ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

24 ಜೂನ್ 2025

ಸಂತೆ


 ನಮ್ಮ ಬಾಲ್ಯದ ದಿನಗಳಲ್ಲಿ  ಶನಿವಾರ ಬಂತು ಅಂದ್ರೆ ಏನೋ ಖುಷಿ.ಅದ್ರಲ್ಲೂ ಅಮ್ಮ ಸಂತೆಗೆ ಹೋಗ್ತಾರೆ ಅಂದ್ರೆ   ಖುಷಿಯು ಇಮ್ಮಡಿಯಾಗ್ತಿತ್ತು.ಯಾಕಂದ್ರೆ ಸಂತೆಯಿಂದ ಅಮ್ಮ ತರಕಾರಿ ಕಮ್ಮಿ ತಂದ್ರೂ ಕಾರ ಮಂಡಕ್ಕಿ ಪಕ್ಕಾ ತರ್ತಿದ್ರು.ನಿನ್ನೆ ಅದೇ   ಸಂತೆಗೆ ಅಮ್ಮನೊಂದಿಗೆ ಅಣ್ಣ ನಾನು ಹೋಗಿದ್ವಿ. ಅಮ್ಮ ಅನಾರೋಗ್ಯ ನಿಮಿತ್ತ ಕಾರಲ್ಲೇ ಕೂತಿದ್ರು.ಅಣ್ಣ ತರಕಾರಿ ತಂದ್ರು.ಕಾರ ಮಂಡಕ್ಕಿ ಮಾತ್ರ ತರಲಿಲ್ಲ.ಯಾಕಂದ್ರೆ ಅಮ್ಮ ಕಾರಮಂಡಕ್ಕಿ ತಿನ್ನೋ ಸ್ಥಿತಿಯಲ್ಲಿರಲಿಲ್ಲ."ನೀವ್ ತಿನ್ವಂತ್ರಿ ಕಾರ ಮಂಡಕ್ಕಿ ತಕ್ಕಳ್ರಪ್ಪ" ಅಂದ್ರು ಅಮ್ಮ  ನಮ್ಮತ್ರ ದುಡ್ಡಿದ್ರೂ ಅವತ್ತು  ನಾವು ಕಾರ ಮಂಡಕ್ಕಿ ತೊಗೊಳ್ಳಲಿಲ್ಲ.

#ChildhoodMemories #Nostalgia #RetroVibes #ThrowbackThursday #HappyTimes #ChildhoodAgain #MemoriesMatter #FondMemories #InnocenceLost #MemoryLane #GoodOldDays #BlastFromThePast #PreciousMoments #ThrowbackMemories #LifeAsAKid #JoyfulDays #GrowingUp #CherishedTimes #ForeverYoung

12 ನವೆಂಬರ್ 2024

ಒಳಿತಿಗೆ ಸಾವಿಲ್ಲ...


 


ಒಳಿತಿಗೆ ಸಾವಿಲ್ಲ...


ಇಂದು ಆಳಾಗಿದ್ದವ ನಾಳೆ ಅರಸನಾಗಬಹುದು.ಅರಸ ಭಿಕ್ಷೆ ಬೇಡುವ ಸ್ಥಿತಿ ಬರಬಹುದು. ಯಾರಿಗೂ ಯಾವುದೂ ಶಾಶ್ವತವಲ್ಲ ಇದನ್ನರಿತು ನಾವು ಬಾಳಬೇಕು. ನಮ್ಮ ನಡವಳಿಕೆಗಳು ನಮ್ಮ ಒಳ್ಳೆಯತನ ನಮ್ಮ ವ್ಯಕ್ತಿತ್ವದ ಭಾಗವಾಗಿರುತ್ತವೆ.ಇದಕ್ಕೆ ಪೂರಕವಾದ ಒಂದು ಕಥೆ ಓದಿ..


ಒಂದು ಕುಟುಂಬವಿತ್ತು. ಇಬ್ಬರೂ ಮಕ್ಕಳು. ಇಬ್ಬರು ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಒಟ್ಟಿಗೆ ಕುಳಿತರು. ಅಂದರೆ ಹಿರಿಯವನು ದಡ್ಡನಾಗಿದ್ದು, ಅನುತ್ತೀರ್ಣನಾಗಿ ಬಂದಿದ್ದನು. ತಮ್ಮ ಬುದ್ಧಿವಂತ. ಫಲಿತಾಂಶ ಬಂದಿತ್ತು. ತಂದೆ ಇಬ್ಬರಿಗೂ ಹಣ ನೀಡಿ ಪಾಸಾದಲ್ಲಿ ಸಿಹಿ ಹಂಚಿ ಎಂದು ಹೇಳಿದನು. ಫಲಿತಾಂಶ ಈಗಿನಂತೆ ಆಗ ಇರಲಿಲ್ಲ. ಆಗ ನೋಟಿಸ್ ಬೋರ್ಡ್ ನಲ್ಲಿ ಹಾಕುತ್ತಿದ್ದರು. ಇಬ್ಬರು ಶಾಲೆಗೆ ಹೋದರು. ಅಣ್ಣ ಫಲಿತಾಂಶ ನೋಡಿದ, ತಮ್ಮ ಶಾಲೆಗೆ ಪ್ರಥಮ ಬಂದಿದ್ದನು. ಅಣ್ಣನಿಗೆ ಎಷ್ಟು ಸಂತೋಷ ಎಂದರೆ ಇಡೀ ಶಾಲೆಗೆ ತಮ್ಮ ಪ್ರಥಮ ಎಂದು ಸಿಹಿ ಖರೀದಿಸಿ ಎಲ್ಲರಿಗೂ ಹಂಚುತ್ತಿದ್ದ. ಎಲ್ಲರೂ ಕೇಳುತ್ತಿದ್ದರು ಏನಪ್ಪಾ ಪಾಸಾದೆ ಏನು?. ಅದಕ್ಕೆ ಆತ ಹೇಳುತ್ತಿದ್ದ, ನನ್ನ ತಮ್ಮ ಇಡೀ ಶಾಲೆಗೆ ಪ್ರಥಮ ಎಂದು. ಅದಕ್ಕೆ ಅವರೆಲ್ಲರೂ ಇವನೊಬ್ಬ ಹುಚ್ಚ ಎನ್ನುತ್ತಿದ್ದರು. ಇಲ್ಲಿ ತಮ್ಮ ಫಲಿತಾಂಶ ನೋಡಿದ, ತಾನು ಶಾಲೆಗೆ ಪ್ರಥಮ ಬಂದಿದ್ದನ್ನು ನೋಡಿ ಸಂತೋಷವಾಯಿತು. ನಂತರ ಅಣ್ಣನ ಫಲಿತಾಂಶ ನೋಡಿದ ಆತನ ಹೆಸರು, ನೊಂದಣಿ ಸಂಖ್ಯೆ ಇರಲಿಲ್ಲ. ಆತನಿಗೆ ಅಣ್ಣನ ಬಗ್ಗೆ ಅಷ್ಟು ತಾತ್ಸಾರವಾಯಿತು. ಊರಿನ ತುಂಬಾ ಅಣ್ಣ ಅನುತ್ತೀರ್ಣ ಎಂದು ಹೇಳುತ್ತಾ ಹೊರಟಿದ್ದನು. ಇಬ್ಬರು ಮನೆಗೆ ಬಂದರು ತಂದೆ ನೋಡಿದ ಅಣ್ಣನ ಕೈಯಲ್ಲಿ ಸಿಹಿ ಇತ್ತು. ತಂದೆ ಇಬ್ಬರೂ ಪಾಸಾಗಿದ್ದಾರೆಂದು ಭಾವಿಸಿ, ಒಳ್ಳೆಯದು ಇಬ್ಬರೂ ಪಾಸಾಗಿದ್ದರಲ್ಲ ಬಹಳ ಸಂತೋಷವಾಯಿತು ಎಂದನು. ಆಗ ಅಣ್ಣ ಹೇಳಿದ ನನ್ನ ತಮ್ಮ ಶಾಲೆಗೆ ಪ್ರಥಮ ಬಂದಿದ್ದಾನೆ, ಅದಕ್ಕೆ ನಾನು ಸಿಹಿ ಹಂಚಿದ್ದೇನೆ ಎಂದು. ತಮ್ಮ ಹೇಳಿದ ಅಣ್ಣ ಅನುತೀರ್ಣನಾಗಿದ್ದಾನೆ ಎಂದು. ಆಗ ತಂದೆ ಹೇಳಿದನು, "ಏನೋ ಇಷ್ಟು ದಡ್ಡ. ನೀನು ಫೇಲ್ ಆಗಿದ್ದು ಸಿಹಿ ಹಂಚುತ್ತಿದ್ದೀಯಲ್ಲ" ಎಂದನು. ಆಗ ಅಣ್ಣ ತಂದೆಗೆ ಹೇಳಿದ, "ನನ್ನ ತಮ್ಮ ಶಾಲೆಗೆ ಪ್ರಥಮ ಬಂದಿದ್ದಾನೆ. ಅದಕ್ಕಿಂತ ದೊಡ್ಡ ಸಂತೋಷ ಎಲ್ಲಿದೆ...? ಅಣ್ಣ ಶಾಲೆಗೆ ಹೋಗಿ ಮುಖ್ಯ ಶಿಕ್ಷಕರಿಗೆ ಸಿಹಿ ನೀಡಿದ. ಈತ ಫೇಲ್ ಆಗಿರುವುದು ಮುಖ್ಯ ಶಿಕ್ಷಕರಿಗೆ ಗೊತ್ತಿತ್ತು. ಸಿಹಿ ಪಡೆದು ಹೇಳಿದರು... "ನಿನ್ನ ತಮ್ಮನಂತವರು ನೂರು ಜನ ಹುಟ್ಟುತ್ತಾರೆ. ನಿನಗೆ ನಾನು ವಿದ್ಯೆ ಕೊಡಬಹುದು. ಇಂತಹ ಹೃದಯ ಕೊಡಲು ಸಾಧ್ಯವಿಲ್ಲ." ಎಂದು ಹೇಳಿ ಆತನನ್ನು ಕರೆಸಿ ವಿದ್ಯೆ ನೀಡಿದರು. ಮುಂದೆ ಆತ ದೊಡ್ಡ ಸಂತನಾದನು. ಅಣ್ಣನ ಹೆಸರು ಎಲ್ಲಾ ಕಡೆ ಪ್ರಸಾರವಾಯಿತು. ತಮ್ಮನ ಹೆಸರು ಎಲ್ಲೂ ಇರಲಿಲ್ಲ.  


 ಸಿಹಿಜೀವಿ ವೆಂಕಟೇಶ್ವರ

ತುಮಕೂರು

27 ಅಕ್ಟೋಬರ್ 2024

ಆಮೆಯ ಕುತಂತ್ರ.


  ಆಮೆಯ ಕುತಂತ್ರ 


ನಾವು ಆಮೆ ಮತ್ತು ಮೊಲದ ಕತೆ ಕೇಳಿದ್ದೇವೆ.ಇದು ವಿಭಿನ್ನವಾದ ಕಥೆ ಓದಿ.ಒಂದು ದಿನ ಆಮೆಗೆ ತಿನ್ನಲು ಆಹಾರವಿರಲಿಲ್ಲ   ಅದು ಯೋಚಿಸಿತು.  ಹೇರಳವಾಗಿ ಆಹಾರವನ್ನು ಹೊಂದಿದ್ದ ಜಿಪುಣನಾದ ಮೇಕೆಯ ಬಳಿಗೆ ಹೋಗಿ"ಹೇ ಮೇಕೆ, ನಾನು ನಿನಗೆ ಸರಳವಾದ ಪ್ರಶ್ನೆಯನ್ನು ಕೇಳಬಹುದೇ?"  ಎಂದಿತು.  

 "ಖಂಡಿತವಾಗಿಯೂ  ಕೇಳಬಹುದು" ಮೇಕೆ ಉತ್ತರ ನೀಡಿತು."ವಿಶ್ವದ ಅತ್ಯಂತ ವೇಗದ ಪ್ರಾಣಿ ಯಾವುದು ಎಂದು ನೀನು ನನಗೆ ಹೇಳಬಲ್ಲೆಯಾ?" 

 ಮೇಕೆ ಪ್ರತಿಕ್ರಿಯಿಸಿತು. "ಭೂಮಿಯಲ್ಲಿ? ಅಥವಾ ನೀರಿನಲ್ಲಿ?" "ಭೂಮಿಯ ಮೇಲೆ" 

 "ಖಂಡಿತವಾಗಿಯೂ ಇದು ಚಿರತೆ" ಎಂದು ಮೇಕೆ ಹೇಳಿತು. 

 "ಸರಿ! ನೀನು ತುಂಬಾ ಬುದ್ಧಿವಂತ. ಕೇಳು, ನೀನು ನನಗೆ ಆಹಾರ ಕೊಟ್ಟರೆ, ನಾನು ನಿನ್ನನ್ನು ಭೂಮಿಯ ಮೇಲಿನ ಅತ್ಯಂತ ವೇಗದ ಜೀವಿಯನ್ನಾಗಿ ಮಾಡುತ್ತೇನೆ" ಎಂದಿತು ಆಮೆ 


 ಮೇಕೆ ಗೊಂದಲದಿಂದ ನುಡಿಯಿತು   "ಅದು ಹೇಗೆ ಸಾಧ್ಯ? ನೀನು ದೇವರೇ?" 

 "ನಾನು ದೇವರಲ್ಲ ಆದರೆ ನನಗೆ ಅಲೌಕಿಕ ಶಕ್ತಿಗಳಿವೆ. ನಾನು ನಿನಗೆ ಹೇಳಿದರೆ ನೀನು ನನ್ನನ್ನು ನಂಬುವುದಿಲ್ಲ. ಆದರೆ ನಾನು ರಣಹದ್ದಿಗೆ  ಮಾಟ ಮಂತ್ರ ಮಾಡಿ  ಕುರೂಪಿಯಾಗುವಂತೆ ಮಾಡಿದವನು"

 "ವಾವ್!"  ಮೇಕೆ ಉದ್ಘರಿಸುತ್ತಾ.  "ಹಾಗಾದರೆ ನೀನು ನನ್ನನ್ನು  ನಿಜವಾಗಿಯೂ ಚಿರತೆಗಿಂತ ವೇಗವಾಗಿ ಓಡುವಂತೆ  ಮಾಡಬಲ್ಲೆಯಾ?  ಎಂದಿತು"

 "ಖಂಡಿತವಾಗಿಯೂ" ಆಮೆ ಕೂಗಿತು. ಮೇಕೆ ಉತ್ಸುಕವಾಯಿತು.  ಅದು  ಆಮೆಯನ್ನು ಊಟಕ್ಕೆ ಆಹ್ವಾನಿಸಿತು  ಮತ್ತು ಅದಕ್ಕೆ ಉತ್ತಮ  ಆಹಾರ ಮತ್ತು ದ್ರಾಕ್ಷಾರಸವನ್ನು ಬಡಿಸಿತು.  ಹೊಟ್ಟೆತುಂಬಾ ತಿಂದು ಕುಡಿದು, ಆಮೆ ಹೊರಡಲು ಮುಂದಾದಾಗ ಮೇಕೆ ತಡೆದು. 

 "ಈಗ ಇದು ನಿನ್ನ ಸರದಿ. ನನ್ನನ್ನು ವಿಶ್ವದ ಅತ್ಯಂತ ವೇಗದ ಪ್ರಾಣಿಯಾಗಿ ಪರಿವರ್ತಿಸು . ನಾನು ಕಾಯಲು ಸಾಧ್ಯವಿಲ್ಲ" ಎಂದಿತು. ಆಮೆ ಗಹಗಹಿಸಿ ನಗುತ್ತಾ   ನಂತರ ಹೇಳಿತು.

 "ನೀನು ಎಷ್ಟು ದೊಡ್ಡ ಮೂರ್ಖ. ನಾನು ಪ್ರಪಂಚದಲ್ಲೇ ಅತೀ ನಿಧಾನವಾದ ಪ್ರಾಣಿ ಎಂದು ಎಲ್ಲರಿಗೂ ತಿಳಿದಿದೆ.ನನಗೆ ವೇಗವಾಗಿ ಪರಿವರ್ತಿಸುವ ಜಾದೂ ಗೊತ್ತಿದ್ದರೆ  ನನ್ನ ಮೇಲೆ ಅದನ್ನು ಪ್ರಯೋಗ ಮಾಡಿಕೊಂಡು ಮೊದಲು ನಾನೇ ವೇಗವಾದ  ಪ್ರಾಣಿಯಾಗುತ್ತಿದ್ದೆ ಅದೇನೇ ಇರಲಿ ಪುಷ್ಕಳ ಭೋಜನ ಹಾಕಿದ್ದಕ್ಕೆ  ಧನ್ಯವಾದಗಳು" ಎಂದು ಹೊರಡಲನುವಾಯಿತು.

 ಮೇಕೆಗೆ  ತುಂಬಾ ಕೋಪ ಬಂದು ಆಮೆಯ ಕುತ್ತಿಗೆಯನ್ನು ಹಿಡಿದು ಗೋಡೆಯ ಮೇಲೆ  ತಳ್ಳಿತು.  ನಂತರ ಲೋಹದ ರಾಡ್‌ನಿಂದ ಅದರ ಬೆನ್ನಿನ ಮೇಲೆ ಹಲವಾರು ಬಾರಿ ಅದರ  ಬೆನ್ನು ಬಿರುಕು ಬಿಡುವವರೆಗೆ ಹೊಡೆಯಿತು.


 ಬಂಧುಗಳೇ ನಮ್ಮ ಈ ಕಥೆಯಲ್ಲಿ ಬರುವ ಮೇಕೆಯಂತೆ ವಿವೇಚನೆಯಿಲ್ಲದ ತಮ್ಮ ಮೆದಳುನ್ನು ಸರಿಯಾಗಿ ಬಳಸದ  ಜನರು ನಮ್ಮ ನಡುವೆಯೇ ಈಗಲೂ ಇದ್ದಾರೆ. ಅಂತಹ ಜನರನ್ನು  ಆಮೆಯಂತಹವರು ಬಹಳ ಸುಲಭವಾಗಿ ವಂಚಿಸುವರು. "ಎತ್ತು  ಕರು ಹಾಕಿತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟು" ಎಂಬ ಜಾಣರು ಈಗಲೂ ನಮ್ಮಲ್ಲಿ ಇದ್ದಾರೆ.ಶಿಕ್ಷಣದ ಮೂಲಕ ಜಾಗೃತರಾಗಿ ವಂಚಕರ ಬಲೆಗೆ ಬೀಳದೇ ವಿವೇಚನೆಯಿಂದ ಬದುಕಿದರೆ ನಮ್ಮ ಬಾಳು ಬಂಗಾರವಾಗುವುದು ಅಲ್ಲವೆ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು.   

 

19 ಆಗಸ್ಟ್ 2024

ಮಾನವೀಯತೆಯ ದಿನ.ನ್ಯಾನೋ ಕಥೆ

 



ನ್ಯಾನೋ ಕಥೆ



ಕಿಡ್ನಿ ಆಪರೇಷನ್ ಗೆ ಒಳಗಾಗಿದ್ದವರು ಯಾಕೋ ತನ್ನ ಆರೋಗ್ಯದ ಏರುಪೇರು ಗಮನಿಸಿ ಆಸ್ಪತ್ರೆಗೆ ತೋರಿಸಲು ಬಾಸ್ ಗೆ ರಜಾ ಅರ್ಜಿ ಕೊಟ್ಟರು."ಅದೆಲ್ಲ ಗೊತ್ತಿಲ್ಲ ನಾಳೆ ಡ್ಯೂಟಿಗೆ ಬಾ, ಮತ್ತೆ ನೋಡೋಣ" ಎಂಬ ಬಾಸ್ ಮಾತು ಕೇಳಿಸಿಕೊಂಡ ಅವರ ಸಹೋದ್ಯೋಗಿಯೊಬ್ಬರು ಬೆಳಿಗ್ಗೆ ಪತ್ರಿಕೆಯಲ್ಲಿ ಓದಿದ " ಇಂದು ವಿಶ್ವ ಮಾನವೀಯತೆಯ ದಿನ" ಎಂಬುದು  ನೆನಪಾಯಿತು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

15 ಡಿಸೆಂಬರ್ 2023

ಹೊಣೆ ಯಾರು...?



 


ಯಾರು ಹೊಣೆ...

ಅವನ  ತಂದೆ ಸರ್ಕಾರಿ ನೌಕರಿಯಲ್ಲಿದ್ದರು.ಅವರ ಅಕಾಲಿಕ ಮರಣದಿಂದ ಆ ಹುಡುಗನ ಅಕ್ಕನಿಗೆ ಅನುಕಂಪದ ಸರ್ಕಾರಿ ನೌಕರಿ ದೊರೆಯಿತು. ನೌಕರಿಯ ಬಲದಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಯಿತು. ಹೋಗಿ ಬರುವ ಪಯಣ
ಸುಮಾರು 100 ಕಿಲೋಮೀಟರ್ ಆದರೂ ಕೆಲಸ ಸಿಕ್ಕ ಖುಷಿಯಲ್ಲಿ ಅದೇನು ಅಷ್ಟು ತೊಂದರೆ ಎನಿಸಲಿಲ್ಲ.  ತನ್ನ ಹಳ್ಳಿಯಿಂದ ನಗರಕ್ಕೆ, ಪುನಃ ನಗರದಿಂದ ಮತ್ತೊಂದು ನಗರಕ್ಕೆ ಕೆಲಸ ಮಾಡಲು ಹೋಗಿ ಬರಬೇಕಾಗಿತ್ತು. ಆರಂಭದಲ್ಲಿ ಇದು ಕಷ್ಟವಾದರೂ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಅಷ್ಟೇ ಸಾಕು ಎಂದು ಬರು ಬರುತ್ತಾ ಕಷ್ಟದ ಜೀವನಕ್ಕೆ ಹೊಂದಿಕೊಂಡಿದ್ದಳು. ದೂರದ ಪ್ರಯಾಣವಾದ್ದರಿಂದ ಬಸ್ ಗಳು ಸಕಾಲದಲ್ಲಿ ಸಿಗದೆ ಕೆಲವೊಮ್ಮೆ ನಗರಕ್ಕೆ ತಲುಪುವುದೇ ರಾತ್ರಿ ಒಂಭತ್ತರ ಮೇಲಾಗುತ್ತಿತ್ತು.ಅಲ್ಲಿಂದ ಹಳ್ಳಿಯ ಮನೆ ಸೇರಲು ಮತ್ತೆ ಕಾಲು ಗಂಟೆ ಬೇಕಾಗುತ್ತಿತ್ತು.
ಕೆಲವು ದಿನ ಡ್ಯೂಟಿಯಿಂದ ರಾತ್ರಿ  ಲೇಟಾಗಿ ಬಂದರೆ ನಗರದಿಂದ ಅಕ್ಕನ ಕರೆತರಲು ಹತ್ತನೇ ತರಗತಿಯಲ್ಲಿ ಓದುವ ತಮ್ಮ ಪಕ್ಕದ ಮನೆಯ ಗೆಳೆಯ ನನ್ನು ಕರೆದುಕೊಂಡು ತನಗೆ ಪರಿಚಿತವಾಗಿರುವ ಅಂಕಲ್ ನಿಂದ  ಬೈಕ್ ಕೇಳಿ ಪಡೆದು ನಗರದಿಂದ ಹಳ್ಳಿಗೆ ಕರೆ ತರುತ್ತಿದ್ದ. ರಾತ್ರಿ ಹತ್ತರ ನಂತರ ಬರುವ ಮಗಳ ಸ್ಥಿತಿಯನ್ನು ನೋಡಿ " ಅಲ್ಲೇ ಟೌನ್ ನಲ್ಲಿ ಒಂದು ರೂಮೋ ಪಿ ಜಿ ನೋ ಮಾಡ್ಕಂಡಿರಮ್ಮ ರಾತ್ರಿ ಹೊತ್ತು ಇಂಗ್ ಬಂದ್ರೆ ಎಂಗಮ್ಮ" ಎಂದು ತಾಯಿ ಸಲಹೆ ನೀಡಿದ್ದರು. ಮಗಳು ಇದನ್ನು ನಯವಾಗಿಯೇ ನಿರಾಕರಿಸಿದ್ದಳು.
ತಂದೆಯ ಅನುಪಸ್ಥಿತಿಯಲ್ಲಿ ತಾಯಿ,  ಮಗಳು, ಮಗ ಸಂತೋಷವಾಗಿ ಜೀವನ ಸಾಗಿಸುತ್ತಿದ್ದರು. ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ..
ಅಂದು ರಾತ್ರಿ ಒಂಭತ್ತು ಗಂಟೆಗೆ ಅಕ್ಕ ಪೋನ್ ಮಾಡಿದರು.ತಮ್ಮನು  ಪಕ್ಕದ ಮನೆಯ ಅಂಕಲ್ ನಿಂದ  ಬೈಕ್ ಪಡೆದು ತನ್ನ ಗೆಳೆಯನ ಜೊತೆಯಲ್ಲಿ ನಗರದ ಕಡೆ ಸ್ವಲ್ಪ ಜೋರಾಗಿಯೇ ಎಕ್ಸಲೇಟರ್  ಒತ್ತಿದ. 
ಅತ್ತ ಅಕ್ಕ ಕಾಯುತ್ತಿದ್ದರು.ಈ ಮಧ್ಯ ರಾತ್ರಿ ಹತ್ತರ ಸಮಯದಲ್ಲಿ ಒಂಟಿ ಯುವತಿ ನಿಂತಿರುವುದನ್ನು ಕಂಡ ಪುಂಡರ ಗುಂಪು ಚುಡಾಯಿಸಲಾರಂಭಿಸಿದೆ.ಯುವತಿ ಅಲ್ಲಿಂದ ನಿಧಾನವಾಗಿ ಮುಂದೆ ಚಲಿಸಿದ್ದಾಳೆ. ಗಾಬರಿಯಿಂದ ತಮ್ಮನಿಗೆ ಮತ್ತೆ ಕರೆ ಮಾಡಿದಳು.ಕರೆ ಸ್ವೀಕರಿಸಿದ ತಮ್ಮ ಗಾಡಿಯ ಎಕ್ಸಲೇಟರ್ ಮತ್ತೂ ಒತ್ತಿದ.  ಸ್ಪೀಡೋಮೀಟರ್ ಮುಳ್ಳು ಏರುತ್ತಾ ಬೈಕ್ ಮುಂದೆ ಚಲಿಸಿತು.ಆಗಲೇ ಅವಘಡ ಸಂಭವಿಸಿದ್ದು! ಕ್ಷಣಾರ್ಧದಲ್ಲಿ   ಅತಿ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕರು ಆರು ಅಡಿ ಜಿಗಿದು ದೂರದಲ್ಲಿ ಬಿದ್ದರು. ರಸ್ತೆ ಅಕ್ಕ ಪಕ್ಕದ ಜನರು ಸೇರಿ ಮಕ್ಕಳ ಎತ್ತಿದ್ದರು.ಅಷ್ಟರಲ್ಲಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿತ್ತು. ಕಾರಿನ ಚಾಲಕನೂ ಗಾಯಗೊಂಡು ಆಸ್ಪತ್ರೆ ಸೇರಿದ.ಸ್ಥಳಕ್ಕೆ ಬಂದ ಪೋಲಿಸರು ಮಹಜರು ಮಾಡಿ ಬೈಕ್ ಮಾಲೀಕನನ್ನು ಪತ್ತೆ ಹಚ್ಚಿ ಅಪ್ರಾಪ್ತ ಬಾಲಕರಿಗೆ ಬೈಕ್ ಕೊಟ್ಟ ಅರೋಪದ ಮೇಲೆ ಬಂದಿಸಲಾಯಿತು. 
ಸ್ಥಳದಲ್ಲಿದ್ದ ಜನ ಆ ಬಾಲಕರ ಸ್ಥಿತಿಯನ್ನು ಕಂಡು ಮರುಗುತ್ತಿದ್ದರು.ಕೆಲವರು ಅದು ಕಾರ್ ನ ಚಾಲಕನ  ಅಜಾಗರೂಕತೆಯಿಂದ ಆದ ಅವಘಡ ಎಂದರೆ ಕೆಲವರು ಅಪ್ರಾಪ್ತ ಮಕ್ಕಳು ಬೈಕ್ ಯಾಕೆ ಓಡಿಸಬೇಕಿತ್ತು? ಎಂದು ಮಾತನಾಡುವ ವೇಳೆಯಲ್ಲಿ ಸ್ಥಳಕ್ಕೆ ಬಂದ ಸಹೋದರಿ ಈ ದುರ್ಘಟನೆಗೆ ನಾನೇ ಕಾರಣವೆಂದು ಗೋಳಾಡತೊಡಗಿದಳು.ಅಂಬುಲೆನ್ಸ್ ಶಬ್ದ ದೂರದಲ್ಲಿ ಕೇಳುತ್ತಿತ್ತು... ಪಾಪ  ಈ ಹುಡುಗ್ರ ಸಾವಿಗೆ ಯಾರ್ ಹೊಣೆ ಎಂದು ಪ್ರಶ್ನಿಸುತ್ತಿರುವಾಗ ಮೂಲೆಯಲ್ಲಿ ಬೆಡ್ ಶೀಟ್ ಹೊದ್ದು ನಿಂತ ವಯೋವೃದ್ದರು ಹಣೆ ಬರಹಕ್ಕೆ ಯಾರು ಹೊಣೆನಪ್ಪ? ಎಂದಾಗ ನೀರವ ಮೌನ ಆವರಿಸಿತು..

ಸಿಹಿಜೀವಿ ವೆಂಕಟೇಶ್ವರ
ತುಮಕೂರು

06 ಮೇ 2023

ನನ್ನ ಮತ ಮಾರಾಟಕ್ಕಿಲ್ಲ...


 




ನ್ಯಾನೋ ಕಥೆ ೨೩

ನನ್ನ ಮತ ಮಾರಾಟಕ್ಕಿಲ್ಲ.


"ತಗೋಳಪ್ಪ ಇದು ಕುಕ್ಕರ್, ಈ ಸಾರಿ ನಮ್ ಪಕ್ಷಕ್ಕೇ ಓಟ್ ಹಾಕ್ಬೇಕು" ಎಂದು ಕೊಟ್ಟು ಹಲ್ಲುಗಿಂಜಿ ಹೊರನಡೆದ   ಮಿಕ್ಸಿ, ಸೀರೆ, ವಾಚ್ಗಳು  ಮತದಾರನ ಮನೆಗೆ ಬಂದವು. ಕೊನೆಯಲ್ಲಿ ಬಂದವನು  ಐನೂರರ ಹತ್ತು ನೋಟು ನೀಡಿ "ನಮ್ ಪಕ್ಷದ್ ಸಿಂಬಲ್ ಗೊತ್ತಲ್ಲ ಮರೀಬೇಡ " ಎಂದು ಗತ್ತಿನಿಂದ ಹೇಳಿ ಹೋದ .ಒಂದು ಮೂಲೆಯಲ್ಲಿ ಐದನೇ ತರಗತಿ ಓದುತ್ತಿದ್ದ ಮಗ "ನನ್ನ ಮತ ಮಾರಾಟಕ್ಕಿಲ್ಲ "  ಬರಹವನ್ನು  ಹಿಡಿದಿದ್ದ ಯಾರೂ ಅದರೆಡೆ  ಗಮನ ನೀಡಲೇಇಲ್ಲ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು



21 ಆಗಸ್ಟ್ 2022

ಶಾಂತಿ...


 



ಮಗ ಎಂ. ಬಿ .ಬಿ.ಎಸ್. ಮುಗಿಸಿ ಒಳ್ಳೆಯ ಅಂಕದೊಂದಿಗೆ ಪಾಸಾಗಿದ್ದಾನೆ ನನ್ನ ಇಚ್ಚೆಯಂತೆ ಎಂ ಡಿ ಸೀಟ್ ಸಿಗುವುದೋ ಇಲ್ಲವೋ ಎಂಬ ಚಿಂತೆ, ಬೇಸರ, ಮಗಳು ಇಂಜಿನಿಯರ್ ಮುಗಿಸಿ ಕೆಲಸಕ್ಕೆ ಹೋಗುತಿಹಳು,ಅವಳಿಗೆ ನನ್ನಿಚ್ಚೆಯ ವರ ಸಿಗುವನೆ? ಎಂಬ‌ ಚಿಂತೆ.ಹದಿನೈದು ಕೋಟಿ ಆಸ್ತಿಯಿದ್ದರೂ ಮನಸ್ಸಿಗೆ ಶಾಂತಿಯಿಲ್ಲ ನೆಮ್ಮದಿಯಿಲ್ಲ ಮನಃಶಾಂತಿ ಪಡೆಯುವುದು ಹೇಗೆ? ಪರಿಹಾರ ಸೂಚಿಸಿ ಸ್ವಾಮಿ.
ಮುಗುಳ್ನಕ್ಕು ಸ್ವಾಮೀಜಿಯವರು ಹೇಳಿದರು.
ಭಕ್ತ, ನಿನಗೆ ಶಾಂತಿಯಿಂದ ಇರಬೇಕೆಂದು
ಇಚ್ಛೆ ಇದೆಯೇ? ಹಾಗಾದರೆ ನಿನ್ನ ಇಚ್ಛೆಗಳನ್ನು
ಶಾಂತಗೊಳಿಸು 
ವಿಶ್ವ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ  ಪುಟ್ಟ ಕಥೆ ೨೨/೪/೨೧

19 ಮಾರ್ಚ್ 2022

ಉದಕದೊಳಗಿನ ಕಿಚ್ಚು ಭಾಗ ೨೧


 


ನಾಟಕದ ಪ್ರಾಕ್ಟೀಸ್ , ಮನೆಯಲ್ಲಿ ಕೆಲಸ ಇವುಗಳ ನಡುವೆ  ಸತೀಶನಿಗೆ ದಿನಗಳು ಉರುಳಿದ್ದೆ ಗೊತ್ತಾಗಲಿಲ್ಲ . ಬೇಸಿಗೆ  ರಜೆ ಕಳೆದು ಎರಡನೇ ವರ್ಷದ ಪಿ ಯು ಸಿ ಓದಲು ಕಾಲೇಜು ಜೂನ್ ಮೂರನೆ ತಾರೀಖು ಆರಂಭವಾಗುವುದು ಎಂದು ಪ್ರಿನ್ಸಿಪಾಲ್ ಹೇಳಿದ್ದು ನೆನಪಾಗಿ,  ಪುಸ್ತಕ ಮತ್ತು ಪೆನ್ನುಗಳ  ಜೋಡಿಸಿಕೊಂಡು ಅನ್ನ ಮೊಸರು ಉಂಡು ಊರ ಮುಂದಿನ ಬಸ್ ನಿಲ್ದಾಣದ ಬಳಿ ಬಂದು ಪಾಕ್ಷಪ್ಪರ ಅಂಗಡಿ ಹಿಂದಿರುವ ಬೇವಿನ ಮರದ ಕಡೆ ನೋಡಿದ ,ಯಾರೂ ಇರಲಿಲ್ಲ. ಇನ್ಯಾರು ಇರುವರು ಅವಳು ಕಾಣೆಯಾಗಿ ಎಷ್ಟೋ ತಿಂಗಳಾದವಲ್ಲ .


ಮೊದಲಾದರೆ ಸತೀಶ ಬರುವ ಮೊದಲೇ ಬಿಗಿಯಾದ ರವಿಕೆ ತೊಟ್ಟು ಎದೆಯ ಮೇಲೆ ಸುಮ್ಮನೆ ಇರಲಿ ಎಂದು ಹಾಕಿಕೊಂಡ ದಾವಣಿ ಅಲ್ಲಿರದೇ ಬೇಸರಗೊಂಡು ಎಲ್ಲಿಗೋ ಜರುಗಿರುತ್ತಿತ್ತು, ಬೇವಿನ ಮರದ ಕೆಳಗಿರುವ ಕಲ್ಲಿನ ಬೆಂಚಿನ ಮೇಲೆ ಕುಳಿತು ಅವಳು ಕಾಲು ಅಲ್ಲಾಡಿಸುತ್ತಿದ್ದರೆ ಕಾಲ್ಗೆಜ್ಜೆ ತಾಳ ಬದ್ದವಾಗಿ ಸದ್ದು ಮಾಡುತ್ತಿದ್ದವು,  ಊರ ತರ್ಲೆ ಹುಡುಗರು ಅವಳ ನೋಡಲೆ ಬಂದು ದೂರದಲ್ಲಿ ನಿಲ್ಲುತ್ತಿದ್ದರು. ಆದರೆ ಅವಳು ಮಾತ್ರ ಸತೀಶನ ಬಿಟ್ಟು ಯಾರನ್ನೂ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ, ಅವನು ಬಂದೊಡನೆ ಚಂಗನೆ ಕಲ್ ಬೆಂಚಿನಿಂದ ಎಗರಿ ಇಳಿದು ನಕ್ಕು ಮತ್ತೆ  ಜೈರಾಂ ಬಸ್ ಬರುವವರೆಗೂ ಅಲ್ಲೇ ಕುಳಿತು ನಗುವಿನ ವಿನಿಮಯ, ಮನಸುಗಳ ಪಿಸುಮಾತಿನ ವಿನಿಮಯ ನಡೆಯುತ್ತಿತ್ತು.


ಮತ್ತೆ ಅವಳಿಲ್ಲದ್ದನ್ನು ನೆನೆದು ಬೇಸರದಿಂದ ಶೆಟ್ಟರ ಭೀಮಮೂರ್ತಿ ಅಂಗಡಿಯ ಮುಂದೆ ನಿಂತು ,ಆಸ್ಪತ್ರೆಯ ದಿನ್ನೆ ಕಡೆಗೆ ನೋಡಲಾರಂಭಿಸಿದ, ಅಂದೇಕೋ ಬಸ್ ಸಹ ನಿಧಾನವಾಗಿ ಬೇಸರದಿಂದ ಏದುಸಿರು ಬಿಡುತ್ತಾ ಬಂದು ‌ನಿಂತಿತು.

ಡ್ರೈವರ್ ಮೂರ್ತಣ್ಣ "ಏ ....ಆ ಬಕೆಟ್ ತಗಂಡು ಜಗ್ಗ ನಲ್ಲಿಲಿ ನೀರ್ ತಂದು ರೇಡಿಯೇಟರ್ ಗೆ ಹಾಕಲೆ . ಹೊಗೆ ಬತೈತೆ" ಕೂಗಿದರು

ಕಂಡಕ್ಟರ್ ಸೀನ ಬಕೆಟ್ ನಲ್ಲಿ ನೀರು ತಂದು ಚಿಕ್ಕ ಜಗ್ ನಲ್ಲಿ ತುಂಬಿ  ರೇಡಿಯೇಟರ್ ಗೆ ಹಾಕಿ ಬಕೆಟ್ ಅನ್ನು ಒಂದು ಸೀಟ್ನ  ಕೆಳಗೆ ಇಟ್ಟು "ರೈಟ್ ರೈಟ್" ಅಂದ 

ಬಸ್ಸು ದೊಡ್ಡ ಸೇತುವೆ ದಾಟಿ ನಮೂಜಿ  ದಿನ್ನೆಯನ್ನು ಕಷ್ಟಪಡುತ್ತಾ ಹತ್ತುತ್ತಿತ್ತು. ಸತೀಶನ  ಮನ ಸುಜಾತಳ ಬಗ್ಗೆ ಯೋಚಿಸುತ್ತಿತ್ತು.


ಮೊದಲಿನಿಂದಲೂ ಸೈನ್ಸ್ ತಲೆಗೆ ಹತ್ತಲಿಲ್ಲ ,ಮೊದಲಾಗಿದ್ದರೆ  ಕಾಲೇಜು ತರಗತಿಗಳು ಬೇಸರವಾದರೆ ಸುಜಾತಳ ಜೊತೆ ಯಾವುದಾದರೂ ಪಾರ್ಕಿನಲ್ಲೋ ,ಶ್ರೀಶೈಲ ಅಥವಾ ಜಯಲಕ್ಷ್ಮಿ ಚಿತ್ರಮಂದಿರಗಳಲ್ಲಿ ಯಾವುದಾದರೂ ಚಲನಚಿತ್ರ ನೋಡುತ್ತಾ ಕಾಲ ಕಳೆಯುತ್ತಿದ್ದ .ಈಗ ಅವಳಿಲ್ಲ. ನರಹರಿ ರೂಂ ನಲ್ಲಿ ಉಳಿಯಲು ಮಾವ ಬಿಡುತ್ತಿಲ್ಲ , ಹಿರಿಯೂರಿಗೆ ಹೋಗಲೂ ಬೇಸರದಿಂದ ಹೋಗದಿದ್ದರೆ ಅದಕ್ಕೂ ಅಜ್ಜಿ ಮಾವಂದಿರು ಯಾಕೋ ಕಾಲೇಜ್ ಗೆ ಹೋಗಿಲ್ಲ ಎಂದು ಬೈಯುತ್ತಿದ್ದರು .ಒಟ್ಟಿನಲ್ಲಿ  ಸತೀಶನಿಗೆ ಯಾವ ಕಡೆಯಿಂದಲೂ ನೆಮ್ಮದಿ ಇಲ್ಲದಂತಾಗಿತ್ತು.

ದೇವಿಮಹಾತ್ಮೆ ನಾಟಕದಲ್ಲಿ ಪಾತ್ರ ಮಾಡಿದ ಎಲ್ಲರನ್ನೂ ‌ದೇವಿ ಹೂವಿನಂತೆ ಮೇಲೆತ್ತಿಕೊಳ್ಳುವಳು ಎಂದೂ ,ದೇವಿಗೆ ಅವಮಾನ ಮಾಡಿದವರನ್ನು ಭಸ್ಮ ಮಾಡುವಳು ಎಂದು ,ಎರಡಕ್ಕೂ ಉದಾಹರಣೆ ಸಮೇತ ಕೆಲವರ ಹೆಸರು ಹೇಳಿದ್ದರು ,ಹಾಗೆ ಯೋಚಿಸಿದಾಗ ಅದು ದಿಟವೂ ಎಂಬುದು ಕೆಲ ಉದಾಹರಣೆ ಮೂಲಕ ತಿಳಿದಿತ್ತು. ಸತೀಶ ದೇವಿಮಹಾತ್ಮೆ ನಾಟಕದಲ್ಲಿ ಪಾತ್ರ ಮಾಡಲು ಇದೂ ಒಂದು ಕಾರಣವಾಗಿತ್ತು, ಮನಃಪೂರ್ವಕವಾಗಿ ಸುಜಾತ ನನಗೇ ಸಿಗಬೇಕು ಮತ್ತು ಅವಳೊಂದಿಗೆ ನನ್ನ ಮದುವೆಯಾಗಬೇಕು ಎಂದು ಪ್ರಾಕ್ಟೀಸ್ ಮಾಡುವಾಗ ಕೆಲವೊಮ್ಮೆ, ಮತ್ತು ನಾಟಕವಾಡುವಾಗ ಒಂದೆರಡು ಸಲ ಎಂದುಕೊಂಡದ್ದನ್ನು‌ ಸತೀಶ ಜ್ಞಾಪಿಸಿಕೊಂಡ.

ಹಾಗಾದರೆ ಜನರು ನಂಬಿರುವುದು ಸುಳ್ಳಾ?

ದೇವಿಯ ಮಹಾತ್ಮೆ ಏನೂ ಇಲ್ಲವೆ?

ನಾಟಕ ಆಗಿ ಮೂರ್ನಾಲ್ಕು ತಿಂಗಳಾದರೂ ನನಗೇನು ಒಳ್ಳೆಯದು ಏಕೆ ಕಾಣಲಿಲ್ಲ?  ಹೀಗೆ ನಾನ ಪ್ರಶ್ನೆಗಳು ಸತೀಶನ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು.


ಹೀಗೆ ಒಂದು ಭಾನುವಾರ ತಿಮ್ಮಕ್ಕ ಸತೀಶನ ಕರೆದು 

" ನನಗೆ ರಾಗಿ, ಜೋಳ ಹಸನು ಮಾಡಿ ಹಿಟ್ಟು ಮಾಡಿಸಲು ಮೆಷಿನ್ಗೆ ಹೋಗಬೇಕು ಇವತ್ತು ಬಿಳಿಯಣ್ಣ ನಿಗೆ ನೀನೇ ಬುತ್ತಿ ಕೊಟ್ ಬಾ ಸತೀಶ " ಎಂದರು


"ಆಯ್ತು ಅಕ್ಕ ಬುತ್ತಿ ಕಟ್ ಕೊಡು ನಾನೇ ತಗಂಡು ಹೋಗಿ ಬತ್ತೀನಿ " ಖುಷಿಯಿಂದಲೇ ನುಡಿದ ಸತೀಶ 


ಮೊದಲಾಗಿದ್ದರೆ ಬಿದಿರು ಬುಟ್ಟಿಯಲ್ಲಿ ಬುತ್ತಿ ಹೊತ್ತು ಹೋಗುತ್ತಿದ್ದ ಸತೀಶ ಮನೆಗೆ ಹೊಸ ಹೀರೊ ಸೈಕಲ್‌ ಬಂದಾಗಿನಿಂದ ಎಲ್ಲದಕ್ಕೂ ಸೈಕಲ್‌ ಏರಿ ಹೋಗುತ್ತಿದ್ದ ,ಅಷ್ಟಕ್ಕೂ ಆಗ ಆ ಊರಿನಲ್ಲಿ ಇದ್ದದ್ದೇ ಐದಾರು ಸೈಕಲ್ ಇದು ಸಹ ಪದೇ ಪದೇ ಸತೀಶ ಸೈಕಲ್‌ ಬಳಸಲು ಕಾರಣವಾಗಿತ್ತು.

ಬಣ್ಣ ಬಣ್ಣದ ವೈರ್ನಿಂದ ಮಾಡಿದ ಬ್ಯಾಗಿನಲ್ಲಿ ಬುತ್ತಿ ಕಟ್ಟುತ್ತಾ 

" ನಿನಗೂ ಅಲ್ಲೇ ಇಡಲೇನೋ ಬುತ್ತೀನ ? ನೀನು ಅಲ್ಲೇ ಉಮ್ತೀಯಾ? ಕೇಳಿದರು ತಿಮ್ಮಕ್ಕ

" ಬ್ಯಾಡಕ್ಕೋ, ನಾನ್ ಮನೆಗೆ ಬತ್ತೀನಿ ಬಿಳಿಮಾವನಿಗೆ ಮಾತ್ರ ಇಕ್ಕು ಸಾಕು" ಹೇಳಿದ ಸತೀಶ.


ಸಾಮಾನ್ಯವಾಗಿ ಊರ ಬಾಗಿಲಿನಿಂದ ಹೊಲಕ್ಕೆ ಹೋಗುವ ಮಾರ್ಗ ,ಆದರೆ ಸತೀಶ ಬೇಕಂತಲೆ ಬುತ್ತಿ ಇಟ್ಟುಕೊಂಡು ಸೈಕಲ್ಲನ್ನು ಮಾರಮ್ಮನ ಗುಡಿಯ ಕಡೆ ತಿರುಗಿಸಿ ಹೊರಟ .

ಇದನ್ನು ತಿಮ್ಮಕ್ಕ ಗಮನಿಸಿದರೂ ಎನೋ ಹುಡುಗಾಟ ಇರಲಿ ಬಿಡು ಒಟ್ಟಿನಲ್ಲಿ ನಾನು ಇಂದು ಎರಡು ಕಿಲೋಮೀಟರ್ ನಡೆದು ಬುತ್ತಿ ಕೊಡುವುದು ತಪ್ಪಿತಲ್ಲ ಎಂದು ಮನೆಯ ಒಳಗೆ ನಡೆದರು.


ಕಾರಣವಿಷ್ಟೇ ಸುಜಾತ ಇಂದಾದರೂ ಮನೆಗೆ ಬಂದಿರಬಹುದೆ ? ಇಂದಾದರೂ ನಾನು ಅವಳ ನೋಡಬೇಕು ಎಂಬ ಹಂಬಲ, ಕಡೆ ಪಕ್ಷ ಅವಳು ಇಲ್ಲದಿದ್ದರೂ  ಅವಳಿದ್ದ  ಮನೆಯನ್ನು ದಿನಕ್ಕೆ ಒಮ್ಮೆಯಾದರೂ ನೋಡಿದರೆ ಏನೋ ಮನಸಿಗೆ ನೆಮ್ಮದಿ,ಎಂದು ತಿಳಿದಿದ್ದ ಸತೀಶ.


" ಏ ಎದ್ದಾಳಪ್ಪ ಯಾರು ನೀನು? ಯಾವೂರು? ಯಾಕೆ ಇಲ್ಲಿ ಮಲಗಿದ್ದಿಯಾ?"


ಕಪ್ಪನೆಯ ಡಾಂಬರ್ ಕಾದು ರಸ್ತೆಯಿಂದ ಕೆಳಗಿಳಿಯುತ್ತಿತ್ತು,ಸ್ವಲ್ಪ ದೂರ ನೋಡಿದರೆ ಕಪ್ಪನೆಯ ರಸ್ತೆಯ ಮೇಲೆ ನೀರು ಕಂಡಂತಾಗುತ್ತಿತ್ತು, ಬಿಸಿಲಿನ ಜಳಕ್ಕೆ ರಸ್ತೆಯ ಪಕ್ಕದ ಮಾಗಿ ಮಾಡಿದ ಕೆಂಪುಮಣ್ಣು ಬಣ್ಣ ಕಳೆದುಕೊಂಡಿತ್ತು


ಮುಖದ ಮೇಲೆ ಹಾಕಿಕೊಂಡ ತೂತುಗಳಿರುವ ಬಣ್ಣ ಕಳೆದುಕೊಂಡ ಲುಂಗಿಯನ್ನು ಸರಿಸಿ ಮುಲುಕುತ್ತಾ, ಮಧ್ಯಾಹ್ನದ ಬಿರುಬಿಸಿಲಿನಲ್ಲೂ  ನಡುಗುತ್ತಾ  ಕಷ್ಟ ಪಟ್ಟು ಮೇಲೇಳಲು ಪ್ರಯತ್ನ ಪಟ್ಟರು ಆ ವ್ಯಕ್ತಿ,

ವಯಸ್ಸು ನಲವತ್ತರಿಂದ ಐವತ್ತು ಇರಬಹುದು, ಗಡ್ಡ ಮೀಸೆಗಳು ಉದ್ದವಾಗಿ ಬೆಳೆದಿದ್ದರಿಂದ ಮುಖದ ಆಕಾರ ಅಸ್ಪಷ್ಟ, ಕೆದರಿರುವ ಬಿಳಿಮಿಶ್ರಿತ  ಕಪ್ಪು ಕೂದಲನ್ನು ನೋಡಿದರೆ  ಎಷ್ಟೋ ದಿನಗಳಿಂದ ಸ್ನಾನ ಮಾಡಿಲ್ಲ ಎಂಬುದು ಗೊತ್ತಾಗುತ್ತಿತ್ತು.


ಚಿಗುರು ಮೀಸೆಯ, ಬೆಳ್ಳನೆಯ ಸುಂದರ ಮೈಕಟ್ಟಿನ, ಸಾಧಾರಣ ಆಳ್ತನದ ಸತೀಶನ ನೋಡಿ,

" ನಾನು ಮಾರಣ್ಣ ಕಣಪ್ಪ ನಮ್ಮ ಊರು ಬಳ್ಳಾರಿ ಹತ್ರ ತೋರಣಗಲ್ಲು ಕಣಪ್ಪ ."ಎಂದು ನಡುಗುತ್ತ ಉತ್ತರಿಸಿದ ಮಾರಪ್ಪ.

" ಅದು ಸರಿ ಈ ಬಿಸ್ಲಾಗೆ ಈ ಜಾಲಿ ಮರದ ಕೆಳಗೆ ಯಾಕೆ ಮಲ್ಗಿದಿಯಾ?

" ಅಯ್ಯೋ ನಮ್ಮಂತವ್ರಿಗೆ ಜಾಲಿ ಮರ ಅಲ್ದೆ ಇನ್ಯಾವ್ ಬಂಗ್ಲೆ ಸಿಗುತ್ತಪ್ಪ ಮಲ್ಗಾಕೆ" 

ನೋವಿನಿಂದ ಮುಲುಕುತ್ತಾ , ಜೀವನದ ಮೇಲೆ , ಪ್ರಪಂಚದ ಮೇಲಿನ ಜಿಗುಪ್ಸೆಯಿಂದ ನುಡಿದ ಮಾರಪ್ಪ"

" ಅಣ್ಣಾ ಬೆಳಿಗ್ಗೆ ಊಟ ಗೀಟ ಮಾಡಿದ್ಯಾ ಇಲ್ವೊ?" ಕೇಳಿದ ಸತೀಶ

" ಅಯ್ಯೋ ನಿನ್ನೆ ಸಂಜೆ ಹಿರಿಯೂರಿನ ಟಿ ಬಿ ಸರ್ಕಲ್ ಹತ್ರ ಯಾರೋ ಪುಣ್ಯಾತ್ಮ ಒಂದ್ ಪ್ಲೇಟ್ ಇಡ್ಲಿ ಕೊಡಿಸಿದ್ದ ಕಣಪ್ಪ, ಅದನ್ನು ತಿಂದದ್ದೆ ಕೊನೆ ,ಹರ್ತಿಕೋಟೆ ಹತ್ತಿರ ಜಗ್ಗ ನಲ್ಲಿಲಿ ಈ ನೀರು ತುಂಬಿಸಿಕೊಂಡು ಕುಡಿತಿದಿನಿ " ಎಂದು 

ಅರ್ಧದಷ್ಟು ತುಂಬಿದ   ನೀರಿನ ಬಾಟಲ್ ತೋರಿಸಿದರು ಮಾರಣ್ಣ.


"ಇಗ ಕೈ ತೊಳ್ಕ ಒಂದ್ ಅರ್ಧ ಮುದ್ದೆ ಸಾರು ಐತೆ ಉಣ್ಣು"  ಅಂದ ಸತೀಶ


" ಸತೀಶನ ಮಾವ ಬಿಳಿಯಪ್ಪ ಹೊಲದಲ್ಲಿ ನೇಗಿಲು ಹೊಡೆಯಲು ಬಂದಿದ್ದರು ಅವರಿಗೆ ಬುತ್ತಿ ತಂದಿದ್ದ ಸತೀಶ.ಹೊಲದಲ್ಲಿ ಉಳುವ ಕಷ್ಟಕರ ಕೆಲಸ ಮಾಡುವ ಬಿಳಿಯಪ್ಪ ಯಾವಾಗಲೂ ಮೂರು ಮುದ್ದೆ ಉಣ್ಣುತ್ತಿದ್ದರು, ಯಾಕೋ ಅಂದು ಎರಡೂವರೆ ಮುದ್ದೆ ಉಂಡು  

"ಸತೀಶ ನನಗೆ ಸಾಕು ನೀನೆ ಉಣ್ಣು" ಅಂದರಂತೆ 

"ಬ್ಯಾಡ ಮಾವ ನಾನು ಮನೇಲೆ ಉಣ್ತೀನಿ" ಎಂದು ಬುತ್ತಿಯ ವೈರ್ ಬ್ಯಾಗ್ ನಲ್ಲಿ ಇಟ್ಟುಕೊಂಡು ದಾರಿಯಲ್ಲಿ ಸೈಕಲ್‌ ಮೇಲೆ ಬರುವಾಗ ಮಾರಪ್ಪನ ಕಂಡ.

 

ಕಷ್ಟ ಪಟ್ಟು ಎದ್ದು ತನ್ನ ಕೈಚೀಲದಲ್ಲಿದ್ದ ಅಲ್ಯೂಮಿನಿಯಂ ತಟ್ಟೆ ತೆಗೆದು ಅದಕ್ಕೆ ಸ್ವಲ್ಪ ನೀರು ಹಾಕಿ ತೊಳೆವ ಶಾಸ್ತ್ರ ಮಾಡಿ  ಮುದ್ದೆ ಸಾರು ಹಾಕಿಸಿಕೊಂಡು ಒಂದೇ ಸಮನೆ ಗಬಗಬನೆ ತಿನ್ನಲು ಶುರುಮಾಡಿದರು ಮಾರಣ್ಣ.

ಇದನ್ನು ನೋಡಿದ ಸತೀಶನಿಗೆ ಮೊದಲ ಬಾರಿ ಹಸಿವನ್ನು  ನೋಡಿದಂತಾಯಿತು. ಅವನ ಮಾವ ಮುಕುಂದಯ್ಯನವರು ಸತೀಶ ಒಮ್ಮೆ ಕಲ್ಲಿನ ಮುಸುರೆ ಬಾನಿಗೆ ತಟ್ಟೆಯಲ್ಲಿ ಹೆಚ್ಚಾಗಿ ಬಿಟ್ಟ ಮುದ್ದೆ ಬಿಸಾಕುವಾಗ ಹೇಳಿದ ಮಾತು ನೆನಪಾಯಿತು. " ಎಷ್ಟೋ ಜನ ಈ ಪ್ರಪಂಚದಲ್ಲಿ ಒಂದೊತ್ತು ಊಟ ಇಲ್ದೆ ಮಲಗ್ತಾರೆ ಇಂಗೆ ಉಣ್ಣೋ ಅನ್ನ ಪೋಲು ಮಾಡಬೇಡ"


"ಅದ್ಸರಿ ಮಾರಣ್ಣ ಇಂಗ್ಯಾಕೆ ಇಲ್ಲಿ ಮಲ್ಕಂಡಿದಿರಾ? ಇದು ಬಳ್ಳಾರಿ ರೋಡ್ ಅಲ್ವ ಯಾವುದಾದರೂ ಬಸ್ ಹತ್ತಿ ನಿಮ್ಮೂರ್ಗೆ ಹೋಗಾದಲ್ವ?

" ಅಯ್ಯೋ ,ಅಪ್ಪ ಬಸ್ ಗೆ ಹೋಗಾಕೆ ನನಗೂ ಆಸೆ , ಬಸ್ ಚಾರ್ಜು ಬೇಕಲ್ಲ? , "

"ಈಗ ನೀವು ಎಲ್ಲಿಂದ ಬಂದ್ರಿ?"

" ಬೆಂಗಳೂರಿನಿಂದ! "

ಕೇಳುತ್ತಲೆ ದಂಗಾದ ಸತೀಶ , ಸರಿ ಸುಮಾರು ನೂರಾ ಎಂಭತ್ತು ಕಿಲೋಮೀಟರ್ !.

" ಅಷ್ಟು ದೂರದಿಂದ ನಡೆದೇ ಬಂದಿರಾ?"

ಹೌದು ಎಂಬಂತೆ ತಲೆ ಆಡಿಸಿದರು ಮಾರಣ್ಣ.

"ಅದ್ಯಾಕೆ ಹೀಗೆ ನಡದೇ ಬಂದಿರಿ ದುಡ್ ಇರಲಿಲ್ಲವೆ?

" ಅಯ್ಯೋ ಅದೊಂದು ದೊಡ್ಡ ಕಥೆ ಕಣಪ್ಪ , ನಮ್ದು ಊರಾಗೆ ಜಮೀನೆಲ್ಲ ಇತ್ತು ,ಮಳೆ ಬೆಳೆ ಚೆನ್ನಾಗೆ ಆಗ್ತಿತ್ತು, ನಾನು ಬೇಸಾಯ ಮಾಡ್ಕೊಂಡು ಹೆಂಡ್ತಿ ,ಒಬ್ಬಳು ಮಗಳು, ಸುಖವಾಗಿ ಇದ್ವಿ.  ನಮ್ಮೂರ್ನಾಗೆ ಮೂರ್ನಾಲ್ಕು ಜನ ಬೆಂಗಳೂರಿನಲ್ಲಿ ಕೆಲ್ಸ ಮಾಡಿ ಚೆನ್ನಾಗಿ ದುಡಿದು ತಮ್ಮ ಮನೆಯನ್ನು ರಿಪೇರಿ ಮಾಡ್ಸಿ , ಸ್ವಲ್ಪ ದುಡ್ ಅವರ ಅಪ್ಪ ಅಮ್ಮನ ಕೈಗೆ ಕೊಟ್ಟು ಹೋದರು, ಅದನ್ನು ನೋಡಿದ ನನ್ ಹೆಂಡತಿ ,ನೀನೂ  ಬೆಂಗಳೂರಿಗೆ ಹೋಗಿ ದುಡಿ ,ನನಗೆ ಬಂಗಾರದ ಒಡವೆ  ಮಾಡಿಸು, ಬೆಂಗಳೂರಿನಲ್ಲಿ ಚೆನ್ನಾಗಿ ದುಡಿದರೆ  ನಮ್ಮ ಮಗಳ  ಓದಿಗೆ ಅನುಕೂಲ ಆಗುತ್ತದೆ ಅಂದಳು. ನಾನು ಬೇಡ, ಇಲ್ಲೇ ನಮ್ಮ ಜಮೀನಿನ ಕೆಲಸ ಮಾಡುವೆ ದೇವರು ನಮಗೆ ಕೊಟ್ಟಿರೋದೆ ಸಾಕು ಎಂದರೂ ಕೇಳಲಿಲ್ಲ.


ಅಂತೂ ಬೆಂಗಳೂರು ಸೇರಿ ವಾಚ್ಮೆನ್ ಕೆಲಸಕ್ಕೆ ಸೇರಿ ಆರು ತಿಂಗಳಲ್ಲಿ ಎರಡು ಬಾರಿ ಊರಿಗೆ ಹೋಗಿ ಹಣ ಕೊಟ್ಟು ಬಂದಿದ್ದೆ ,ಹೆಂಡತಿಯೇನೋ ಸಂತಸ ಪಟ್ಟಳು ,ಮಗಳು ಮಾತ್ರ ಯಾಕೋ   "ಅಪ್ಪ ನೀನು ಬೆಂಗಳೂರಿಗೆ ಹೋಗ ಬೇಡ ಇಲ್ಲೇ ಇರು ಎಂದು ಕಣ್ಣೀರಾಕಿದ್ದಳು".


"ಅಯ್ತು ಮಗಳೆ   ಬೇಗ ಬರುವೆ "ಎಂದು ಪುನಃ ಬೆಂಗಳೂರಿಗೆ ಬಂದೆ .ನನ್ ಕೆಲಸ ನೋಡಿದ ಸಾವ್ಕಾರರು ನನಗೆ ಸಂಬಳ ಜಾಸ್ತಿ ಮಾಡಿ ,ಮೊದಲು ಕೆಲಸ ಮಾಡುವ ವಾಚ್ಮನ್ ಕೆಲಸದಿಂದ ತೆಗೆದರು.ಇದರಿಂದ ಸಿಟ್ಟಾದ ಆ ವಾಚ್ಮನ್ ನಾನಿಲ್ಲದಾಗ ನಮ್ ಕಂಪನಿಯಲ್ಲಿ ಕಳ್ಳತನ ಮಾಡಿ ಅದನ್ನು ನನ್ನ ಮೇಲೆ ಹೊರಿಸಿದ, ಸಾವ್ಕಾರರು  ನನ್ನನ್ನು ಕೆಲಸದಿಂದ ತೆಗೆದರು . 


ಬೇರೆ ಕೆಲಸ ನೋಡುತ್ತಾ ಅಲೆದೆ ಕೆಲಸ ಸಿಗಲಿಲ್ಲ ,ಕೈಯಲ್ಲಿದ್ದ ಕಾಸು ಖಾಲಿಯಾಯಿತು .ಊರಿಗೆ ಹೋಗೋಣ ಎಂದು ಮೆಜೆಸ್ಟಿಕ್ ಗೆ ಬಂದು ಒಂದಿಬ್ಬರನ್ನು ಬಸ್ ಚಾರ್ಜ್ ಗೆ ಹಣ ಕೇಳಿದೆ ಅವರು ನನಗೆ ಅವಮಾನ ಮಾಡಿದರು ,ಇದರಿಂದ ಬೇಸತ್ತು ಅಲ್ಲಿಂದಲೆ ನಡೆದು ನಮ್ಮೂರು ಸೇರಲು ತೀರ್ಮಾನ ಮಾಡಿ ,ನಡೆಯುತ್ತಾ ಯಾರಾದರೂ ಏನಾದರೂ ಕೊಟ್ಟರೆ ತಿನ್ನುವೆ ,ಇಲ್ಲ ಅಂದರೆ ಇದೋ" ಎಂದು ನೀರಿನ ಬಾಟಲ್ ತೋರಿಸಿದರು ಮಾರಣ್ಣ

ಅವರ ಕಥೆ ಕೇಳಿ ಸತೀಶನಿಗೆ ಬಹಳ ಬೇಸರವಾಯಿತು.


" ಅಣ್ಣ ನಾನು ಸೈಕಲ್‌ ತಂದಿರುವೆ ,ನಿಮ್ಮನ್ನು ಯರಬಳ್ಳಿ ವರೆಗೆ ಸೈಕಲ್‌ ನಲ್ಲಿ ಕರೆದುಕೊಂಡು ಹೋಗುವೆ ಬನ್ನಿ " ಎಂದ ಸತೀಶ 

 ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಮತ್ತು   ಸಹಾಯ ಮಾಡುವ ಮಾಡುವ ಗುಣ ತಾಯಿ ಭೂದೇವಮ್ಮನಿಂದ ರಕ್ತಗತವಾಗಿ ಬಂದಂತಿತ್ತು ಸತೀಶನಿಗೆ.


ನಿಂತು‌ಕೊಳ್ಳಲು ಪ್ರಯತ್ನ ಪಟ್ಟ ಮಾರಣ್ಣ ನೋವಿಂದ ಬಳಲಿ ಬಿದ್ದರು ಅವರ ಎತ್ತಲು ಹೋದ ಸತೀಶ ನೋಡಿದ್ದು ಭಯಾನಕ, 

ತನಗರಿವಿಲ್ಲದೆ ಕಣ್ಣಲ್ಲಿ ನೀರು ಹರಿಯಲಾರಂಬಿಸಿದವು.

ಅಂಗಾಲುಗಳಲ್ಲಿ ರಕ್ತ ಜಿನುಗುತಿದೆ ,ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದೆ ,ಅಲ್ಲಲ್ಲಿ ಬೊಬ್ಬೆ ಬಂದಿವೆ ,ಕೆಲವೆಡೆ ಬಟ್ಟೆ ಕಟ್ಟಲಾಗಿದೆ.

" ಅಲ್ಲಾ ಅಣ್ಣ ಇಂತಹ ನೋವು ಎಂಗೆ ತಡ್ಕೊಂಡಿದಿರಿ "ಎಂದು ಬುತ್ತಿ ಬಟ್ಟೆ ಹರಿದು ಎರಡೂ ಕಾಲಿಗೆ ಕಟ್ಟಿ ಸೈಕಲ್ ಮೇಲೆ ಕೂರಿಸಿಕೊಂಡು ಯರಬಳ್ಳಿಯ ಮಾರಮ್ಮನ ಗುಡಿಯ ಬಳಿ ನಿಲ್ಲಿಸಿದ .


"ಯಾರಪ್ಪ ಸತೀಶ ಇವರು "

ಕೇಳಿದರು ಊರ ಪ್ರಮುಖ ಕಾಟಯ್ಯ

ಮಾರಣ್ಣನ ಕಥೆ ಕೇಳಿ ಆಗಲೆ ಯರಬಳ್ಳಿಯ ಆಸ್ಪತ್ರೆಗೆ ಸೈಕಲ್‌ ಮೇಲೆ ಕರೆದುಕೊಂಡು ಹೋಗಿ ಬ್ಯಾಂಡೇಜ್ ಹಾಕಿಸಿ ಇಂಜೆಕ್ಷನ್ ಕೊಡಿಸಿ , ಬಸ್ಚಾರ್ಜ್ ಗೆ ಸ್ವಲ್ಪ ಹಣ ಕೊಟ್ಟು , ಸಂಜೆಯ ಐದು ಗಂಟೆಯ  ನೀಲಕಂಠೇಶ್ವರ ಬಸ್ ಗೆ ಹತ್ತಿಸಿ 

" ಕಂಡಕ್ಟರ್ ಇವರನ್ನು ಬಳ್ಳಾರಿ ಗೆ ಇಳಿಸಿ"ಎಂದರು ಕಾಟಯ್ಯ.

ಸತೀಶನನ್ನು ಒಮ್ಮೆ, ಕಾಟಯ್ಯ ನನ್ನು ಒಮ್ಮೆ ನೋಡುತ್ತಾ ಗಳಗಳನೆ ಅಳಲಾರಂಬಿಸಿದರು ಮಾರಣ್ಣ.


ನೀಲಕಂಠೇಶ್ವರ ಬಸ್ ಹೊಗೆ ಉಗುಳುತ್ತಾ 

ಆಸ್ಪತ್ರೆಯ ದಿನ್ನೆ ಹತ್ತಿ ಚಳ್ಳಕೆರೆ ಕಡೆಗೆ ಚಲಿಸಿತು, ದೂರ ಹೋಗುವವರೆಗೂ ಕಿಟಕಿಯಾಚೆ ಮಾರಣ್ಣನ ಅಲ್ಲಾಡುವ ಕೈ ಕಾಣುತ್ತಿತು.....


"  ಮದ್ಯಾನ  ಬುತ್ತಿ ಕೊಡಾಕೋದಾನು ಈಗ ಬಂದೇನಪ್ಪ ಸಾವ್ಕಾರ ತಡಿ ಮಾವ ಬರ್ಲಿ ಹೇಳ್ತಿನಿ ,ಸೈಕಲ್‌ ಸಿಕ್ಕರೆ ಸಾಕು ಅದೇನ್ ಸುತ್ತಾಕೆ ಹೋಗ್ತಿಯೋ ಭಗವಂತನೆ ಬಲ್ಲ " 

ಸಂಜೆ ಐದೂ ಕಾಲು ಹೊತ್ತಿಗೆ ಮನೆಗೆ ಬಂದ ಸತೀಶನನ್ನು ಬೈಯಲು ಶುರು ಮಾಡಿದರು .

ಇದರ ಬಗ್ಗೆ ಪ್ರತಿಕ್ರಿಯೆ ನೀಡದೆ ಸಗಣಿ ತಟ್ಟಿ ತೆಗೆದುಕೊಂಡು ಸಗಣಿ ಬಾಸಾಕಲು ದನದ ಅಕ್ಕೆಗೆ ಹೋಗಿ ಅನ್ಯಮನಸ್ಕನಾಗಿ , ನನದೇ ಮಹಾಸಮಸ್ಯೆ ಎಂದು ಕೊಂಡಿದ್ದೆ ,ಇಂದು ಮಾರಣ್ಣನ ನೋಡಿ ನನ್ ಸಮಸ್ಯೆ ಏನೂ ಅಲ್ಲ ಅಲ್ಲವೆ? ದೇವರೆ ನನ್ನ ಸುಜಾತಳಿಗೆ ಇಂತಹ ಸಮಸ್ಯೆ ಬರದಿರಲಿ. ಮತ್ತೆ ಮನಸು ಅಲ್ಲಿಗೆ ಹೋಯಿತು.ಮಾರಣ್ಣ ಸುಖಿ ರೈತ ,ಯಾರದೊ ಆಸೆಗೆ ಬಲಿಯಾಗಿ, ಆಕರ್ಷಣೆ ಯಿಂದ ನಗರಕ್ಕೆ ಹೋಗಿ ಅನ್ನ ಕೊಡುವ ಕೈ ಅನ್ನ ಬೇಡುವ ಹೀನ ಸ್ಥಿತಿಯನ್ನು ಕಂಡು ಯಾಕೋ ಬೇಸರವಾಗುತ್ತದೆ, ಅಷ್ಟಕ್ಕೂ ಎಲ್ಲರೂ ಒದಿ ಕೆಲಸಕ್ಕೆ ಪಟ್ಟಣಕ್ಕೆ ಹೋದರೆ ಹಳ್ಳಿಯಲ್ಲಿ ದುಡಿಯುವರು ಯಾರು? ದೇಶಕ್ಕೆ ಅನ್ನ ನೀಡುವವರಾರು? ದೇಶಕ್ಕೆ ಬೆನ್ನೆಲುಬಾಗುವವರು ಯಾರು? ಕೃಷಿ ಮಾಡಿ ಗೌರವಯುತ ಜೀವನ ಸಾಗಿಸಲು ಸಾದ್ಯವಿಲ್ಲವೆ? 

ಮೊದಲ ಬಾರಿಗೆ ಸುಜಾತಳ ನೆನಪಿನ ಇತರ  ಜೀವನದಲ್ಲಿನ ಸಮಸ್ಯೆಗಳು ಮತ್ತು ರೈತರ ಬಗ್ಗೆ ಯೋಚಿಸಲಾರಂಬಿಸಿದ ಸತೀಶ .

ಒಂದು ರೀತಿಯಲ್ಲಿ ಮಾರಣ್ಣನ ಭೇಟಿ ಮಾಡಿದ ಮೇಲೆ ಸತೀಶನಿಗೆ ಬುದ್ದನಿಗೆ ಜ್ಞಾನೋದಯ ಆದಂತೆ ಅಲ್ಪಮಟ್ಟದ ಬದಲಾವಣೆಗಳನ್ನು ತಂದದ್ದು ಸುಳ್ಳಲ್ಲ

ಅದರ ಮುಂದಿನ ಸೂಚನೆ ಎಂಬಂತೆ ಮಂಗಳವಾರ ಬಿಳಿಯಪ್ಪ ಮಾವನ ಬದಲಿಗೆ ಇವನೆ ನೇಗಿಲು ಹೊಡೆಯಲು ಶುರು ಮಾಡಿದ ,ಬಿಳಿಯಪ್ಪ ‌ಇದೇ ಚಾನ್ಸು ಎಂದು ಶ್ರೀರಾಮಪ್ಪ ನಡೆಸುವ ಇಸ್ಪೀಟು ಕ್ಲಬ್ಗೆ ಹೋಗಿ ರಮ್ಮಿ ಹಾಡಲು ಕುಳಿತ...



ಮುಂದುವರೆಯುವುದು.....



ಸಿ ಜಿ ವೆಂಕಟೇಶ್ವರ







12 ಮಾರ್ಚ್ 2022

ಶ್ರೀದೇವಿ ಮಹಾತ್ಮೆ ನಾಟಕ ಪ್ರಸಂಗ .ಉದಕದೊಳಗಿನ ಕಿಚ್ಚು.ಭಾಗ ೨೦



ನಾಟಕ ಪ್ರಸಂಗ ದೇವಿ ಮಹಾತ್ಮೆ


" ಓಂ ನಮೋ ಭಾವಾನಿ ತಾಯೆ....ಒಂ ನಮೋ ಶಿವಶಕ್ತಿ ಕಾಯೆ....... ಓಂ ನಮೋ ಭವಭಕ್ತಿ ಕಾಯೆ........ ತಮೋ ನಿವಾರಿಣಿ ಶಕ್ತಿ ಶರಣೆ ಜಗಪಾಲಿನಿ...... ಒಂ ನಮೋ ಅಸುರಕುಲನಾಷಿನಿ ...... ಒಂ ನಮೋ ನಮೋ ಸಹಕಾರಣಿ........"
ಹಾರ್ಮೋನಿಯಂ ಶೃತಿಗೊಳಿಸುತ್ತಾ  ಆಲೂರು ಬಸವಾಚಾರ್ ತಲೆ ಅಲ್ಲಾಡಿಸುತ್ತಾ ಎಡಗೈ ಕಿರುಬೆರಳು ಇಲ್ಲದಿದ್ದರೂ ಶುದ್ದ ಶೃತಿಯಲ್ಲಿ ಸಂಗೀತ ಬಾರಿಸುತ್ತಾ ರಾಗವಾಗಿ, ಭಕ್ತಿಪೂರಕವಾಗಿ ಹಾಡುತ್ತಾ ,ಕೆಲವೊಮ್ಮೆ ನಿಂತಿರುವವರ ನೋಡಿ ,ಕಣ್ಣುಗಳಲ್ಲೇ ಏನೋ ಹೇಳುತ್ತಾ, ಕೆಂಪನೆಯ ಸಣ್ಣ ಟವಲ್ ನಿಂದ ಆಗಾಗ್ಗೆ ಬರುವ ಬೆವರನ್ನು ಒರೆಸುತ್ತಾ, ಲೆಗ್ ಹಾರ್ಮೋನಿಯಂ ನ್ನು ಎರಡೂ ಕಾಲಗಳಲ್ಲಿ ತುಳಿಯುತ್ತಾ, ಹಾಡನ್ನು ಮುಂದುವರೆಸಿ , ಕೈಯ ಒಂಭತ್ತೂ ಬೆರಳುಗಳನ್ನು ಬಿಳಿ,ಕಪ್ಪು ಮನೆಗಳ ಮೇಲೆ ಒಮ್ಮೆಲೆ ಇಟ್ಟು ಪಿಂ........ ಎನಿಸಿ ಲೆಗ್ ಹಾರ್ಮೋನಿಯಂ ಅನ್ನು ಒತ್ತುವುದನ್ನು ನಿಲ್ಲಿಸಿ ,
" ನೋಡ್ರಪ ಇದು ಅಮ್ಮನ ಪ್ರಾರ್ಥನೆ ,ಇದನ್ನು ಪ್ರತಿ ದಿನ ದೇವಿ ಪೋಟೋಗೆ ಭಕ್ತಿಯಿಂದ ಪೂಜೆ ಮಾಡಿ ಎಲ್ಲ ಪಾತ್ರಧಾರಿಗಳು ಸಾಲಾಗಿ ನಿಂತು ಭಕ್ತಿಯಿಂದ ಹೇಳ್ಬೇಕು ,ಕೊನೆಗೆ ನಿಮ್ ಸಂಘ ಅದ್ಯಾವದ್ ಅದು. ಆ.... ಅದೇ ಅಂಬಿಕಾ ಕಲಾ ಸಂಘಕ್ಕೆ ಅಂತ. ಒಬ್ಬರು ಅನ್ನಬೇಕು ಉಳಿದವರು. ಜೈ ಅನ್ನಬೇಕು.ಅರ್ಥ ಆಯ್ತಾ"  ಎಂದು ಕೆಂಪನೆಯ ಟವಲ್ ನಿಂದ ಹಣೆಯ ಮೇಲೆ ,ಕತ್ತಿನ ಮೇಲೆ ಕರೆಸಿಕೊಳ್ಳುತ್ತಾ ದೀರ್ಘವಾದ ವಿವರಣೆಯನ್ನು ಕೊಟ್ಟರು ನಾಟಕದ ಮಾಸ್ಟರ್ ಆಲೂರು ಬಸವಾಚಾರ್ .
ವಯಸ್ಸಿನಲ್ಲಿ ಬಸವಾಚಾರ್ ಅವರಿಗಿಂತ ದೊಡ್ಡವರು ಮೂರ್ನಾಲ್ಕು ಜನ ಉಳಿದವರು ಅವರಿಗಿಂತ ಚಿಕ್ಕವರು ಆದರೂ ಶಾಲೆಯಲ್ಲಿ ಶಿಕ್ಷಕರ ಮುಂದೆ ನಿಲ್ಲುವ ವಿಧೇಯ ವಿದ್ಯಾರ್ಥಿಗಳ ತರ ಕೈಕಟ್ಟಿ ನಿಂತಿದ್ದರು ಶ್ರೀ ದೇವಿ ಮಹಾತ್ಮೆ ನಾಟಕದ ಭಾವಿ ಪಾತ್ರಧಾರಿಗಳು  .

ಪ್ರತಿ ವರ್ಷವೂ ಜಾತ್ರೆಗೆ ಅಥವಾ ಬೇಸಿಗೆ ಕಾಲದಲ್ಲಿ ಕನಿಷ್ಟ ಮೂರ್ನಾಲ್ಕು ನಾಟಕಗಳನ್ನು ಆಡುವ ಯರಬಳ್ಳಿಯ ಗ್ರಾಮಸ್ಥರು  "ಸರ್ಪಸಾಮ್ರಾಜ್ಯ" ನಾಟಕವು ಬಹಳ ಸಲ ಪ್ರದರ್ಶನ  ಮಾಡಿದ್ದರು, "ಮೂರುವರೆ ವಜ್ರ "ಎಂಬ ದೊಂಬಿ ನಾಟಕ ಆಗೊಮ್ಮೆ ಈಗೊಮ್ಮೆ ಪ್ರದರ್ಶನ ಮಾಡಿದ್ದರು, ಕುರುಕ್ಷೇತ್ರ ನಾಟಕ ಆಡಲು ಬಹುಬಾರಿ ತಯಾರಿ ಮಾಡಿಕೊಂಡರೂ ಯಾಕೋ ಪ್ರದರ್ಶನ ಭಾಗ್ಯ ಕಂಡಿರಲಿಲ್ಲ.

ಹದಿನೈದು ದಿನಗಳ ‌ಹಿಂದೆ ರಂಗೇನಹಳ್ಳಿಯಲ್ಲಿ " ಶಾಂಭವಿ ಮಹಾತ್ಮೆ" ನಾಟಕ ನೋಡಲು ಹೋದ ಕೆಲ ಯುವಕರು ನಮ್ಮ ಊರಲ್ಲಿ ದೇವಿ ಮಹಾತ್ಮೆ ನಾಟಕ ಆಡಲು ತೀರ್ಮಾನ ಮಾಡಿ ಒಂದು ರಾತ್ರಿ ರಂಗಪ್ಪನ ಗುಡಿಯಲ್ಲಿ ಎಲ್ಲರೂ ಕಲೆತು ಈ ಬಗ್ಗೆ ಮಾತನಾಡಲು ಶುರು ಮಾಡಿದರು.
" ಶುಂಭ ನಿಶುಂಭರ ದರ್ಭಾರ್ ಪ್ಲಾಟ್ ಬಾಳ ಸೆಂದಾಗೈತೆ ದೇವಿ ಕಥೆ ಈ ಸಲ ನಮ್ಮೂರಾಗೆ ಆಡಾನ " ಮಹಲಿಂಗಪ್ಪ ನುಡಿದರು.
" ಏ ಆಲೂರು ಬಸವಾಚಾರ್ ಅವರೆ ಬರ್ದು ಅವರೇ ನಿರ್ದೇಶನ ಮಾಡುವ "ಶ್ರೀದೇವಿ ಮಹಾತ್ಮೆ" ಅರ್ಥಾತ್ ರಕ್ತಬಿಜಾಸುರ ವಧೆ ನಾಟಕ ಹೋದ ವಾರ ನಾನು ಕಳವಿಭಾಗಿನಲ್ಲಿ ನೋಡಿದೆ ಸಕ್ಕತ್ ಆಗೈತೆ ,ಹಾಡುಗಳು ಡೈಲಾಗ್ ಒಂದಕ್ಕಿಂತ ಒಂದು ಸೂಪರ್ ಆಗ್ಯಾದೆವೆ" ಪೂಜಾರ್ ಮಂಜ ಹೇಳಿದ .
ಈಗೆ ಒಬ್ಬೊಬ್ಬರು ಒಂದೊಂದು ಪ್ಲಾಟ್ ಬಗ್ಗೆ ಒಲವು ತೋರಿಸುತ್ತಾ ಅದೇ ನಾಟಕ ಬೇಕು ಎಂದು ಸಮರ್ಥನೆ ಮಾಡಲು ಇಳಿದರು .
" ಆತು ಈಗ ಈ ವರ್ಸ ದೇವಿ ನಾಟ್ಕ ಆಡೋದು ಪಕ್ಕಾ ಅಂತ ಆತು ಅಲ್ವೇನ್ರಪ್ಪ ,ಆದರೆ ಪ್ಲಾಟ್ ಯಾವ್ದು ಅನ್ನೋದು ತೀರ್ಮಾನ ಆಗಬೇಕು ,ಒಂದ್ ಕೆಲ್ಸ ಮಾಡಿ ,ನಾಳೆ ಇಷ್ಟೊತ್ತಿಗೆ ಶಾಂಭವಿ ಮಹಾತ್ಮೆ ,ಮತ್ತು ದೇವಿ ಮಹಾತ್ಮೆ ಎರಡೂ ಪ್ಲಾಟ್ ತಗಂಬರಿ ಆಮೇಲೆ ತೀರ್ಮಾನ ಮಾಡಾನ " ತೀರ್ಮಾನ ಹೇಳಿದರು ಕೆ ಜಿ ಕಾಟಯ್ಯ.
ಎಲ್ಲರೂ ಕಾರ ಮಂಡಕ್ಕಿ ತಿಂದು ಮನೆಯ ಕಡೆ ಹೊರಟರು.

ಆಲೂರು ಬಸವಾಚಾರ್ ರವರ ಶ್ರೀದೇವಿ ಮಹಾತ್ಮೆ ನಾಟಕವನ್ನೇ ಆಡಲು‌ ತೀರ್ಮಾನ ಮಾಡಿ ಅವರೇ ಪಾತ್ರಗಳನ್ನು ಹಂಚಿಕೊಂಡು ,ಎಷ್ಟು ದುಡ್ಡು ಖರ್ಚಾಗುತ್ತದೆ? ಯಾವ ಪಾತ್ರಕ್ಕೆ ಎಷ್ಟು ದುಡ್ಡು ?ಎಲ್ಲಾ ತೀರ್ಮಾನ ಮಾಡಿ ಕೆ ಜಿ ಕಾಟಯ್ಯ ರವರಿಗೆ ಇಡೀ ನಾಟಕದ ಜವಾಬ್ದಾರಿ ನೀಡಲಾಯಿತು.

" ಸ್ವಾಮಿ ಮುಂದಿನ್ ತಿಂಗ್ಳು ನಮ್ಮೂರಾಗೆ ನಾವು ನೀವ್ ಬರ್ದಿರೋ ದೇವಿ ಮಹಾತ್ಮೆ ನಾಟಕ ಆಡ್ಬೇಕು ಅದಕ್ಕೆ ನೀವೇ ಬಂದು ನಾಟಕ ಕಲಿಸಿಕೊಡ್ಬೇಕು" ವಿನಂತಿ ಮಾಡಿದರು ಕೆ ಜಿ ಕಾಟಯ್ಯ.
" ನೋಡಿ‌ ಇವ್ರೆ ನಿನ್ನೆ ಮೇಟಿಕುರ್ಕೆ ನವರು ಬಂದಿದ್ದರು ಅವರ ಊರಲ್ಲಿ ಮೂರನೆ ಸಲ ಈ ನಾಟಕ ಆಡ್ತಾರೆ ಅದಕ್ಕೆ ಬರಬೇಕು ಅಂತ ಕೇಳಿದರು ನಾನು ಒಪ್ಪಿಕೊಂಡು ಬಿಟ್ಟೆ ,ಒಂದ್ ದಿನ ಮೊದ್ಲೆ ಬರಬಾರ್ದಾಗಿತ್ತಾ? ಬಸವಾಚಾರ್ ನುಡಿದರು.
" ಸಾ ಆ ಊರ್ನವ್ರು ಈಗಾಗಲೇ ಎರ್ಡು ಸತಿ ದೇವಿ ಕಥೆ  ಆಡೆದಾರೆ ಅಂತ ನೀವೆ ಹೇಳಿದ್ರಿ ಇದೊಂದ್ ಸತಿ ಅವ್ರಿಗೆ ಯಾರಾದರೂ ನಿಮ್ ಶಿಷ್ಯರನ್ನು ಕಳಿಸಿ,
ದಯವಿಟ್ಟು ನಮ್ಮೂರಿಗೆ ನೀವು ಬರಲೇಬೇಕು, ಯಾಕಂದ್ರೆ ನಮ್ಮೂರಾಗೆ ಇದೆ ಮೊದ್ಲು ನಾವು ಅಮ್ಮನ ಕಥೆ ಆಡ್ತಾಇರೋದು" ದಯಾನೀಯವಾಗಿ ಬೇಡಿದರು ಕಾಟಯ್ಯ.
"ಒಳ್ಳೆ ಸಂದಿಗ್ದಕ್ಕೆ ಬಂತಲ್ಲ,,, ಆ , ನೀವು ನೋಡಿದರೆ ನಾನೇ ಬೇಕು ಅಂತೀರಾ ಅವರಿಗೆ ನಾನು ಮಾತು ಕೊಟ್ ಬಿಟ್ಟಿದಿನಿ,
ಒಂದ್ ಕೆಲ್ಸ ಮಾಡಿ ನಾಳೆ ನಿಮ್ಮಲ್ಲಿ‌ ಯಾರಾದರೂ ಒಬ್ಬರು ಬರ್ರಿ , ಮೇಟಿಕುರ್ಕೆಗೆ ಯಾರಾದರೂ ಅರ್ಜೆಸ್ಟ್ ಆದರೆ ,ನಾನು  ಹಾರ್ಮೋನಿಯಂ ಪೆಟ್ಟಿಗೆ ಹಾಕ್ಕೆಂಡು ನಿಮ್ಮೂರ್ಗೆ ಬತ್ತಿನಿ ,ಆವೂರ್ಗೆ ಯಾರೂ ಸಿಗಲಿಲ್ಲ ಅಂದ್ರೆ ಬೇಜಾರಾಗ್ ಬೇಡಿ " ಖಡಾಖಂಡಿತವಾಗಿ ಹೇಳಿದರು ನಾಟಕದ ಮಾಸ್ಟರ್.
" ಅಡ್ವಾನ್ಸ್ ಏನಾರಾ ಕೊಡಾನಾ ಸಾರ್ "
" ಅಯ್ಯೋ ದುಡ್ ಎಲ್ ಹೋಗುತ್ತಪ್ಪ  ಇರಲಿ ಇಟ್ಕಾ ನಾಳೆ ನೋಡಾನ"
ಕಾಟಯ್ಯ ನ‌ಜೊತೆ ಬಂದ ಇಬ್ಬರು ಟೀ ಕುಡಿದು ಯರಬಳ್ಳಿಯ ಕಡೆ ಹಿಂತಿರುಗಿದರು.

ಗುರುವಾರ ಸಂಜೆ ನಾಲ್ಕು   ಗಂಟೆಯಿಂದ ಐದು ಜನ ಊರ ಮುಂದೆ ನಿಂತು‌ ಹಿರಿಯೂರಿನ ಕಡೆಯಿಂದ ಬರುವ ಎಲ್ಲಾ ಬಸ್ಗಳನ್ನು ನೋಡುತ್ತಾ ಸಂತೆಗೆ ಹೋದ ಅಮ್ಮ ಕಾರ ಮಂಡಕ್ಕಿ ತರ್ತಾರೆ ಅಂತ ಕಾಯೋ ಚಿಕ್ಕ ಮಕ್ಕಳ ತರ ಕಾಯುತ್ತಿದ್ದರು ಕಾಟಯ್ಯ ಮತ್ತು ಸ್ನೇಹಿತರು.

ಅಂತೂ ಏಳು ಗಂಟೆಯ ಕರ್ನಾಟಕ ಬಸ್ಗೆ ಯಾವುದೋ ಪೆಟ್ಟಿಗೆ ಇಳಿಸುವ ದೃಶ್ಯ ಕಂಡು ಚಂಗನೆ ನೆಗೆದರು ಸದಾನಂದಯ್ಯ. ಅವರ ಕಾಯುವಿಕೆಗೆ ಮೋಸವಾಗಲಿಲ್ಲ
ಪೆಟ್ಟಿಗೆಯೊಂದಿಗೆ ಬಸವಾಚಾರ್ ಮಾಸ್ಟರ್ ಸಹ ಇಳಿದರು. ಕೆ ಜಿ‌ ಕಾಟಯ್ಯ ಮತ್ತು ಸ್ನೇಹಿತರ ಆನಂದಕ್ಕೆ ಪಾರವೇ ಇರಲಿಲ್ಲ ,ಅಂದೇ ನಾಟಕ ಆಡಿದಷ್ಟು ಖುಷಿಯಾಯಿತು.
" ಏ ಪಾತಲಿಂಗ ಬಾರೊ ಇಲ್ಲಿ ಈ ಹಾರ್ಮೋನಿಯಂ ಪೆಟ್ಟಿಗೆ ತಗಂಡೋಗಿ ರಂಗಪ್ಪನ ಗುಡಿ ಹತ್ರ ಇಡು ಪೂಜಾರ್ ಮಂಜುಗೆ ಹೇಳು ಅವನು ಒಳಗೆ ಇಟ್ಕಂತಾನೆ " ಅದೇಶ ನೀಡಿದರು ಕಾಟಯ್ಯ
" ಆತು ಗೌಡ ಎಂದು ತಲೆ ಮೇಲೆ ಟವಲ್ನಿಂದ ಸಿಂಬೆ ಮಾಡಿಕೊಂಡು ಮಣ ಭಾರದ ಲೆಗ್ ಹಾರ್ಮೋನಿಯಂ ಅನ್ನು ಹೊತ್ತು ರಂಗಪ್ಪನ ಗುಡಿಯ ಕಡೆ ನಡೆದ ಪಾತಲಿಂಗಪ್ಪ.
ನಾಳೆನೆ ಎಲ್ಲಾ ಪೋಟೋ ಪ್ರತಿಷ್ಟಾಪನೆ ಮಾಡಿ ಪ್ರಾಕ್ಟೀಸ್ ಸುರು ಮಾಡಿ ಬಿಡಾನ ಸರ್ , ನೀವು ನಮ್ಮ ಮನೇಲಿ ಇರಿ ನಮಗೇನು ತೊಂದರೆ ಇಲ್ಲ .ಎಂದು ಬಸವಾಚಾರ್ ರವರ ಜೊತೆ ಮಾತಾನಾಡುತ್ತಾ ಮಾರಮ್ಮನ ಗುಡಿಯ ಮುಂದೆ ನಡೆದು , ಊರ ಬಾಗಿಲ ದಾಟಿ ಅವರ ಮನೆಯ ಕಡೆ ನಡೆದರು ಕಾಟಯ್ಯ.

" ಆಂ  ಇನ್ನೊಂದು ಮಾತು, ದಿನ ರಾತ್ರಿ ಎಂಟು ಗಂಟೆಗೆ ಪ್ರಾಕ್ಟೀಸ್ ಶುರುವಾಗುತ್ತೆ ಎಲ್ಲಾ ಟೈಮಿಗೆ ಸರಿಯಾಗಿ ಬಂದು ಪ್ರಾರ್ಥನೆ ಇಂದ ಹಿಡಿದು ಅವತ್ತಿನ ಪ್ರಾಕ್ಟೀಸ್ ಮುಗಿಯವರೆಗೂ ಇರಬೇಕು, ನೀವು ಬಾಳ ಜನ ಓದಾಕ್ ಬರೆಯಾಕ್ ಬರದಿರೋ ಮೋಢರಿದಿರಿ ಅಂದರೆ ಅವ್ರು ಕಲೆಗಾರರು ಅಲ್ಲ ಅಂತ ಅಲ್ಲ, ಅಣ್ಣಾವ್ರು ಓದಿದ್ದು ಬರೆ ಮೂರ್ನೆ ಕ್ಲಾಸ್ ಆದರೂ ಅವ್ರ ನಟನೆ ? ಅದಕ್ಕೆ ಹೇಳ್ತಾ ಇದಿನಿ ಚೆನ್ನಾಗಿ  ಪ್ರಾಕ್ಟೀಸ್ ಮಾಡಿದರೆ ನಾಟಕ ಚೆನ್ನಾಗಿ ಆಗುತ್ತೆ ನಿಮಗೂ ಹೆಸ್ರು, ನನಗೂ ಹೆಸ್ರು, ಅಮ್ಮನ ನಾಟಕ ಆಡಿದ್ದು ನಮಗೆ ಅವ್ಳ ಆಶೀರ್ವಾದ ಸಿಗುತ್ತೆ, ಯಾರೂ ಯಾವುದೇ ಕಾರಣಕ್ಕೆ, ಬೀಡಿ‌ಸೇದಿ ,ಕುಡ್ಕಂಡೂ ಪ್ರಾಕ್ಟೀಸ್ ಮಾಡಕೆ ಬರಾಂಗಿಲ್ಲ ,ಗೊತ್ತಲ್ಲ ಇದು ದೇವಿ ನಾಟ್ಕ, ಇನ್ನೂ ನಾನು ನಿಮಗೆ ಹೇಳ್ಕೊಡೋವಾಗ ಆಗಾಗ ಬೈಯ್ಯಬಹುದು ಬೇಜಾರ್ ಮಾಡ್ಕೋಬಾರ್ದು. ......"ಹೀಗೆ ಏನು ಬೇಕು ಏನು ಬೇಡ ಎಂದು ಪಾತ್ರಧಾರಿಗಳಿಗೆ ಆಲೂರು ಬಸವಾಚಾರ್ ರವರು, ಹಾರ್ಮೋನಿಯಂ ಪೆಟ್ಟಿಗೆ ಮುಂದೆ ಕುಳಿತು ಎದೆಯುಬ್ಬಿಸಿ  ತಿಳುವಳಿಕೆ ಹೇಳುತ್ತಿದ್ದ ರೀತಿಯಲ್ಲಿ ನಾನು ಮಾಸ್ಟರ್ ಎಂಬ ಆತ್ಮವಿಶ್ವಾಸ ಇತ್ತು, ಅಲ್ಲಿಂದಲೇ ಪಾತ್ರಧಾರಿಗಳಿಗೆ ಅವರ ಬಗ್ಗೆ ಒಂದು ರೀತಿಯ ಭಯ ಮತ್ತು ಭಕ್ತಿ ಶುರುವಾಗಿತ್ತು. ಅವೆರಡಿದ್ದರೆ ಯಾವುದೇ ಕೆಲಸ ಸುಲಭವಾಗಿ ನೆರವೇರುತ್ತದೆ ಎಂದು ‌ಯಾರೋ ಹೇಳಿದ ನೆನಪಾಯಿತು.

" ಹೂಂ ಪ್ಲಾಟ್ ನೋಡೋರ್ಯಾರು? ಬಾ ತಗ ಪುಸ್ತಕ, ಮೊದಲ ಸೀನ್ ಕಶ್ಯಪ ಬ್ರಹ್ಮ ಬಾರೋ ಯಾರು?"
ಕುಂಬಾರ್ ರಾಮಣ್ಣ ಅಳುಕುತ್ತಲೆ ಬಂದು ಹಾರ್ಮೋನಿಯಂ ಪೆಟ್ಟಿಗೆ ಮುಂದೆ ನಿಂತು ,ಬಸವಾಚಾರ್ ರವರ ಕಾಲಿಗೆ ಬಿದ್ದು ,ಪೆಟ್ಟಿಗೆಗೆ ಕೈಮುಗಿದು ನಿಂತರು.
" ಓ ಜಗಜ್ಜಾಲಕ.. ಪೊರೆ ಅನಾಥ ರಕ್ಷಕ .....ಓ....ಜಗಜ್ಜಾಲಕ‌....." ಎಂದು ಹಾರ್ಮೋನಿಯಂ ನುಡಿಸುತ್ತಾ ಮಾಸ್ತರ್ ಹೇಳಿಕೊಟ್ಟರು .ಮಾಸ್ತರ್ ಮೂರು ಸಲ ಹೇಳಿದರೂ ರಾಮಣ್ಣ ಸುಮ್ಮನೆ ನಿಂತಿದ್ದರು ಹೇಳಪ್ಪ ಇದು ನಾಟಕದ ಮೊದಲನೆಯ ಹಾಡು ಮತ್ತು ನಿನ್ನ ಮೊದಲ ಹಾಡು.
ಬೇರೆ ಹುಡುಗರು ,ಸ್ನೇಹಿತರು ಏ ಹೇಳಲಾ ಎಂದು ಒತ್ತಡ ಹೇರಿದಾಗ
"ಓ..........ಜಗ ......ಜಗಲಕೆ ........."
" ಹೇ ಅದ್ಯಾದೋ ಜಗಲಕ ,ಬುಡ್ಡಲಕ? ಜಗಜ್ಜಾಲಕ ಅನ್ನು "
" ಮೇಷ್ಟ್ರೆ ಆಟುದ್ದ ಹೇಳಾಕೆ ಬರಲ್ಲ ಸ್ವಲ್ಪ ಸಣ್ ಹಾಡು ಹೇಳ್ಕೊಡಿ"
" ಲೇ ಇದೆ ಸಣ್ ಹಾಡು ,ಇನ್ನೂ ಮಹಿಷಾಸುರ ,ರಕ್ತಬೀಜ ,ದೇವಿ ಹಾಡು ಎಂತೆಂತ ದೊಡ್ಡ ಹಾಡು ಡೈಲಾಗ್ ಐದಾವೆ ಗೊತ್ತೇನೊ? ಹೇಳು ಓ .....ಜಗಜ್ಜಾಲಕ...
" ಓ.... ಜಗಾಲಕಲಕ" ಹಾಡಲು ಶುರು ಮಾಡಿದರು ರಾಮಣ್ಣ..
"ಹೇ ಕಾಟಯ್ಯ ಅದೆಲ್ಲಿ ಹಿಡ್ಕಂಬಂದ್ರೀ ಇವ್ನ ಮೊದಲನೇ ಪಾತ್ರ ,ಎಂಗ್ಮಾಡ್ಬೇಕು, ಇವುನೊಳ್ಳೆ, ತೊ ..ಎಂದು ಬೇಜಾರು ಮಾಡಿಕೊಂಡರು.
" ಹೇ ರಾಮ ಯಾಕಲ ಮೇಷ್ಟ್ರು ಹೇಳಿಕೊಟ್ಟಂಗೆ ಹೇಳಲ"
" ಯಾಕೋ ನ್ಯಾಲಿಗೆ ತಿರಗ್ತಾ ಇಲ್ಲ ಕಣಣ್ಣ ನಾಳೆ ಹೇಳ್ತಿನಿ" ಅಂದ ರಾಮಣ್ಣ
" ಹುಂ .ಹೋಗಲಿ ಮಾತು ಹೇಳು"
"ಮಾನವನು ....ಮಾನವನು ...ಮಾನವನು...ಅದೆಷ್ಟು ಮಾನವನು ಮುಂದಕ್ಕೇಳಪ್ಪ ಹೇ ಪ್ಲಾಟ್ ಮೇನೇಜರ್ ಎತ್ತಿ ಕೊಡಪ್ಪ
" ಮಾನವನು ತನ್ನ‌ ಆತ್ಮಶುದ್ದಿ ಪಡೆಯಬೇಕಾದರೆ ಕಾಯಾ, ವಾಚಾ, ಮನಸಾ ಈ ತ್ರಿ ಕರಣ ಗಳು ಶುದ್ಧವಾಗಿರಬೇಕು" ಹೇಳಿಕೊಟ್ಟರು ಪ್ಲಾಟ್ ಮೇನೇಜರ್.
ರಾಮಣ್ಣ ತಲೆ ಕೆರದುಕೊಂಡು ಹಿ...ಹಿ... ಮಾತು ಗಟ್ಟಿ ಮಾಡಿಲ್ಲ ಸಾರ್ ನಾಳೆ ಹೇಳ್ತಿನಿ." ಅಂದರು
" ಏನ್ ಕಾಟಯ್ಯ ಎಲ್ಲರಿಗೂ ಮಾತು ಬರುತ್ತೆ ಹಾಡು ಹೇಳ್ಕೊಡ್ಬೇಕು ಅಂದಿದ್ರಿ ಏನಿದು? " ಕೇಳಿದರು ಮೇಷ್ಟ್ರು
" ನಾಳೆ ಎಲ್ಲಾ ಹೇಳ್ತಾರೆ ಸಾ"
"ಅಂಗಾದರೆ ನಾಳೆ ಪ್ರಾಕ್ಟೀಸ್ ಮಾಡಾನ ,ಹಾರ್ಮೊನಿ‌ ಇಳಸ್ಲಾ?
" ಏ ಬ್ಯಾಡ ಸಾ, ಬ್ಯಾರೆ ಪಾತ್ರ ಪ್ರಾಕ್ಟೀಸ್ ಮಾಡ್ಸನಾ"
" ನಾರದ ಯಾರು ಬಾರಪ್ಪ "
ಕರೆದರು ಮೇಷ್ಟ್ರು
ಊರಲ್ಲಿ ಹತ್ತನೇ ಕ್ಲಾಸ್ ಓದಿರೊ ಕೆಲವರಲ್ಲಿ ಮುರಾರಿ ಕೂಡ ಒಬ್ಬ ಮೂರುವರೆ ವಜ್ರದಲ್ಲಿ ಒಂದು ಸಣ್ಣ ಪಾತ್ರ ಚೆನ್ನಾಗಿ ಮಾಡಿದ್ದ  ಅದಕ್ಕೆ ಈ ನಾಟಕದಲ್ಲಿ ಪ್ರಮೋಮೊಶನ್ ಕೊಟ್ಟು ,ನಾರದನ ಪಾತ್ರ ಕೊಟ್ಟಿದ್ದರು.
ಲುಂಗಿ ಮೇಲೆ ಕಟ್ಟಿಕೊಂಡು ,ಪೆಟ್ಟಿಗೆ ಮುಂದೆ ನಿಂತು ಮೇಷ್ಟ್ರು ಮತ್ತು ಪೆಟ್ಟಿಗೆಗೆ ಕೈಮುಗಿದು ನಿಂತರು
" ಲುಂಗಿ ಕೆಳಗೆ ಬಿಡಪ್ಪ ,ಏನ್ ಎಲ್ಲರಿಗೂ ತೋರುಸ್ತಿಯಾ? "  ನಗುತ್ತಲೆ ಹೇಳಿದರು ಮೇಷ್ಟ್ರು, ಎಲ್ಲರೂ ಗೊಳ್ ಎಂದು ನಕ್ಕರು.
" ಅದ್ಯಾಕ್ರಯ್ಯ ನಕ್ತಿರಾ , ನೀವು ಅಷ್ಟೇ ಯಾರೆ ಪಾತ್ರಧಾರಿಗಳು ಬಂದು ಪೆಟ್ಟಿಗೆ ಮುಂದೆ ನಿಂತಾಗ ಲುಂಗಿ‌ ಇಳಿಬಿಟ್ಟಿರಬೇಕು ,ಪಟಪಟಿ ನಿಕ್ಕರ್ನಾಗೊ,ಕಾಚಾದಾಗೋ ಬಂದ್ರೆ ನಾನ್ ಒಳಗೆ ಸೇರ್ಸಲ್ಲ "
ಮತ್ತೆ ಕಿಸಕ್ ಎಂದ ಶಬ್ದ ಕೇಳಿ ಯಾರದು? ಅಂದರು ಮೇಷ್ಟ್ರು ,
ಹೇ ಮೇಷ್ಟ್ರು ಬಾಳ ಕಟ್ನಿಟ್ಟು ಕಣಪ್ಪ ಎಂದು ಯಾರೊ ಮೆಲ್ಲಗೆ ಹೇಳಿದ ಮಾತು ಮೇಷ್ಟ್ರು ಕಿವಿಗೆ ಬಿದ್ದರೂ ಕೇಳಿಸದವರಂತೆ ಒಳಗೊಳಗೆ ಸಂತೋಷಪಡುತ್ತಾ
" ಹುಂ ಹಾಡು ಎತ್ಗೆಳಪ್ಪ ನಾರದ"
" ಕಲಹ.... ಪ್ರಿಯನೆಂದೆಲ್ಲ ....ಕರೆಯುವರು..... ನನ್ನ..... ಸಲಹೆಯನು ....ನೀಡುವ ‌
.. ನಾರದನ ದೂರುವರು ಎಲ್ಲಾ....... "
"ಹುಂ ಪರಾವಾಗಿಲ್ಲ ಸ್ವಲ್ಪ, ತಾಳ ,ಮತ್ತು ರಾಗದ ಕಡೆ ಗಮನ ಕೊಡು ,ಹಾರ್ಮೋನಿಯಂ ಕಡೆ ಗಮನ ಇರ್ಲಿ ,ಎಲ್ಲಿ ನಾರದನ ಕೈಯಲ್ಲಿ ‌ಚಕ್ಕೆ ನೆ ಇಲ್ಲ, "
" ನಾಳೆ ತತ್ತಿನಿ ಸಾರ್"
" ಇದೊಳ್ಳೆ ಕತೆ ಆತಲ್ಲಾ ಎಲ್ಲಾ ನಾಳೆನೆ ಅಂತಿರಾ. ನಾವು ಶುಕ್ರವಾರದ ಬದಲು ಶನಿವಾರ ಪ್ರಾಕ್ಟೀಸ್ ಶುರು ಮಾಡ್ಬೇಕಾಗಿತ್ತು. ಅಲ್ವೇನ್ರಯ್ಯ? ಅಂದರು ಮೇಷ್ಟ್ರು.
" ಮಾತ್ ಬತ್ತವೇನಯ್ಯ ನಾರದ "
"ಇನ್ನೂ ಕೆಲವು ಗಟ್ ಮಾಡ್ಬೇಕು ಸರ್"
" ನೋಡಪ್ಪ ದೇವಿ  ನಾಟ್ಕ ಸಕ್ಸಸ್ ಆಗ್ಬೇಕು ಅಂದರೆ ನಾರದ ಮುಖ್ಯ ಎಲ್ಲಾ ಹಾಡು ಮಾತು ಪಕ್ಕಾ ಇರಬೇಕು ಅರ್ಥ ಆತಾ?
" ಆತು ಸರ್ ನಾಳೆ ಗಟ್ ಮಾಡ್ಕೆಂಡು ಬತ್ತೀನಿ" ಎಂದರು ಮುರಾರಿ
ಆತು ಮುಂದ್ಲು ಪಾತ್ರ ದೇವೇಂದ್ರ ಯಾರು ಬಾರಪ್ಪ"
ಆರು ಅಡಿ ಎತ್ತರದ ದಪ್ಪ ದೇಹ ,ನಡೆಯುವಾಗ ,ಅಡ್ಡಡ್ಡ ನಡೆಯುವ, ಗಿರಿಜಾ ಮೀಸೆ ಬಿಟ್ಟ ವೈಟ್ ಅಂಡ್ ವೈಟ್ ಅಂಗಿ ಪಂಚೆ  ಹಾಕಿದ ಸದಾನಂದಪ್ಪ ಬಂದು ರಾಮಣ್ಣನಂತೆ ಮೇಷ್ಟ್ರು ಮತ್ತು ಪೆಟ್ಟಿಗೆಗೆ ಕೈ ಮುಗಿದು  ನಿಂತರು.
"ಹುಂ ನೀನೇನಪ್ಪ ದೇವೇಂದ್ರ ? ಮೊದಲನೆ ಹಾಡು ಇವತ್ತು ಹೇಳ್ ಕೊಡ್ತಿನಿ ಹೇಳು"  ಎಂದು ಹಾರ್ಮೋನಿಯಂ ನುಡಿಸುತ್ತಾ
"ಆರು ಸಮರು ಎನಗೆ ......ಈ ಧರೆಯೊಳಗಾರು ಸಮರು ನನಗೆ........." ಹುಂ ಹೇಳು ಅಂದರು ಮೇಷ್ಟ್ರು
" ಆರು ಸಾಂಬರು ನನಗೆ ... ಆರು ಸಾಂಬಾರು ನನಗೆ"
"ಹೇ... ಹೇ... ನಿಲ್ಸಯ್ಯ  ಎಲ್ಲೈತೆ ಸಾಂಬರ್ ? ಸಾಂಬಾರ್ ಅಲ್ಲ ಕಣಯ್ಯ ಅದು ಸಮರು . ಸಮ ..ಸಮ... ರು ಹೇಳು"
"ನಾನು ಓದಿಲ್ಕ ಮೇಷ್ಟ್ರೆ ನ್ಯಾಲಿಗೆ ತಿರ್ಗಲ್ಲ ನೀವೆ ನಿದಾನಕ್ಕೆ ಹೇಳ್ಕೊಡ್ಬೇಕು, ನಾನು ಬೇಕಾದರೆ ಹಗಲೊತ್ತು ಪ್ರಾಕ್ಟೀಸ್ ಮಾಡಾಕೆ ಬತ್ತಿನಿ , ಸಣ್ ಹುಡುಗ್ನಿಂದ ನಾಟ್ಕ ಆಡ್ಬೇಕು ಅಂತ ಆಸೆ ಸಾ ,ಈ ನಾಟ್ಕಕ್ಕೆ ನನ್ದು ಅಲ್ದೆ ಮೂರು ಜನಾ ಪಾತ್ರಧಾರಿಗಳ ದುಡ್ ನಾನೆ ಕೊಟ್ಟಿದಿನಿ ಸಾ,"ಎಂದು ವಿಧೇಯತೆಯಿಂದ ನುಡಿದಾಗ ,
"ಆತು ಕಣಯ್ಯ ನಿನಗೇನೊ ಆಸೆ ಇದೆ ,ಹಾಡೆ ಬರಲ್ಲ ಸರಿಯಾಗಿ, ಮೊದಲು ಪದಗಳ ಉಚ್ಚಾರ ಕಲ್ತುಕೋ ," ಎಂದರು ಮೇಷ್ಟ್ರು
" ಆ...ಹಾ ...ಹ ಎಂತಹ ಪಾತ್ರಾಧಾರಿಗಳ ಕಲ್ಸೆದಿರಾ ಕಾಟಯ್ಯ? ಯಾರಿಗೂ ಮಾತೆ ಬರಲ್ಲ, ಹಾಡು ಹೇಳೋ ಗಂಧ ಇಲ್ಲ, ಇವರನ್ನು ಕಟ್ಕೊಡು ಪೌರಾಣಿಕ ನಾಟಕ ಎಂಗ್ರಿ ಹಾಡ್ಸೋದು ? ಅದೂ ಇನ್ನೂ ಇಪ್ಪತ್ಮೂರು ದಿನ ಐತೆ ನಿವ್ ಪಿಕ್ಸ್ ಮಾಡಿರೋ ನಾಟಕ ಆಡೋ ದಿನ ಆಗುತ್ತೇನ್ರಿ ? ನನಗೇನೋ ಇವರನ್ನೆಲ್ಲ ತಿದ್ದೋಕೆ ಒಂದ್ ತಿಂಗಳಾದ್ರೂ ಬೇಕು ಅನುಸುತ್ತೆ ಕಣಯ್ಯ.
" ಅಂಗನ್ಬೇಡಿ ಸಾ , ಇವತ್ತು ಮೊದಲು ಅದಕ್ಕೆ , ನಾಳೆಯಿಂದ ಎಲ್ಲಾ ಚೆನ್ನಾಗಿ ಪ್ರಾಕ್ಟೀಸ್ ಮಾಡ್ತಾರೆ, ನಾಟ್ಕ ಮುಂದಕ್ಕೆ ಹಾಕಿದ್ರೆ ಮಳೆಗಾಲ ಬರುತ್ತೆ, ನಮಿಗೆ ಹೊಲ ಮನೆ ಕೆಲ್ಸ ಜಾಸ್ತಿ ,ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಂಡು ಇವ್ರಿಗೆ ನೀವೆ ಕಲ್ಸಬೇಕು ಸರ್ ಅದಕೆ ನಾವ್, ನೀವೇ ಬೇಕು ಅಂತ ನಿಮ್ ಹತ್ರ ಬಂದಿದ್ದು" ಒಂದೇ ಸಮನೆ ಬೇಡಿದರು ಕಾಟಯ್ಯ
ದೀರ್ಘವಾದ ನಿಟ್ಟುಸಿರು ಬಿಟ್ಟ ಮೇಷ್ಟ್ರು
" ಹುಂ ಆತು ನೋಡಾನಾ ಏ ಮುಂದಿನ ಪಾತ್ರ ಯಾರು ಬರ್ರಪಾ"
" ಅಣ್ಣ ಮಹಿಷಾಸುರ ಪಾತ್ರ ಮಾಡಿರೋ ಮಧು ಬಂದಿಲ್ಲ ಅಣ್ಣ" ಹೊರಕೇರಿ ಅಂದ
ಕಾಟಯ್ಯನಿಗೆ ಪದೇ ಪದೇ ಮೇಷ್ಟ್ರು ಸಿಟ್ಟಾಗುವುದು, ಪಾತ್ರಧಾರಿಗಳು ಸರಿಯಾಗಿ ಮಾತು ಹೇಳದಿರುವುದು , ಇದೆಲ್ಲದ್ದರಿಂದ  ಬೇಸರಗೊಂಡು ಒಮ್ಮೆಲೆ ಎಗರಿಬಿದ್ದರು
" ಕತ್ತೆ ಕಾಯೋಕ್ ಹೋಗ್ರಿ ನನ್ ಮಕ್ಕಳ ಒಬ್ಬನಿಗಾದರೂ ಜ‌ಬಾದಾರಿ ಇಲ್ಲ,"ಹೊರಕೇರಿ ಮೇಲೆ ರೇಗಿದರು
" ನಾನೇನು ಮಾಡ್ದೆ ಅಣ್ಣ "
"ನೀನಲ್ಲಲೆ ಅವನ್ ಮಧು  ಎಲ್ ಹಾಳಾಗೋದ?"
"ನಾನು ಎಷ್ಟಂತ ಒಬ್ಬನೇ ತಲೆ ಕೆಡಿಸ್ಕಳ್ಲೀ, ನೋಡ್ರಿ ಸಾ ಇವರನ್ನು ಕಟ್ಗಂಡು ಎಂಗೆ ನಾಟ್ಕ ಆಡ್ಸಾದು?
" ಅಣ್ಣಾ ಕಾಪಿ ಕಾಸ್ಕೆಂಡು ಬಂದಿದಿನಿ ಎಲ್ಲಿಡ್ಲಿ? ಸಿದ್ದಮಲ್ಲ ಕೇಳಿದ
" ನನ್ ತಲೆ ಮ್ಯಾಲೆ ಸುರಿ" ಮತ್ತೂ ರೇಗಿದರು ಕಾಟಯ್ಯ
" ಹೋಗ್ಲಿ ಬಿಡಯ್ಯ ಕಾಟಯ್ಯ ಅದ್ಯಾಕೆ ಸಿಟ್ಟಾಕ್ತಿಯಾ ಇವತ್ತು ಮೊದಲ ದಿನ ಸಾಕು ಇಲ್ಲಿಗೆ ನಿಲ್ಸಾನಾ ಪ್ರಾಕ್ಟೀಸ್ ನ ಏ ಕಾಪಿ ಲೋಟಕ್ಕೆ ಹಾಕಿ ತಾಂಬಾರ " ಎಂದರು ಮೇಷ್ಟ್ರು.
ಕಾಫಿ ಕುಡಿದು ಮೇಷ್ಟ್ರು ಹಾರ್ಮೋನಿಯಂ ಪೆಟ್ಟಿಗೆ ಇಳಿಸಿದಾಗ ರಾತ್ರಿ ಒಂದೂವರೆ .
ಎಲ್ಲಾ ಪಾತ್ರಧಾರಿಗಳು ಅವರವರ ಮನೆ ಕಡೆ ಹೊರಟರೆ
ಕಾಟಯ್ಯ ಮತ್ತು ಮೇಷ್ಟ್ರು ಕಾಟಯ್ಯನ ಮನೆ ಕಡೆ  ಹೆಜ್ಜೆ ಹಾಕಿದರು ಗೌಡರ ಮನೆ ಮುಂದಿನ ನಾಯಿ ಜೋರಾಗಿ ಬೊಗಳಲಾರಂಭಿಸಿತು
" ಹೇ ಮುಚ್ಚು ಬಾಯಿ " ಎಂದು ಗದರಿಸಿದರು ಕಾಟಯ್ಯ.
ನಾಯಿ ಇನ್ನೂ ಜೋರಾಗಿ ಬೊಗಳಲಾರಂಭಿಸಿತು.

"ಅವನ್ ಧಿಮಾಕು ಜಾಸ್ತಿ ಆತು,‌ ಅವನ್ ಇಲ್ಲ ಅಂದ್ರೆ ನಾಟಕ ಆಗಲ್ವಾ? ಇನ್ನೂ ಯಾರಾದ್ರೂ ಇದ್ರೆ ನೋಡ್ರಿ, ಎಂದು ಸಿಟ್ಟಿನಿಂದ ‌ಕೇಳಿದರು ಕಾಟಯ್ಯ, ಅಣ್ಣ ಇವನು ಮಾಡ್ತಾನೆ ಅಂತ ಸುಮ್ಮನೆ ಜೋಕ್ ಮಾಡಾಕೆ ಹೇಳಿದರು ಪ್ರಾಕ್ಟೀಸ್ ಮಾಡೋ ಹುಡುಗ್ರು
" ಯಾರು ? ಸತೀಶನ ? ಏನೋ ಮಾಡ್ತಿಯೇನೋ? " ಕೇಳಿದರು ಕಾಟಯ್ಯ.
ಸುಜಾತಳ ಕಾಣದೆ ಎಲ್ಲಿರುವಳು ಎಂದು ಮಾಹಿತಿ ಸಿಗದೆ ಯಾವಾಗಲೂ ಖಿನ್ನವಾಗಿ,ಕಲಿತಿರುವ ಚಟ ಬಿಡಲಾರದೇ ಚಡಪಡಿಸುವ ಅವನ ನೋಡಿ ,ಚಿದಾನಂದ ದಿನವೂ ನಾಟಕದ ಪ್ರಾಕ್ಟೀಸ್ ಹತ್ರ ಸತೀಶನ ಕರೆದುಕೊಂಡು ಬರುತ್ತಿದ್ದ. ಈ ಪ್ರಾಕ್ಟೀಸ್ ನೋಡಿಯಾದರೂ ಅವಳ ಮರೆಯಲಿ‌, ಎಂಬ ಆಶಯ ಅವನದು.ಸತೀಶ ಮಹಿಷಾಸುರ ನ  ಪಾತ್ರ ಮಾಡ್ತಾನೆ ಅಂತೆ ಹೇಳಿದ್ದೇ ಚಿದಾನಂದ್.
ಕಾಟಯ್ಯ ಇದ್ದಕ್ಕಿದ್ದಂತೆ ಸತೀಶನನ್ನು ಕೇಳಿದ ಪ್ರಶ್ನೆಗೆ ಏನು ಹೇಳಬೇಕೆಂದು ತೋಚಲಿಲ್ಲ ,ಇಲ್ಲ ಎನ್ನಲು ಧೈರ್ಯ ಬರಲಿಲ್ಲ ಏಕೆಂದರೆ ಇವನು ಹತ್ತನೆಯ ತರಗತಿಯಲ್ಲಿ ಹೆಚ್ಚು ಅಂಕ ಬಂದಾಗ ಮನೆಗೆ ಬಂದು ಹೂವಿನ ಹಾರ ಹಾಕಿ ಐದು ನೂರು ಹಣ ಕೊಟ್ಟು ನೀನು ನಮ್ ಊರ ಮರ್ಯಾದೆ ಹೆಚ್ಚು ಮಾಡಿದೆ ಕಣ ಹುಡುಗ ಎಂದು ಹೊಗಳಿ ಭೇಷ್ ಎಂದು ಬೆನ್ನು ತಟ್ಟಿದ್ದರು.ಅದರಿಂದ ಅವನು ಅಷ್ಟು ಬೇಗ ಪ್ರತಿಕ್ರಿಯೆ ನೀಡದೆ ಸುಮ್ಮನೆ ಇದ್ದ
" ಸುಮ್ಮನೆ ಇದಾನೆ ಅಂದರೆ ಪಾತ್ರ ಮಾಡ್ತಾನೆ ಅಂತಾನೆ ಅರ್ಥ " ಹೇಳೆಬಿಟ್ಟ ಚಿದಾನಂದ್  ಬೇರೆಯವರಿಗೆ ಚಿದಾನಂದ್ ಜೋಕ್ ಮಾಡಿ ಸತೀಶನ ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದಾನೆ ಎನಿಸಿದರೂ ,ಚಿದಾನಂದ್ ಸತೀಶನ ನಟನೆಯನ್ನು ಯೂನಿಯನ್ ಡೇ ದಿನ ನೋಡಿದ್ದ ,ಅದಕ್ಕಿಂತ ಮುಖ್ಯವಾಗಿ ಈ ಮೂಲಕವಾದರೂ ಸುಜಾತಳ ಮರೆಯಲಿ ಎಂಬ ಆಸೆ.
" ಆತು ಹೇಳಣ ಮಾಡ್ತಾನೆ, ಸತೀಶನ ಮಾವ ಮುರಾರಿ ಹೇಳೆಬಿಟ್ಟರು " ರೇಡಿಯೋದಲ್ಲಿ ಆಗಾಗ್ಗೆ ಬರುವ ಹಾಡುಗಳನ್ನು ಯಥಾವತ್ತಾಗಿ ಹೇಳುವುದನ್ನು, ನೋಡಿದ ಸಿನಿಮಾ ಡೈಲಾಗ್ ಸ್ಪಷ್ಟವಾಗಿ ಹೇಳುವ ಅವನ ಕಲೆಯನ್ನು ಮುರಾರಿ ಮನೆಯಲ್ಲಿ ಗಮನಿಸಿದ್ದರು .
" ಹುಂ ಇನ್ನೇನು ಮಾವ ನಾರದ ,ಅಳಿಯ ಮಹಿಷಾಸುರ ,ಇನ್ನೊಂದಿಬ್ಬರು ನೀವೇ ಯಾರಾರ ಆಡ್ರಪ್ಪ ನಾಟಕ ನಿಮ್ದೆ ಆಗುತ್ತದೆ " ಚಿದಾನಂದ್ ನಕ್ಕ ಎಲ್ಲರೂ ನಕ್ಕರು.
"ನಾಳೆ ಪ್ಲಾಟ್ ತಗಂಡು ಮಾತು ಹಾಡು ಬರ್ಕ ಎಂಗೂ ರಜ ಐತಲ್ಲ, ಚೆನಾಗಿ ಆಡ್ಬೇಕು ಕಣಪ್ಪ ಆ ನನ್ ಮಗ ಮಧು ಏನ್ ಅವ್ನೆ ದೊಡ್ಡ ನಟ ಅಂದ್ಕಂಡದಾನೆ ಎಂದು ಸತೀಶನ ಹತ್ತಿರ ಬಂದು ಎರಡನೇ ಸಲ ಬೆನ್ನು ತಟ್ಟಿದರು"
"ಆತಣ್ಣ ಟ್ರೈ ಮಾಡ್ತಿನಿ " ಎಂದ ಸತೀಶ.

ಮೂರು ದಿನಗಳ ನಂತರ ಮಾತು ಹಾಡು ಕಲಿತುಕೊಂಡು‌ ಪ್ರಾಕ್ಟೀಸ್ ಮಾಡಲು ಬಂದ ಸತೀಶ
"ಮಹಿಷೇಷನೆಂದೆನಿಸಿ  ಮಹಿಯೊಳಗೆ ಮೆರೆವೆ........ ಜೈಸುತಲಿ ವೈರಿಗಳ ಸೆರೆಪಿಡಿದು ತರುವೆ...,."
ಹಾರ್ಮೋನಿಯಂ ಮಾಸ್ತರ್ ಹಾಡು ನುಡಿಸುತ್ತಲೆ ರಾಗವಾಗಿ, ತಾಳವಾಗಿ ,ಸುಸೂತ್ರವಾಗಿ ಹಾಡಿದ ಸತೀಶ
ಪ್ರಾಕ್ಟೀಸ್ ನೋಡುವ ಜನರು ಶಿಳ್ಳೆ ಹೊಡೆದು ಚಪ್ಪಾಳೆ ಹೊಡೆದು ಇದು ನಾಟಕವೇನೋ ಎಂಬಂತೆ " ಒನ್ಸ್ ಮೋರ್ "ಎಂದರು
" ಇದು  ಕಲೆ ಅಂದ್ರೆ ನಾನು ಬಂದ್ ಒಂದ್ ವಾರ ಆತು ,ಹಾರ್ಮೋನಿಯಂಗೆ ಕರೆಕ್ಟ್ ಆಗಿ ಹಾಡಿದವನು ಈ ಹುಡ್ಗ ಒಬ್ಬನೆ ,ವೆರಿ ಗುಡ್ ಕಣೋ ಹುಡ್ಗ, ಇನ್ನೊಂದು ಸ್ವಲ್ಪ ದಪ್ಪ ಇದ್ದಿದ್ದರೆ ಈ ಪಾತ್ರ ಸೂಪರ್ ಆಗಿ ಒಪ್ಪಿರೋದು ನಿನಗೆ, ಇರಲಿ ಈಗಲೂ ಚೆನಾಗ್ ಬರುತ್ತೆ "
" ಅವರಪ್ಪನೂ ಕಲಾವಿದ ಸರ್ ಕುರುಕ್ಷೇತ್ರ ನಾಟಕದಾಗೆ ದುರ್ಯೋಧನನ ಪಾತ್ರ ಮಾಡ್ತಿದ್ರು" ಹೆಮ್ಮೆಯಿಂದ ಗತಿಸಿದ ಭಾವನ ನೆನೆದು ಗದ್ಗದಿತರಾದರು ಮುರಾರಿ.
"ಅದೇ ಮತೆ ,ಕಲೆ ಇವನ ರಕ್ತದಲ್ಲಿ ಇದೆ ಸ್ವಲ್ಪಮಟ್ಟಿಗೆ ಪ್ರೋತ್ಸಾಹ ಕೊಟ್ಟರೆ ಒಳ್ಳೆ ಕಲಾವಿದ ಆಗ್ತಾನೆ. ವೆರಿ ಗುಡ್" ಮೇಷ್ಟ್ರು ಸತೀಶನನ್ನು ಹತ್ತಿರ ಕರೆದು ಬೆನ್ನು ಸವರಿದರು .ಉಳಿದ ಪಾತ್ರಧಾರಿಗಳು ಒಳಗೊಳಗೆ ಹೊಟ್ಟೆ ಉರಿದುಕೊಳ್ಳುತ್ತಿದ್ದರು ,ಕಾರಣ ಮೇಷ್ಟ್ರು ಬಂದು ವಾರವಾಗುತ್ತಾ ಬಂದರೂ ಎಲ್ಲ ಪಾತ್ರಧಾರಿಗಳನ್ನು ವಾಚಾಮಗೋಚರವಾಗಿ ಬಯ್ಯುವುದೇ ಆಗಿತ್ತು, ಮೊದಲ ಬಾರಿಗೆ ಹೊಗಳಿಕೆ ನೋಡಿದ್ದರು.
" ಹುಂ ಮಾತು ಗಟ್ ಮಾಡಿದೆಯೇನಯ್ಯ ಹೇಳು ನೋಡೋಣ" ಎಂದು ಮೇಷ್ಟ್ರು ಹೇಳಿದ್ದೇ ತಡ
" ಬ್ರಹ್ಮಾಂಡವನ್ನೇ ಚೆಂಡಾಡಬಲ್ಲ ದಂಡನಾಯಕರ ಮಂಡಲದಿಂದ ಮಂಡಿತನಾಗಿ , ಹರಿಕುಲ ಕುಠಾರನೆ‌ನಿಸಿ, ಹರಬ್ರಹ್ಮರಿಂದ ಅಮೋಘ ವರಗಳನ್ನು ಪಡೆದಿರುವ ನನಗೆ , ಸಕಲ ಚರಾಚರ ರಾಕ್ಷಸರು ಕಪ್ಪ ಕಾಣಿಕೆಗಳನ್ನು ತಂದು ಒಪ್ಪಿಸುತ್ತಿಹರು.ಅವಿಧೇಯತೆಯಿಂದ ವರ್ತಿಸಿದವರನ್ನು ಸದೆ ಬಡಿದು ಏಕ ಚಕ್ರಾಧಿಪತ್ಯ ಪಡೆದಿರುವೆನು, ಅಂದ ಮೇಲೆ ನನ್ನ ಅಭ್ಯುದಯಕ್ಕೆ ಮೇರೆಯೇ ಇಲ್ಲ......."
ಪಟಪಟನೆ ಮಾತುಗಳನ್ನು ಒಪ್ಪಿಸಿದ ರೀತಿ ನೋಡಿ ಎಲ್ಲರೂ ದಂಗಾದರು.

"ಸಾರ್ ಮೂರು ದಿನದಿಂದ ಬ್ರಹ್ಮುಂದು ಪ್ರಾಕ್ಟೀಸ್ ಮಾಡ್ಸಿಲ್ಲ " ಬೇಕು ಅಂತಲೆ ಬ್ರಹ್ಮ ನ ಪಾತ್ರ ಮಾಡಿದ ರಾಜಪ್ಪನಿಗೆ ಹಾಡು ಮಾತು ಬರದಿರುವ ಅವನ ಅವಸ್ಥೆ ನೋಡಿ ಮಜಾ ತಗೋಳ್ಳಾಕೆ ಕಾಳಪ್ಪ  ಹೇಳಿದ
" ಹುಂ ಬಾರಪ್ಪ ಬ್ರಹ್ಮ  ನಿಂದ್ ಆದ ಮ್ಯಾಲೆ ಇವತ್ತಿನ ಪ್ರಾಕ್ಟೀಸ್ ನಿಲ್ಸಾಣಾ,"
ಬ್ರಹ್ಮನ ಪಾತ್ರಧಾರಿ ರಾಜಪ್ಪ ಬಂದು ಪೆಟ್ಟಿಗೆ ಮುಂದೆ ನಿಂತರು
" ಹರಿ ನಾರಾಯಣ..... ದುರಿತ ನಿವಾರಣ.....  ಪೊರೆ ಲಕ್ಷ್ಮಿ ರಮಣ, ನಾರಾಯಣ, ಹರಸು......"
ಮೇಷ್ಟ್ರು ಹೇಳಿಕೊಟ್ಟು ಹುಂ ಹೇಳಪ್ಪ ಅಂದರು
" ಹರಿ ನಾಯಾರಣ,.. ಹರಿ ನಯಾರಾಣ.. ......"
"ಏ ನಾಯಾರಣ ಅಲ್ಲಯ್ಯ  . ಹರಿ ನಾರಾಯಣ..."
" ಆತು ಸಾ ಹಾಡ್ತಿನಿ, ಹರಿ ನಯಾರಣ,....ಹರಿ ನಯಾರಣ
ಮೇಷ್ಟ್ರಿಗೆ ನಗು ಬಂದು ನಗುತ್ತಾ...
" ಏ ನಿನ್ ನಾಲಿಗೆ ತಗೊಂಡೋಗಿ ರಾಗಿ ಹುಲ್ಲ ತುಳುಸ್ತಾರಲ್ಲ ಆ  ರೋಣುಗಲ್ಲ ಕೆಳಗೆ ಇಡು ಎಂದು ಬೈಯ್ದರು
ಪ್ರಾಕ್ಟೀಸ್ ನೋಡಲು ಬಂದ ಕಾಳಪ್ಪ
" ಹರಿ ನಾರಾಯಣ ಐನೂರು ರುಪಾಯಿ ಹೋದ್ವಣ್ಣ " ಎಂದು ರಾಜಪ್ಪನ ಹಂಗಿಸಿದ
" ನೀನ್ಯಾವನಲೆ ಮಾತಾಡಕೆ ನಾಟ್ಕಕ್ಕೆ ನನ್ ಐನೂರು ಹೋಗ್ಲಿ ನಾನು ನಾಟ್ಕ ಆಡ್ತೀನಿ ನೋಡು ಎಂದು ಸಿಟ್ಟಿನಿಂದ ಹೇಳಿದ ,ಕಾಳಪ್ಪ ಓಡಿ ಹೋದ.
"ಸಾಕು ಇವತ್ತಿಗೆ ಇಲ್ಲಿಗೆ ನಿಲ್ಸಾಣಾ, ನಾಳೆ  ಮಾತು ಸರಿಯಾಗಿ ಕಲ್ತುಕೊಂಡು ಬರ್ರಿ" ಎಂದು ಪೆಟ್ಟಿಗೆ ಇಳಿಸಿ ಹೊರಟರು.

ಮಾರನೆ ದಿನ ಇಡೀ ಊರಲ್ಲೆ ಸತೀಶನ ಮಾತು ಎರಡನೆ ಬಾರಿಗೆ ಊರವರು ಸತೀಶನನ್ನು ಹೊಗಳಲು‌ ಶುರುಮಾಡಿದರು.

ಕೆಂಪು, ನೀಲಿ ಬಣ್ಣದ ಕರಪತ್ರಗಳನ್ನು ಅಲ್ಲಲ್ಲಿ ಅಂಟಿಸಲಾಗಿತ್ತು ಅದರಲ್ಲಿ ಎಲ್ಲಾ ಪಾತ್ರಧಾರಿಗಳ ಹೆಸರು ಅವರ ಪಾತ್ರ , ಹಾರ್ಮೋನಿಯಂ, ತಬಲ ಮ್ಯಾನೇಜರ್, ಮುಂತಾದ ವಿವರ ಇದ್ದವು .ತನ್ನ ಹೆಸರು ಓದಿದ ಸತೀಶ ಮನದಲ್ಲೇ ಸಂತಸಪಟ್ಟ.
" ನೀನು ಏನೇ ಹೇಳು ಕಾಟಯ್ಯ ಪಾಂಪ್ಲೇಟ್ ಎಲ್ಲಾ ಓಕೆ ಕೆಳಗೆ "ಲಕ್ಷ್ಮಿ ಬೀಡಿ ಸೇದಿರಿ "ಅಂತ ಇರೋದು ಅಬಾಸ" ಅಂದರು ಗುಂಡ್ ಶೆಟ್ಟರು
" ಶೆಟ್ರೆ ಪಾಂಪ್ಲೇಟ್ ಮಾಡ್ಸಾಕೆ ಲಕ್ಷ್ಮಿ ಬೀಡಿನಾರು ದುಡ್ ಕೊಟ್ಟದಾರೆ " ವ್ಯಂಗ್ಯವಾಗಿ ಹೇಳಿದರು ಕಾಟಯ್ಯ
" ಮುಂದಿನ ಸಲ ನಾಟಕ ಆಡ್ದಾಗ ಹೇಳಿ ಪಾಂಪ್ಲೇಟ್ ನಾನು ಮಾಡಿಸ್ತೀನಿ ನನ್ನ ಹೆಸರು ಹಾಕ್ಸಾದು ಬೇಡ" ಶೆಟ್ಟರ ಮಾತು ಕೇಳಿ ಕಾಟಯ್ಯ ನಿಗೆ ನಾಚಿಕೆಯಾದಂತಾಗಿ
ಆತು ಶೆಟ್ಟರೆ ಇಲ್ಲಿ‌ಇದನ್ನ ಅಂಟು ಹಾಕಿ ಎಂದು ಹೊರಟರು.

ಬ್ರಮ್ಮಿ ಹೋಟೆಲ್ ಹತ್ತಿರ ದೊಡ್ಡ ರಟ್ಟಿನ  ಪಾಂಪ್ಲೇಟ್ ಅಂಟಿಸಿದ್ದರು
" ಸೀನ್ ಯಾವೂರ್ದು ಕಾಟಣ್ಣ ? " ಬ್ರಮ್ಮಿ ಕೇಳಿದ
" ಏ ಹರ್ತಿಕೋಟೆ ರಾಯಣ್ಣನ ಸೀನ್ಸ್ ಕಣಪ್ಪ"
"ಒಂದ್ ಸತಿ ತರೂರು ಸೀನ್ಸ್ ತರ್ಸಣ, ಸಕತ್ ಆಗಿರುತ್ತೆ ಸೀನ್ , ನಾಟ್ಕನೂ ಸೂಪರ್ ಆಗಿರುತ್ತದೆ."
" ಸರಿ ನಾಟಕಕ್ಕೆ ಒಂದ್ ನೂರು ರುಪಾಯಿ ಕೊಡು "
" ಹೆ.....ನಾವ್ ಎಲ್ಲಿ ಅಷ್ಟು   ಕೊಡಾಕ್ ಆಗುತ್ತಣ್ಣ ತಲೆ ಕರೆದು ಕೊಂಡು ಹೇಳಿದ "
" ಅದಕ್ಕೆ ಮುಚ್ಕಂಡ್ ಟೀ ಕೊಡು ,ತರೂರ್ ಸೀನ್ ಅಂತೆ " ಹುರಿದುಬಿದ್ದರು ಕಾಟಯ್ಯ.

ನಾಟಕದ ದಿನ ಬಂದೇ ಬಿಟ್ಟಿತು .ರಾಕ್ಷಸನ ಪಾತ್ರವಾದರೂ ಸತೀಶ ಅಮ್ಮನ ಸಲಹೆಯ ಮೇರೆಗೆ ಉಪವಾಸ ಇದ್ದು ನಾಟಕ ಆಡಲು ಸಿದ್ದನಾದ .ಮಗನ ನಾಟಕ ಕಣ್ತುಂಬಿಕೊಳ್ಳಲು ಭೂದೇವಮ್ಮ ಚೌಡಗೊಂಡನಹಳ್ಳಿಯಿಂದ ಬಂದಿದ್ದರು .

ಗಣಸ್ತುತಿ ಮಾಡಿ , "ಓಂ ನಮೊ ಭವಾನಿ‌ ತಾಯೆ... " ಪ್ರಾರ್ಥನೆ ಆರಂಭವಾಯಿತು.
ನಾಟಕವು ಯಾರೂ ಊಹಿಸದಷ್ಟು ಸ್ವತಃ ಮೇಷ್ಟ್ರು ಗೆ ಆಶ್ಚರ್ಯ, ಜಗಲಕಕ ಎಂಬ ಕಶ್ಯಪ ಸ್ಪಷ್ಟವಾಗಿ ಮಾತಾಡುತ್ತಾನೆ .ದೇವೆಂದ್ರ ರಾಗವಾಗಿ ಹಾಡುತ್ತಾನೆ.
ಮೇಷ್ಟ್ರುಗೆ ಅರ್ಥವಾಯಿತು ಅಂದು ಪ್ರಾಕ್ಟೀಸ್ ನಲ್ಲಿ ಸತೀಶನ ಹೊಗಳಿದಾಗಿಂದ ಎಲ್ಲರೂ ಚಾಲೆಂಜ್ ಆಗಿ ತೆಗೆದುಕೊಂಡು ಪ್ರಾಕ್ಟೀಸ್ ಮಾಡಿದ್ದರು.

ನಾಟಕ ಸಾಗಿದಂತೆಲ್ಲ ರಕ್ತ ಬೀಜಾಸುರನ ಹುಟ್ಟು, ಬೆಳವಣಿಗೆ, ಅವನು ಬ್ರಹ್ಮ ,ವಿಷ್ಣು ಮಹೇಶ್ವರ ಇವರ ಸೆರೆಮನೆಯಲ್ಲಿ ಇಟ್ಟು ತೊಂದರೆಗಳನ್ನು ನೀಡುವುದು ,ನಂತರ ಶ್ರೀದೇವಿಯ ಪ್ರತ್ಯಕ್ಷ, ನೋಡೋಕೆ ಕಣ್ಣೆರಡು ಸಾಲವು. ರಂಗದಾಸಪ್ಪ ಎಂಬುವವರು ದೇವಿ ಪಾತ್ರ  ಮಾಡಿದರು ದೇವಿಯೇ ಉದ್ಭವಿಸಿದ ರೀತಿಯಲ್ಲಿ
" ವನವಿದು ರಾರಾಜಿಸುತಿಹುದೇ.... ಅಂದದಲಿ ಚೆಂದದಲಿ‌ ಶೋಭಿಸುತಿಹುದೆ...." ಹಾಡು.

"ವರಪುರುಷನ ಮಹಿಷನ ..... ವನವಿದಹ ...ವರಪುರುಷನ ಮಹಿಷನ..."
ಈ ಹಾಡು ಹೇಳುವಾಗ ಪ್ರೇಕ್ಷಕರು ತಮಗರಿವಿಲ್ಲದೆ ಎರಡೂ ಕೈಜೋಡಿಸಿ ಮುಗಿಯುತ್ತಿದ್ದರು.

ದೇವಿಯೊಂದಿಗೆ, ಸುಗ್ರೀವ ,ಚಂಡ ಚಾಮುಂಡ ಮುಂತಾದ ರಾಕ್ಷಸರ ಕಾಳಗ ಚೆನ್ನಾಗಿ ಮೂಡಿ ಬಂತು
ಶುಂಭ ,ನಿಶುಂಭರ ಕಾದಾಟ , ಅದರಲ್ಲೂ ಮಹಿಷಾಸುರನ ಆರ್ಭಟ ,ಹಾಡು ನಟನೆ ಕಂಡ ಬೇರೆ ಊರು ಜನರು ಬೇಷ್ ಎಂದರೆ ಕೆಲವರು ಮೆಡಲ್ ಹಾಕಲು ರಂಗಮಂದಿರಕ್ಕೆ ನುಗ್ಗಲು ಯತ್ನ ಮಾಡಿದರು .
" ಈಗ ಬ್ಯಾಡ ಇನ್ನೂ ಸ್ಯಾನೆ ನಾಟಕ ಐತೆ ಆಮೇಲೆ ಬೇಕಾದ್ರೆ ಅವಕಾಶವನ್ನು ಕೊಡ್ತೀವಿ "ಅಂದರು ಕಾಟಯ್ಯ

ಕೊನೆಯ ಸೀನ್ ನಲ್ಲಿ ದೇವಿಯು ರಕ್ತಬೀಜಾಸುರನ ವಧೆ ಮಾಡಿದಾಗ ಸೂರ್ಯ ನಿಧಾನವಾಗಿ ಕಣ್ತೆರೆಯುತ್ತಿದ್ದ
ಮಗನ ನಟನೆ ನೋಡಿದ ಜನರು ಬಂದು
ಭೂದೇವಮ್ಮ ನ ಬಳಿ ಹೇಳುವಾಗ ಗಂಡ ಬಾಲಾಜಿ ನೆ‌ನಪು ಬಂತು .ನಾಟಕ ಮುಗಿದು ಬಣ್ಣ ತೊಳೆಯಲು ಹೋದ ಸತೀಶನನ್ನು ಗೆಳೆಯರು ಮತ್ತು ಅಭಿಮಾನಿಗಳು ಪ್ರೀತಿಯಿಂದ ಹೊತ್ತು ಕುಣಿಯುತ್ತಿದ್ದರು ,ಇದನ್ನು ಕಂಡ ಭೂದೇವಮ್ಮನ ಕಣ್ಣುಗಳಲ್ಲಿ ಆನಂದ ಬಾಷ್ಪ ಉದುರಿದವು.ಕ್ರಮೇಣವಾಗಿ ಸೂರ್ಯನ ಪ್ರಖರ ಬೆಳಕು ಹೆಚ್ಚಾಯಿತು.


ಸಿ‌ ಜಿ ವೆಂಕಟೇಶ್ವರ

 

19 ಫೆಬ್ರವರಿ 2022

ಉದಕದೊಳಗಿನ ಕಿಚ್ಚು . ಭಾಗ ೧೯


 ಹೆದ್ದಾರಿ ೧೯

ದಲಿತರ ಗುಡಿ ಪ್ರವೇಶ

" ಪ್ರತಿ ವರ್ಸದಂತೆ  ಈ ವರ್ಸ ಅಮ್ಮನ್ ಜಾತ್ರೆ ಮಾಡೋಕೆ ನಾವೆಲ್ಲ ಇವತ್ತು ಗುಡಿ ಹತ್ರ ಸೇರೆದಿವಿ" ಎನ್ನತ್ತಾ ಚೂಪಾದ ಪರಕೆ ಕಡ್ಡಿಯಿಂದ ಎಡಭಾಗ ದವಡೆಯ ಹಲ್ಲಿನಲ್ಲಿ ಸಿಕ್ಕಿಹಾಕಿಕೊಂಡಿರುವ ಅಡಿಕೆ ಮತ್ತು ಹೊಗೆಸೊಪ್ಪು ತೆಗೆಯಲು ದವಡೆ ಭಾಗಕ್ಕೆ ಚುಚ್ಚುತ್ತಿದ್ದರು ಗುಡಿ ಗೌಡರು.
"ಏ ಬಿಸಾಕ ಮಾರಾಯ ಯಾವಾಗಲೂ ಆ ಕಡ್ಡಿ ಇಕ್ಕೆಂಡು  ಏನ್ ದೊಗಿತಿಯಾ" ಎಂದ ಸಿದ್ದಮಲ್ಲನಾಯ್ಕ.
" ಅಯ್ಯೋ ನೀನಂತುನುನು ,ನಿನ್ಗೇನು ಬಾದೆ ?ನನ್ ಕಡ್ಡಿ ನನ್ ಹಲ್ಲು " ಗುಡಿ ಗೌಡರು ಎದಿರೇಟು ನೀಡಿದರು.
" ಏ ಬರೆ ಕೆಲ್ಸಕ್ಕೆ ಬರದಿರೋ ಮಾತಾಡ್ತಿರಾ? ಇಲ್ಲ ಜಾತ್ರೆ ಬಗ್ಗೆ ಮಾತಾಡ್ತಿರೊ? ,ನಮ್ಗೇನು ಬ್ಯಾರೆ ವಗುತ್ನ ಇಲ್ವಾ?, ನಾವು ಬತ್ತೀವಿ ಅದೇನ್ ಮಾತಡ್ಕೆಳ್ಲಿ ,ಹಲ್ಲು ಮೂಗು, ಕಿವಿ ,ಕಡ್ಡಿ ,ಹಾಳು ಮೂಳು" ಎಂದು ಟವಲ್ ಕೊಡವಿಕೊಂಡು ಎದ್ದನು ಬಸವರಾಜ.
" ಏ ಕುತ್ಕಳಲೆ  ಹೋಗಾನ ,ಗೌಡ್ರೆ ಜಾತ್ರೆ ಬಗ್ಗೆ  ಸುರು ಮಾಡಿ " ಅಂದ ಮಡಿವಾಳ ಶಿವಣ್ಣ.
" ಪ್ರತಿ ಸಲ ಮಾಡ್ದಂಗೆ ಈ ವರ್ಸನೂ ಹದಿನೈದ್ ದಿನದ ಸಾರು ಹಾಕಿ ಅಮ್ಮನ ಜಾತ್ರೆ ಮಾಡಾನಾ ಏನ್ರಪ್ಪಾ ಎಲ್ಲರಿಗೂ ಒಪ್ಪಿಗೇನಾ"
" ಗೌಡ್ರೆ ಪ್ರತಿ ಸಲ ಜಾತ್ರೆನೆ ಬೇರೆ  , ಈ ಸಲದ ಜಾತ್ರೆನೆ ಬೇರೆ  , ಈ ಸಲ ಕೆಲವು ಬದ್ಲಾವಣೆ ಆಗ್ಬೇಕು." ಗುಡಿಯಿಂದ ಮಾರು ದೂರದಲ್ಲಿ ಕುಂತ ಕೆಳಗಿನ ಕೇರಿಯ ಯುವಕ ಕೃಷ್ಣ ಜೋರಾಗಿ ಎಲ್ಲರಿಗೂ ಕೇಳುವಂತೆ ಹೇಳಿದ .
" ಅದೇನ್ ಬದ್ಲಾವಣೆನಪ್ಪ ನೀನಂತುನುನು  ,ಹೇಳು ಆದರೆ ಮಾಡಾನಾ" .
" ಈ ವರ್ಸದಿಂದ ನಮ್ಮ ಜನ ಮಾರಮ್ಮನ ಗುಡಿ ಒಳಗೆ ಬಂದು ಪೂಜೆ ಮಾಡಾಕೆ ಅವಕಾಶ ಕೊಡ್ಬೇಕು, ಜೊತೆಗೆ ಈ ವರ್ಸದಿಂದ ನಮ್ಮ ಜನಾನೇ ಮಾರಮ್ಮನ ಪೂಜೆ ಮಾಡಬೇಕು" .
ಕೃಷ್ಣನ ಮಾತು ಕೇಳಿ ನೆರೆದ ಜನ  ತಮ್ಮಲ್ಲೆ ಗೊನ ,ಗೊನ,ಗುಸು ಗುಸು ಸದ್ದು ಮಾಡಲು ಶುರು ಮಾಡಿದರು.
" ಏನ್ ಅಂತ ಮಾತಾಡ್ತಿಯಲಾ , ನಾವೆಲ್ಲಾದ್ರೂ ಅಮ್ಮನ ಗುಡಿ ಒಳಕೆ ಹೋದ್ರೆ  , ಸುಟ್ ಭಸ್ಮ ಆಗ್ತಿವಿ ಸುಮ್ಕೆ ಬಿದ್ದಿರು" .
ಲೈಟಾಗಿ ಹೆಂಡದ ನಶೆ ಇದ್ದರೂ, ಸ್ವಲ್ಪ ತೊದಲುವ ಧ್ವನಿಯಲ್ಲಿ ಮಗನನ್ನು ಗದರಿಸಿದರು ಮಾರಪ್ಪ.
" ನೀನಾದ್ರೂ ಹೇಳಲ ಮಾರ ನಿನ್ ಮಗ ಏನ್ ಇಂಗ ಮಾತಾಡ್ತಾನೆ ನಿನ್ನಂಗೆ ಅವನೇನು ಕುಡಿದಿಲ್ಲ ತಾನೆ?"
ಗೌಡರು ಪ್ರಶ್ನೆ ಮಾಡಿದರು.

" ಗೌಡರೆ ನಮ್ ಜಾತಿ ಅಂದರೆ ಬರೀ ಕುಡಿಯೋರು, ಮಾಂಸ  ತಿನ್ನೋರು ಅಂತ ನಿಮ್ಮಂತೋರು ಅಂದ್ಕಡಿದಾರೆ,ಬರ್ರಿ ತೋಪಿನ ಅಂಗಡಿ ಹತ್ರ ಹೋಗಾನ ನಿಮ್ಮೋರು ಎಷ್ಟ್ ಜನ ಐದಾರೆ ಅಂತ ತೋರಿಸ್ತೀನಿ, ಗೌಡ್ರೆ ನಿಮ್ ಬಗ್ಗೆ ನನಗೆ ಗೌರವ ಇದೆ  ,ಆದರೆ ಈ ಸತಿಯಿಂದ ಬದಲಾವಣೆ ಆಗಲೇಬೇಕು" ಪಟ್ಟು ಹಿಡಿದ ಕೃಷ್ಣ.

"ಏನಲ ಬದ್ಲಾವಣೆ ನಿಮ್ ಜಾತಿ ನೆಳ್ಳು ಬೀಳಿಸ್ಕೊಳ್ಳತಿರಲಿಲ್ಲ ನಮ್ಮ ತಾತ ಮುತ್ತಾತ ,ಏನೋ ನಾವು ನಿಮ್ಮನ್ನು ಗುಡಿ ಹತ್ರ ಬಿಟ್ಕಂಡಿದಿವಿ ಅದೇ ನಿಮ್ ಪುಣ್ಯ , ಇನ್ನೂ ಏನಾ ಬದ್ಲಾವಣೆ ಬೇಕಂತೆ ,ಸಾಕ್ ಸುಮ್ಮನೆ ಕುಕ್ಕುರ್ಸಲೆ  , ನಮ್ ಹಿರೀಕರು ಹೇಳ್ತಿದ್ರು ಈ ಜಾತಿ ಎಲ್ಲಿ ಇಡ್ಬೇಕೋ ಅಲ್ಲಿಡ್ಬೇಕಂತ ನಾವೆ ಸ್ವಲ್ಪ ಲೂಸ್ ಬಿಟ್ವಿ , ಈಗ ಈ ತರ ಮಾತಾಡಂಗಾಗಿದಿರಾ".  ದರ್ಪದಿಂದ ನುಡಿದ ಕೆ ಎಚ್ ರಂಗಸ್ವಾಮಿ.

" ರಂಗಣ್ಣ ಜಾತಿ ಬಗ್ಗೆ ಮಾತಾಡ್ಬೇಡ ನಮಗೂ ಸ್ವಲ್ಪ ತಿಳುವಳಿಕೆ ಐತೆ ಹಿಂದಿನ ಕಾಲದಲ್ಲಿ ಅಂದರೆ ಈ ಗುಡಿ ಕಟ್ಟಿ ನೂರಾರು ವರ್ಸ ಆಗಿರ್ಬೋದು. ಆ ಕಾಲದಲ್ಲಿ ನಮ್ ಜನ ನಿಮ್ ಜನ ಎಲ್ಲಾ ಒಂದಾಗಿ ಸೇರಿ  ಗುಡಿಕಟ್ಟಿ ಎಲ್ಲಾ ಒಂದಾಗಿ ಸೇರಿ ಜಾತ್ರೆ, ಹಬ್ಬ ಮಾಡ್ತಾ ಇದ್ದರಂತೆ ಎಲ್ಲೋ ಮಧ್ಯದಲ್ಲಿ ಈ ತರ ಜಾತಿ ಭೇದ ಸುರು ಆದಂಗೆ ಕಾಣುತ್ತೆ. ಅದಕ್ಕೆ ಇನ್ ಮೇಲೆ ನಾವು ನೀವು ಅಮ್ಮನ ಪೂಜೆ ಮಾಡಾನ ನಮ್ ಜಾತಿ ಬಗ್ಗೆ  ಕೀಳಾಗಿ ಯಾರೂ ಮಾತಾಡೋದು ಬ್ಯಾಡ" ಎಂದು ನುಡಿದ ಕೃಷ್ಣನ ಗೆಳೆಯ ಮಹಂತೇಶ.

" ಜಾತಿ ಬಗ್ಗೆನೇ ಕೆಟ್ಟದಾಗಿ ಮಾತಾಡ್ತಿನಿ , ಏನ್ಲಾ ಕಡಿತಿಯೇನಲೆ ? ಬಾರ್ಲ" ಟವಲ್ ಕೊಡವಿಕೊಂಡು ,ತೋಳೇರಿಸಿಕೊಂಡು ಮಹಾಂತೇಶನ ಕಡೆ ಹೊರಟ ರಂಗಸ್ವಾಮಿ.
ಕೆಲವರು ರಂಗಸ್ವಾಮಿಯನ್ನು ತಡೆದು ಕೂರಿಸಿದರು.

ಅವರ ಕಡೆ , ಇವರ ಕಡೆ , ಏರು ಧ್ವನಿಯಲ್ಲಿ ಯಾರು ಏನು ಮಾತನಾಡುವರು ಎಂದು ಗೊತ್ತಾಗದೆ , ಗದ್ದಲ ಏರ್ಪಟ್ಟಿತು. ಇದೇ ಮೊದಲ ಬಾರಿಗೆ ಜಾತ್ರೆ ಬಗ್ಗೆ ಮಾತನಾಡಲು ಕಲೆತಾಗ ಆದ ಇಂತಹ ಗದ್ದಲವನ್ನು ದೂರದಿಂದ ನೋಡುವ ಮಹಿಳೆಯರು , ಎಂದೂ ಇಂಗಾಗಿರ್ಲಿಲ್ಲ  , ಊರ್ಗೆ ಏನೋ ಕೇಡ್ಗಾಲ ಬಂದೈತೆ  ,ಇವು ಇಂಗೆ ಹೊಡ್ದಾಡ್ಕೆಂಡು ಜಾತ್ರೆ ಮಾಡಿದ್ರೆ ಅಮ್ಮ ರಾಂಗ್ ಆಗಿ ಏನ್ ಮಾಡ್ತಾಳೋ ? ಎಂದು ಅವರವರೆ ಮಾತಾಡಿಕೊಳ್ಳುತ್ತಿದ್ದರು.
ಕೃಷ್ಣ ಮತ್ತು ಮಹಾಂತೇಶನ ಜೊತೆಗೆ ಹಟ್ಟಿಯ ಇನ್ನೂ ಐದಾರು ಹುಡುಗರು ಜೋರಾಗಿ ಮಾತನಾಡುವುದನ್ನು ಕಂಡ ರಂಗಸ್ವಾಮಿ
"ಹೊ....ಹೊ.... ಈ ನನ್ ಮಕ್ಕಳು ಜಾತ್ರೆ ಕೆಡಿಸ್ಬೇಕು ಅಂತಲೇ ಪ್ಲಾನ್ ಮಾಡ್ಕಂಡು ಬಂದು ಇಂಗಾಡ್ತಾರೆ , ಯಾವ ವರ್ಸ ಇಲ್ದಿದ್ದು ಈ ವರ್ಸನೆ ತರ್ಲೆ ಯಾಕೆ?  ಜಾತ್ರೆ ಆಗ್ದಿದ್ದರೂ ಸೈ ಈ ನನ್ ಮಕ್ಕಳ ಕಡ್ದು ಜೈಲಿಗ್ ಹೋಗ್ತೀನಿ ಏನ್ ಕೊಬ್ಬು ಇವರಿಗೆ ," ಎಂದು ಮತ್ತೆ ತೋಳೇರಿಸಿ ಹೊರಟ ರಂಗಸ್ವಾಮಿ.

" ಏ ಕುತ್ಕಳ ರಂಗ , ಏನ್ ಜಗಳ ಆಡಾಕೆ ಕಾಯ್ತಾ ಇರ್ತಿಯಾ, ಸುಮ್ನಿರು ನೀನಂತುನುನು " ಗದರಿದರು ಗೌಡರು.
"ಅಲ್ಲ ಗೌಡರೆ ಆ ನನ್ ಮಕ್ಳ ದಿಮಾಕ......"
" ಸಾಕು ಸುಮ್ನಿರೋ" ಮತ್ತೆ ಗದರಿದರು.
ಗುಡಿಯ ಒಳಗೆ ಅಕ್ಕ ಪಕ್ಕ ಮುಂದೆ ನಿಶ್ಯಬ್ದ ವಾತಾವರಣದಲ್ಲಿ ಗೌಡರೆ ಶುರುಮಾಡಿದರು.
" ಅಲ್ಲಪ್ಪ ಕೃಷ್ಣ , ಇಷ್ಟ್ ದಿವಸ ಇಲ್ಲದ ಈ ಆಸೆ ಈಗ್ಯಾಕೆ ?,ಅದು ನಿಮ್ ಬೇಡಿಕೆ ನಿಮ್ಗೆ ಸರಿ ಅನ್ಸುತ್ತಾ?  ಗುಡಿ ಒಳಕ್ಕೆ ಬಿಟ್ಕಂಡರೆ ಮೈಲಿಗೆ ಆಗಲ್ವ ? ನಾವೆಲ್ಲ ಗುಡಿಗೆ ಎಂಗ್ ಬರಾಕಾಗುತ್ತೆ?  ಅದೂ ಅಲ್ದೇ ಪೂಜಾರಿಕೆ ಬ್ಯಾರೆ ಬೇಕು ಅಂತ ಕೇಳ್ತಿರಲ್ಲಪ್ಪ  ,ಇದೆಲ್ಲ ಆಗಲ್ಲ ಸುಮ್ಮನಿದ್ದು ಬಿಡಿ"
" ನೆಟ್ಟಗೆ ಗಂಟೆ ಇಡ್ಕಳ್ಳಕೆ ಬರುತ್ತೇನೋ ಕೇಳ್ರಿ , ಮೂಳೆ ಕಡಿಯಾದ್ ಬಿಟ್ ಪೂಜೆ ಮಾಡ್ತಾರಂತೆ ,ಸ್ನಾನ ಮಾಡಿ ಏಸ್   ದಿನ  ಆತೋ " ಮತ್ತೆ ಹಂಗಿಸಿದ ರಂಗಸ್ವಾಮಿ.

" ಏ ನೆಟ್ಟಗ್ ಮಾತಾಡು, ನೀನು ಪೂಜೆ ಮಾಡಾದ ನಾನು ಕಂಡಿದಿನಿ" ಮಹಾಂತೇಶ ಏಕವಚನದಲ್ಲೇ ಬೈಯ್ದ.
" ಗೌಡ ,ಸಾವ್ಕಾರ ಅಂತ ಕರೆಯೋ ನನ್ ಮಕ್ಕಳು ಇವತ್ತು ಏಕವಚನದಲ್ಲಿ ಮಾತಾಡ್ತೀರ ಹುಟ್ಟಿಲ್ಲ ಅನ್ನಿಸ್ಬಿಡ್ತೀನಿ" 
ಜೋರಾಗಿ ಹೋಗಿ ಮಹಂತೇಶನ ತಳ್ಳಿದ ,ತಳ್ಳಿದ ರಭಸಕ್ಕೆ ಮಹಂತೇಶನ ತಲೆ ಪೌಳಿಯ ಕಲ್ಲಿಗೆ ಬಿದ್ದು ರಕ್ತ ಚಿಮ್ಮಿತು.
ಮೇಲ್ವರ್ಗದ ಮತ್ತು ಕೆಳವರ್ಗದ ಬಿಸಿರಕ್ತದ ಯುವಕರು ಕೈ ಕೈ ಮಿಲಾಯಿಸಿದರು.ಹಿರಿಯರು ಸಮಾಧಾನ ಮಾಡಿದರು .
ಕೆಲವರು ಮಹಾಂತೇಶನ ಆಸ್ಪತ್ರೆಗೆ ಕರೆದುಕೊಂಡು ಹೋದರು .
" ಎಲ್ಲಾ ಮನೆಗ್ ನಡೀರಪ್ಪ ಯಾವ ಮಾತುಕತೆ ಬೇಡ ,ಏನೂ ಬೇಡ ,ಸುಮ್ಮನೆ ಯಾಕೆ ಗಲಾಟೆ ಇವತ್ತು ಯಾಕೋ ಟೈಮ್ ಸರಿಯಿಲ್ಲ ಇನ್ನೊಂದು ‌ದಿನ ಸೇರನ ನಡೀರಪ್ಪ " ಎಂದು ಟವಲ್ ಕೊಡವಿಕೊಂಡು ಹೆಗಲ ಮೇಲೆ ಹಾಕಿಕೊಂಡು ಮನೆಯ ಕಡೆ ಹೊರಟರು
ಗುಡಿಗೌಡ್ರು.

***************************

ಮಾರಮ್ಮನ ತೋಪಿನ ಮೇಲಿನಿಂದ ರವಿರಾಯ ನಿಧಾನವಾಗಿ ಕೆಂಬಣ್ಣ ಸೂಸಿ ಮೇಲೇರುತ್ತಿದ್ದ , ತಮ್ಮ ತಿಪ್ಪೆಗಳ ಕಡೆಗೆ ಸಗಣಿ ಹೊತ್ತ ಹುಡುಗರು ಹೊರಟಿದ್ದರು,ಜೈರಾಂ ಬಸ್ ಗೆ ಹಾಲು ಮೊಸರು ಮಾರಲು ಹೊರಟ ಗೊಲ್ಲರ ಹೆಣ್ಣುಮಕ್ಕಳು ಮಾರಮ್ಮನ ಗುಡಿ ಮುಂದೆ ನಿಂತಲ್ಲೆ ಚಪ್ಪಲಿ ಬಿಟ್ಟು , ಕೈಮುಗಿದು , ಬಸ್ ನಿಲ್ದಾಣದ ಕಡೆ ಹೊರಡುತ್ತಿದ್ದರು.ಜೈರಾಂ ಬಸ್ ದೊಡ್ಡ ಸೇತುವೆ ದಾಟಿ ಹೋದ ನಂತರ ಐಮಂಗಳದ ಕಡೆಯಿಂದ ಪೊಲೀಸ್ ಜೀಪ್ ಬಂದು ಮಾರಮ್ಮನ ಗುಡಿಯ ಮುಂದೆ ನಿಂತಿತು !
ದಪ್ಪನೆಯ ಮೀಸೆಯ, ದಪ್ಪ ಹೊಟ್ಟೆಯ ,ಕಪ್ಪನೆಯ ಪೊಲೀಸಪ್ಪ ಜೀಪಿನ ಮುಂದಿನ ಸೀಟಿನಲ್ಲೆ ಕುಳಿತಿದ್ದರು.ಜೀಪಿನ‌ ಹಿಂದಿನ ಸೀಟಿನಿಂದ ನಾಲ್ಕು ಜನ ಪೊಲೀಸರು ಲಾಟಿಯೊಂದಿಗೆ ಇಳಿದರು . ಮುಂದೆ ಜೀಪಲ್ಲೇ ಕುಳಿತ   ಪೊಲೀಸ್ ಜೊತೆಗೆ ನಾಲ್ವರು ‌ಏನೋ ಮಾತನಾಡುತ್ತಾ ಒಂದು ಬಿಳಿ ಕಾಗದ ತೋರಿಸಿ ಏನೇನೋ  ಮಾತಾಡಿಕೊಂಡರು ,ದೂರದಿಂದ ಇದನ್ನು ಗಮನಿಸಿದ ನಾಲ್ಕೈದು ಜನ ಇದು ರಾತ್ರಿ ನಡೆದ ಘಟನೆಗೆ ಸಂಭಂದಿಸಿರೋ ಹಾಗಿದೆ , ಎಂದು ಮುಂದಾಲೋಚನೆ ಮಾಡುತ್ತಾ ಹತ್ತಿರ ಹೋಗಲು ಭಯ ಪಟ್ಟು ಸುಮ್ಮನೆ ದೂರದಿಂದ ನೋಡುತ್ತಾ ನಿಂತರು, ಕೆಳಗಿನ ಮನೆ ನರೇಶ ಓಡಿ ಹೋಗಿ, ಗುಡಿ ಗೌಡರಿಗೆ ಸುದ್ದಿ ಮುಟ್ಟಿಸಿದ.
" ಏ ಪಟಾಪಟಿ ನಿಕ್ಕರ್..... ನೀನೇ ಬಾ .. ಎಂದರು ಒಬ್ಬ ಪೊಲೀಸ್.
"ನಾನಾ ಸ್ವಾಮಿ" ಅಚ್ಚರಿ ಮತ್ತು ಭಯದಿಂದ ಕೇಳಿದ ಪಾತಲಿಂಗಪ್ಪ.
" ಊಂಕಣಯ್ಯ ನೀನೇ ಬಾ  "
ಹತ್ತಿರ ಬಂದು ಎರಡೂ ಕೈಗಳನ್ನು ಎದೆಯ ಮೇಲೆ ತಂದು ಒಂದರ ಮೇಲೋಂದು ಕೈಯನ್ನು ಬಿಗಿಯಾಗಿ ಹಿಡಿದು ,ಭಯದಿಂದ ನಡುಗತ್ತಾ ನಿಂತ ಪಾತಲಿಂಗಪ್ಪ ನ ನೋಡಿ
" ಅದ್ಯಾಕೆ ಅಂಗ್ ನಡುಗ್ತಿಯ, ಸಾಹೇಬರು ಕರೀತಾರೆ ನೋಡು ಅದೇನ್ ಕೇಳು" ಗತ್ತಿನಿಂದ ಗದರಿತು ಪೊಲೀಸ್ ಧ್ವನಿ.
" ಏಯ್.. ಇಲ್ಲಿ ರಂಗಸ್ವಾಮಿ  ಮನೆ ಎಲ್ಲಿ ಬರುತ್ತೆ?
"  ಮೀಸೆಯ ಪೊಲೀಸ್ ಕೇಳಿದರು.
" ಯಾವ್ ರಂಗಸ್ವಾಮಿ ? ಸ್ವಾಮಿ, ನಮ್ಮೂರ್ ತುಂಬಾ ರಂಗಸ್ವಾಮಿಗಳೆ , ನಮ್ಮ ಹಟ್ಟಿ ತುಂಬಾ ಎಲ್ಲಾ ‌ಮಾರಮ್ಮ ,ರಂಗಮ್ಮ ಗಳೆ ,"
" ಏ ತಲೆ ಹರಟೆ ಮಾಡ್ತಿಯಾ ಬೋ... ಮಗನೆ ಒದ್ದು ಒಳಗೆ ಹಾಕಿ ಏರೋಪ್ಲೇನ್ ಹತ್ತಿಸ್ಬಿಡ್ತೀನಿ ಹುಷಾರ್"
" ಅಲ್ಲಾ ಸ್ವಾಮಿ ,ನಮ್ಮ ಊರಲ್ಲಿ ಬಾಳ ಜನ ರಂಗಸ್ವಾಮಿಗಳು ಇದಾರೆ ಅದ್ಕೆ ಅಂಗಂದೆ ಬುದ್ದಿ, ಮ್ಯಾಗಳ ಮನೆ ರಂಗಸ್ವಾಮಿ, ಓದೋ ರಂಗಸ್ವಾಮಿ, ಗುಂಡ್ರಂಗಪ್ಪರ ರಂಗಸ್ವಾಮಿ, ಛೇರ್ಮನ್ ರಂಗಸ್ವಾಮಿ  ಗುಡಿಗೌಡ್ರು ರಂಗಸ್ವಾಮಿ,ಅಗ , ಅವ್ರೇ ಬಂದ್ರು ನೋಡ್ರಿ " .
ಎಂದು ದೂರ ನಿಂತ .
" ಸ್ವಾಮಿ ನಮಸ್ಕಾರ ನಾನು ಈ ಊರಿನ ಗುಡಿಗೌಡ ರಂಗಸ್ವಾಮಿ ಏನ್ ವಿಷ್ಯ ಸ್ವಾಮಿ ಬಂದಿದ್ದು "
ಜೀಪಿನಿಂದ ಇಳಿದ ಇನ್ಸ್ಪೆಕ್ಟರ್ ಜಬಿಉಲ್ಲಾ .
" ಏನಿಲ್ಲಾ ಗೌಡರೆ ನಿನ್ನೆ ರಾತ್ರಿ ನಿಮ್ ಊರಿನಿಂದ ಒಂದ್ ಕಂಪ್ಲೇಂಟ್ ಬಂದಿದೆ . ಆರು ಜನರ ಮೇಲೆ  ಅಟ್ರಾಸಿಟಿ, ೩೦೭ ಅಟೆಂಪ್ಟ್ ಟು ಮರ್ಡರ್ ಕೇಸ್ ಹಾಕಿದಾರೆ.  
ಅವರನ್ನು ಕರ್ಕೊಂಡು ಹೋಗಾಕ್ ಬಂದಿದಿವಿ" ಎಂದು ಆರು ಜನರ ಲಿಸ್ಟ್ ಗೌಡರ ಕೈಗೆ ಕೊಟ್ಟರು .
ನಿರೀಕ್ಷಿತ ಎಂದು ಗೌಡರು ಆ ಲಿಸ್ಟ್ ಕಡೆ ಕಣ್ಣಾಡಿಸಿದಾಗ ಮೊದಲ ಹೆಸರೆ ಕೆ .ಹೆಚ್. ರಂಗಸ್ವಾಮಿ. ನಂತರ. ನರೇಶ. ಓಂಕಾರ, ಕುಮಾರ ,ಅಚ್ಚರಿ ಎಂಬಂತೆ ನಿನ್ನೆ  ಗಲಾಟೆ 
ಆದಾಗ ಅಲ್ಲಿಲ್ಲದಿದ್ದರೂ  ಬಿಳಿಯಪ್ಪನ ಹೆಸರು ಸೇರಿಸಿದ್ದರು .ಗೌಡರಿಗೆ ಈಗ ಅರ್ಥವಾಯಿತು ಕಳೆದ ವರ್ಷ ಗುರುಸಿದ್ದನಿಗೆ ಬಾಸುಂಡೆ ಬರುವಂತೆ ಹೊಡೆದಾಗ ಕೆಲವರು ಇದನ್ನು ವಿರೋಧಿಸಿ ಕಂಪ್ಲೇಂಟ್ ಕೊಡ್ತೀವಿ ಅಂದಿದ್ದರು ಆದರೆ ಗೌಡರು ಸಮಾಧಾನ ಮಾಡಿದ್ದರು.
" ಏನ್ ಗೌಡ್ರೆ ನೀವೆ ಇವರೆಲ್ಲರನ್ನು ಕರೆಸ್ತಿರಾ ಅಥವಾ ನಾವೇ ಅವರ ಮನೇಗ್ ಹೋಗಿ ಅರೆಸ್ಟ್ ಮಾಡ್ಲ"
" ಏ ಬ್ಯಾಡ ಸಾ , ನಾನೇ ಕರೆಸ್ತೀನಿ ,ಏ ಪಾತಲಿಂಗ ಪಾಕ್ಷಪ್ಪರ ಅಂಗಡಿತಾಕೆ ಹೋಗಿ ,ಕುರ್ಚಿ ಇಸ್ಕಾಂಬಾ ,ನಾನ್ ಹೇಳ್ದೆ ಅಂತ ಹೇಳು , ಏ ರಮೇಶ ಬ್ರಮ್ಮಿ ಹೋಟೆಲ್ ಗೆ ಹೋಗಿ ಸಾಹೇಬ್ರಿಗೆ ಕುಡಿಯಾಕ್ ಏನಾರಾ ತಂದು ಕೊಡು, ಏ ಗೋಪಾಲ ಈ ಚೀಟಿಯಾಗಿರೋರ್ನ ಕರ್ಕಂಬಾ " ಎಂದು ಹೆಸರು ಓದಿದರು ಗೌಡ್ರು.
" ಅದೆಲ್ಲ ಏನೂ ಬ್ಯಾಡ ಗೌಡ್ರೆ ,ಅವರನ್ನು ಕರೆಸಿ ನಾವು ಹೊರಡ್ತೀವಿ"
" ಅಂಗಂದ್ರೆ ಎಂಗೆ ಸಾ, ಕುತ್ಕಳಿ "ಎಂದು ಪಾತಲಿಂಗಪ್ಪ ತಂದ ಕುರ್ಚಿಯನ್ನು ತಾವೆ ಹಾಕಿ, ಮಾರಮ್ಮನ ಬೇವಿನ ಮರದ ಕೆಳಗೆ ಕುಳಿತುಕೊಳ್ಳಲು ಅಧಿಕಾರಿಗಳನ್ನು ವಿನಂತಿಸಿಕೊಂಡರು.
ಅದೂ ಇದೂ ಮಾತಾನಾಡುವ ವೇಳೆಗೆ ವಿಷಯ ತಿಳಿದು ಮತ್ತೆ ಮಾರಮ್ಮನ ಗುಡಿ ಮುಂದೆ ಜನ ಜಮಾವಣೆ ಆಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಯಿತು. ಪೊಲೀಸರಲ್ಲಿ ಒಬ್ಬ ಬಂದು , ಜನರನ್ನು ಸರಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗೋಪಾಲನ ಜೊತೆ ಕೆ ಹೆಚ್ ರಂಗಸ್ವಾಮಿ ಸೇರಿ ನಾಲ್ಕು ಜನ ಬಂದರು
" ಸ್ವಾಮಿ ಇನ್ನೊಬ್ಬ ಬರ್ಬೇಕು ಬತ್ತಾನೆ ,ತಮ್ಮಲ್ಲಿ ಒಂದು ಮಾತು, ಇದುವರೆಗು ಅಮ್ಮನ ಕೃಪೆಯಿಂದ ನಮ್ಮೂರಿಂದ ಯಾರನ್ನು ಪೋಲಿಸರು ಕರ್ಕೊಂಡು ಹೋಗಿ ಟೇಶನ್ಗೆ ಹಾಕಿಲ್ಲ "
ಮಧ್ಯದಲ್ಲೇ ಬಾಯಿ‌ ಹಾಕಿದ ಇನ್ಸ್ಪೆಕ್ಟರ್
" ಈಗ್ಲೂ ನಾವೇನು ನಾವಾಗೆ ಬಂದು ನಿಮ್ಮನ್ನು ಸ್ಟೇಷನ್ ಗೆ ಕರೀತಿಲ್ಲ ,ನಿಮ್ ಊರ್ನೊರೆ ಕಂಪ್ಲೇಂಟ್ ಕೊಟ್ಟರು ಬಂದಿದಿವೆ , ಈಗಲೂ ಅವರು ಕಂಪ್ಲೇಂಟ್ ವಾಪಾಸ್ ತಗಂಡ್ರೆ ನಾವು ಹೊರ್ಡತೀವಿ"
"ಆಗಲಿ‌ ಸ್ವಾಮಿ ಅವರ್ನ ಕರೆಸಿ ಮಾತಾಡ್ತಿವಿ"
 " ಬೇಗ ಆಗ್ಬೇಕು ನಮ್ಗೆ ಬ್ಯಾರೆ ಕೆಲ್ಸ ಇದೆ " ಎಂದರು ಇನ್ಸ್ಪೆಕ್ಟರ್

 ಗೌಡರ ಸೂಚನೆ ಮೇರೆಗೆ  ಪಾತಲಿಂಗಪ್ಪ ಹೋಗಿ  ಕೃಷ್ಣ ಮತ್ತು ಮಹಾಂತೇಶನನ್ನು ಕರೆದುಕೊಂಡು  ಗುಡಿಯ ಬಳಿ ಬಂದರು .

" ಏನ್ರಪ್ಪಾ ಊರು ಅಂದ್ರೆ ಒಂದ್ ಮಾತ್ ಬರುತ್ತೆ ಒಂದ್ ಮಾತ್ ಹೋಗುತ್ತೆ ಅಷ್ಟಕ್ಕೇ ಟೇಶನ್ ಗೆ ಹೋಗೋದೆ ? ಕಂಪ್ಲೇಂಟ್ ವಾಪಸ್ ತಗಾಳ್ರಿ , ಸಾಹೇಬ್ರು ಹೋದಮ್ಯಲೆ ನಾವ್ ಕೂತು ಮಾತಾಡಾನಾ"
"ಮಾತಾಡಾಕೇನು ಇಲ್ಲ ಗೌಡರೆ ,ನಮ್ಮ ಮೇಲೆ ಕೈ ಮಾಡಿರೋರಿಗೆ ಶಿಕ್ಷೆ ಆಗಬೇಕು ,ಗುಡಿ ಒಳಕೆ ನಾವು ಬರ್ಬೇಕು , ಅಮ್ಮನಿಗೆ   ನಾವೇ ಪೂಜೆ ಮಾಡಬೇಕು ,
ಇದೆಲ್ಲ ಆಗುತ್ತಾ?

"ಅಲ್ಲಪಾ ನಿಮಗೂ ಹಟ್ಟಿಲಿ ಒಂದು ಮಾರಮ್ಮನ ಗುಡಿ ಕಟ್ಟಿಸಿದಿವಿ, ಅಲ್ಲಿ ನೀವೆ ಪೂಜಾರ್ರು ಆದರೂ...."

"ಆದರೂ ಯಾಕೆ ... ಈ ಗುಡಿಗೆ ಯಾಕ್ ನಾವ್ ಬರ್ಬಾರ್ದು ,ಬಾಬಾಸಾಹೇಬ್ ಅಂಬೇಡ್ಕರ್ ರವರು ನೂರಾರು ವರ್ಷದ ಹಿಂದೆ ಮಹದ್ ಮತ್ತು ಕಲರಾಂ ಚಳುವಳಿಯ ಮೂಲಕ ಅಸ್ಪೃಶ್ಯತೆಯ ವಿರುದ್ದ ಹೋರಾಟ ಮಾಡಿದ್ದಾರೆ. ನಮ್ಮ ಜನಾಂಗದ ಮೇಲೆ ನೀವು ಮಾಡೋ ಅನ್ಯಾಯ ತಡೆಯೋಕೆ ನಮ್ಮ ಸಂವಿಧಾನದಲ್ಲಿ  ಶೋಷಣೆಯ ವಿರುದ್ಧದ ಹಕ್ಕು ನೀಡಿದ್ದಾರೆ,  ಆದರೆ ನೀವು ನಮಗೆ ಅನ್ಯಾಯ ಮಾಡ್ತಾನೆ ಇದಿರಾ. ನೀವು ಇನ್ನೂ ನಮ್ಮನ್ನ ಎಷ್ಟು ದಿನ ಹೊರಗಿಡ್ತಿರಿ?
ನಾವು ಮನುಷ್ಯರೆ, ನೀವೂ ಮನುಷ್ಯರೆ ಅದ್ಯಾಕೆ ಇಂಗೆ ಭೇದಭಾವ ಮಾಡ್ತಿರಾ? ನಮ್ಮ ಹಕ್ಕು ಕೇಳಿದರೆ ಜಾತಿ ಹಿಡ್ದು ಬೈತೀರಾ, ಅದಕ್ಕೆ ಕೆಲವರಿಗೆ ಶಿಕ್ಷೆ ಆಗಲಿ ಆಗ ಗೊತ್ತಾಗುತ್ತದೆ ".

 ಸುಧೀರ್ಘವಾಗಿ ಆತ್ಮವಿಶ್ವಾಸದಿಂದ ಮಾತನಾಡಿದ ಕೃಷ್ಣ.
ಅದಕ್ಕೆ ಹೇಳೋದು ಶಿಕ್ಷಣ ಮನುಷ್ಯರ ಆತ್ಮವಿಶ್ವಾಸ ಹೆಚ್ಚಿಸುತ್ತದೆ, ಸಂಘಟನೆ ಮಾಡುತ್ತದೆ ,ಮತ್ತು ಬೆಳಕು ನೀಡುತ್ತದೆ.
ಕೃಷ್ಣನ ಮಾತು ಕೇಳಿದ ಹಟ್ಟಿ ಜನರೆಲ್ಲಾ "ಹೌದು ನಮ್ಮ ಕೃಷ್ಣ ಹೇಳಿದ್ದು ಸರಿ 
ನಮ್ಮ ಹಕ್ಕು ನಮಗೆ ಬೇಕು " ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದರು .
ಇದನ್ನು ಸವರ್ಣಿಯರು ನಿರೀಕ್ಷೆ ಮಾಡಿರಲಿಲ್ಲ .

ಪೊಲೀಸರು ಎಲ್ಲರನ್ನೂ ಸುಮ್ಮನಿರಿಸಿದರು ಈ ಮಧ್ಯೆ ಗೌಡರು ಮತ್ತು ಛೇರ್ಮನ್ ರಂಗಸ್ವಾಮಿ ಏನೋ ಮಾತಾಡಿಕೊಂಡರು.
" ನೋಡ್ರಪ ನಾವು ಅಮ್ಮನಿಗೆ ಎದುರೋ ಜನ ,ನೀವು ಅಮ್ಮನ ಗುಡಿ ಒಳಗೆ ಬಂದ್ರೆ ನಿಮಗೆ ತೊಂದರೆ ಅಂತ ತಿಳ್ಕಂಡು ನಿಮ್ಮನ್ನು ಬಿಟ್ಟಿರಲಿಲ್ಲ ‌ ,ಈಗ ನೀವೆ ಇಷ್ಟ ಪಟ್ಟು ಬತ್ತೀವಿ ಅಂತೀರಾ ಬರ್ರಿ. ಆದರೆ ಪೂಜೆ ಇಷ್ಯದಾಗೆ ಈಗಲೆ ತೀರ್ಮಾನ ತಕಾಳಾದ್ ಬ್ಯಾಡ ,ಮುಂದೆ ಯಾವಾಗಾದ್ರೂ ನಾವೆ ಕುತ್ಕಂಡು ಮಾತಾಡಾನಾ ,  ಏನ್ರಪ?  ಏನಂತಿರಿ?"
ಕೆಲ ಸವರ್ಣಿಯರು ಇದಕ್ಕೆ ವಿರೋಧ ಮಾಡಲು ಹೊರಟರು ಅವರ ಅಕ್ಕಪಕ್ಕಗಳಲ್ಲಿ ಇದ್ದವರು ಪೊಲೀಸ್ ಇರುವುದು ಮತ್ತು ಸಮಸ್ಯೆ ಬಗ್ಗೆ ತಿಳಿಹೇಳಿ ಸುಮ್ಮನಿರಿಸಿದರು .

"ಆಗಲಿ ನಾವು ಕಂಪ್ಲೇಂಟ್ ವಾಪಸ್ ತಗೋತಿವಿ ಆದರೆ ಇವತ್ತೇ ನಾವು ಗುಡಿ ಒಳಗೆ ಬರ್ತಿವಿ" ಪಟ್ಟು ಹಿಡಿದ ಕೃಷ್ಣ
ವಿಧಿಯಿಲ್ಲದೆ ಒಪ್ಪಿದರು ಗೌಡರು .
"ಸಾರ್ ನಾನು ಕಂಪ್ಲೇಂಟ್ ವಾಪಾಸ್ ಪಡೀತಿನಿ " ಎಂದ ಕೃಷ್ಣ
"ಓಕೆ ಮತ್ತೆ ಸಣ್ಣ ಪುಟ್ಟದ್ದಕೆಲ್ಲ ಸ್ಟೇಷನ್ ಕಡೆ ಬರ್ಬೇಡಿ ಜಗಳ ಆಡ್ಬೇಡಿ ಶಾಂತಿ ಸುವ್ಯವಸ್ಥೆ ಕಾಪಾಡಿ ,ಎಂದು ಟೀ ಲೋಟ ಕೆಳಗಿಟ್ಟು ಬರ್ತೀವ್ರಿ ಗೌಡರೆ, ತೆಗಿಯಪ್ಪ ಗಾಡಿ" ಎಂದು ಜೀಪ್ ಹತ್ತಿದರು ಇನ್ಸ್ಪೆಕ್ಟರ್.

ಜೀಪ್ ಇಂಜಿನ್ ಬಿಸಿಯಾಗಿ ಬುರು....ಬುರು.... ಎಂದು ಐಮಂಗಲ ಕಡೆ ಮುಖಮಾಡಿದರೆ , ಹಟ್ಟಿಯವರು ಮಾರಮ್ಮನ ಗುಡಿಯ  ಒಳಗೆ ಪ್ರವೇಶ ಮಾಡುವಾಗ ಸವರ್ಣಿಯರು ಬುರು...ಬುರು... ಎನ್ನುತ್ತಾ ಮುಖ ಗಂಟಿಕ್ಕಿಕೊಂಡು ನೋಡುತ್ತಾ, ನಿಂತರು.


*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
9900925529.







16 ಫೆಬ್ರವರಿ 2022

ದೇವರು ಕೊಟ್ಟ ಗಿಪ್ಟ್. ಕತೆ


 



ದೇವರು ಕೊಟ್ಟ ಗಿಪ್ಟ್.


ಈ ವರ್ಷದ ಹುಟ್ಟು ಹಬ್ಬದ ಮರುದಿನವೇ ಮುಂದಿನ ಹುಟ್ಟು ಹಬ್ಬಕ್ಕೆ ಕೌಂಟ್ ಡೌನ್ ಮಾಡುತ್ತಾ , ಪದೇ ಪದೇ ಅಪ್ಪ ಅಮ್ಮ ಮತ್ತು ತಂಗಿಗೆ ನನ್ನ ಹುಟ್ಟು ಹಬ್ಬ ಇಷ್ಟು ದಿನ ಉಳಿದಿದೆ ಎಂದು ಮುಂಬರುವ ಹಬ್ಬಕ್ಕೆ ದಿನವೂ ತಯಾರುಗುತ್ತಿದ್ದ ತರಲೇ ಸುಬ್ಬ! 

ಹೆಸರು ಸುಬ್ರಮಣ್ಯ ಆದರೂ ಅವನ ತರಲೆಗಳಿಂದ ಮನೆಯಲ್ಲಿ ತರಲೇ ಸುಬ್ಬನೆಂಬ ಹೆಸರು ಖಾಯಂ ಆಗಿತ್ತು. 

ಓದು ಬರೆಹದಲ್ಲಿ ಆರಕ್ಕೇರದ ಮೂರಕ್ಕಿಳಿಯದ ಸುಬ್ಬ .ಮನೆಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ .ಅಷ್ಟರ ಮಟ್ಟಿಗೆ ಅನ್ಯರಿಗೆ ನಿರುಪದ್ರವಿ ಆದರೆ ಮನೆಯಲ್ಲಿ ಮಿತಿಮೀರಿದ ತರಲೆ.


ಅಂತೂ ಅವನು ಕಾತುರದಿಂದ ಕಾಯುವ ದಿನ ಸಮೀಪಿಸಿತ್ತು . ಆ ನಗರದ ಬಹುದೊಡ್ಡ ಬಟ್ಟೆ ಮಳಿಗೆಗೆ ಕರೆದುಕೊಂಡು ಹೋಗಿ ತಂದೆ ಉತ್ತಮ ಬ್ರ್ಯಾಂಡ್ ನ ಬಟ್ಟೆಗಳನ್ನು ಕೊಡಿಸಿದರು. ಕೇಕ್ ಪ್ಯಾಲೇಸ್ ನಲ್ಲಿ ವೆನಿಲಾ ಐಸ್ ಕೇಕ್ ಆರ್ಡರ್ ಮಾಡಿ ಬಂದರು. ಅಮ್ಮ ನಾಳಿ‌ನ ಹುಟ್ಟು ಹಬ್ಬದ ಸಂಭ್ರಮಕ್ಕೆ ಸುಬ್ಬನ ಮೆಚ್ಚಿನ ಸಬ್ಬಕ್ಕಿ ಪಾಯಸ ಮಾಡಲು ತಯಾರಿ ಮಾಡಿಕೊಂಡರು.

ಬೆಳಿಗ್ಗೆ ಬೇಗನೆ ಎದ್ದು ಮಗನಿಗೆ ವಿಶ್ ಮಾಡಿದ ಅಮ್ಮ .ಯಾಕೋ ತಲೆನೋವು ಎಂದು ಅಮೃತಾಂಜನ್ ಸವರಿಕೊಂಡರು. ಆದರೂ ತಲೆನೋವು ಕಡಿಮೆಯಾಗದೇ ಕೋಣೆಗೆ ಹೋಗಿ ಸ್ವಲ್ಪ ಕಾಲ ಮಲಗಿದರು .ನೋವು ಹೆಚ್ಚಾಗತೊಡಗಿತು. ಆಸ್ಪತ್ರೆಗೆ ಹೋಗೋಣ ಎಂದರು ಡ್ಯೂಟಿಗೆ  ಹೊರಟಿದ್ದ ಗಂಡ ರಜೆ ಹಾಕಿ  ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿದ್ಧರಾದರು ನಾನೂ ಆಸ್ಪತ್ರೆಗೆ ಬರುವೆ ಎಂದು ಮಗ ಹೇಳಿದಾಗ ಬೇಡ ಶಾಲೆಗೆ ಹೋಗು ಎಂದು ಹೇಳಿ ಆಸ್ಪತ್ರೆ ಕಡೆ ಹೊರಟರು. ಆಸ್ಪತ್ರೆಯಲ್ಲಿ ಅದೂ ಇದೂ ಟೆಸ್ಟ್ ಗಳು ಆದ ಬಳಿಕ ಅಮ್ಮನಿಗೆ ಅನೀಮಿಯಾ ಎಂದು ತಿಳಿದು ಅಡ್ಮಿಟ್ ಮಾಡಿದರು. ಸಂಜೆ ಮಗ ಆಸ್ಪತ್ರೆಗೆ ಬಂದ. ನಾನು ಇವತ್ತು ನಿನಗೆ  ಸಬ್ಬಕ್ಕಿ ಪಾಯಸ ಮಾಡ್ಬೇಕು, ನೀನು ಕೇಕ್ ಕಟ್ ಮಾಡೋದ ನೋಡ್ಬೇಕು ಅಂದ್ಕೊಂಡೆ ,ಈಗ ಈ ಆಸ್ಪತ್ರೆಯ ಬೆಡ್ ಮೇಲಿದೇನೆ, ಈ ವರ್ಷ ನಿನಗೆ ಏನೂ ಗಿಪ್ಟ್ ಕೊಡೋಕೆ ಆಗ್ತಾ ಇಲ್ಲ. ಎನೋ ಮಾಡೋದು? ಎಂದು ಬೇಸರದಿ ಅಮ್ಮ ಅಂದಾಗ " ಅಮ್ಮಾ ಅದನ್ನೆಲ್ಲಾ ತಲೆ ಕೆಡಿಸ್ಕೊ ಬೇಡ  ಇದುವರೆಗೆ ಪ್ರತಿವರ್ಷ ನಾನು ಹುಟ್ಟಿದ ದಿನಾನಾ ಗ್ರಾಂಡ್ ಆಗಿ ಆಚರಣೆ  ಮಾಡಿದಿರ, ನನಗೆ ಈಗ ಏನೂ ಬೇಡ ನೀನೆ ನನಗೆ ದೇವರು ಕೊಟ್ಟ ದೊಡ್ಡ ಗಿಪ್ಟ್ .ಸುಮ್ನೆ ರೆಸ್ಟ್ ತಗೋಳಮ್ಮ.ಆಯಾಸ ಆಗತ್ತೆ ಜಾಸ್ತಿ ಮಾತಾಡ್ಬೇಡ.ಎಂದ ಮಗನ ನೋಡಿ ಅವಳ ಕಣ್ಣಿಂದ ನಾಲ್ಕು ಹನಿಗಳು ಉದುರಿದವು....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು


12 ಫೆಬ್ರವರಿ 2022

ಉದಕದೊಳಗಿನ ಕಿಚ್ಚು. ಭಾಗ ೧೮.

 



ತಿಪ್ಪೇರುದ್ರಸ್ವಾಮಿ ಬಸ್ ಹತ್ತಿದ ಮುಕುಂದಯ್ಯನಿಗೆ ಇಂದು ಏನೋ ಸಾಧನೆ ಮಾಡಿದ ಸಂತಸ .ಅಳಿಯನಿಗೆ ಒಳ್ಳೆಯ ಕಾಲೇಜು ಸೇರಿಸಿರುವೆ ,ಇವನು ಚೆನ್ನಾಗಿ ಓದಿ ಡಾಕ್ಟರ್, ಇಲ್ಲವೇ  ಇಂಜಿನಿಯರ್, ಇಲ್ಲ ಬಿಎಸ್ಸಿ ಒದಿ ಒಳ್ಳೆಯ ಕೆಲಸ ತಗಂಡೇ  ತಗಂತಾನೆ ಮುಂದೆ ಅವರಮ್ಮನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಮನದಲ್ಲಿ ಸಂತಸ ಪಡುತ್ತಾ ಕನಸ ಕಾಣುತ್ತಿದ್ದರು.

ಸತೀಶನಿಗೆ ಮಾತ್ರ ಮನಸ್ಸು ಸರಿಯಿರಲಿಲ್ಲ ,ಬಸ್ ನಿಲ್ದಾಣದ ಬಳಿ ಯಾರೊ ಹೇಳಿದ ಮಾತು ಇನ್ನೂ ಅವನ ಕಿವಿಯಲ್ಲಿ ಗುಯ್ ಗುಡುತ್ತಿತ್ತು. ಬೇಡವೆಂದರೂ ಏನೇನೂ ಕೆಟ್ಟ ಯೋಚನೆಗಳು ಬರತೊಡಗಿದವು. ಮತ್ತೊಮ್ಮೆ ದೇವರಲ್ಲಿ ಬೇಡಿದ ದೇವರೆ ಆ ಹುಡುಗಿ ನನ್ನ ಸುಜಾತ ಆಗಿರದಿರಲಿ! ಇಂದು ಈ ಬಸ್ ಯಾಕೆ ಇಷ್ಟು ನಿಧಾನವಾಗಿ ಹೋಗುತ್ತಿದೆ ,ಪ್ರೇಮಿಗಳ ಸಮಾಗಮಕ್ಕೆ  ಸಮಯ ನಿಧಾನವಾಗಿ ಚಲಿಸುವುದಂತೆ,ಅಥವಾ ದೀರ್ಘವಾಗಿ ಕಾಣುವುದಂತೆ, ಸಾವಾದ ಮನೆಗೆ ಅಥವಾ ಅಪಘಾತವಾದ ಸ್ಥಳ ನೋಡಲು ಹೊರಟರೆ ದಾರಿ ಬೇಗ ಸಾಗದಂತೆ .ಇಂದು ಅದೇಕೋ ನಿಜ ಎನಿಸತೊಡಗಿದೆ. ಹರ್ತಿಕೊಟೆ ಬಳಿ ಅಪಘಾತ ಆಗಿದೆ ಅಂದರು.ಈ  ಬಸ್ ಗೆ ಪವಾಡಪುರುಷ ತಿಪ್ಪೇರುದ್ರಸ್ವಾಮಿ ಎಂದು ಹೆಸರಿಟ್ಟಿದ್ದಾರೆ. ಇದು ನೋಡಿದರೆ ಒಳ್ಳೆಯ ಜಟಕಾ ಬಂಡಿ ಹೋದ ಹಾಗೆ ಹೋಗುತ್ತಿದೆ . ಮ್ಯಾಕಲೂರಹಳ್ಲಿ ಗೇಟ್ ದಾಟೋದಕ್ಕೆ ಇಷ್ಟು ಹೊತ್ತು ಬೇಕೆ? ಇನ್ನೂ ನೂರಾಮೂರುಗೇಟ್ ,ಬಾಲೇನಹಳ್ಳಿ ಗೇಟ್ ,ಚನ್ನಮ್ಮನಹಳ್ಳಿ ಗೇಟ್ ದಾಟಿ ಎರಡು ಕಿಲೋಮೀಟರ್ ದಾಟಿದರೆ ಸಿಗೋದು ಹರ್ತಿಕೋಟೆ .ಅಲ್ಲಿ ಯಾರಾದರೂ ಮಾಹಿತಿ ಹೇಳಬಹುದು, ದೇವರೆ ಅವಳಿಗೆ ಏನೂ ಅಗದಿರಲಿ,

.ಮತ್ತೆ ಮನದಲೆ ಅಂದುಕೊಂಡ ಸತೀಶ .

ಅಂತೂ ಬಸ್ ಹರ್ತಿಕೋಟೆಯ ಬಳಿ ಬಂದಿತು ಸತೀಶನ ಹೃದಯ ಬಡಿತ ಜೋರಾಯಿತು .ಬಸ್ ಎಡಗಡೆಯ ರಸ್ತೆಯ ಭಾಗದಲ್ಲಿ  ಒಂದು ಪಲ್ಟಿ ಹೊಡೆದಿದೆ ಎಂದು ಹೇಳಿದ ನೆನಪು "ಹರ್ತಿಕೊಟೆ...  ಹರ್ತಿಕೊಟೆ .... ಬಸ್ ಕ್ಲೀನರ್ ,ಮತ್ತು ಕಂಡಕ್ಟರ್ ವಿಭಿನ್ನವಾದ ಧ್ವನಿಯಲ್ಲಿ ಕೂಗಿ ಯಾರ್ ಇಳಿಯಾದ್ ಬರ್ರಿ .. "ಎಂದರು .

ಸತೀಶ ಸೀಟಿಂದ ಎದ್ದು ಇಳಿಯಲು ಹೊರಟ  "ಏ ಇದಿನ್ನ ಹರ್ತಿಕೊಟೆ ಕಣಲೆ ಕುತ್ಕ ಇನ್ನೂ ಯರಬಳ್ಳಿ ಬಂದಿಲ್ಲ ಇಂಗೆ ಪರ್ಪಾಟಾದರೆ ದಿನ ಕಾಲೇಜಿಗೆ ಎಂಗ್ ಓಡಾಡ್ತಿಯೋ? "

ವ್ಯಂಗ್ಯವಾಗಿ ಬೈಯ್ದರು ಮುಕುಂದಯ್ಯ .ಎರಡು ಮೂರು ಸೀಟಿನ ಜನರು ನಕ್ಕರು. ಬೇಸರದಿಂದ ಸೀಟಿನಲ್ಲಿ ಕುಳಿತ ಸತೀಶ. ಬಸ್ ಕಪಿಲೆ ಹಟ್ಟಿ ದಾಟಿ ,ಕಳವಿಭಾಗಿ ಗೇಟ್ ಆದಮೇಲೆ ದೊಡ್ಸೇತುವೆ ದಾಟುತ್ತಿದ್ದಂತೆ ಆ ಯರಬಳ್ಳಿ......ಬರ್ರಿ.....ಯರಬಳ್ಳಿ..,. ಎಂದು ರಾಗವಾಗಿ ಕೂಗಿದ ಕಂಡಕ್ಟರ್ .

ಬಸ್ ಇಳಿದ ತಕ್ಷಣ ಮತ್ತೆ ಅದೇ ಚಿಂತೆ ಅವಳ ಮನೆಗೆ ಹೋಗಿ ವಿಷಯ ತಿಳಿಯೆಲೆ? ಬ್ಯಾಡ ಮೊನ್ನೆ ಅವರ ಮನೆ ಹತ್ರ ಹೋದಾಗ "ಇಂಗೆಲ್ಲ ಪದೇ ಪದೇ ಮನೆ ಹತ್ರ ಬರ್ ಬಾರ್ದಪ್ಪ ಚೆನ್ನಾಗಿರಲ್ಲ" ಎಂದು ನಯವಾಗೆ ಬೈದಿದ್ದರು  ಸುಜಾತಳ ಅಮ್ಮ.ಮತ್ತೆ ಹೇಗೆ ವಿಷಯ ತಿಳಿಯೋದು ಎಂದು ತಲೆ ತಗ್ಗಿಸಿ ಮಾವನ ಹಿಂದೆ ನಡೆಯುವಾಗ 

" ಮುಕುಂದಣ್ಣ ಹಿರಿಯೂರಿಗೆ ಹೋಗಿದ್ರಾ?" ಹೆಣ್ಣು ಧ್ವನಿ ಕೇಳಿತು. ಮುಂದೆ ನೋಡಿದ ತನ್ನ ಕಣ್ಣ ತಾನೆ ನಂಬಲಿಲ್ಲ ಅದೇ ಸುಜಾತ! ಇದು ಕನಸಲ್ಲ ಎಂದು ತನ್ನನ್ನು ಜಿಗುಟಿಕೊಂಡು ಖಾತ್ರಿ ಮಾಡಿಕೊಂಡ

" ಊಂ ಕಣಮ್ಮ ಇವನ್ನ ಕಾಲೇಜಿಗೆ ಸೇರಿಸಿ ಬಂದೆ" 

" ನೀನ್ ಎಲ್ಲಿ ಸೇರಿದೆಮ್ಮ ಕಾಲೇಜಿಗೆ "

" ನಾಳೆ ನಾವು ಹಿರಿಯೂರಿಗೆ ಹೋಗ್ತಿವಿ ಅಣ್ಣ ,ಇವತ್ತು ನಾವು ಕಾಲೇಜ್ ಸೇರಾಕೆ ಬರ್ಬೇಕಾಗಿತ್ತು ನಮ್ಮಪ್ಪಗೆ ಚಳ್ಳಕೆರೆಲೇನೋ ಮೀಟಿಂಗ್ ಇತ್ತಂತೆ ಹೋದ್ರು . ಅದಕ್ಕೆ ಇವತ್ತು ಬರಲಿಲ್ಲ" ಸತೀಶನ ಮುಖ ನೋಡಿ ಹೇಳಿದಳು .

"ಸರಿ ಅಣ್ಣ ಅಂಗಡಿಗೆ ಟೀ ಪುಡಿ ತರಬೇಕು ಬತ್ತಿನಿ" ಎಂದು ಹೊರಟಳು.

ಮುಂದೆ ಹೋಗಿ ಹಿಂತಿರುಗಿ ನೋಡಿ ನಕ್ಕಳು , ಸತೀಶನೂ ಹಿಂತಿರುಗಿ ನೋಡಿದ ,ಸತೀಶ ನಗಲಿಲ್ಲ ,ಅವನಿನ್ನು ಶಾಕ್ ನಿಂದ ಹೊರಬಂದಿರಲಿಲ್ಲ ,ಸುಜಾತಾ ಕೈಯನ್ನು ಅಲ್ಲಾಡಿಸುತ್ತಾ ಹುಬ್ಬು ಮೇಲೇರಿಸಿ ಏನು? ಯಾಕೆ? ಎಂದು ಸನ್ನೆ ಮಾಡಿದಳು . ಅಷ್ಟರಲ್ಲಿ ಮುಕುಂದಯ್ಯ 

" ಯಾಕಲ ಹಿಂದಕ್ ಸರ್ಕಂಡೆ ಬಾರೋ ಮನೆ ಹತ್ರ ಬಂತು .ಅಜ್ಜಿಗೆ  ನೀನೆ ಮೊದ್ಲು ಹೇಳು ಕಾಲೇಜ್ ಸೇರ್ದೆ ಅಂತ ಖುಷಿಯಾಗುತ್ತೆ ಅಜ್ಜಿ " ಎಂದರು .

ಪ್ರತಿದಿನ ಬೆಳಿಗ್ಗೆ ಜೈರಾಂ ಬಸ್ಗೆ ಹೋಗಿ ಮಧ್ಯಾಹ್ನ ಎಸ್ .ಆರ್. ಇ 

.ಬಸ್ ಗೆ ಹಿಂತಿರುಗಿ ಬರುವುದು ಬಂದು  ಹೋಮ್ ವರ್ಕ್ ಮಾಡಿ, ಸಂಜೆ ಹೊತ್ತಿಗೆ ರೊಪ್ಪಕ್ಕೆ ಹೋಗಿ ಒಬ್ಬನೆ ಹುಲ್ಲು ತರುತ್ತಿದ್ದ ಆಗ ಗುರುಸಿದ್ದನ ನೆನಪಾಯಿತು. ಅವನಿದ್ದಿದ್ದರೆ ನನಗೆ ಸಹಾಯವಾಗುತ್ತಿತ್ತು ಎಂದುಕೊಂಡ ಸಂಜೆ ಹಾಲು ಕರೆಯಲು ಮುರಾರಿಗೆ ಸಹಾಯ ಮಾಡಿ   ,ಓದಿಕೊಳ್ಳಲು ಕುಳಿತರೆ ರಾತ್ರಿ ಏಳುವರೆ ಆಗಿರುತ್ತಿತ್ತು.


ಮೊದಲೆಡರಡು ದಿನ ಕಾಲೇಜ್ ಗೆ ಸುಜಾತ ಬಸ್ ಗೆ ಬರಲಿಲ್ಲ ಸೋಮವಾರ ಅಪ್ಪನ ಜೊತೆ ಬಂದು ಬಸ್ ಹತ್ತಿದಳು ಅಪ್ಪ ಬಸ್ ಹತ್ತಿಸಿ ಜೋಪಾನ ಎಂದು ಹೊರಟರು. ಇಂದೇಕೋ ಬಸ್ ಬೇಗ ಹಿರಿಯೂರಿಗೆ ಬಂದಂತಾಯಿತು ಸತೀಶನಿಗೆ .ಸರ್ಕಾರಿ ಆಸ್ಪತ್ರೆ ನಿಲ್ದಾಣದಲ್ಲಿ ಬಸ್ ನಿಂತಾಗ ಇಬ್ಬರೂ ಬಸ್ ಇಳಿದು ಮಾತನಾಡುತ್ತಾ ನಡೆದು ಸತೀಶ ಕಾಲೇಜು ಕಡೆ ತಿರುಗಿ "ಯಾಕೆ ಅಲ್ಲೆ ನಿಂತೆ ಬಾ ಒಳಗೆ "ಅಂದ .

" ನಂದು ಈ ಕಾಲೇಜ್ ಅಲ್ಲ ಅಗೋ ನೋಡು ಅದು ಎಂದು ಸ್ವಲ್ಪ ದೂರದಲ್ಲಿ ಇರುವ ಗಿರೀಶ ಕಾಲೇಜಿನ ಕಡೆ ತೋರಿಸಿದಳು" ಮತ್ತೊಂದು ಶಾಕ್ ನಿಂದ ಸತೀಶ

"ಅಯ್ಯೋ ಮೊದಲೆ ಗೊತ್ತಾಗಿದ್ದರೆ ನಾನು ಅಲ್ಲಿಗೆ ಸೇರುತ್ತಿದ್ದೆ." ಅಂದ 

"ಸತು ಅದು ಬರೀ ಹುಡಿಗೀರ ಕಾಲೇಜು ನೀನೇನ್ ಹುಡುಗೀನ ನಕ್ಕಳು .ಇವನು ನಗಲಿಲ್ಲ .

"ಮಧ್ಯಾಹ್ನ  ಎಸ್ ಆರ್ ಇ ಬಸ್ ಹತ್ತರ ಬತ್ತಿನಿ" ಅಂದು ಹೊರಟೇ ಹೋದಳು.


ಎಂತಾ ಕೆಲ್ಸ  ಆತಪ್ಪ ನಾನೇನೋ ಇಬ್ಬರೂ ಒಂದೆ ಕಾಲೇಜು ಸೇರ್ತಿವಿ ಅಂತ ಅಂದ್ಕೊಂಡ್ರೆ ಇವಳು ಅದ್ಯಾವುದೋ ಗಿರೀಶ ಕಾಲೇಜ್ ಸೇರ್ಬಿಟ್ಟಿದ್ದಾಳೆ ಇದೆಲ್ಲಾ ಅವರ್ಪಂದೆ ಕಿತಾಪತಿ ಎಂದು ಬೈಯ್ದುಕೊಳ್ಳುತ್ತಾ ಕಾಲೇಜು ಕಾಪೌಂಡ್ ದಾಟಿ ಒಳ ಹೋದಾಗ ಕಾಲೇಜ್ ಅಂಗಳದಲ್ಲಿ ಯಾರೂ ಇರಲಿಲ್ಲ ಅಯ್ಯೋ ಲೇಟ್ ಆಯ್ತು ಆಗಲೆ ಲೆಕ್ಚರ್ ಕ್ಲಾಸ್ ತೆಗಂಡದಾರೆ ಎಂದು ಜೋರಾಗಿ ಓಡಿದ.

" ಮೇ ಐ ಕಮ್ ಇನ್ ಸರ್"

"ವೈ ಆರ್ ಯು ಲೇಟ್ "

"ಸಾರ್ ನಮ್ಮೂರಿಂದ ಬರೋ ಬಸ್ ಲೇಟಾಯ್ತು ಸರ್" ಕನ್ನಡದಲ್ಲೇ ಹೇಳಿದ 

" ಪ್ರಂ ಟುಮಾರೋ ಆನ್ವರ್ಡ್ಸ ಯು ಮಸ್ಟ್ ಕಮ್ ಇನ್ಟೈಂ ಅಂಡರ್ಸ್ಟ್ಯಾಂಡ್ " ಗುಡುಗಿದರು ಲೆಕ್ಚರ್ .

ಒಕೆ ಸರ್ ಎಂದು ಬಂದು ಕೊನೆ ಬೆಂಚಲ್ಲಿ ಮಾತ್ರ ಜಾಗವಿದ್ದದರಿಂದ ಅಲ್ಲೇ ಕುಳಿತುಕೊಂಡ.

" ತೀಟಾಸ್ ಆರ್ ವೆರಿ ಇಂಪಾರ್ಟೆಂಟ್ ಇನ್ ಮ್ಯಾತಮ್ಯಾಟಿಕ್ಸ್ ಕಾಸ್ತೀಟಾ, ಸಿಕ್ಯಾನ್ ತೀಟಾ,................ಹೀಗೆ ಏನೇನೊ ಬರಿ ಇಂಗ್ಲೀಷ್ ನಲ್ಲಿ ಹೇಳುತ್ತಾ ಇದ್ದರು ಲೆಕ್ಚರ್ ಈ ಪದ ಯಾವುದನ್ನೂ ಸತೀಶ ಇದುವರೆಗೂ ಕೇಳೇ ಇಲ್ಲ ,  ಲೆಕ್ಚರರ್ ಇಂಗ್ಲೀಷ್ನಲ್ಲಿ ಪಾಠ ಮುಂದುವರೆಸಿ ಮಧ್ಯ ಮಧ್ಯ ಏನೇನೊ ಪ್ರಶ್ನೆ ಕೇಳುತ್ತಿದ್ದರು. ಮುಂದೆ ಕುಂತಿರೋ ಹುಡುಗಿಯರು ಪಟ ಪಟ ಇಂಗ್ಲೀಷ್ ನಲ್ಲೇ ಉತ್ತರ ಹೇಳುತ್ತಿದ್ದರು .ಅವರು ಗುಡ್ ಎನ್ನುತ್ತಿದ್ದರು.ಅವರು ಏನಾದರೂ ನನ್ನ  ಪ್ರಶ್ನೆ ಕೇಳಿದರೆ ಏನಪ್ಪ ಗತಿ ಮರ್ಯಾದೆ ಹೋಗೋದು ಗ್ಯಾರಂಟಿ ಎಂದುಕೊಂಡು  ದೇವರೆ ನನ್ನ ಪ್ರಶ್ನೆ ಕೇಳದಿರಲಿ ಆ ಲೆಕ್ಚರರ್ ಎಂದು ಮನದಲ್ಲೇ ಬೇಡಿದ .

ಅಂತೂ ಮ್ಯಾತ್ಸ್ ಪೀರಿಯಡ್ ಮುಗಿತು.

ಬಯಾಲಜಿ ಮೇಡಂ ಬಂದರು ಅವರೂ ಇಂಗ್ಲೀಷ್ ನಲ್ಲೇ ಪಾಠ ಶುರುಮಾಡಿದರು.ಸೆಂಟ್ ಆನ್ಸ್ , ಅಸಂಪ್ಷನ್ ಶಾಲೆಯಲ್ಲಿ ಓದಿದ ಹುಡುಗ, ಹುಡುಗಿಯರಂತೆ ಮೇಡಂ ಹೇಳೋಕು ಮುಂಚೆನೇ ಏನೇನೋ ಇಂಗ್ಲೀಷ್ನಲ್ಲಿ ಹೇಳುತ್ತಿದ್ದರು. ಮೇಡಂ ವೆರಿಗುಡ್ ಎಂದು ಮುಂದಿನ ಪಾಯಿಂಟ್ ಗೆ ಹೋಗುತ್ತಿದ್ದರು. ಈ ಪಿರಿಯಡ್ ಮುಗಿದರೂ ಸತೀಶನ ತಲೆಯಲ್ಲಿ ಒಂದೇ ಒಂದು ಪದ ಹೋಗಲಿಲ್ಲ.

ಕನ್ನಡ ಭಾಷೆಯ ಪಿರಿಯಡ್ ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಪಾಠ ಕೇಳುವಾಗ ಸತೀಶನಿಗೆ ನಾನಾವುದೋ ಬೇರೆ ರಾಜ್ಯ ಅಲ್ಲಲ್ಲ ಬೇರೆ ದೇಶಕ್ಕೆ ಬಂದ ಅನುಭವ ಆಗುತ್ತಿತ್ತು. 

"ಯರಬಳ್ಳಿಯಲ್ಲಿ ಎಲ್ಲರೂ ಬಂದು  ನನ್ನ ಮಾತನಾಡಿಸುತ್ತಿದ್ದರು, ನೋಟ್ಸ್ ಕೇಳುತ್ತಿದ್ದರು, ಡೌಟ್ ಕೇಳ್ತಿದ್ದರು ,ಎಲ್ಲಾ ಮೇಷ್ಟ್ರು ನನ್ನ ಎಷ್ಟು ಚೆನ್ನಾಗಿ ಮಾತಾಡುಸ್ತಿದ್ರು ,ಇಲ್ಲಿಗೆ ಬಂದು ಒಂದ್ ವಾರ ಆದ್ರೂ ಯಾರೂ ಪರಿಚಯ ಇಲ್ಲ ,ನಾನು ಇಲ್ಲಿ ಕಾಲೇಜಿಗೆ ಸೇರಲೇ ಬಾರದಾಗಿತ್ತು ನಮ್ಮ ಜಯರಾಮ  ಮಾವನ ಮಗ ಶಂಕರಣ್ಣ ಹೇಳಿದ್ದು ಈಗ ನೆನಪಿಗೆ ಬಂತು .

" ನೀನು ಕನ್ನಡ ಮೀಡಿಯಂ ನಲ್ಲಿ ಓದಿರೋದು ನಿನಗೆ ಸೈನ್ಸ್ ಕಷ್ಟ ಆಗುತ್ತೆ ಬ್ಯಾಡ  ಸುಮ್ಮನೆ ಯಾಕೆ ಆರ್ಟ್ಸ್ ತಗಂಡು ಓದು "ಎಂದು ಸಲಹೆ ನೀಡಿದರು  ಆದರೆ ಮುಕುಂದಯ್ಯ ಮಾವ ನನ್ ಏನು ಕೇಳಲೇ ಇಲ್ಲ ಅವರೆ ಮನಸ್ಸಲ್ಲಿ ಡಾಕ್ಟರ್ ಇಂಜಿನಿಯರ್ ,ಏನೇನೋ ಯೋಚನೆ ಮಾಡಿ ನನ್ ತಂದು ಇಲ್ಲಿ ಸೇರಿಸಿದರು .

ನಾನು ಹೇಗೆ ಓದಲಿ ಎಂದು ಯೋಚಿಸುತ್ತಿರುವಾಗಲೆ ಲಾಂಗ್ ಬೆಲ್ ಆಯ್ತು 

ಬಸ್ ನಿಲ್ದಾಣದ ಹತ್ತಿರ ಬಂದ ಸುಜಾತ ನಿಂತಿದ್ದಳು. ಅವಳ ಮುಖದಲ್ಲೂ ನಗುವಿಲ್ಲ .ಸತೀಶನೆ ಹತ್ತಿರ ಹೋಗಿ "ಯಾಕೆ ಡಲ್ ಆಗಿದಿಯಾ?" ಕೇಳಿದ.

" ಅವರ್ ಪಾಠ ಮಾಡೋದು ನನಗೇನು ಅರ್ಥ ಆಗ್ತಿಲ್ಲ " ಅಳಲು ಶುರುಮಾಡಿದಳು.

" ಹೇ ಅಂಗೆಲ್ಲ ಅಳಬೇಡ ಕಂಟ್ರೋಲ್ ಮಾಡ್ಕೊ ,ಯಾರಾದರೂ ನೋಡಿದರೆ ನಾನೇ ಏನಾದರೂ ಮಾಡಿದೆ ಅಂತ ತಪ್ಪು ತಿಳ್ಕೊತಾರೆ ." ಸಮಾಧಾನ ಮಾಡಿದ ಸತೀಶ.

ಬಸ್ ನಲ್ಲಿ ಇಬ್ಬರಿಗೂ ಸೀಟು ಸಿಗದೆ ನಿಂತಿದ್ದರು ಇನ್ನೂ ಅಳು ಮೋರೆ ಹಾಕಿ ನಿಂತಿದ್ದಳು ಸುಜಾತ .ಆ ಕಡೆ ಈ ಕಡೆ ನೋಡಿ ಅವರ ಊರವರು ಯಾರೂ ಇಲ್ಲ ಎಂದು ಖಚಿತಪಡಿಸಿಕೊಂಡು ಮೆಲ್ಲಗೆ 

" ನನಗೂ ನಮ್ಮ ಕಾಲೇಜಿನಲ್ಲಿ ಮಾಡೋ ಪಾಠ ಒಂಚೂರು ಅರ್ಥ ಆಗಲ್ಲ, ನಾವು ಸೈನ್ಸ್ ತಗಾಬಾರ್ದಾಗಿತ್ತು" ಅಂದ

" ನನಗೆ ಸೈನ್ಸ್ ಬ್ಯಾಡ ಅಂದೆ ನಮ್ಮಪ್ಪ ತಂದು ಸೇರಿಸಿಬಿಟ್ರು"

" ನೀನಾದ್ರೂ ನಿನಗೆ ಬ್ಯಾಡ ಅಂದೆ ನನಗೆ ಮಾತಾಡಾಕೆ ಅವಕಾಶ ಕೊಡ್ದೆ ನಮ್ಮಾವ ಕರ್ಕೊಂಡು ಬಂದು ಸೇರಿಸಿಬಿಟ್ರು ಏನ್ ಮಾಡೋದು ಕಷ್ಟ ಪಟ್ಟು ಓದೋಣ ಸಮಾಧಾನ ಮಾಡ್ಕೊ" ಎಂದ 

ಬಾಲೇನಹಳ್ಳಿ ಗೇಟ್ನಲ್ಲಿ ಎರಡು ಸೀಟು ಖಾಲಿಯಾದವು ಇಬ್ಬರೂ ಕುಳಿತರು.ಇನ್ನೂ ಬಿಕ್ಕುತ್ತಿದ್ದ ಸುಜಾತ ಸತೀಶನ ತೋಳೊಗೊರಗಿ  ಮಲಗೇ ಬಿಟ್ಟಳು .

ಯರಬಳ್ಳಿ ಬಂದಾಗ ಸತೀಶ ಅವಳನ್ನು ಎಬ್ಬಿಸಿ ಬಸ್ ಇಳಿದು , ಮೊದಲು ಸುಜಾತ ಅವರ ಮನೆ ಕಡೆ ನಡೆದಳು ಸ್ವಲ್ಪ ಹೊತ್ತಾದ ಬಳಿಕ ಸತೀಶ ನಡೆದ.


****************************

ಎರಡು ಮೂರು ತಿಂಗಳಾದ್ದರಿಂದ ಹಿರಿಯೂರಿನ ಬಹುತೇಕ ರಸ್ತೆಗಳು ಗಲ್ಲಿಗಳು ಪರಿಚಯವಾದವು ಸತೀಶನಿಗೆ.

ಸುಜಾತಳಿಗೆ ಕಾಲೇಜು ಬರು ಬರುತ್ತಾ ಬೋರ್ ಆಗತೊಡಗಿತು.

ಎರಡು ಮೂರು ಬಾರಿ ಕಾಲೇಜ್ ಗೆ ಚಕ್ಕರ್ ಹೊಡೆದ ಜೋಡಿಯು  ಕಡ್ಲೇಕಾಯಿ ಮಂಡಿ ಪಾರ್ಕ್ ನಲ್ಲಿ ಗಂಟೆ ಗಟ್ಟಲೆ ಹರಟೆ ಹೊಡೆದು ಮಧ್ಯಾಹ್ನದ ಬಸ್ ಗೆ ಸರಿಯಾಗಿ ಬಸ್ ನಿಲ್ದಾಣ ತಲುಪಿ ಮನೆಗೆ ತಲುಪುತ್ತಿದ್ದರು.


ಇದೇ ತರಹ ಕಾಲೇಜು ತಪ್ಪಿಸಿ ಪಾರ್ಕ್ ನಲ್ಲಿ ಕೂರುವ ಆಟ ಕಡ್ಲೇಕಾಯಿ ಮಂಡಿ ಪಾರ್ಕ್ ನಿಂದ ವಾಣಿ ಕಾಲೇಜು ತೋಪಿನ ವರೆಗೆ ಮುಂದುವರೆಯಿತು .

"ಸತೀಶನ ಬಳಿ ಮೈಗೆ ಮೈತಾಗಿಸಿ ಕುಳಿತಾಗ ವಯಸ್ಸಿಗೆ ಬಂದ ಹದಿಹರೆಯದ ಹುಡುಗ ಹುಡುಗಿಯರ ದೇಹ ಮನದಲ್ಲಾಗುವ ಬದಲಾವಣೆ ಇವರಿಬ್ಬರಲ್ಲೂ ಆಗುತ್ತಿತ್ತು.ಸುಜಾತ ಸ್ವಲ್ಪ ಹೆಚ್ಚಾಗಿ ಪ್ರತಿಕ್ರಿಯೆ ತೋರುತ್ತಾ, ಸತೀಶನ ಬಳಿ ಬಂದರೂ ಸತೀಶ ಬಹಳ ಸಂಯಮದ ವರ್ತನೆ ತೋರುತ್ತಿದ್ದ, ಕೆಲವೊಮ್ಮೆ ಅವನ ಈ ವರ್ತನೆ ಸುಜಾತಳಿಗೆ ಬೇಸರ ಆದರೂ ನನ್ನ ಹುಡುಗ ಒಳ್ಳೆಯವನು ಎಂದು ಮನದಲ್ಲೇ ಸಂತಸಪಡುತ್ತಿದ್ದಳು.

" ಸತೀಶ್ ನಾವು ಹೀಗೆ ಕಾಲೇಜ್ಗೆ ಹೋಗ್ದೇ ಟೈಮ್ ವೇಸ್ಟ್ ಮಾಡ್ತಾ ಇದ್ದರೆ ಪಾಸಾಗೋದೇಗೆ ?"

" ಓ ನಿನಗೆ ಪಾಸಾಗೋ ಆಸೆ ಇದಿಯಾ? ಇದುವರೆಗೆ ಪಾಠ ಏನೂ ತಲೆಗೆ ಹೋಗಿಲ್ಲ ಜೊತೆಗೆ ಈ ತರ ಸುತ್ತುತಾ ಇದಿವಿ   

ನಾನಂತೂ ಪೇಲ್ ಆಗೋನೆ ,ನೀನಾದ್ರೂ ಓದಿ ಪಾಸಾಗು "

" ನಾನೇನು ರ್ಯಾಂಕ್  ಬರೋ ಹಾಗೆ ಓದ್ತಾ ಇದಿನಾ?" ನಗುತ್ತಾ ಸತೀಶನ ಬಳಿ ಬಂದು ಅವನ ಮುಂದಲೆಯ ಕೂದಲಲ್ಲಿ ಕೈಯಾಡಿಸಿ ನಗುತ್ತಾ ಕೇಳಿದಳು.

" ನಾವು ಹೀಗೆ ಓಡಾಡೋದು ನಮ್ ಮಾವ ,ನಿಮ್ಮಪ್ಪ ಅಥವಾ ಬೇರೆ ಯಾರಿಗಾದ್ರೂ ಗೊತ್ತಾದ್ರೆ " ಮೂರ್ನಾಲ್ಕು ತಿಂಗಳು ಇಲ್ಲದ ಅಳುಕು ಕಾಣಿಸಿತು ಸತೀಶನಿಗೆ.

" ಗೊತ್ತಾಗ್ಲಿ ಬಿಡು ,ಒಳ್ಳೆದೇ ಆಗುತ್ತೆ ಮದುವೆ ಮಾಡ್ಸಿ ಅನ್ನೋಣ "

"ಅಯ್ಯೋ ನಿನ್ನ ,ಅದೇನ್ ಧೈರ್ಯನೆ ನಿನಗೆ,

ಸರಿ ಮದುವೆ ಮಾಡ್ತಾರೆ ಅಂದ್ಕೊಳ್ಳೊಣ ಜೀವನ ಮಾಡೋದ್ ಹೇಗೆ "

" ನನಗೆ ನಿನ್ನ ಬಗ್ಗೆ ಅಭಿಮಾನ ಇದೆ ,ನಂಬಿಕೆ ಇದೆ , ನೀನ್ ದುಡಿದು ನನ್ ಸಾಕ್ತಿಯಾ ಅಂತ ಮನಸು ಹೇಳ್ತೈತೆ"

" ಅಮ್ಮಣ್ಣಿ ನಿನ್ ಅಭಿಮಾನ ,ನಂಬಿಕೆ,ಮನಸು, ಇವೆಲ್ಲ ಹೊಟ್ಟೆ ತುಂಬ್ಸಲ್ಲ ಭಾಷಣ ಮಾಡಾಕೆ ಚೆನಾಗಿರುತ್ತೆ ಅಷ್ಟೇ "

"ಅದೆಲ್ಲ ನನಗ್ ಗೊತ್ತಿಲ್ಲ ನಾನಂತೂ ಡಿಸೈಡ್ ಮಾಡಿದಿನಿ ,ಅವತ್ತು ಒಂದು ವರ್ಷದ ಕೆಳಗೆ ಶಾಂತಮೂರ್ತಿ ಸರ್ ನಮ್ಮಿಬ್ಬ್ರೂನ ಕರ್ಸಿ ಬುದ್ದಿ ಹೇಳ್ದಾಗ ಒಂದು ವರ್ಷ ಆದ್ಮ್ಯಾಲೂ ನಿಮಗೆ ಪ್ರೀತಿ ಇದ್ದರೆ ಅದು ನಿಜ ಪ್ರೀತಿ ಅಂತ ನೆನಪಿದೆಯಾ ನಿನಗೆ ? ಈಗಲೂ ನಾವು ಪ್ರೀತಿ ಮಾಡ್ತಾ ಇದಿವಿ ಇದು ನಿಜ ಪ್ರೀತಿ ನಾವು ಮದುವೆ ಆಗೇ ಆಗ್ತಿವಿ" ಆತ್ಮವಿಶ್ವಾಸದಿಂದ ಮಾತನಾಡುತ್ತಾ ಇದ್ದಳು ಸುಜಾತ .

ಅವಳ ತೊಡೆಯ ಮೇಲೆ ತಲೆ ಇಟ್ಟು ಮಲಗಿದ ಸತೀಶ ಅವಳ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಾ "ನನ್ನ ಮೇಲೆ ನಿನಗೆ ಅದೆಷ್ಟು ಪ್ರೀತಿ ನಿನಗೆ ಒಂದು ವೇಳೆ ನಿಮ್ಮಪ್ಪ ನಮ್  ಪ್ರೀತಿ ಒಪ್ಪದಿದ್ದರೆ? " ಪ್ರಶ್ನಿಸಿದ ಅದೇ ವೇಳೆಗೆ ವಾಣಿ ಕಾಲೇಜಿನ ಬೆಲ್ ಹೊಡೆಯಿತು.

" ನಮ್ಮಪ್ಪ ಒಪ್ಪದಿದ್ದರೆ ಓಡಿ ಬರುವೆ ಮದುವೆ ಮಾಡಿಕೊಳ್ಳೋಣ" ಸ್ಪಷ್ಟವಾಗಿ 

ಧೈರ್ಯದಿಂದ ಹೇಳೆಬಿಟ್ಟಳು ಸುಜಾತ .

ಇವರಿಬ್ಬರ ಸಂಭಾಷಣೆ ಆಲಿಸುತ್ತಾ ,ಇವರ ಸುತ್ತಲೇ ಓಡಾಡುವ ಒಬ್ಬ ಇವರಿಗಿಂತ ಮೂರ್ನಾಲ್ಕು ವರ್ಷ ದೊಡ್ಡ ಹುಡುಗನನ್ನು ಗಮನಿಸಿದ ಸತೀಶ "ಯಾರಿವನು ಅವಾಗಿನಿಂದ ನಮ್ಮ ಮಾತು ಕೇಳ್ತಾ ,ನಮ್ಮನ್ನೆ ನೋಡ್ತಾ ಓಡಾಡ್ತಾನೆ , ಅವ್ನೇನಾದ್ರೂ ನಿಮ್ ಕಡೆನವ್ನೇನೋ ನೋಡಮ್ಮ". ಕಿಚಾಯಿಸಿದ ಸತೀಶ.

"ನಾನು ಅವನ್ ನ ಇವತ್ತೇ ನೋಡ್ತಿರೋದು . ಬಹುಶಃ ಅವರ್ಯಾರೋ ನಿನಗೆ ಹೆಣ್ ಕೊಡೊ ಮಾವನ ಕಡೇರು ಇರಬೇಕು ನೋಡು" ತಿರುಗೇಟು ನೀಡಿದಳು ಸುಜಾತ , ಯಾರು ಕೇಳೇ ಬಿಡೋಣ ಎಂದು ಎದ್ದು ಆ ವ್ಯಕ್ತಿ ಕಡೆ ಹೊರಟ ಸತೀಶ ,ದೊಡ್ಡ ಹೆಜ್ಜೆ ಹಾಕಿ ಜೋರಾಗಿ ನಡೆದು ಮಾಯವಾಗಿಬಿಟ್ಟ ಅವನು.

" ನಮ್ ಹೀರೋ ಎದ್ದರೆ ಯಾರೂ ನಿಲ್ಲಲ್ಲ" ಎಂದು ಅವನ ಹತ್ತಿರ ಹೋಗಿ ಅವನ ಎದೆಯಲ್ಲಿ ಮುಖವಿಟ್ಟು ತಬ್ಬಿಕೊಂಡಳು ಸುಜಾತ .

ಟೈಂ ಆಯ್ತು ನಡಿ ಬಸ್ ಸ್ಟ್ಯಾಂಡ್ ಗೆ ಹೋಗಾನ ಲೇಟ್ ಆದರೆ ಎಸ್. ಆರ್. ಇ. ಬಸ್ ಮಿಸ್ ಆಗುತ್ತದೆ. ಆಗ ನಿಮ್ಮಪ್ಪ ಯಾಕೆ ಲೇಟ್ ಅಂತ ಕ್ಲಾಸ್ ತೊಗೊತಾರೆ.

ಅದ್ ಸರಿ ಯಾರು ಅವನು?"  ಸತೀಶ ಮತ್ತೆ ಪ್ರಶ್ನೆ ಕೇಳಿದ.

 ಇಬ್ಬರೂ ಒಬ್ಬರಿಗೊಬ್ಬರು ಕೈಹಿಡಿದುಕೊಂಡು ಟಿ. ಬಿ .ಸರ್ಕಲ್ ಕಡೆ ಹೆಜ್ಜೆ ಹಾಕಿದರು. 


**************************

" ಅಜ್ಜಿ ದಿನಾ ಓಡಾಡೋದು ಕಷ್ಟ ಆಗುತ್ತೆ ,ಓದಾಕೆ ಟೈಂ ಸಿಗಲ್ಲ ಅಲ್ಲೇ ಹಿರಿಯೂರಲ್ಲಿ ರೂಂ ಮಾಡಿಕೊಂಡು ಓದುವೆ " ಎಂದು ಮೊದಲು ಸರಸ್ವತಜ್ಜಿ ಹತ್ತಿರ ಮನವಿ ಇಟ್ಟ ಸತೀಶ.

" ಅದೇನು ದಸರ ರಜಾ ವರಗೆ  ಓಡಾಡಿದೆ ಈಗ್ಯಾಕೆ ರೂಮು? ಪ್ರಶ್ನಿಸಿದರು ಮುಕುಂದಯ್ಯ.

"ಓದಾದು ಬಾಳ ಇರುತ್ತೆ ಮಾವ ,ಅದಕ್ಕೆ ...ಎಂದು ತಲೆ ಕೆರೆದುಕೊಂಡ." ಆತು ಎಲ್ಲಿ ರೂಂ ಮಾಡ್ತಿಯಾ? ಏನಾದರೂ ಗೊತ್ತ? '" 

ಕೇಳಿದರು ಮುಕುಂದಯ್ಯ.

ನಮ್ಮ ಊರಿನ ಸೆಕೆಂಡ್ ಇಯರ್ ನರಹರಿ ಈ ವರ್ಷ ಸೆಕೆಂಡ್ ಇಯರ್ ಪಿ ಯುಸಿ ಅವರ್ ರೂಮಲ್ಲಿ ಇಬ್ಬರೆ ಇರಾದು ನಾನೂ ಅವರ್ ಜೊತೆ ಇರ್ತಿನಿ" 

" ಒಹೋ  ಮೊದ್ಲೆ ಎಲ್ಲಾ ಪ್ಲಾನ್ ಮಾಡಿದ್ದಂಗಿದಿಯಾ ,ಅವನ್ ಸರಿ ಇಲ್ಲ ನರಹರಿ ಹುಷಾರು , ಸರಿ ಶುಕ್ರವಾರ ನೆಲವಳಿ ದುಡ್ ಬರಲಿ , ಭಾನುವಾರ ರೂಂಗೆ ಹೋಗುವಂತೆ" ಎಂದರು ಮುಕುಂದಯ್ಯ.


ಅಲ್ಲಿಗೆ ಸತೀಶನ ಜೀವನದ ಮತ್ತೊಂದು ಕರಾಳ ಅದ್ಯಾಯಕ್ಕೆ ಮುನ್ನುಡಿ  ಬರೆದಂತಾಯ್ತು.


"ಮೊದಲು ದಿನವೂ ನನ್ನ ಕಾಣಲು ಹಾತೊರೆಯುತ್ತಿದ್ದೆ ಈ ವಾರದಿಂದ ಒಮ್ಮೆಯೂ ಸಿಗಲಿಲ್ಲ " ಎಂದು ಮುನಿಸಿಕೊಂಡು ಕಡ್ಲೇಕಾಯ್ ಮಂಡಿ ಪಾರ್ಕ್ ನಲ್ಲಿ ಸ್ವಲ್ಪ ದೂರದಲ್ಲಿ ಅಳುಕಿನಿಂದಲೆ  ಕುಳಿತ ಸತೀಶನ ಬಳಿ ಬಂದವಳಿಗೆ ಸಿಗರೇಟಿನ ವಾಸನೆ  ಮೂಗಿಗೆ ಬಡಿಯಿತು ಸಿಟ್ಟಾಗಿ" ಇದೇನ್ ಸತೀಶ್ ಹಿರಿಯೂರಲ್ಲಿ ರೂಂ ಮಾಡಿದ್ದು ಇದಕ್ಕೆನಾ?  ಬರೀ ಸಿಗರೇಟಾ ಅಥವಾ ಬೇರೆ? "ಬೇಸರವಾಗಿ ದೂರದಲ್ಲಿ ಕುಳಿತಳು ,ನಾನು ಏನೋನೋ ಕನಸು ಕಂಡಿದ್ದೆ ನನ್ನ ಸ್ನೇಹಿತೆಯರಿಗೆ ನನ್ನ ಸತೀಶ  ಅಪರಂಜಿ , ಈಗ ನೋಡಿದರೆ ನಿನ್ನಲ್ಲಿ ಇಂತಹ ಬದಲಾವಣೆ ಕಂಡು ಬೇಸರವಾಗುತ್ತಿದೆ ಅಳಲುಶುರು ಮಾಡಿದಳು ಸುಜಾತ .

ಅವಳ ಹತ್ತಿರ ಹೋಗಿ ಸಮಾಧಾನ ಮಾಡಿ 

" ಕ್ಷಮಿಸು ಇನ್ನೆಂದೂ ಸಿಗರೇಟ್ ಸೇದೋಲ್ಲ " ಎಂದ ಸತೀಶ.

ಇದು ಬಹು ದೊಡ್ಡ ಸುಳ್ಳು ನಾನು ಈಗಾಗಲೇ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವೆ ಎಂದು ಅವನ ಅಂತರಾತ್ಮ ಹೇಳುತ್ತಿತ್ತು.


ಸಾಮಾನ್ಯವಾಗಿ ಬೇರೆಯವರ ಮನೆಯಲ್ಲಿ ಬೆಳೆಯುವ ಮಕ್ಕಳಿಗೆ ಒಂದು ರೀತಿಯ ಅಭದ್ರತೆ ,ಕೀಳರಿಮೆ ,ಪರತಂತ್ರ ಮನೋಭಾವ ಕಾಡುವವುದು. ಬೇರೆಯವರು ಎಷ್ಟೇ ಹತ್ತಿರದ ಸಂಬಂಧಿಗಳಾಗಿರಲಿ, ಎಷ್ಟೇ ಚೆನ್ನಾಗಿ ನೋಡಿಕೊಳ್ಳಲಿ ,ಎಲ್ಲೋ ಒಂದು ಕಡೆ ಸ್ವಂತ ಅಮ್ಮ ,ಅಪ್ಪ ,ಅಣ್ಣನ ಕಡೆ ಮನ ಹಾತೊರೆಯುವುದು.


ಸತೀಶನಿಗೆ ಅವನ ಮಾವಂದಿರು, ಅಜ್ಜಿ ತಿಮ್ಮಕ್ಕ, ಎಲ್ಲರೂ ಚೆನ್ನಾಗಿ ನೋಡಿಕೊಂಡರೂ ಅವನಿಗೆ ಅಷ್ಟು ಸ್ವತಂತ್ರವಿರಲಿಲ್ಲ ,ಇದು ಕೀಳರಿಮೆಗೆ ದಾರಿಯಾಯಿತು, ಹಿರಿಯೂರಿನಲ್ಲಿ ರೂಂ ಮಾಡಿದ ಮೇಲೆ ನರಹರಿಯಂತಹ ಕೆಟ್ಟ ಹುಡುಗನ ಜೊತೆಯಲ್ಲಿ ಇರುವಾಗ ಸಹವಾಸದಿಂದ ಸನ್ಯಾಸಿ ಕೆಡದಿರಲು ಸಾದ್ಯವೆ? 

ಆ ಪೀಸು ಈ ಫೀಸು ಎಂದು ಮುಕುಂದಯ್ಯ ರವರಿಂದ ಹಣ ಪಡೆದು 

ಅದ್ಯಾವುದೋ "ಮೈಸೂರು ಮಲ್ಲಿಗೆ" "ಭಟ್ಕಳ ಮಲ್ಲಿಗೆ" ಎಂಬ ನೋಡಬಾರದ ದೇವರ ಚಿತ್ರ ನೋಡಲು ಟಿ ವಿ ,ವಿ ಸಿ ಪಿ ಬಾಡಿಗೆ ತಂದು ರಾತ್ರಿ ನಿದ್ದೆಗೆಟ್ಟು ಓದುವ ಬದಲಿಗೆ ಅಶ್ಲೀಲ ಚಿತ್ರ ನೋಡುತ್ತ ಮದ್ಯ ಸೇವಿಸುತ್ತಾ ಕಾಲ ಕಳೆದು ,ಹಗಲೆಲ್ಲ ಮಲಗಿ ಕಾಲ ಕಳೆವುದು ದಿನಚರಿಯಾಯಿತು.

ಶಾಸ್ತ್ರಕ್ಕೆ ಪರೀಕ್ಷೆ ಬರೆದು ಮೊದಲ ವರ್ಷ ಎಲ್ಲಾ ವಿಷಯಗಳಲ್ಲಿ ಪೇಲಾದರೂ ಮನೆಯಲ್ಲಿ ಪಾಸಾಗಿರುವೆ ಎಂದು ಹೇಳಿದ್ದ. ಸುಜಾತಳಿಗೆ ಹೆಚ್ಚು ಸಿಗದೆ ತನ್ನದೇ ಲೋಕದಲ್ಲಿ  ಮುಳುಗಿದ್ದ. ಇದರಿಂದಾಗಿ ಸುಜಾತಳಿಗೆ ಅವನ ಮೇಲೆ ಪ್ರೀತಿ ಕಡಿಮೆಯಾಗಿರಲಿಲ್ಲ. ಬದಲಿಗೆ ಸಿಕ್ಕ ಸಮಯದಲ್ಲಿ ಓದಿ ಅಂತೂ ಮೊದಲ ಪಿ ಯು ಸಿ ಜಸ್ಟ್ ಪಾಸಾಗಿದ್ದಳು.

"ಹುಡುಗೀರು ಎಂಗೋ ಪಾಸ್ ಆಗ್ಬಿಡ್ತಾರೆ ಹುಡುಗ್ರೆ ಪೇಲಾಗೋದು ಎಂದು ನಶೆಯಲ್ಲಿ ಮಾತನಾಡಿದ  ನರಹರಿ ಮಾತು ಸತೀಶನಿಗೆ ನೆನಪಾಯಿತು.


ಬೇಸಿಗೆ ರಜೆಗೆ ಯರಬಳ್ಳಿಗೆ ಬಂದ ಸತೀಶನ ವರ್ತನೆಯಲ್ಲಿ ಬದಲಾವಣೆ ಗುರ್ತಿಸಿದ ಮುಕುಂದಯ್ಯ, ಒಮ್ಮೆ ಮಾರಮ್ಮನ ಗುಡಿಯ ಕಡೆಯಿಂದ ನರಹರಿ ಜೊತೆಯಲ್ಲಿ ತೂರಾಡುತ್ತ ಬರುವುದ ಕಂಡು ನೋಡಿದಾಗ ಕುಡಿದಿರುವುದು ಗಮನಕ್ಕೆ ಬಂದು ಮನೆ ಒಳಗೆ ಕರೆದುಕೊಂಡು ಹೋಗಿ ಬಾರುಕೋಲು ಸೇವೆ ಮಾಡಿದಾಗ 

" ಇನ್ನೆಂದೂ ಕುಡಿಯಲ್ಲ ಬಿಡು ಮಾವ,ತಪ್ಪಾತು ಬಿಡು ಮಾವ " ಎಂದು ಅರಚುವ ಸದ್ದು ಕೇಳಿ

"ಬಿಡೋ ಆಳಾಗ್ ಹೋಗ್ಲಿ ,ಇವನ್ ಹಿರಿಯೂರಿಗೆ ಕಳ್ಸಿದ್ದೆ ತಪ್ಪಾತು, ಏನೋ ಸೆಂದಾಗಿ ಓದ್ಲಿ ಅಂತ ಕಳ್ಸಿದರೆ ಊದೆದನೆ ಎಂದು ಕಣ್ಣೀರಿಟ್ಟರು ಹಿರಿಜೀವ.


"ನೀನೇನ್ ಓದಾದು ಬ್ಯಾಡ ದನ ಕಾಯಿ ನಾಳೆಯಿಂದ ಎಂಗೂ ಗುರುಸಿದ್ದ ಸಂಬಳ ಬಿಟ್ಟದಾನೆ ಬಿಸ್ಲಲ್ಲಿ ಹೋದರೆ ಗೊತ್ತಾಗುತ್ತೆ " ಗುಡುಗಿದರು ಮುಕುಂದಯ್ಯ.

ಅಂದಿನಿಂದ ಸತೀಶನ ಮೇಲೆ ಒಂದು ಕಣ್ಣಿಟ್ಟಿದ್ದ ದೊಡ್ಡಪ್ಪಗಳ ಕುಟುಂಬ ಅವನನ್ನು ಒಬ್ಬನನ್ನೆ ಎಲ್ಲಿಗೂ ಕಳಿಸುತ್ತಿರಲಿಲ್ಲ, ಸುಜಾತಳ ನೋಡದೆ, ಚಟಗಳ ಬಿಡಲಾರದೆ ಚಡಪಡಿಸತೊಡಗಿದ ,ಹೊಲ, ಮನೆ ಕೆಲಸ ಮಾಡುತ್ತ ಕೆಂಪಗಿದ್ದವನು ಕಪ್ಪಾದ,ತಿಂದುಂಡು ಗುಂಡಗಿದ್ದವನು ಬಡಕಲಾದ .


"ಪಾಪ ಇದೊಂದ್ ವರ್ಸ ಓದ್ಲಿ ಬಿಡೋ ಅಲ್ಲೇ ಎನೋ ಬದ್ಲಾಗ್ತಾನೆ " ಅಜ್ಜಿ ಮತ್ತೆ ಶಿಫಾರಸು ಮಾಡಿದರು.

