಿ ಕೆಲಸ ಮಾಡುವ ಪಾತಲಿಂಗಣ್ಣ ಕೇಳಿದಾಗ ಕುಮುದಾಳ ಕಿವಿ ನೆಟ್ಟಗಾದವು.

ಎದುರಿಗೆ ಅನತಿ ದೂರದಲ್ಲಿ ಬರುತ್ತಿದ್ದ ಸ್ಪುರದ್ರೂಪಿ ಯುವಕ, "ಮೂರು ದಿನ ಆಯ್ತು ಪಾತಣ್ಣ .ನೀವು ಚೆನಾಗಿದ್ದೀರಾ? " ಎಂದು ಪ್ರಶ್ನಿಸುತ್ತಾ ದಾರಿಯಲ್ಲಿ ನಡೆದು ಕುಮದಾಳ ಕಡೆ ಬಂದರು.

ಹತ್ತಿರ ಬಂದಂತೆ ಮೃತ್ಯುಂಜಯ ನ ನಿಲುವು ,ನಡಿಗೆ, ಅವನು ಹಾಕಿದ ಗುಲಾಬಿ ಬಣ್ಣದ ಅಂಗಿ, ಬಿಳಿಪಂಚೆ ಕೈಯಲ್ಲೊಂದು ಚೀಲ ನೋಡುತ್ತಾ  ರಸ್ತೆಯಲ್ಲೇ ಮೈಮರೆತು ನಿಂತಳು ಕುಮುದಾ.

"ಹಲೊ.. ದಾರಿ ಬಿಡಿ  ಏನ್ ಹೀಗೆ ನಿಂತ್ ಬಿಟ್ರಿ? " ಎಂದಾಗ ಬೆಚ್ಚಿದವಳಂತೆ ಎಚ್ಚೆತ್ತು ನಾಚಿಕೆಯಿಂದ ಅವನನ್ನು ವಾರೆಗಣ್ಣಿನಲಿ ನೋಡಿ ನಕ್ಕು ಮುಂದೆ ಸಾಗಿದಳು.

ಸರಳ ಸಹಜ ಸುಂದರಿಯ ನೋಡಿದ ಮೃತ್ಯುಂಜಯನಿಗೂ ಅವಳನ್ನು ತಿರುಗಿ ನೋಡದೇ ಇರಲು ಆಗಲೇ ಇಲ್ಲ. ಈ ಹುಡುಗಿ ಯಾರಿರಬಹುದು ಎಂದು ಯೋಚಿಸುತ್ತಾ ಮನೆ ಕಡೆ ಹೆಜ್ಹೆ ಹಾಕಿದ.


ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಹೋದರೂ ಅಂದು ಪಾಠ ಮಾಡುವ ಎಲ್ಲಾ ಲೆಕ್ಚರ್ ಗಳು ಮೃತ್ಯುಂಜಯ ನಂತೆಯೇ ಕಂಡರು .ತನ್ನ ತಲೆಯ ಮೇಲೆ ತಾನೆ ಬಲಗೈಯಲ್ಲಿ ಒಂದು ಏಟು ಕೊಟ್ಟು "ಏನಾಗಿದೆ ಇವತ್ತು ನನಗೆ " ಪ್ರಶ್ನೆ ಹಾಕಿಕೊಂಡಳು.


ಕಾಲೇಜಿಂದ ಮನೆಗೆ ಬಂದ ಕುಮುದಾ ಅಡಿಗೆ ಮನೆಗೆ ಹೋಗಿ ಅಮ್ಮನ ಬಳಿ

"ಅಮ್ಮ ಮೃತ್ಯುಂಜಯ ಅವರಿಗೆ  ಮದುವೆಯಾಗಿದೆಯಾ? ಎಂದು ಪ್ರಶ್ನೆ ಹಾಕಿದಳು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು