28 ಡಿಸೆಂಬರ್ 2021

ದೂರ ಸರಿದರು .ಕಾದಂಬರಿ ವಿಮರ್ಶೆ

 


ದೂರ ಸರಿದರು 

ವಿಮರ್ಶೆ


  ಎಸ್ .ಎಲ್ . ಬೈರಪ್ಪ ರವರ ಕಾದಂರಿಗಳೇ ಹಾಗೆ ಪ್ರತಿ ಬಾರಿ ಓದಿದಂತೆ ನಮ್ಮಲ್ಲಿ ಏನೋ ಒಂದು ಹೊಸ ಜ್ಞಾನ ಬೆಳೆಯುತ್ತದೆ ,ಹೊಸ ಚಿಂತನೆಗಳು ಮೊಳಕೆಯೊಡೆಯುತ್ತವೆ.

1962 ರಲ್ಲಿ ಬರೆದ ಕಾದಂಬರಿ 

ಹಲವಾರು ಬಾರಿ ಮರು ಮುದ್ರಣ ಕಂಡು ಅಪಾರ ಓದುಗ ಬಳಗ ಮೆಚ್ಚಿದ ಕಾದಂಬರಿ "ದೂರ ಸರಿದರು " ನನಗೆ ಬಹಳ ಇಷ್ಟವಾದ ಕಾದಂಬರಿ.


ಈ ಕಾದಂಬರಿಯಲ್ಲಿ ಎರಡು ಜೋಡಿಗಳು ದೂರ ಸರಿಯುವುದನ್ನು ನಾವು ಕಾಣಬಹುದು.

ಪ್ರಮುಖ ಪಾತ್ರದಲ್ಲಿ ಅನಂದ ಮತ್ತು ವಿನತೆ ಪ್ರೀತಿ ದಾಂಪತ್ಯ ದ ಬಗ್ಗೆ ಏಕ ಅಭಿಪ್ರಾಯವಿದ್ದರೂ ಒಂದೇ ರೀತಿಯ ಚಿಂತನೆಗಳ ಒಪ್ಪಿಕೊಂಡರೂ  ವಿನತೆಯ ತಾಯಿಯ ವಿರೋದ ಹಾಗೂ ಕೆಲವು ಬಾಹ್ಯ ಪರಿಸ್ಥಿತಿಯಿಂದ ಅವರು "ದೂರ ಸರಿದರು"

ಮತ್ತೊಂದು ಜೋಡಿ ಉಮೆ ಮತ್ತು ವಸಂತ ಇವರಿಬ್ಬರೂ ಸೌಂದರ್ಯಕ್ಕಿಂತ ಹೆಚ್ಚು ವೈಚಾರಿಕತೆಯ ಸಾಮ್ಯತೆ ಇವರನ್ನು ಬಂಧಿಸಿತ್ತು .ಮೊದಲು ಉಮೆಯ ಪ್ರೋತ್ಸಾಹ ಮಾಡಿದ ವಸಂತ ಕ್ರಮೇಣ ಅವಳ  ವೈಚಾರಿಕತೆ ಮತ್ತು ಚಿಂತನೆಗಳು ಅವನ ನಂಬಿಕೆಯನ್ನು ಪ್ರಶ್ನಿಸುವ ಮಟ್ಟ ತಲಪಿದಾಗ ವಸಂತ ಉಮೆಯಿಂದ "ದೂರ ಸರಿದನು".

ತತ್ವ ಶಾಸ್ತ್ರದ ಹಿನ್ನೆಲೆಯಲ್ಲಿ ಬಂದ ಬೈರಪ್ಪನವರ ಸಂಭಾಷಣೆ ನಮ್ಮಲ್ಲಿ ಚಿಂತನ ಮಂಥನ ನಡೆಸಲು ಪ್ರೇರಣೆ ನೀಡುತ್ತದೆ.

ವಿನತೆಗೆ ತನ್ನ ಪ್ರೀತಿಗಿಂತ ತಾಯಿ, ಮತ್ತು ತಮ್ಮಂದಿರ ಶಿಕ್ಷಣ ಅವಳನ್ನು ಕಟ್ಟಿ ಹಾಕಿತ್ತು .ಅವಳ ಗೆಳತಿ ಅವಳ ಪ್ರೇಮಕ್ಕೆ ಸಹಾಯ ಮಾಡಿದರೂ ಅಮ್ಮನ ಬ್ಲಾಕ್ ಮೇಲ್ ಅಳು ಮುಂತಾದವು ವಿನತೆಯನ್ನು ಹಿಂದೆ ಎಳೆದವು .


ಪ್ರೀತಿ ಕುರುಡು ಎಂದು ಕೆಲವರು ಹೇಳಿದರೂ ಇಂದಿನ ಮಾಧ್ಯಮ  ಮತ್ತು ಬಹುತೇಕ ಸಾಹಿತ್ಯ ಹೆಣ್ಣು ಮತ್ತು ಗಂಡಿನ ಸೌಂದರ್ಯ ನೋಡಿ ಪ್ರೀತಿ ಹುಟ್ಟುವ ಬಗ್ಗೆ ವಿವರ ನೀಡುವರು. ಈ ಕಾದಂಬರಿಯ ಲ್ಲಿ ಪ್ರೇಮ ಉದಯವಾಗಲು ಬಾಹ್ಯ ಸೌಂದರ್ಯಕ್ಕೆ ಮಿಗಿಲಾಗಿ ಆಂತರಿಕ ಸೌಂದರ್ಯ ಭೌದ್ಧಿಕ ಸೌಂದರ್ಯ ಮುಖ್ಯ ಎಂಬುದನ್ನು ಬೈರಪ್ಪರವರು ಈ ಕಾದಂಬರಿ ಮೂಲಕ ಎತ್ತಿ ಹಿಡಿದದ್ದು ಸಾರ್ವಕಾಲಿಕ ಮೌಲ್ಯವನ್ನು ಎತ್ತಿಹಿಡಿದಂತಾಗಿದೆ.

ಕಾದಂಬರಿ ಬರೆದು ಅರವತ್ತು ವರ್ಷಗಳ ನಂತರ ವೂ ಸಹ ಇಂದಿಗೂ ಕೌಟುಂಬಿಕ ,ಜಾತಿ ಅಂತಸ್ತು ಧರ್ಮದ ಕಾರಣದಿಂದಾಗಿ ಹಲವಾರು ಪ್ರೇಮಿಗಳು ದೂರ ಸರಿಯುತ್ತಿರುವುದನ್ನು ನಾವು ಕಾಣುತ್ತೇವೆ. ಅದಕ್ಕೆ ಈ ಕೃತಿಯು ಇಂದಿಗೂ ಪ್ರಸ್ತುತ ಮುಂದೆ ಕೂಡಾ.

ಒಟ್ಟಾರೆ ಬೈರಪ್ಪನವರ ಈ ಕಾದಂಬರಿ ಓದಿದ ಕನಿಷ್ಠ ಹದಿನೈದು ದಿನಗಳಾದರೂ ಆ ಪಾತ್ರಗಳ ಗುಂಗು ನಮ್ಮನ್ನು ಆವರಿಸುತ್ತದೆ.ಇಲ್ಲಿ ದೂರ ಸರಿಯಲು ಯಾರು ಕಾರಣ ಎಂಬ ವಿಮರ್ಶೆ ನಮ್ಮಲ್ಲಿ ಮೊಳೆಯುತ್ತದೆ. ನಮ್ಮ ಜೀವನದಲ್ಲಿ ಕೆಲವೊಮ್ಮೆ ನಮ್ಮಿಂದ ಕೆಲವರು ಅಥವಾ ಕೆಲವರ ಜೀವನದಿಂದ ನಾವು ದೂರ ಸರಿದ ಕಾರಣವನ್ನು ಹುಡುಕುತ್ತೇವೆ .ಕೆಲವೊಮ್ಮೆ ನಾವೇ ಪಶ್ಚಾತ್ತಾಪ ಪಟ್ಟುಕೊಳ್ಳುತ್ತೇವೆ.ಈ ಕಾದಂಬರಿಯನ್ನು ನೀವು ಓದಿಲ್ಲವಾದರೆ ಖಂಡಿತವಾಗಿಯೂ ಓದಿ.ಈಗಾಗಲೇ ಓದಿದ್ದರೆ ಪುನಃ ಓದಿ ಹೊಸ ಯೋಚನೆಗಳು ನಿಮ್ಮಲ್ಲಿ ಪುಟಿದೇಳುವುದರಲ್ಲಿ ಸಂಶಯವಿಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