ಸತೀಶನ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡ ಮುಕುಂದಯ್ಯ " ಆತು ಆ ನನ್ ಮಗ ನರಹರಿ ಸೇರ್ಬಾರದು.ರೂಂ ಗೀಂ ಬ್ಯಾಡ ದಿನ ಇಲ್ಲಿಂದ ಒಡಾಡು ಮತ್ತೇನಾದ್ರು ಆಟ ಆಡಿದ್ರೆ ಗೊತ್ತಲ್ಲ ಬಾರಿ ಕೋಲು " ಎಂದರು


ಅಂತೂ ಹಿರಿಯೂರಿನ ಕಾಲೇಜಿಗೆ ಹೋಗಲು ಅವಕಾಶವನ್ನು ನೀಡಿದ್ದಕ್ಕಾಗಿ ಮನದಲ್ಲೇ ಸಂತೋಷಪಡುತ್ತಾ ನಾಳೆಯಿಂದ ಸುಜಾತಳ ನೋಡಬಹುದು ಎಂದು ಅಂದು ಕೊಂಡವನ ಸಂತಸ ಬಹಳ ದಿನ ಉಳಿಯಲಿಲ್ಲ, ಒಂದು ವಾರದಿಂದ ಏಳು ಗಂಟೆ  ಜೈರಾಂ ಬಸ್ ಗೆ ಅವಳು ಹತ್ತಲಿಲ್ಲ .ಗಿರೀಶ ಕಾಲೇಜಿನ ಮುಂದೆ ದಿನವೂ ಕಾದರೂ ಅವಳ ಸುಳಿವಿಲ್ಲ 

ಸತೀಶ ಬಹಳ ಬೇಸರದಿಂದ ತನ್ನಲ್ಲೇ ಪ್ರಶ್ನೆ ಮಾಡಿಕೊಂಡ 

"ಎಲ್ಲಿ ಹೋದಳು ಸುಜಾತ?"


ಮುಂದುವರೆಯುವುದು....




ಸಿ ಜಿ ವೆಂಕಟೇಶ್ವರ






10 ಫೆಬ್ರವರಿ 2022

ಮಮ್ಮಿ ಅಲ್ಲ ಅಮ್ಮ.


 ಮಮ್ಮಿ ಅಲ್ಲ ಅಮ್ಮ

ಅಂದು ಅಮಾವಾಸೆ. "ಇವತ್ತು ಹುಷಾರು. ನಿಂಬೇ ಹಣ್ಣು ಕೊಯ್ದು ಹೊಸಲ ಮೇಲೆ ಇಡು "ಎಂದು ಸೊಸೆಗೆ ಕೆಂಚಮ್ಮ ಬೆಳಿಗ್ಗೆಯೇ ಎಚ್ಚರಿಕೆ ನೀಡಿದ್ದರು. ಮಗನಿಗೆ ಸಂಜೆ ಕತ್ತಲಾಗುವುದರೊಳಗೆ ಮನೆಗೆ ಸೇರಿಕೊಳ್ಳಬೇಕು ಎಂದು ವಾರ್ನಿಂಗ್ ನೀಡಿದ್ದರು. ಇದನ್ನು ಕೇಳಿಸಿಕೊಂಡು ಪುಟ್ಟ ಬಾಲಕಿ " ಯಾಕಜ್ಜಿ ಇವತ್ತು ಏನಾದರೂ ವಿಶೇಷನಾ? ಎಂದು ಕೇಳಿದಳು.
" ವಿಶೇಷ ಅಲ್ಲಮ್ಮ ... ನಾವು ಯಾಮಾರಿದ್ರೆ ನಾಶ.ಯಮನ ಬಳಿ ಸೀದಾ ಪ್ರವೇಶ"  ಎಂದು ಒಗಟಾಗಿ ಹೇಳಿದ್ದ ಕೇಳಿ ಆ ಮಗೂಗೆ ಇ‌ನ್ನೂ ಗೊಂದಲವಾಯಿತು.

ಅಜ್ಜಿ ಮುಂದುವರೆದು" ಹೋದ ವರ್ಷ ಇದೇ ಅಮಾವಾಸೆ ದಿನ  ನಮ್ ಊರಿನ ಶೆಟ್ರು ಮನೆನಾಗೆ ಘಲ್ ..ಘಲ್ .. ಎಂದು ಗೆಜ್ಜೆ ಕಟ್ಟಿಕೊಂಡು ಬಂದ ಒಂದು ದೆವ್ವ ಅವರ ಮಗನನ್ನು ಕೊಂದು ಹಾಕಿತಂತೆ .ಅದಕ್ಕೆ ಈ ಅಮಾಸೆ ಡೇಂಜರ್...ಹುಷಾರಾಗಿರಬೇಕು" ಎಂದಾಗ ಆ ಬಾಲಕಿಗೆ ಭಯ ಆವರಿಸಿತು.


ಅದೇ ಗುಂಗಲ್ಲಿ ಅಂದು ಆ ಬಾಲಕಿಗೆ ಹಗಲೆಲ್ಲಾ ಗೆಜ್ಜೆ ಸದ್ದೇ ಕೇಳುದಂತಾಗುತ್ತಿತ್ತು.‌ಸಂಜೆಯಾಗುತ್ತಲೇ  ಅಜ್ಜಿಯ ಅಣತಿಯಂತೆ ಮಗ ಬೇಗನೇ ಮನೆಗೆ ಬಂದ.‌ಸೊಸೆ ನಿಂಬೇಹಣ್ಣು ಕೊಯ್ದು ಮನೆಯ ಬಾಗಿಲ ಬಳಿ ಇಟ್ಟು ಪೂಜೆ ಮಾಡಿದಳು.


ಊಟದ ನಂತರ ಎಂದಿಗಿಂತ ಮೊದಲೇ ಪುಟ್ಟ ಬಾಲಕಿ ಮಲಗಲು ಕೋಣೆಯ ಬಳಿ ತೆರಳಿ ಅಪ್ಪನ ಪಕ್ಕದಲ್ಲಿ ಬೆಡ್ ಶೀಟ್ ಒದ್ದುಕೊಂಡು ಮಲಗಿದಳು.ಭಯದಲ್ಲಿ ಎಷ್ಟೊತ್ತಾದರೂ ನಿದ್ದೆತ್ತಲಿಲ್ಲ.ಬೆಳಿಗ್ಗೆ ಅಜ್ಜಿ ಹೇಳಿದ ಮಾತುಗಳು ನೆನಪಾದವು. ಕ್ರಮೇಣ ಘಲ್ ....ಘಲ್...ಸದ್ದು ಕೇಳಲಾರಂಭಿಸಿತು. ಭಯದಿಂದ ಅಪ್ಪಾ.... ದೆವ್ವ... ದೆವ್ಚ...ಎಂದು ಭಯದಿಂದ ಕೂಗಿದಳು.


" ಅಲ್ಲ ಕಣೇ... ಈ ಕಾಲ್ಚೈನು ಬೇಡ ...ಬಹಳ ಸೌಂಡು ಮಾಡುತ್ತೆ ಅಂತ ಹೇಳ್ದೇ ಇವತ್ತೇ ಆ ಚೈನ್ ಹಾಕ್ಕಂಡಿದಿಯಾ.ನೋಡು ಪಾಪ ಆ ಮಗ ನೀನೇ ದೆವ್ವ ಅಂತ ಹೆದರ್ಕಂಡಿದೆ" ಎಂದ ಪತಿರಾಯ.


"ರೀ ನಿಮಗೆ ಯಾವಾಗಲೂ ನಮ್ ಅಪ್ಪ ಕೊಡ್ಸಿರೋ ಚೈನ್ ಮ್ಯಾಲೇ ಕಣ್ಣು ಎಂದು ಬೆಡ್ ಶೀಟ್ ಕೊಡವಿದಳು".


ಮಗಳು ಬೆಡ್ ಶೀಟ್ ನಿಧಾನವಾಗಿ ಸರಿಸಿ ನೋಡಿ ಅಮ್ಮಾ ಎಂದು ಖಾತ್ರಿ ಮಾಡಿಕೊಂಡು ಕಣ್ಣು ಮುಚ್ಚಿ ನಿದ್ದೆಗೆ ಜಾರಿದಳು.


ಸಿಹಿಜೀವಿ


ಸಿ ಜಿ ವೆಂಕಟೇಶ್ವರ


ತುಮಕೂರು


9900925529.

29 ಜನವರಿ 2022

ಉದಕದೊಳಗಿನ ಕಿಚ್ಚು ಭಾಗ . ೧೬




ಜೀತ ಮುಕ್ತ 

"ಏನ್ ರಂಗಮ್ಮ ಇಷ್ಟು ದೂರ ಬಂದ್ ಬಿಟ್ಟೆ ಹೇಳ್ಕಳಿಸಿದ್ದರೆ ನಾನೆ ಬರ್ತಿದ್ದೆ ನಿಮ್ಮ ಮನೆ ಹತ್ರ" ಸಿಟ್ಟು  ಅಸಹನೆ ಮತ್ತು ವ್ಯಂಗ್ಯಭರಿತವಾಗಿ ಮುಕುಂದಯ್ಯ ಮಾತನಾಡಿದಾಗ
" ಏ ಬಿಡ್ತು ಅನ್ ಸ್ವಾಮಿ ಅದ್ಯಾಕೆ ಅಂಗ್ ಮಾತಾಡ್ತಿರಾ? ನೀವು ನಮ್ ಗೌಡ್ರು ನಾವು ನಿಮ್ಮ ಮನೆತಾಕ ಬರಬೇಕೆ ವಿನಾ ನಮ್ಮಂತ ಕೀಳು ಜನದ್ ಮನೆಗೆ ನೀವು ಬರಬಾರದು". ಅಂದರು ರಂಗಮ್ಮ
" ಇಲ್ಲ ರಂಗಮ್ಮ ನಿಮ್ಗೆ ದೊಡ್ ದೊಡ್ ಜನ ಗೊತ್ತು ನಾವು ಈ ಹಳ್ಳಿ ಚಿಕ್ಕ ಜನ ಕಣವ್ವ,ನಿಮಿಗೆ ಹಿರಿಯೂರು, ಡೆಲ್ಲಿ,ಜನ ಗೊತ್ತು ನಮಗ್ಯಾರು ಗೊತ್ತು " ಮುಕುಂದಯ್ಯ ಮಾತು ಮುಂದುವರೆಸಿದರು .
ರಂಗಮ್ಮನಿಗೆ ಈಗ ಎಲ್ಲಾ ಅರ್ಥವಾಗಿತ್ತು.

ಅಂದು ಒತ್ತಾರೆ ಹಟ್ಟಿಯಲ್ಲಿ  ಊಟ ಮಾಡಿ ಅವರವರ ಪಾಡಿಗೆ ಮೇಲ್ವರ್ಗದ ಜನರ ಹೊಲಗಳಿಗೆ ಕೆಲಸಕ್ಕೆ ಹೊರಡುವ ವೇಳೆಗೆ ಮೂರ್ನಾಲ್ಕು ಜನ ಪ್ಯಾಂಟ್, ಶರ್ಟ್ದಾರಿಗಳು ಹಟ್ಟಿಗೆ ಬಂದರು. ಎಲ್ಲರೂ ಅವರನ್ನೇ ನೋಡುತ್ತಿದ್ದಂತೆ ಪಾತಲಿಂಗಪ್ಪನ ಹತ್ತಿರ ಬಂದು ಪರಿಚಯ ಮಾಡಿಕೊಂಡರು ನಾವು ಭೀಮಸೇನೆ ಕಡೆಯಿಂದ ಬಂದಿದ್ದೇವೆ .ನಮ್ಮದು ಹಿರಿಯೂರು .ನಾವು ಬಂದ ಉದ್ದೇಶ ನಿಮ್ಮ ಹಟ್ಟಿನಲ್ಲಿ  ಮತ್ತು ನಿಮ್ಮ ಊರಲ್ಲಿ ನಮ್ಮ ಜನಕ್ಕೆ ಏನಾದರೂ ತೊಂದರೆ ಇದೆಯಾ ಅಂತ ಕೇಳೋಕೆ ಬಂದಿದೀವಿ .
ಅಂದರೆ ಜೀತ ,ಯಾರ ಮನೇಲಾದ್ರು ಸಂಬಳಕ್ಕೆ ಇರೋದು ,ನಿಮಗೆ ಬಾವಿ ನೀರು ಕೊಡದೆ ಇರೋದು ಇತ್ಯಾದಿ....
" ಅಂತದ್ದೇನೂ ಇಲ್ಲ ನಮ್ ಹಟ್ಟಿ ಹುಡುಗ್ರು ಒಂದು ಐದಾರು ಗೌಡರ ಮನೇಲಿ ಸಂಬಳಕ್ಕೆ ಅದವೆ ಅಷ್ಟೇ " ಬಾಯಿ ಬಿಟ್ಟ ಪಾತಲಿಂಗಪ್ಪ.
ಯಾರ ಮನೆಯಲ್ಲಿ ಯಾರು ಜೀತಕ್ಕೆ ಇದ್ದಾರೆ ? ಅವರ ವಿಳಾಸ ಪಡೆದು ಕೊಳ್ಳುವ ವೇಳೆಗೆ ಹಟ್ಟಿ ಜನ ಕುತೂಹಲದಿಂದ ಗುಂಪುಗೂಡಿದರು ಆಗ ಕೆಂಪು ಅಂಗಿ ಧರಿಸಿದ ಕಪ್ಪನೆಯ ದಪ್ಪನೆಯ ವ್ಯಕ್ತಿ ಮಾತನಾಡಲು ಶುರು ಮಾಡಿದರು .
"ನೋಡಿ ಬಂಧುಗಳೆ ಜೀತಪದ್ದತಿ ಅಮಾನವೀಯ ಪದ್ದತಿ ಇದನ್ನು ಕೇಂದ್ರ ಸರ್ಕಾರ  ೧೯೭೬  ನೇ ಇಸವಿಯಲ್ಲಿ ನಿಷೇಧ ಮಾಡಿ ಕಾನೂನು ಮಾಡಿದೆ .ಯಾರಾದರೂ ನಮ್ಮ ಜನಾನಾ ಜೀತಕ್ಕೆ ಇಟ್ಟುಕೊಂಡರೆ ಅವರಿಗೆ ಭಾರತೀಯ ದಂಡಸಂಹಿತೆ
೩೭೦ ರ  ಪ್ರಕಾರ ಶಿಕ್ಷೆ ಆಗುತ್ತದೆ. ಅವರನ್ನು ಜೈಲಿಗೆ ಕಳಿಸಬಹುದು."
ಜೈಲು ಅಂದ ತಕ್ಷಣ ಮೂರ್ನಾಕು ಜನ ಗುಂಪಿನಿಂದ  ಮೆಲ್ಲಗೆ ನಡೆದು ಹೊರಟರು .
"ಜೀತಕ್ಕಿಟ್ಟುಕೊಂಡ ವ್ಯಕ್ತಿಗೆ ಗರಿಷ್ಠ ಮೂರುವರ್ಷ ಜೈಲು ಮತ್ತು ಎರಡು ಸಾವಿರ ದಂಡ ವಿಧಿಸಬಹುದು. ನೀವು ಈ ವಿಷಯ ತಿಳಿದು ಯಾರನ್ನು ಜೀತಕ್ಕೆ ಇಡಬಾರದು" .
ಹೀಗೆ ಆ ವ್ಯಕ್ತಿ ಮಾತು ಮುಗಿಸುವ ವೇಳೆಗೆ ಅವರ ಮುಂದೆ ಇದ್ದವನು ಪಾತಲಿಂಗಪ್ಪ ಮಾತ್ರ.
ಜೀತಕ್ಕೆ ಇಟ್ಟುಕೊಂಡು ಎಲ್ಲಾ ಮನೆಗೆ ಭೇಟಿ ನೀಡಿದಂತೆ ಮುಕುಂದಯ್ಯ ರವರ ಮನೆಗೂ ಆ ತಂಡ ಭೇಟಿ ನೀಡಿತು
" ಏನ್ ಸಾರ್ ನಮ್ಮ ಹುಡುಗುನ್ನ ಜೀತಕ್ಕೆ  ಇಟ್ಟುಕೊಂಡಿದ್ದೀರಂತೆ ಇದು ಕಾನೂನು ಪ್ರಕಾರ ತಪ್ಪು ಅಲ್ವ ?" ಕೇಳಿದ ಹಿರಿಯೂರು ವ್ಯಕ್ತಿ.
" ನಾನೂ  ಎಸ್ಸೆಲ್ಸಿ ಓದಿದಿನಿ .ನನಗೂ ಕಾನೂನು ಗೊತ್ತು ಈಗ ಏನ್ ಆಗ್ಬೇಕು ಹೇಳ್ರಿ?"
"ಅದೇ ನಮ್ಮ ಗುರುಸಿದ್ದನ ಜೀತ ಮುಕ್ತ ಮಾಡಿ".
"ನೋಡಿ ನಮಗೇನು  ಅವನು ನಮ್ಮ ಮನೇಲಿ ಕೆಲಸ ಮಾಡ್ಲಿ ಅಂತ ಆಸೆ ಇಲ್ಲ. ಅವರಮ್ಮ ನಮ್ಮ ಹತ್ರ ಹದಿನೈದು ಸಾವ್ರ ದುಡ್ ಇಸ್ಕಂಡವ್ರೆ ಅದನ್ನು ಕೊಟ್ಟು ಅವನ್ ಕರ್ಕೊಂಡೋದರೆ ನಂದೇನು ತಕರಾರಿಲ್ಲ ,ಅವನ ಪರವಾಗಿ ಬಂದಿರೂ   ನಿಮ್ಮಲ್ಲೆ ಯಾರಾದ್ರೂ ಕೊಟ್ಟರೂ ಒಕೆ " ಅನ್ನುತ್ತಿದ್ದಂತೆ ಅವರವರೆ ಒಬ್ಬರಿಗೊಬ್ಬರು ಮುಖ ನೋಡಿಕೊಂಡು ,
" ಸರಿ ಸರ್ ಅದಷ್ಟು ಬೇಗ ಅವನನ್ನು ಜೀತ ಮುಕ್ತ ಮಾಡಿ' ಎಂದು ಹೊರಟು ಹೋದರು .

ಅಂದಿನಿಂದ ಮುಕುಂದಯ್ಯ ಕುದಿಯುತ್ತಿದ್ದರು ಇಂದು  ರಂಗಮ್ಮ ಬಂದಾಗ ಸ್ವಲ್ಪ ಖಾರವಾಗೇ ಮಾತನಾಡಿದರು.

" ಸಅ್ವಾಮಿಂದರು... ಅವರಿಗೆ ನಾವೇನೂ ಹೇಳ್ಲಿಲ್ಲ ಆ ಪಾತಲಿಂಗನೆ ಹೇಳಿದ್ದು ಇದರಲ್ಲಿ ನಂದೇನು ತಪ್ಪಿಲ್ಲ ಗೌಡ, "

ಆತು ಆ ಪಾತಲಿಂಗ, ಮತ್ತು ಹಿರಿಯೂರು ಜನದತ್ರ ದುಡ್ ತಂದು ನಿನ್ ಮಗನ್ನ ಕರ್ಕೊಂಡು ಹೋಗವ್ವ ನಿಮ್ ಸಹವಾಸ ಸಾಕು ಬಡ್ಡಿ ಬ್ಯಾಡ ಬರಿ ಅಸಲು ಸಾಕು.
ನಿನ್ ಮಗ ಒಳ್ಳೆ ನರಪೇತಲ ನಾರಾಯಣ ಇದ್ದಂಗೈದಾನೆ ಅವ್ನು ಕೆಲ್ಸ ಮಾಡೋದು ಆಟ್ರಾಗೆ ಐತೆ ,ಯಾವಾಗಲೂ ಕೆಮ್ತಿರ್ತಾನೆ ಕರ್ಕೊಂಡು ಹೋಗು ನಿನ್ ಮಗನ್ನ" ರೇಗಿದರು ಮುಕುಂದಯ್ಯ.

"ನಾನ್ ಏನ್ ತಪ್ ಮಾಡ್ದೆ ಅಂತ ನನ್ ಮ್ಯಾಲೆ ರೇಗ್ತಿಯಾ ಗೌಡ "ಎಂದು ಕಣ್ಣಲ್ಲಿ ನೀರು ಹಾಕುತ್ತಾ ಅವನ್ ಕೆಮ್ಮು ಜಾಸ್ತಿ ಆಗೈತೆ ಒಂದ್ ತಿಂಗಳಿಂದ ಗೊರ ಗೊರ ಒಳ್ಳೆ ದನ ಕೆಮ್ಮಿದಂಗೆ ಕೆಮ್ತಾನೆ ,ಅವನ್ ಆಸ್ಪತ್ರೆಗೆ ತೋರ್ಸಿ ಗೌಡ"
"ಅವರ್ಯಾರೋ ಬಂದಿದ್ರಲ್ಲ ಅವರ ಜೊತಿಗ್ ಆಸ್ಪತ್ರೆಗೆ ಕಳಸ್ಬೇಕಾಗಿತ್ತು" ಮತ್ತೆ ಕುಟುಕಿದರು ಮುಕುಂದಯ್ಯ.
"ಸಾಕ್ ಬಿಡೋ ಮುಕುಂದ ಅವಳ್ಗೇನೂ ಗೊತ್ತಿಲ್ಲ ಅಂದ್ಳಲ್ಲ ಬಿಡು ,ನಾನು ನೋಡಿದಿನಿ ಆ ಹುಡುಗ ದಿನಾ ಕೆಮ್ಮುತ್ತೆ ಪಾಪ ....ನಾಳೆ  ಅವುನ್ನ ಆಸ್ಪತ್ರೆಗೆ ತೋರ್ಸು ಅಷ್ಟೇ" ಆದೇಶ ಮಾಡಿದರು ಸರಸ್ವತಜ್ಜಿ.
ಮುಕುಂದಯ್ಯ ಮಾತನಾಡದೆ ಸುಮ್ಮನಾದರು ರಂಗಮ್ಮ ಕಣ್ಣಲ್ಲಿ ನೀರು ಹಾಕತ್ತ ಎದ್ದು ಹೊರಡಲು ಸಿದ್ದವಾಗುವಾಗ
"ಏ ರಂಗವ್ವ ತಟ್ಟೆ ತಗಾ ಅರ್ದಾಂಬ್ರ ಮುದ್ದೆ ಉಂಡೋಗು" ಅಂದರು ಯಜಮನಿ .
ತಟ್ಟೆಗೆ ಹುಡುಕಾಡಿದಳು ಈ ಹುಡ್ಗ ಅದೆಲ್ಲಿ ಇಕ್ಕೆದಾನೋ ತಟ್ಟೆನ,ಹಾ.. ಚೆಂಬು ಸಿಕ್ತು ಎಂದು ಮನದಲ್ಲೇ ಅಂದುಕೊಂಡು ಕೈತೊಳೆದುಕೊಂಡು ಊಟಕ್ಕೆ ಕುಂತರು ರಂಗಮ್ಮ
"ಅಂಗೆ ಕೈಯಾಕೆ ಕೊಡಮ್ಮ ಮುದ್ದೆನಾ"
"ಅಂಗೆ ಎಂಗ್ ಉಂಬ್ತಿಯ " ಕೇಳಿದರು ತಿಮ್ಮಕ್ಕ .
" ನೀನು ಕೊಡಮ್ಮ ಎಂದಾಗ ಮೇಲಿಂದ ತಿಮ್ಮಕ್ಕ ಮುದ್ದೆಯನ್ನು ಹಾಕಿದರು ,ರಂಗಮ್ಮ ಆ ಮುದ್ದೆಯ ಮೇಲೆ ಚಿಕ್ಕ ಗುಂಡಿ ಮಾಡಿಕೊಂಡು "ಹುಂ ...ಇದರಾಕೆ ಸಾರು ಹಾಕವ್ವ" ಎಂದಾಗ ಸ್ವಲ್ಪ ಸ್ವಲ್ಪ ಸಾರು ಹಾಕಿಸಿಕೊಂಡು ಮುದ್ದೆ ಸಾರು ತಿನ್ನಲು ಪ್ರಯತ್ನ ಪಟ್ಟರೂ ಮುದ್ದೆ ಹೊಟ್ಟೆಗೆ ಇಳಿಯಲು ಬಹು ಕಾಲ ಬೇಕಾಯಿತು.
****************************
ನೀನು ಸ್ವಲ್ಪ ಹೊತ್ತು ಹೊರಗೆ ಇರಪ್ಪ ಅಮೇಲೆ ಕರೀತೆನೆ ಎಂದು ಗುರುಸಿದ್ದನಿಗೆ ಹೇಳಿ
" ನೋಡಿ ಇವ್ರೆ ಈ ಹುಡುಗನ ಕಫ ಪರೀಕ್ಷೆ ಮಾಡಿದಾಗ ಇವನಿಗೆ ಟಿ. ಬಿ. ಅಂದರೆ ಟುಬಾರ್ಕುಲಾಸಿಸ್ ಕಾಯಿಲೆ ಇದೆ ಇದಕ್ಕೆ ಸರಿಯಾದ ಟ್ರೀಟ್ಮೆಂಟ್ ಕೊಟ್ಟರೆ ಜೀವಕ್ಕೆ ಅಪಯವಿಲ್ಲ .ಒಳ್ಳೆ ಪೌಷ್ಟಿಕಾಹಾರ ತಿಂದರೆ ಬೇಗ ಗುಣಮುಖ ಆಗಬಹುದು " ಡಾ. ಹರೀಶ್ ರವರು ಹೇಳುತ್ತಲೆ ಇದ್ದರು
" ಎಷ್ಟು ದಿನಕ್ಕೆ ಇದು ವಾಸಿಯಾಗುತ್ತೆ ಡಾಕ್ಟರ್ ? " ಪ್ರಶ್ನೆ ಮಾಡಿದರು ಮುಕುಂದಯ್ಯ.
" ನೋಡಿ ನೀವು ಸರಿಯಾದ ಸಮಯಕ್ಕೆ ಕರೆದುಕೊಂಡು ಬಂದಿದೀರಾ ಈಗ ಟ್ರೀಟ್ಮೆಂಟ್ ಶುರು ಮಾಡಿದರೆ ಮೊದಲನೇ ಕೋರ್ಸ್ ಮುಗಿಯೋದಕ್ಕೆ ೬ ರಿಂದ ೯ ತಿಂಗಳು ಆಗಬಹುದು .
ಬೇಗ ವಾಸಿಯಾಗಲಿಲ್ಲ ಅಂದರೆ ೧೮ ತಿಂಗಳ ತನಕ ಆಗಬಹುದು.ಕೆಲವೊಮ್ಮೆ ೨೪ ರಿಂದ ೨೭ ತಿಂಗಳಾದರೂ ಆಗಬಹುದು ಗುಣ ಅಗೋದಕ್ಕೆ.
" ಎಲ್ಲಾ ಎಷ್ಟು ಖರ್ಚಾಗುತ್ತದೆ ಡಾಕ್ಟರ್? "
"ಮಾತ್ರೆಗಳು ಸರ್ಕಾರದಿಂದ ಉಚಿತ ಚಿಕಿತ್ಸೆ ಉಚಿತ ಇದಕ್ಕೇನೂ ಖರ್ಚಾಗಲ್ಲ ಸರಿಯಾಗಿ ಮಾತ್ರೆ ನುಂಗಬೇಕು ನಾವ್ ಹೇಳಿದ್ದು ಮಾಡಬೇಕು ಅಷ್ಟೇ"
" ಇವನಿಂದ ಈ ಕಾಯಿಲೆ ಬೇರೆಯವರಿಗೆ ಹರಡುತ್ತಾ ಡಾಕ್ಟರ್ "
"ಇವನು ಕೆಮ್ಮುವಾಗ ಅಡ್ಡ ಬಟ್ಟೆ ಇಟ್ಟುಕೊಂಡರೆ, ತೊಂದರೆ ಇಲ್ಲ ಇಲ್ಲವಾದರೆ ಬೇರೆಯವರಿಗೆ ಹರಡಬಹುದು. ಬೇರೆ ಬಟ್ಟೆ , ಬೇರೆ ತಟ್ಟೆ ಲೋಟ ಬಳಸಿದರೆ ಒಳಿತು. ಹಾಗಾದರೆ ಟ್ರೀಟ್ಮೆಂಟ್ ಕೋರ್ಸ ಶುರು ಮಾಡಲೆ? ಎಂದು ಕೇಳಿದರು ಡಾಕ್ಟರ್ .
"ಆಗಲಿ ಮಾಡಿ ಡಾಕ್ಟರ್" ಎಂದರು ಮುಕುಂದಯ್ಯ.
ಒಂದು ಇಂಜೆಕ್ಷನ್ ಮಾಡಿ ಒಂದು ತಿಂಗಳಿಗಾಗುವಷ್ಟು ಎರಡು ಮೂರು ಬಣ್ಣದ  ರಾಶಿ ಮಾತ್ರೆ ಕೊಟ್ಟರು .ಡಾಕ್ಟರ್ ಗೆ ಮುಕುಂದಯ್ಯ ಹತ್ತು ರೂ ಕೊಡಲು ಮುಂದಾದರು "ಯಾಕೆ ದುಡ್ ಕೊಡ್ತೀರಾ? ಇದು ಸರ್ಕಾರಿ ಆಸ್ಪತ್ರೆ ನನಗೆ ಸರ್ಕಾರ ಸಂಬಳ ಕೊಡುತ್ತೆ ಬೇಡ ನಡಿರಿ ಆ ಹುಡುಗನಿಗೆ ಬ್ರೆಡ್ ಅಥವಾ ಬಿಸ್ಕತ್ತು ಕೊಡಿಸಿ" ಎಂದು ಬೇರೆ ರೋಗಿಗಳ ತಪಾಸಣೆ ಮಾಡಲು ಡಾ.ಹರೀಶ್ ಹೊರಟರು.
ಇಂತಹ ಡಾಕ್ಟರ್ ಇರ್ತಾರಾ ಎಂದು ಮುಕುಂದಯ್ಯ ಮನದಲ್ಲೇ ಅವರಿಗೆ ವಂದಿಸಿ ಆಸ್ಪತ್ರೆಯಿಂದ ಮನೆಗೆ ಬರುವವರೆಗೆ ಏನೋನೋ ಯೋಜನೆ ಯೋಚನೆ ಹಾಕುತ್ತಿದ್ದು. ಗುರುಸಿದ್ದನಿಗೆ ಈಗ ಈ ಕಾಯಿಲೆ ಬಂದಿದೆ ಇವನು ನಮ್ಮನೇಲಿ ಇದ್ದರೆ ನಮಗೆ ರೋಗ ಬಂದರೆ? ಇವನು ಕೆಲಸ ಮಾಡೋದು ಅಷ್ಟಕ್ಕಷ್ಟೆ ಸುಮ್ಮನೆ ಅವರಮ್ಮನ ಬಳಿ ದುಡ್ ಇಸ್ಕಂಡು ಇವನ ಕಳಿಸಿಬಿಡೋಣ ಎಂದು ಮನದಲ್ಲೇ ಲೆಕ್ಕಾಚಾರ ಹಾಕಿದ .

ಬೆಳಿಗ್ಗೆ  ಒಂಭತ್ತು ಗಂಟೆಗೆ ಹೋದವರು ಮಟ ಮಟ ಮಧ್ಯಾಹ್ನ  ಹೊತ್ತಾದರೂ  ಬರಲಿಲ್ಲ ಎಂದು ರಂಗಮ್ಮ ದೊಡ್ಡಪ್ಪಗಳ ಮನೆಯ ಚಪ್ಪರದ ಕೆಳಗೆ  ಗೂನು ಬೆನ್ನು ಹೊತ್ತು ಅತ್ತಿಂದಿತ್ತ ಓಡಾಡುತ್ತಿದ್ದರು.
" ಏ ಕುತ್ಕ ಬಾರೆ ರಂಗವ್ವ ಅದ್ಯಾಕಂಗೆ ಯೋಚ್ನೆ ಮಾಡ್ತಿಯಾ ? ಏನ್ ನಿನ್ ಮಗ ಒಬ್ನೆ ಹೋಗೆದಾನಾ? ಮುಕುಂದ ಹೋಗಿಲ್ವ?  ಅಲ್ಲೇನು ರಷ್ ಇತ್ತೇನೊ ಡಾಕ್ಟರ್ ಸಿಕ್ಕಿದರೊ ಇಲ್ವೋ ಬಾ ಕುತ್ಕ."  ಎಂದು ಸರಸ್ವತಜ್ಜಿ ಗದರಿದರು.

ಮಗನನ್ನು ಕನ್ನಡಕದಲ್ಲೆ ದೂರದಿಂದ ಗುರ್ತಿಸಿದ ಹೆತ್ತ ಕರುಳು ಸ್ವಲ್ಪ ಸಮಾಧಾನಗೊಂಡಿತು ಹತ್ತಿರ ಬರುತ್ತಲೆ ಏನಂತೆ ಗೌಡ? ಡಾಕ್ಟರು ಏನ್ ಅಂದ್ರು ?ಮಗನ ಮೈದಡವುತ್ತಾ ಕೇಳಿದಳು ರಂಗಮ್ಮ
"ಇವನಿಗೆ ಟಿ ಬಿ ಅಂತೆ ಕಣಮ್ಮ " ಅಂದ ತಕ್ಷಣವೇ ರಂಗಮ್ಮ ಜೋರಾಗಿ   ಅಳಲು ಶುರುಮಾಡಿದರು. "ಮೊನ್ನೆ ಹರ್ತಿಕೋಟ್ಯಾಗೆ ನಮ್ಮೋರು ಒಬ್ಬರು ಟಿ ಬಿ ಬಂದು ಸತ್ರು ನನ್ ಮಗ ಉಳಿಯಲ್ಲ ಅಯ್ಯೋ ದೇವ್ರೆ ಅವ್ರುನ್ನೂ ಕಿತ್ಗೊಂಡೆ .ಈಗ ಇವನು? ನಾನೇ ಮೊದ್ಲು ಹೋಗ್ಬೇಕಾಗಿತ್ತು ಇದನ್ನೆಲ್ಲಾ ನೊಡಕೆ ಉಳಿಸಿದ್ಯೇನಪ್ಪ ಶಿವ" ಎಂದು ಎದೆ ಬಡಿದುಕೊಂಡು ಅಳಲಾರಂಭಿಸಿದರು. ಅಮ್ಮ ಅಳುವುದ ಕಂಡು ಕೆಮ್ಮುತ್ತಲೆ ಅಳಲಾರಂಬಿಸಿದ ಗುರುಸಿದ್ದ ಇಡಿ ವಾತಾವರಣ ದುಃಖದಿಂದ ಕೂಡಿತ್ತು.

"ಯೋ ರಂಗವ್ವ ಸಾಕು ನಿಲ್ಸು ಅಳೋದನ್ನ
ಡಾಕ್ಟರ್ ಹೇಳಿದಾರೆ ಸರಿಯಾಗಿ ಮಾತ್ರೆ ತಗಂಡರೆ ಏನೂ ತೊಂದ್ರೆ ಇಲ್ವಂತೆ ತಕ ಈ ಮಾತ್ರೆ ಒಂದು ತಿಂಗಳಿಗೆ ಆಗುತ್ತೆ, ಎಂದು ಮಾತ್ರೆ ರಂಗಮ್ಮನ ಕೈಗೆ ಕೊಟ್ಟು
" ನೋಡು ರಂಗಮ್ಮ ನಿಮ್ ಕಡೇರು ಹಿರಿಯೂರುನಿಂದ ಬಂದು ಇವನ್ನ ಜೀತ ಬಿಡಿಸಿ ಅಂದರು ಅದೇ ಟೈಮ್ಗೆ ಇವನಿಗೆ ಆರೋಗ್ಯ ಬ್ಯಾರೆ ಸರಿ ಇಲ್ಲ .ಇಲ್ಲಿ ಇನ್ನೇನ್ ಕೆಲ್ಸ ಮಾಡ್ತಾನೆ  ?ನಿನ್ ಮಗನ್ನ ನಿನ್ ಮನೆಗೆ ಕರ್ಕೊಂಡು ಹೋಗು. ಮುಂದಿನ ವಾರ ನಮ್ ದುಡ್ಡು ತಂದು ಕೊಡು "
ಮತ್ತೆ ಅಳುತ್ತಾ " ಎಲೈತೆ ಸಾಮಿ ದುಡ್ಡು "
" ನಿಮ್ ದರಖಾಸ್ತ್ ಜಮೀನು ನಾಕುಎಕರೆ ಸರ್ಕಾರದವರು ಕೊಟ್ಟ ಜಮೀನು ಮಾರು ಓದೋ ರಂಗಸ್ವಾಮಿ ಕೇಳ್ತಿದ್ದ ನೋಡು "
ಎಂದಾಗ ರಂಗಮ್ಮ ಮಗನ ಆರೋಗ್ಯಕ್ಕಿಂತ ನನಗೆ ಜಮೀನು ಮುಖ್ಯ ಅಲ್ಲ ಜಮೀನು ಮಾರುವೆ ಎಂದು ನಿಶ್ಚಯ ಮಾಡಿಕೊಂಡು ಮಾತ್ರೆ ತೆಗೆದುಕೊಂಡು ಮಗನ ಕರೆದುಕೊಂಡು ಹೊರಟಳು .
ಇದನ್ನು ಕೇಳಿಸಿಕೊಂಡ ಗುರುಸಿದ್ದ ಜೀತಮುಕ್ತನಾಗುತ್ತಿರುವುದಕ್ಕೆ  ಮನದಲ್ಲೇ ಸ್ವಲ್ಪ ಸಂತಸವಾದರೂ ಇದ್ಯಾವುದೋ ಟಿ ಬಿ ಕಾಯಿಲೆ ನನಗೆ ಬರಬೇಕೆ ಎಂಬ   ದುಃಖ ಆವರಿಸಿತು.
ಗುರುಸಿದ್ದ ಕಡೆಯ ಬಾರಿ ಎಂಬಂತೆ ದೊಡ್ಡಪ್ಪಗಳ ಮನೆ, ದನದ ಅಕ್ಕೆ, ಕಲ್ಲಿನ ಬಾನಿ,ಸಪ್ಪೆ ಕತ್ತರಿಸೋ ಕತ್ತರಿ ,ದನದ ಕಣ್ಣಿಗಳು,ಇಂಡಿ ಚೀಲ, ತೆಂಗಿನ ಗರಿ ಪೊರಕೆ, ಈಚಲ ತೊಟ್ಟಿ, ಗೋಣಿಚೀಲ ,ಇವುಗಳನ್ನು ಮತ್ತೊಮ್ಮೆ ನೋಡಿ ಅಮ್ಮನ ಜೊತೆ ಹೆಜ್ಜೆ ಹಾಕಿದ .

ರಾತ್ರಿ ಮಗನಿಗೆ ಮಾತ್ರೆ ನುಂಗಿಸಿ ಅಂಗಳದಲ್ಲಿ ಮಲಗಿ ನಕ್ಷತ್ರಗಳ ನೋಡುತ್ತಾ ರಂಗಮ್ಮನ ಮನದಲ್ಲಿ ಪ್ರಶ್ನೆಗಳು ಏಳುತ್ತಿದ್ದವು. ದೇವರು ನನ್ನ ಮಗನಿಗೆ ಜೀತ ಮುಕ್ತಿ ಮಾಡಲು ಈ ಕಾಯಿಲೆ ಕೊಟ್ಟನೆ ? ಅಥವಾ ನಮಗಿರುವ  ನಾಕೆಕರೆ ಜಮೀನು ನಮ್ಮಿಂದ ಮುಕ್ತಿ ಮಾಡಲು ಈ ರೋಗ ಕೊಟ್ಟನೆ ? ಉತ್ತರ ಹೊಳೆಯದೆ ನಿದ್ರೆ ಬಾರದೆ  ಕಣ್ಣು ಬಿಟ್ಟು ಶುಭ್ರವಾದ ಆಗಸವನ್ನು ರಾತ್ರಿ ಹನ್ನೆರಡರವರೆಗೆ ನೋಡುತ್ತಲೇ ಇದ್ದಳು . ನೋಡ ನೋಡುತ್ತಲೇ ಒಂದು ನಕ್ಷತ್ರ ಕಳಚಿಬಿತ್ತು....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

08 ಜನವರಿ 2022

ಉದಕದೊಳಗಿನ ಕಿಚ್ಚು. ಭಾಗ ೧೩


 ಉದಕದೊಳಗಿನ ಕಿಚ್ಚು .೧೩


ಯರಬಳ್ಳಿ ಮಾರಮ್ಮನ ಜಾತ್ರೆಯ ಸಡಗರ 


ಭಾಗ ೧



"ಕೇಳ್ರಪ್ಪೋ ಕೇಳಿ ಇವತ್ತಿಗೆ ಎಂಟು ದಿನಕ್ಕೆ ಯರಬಳ್ಳಿ ಮಾರಮ್ಮನ ಜಾತ್ರೆ ಸುರುವಾಗುತ್ತೆ ಕೇಳ್ರಪ್ಪೋ ಕೇಳ್ರಿ" ಉದ್ದನೆಯ ಗಿರಿಜಾ ಮೀಸೆಗಳು ರಾತ್ರಿಯ ಮಬ್ಬುಗತ್ತಲಲ್ಲೂ ಕಾಣುವ ಅಜಾನುಭಾಹು ಸಿದ್ದಾನಾಯ್ಕ ಪ್ರಾಣಿಗಳ ಚರ್ಮದಿಂದ ಮಾಡಿದ ತಮಟೆ ಯನ್ನು ಎಡತೋಳಿಗೆ ಹಾಕಿಕೊಂಡು ಎಡಗೈಯಲ್ಲಿ ಎಡಬುಜಕ್ಕೆ ಆನಿಸಿಕೊಂಡು ,ಎಡಗೈಯ ಹೆಬ್ಬೆರಳು ,ತೋರ್ಬೆರಳು, ಮತ್ತು ಮದ್ಯದ ಬೆರಳಿನಿಂದ ತೆಂಗಿನ ಗರಿಯನ್ನು ಕೌಶಲ್ಯದಿಂದ ಹಿಡಿದು ಬಲಗೈಯಲ್ಲಿ ಒಂದೂವರೆ ಅಡಿ ಉದ್ದದ ಕೋಲಿನಿಂದ  ಡಂಕಣಕ ಡಂಕಣಕ ....ಎಂದು ತಮ್ಮಟೆ ಬಡಿಯುತ್ತಾ ಆಗಾಗ್ಗೆ ಕಂಚಿನ  ಕಂಠದೊಂದಿಗೆ ಈ ಮೇಲಿನಂತೆ ಕೂಗುತ್ತ ಪ್ರತಿ ಬೀದಿಯಲ್ಲಿ  ಜಾತ್ರೆ ‌ನಿಶ್ಚಯ ಆದ ಬಗ್ಗೆ ಅಧಿಕೃತ ಮಾಹಿತಿಯನ್ನು ಊರವರಿಗೆ ತಿಳಿಸುತ್ತಾ.


