24 ಏಪ್ರಿಲ್ 2020

ಸಂಪತ್ತನ ದಿನಚರಿ (ಶಿಶುಗೀತೆ)

*ಸಂಪತ್ತನ ದಿನಚರಿ*

ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು.

ಇಪ್ಪತ್ತು ಹತ್ತು ಮೂವತ್ತು
ಗೆಳೆಯರ ದಂಡು ನೆರೆದಿತ್ತು.

ಮೂವತ್ತು ಹತ್ತು ನಲವತ್ತು
ಸವಿದರು ಹಣ್ಣುಗಳ ಗಮ್ಮತ್ತು.

ನಲವತ್ತು ಹತ್ತು  ಐವತ್ತು
ಕ್ರಮೇಣ ಹೊತ್ತು ಜಾರಿತ್ತು.

ಐವತ್ತು ಹತ್ತು ಅರವತ್ತು
ಮನೆ ಕಡೆ ಸವಾರಿ ನಡೆದಿತ್ತು.

ಅರವತ್ತು ಹತ್ತು ಎಪ್ಪತ್ತು
ಅಜ್ಜಿ ಕೊಟ್ಟರು ಸಿಹಿಮುತ್ತು.

ಎಪ್ಪತ್ತು ಹತ್ತು ಎಂಭತ್ತು
ಚಂದಿರ ಬಾನಲಿ ಬಂದಿತ್ತು .

ಎಂಭತ್ತು ಹತ್ತು ತೊಂಬತ್ತು
ಅಮ್ಮ ಕೊಟ್ಟರು ಕೈತುತ್ತು.

ತೊಂಬತ್ತು ಹತ್ತು ನೂರು
ಮಲಗುವ ಕೋಣೆ ಸೇರು

ಹತ್ತರಿಂದ ನೂರು ಈಗಿತ್ತು
ಸಂಪತ್ತನ ದಿನಚರಿ ಮುಗಿದಿತ್ತು

*ಸಿ ಜಿ ವೆಂಕಟೇಶ್ವರ*
*ತುಮಕೂರು*

23 ಏಪ್ರಿಲ್ 2020

ಜೀವಾತ್ಮಗಳ ವಿಕ್ರಯ (ಕಾದಂಬರಿಯ ವಿಮರ್ಶೆ)

ಪುಸ್ತಕ ವಿಮರ್ಶೆ

ಕಾದಂಬರಿ ಜೀವಾತ್ಮಗಳ ವಿಕ್ರಯ

"ಜೀವಾತ್ಮಗಳ ವಿಕ್ರಯ" ಕಾದಂಬರಿಯ ಹೆಸರೇ ನನ್ನ ಓದಲು ಪ್ರೇರೇಪಿಸಿತು. ಹೆಸರಾಂತ ಆಂಗ್ಲ ಕಾದಂಬರಿಕಾರರಾದ ಶ್ರೀ ವಿದ್ಯಾಧರ ದುರ್ಗೇಕರ್ ರವರ ಮೊದಲ ಕನ್ನಡ ಕಾದಂಬರಿ ಈ ಜೀವಾತ್ಮಗಳ ವಿಕ್ರಯ

ಅಭಿವೃದ್ಧಿ ಮತ್ತು ಪರಿಸರದ ವಿಷಯಗಳು ಬಂದಾಗ ಬಹಳ ಸಲ‌ ಅಭಿವೃದ್ಧಿಯ ಹೆಸರಿನಲ್ಲಿ ಮುಗ್ದ ಜನರ ಶೋಷಣೆ ಮತ್ತು ಪರಿಸರದ ಮೇಲಿನ ದೌರ್ಜನ್ಯವು ಗೆಲುವು ಸಾಧಿಸಿರುವುದನ್ನು ನಾವು ಕಾಣುತ್ತೇವೆ.
ಈ ಕಾದಂಬರಿ ಸಹ ಅದೇ ರೀತಿಯ ಕಥಾವಸ್ತು ಇಟ್ಟುಕೊಂಡು ವಿಭಿನ್ನವಾದ ನಿರೂಪಣೆಯೊಂದಿಗೆ ಓದುಗರ ಮನಸೆಳೆಯುತ್ತದೆ.

ಬಯಲು ಸೀಮೆಯ ನನಗೆ ಕರಾವಳಿಯ ಬದುಕು ಅಷ್ಟಾಗಿ ಪರಿಚಿತವಿರಲಿಲ್ಲ ಈ ಕಾದಂಬರಿಯ ಮೊದಲೆರಡು ಅದ್ಯಾಯ ಓದುವಾಗ ಕರಾವಳಿಯ ಚಿತ್ರಣ ನನ್ನ ಕಣ್ಣ ಮುಂದೆ ಹಾದು ಹೋಯಿತು.