27 ಡಿಸೆಂಬರ್ 2021

ನಾನು ಬಾಲ್ಯದಿ ಕಲಿತ ಪದ್ಯಗಳು.


 


ನನ್ನ ಬಾಲ್ಯದಿ ನಾ ಕಲಿತ ಪದ್ಯಗಳು...

ಆತ್ಮ ಕಥೆ ೨೦

ನನ್ನ ಶಾಲಾ ದಿನಗಳಲ್ಲಿ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರಾದ ತಿಪ್ಪೇಶಪ್ಪ ಸರ್ ರವರು ಪದ್ಯಗಳನ್ನು ರಾಗವಾಗಿ ಹಾಡಿ ನಮಗೂ ಹಾಡಲು ಹೇಳಿ ಕೊಡುತ್ತಿದ್ದರು. ಸಾಮಾನ್ಯವಾಗಿ ಪದ್ಯಗಳನ್ನು ಶನಿವಾರ ಹೇಳಿಕೊಡುತ್ತಿದ್ದರು. 


ಅವರು ಹೇಳಿಕೊಟ್ಟ ಎಲ್ಲಾ ಪದ್ಯಗಳು ನನಗೆ ಇಷ್ಟ ವಾಗಿದ್ದವು .ಅದರಲ್ಲೂ  ಗೋವಿನ ಹಾಡು    "ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದೊಳಿರುವ ಕಾಳಿಂಗನೆಂಬ ಗೊಲ್ಲನ ಕಥೆಯ ...,." ಎಂದು ರಾಗವಾಗಿ ಹಾಡುತ್ತಿದ್ದ ಚಿತ್ರ ಈಗಲೂ ನನ್ನ ಮನದಪಟಲದ ಮೇಲೆ ಮೂಡುತ್ತದೆ. ಅದೇ ಪದ್ಯಕ್ಕೆ ನಮ್ಮಿಂದ  ಅಭಿನಯ ಮಾಡಿಸಿ  ಗೋವಿನ ಹಾಡನ್ನು ದೃಶ್ಯ ರೂಪದಲ್ಲಿ ಮೂಡಿಸಿ ನಮ್ಮನ್ನು ರಂಜಿಸಿದ್ದರು.


ಆ ಪದ್ಯದಲ್ಲಿ ಬರುವ ಗೋವಿನ ಪ್ರಾಮಾಣಿಕ ನಡೆ, ಹುಲಿಯ ಮನಪರಿವರ್ತನೆ , ಗೋವು ತನ್ನ ಕರುವಿಗೆ ಹೇಳುವ ಬುದ್ದಿವಾದ ಈಗಲೂ ಪ್ರಸ್ತುತ. ಒಂದು ಪದ್ಯದಲ್ಲಿ ಒಂದು ಮಹಾಕಾವ್ಯದಲ್ಲಿ ನೀಡುವ ಸಂದೇಶಗಳನ್ನು ನೋಡಬಹುದು. ಈಗಲೂ ಆಗಾಗ್ಗೆ ನಾನು ಆ ಪದ್ಯ ಓದುತ್ತೇನೆ ಪ್ರತೀ ಬಾರಿ ಓದಿದಾಗ ಹೊಸ ಹೊಳವುಗಳು ,ಚಿಂತನೆಗಳು ಚಿಗುರೊಡೆಯುತ್ತವೆ. ನನ್ನ ಬಾಲ್ಯ, ನನ್ನ ಊರು, ನನ್ನ ಸಹಪಾಠಿಗಳು, ನನ್ನ ಶಿಕ್ಷಕರು ನೆನಪಾಗುತ್ತಾರೆ.