"ದೊಡ್ಡಮ್ಮ ಈ ವರ್ಸ ಜಾತ್ರೆ ಎಂಗಿರ್ಬೇಕು ಗೊತ್ತಾ. ಸೆನ್ನಾಗಿ ಮಾಡೋಣ " ಎಂದು ಅಂಗಳದಲ್ಲಿ ಮಲಗಿದ ಸರಸ್ವತಜ್ಜಿಗೆ ಹೇಳಿದ ಸಿದ್ದಾನಾಯ್ಕ " ಆತೇಳಪ್ಪ ಆ ತಾಯಿ ಎಂಗೆ ನಡೆಸ್ತಾಳೊ ಅಂಗೆ ಆಗುತ್ತೆ" 


ಜಾತಿಯಲ್ಲಿ ನಾಯಕರಾದರೂ ಗೌಡರ ಸರಸ್ವತಜ್ಜಿಯನ್ನು ದೊಡ್ಡಮ್ಮ ಎಂದೆ ಸಂಬೋಧನೆ ಮಾಡುತ್ತಿದ್ದ ಸಿದ್ದಾನಾಯ್ಕ ಅದೇ ರೀತಿಯಲ್ಲಿ ಉತ್ತಮ  ಭಾವನೆ ಮತ್ತು ಅನ್ಯೋನ್ಯತೆ ಎಲ್ಲಾ ಇತ್ತು ಇದನ್ನು ಸೂಕ್ಷ್ಮವಾಗಿ ಗಮನಿಸಿದ ಸತೀಶನಿಗೆ ಇದೇ ಅನ್ಯೋನ್ಯತೆ ಗುರುಸಿದ್ದ ಮತ್ತು ಅವರ ಜನಾಂಗದ ಮೇಲೆ ಏಕಿಲ್ಲ ? ಎಂಬ ಯಕ್ಷ ಪ್ರಶ್ನೆ ಕಾಡುತ್ತಿತ್ತು.



ಮಾರಮ್ಮನ ಗುಡಿಯ ಮುಂದಿನ ಪೌಳಿಯ ಮುಂದೆಲ್ಲ ಎಲ್ಲಾ ಕಡೆ ಹಿರಿಯರು ಕಿರಿಯರು ,ಆ ಜಾತಿ ಈ ಜಾತಿಯ ಎಲ್ಲರೂ ನೆರೆದಿದ್ದರು ಯಾವುದೋ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲು ಸಭೆ ಸೇರಿದ್ದರು. ತಲೆ ಪೂರಾ ಬೆಳ್ಳಗಾಗಿರುವ ಸುಮಾರು ಎಪ್ಪತ್ತೈದು ವರ್ಷದ ವೃದ್ಧರು ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿದ್ದರು.ಬಿಳಿಬಣ್ಣದ ಜಂಪರ್ ಪದೇ ಪದೆ ಒಗೆದು ಕೆಂಪು ಬಣ್ಣದ್ದಾಗಿದ್ದು,

ಹೊರಗಡೆ ಗಾಳಿ ಬರುತ್ತಿದ್ದರೂ ಗುಡಿಯ ಒಳಗೆ ಗಾಳಿ ಕಡಿಮೆ ಮತ್ತು ಜನ ಹೆಚ್ಚಾಗಿ ಸೇರಿದ್ದರಿಂದ ದಗೆಯಾಗಿ  .ಕೆಲವರು ತಮ್ಮ ವಲ್ಲಿಬಟ್ಟೆ(ಟವಲ್) ಯಿಂದ ಆಗಾಗ್ಗೆ ಮುಖದ ಬೆವರು ಒರೆಸಿಕೊಳ್ಳುತ್ತಿದ್ದರು.



"ಯಾರಪ್ಪ ಈ ವರ್ಸ ಗುಡಿ ಗೌಡರು ಹೋದ ವರ್ಸ ಸೀನಪ್ಪ ಸೆನ್ನಾಗಿ ಜಾತ್ರೆ ಕೆಲ್ಸ ಮಾಡಿದ್ದರು. ಈ ವರ್ಸ ಅವರೇ ಇರಲಿ ಅಂದರೆ ಇರ್ಲಿ ,ಇಲ್ಲಾ ಅಂದರೆ ಬ್ಯಾರೆ ಯಾರ್ನಾನ ಮಾಡನಾ " ನಿಶ್ಯಬ್ದ ವಾತಾವರಣದಲ್ಲಿ ಸೇರಿದ್ದ ಸಭಿಕರನ್ನು ಉದ್ದೇಶಿಸಿ ಊರ ಹಿರಿಯರಾದ ನಾಗಪ್ಪ ರವರು ಉದುರಿದ ಹಲ್ಲುಗಳ ಬೊಚ್ಚು ಬಾಯಲ್ಲಿ ಅಸ್ಪಷ್ಟವಾಗಿ ಹೇಳಿದ್ದು ಯಾರಿಗೂ ಕೇಳದಿರಲಿಲ್ಲ " ಈ ವರ್ಸ ನಮ್ಮ ಮನ್ತನಕ್ಕೆ ಕೊಡ್ರಿ ನಾವೂ ಒಂದ್ ಕೈ ನೋಡ್ತಿವಿ ನೀನಂತುನು" ಎಂದರು ಮೇಲಿನ ಮನೆ ಶಿವಸ್ವಾಮಿ  ಆಗಲೇಳಪ್ಪ ಮಾಡು  ಯಾರಾದರೂ ನಮಗೆ ಒಟ್ಟಿನಲ್ಲಿ ಅಮ್ಮನ ಕಾರ್ಯ ಆಗಬೇಕು   " ಎಂದು ಹಿರಿಯ ಜೀವ ಹೇಳುತ್ತಿದ್ದ ಹಾಗೆ ಬಹುತೇಕ ಒಕ್ಕಲಿಗರು, ನಾಯಕರು, ಇತರೆ ಎಲ್ಲಾ ಜಾತಿಗಳ ಪ್ರತಿನಿಧಿಗಳು ಇದ್ದರೂ ಯಾರೂ ನಾವು ಗುಡಿ ಗೌಡರು ಆಗಬೇಕು ಎಂದು ಆಸೆ ಪಡಲಿಲ್ಲ ಅಲಿಖಿತ ನಿಯಮದಂತೆ ಇದುವರೆಗೆ ಒಕ್ಕಲಿಗರು ಗೌಡಿಕೆ ಮಾಡಿರುವುದು ವಾಡಿಕೆ. ಎಲ್ಲರೂ ಮೌನವಾಗಿರುವುದು ಕಂಡು ಶಿವಸ್ವಾಮಿನೇ "ಎಲ್ಲ ಸುಮ್ಕಿದಾರೆ ಅಂದರೆ ನನ್ನ ಗುಡಿಗೌಡಿಕೆ ಒಪ್ಪಿದ್ದಾರೆ ಅಂತಾನೆ ನೀನಂತುನು, ಮಾಡನ ತಾಯಿ ಕಾರ್ಯ ನೀನಂತುನು" ಎಂದಾಗ ಆಗಲಿ ಈ ವರ್ಸ ಶಿವ ಸ್ವಾಮಿ ಗುಡಿಗೌಡ ನಾವೆಲ್ಲ ಅವನಿಗೆ ಬೆಂಬ್ಲ ಕೊಡನ ಅಮ್ಮನ ಜಾತ್ರೆನ ಸೆನ್ನಾಗಿ ಮಾಡಾನ ಎಂದರು 



"ಆತು ಎಂಟು ದಿನದ ಸಾರು  ಹಾಕ್ಸನೇನಪ್ಪ ಇನ್ನೇನು ಟೈಮಿಲ್ಲ ನೀನಂತುನು" ಎಂದು ಗುಡಿಗೌಡಿಕೆಯ ಮೊದಲ ಭಾಷಣವೆಂಬಂತೆ ಮಾತಾಡಿದರು ಎಲ್ಲರೂ ಸುಮ್ಮನಿದ್ದರು ," ಹೋದ ವರ್ಸ ನಂದು ನಮ್ಮ ಭೋಜಂದು ಸೇರಿ ಎಲ್ಡು ಉರ್ಮೆ ಜೊತೆಗೆ ನಗರಂಗೆರೆಯಿಂದ  ನಾಕು ಉರ್ಮೆ ಕರೆಸಿದ್ವಿ ಅವರಿಗೆ ಸರಿಯಾಗಿ ದುಡ್ಡು ಕೊಡಲಿಲ್ಲ ಈ  ವರ್ಸ ನಾನು ಯಾರನ್ನು ಕರೆಸಲ್ಲ ಸಿಟ್ಟಿನಿಂದ ಜೋರಾಗಿ ಮಾತನಾಡಿದ ರಾಜಪ್ಪ" ಅದ್ಯಾಕೆ ಕೊಟ್ಟಿಲ್ಲ ಇಂಗೆಲ್ಲ ಮಾತಾಡಬೇಡ ರಾಜ ನೀನು, ಒಂದ್ ಉರ್ಮೆಗೆ ನೂರು ರೂಪಾಯಂತೆ ಕೊಟ್ಟಿದಿನಿ" ಹಳೆ ಗುಡಿಗೌಡ ಜನಪ್ಪ ಆಕ್ಷೇಪಿಸಿದರು "ನೂರುಪಾಯಿ ಎತ್ಲಾಗಾಗುತ್ತೆ ಗೌಡರೆ " ಅವ್ರು ಗೊನ  ಗೊನ ಅಂತಿದ್ರು, " ಆತು ಹೇಳು ಈ ವರ್ಸ ಒಂದು ಉರ್ಮೆಗೆ ಐವತ್ತು ಜಾಸ್ತಿನೆ ಕೊಡ್ಸಾನ ಕರ್ಸು" ಉಮ್ಮಸ್ಸಿನಿಂದ  ಹೊಸ ಗುಡಿಗೌಡ್ರು ಘೋಷಿಸಿಯೇ ಬಿಟ್ಟರು.


" ಹೋದ ವರ್ಸ ನಮಗೆ ಹತ್ತು ಲೀಟರ್ ಹಳ್ಳೆಣ್ಣೆ ಕೊಡಿಸಿದ್ರಿ ನಾಕೈದು ಪಂಜಿಗೆ ಎಣ್ಣೆನೆ ಆಗಲಿಲ್ಲ ಈ ವರ್ಸ ಒಂದು ಹತ್ತು ಲೀಟರ್ ಕೊಡ್ಸಿ ಗೌಡರೆ " ಮಡಿವಾಳರ ಮಾರಣ್ಣ ಕೇಳಿದರು. ಆಗಲೆಂಬಂತೆ ತಲೆಯಾಡಿಸಿದರು ಗುಡಿಗೌಡ್ರು. " ಹಳೆ ಮಚ್ಚು ಸರಿಯಾಗ್ ಅರಿಯಲ್ಲ ಹೋದ ವರ್ಸ ಬಡ್ಕಲು ಕುರಿನ ಮೂರೇಟಿಗೆ ಕಡ್ದಿದ್ದ ನೋಡಿ ಕಿಳ್ಳುಡುಗ್ರು ನನ್ನ ನೋಡಿ ನಕ್ಕಿದ್ರು ,ಈ ವರ್ಸ ನನಗೆ ದೊಡ್ಡದೊಂದು ಒಳ್ಳೆಯ ಮಚ್ಚು ಕೊಡ್ಸಿ ಗೌಡ್ರೆ ಪಟ್ಟದ್ ಕೋಣನೂ ಒಂದೇ ಏಟಿಗ್ ಕಡಿಬೇಕು" ಬೇಡಿಕೆ ಇಟ್ಟರು ತಳವಾರ ಸಿದ್ದಾನಾಯ್ಕ. " ನೀನು ಎಣ್ಣೆ ಕುಡಿಯಾದ್ ಬಿಟ್ಟು ಕರೆಕ್ಟಾಗಿ ಕಡ್ದಿದ್ರೆ ಅದೇ ಮಚ್ ಸಾಕಪ್ಪ " ಗುಂಪಿನಿಂದ ಯಾರೋ ಅಂದಿದ್ದು ಕೇಳಿ " ಯಾವ್ ನನ್ ಮಗ ಅಂಗಂದಿದ್ದು ನೀನ್ ಕಡಿ ಕುರಿಯ ಗೊತ್ತಾಗುತ್ತೆ ಯಾವನೊ ಅವ್ನು? ಜೋರು ಧ್ವನಿಯಲ್ಲಿ ಕಿರುಚುತ್ತಲೇ ಇದ್ದ. ಯಾರಿಂದಲೂ ಸದ್ದಿಲ್ಲ.

 " ಆಗಲಿ ಬಿಡಪ್ಪ ಹೊಸ ಮಚ್ವು ಕೊಡ್ಸಾನ ,ಆದರೆ ಬ್ಯಾರೆ ಯಾರಿಗೂ ಮುಚ್ಚು ‌ಕೊಡಬಾರದು .ನೀನೊಬ್ಬನೆ ಕಡೀಬೇಕು ,ಹೋದ ವಾರ ಉಪ್ಪರಿಗೇನಹಳ್ಳಿ ಜಾತ್ರೆನಲ್ಲಿ ಯಾರಿಗೊ ಮಚ್ಚು ಕೊಟ್ಟು ಒಬ್ಬನ್ ಕೈ ತುಂಡಾಗಿ ಕಂಪ್ಲೇಂಟ್ ಆಗೈತೆ ಹುಸಾರು. ಇನ್ನ ಏನಾನ ಮಾತಡ್ಬೇಕೆನ್ರಪ್ಪ ಈಗಲೆ ಟೈಮ್ ಆಗೈತೆ ಸಾರು ಹಾಕಾಕ್ ಕಳ್ಸನಾ" ಎಂದರು ಗುಡಿಗೌಡರು.



 ವೈಶಾಖ ಶುಕ್ಲ ಹುಣ್ಣಿಮೆ ದಿನದಂದು ಜಲದಿ ಮಹೋತ್ಸವ ಆಚರಣೆ ಮಾಡುವ ಹಾಗೆ ಸಾರಲು ತೀರ್ಮಾನ ಕೈಗೊಂಡು ಮಾರಮ್ಮ ದೇವಿಗೆ ಕೈಮುಗಿದು ಎಲ್ಲರೂ ಅವರವರ ಮನೆಗಳ ಕಡೆ ನಡೆದರು .ಮೊದಲೇ ತಾಯಾರಾಗಿ ಬಂದಿದ್ದ ಸಿದ್ದಾನಾಯ್ಕ ತನ್ನ ತಪ್ಪಡೆ(ತಮಟೆ) ಯನ್ನು ಹೆಗಲಿಗೇರಿಸಿಕೊಂಡು ಡಂಕಣಕ..... ಡಂಕಣಕ .... ಎಂದು ಬಡಿಯುತ್ತಾ "ಕೇಳ್ರಪ್ಪೋ ......ಕೇಳ್ರಿ." ಎಂದು ಕೂಗುತ್ತಾ ಬೀದಿಗಳಲ್ಲಿ ಸಾಗಿದ.


******************************


ಜಾತ್ರೆಗೆ ಸಾರು ಹಾಕಿದ  ದಿನದಿಂದ ಇಡೀ ಊರಿಗೆ ಊರೇ ದಿಗ್ಗನೆ ಎದ್ದು ಸಡಗರದಿಂದ ಜಾತ್ರೆಯ ತಯಾರಿಯಲ್ಲಿ ತೊಡಗುತ್ತಿತ್ತು.ಮನೆಗೆ ಸುಣ್ಣ ಬಣ್ಣ ಬಳಿದು ಒಳಮನೆಯ ಸ್ವಚ್ಚತಾ ಕಾರ್ಯಗಳನ್ನು ಮಹಿಳೆಯರು ಮಾಡಿದರೆ ,ಮರಿ ತರುವುದು, ಅಡುಗೆಯ ಸೌದೆ ತಂದು ,ಸೌದೆ ಸೀಳುವುದು ಮನೆಗೆ ಬೇಕಾದ ಅಗತ್ಯ ಸಾಮಾನುಗಳನ್ನು ತರುವುದನ್ನು ಗಂಡಸರು ವಹಿಸಿಕೊಂಡು ಕೆಲಸ ಮಾಡುತ್ತಿದ್ದರು.



ರಸ್ತೆಯ ಅಕ್ಕ ಪಕ್ಕದಲ್ಲಿ ಇರುವ ಶೆಟ್ಟರಿಗೆ ಯಾಕೋ ಈ ವರ್ಷದ ಜಾತ್ರೆಯ ಬಗ್ಗೆ ಅಂತಹ ಆಸಕ್ತಿ ಇದ್ದಂತೆ ಕಾಣುತ್ತಿರಲಿಲ್ಲ ಅದಕ್ಕೆ ಟೇಪು ಹಿಡಿದು ಬಂದು ಅವರ ಮನೆಗಳ ಮೇಲೆ ಕೆಂಪು ಗುರುತು ಹಾಕಿ ಹೋದ ಅಧಿಕಾರಿಗಳು ಎಂದು ವಿಶೇಷವಾಗಿ ಹೇಳಬೇಕಾಗಿರಲಿಲ್ಲ .ಅವರ ಮುಖಗಳೆ ಎಲ್ಲವನ್ನೂ ಹೇಳುತ್ತಿದ್ದವು.



ಜಾತ್ರೆಗೆ ಸಾರಿದ ನಂತರದ ದಿನದಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಬೆಂಡು .ಬತ್ತಾಸು,ಕಾರ ಮಂಡಕ್ಕಿ, ಆಟಿಕೆ ಸಾಮಾನು ಮಾರಾಟದ ಅಂಗಡಿಗಳು, ಸರ ಬಳೆ ಅಂಗಡಿಗಳು,ಶರಭತ್ತು ,ಹಣ್ಣು,ಕಾಯಿ,ಅಂಗಡಿಗಳು, ಸಣ್ಣ ಪ್ರಮಾಣದ ಹೋಟೆಲ್ ಮಾಲೀಕರು ಬಂದು ಅಲ್ಲೊಂದು ಇಲ್ಲೊಂದು ಗೂಟ ನಿಲ್ಲಿಸಿ ಈ ಜಾಗ ನಮ್ಮದು ಎಂದು ಭದ್ರಪಡಿಸಿಕೊಳ್ಳುತ್ತಿದ್ದರು. 



ರಂಕಲ್ ರಾಟೆ ಯರಬಳ್ಳಿ ಮಾರಮ್ಮನ ಜಾತ್ರೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಎರಡು ದೊಡ್ಡ  ಮರದ ಹಲಗೆಗಳನ್ನು ನಿಲ್ಲಿಸಿ ಅದರ ಮೇಲೆ ಒಂದು ಗಟ್ಟಿಯಾದ ಕಬ್ಬಿಣದ ಸರಳನ್ನು ಬಂದಿಸಿ ನಾಲ್ಕು ಮರದ ತೊಟ್ಟಿಲುಗಳನ್ನು ಆ ಕಬ್ಬಿಣದ ಸರಳಿಗೆ ಜೋಡಿಸಿ ರಾಟೆಯ ಸಹಾಯದಿಂದ ತಿರುಗಿಸಿದರೆ ಅದೇ ರಂಕಲ್ ರಾಟೆ ಕೆಲ ಮಕ್ಕಳು  ಆಡಲು ಇಷ್ಟ ಪಡುತ್ತಾರೆ ಮತ್ತೆ ಕೆಲವರು ಆ ರಾಟೆ ತಿರುಗಿಸುವವನ ಕೈಚಳಕ ಅವನ ಹಾವಭಾವ ನೋಡಲು ಬರುವುದುಂಟು.



ಜಾತ್ರೆಗೆ ಸಾರಿದ ಐದು ದಿನಗಳಲ್ಲಿ  ಎಲ್ಲಾ ಮನೆಗಳು ಜಗಮಗಿಸುತ್ತಿದ್ದವು ಊರ ಮುಂದಿನ ರಸ್ತೆಯ ಇಕ್ಕೆಲಗಳು ವಿವಿಧ ಅಂಗಡಿಗಳಿಂದ ಅಲಂಕೃತವಾದ ಮಧುವಣಗಿತ್ತಿಯಂತೆ ಕಾಣುತ್ತಿದ್ದವು .ಊರ ಮುಂದಿನ ತೋಪಿನಲ್ಲಿ ,ಬೆಂಡು ಬತ್ತಾಸು,ಮಂಡಕ್ಕಿ, ಕಾರ,ಬಳೆಗಳ ಅಂಗಡಿಗಳು ರಾರಾಜಿಸುತ್ತಿದ್ದವು 


ಬುಧವಾರದ ಸಾರು ಹೊರಟು ಹೋಗುವ ಶಾಸ್ತ್ರ ಮಾಡುವಾಗ ಯರಬಳ್ಳಿ ಮಾರಮ್ಮನ ಅಧಿಕೃತ ಜಾತ್ರಾ ಮಹೋತ್ಸವ ಕಾರ್ಯಕ್ರಮ ಆರಂಭವಾಯಿತು



ಗುರುವಾರ ಮುಂಜಾನೆ ಎಲ್ಲಾ ಮನೆಗಳಲ್ಲಿ ನಿಗದಿತ ಅವಧಿಗಿಂತ ಮೊದಲೆ ಎದ್ದು ಅವರವರ ಕೆಲಸ ಮಾಡುವ ಹೊತ್ತಿಗೆ ಸೂರ್ಯ ನಿಧಾನವಾಗಿ ಪೂರ್ವದಲ್ಲಿ ಮೇಲೇಳುತ್ತಿದ್ದ ಉರುಮೆಯ ಸದ್ದು ಕೇಳಿದ ಜನ ಗುಡಿಯ ಕಡೆ ನಡೆದರು ಕೆಲ ಹೆಂಗಳೆಯರ ಕಂಕುಳಲ್ಲಿ ಒಂದೊಂದು ಬಿಂದಿಗೆ ನೀರಿತ್ತು. 


ಉರುಮೆ ದೋಣುಗಳ(ಡೊಳ್ಳು) ಸದ್ದು ಸೂರ್ಯ ಮೇಲಿರಿದಂತೆ ಜೋರಾಗುತ್ತಿತ್ತು,, ಆಸಾದಿಗಳ ಹಾಡು ಕೇಳುತ್ತಿತ್ತು, ಸರಸ್ವತಜ್ಜಿ ಮತ್ತು ಇತರರು ಮಾರಮ್ಮನ ಕುರಿತಾದ ಜನಪದ ಹಾಡುಗಳನ್ನು ಹಾಡುತ್ತಿದ್ದರು. ಒಟ್ಟಿನಲ್ಲಿ ಅಂದು ಬೆಳಿಗ್ಗೆ ಮಾರಮ್ಮನ ಗುಡಿಯ ಮುಂದೆ ಭಕ್ತಿ ಪೂರ್ವಕ ಗದ್ದಲ ಮತ್ತು ಭಕ್ತಿ ಮೇಳೈಸಿತ್ತು.


ಅಮ್ಮನ ಉತ್ಸವ ಮೂರ್ತಿಯನ್ನು ಹೊತ್ತು ಬಸವಾಚಾರ್ ಹೊರಬಂದರು ಉರುಮೆ ಜಾಗಟೆ, ಪದಗಳ ಸದ್ದು ಮುಗಿಲು ಮುಟ್ಟಿತ್ತು.


" ಜಲ್ದು ನಡೀರಪ್ಪ ಬಿಸ್ಲಾಗುತ್ತೆ ಹೊಳೆ ಇರೋ  ಜಲ್ದಿ ಮರದತ್ರ ಹೋಗಾಕೆ  ಇನ್ನಾ ಒಂದು ಕಿಲೋಮೀಟರ್ ದೂರ ನಡಿರಿ ನೀನಂತುನು " ಎಂದು ಜೋರು ಧ್ವನಿಯಲ್ಲಿ ಕಿರುಚಿದರೂ ಕ್ಷೀಣವಾಗಿ ಕೇಳುತ್ತಿತ್ತು ಗುಡಿ ಗೌಡರ ಮಾತು.


ಹೆಂಗಳೆಯರು ತಾವೂ ಬಿಂದಿಗೆಯಲ್ಲಿ  ತಂದ ನೀರನ್ನು ಅಮ್ಮನ ಕಾಲಿಗೆ ಅರ್ಪಿಸಿ ದಾರಿಗೆ ತಳಿ ಹಾಕಲು ಪೈಪೋಟಿ ನಡೆಸುತ್ತಿದ್ದರು. ಊರ ಮುಂದೆ ಅಮ್ಮ ಮತ್ತು ಜನರು ಕ್ರಮೇಣವಾಗಿ ಜಲದಿ ಹೊಳೆಯೆಡೆಗೆ ಹೆಜ್ಜೆ ಹಾಕಿದರು.



"ಅಜ್ಜಿ ನಿನ್ನೆ ಆ ದೇವರು(ಉತ್ಸವ ಮೂರ್ತಿ) ಗುಡಿಯಲ್ಲಿ ಇರಲಿಲ್ಲ ಇವತ್ತು ಎಲ್ಲಿಂದ ಬಂತು? ಇದು ಎರಡನೆಯ ಮಾರಮ್ಮ ನಾ? ಅಥವಾ ಮಾರಮ್ಮನ ತಂಗಿಯ? " ಗುಡಿಯಿಂದ ಮನೆಗೆ ಹಿಂತಿರುಗುವಾಗ ಸತೀಶ ಸರಸ್ವತಜ್ಜಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಕೇಳುತ್ತಿದ್ದ 


ನಗುತ್ತಲೇ ಅಜ್ಜಿ ಉತ್ತರಿಸಿದರು


" ನಿನ್ನೆ ರಾತ್ರಿ ಕಲ್ಲು ನೀರು ಕರಗೋ ಟೈಮಲ್ಲಿ ಪೂಜಾರಪ್ಪ ಬಸವಾಚಾರಿ ಒಂದತ್ನಿಂದ, ಗುಡಿಯ ಬಲಕ್ಕೆ ಇರೋ ನೆಲಮಾಳಿಗೆ ಬೀಗ ತಗದು, ಭಕ್ತಿಯಿಂದ ಕಣ್ಮುಚ್ಚಿ ಬೇಡ್ಕಂತರಂತೆ ಆ ತಾಯಿ ಗಡಿಗೆ ರೂಪದಲ್ಲಿ ಬಂದು ಪೂಜಾರಪ್ಪನ ಕೈಯಲ್ಲಿ ಬಂದು ಕೂತ್ಕಂತಳಂತೆ, ಅದೇ ನೀನು‌ಈಗ ನೋಡಿದ ಮಾರಮ್ಮ "


"ಅಂಗೆ ದೇವರು  ಕೈಯಾಗ ಬರೋದ್ನ ನೀನು ನೋಡೊದಿಯ ಅಜ್ಜಿ "


"ಏ ನಾನಲ್ಲಪ್ಪ ಈ ಊರಾಗೆ ಯಾರೂ ನೋಡಿಲ್ಲ .ಅಂಗೇನಾರ ನೋಡಾಕ ಹೋದ್ರೆ ರಕ್ತಕಾರ್ಕೆಂಡು ಸಾಯ್ತಾರಂತೆ" ಅಜ್ಜಿ ಉತ್ತರ ಹೇಳುತ್ತಾ ಮನೆಯ ಹೊಸಲು ದಾಟಿ ಒಳ ನಡೆದರು ಸತೀಶನ ಮನಸ್ಸು ಇನ್ನೂ ಮಾರಮ್ಮನ ಉತ್ಸವ ಮೂರ್ತಿಯ ಬಗ್ಗೆ ಯೋಚಿಸುತ್ತಿತ್ತು.



ಮನೆಯಲ್ಲಿ ಎಲ್ಲರೂ ಸ್ನಾನ ಮಾಡಿ ಶುಭ್ರವಾದ ನಂತರ ಕೆಲವರು ಊಟ ಮಾಡಿದರೆ ಕೆಲವರು ಒಂದೊತ್ತು(ಉಪವಾಸ) ಇದ್ದರು

ಸೂರ್ಯ ನಿಧಾನವಾಗಿ ಮಗ್ಗುಲು ಬದಲಿಸುತ್ತಿದ್ದ


"ಅದೇಟೊತ್ತು ಹೊಳ್ಡಿತಿರಪ್ಪ ಜಲ್ದು  ಜಲ್ದು ನಡೀರಿ ನೀವ್ ಲೇಟು ಮಾಡಿದ್ರೆ ಅಮ್ಮ ಹೊಳೆಮೇಲಿದ್ದ ಎದ್ದು ಬತ್ತಾಳೆ ಅವಗೇನ್ ನೋಡ್ತಿರಾ? ನಿಂದು ಆತೇನಮ್ಮ ಅದೇನ್ ಬುಡಿಗ್ಯಾಡ್ತಿಯೋ ಅಡಿಗೆ ಮನೇಲಿ? ಎಂದು ತಿಮ್ಮಕ್ಕನಿಗೆ ಹೇಳಿದಾಗ " ಅಯ್ಯೊ ಅಡಿಗೇನೆ ಮಾಡದ್ ಬ್ಯಾಡವಾ? ಯಾವಾಗಲೂ ವಟ ವಟ ಅಂತೀಯಲ್ಲ ಅನ್ನಬೇಕು ಅನಿಸಿದರೂ ಒಮ್ಮೆ ಹಾಗೆ ಮಾತನಾಡಿ ಮುರಾರಿಯಿಂದ ಬೈಸಿಕೊಂಡಿದ್ದು‌ ನೆನಪಾಗಿ ಮನದಲ್ಲೇ ಈ ಮುದುಕಿ‌ ಯಾವಾಗ ಒರಗುವಳೋ ಎಂದು ಶಪಿಸುತ್ತಾ " ಆತು ಅತ್ತೆ ಈಗ‌‌ ರಡಿ ಆಗ್ತೀನಿ ಅಂತ ಒಳಗೆ ಹೋದಳು ತಿಮ್ಮಕ್ಕ.



ಯುಗಾದಿ ಹಬ್ಬದ ನಂತರ ಎಲ್ಲರ ಮನೆಯ ಜರಿ ಪಂಚೆಗಳು ,ಬಿಳಿ ಟವಲ್ಗಳು, ರೇಶ್ಮೆ ಸೀರೆಗಳು ಹೊರಬಂದಿದ್ದವು ಬಹುತೇಕರು ಅಂದು ಸ್ನಾನ ಮಾಡಿದ್ದರು ಮಾರಮ್ಮನ ಗುಡಿಯಿಂದ ಜಲದಿ ಹೊಳೆಯ ವರೆಗೆ ಎತ್ತ ನೋಡಿದರೂ ಜನ .ಇದರ ಜೊತೆಗೆ ಆಗೊಂದು ಈಗೊಂದು ಬರುವ ಖಾಸಗಿ ಬಸ್ಸು ಗಳಲ್ಲಿ ಒಳಗೆ ಇರೋದಕ್ಕಿಂತ ಹೆಚ್ಚು ಬಸ್ಸುಗಳ ಮೇಲೆ ಜನರು ಬಂದು ಈಗಿರುವ ಜನರೊಡನೆ ಸೇರಿ ಜಾತ್ರೆ ರಂಗೇರುತ್ತಿತ್ತು.


ಬಹಳ ದಿನಗಳ ನಂತರ ಸತೀಶ ಸುಜಾತಳನ್ನು ಜಲದಿ ದಾರಿಯಲ್ಲಿ ನೋಡಿದ ಹಸಿರು ರೇಷ್ಮೆ ಸೀರಿಗೆ ಕೆಂಪು ಕುಪ್ಪಸ ತೊಟ್ಟು , ಕೂದಲು ಇಳಿಬಿಟ್ಟಿದ್ದಳು ಅವು ಆಗಾಗ್ಗೆ  ಕಣ್ಣಮೇಲೆ ಬಿದ್ದಾಗ ಕಿರುಬೆರಳಿಂದ ಹಿಂದಕ್ಕೆ 

ತೀಡಿ ಕಿವಿಯ ಹಿಂದೆ ಸಿಕ್ಕಿಸಿ ಅಮ್ಮನ ಕಣ್ತಪ್ಪಿಸಿ ಸತೀಶನ ನೋಡಿದಳು . ಪರೀಕ್ಷೆ ಮುಗಿದ ಮೇಲೆ ಎರಡೋ ಮೂರು ಬಾರಿ ಬರಿ ನೋಡಿದ್ದು ಮಾತಿಲ್ಲ ಇಂದು ಮಾತನಾಡಿಸೋಣ ಎಂದರೆ ಅವರಮ್ಮ ಇದ್ದಾರೆ ಎಂದು ಮನದಲ್ಲೇ ಕೊರಗಿ ಕಣ್ಣಲ್ಲೆ ಅದೇನೋ ಮಾತಾಡಿಕೊಂಡರು, ಅವಳ ಅಂದಿನ ಅಲಂಕಾರ ಯಾವ ಮದುವೆ ಹೆಣ್ಣಿಗೂ ಕಡಿಮೆ ಇರಲಿಲ್ಲ ಮನದಲ್ಲೇ ಇಬ್ಬರೂ ಸಪ್ತಪದಿ ತುಳಿದರೆ ಹೇಗಿರುತ್ತದೆ ?ಎಂದು ಕಲ್ಪನೆಗೆ ಜಾರಿದ 


"ಸೂರು ಬೆಲ್ಲ ..... ಸೂರು ಬೆಲ......ಎಂದ ಚಿಕ್ಕ ಹುಡುಗ ಸತೀಶನ ಜಗ್ಗಿ " ಅಣ್ಣ ಸೂರು ಬೆಲ್ಲ ತಗಾಳಣ್ಣ  ಐವತ್ತು ಪೈಸಾ ಅಷ್ಟೇ " ಎಂದಾಗ ವಾಸ್ತವಕ್ಕೆ ಮರಳಿದ ಸತೀಶ, ನಾನೂ ಇವನಷ್ಟು ಇದ್ದಾಗ ಹೀಗೆಯೇ ಸೂರು ಬೆಲ್ಲ ಮಾಡಿ ಎರಡು ರೂ ಬಂಡವಾಳ ಹಾಕಿ ಹದಿನೈದು ರೂಪಾಯಿ ಲಾಭವನ್ನು ಪಡೆದದ್ದು ನೆನಪಾಯಿತು.


ಸೂರುಬೆಲ್ಲ ಕೊಳ್ಳಲು ಸತೀಶ ಆ ಹುಡಗನ ಕಡೆ ನೋಡುವ ಮೊದಲೇ ಅವರ ಅಮ್ಮನಿಗೆ ಗೊತ್ತಾಗದಂತೆ ಸತೀಶನಿಗೆ ಟಾಟಾ ಮಾಡಿದ್ದಳು ಸುಜಾತ.


ಎರಡು ಎಲೆಗಳಲ್ಲಿ ಒಂದಿಡಿ ಮಂಡಕ್ಕಿ, ಒಂದೆರಡು ಮೆಣಸು ಹಾಕಿ ಮುದುರಿ ಕೊಡುವುದೇ ಸೂರುಬೆಲ್ಲ .ಈ ಸೂರುಬೆಲ್ಲ ವನ್ನು ಅಮ್ಮನ ಮೇಲೆ ಸೂರಿದರೆ ಅಮ್ಮ ಸಂತಸಗೊಂಡು ನಮ್ಮ ಮನದ ಅಭೀಷ್ಟೆಗಳನ್ನು ಈಡೇರಿಸುವಳು ಎಂಬ ಪ್ರತೀತಿ.


"ಅಣ್ಣ ಐವತ್ತು ಪೈಸೆ ಚಿಲ್ರ ಇಲ್ಲಣ್ಣ " ಅಂದ ಆ ಹುಡುಗ " 


"ಇಟ್ಕ ಪರವಾಗಿಲ್ಲ " ತನ್ನ ಮನದ ದೇವತೆ ನೋಡಿದ ಖುಷಿಯಿಂದ ಹೇಳಿದ ಸತೀಶ"


"ಮ್ಯಾಗಳ ಮನೆ ರಂಗಸ್ವಾಮಿ" 


ಪಲ್ಲಕ್ಕಿ ರಾಮಣ್ಣ


ದೊಡ್ಡಪ್ಪಗಳ ಮುಕುಂದಯ್ಯ


ಹೀಗೆ ಹೆಸರು ಕೂಗುತ್ತಾ, ಅಮ್ಮನ ಪ್ರಸಾದ ಕೊಟ್ಟು ಜಲದಿ ಹೊಳೆಯಿಂದ ಅಮ್ಮನ ಪಯಣ ಊರ ಕಡೆ ಆರಂಭವಾಯಿತು. ಅಮ್ಮನ ಎದುರಿಗೆ ಬಲಗೈಯಲ್ಲಿ ದೊಡ್ಡ ಮಚ್ಚು ಹಿಡಿದು ಸಿದ್ದಾನಾಯ್ಕ ಹಿಮ್ಮುಖವಾಗಿ ಚಲಿಸುತ್ತಿದ್ದ .


ಭಕ್ತಾದಿಗಳು ಹರಕೆಯ ಉಳ್ಳಾಗಡ್ಡೆ ,ಮೆಣಸು, ಮತ್ತು ಕೋಳಿಗಳನ್ನು ಅಮ್ಮನ ಮೇಲೆ ಎಸೆಯುತ್ತಿದ್ದರು, ಯಾರೋ ಎಸೆದ ಕೋಳಿ  ಬಿಳಿಯಪ್ಪನ ಕೈಗೆ ಬಂದು ಸಿಕ್ಕಿತು.


ಅಮ್ಮನ ಪ್ರಸಾದ ಎಂದು ಗಟ್ಟಿಯಾಗಿ ಹಿಡಿದುಕೊಂಡು ಅಮ್ಮನ ಹಿಂದೆ ನಡೆದ. ಮಡಿವಾಳ ಮಾರಪ್ಪನ ಅಣ್ಣ ತಮ್ಮಂದಿರು ಮತ್ತು ನೆಂಟರು ದೇವಿಗೆ ನಡೆಮುಡಿ ಹಾಸಲು ಸೀರೆಗಳನ್ನು ಜೊಡಿಸುವ ಪರಿ ಬಲು ಕೈಚಳಕ ಮತ್ತು ಸಮನ್ವಯದಿಂದ ಕೂಡಿತ್ತು ,ದೇವಿ ಮುಂದೆ ಸಾಗಿದಂತೆ ಹಾಸಿದ ಸೀರೆಯನ್ನು ಮುಂದಕ್ಕೆ ಕೊಟ್ಟು ನೆಲದಲ್ಲಿ ಹಾಸುತ್ತಿದ್ದರು. ಎರಡು ಮೂರು ಕಡೆ ಹೊಳೆಮರಿ ಕಡಿದರು ,ಕೆಲವೊಮ್ಮೆ ಅಮ್ಮ ಜೋರಾಗಿ ಓಡುತ್ತಾ ಕುಣಿಯುತ್ತ ಬಂದರೆ ಕೆಲವೊಮ್ಮೆ ಮಕ್ಕಳು ಮೊಂಡುತನ ಮಾಡುವಂತೆ ನಿಂತಲ್ಲೇ ನಿಲ್ಲುತ್ತಿತ್ತು ,ಆಗ ಮಾರಮ್ಮನ ಮಕ್ಕಳಾದ ಅಸಾದಿಗಳು ಚೌಡಿಕೆ ಬಾರಿ ಸುತ್ತಾ  ಅದೇನೊ ಅವಾಚ್ಯ ಶಬ್ದಗಳನ್ನು ಬೈಯ್ದಾದ ಮೇಲೆ ಮುಂದೆ ಬರುತ್ತಿತ್ತು ಮಾರಮ್ಮ. ಪಶ್ಚಿಮ ದಿಕ್ಕಿನಲ್ಲಿ ಇನ್ನೇನು ಸೂರ್ಯ ಜಾರುವನು ಅನ್ನುವ ಕಾಲಕ್ಕೆ ತಾಯಿಯ ಊರ ಪ್ರವೇಶ. ಗುಡಿಯ ಪೌಳಿಯ ಎರಡೂ ಕಡೆ ಹೆಂಗಳೆಯರು ಮಾರಮ್ಮನಿಗಿಂತ ಒಂದು ಹೆಜ್ಜೆ ಮುಂದೆ ಅಲಂಕಾರ ಮಾಡಿಕೊಂಡು ಕೈಯಲ್ಲಿ ಸೂರುಬೆಲ್ಲ ಹಿಡಿದಿದ್ದರು. ಅಮ್ಮ ಹತ್ತಿರದ ಬಂದು ಗುಡಿಯನ್ನು ಪ್ರದಕ್ಷಿಣೆ ಹಾಕುವಾಗ ಎಲ್ಲರೂ ಸೂರುಬೆಲ್ಲ ಹಾಕಿ ಕೈಮುಗಿದರು .ಅಮ್ಮ ಗುಡಿಯ ಒಳಗೆ ಹೋಗಿ ಗುಡಿದುಂಬುವ ಕಾರ್ಯ ಸಂಪೂರ್ಣವಾಗಿ ಮಂಗಳಾರತಿ ಆಯಿತು .ನಾಳಿನ ಜಾತ್ರಾ  ಕಾರ್ಯಕ್ಕೆ ಗುಡಿಗೌಡ್ರು ಸಮಾಲೋಚನೆ ಮಾಡುತ್ತಿದ್ದರೆ ಬೆಳಿಗ್ಗೆಯಿಂದ ಉಪವಾಸವಿದ್ದ ಭಕ್ತಾದಿಗಳು ಅವರವರ ಮನೆಯಲ್ಲಿ ಒಂದೊತ್ತು ಬಿಡುವ ಶಾಸ್ತ್ರ ಮಾಡಿ ಊಟ ಮಾಡಿದರು.



ಮುಂದುವರೆಯುವುದು



ಸಿ ಜಿ ವೆಂಕಟೇಶ್ವರ