ಇನ್ನೂ  ಬಾಲ್ಯದಲ್ಲಿ ನಾನು ಕಲಿತ ಹಾಗೂ ನನಗೆ  ಬಹಳ   ಇಷ್ಟವಾದ ಪದ್ಯ " ಒಂದು ಎರಡು ಬಾಳೆಲೆ ಹರಡು"     ಊಟದ ರೀತಿ ರಿವಾಜನ್ನು ಸರಳ ಪದಗಳಲ್ಲಿ ಸುಂದರವಾಗಿ ವರ್ಣನೆ ಮಾಡಿದ ಕವಿತೆ ನನಗೆ ಈಗಲೂ ಇಷ್ಟ . ಇದೇ ಪದ್ಯದಿಂದ ಸ್ಫೂರ್ತಿ ಪಡೆದು ಶಾಲೆಯಲ್ಲಿ ಮಕ್ಕಳು ಕಲಿಯುವ ಬಗ್ಗೆ  ನಾನೂ ಒಂದು ಶಿಶುಗೀತೆ   ಬರೆದಿರುವೆ . ಅದು ಹೀಗಿದೆ.


*ಪುಟ್ಟನ ಶಿಕ್ಷಣ*


ಒಂದು ಎರಡು 

ಶಾಲೆಗೆ ಹೊರಡು


ಮೂರು ನಾಲ್ಕು

ಪಾಠವು ಬೇಕು 


ಐದು ಆರು

ಗೆಳೆಯರ ಸೇರು


ಏಳು ಎಂಟು

ಆಟವು ಉಂಟು


ಒಂಭತ್ತು ಹತ್ತು

ಅರಿವನು ಬಿತ್ತು


ಒಂದರಿಂದ ಹತ್ತು  ಹೀಗಿತ್ತು

ಕಲಿಕೆಯ ದಾರಿಯು ಸೊಗವಿತ್ತು


ಇಂದಿನ ದಿನಗಳಲ್ಲಿ ಕಂಪ್ಯೂಟರ್ ಕಲಿಯದ ವ್ಯಕ್ತಿಯನ್ನು ಅನಕ್ಷರಸ್ಥ ಎಂದು ಕರೆಯಲಾಗುತ್ತದೆ .ಕಂಪ್ಯೂಟರ್ ಕಲಿಕೆಯು ಹಂತಗಳನ್ನು ಹೇಳುವ ಒಂದು ಶಿಶುಗೀತೆಯ ನನ್ನ ಪ್ರಯತ್ನ ಇದು.


ಒಂದು ಎರಡು 

ಕಂಪ್ಯೂಟರ್ ಆನ್ ಮಾಡು


ಮೂರು ನಾಲ್ಕು

ಪಾಸ್ ವರ್ಡ್ ಹಾಕು


ಐದು ಆರು

ಕಂಪ್ಯೂಟರ್ ಕಲಿಕೆ ಜೋರು


ಏಳು ಎಂಟು

ಇಂಟರ್ನೆಟ್ ನಂಟು 


ಒಂಭತ್ತು ಹತ್ತು

ಷಟ್ ಡೌನ್ ಬಟನ್ ಒತ್ತು


ಒಂದರಿಂದ ಹತ್ತು ಹೀಗಿತ್ತು

ಕಂಪ್ಯೂಟರ್ ಕಲಿಕೆ ಮಂದುವರೆದಿತ್ತು.


ಹೀಗೆ ನಾನು ಬಾಲ್ಯದಲ್ಲಿ ಕಲಿತ ಪದ್ಯಗಳ ನಂಟು ಈಗಲೂ ಮುಂದುವರೆದಿದೆ. ಕೆಲವೊಮ್ಮೆ ಅವುಗಳ ನೆನೆದು ಕೆಲವೊಮ್ಮೆ ಅದೇ ಧಾಟಿಯಲ್ಲಿ ಪದ್ಯಗಳ ಹೊಸೆದು ನಲಿಯುತ್ತೇನೆ ಓದುಗ ದೊರೆಗಳು ಮೆಚ್ಚಿ ನಾಲ್ಕು ಮಾತಾಡಿದರೆ ಇನ್ನೂ ಹಿಗ್ಗುತ್ತೇನೆ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


23 ಡಿಸೆಂಬರ್ 2021

ಕೃಷ್ಣವರ್ಣೆ.


 *ಸಿಹಿಜೀವಿಯ ಹನಿ*


ಕೃಷ್ಣವರ್ಣೆ ಎಂದು ಜರಿದು

ದೂರತಳ್ಳಿ ಶ್ವೇತವರ್ಣವೇ ಶ್ರೇಷ್ಟ

ಎಂದು ಮರುಳಾಗದಿರು ನೋಡಿ

ಥಳುಕು ಬಳುಕು|

ಕಲ್ಲಿದ್ದಲಿನಿಂದಲೂ ಪಡೆಯಬಹದು

ಸರ್ವರ ಬೆಳಗುವ ಬೆಳಕು||


*ಸಿಹಿಜೀವಿ*

ಪ್ರಯತ್ನ ಜಾರಿಯಲ್ಲಿರಲಿ .


 



ಎಟುಕದ ದ್ರಾಕ್ಷಿ ಹುಳಿಯೆಂದು ಪಲಾಯನ ಮಾಡುವವರು ನಾವು . ಕೆಲವೊಮ್ಮೆ ಇದು ನಮ್ಮ ಮಾನಸಿಕ ಆರೋಗ್ಯದ ಡಿಪೆನ್ಸ್ ಮೆಕಾನಿಸಮ್ ತರ ಕೆಲಸ ಮಾಡುತ್ತದೆ. ಇಲ್ಲದಿದ್ದರೆ ಸಿಗದ ವಸ್ತುಗಳ ಕುರಿತು ಚಿಂತಿಸುತ್ತಾ ಚಿತೆಯೇರುವ ಪರಿಸ್ಥಿತಿ ಬರುತ್ತದೆ. A bird in a hand is greater than two bird in a bush ಎಂಬಂತೆ ಕೆಲವೊಮ್ಮೆ ನಮ್ಮ ಬಳಿ ಇರುವ ವಸ್ತುಗಳ ಮತ್ತು ಸೌಕರ್ಯಗಳನ್ನು ಎಂಜಾಯ್ ಮಾಡೋಣ.

ಹಾಗಾದರೆ ಉನ್ನತವಾದ ಗುರಿಗಳೇ  ಬೇಡವೆ? ನಮಗೆ ಸಿಗದಿರುವ ವಸ್ತುಗಳ ಪಡೆಯಲು ಯಾವಾಗಲೂ ಪಲಾಯನ ಮಾಡಿದರೆ ನಾವು ಸಾಧಿಸುವುದು ಯಾವಾಗ? ಎಂಬ ಪ್ರಶ್ನೆ ಉದ್ಭವಿಸುತ್ತದೆ. 

ಉನ್ನತ ಗುರಿ ಖಂಡಿತವಾಗಿಯೂ ತಪ್ಪಲ್ಲ ಅದನ್ನು ತಲುಪುವ ದಾರಿಯಲ್ಲಿ ಅಡೆ ತಡೆ ಬಂದಾಗ ವಿಚಲಿರಾಗದೇ ಸಿಂಹಾವಲೋಕನ ಮಾಡಿಕೊಂಡು ಮುನ್ನೆಡೆಯೋಣ.

 ನಂತರ ಮುಂದೆ ನಮ್ಮ ಗುರಿ ಸಾಧಿಸಲು ಪ್ರಯತ್ನ ಜಾರಿಯಲ್ಲಿ ಇಟ್ಟಿರೋಣ.



ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ತುಮಕೂರು