ಪ್ರಸ್ತುತ ಕಾದಂಬರಿಯಲ್ಲಿ ಕಾದಂಬರಿಕಾರರು ಬೃಹತ್ ಕೈಗಾರಿಕಾ ಸ್ಥಾಪನೆಗೆ ಅಲಿಗದ್ದೆ ಸೇರಿದಂತೆ  ಮೂರು ಹಳ್ಳಿಗಳನ್ನು ವಶಪಡಿಸಿಕೊಳ್ಳಲು ರಾಜಕಾರಣಿಗಳಾದ ಕುಬೇರ, ಮತ್ತು ದಾಮು ಹೇಗೆ ಹೊಂಚು ಹಾಕಿ ಸಂಚು ಮಾಡುವರು. ಇದಕ್ಕೆ ‌ಯುವ ವಕೀಲೆ ರೋಶನಿ ಮತ್ತು ಕಾಲೇಜು ಅದ್ಯಾಪಕ ಅಮರ್ ಹೇಗೆ ಎಲ್ಲಾ ರೀತಿಯಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿ ಹಳ್ಳಿಯ ಜನರಿಗೆ ನ್ಯಾಯ ಕೊಡಿಸಲು ಬಹಳ ‌ಪ್ರಾಮಾಣಿಕ ಪ್ರಯತ್ನ ಮಾಡುವರು, ಆದರೆ ಭ್ರಷ್ಟಾಚಾರದ ವ್ಯವಸ್ಥೆ, ಅಪ್ರಮಾಣಿಕ ಪೊಲೀಸರು, ಅನಕ್ಷರಸ್ಥರು, ಚಟದಾಸರು ಈಗೆ ಹಲವಾರು ಜನರ ಷಡ್ಯಂತ್ರದಿಂದ ಹಳ್ಳಿಯ ಜನರು ಕೇವಲ ತಮ್ಮ ಜಮೀನನ್ನು ಬಿಟ್ಟು ಹೊರಡುವುದಿಲ್ಲ ತಮ್ಮ ಜೀವಾತ್ಮಗಳ ಮಾರಿಕೊಂಡು ನಿರ್ಜೀವವಾಗಿ ತಿಳಿಯದ ಜಾಗಕ್ಕೆ ಹೊರಡುವ ಜನರ ಕಂಡು ಕಾದಂಬರಿಯ ಕಡೆಯಲ್ಲಿ ನಮ್ಮ ಕಣ್ಣಲ್ಲಿ ಒಂದೆರಡು ಹನಿ ಜಿನುಗದಿರದು .

ಕುಬೇರ ಮತ್ತು ದಾಮುರಂತಹ ಗೋಮುಖ ವ್ಯಾಘ್ರರು ಹಳ್ಳಿಯ ಜನರನ್ನು ವಂಚಿಸುತ್ತಾ ಬಹುರಾಷ್ಟ್ರೀಯ ಕಂಪನಿಗೆ ಒಳಗೊಳಗೆ ಹೇಗೆ ಸಹಕರಿಸಿ ಸ್ವ ಕಲ್ಯಾಣ ಮಾಡಿಕೊಳ್ಳುವರು. ಹಾಗೂ ಹಳ್ಳಿಯಲ್ಲಿ ಅನೈತಿಕ ಚಟುವಟಿಕೆಗಳನ್ನು ಪ್ರೋತ್ಸಾಹ ನೀಡಿ  ಹೇಗೆ ಹಳ್ಳಿಯ ವಾತಾವರಣದಲ್ಲಿ ಕೆಟ್ಟ ಬದಲಾವಣೆ ತಂದರು ಎಂಬುದನ್ನು ಕಾದಂಬರಿಕಾರರು ಚೆನ್ನಾಗಿ ಬಿಂಬಿಸಿದ್ದಾರೆ  ಇಂದಿಗೂ ನಮ್ಮ ಸಮಾಜದಲ್ಲಿ ಇಂತವರು ಇರುವುದು ದುರದೃಷ್ಟಕರ.

ಹಳ್ಳಿಯಲ್ಲಿ ಧರ್ಮ ಸಮನ್ವಯತೆಯನ್ನು ಬಿಂಬಿಸುವಲ್ಲಿ ಕಾದಂಬರಿಕಾರರು ಉತ್ತಮವಾದ ಚಿತ್ರ ಕಟ್ಟಿಕೊಟ್ಟಿದ್ದಾರೆ, ಜೋನ್ , ಅಲೋಮ, ಪ್ರಾನ್ಸಿಸ್, ಮತ್ತು ಕಥಾನಾಯಕನ ನಡುವಿನ ಸಂಬಂಧ ,ಹಳ್ಳಿಯ ಜನರ ಅನ್ಯೋನ್ಯತೆ ಬಿಂಬಿಸಿದ್ದಾರೆ ಇದು ಇಂದಿನ ಸಮಾಜಕ್ಕೆ ಬೇಕಾದ ತುರ್ತು ಅಗತ್ಯ

ಗಂಭೀರವಾದ ವಿಷಯದ ಕುರಿತ ಕಾದಂಬರಿಯಲ್ಲಿ ಎರಡು ಮೂರು ಕಡೆ ಲೇಖಕರು ಓದುಗರಿಗೆ ಶೃಂಗಾರ ರಸದೌತಣ ನೀಡಿದ್ದಾರೆ.
ಯುವ ಜೋಡಿ ರೋಶನಿ ಮತ್ತು ಸಮರ್ ರೊಮ್ಯಾಂಟಿಕ್ ದೃಶ್ಯಗಳು ಓದುವಾಗ ಮೈಬಿಸಿಯಾಗುವುದು ಸುಳ್ಳಲ್ಲ .

ಒಟ್ಟಾರೆ ಹೇಳುವುದಾದರೆ ಈ ಕಾದಂಬರಿಯಲ್ಲಿ‌ ಅಲ್ಲಲ್ಲಿ ಕೆಲವು ಅನುವಾದ ದೋಷಗಳನ್ನು ಹೊರತುಪಡಿಸಿದರೆ ಚಿಂತನೆಗೆ ಹಚ್ಚುವ, ಸಮಾಜದ ಬಗ್ಗೆ ಕಾಳಜಿ ಇರುವ ,ಪರಿಸರ ಕಾಳಜಿ ಇರುವ ನಮ್ಮಲ್ಲಿ ಜಾಗೃತಿ ಮೂಡಿಸುವ ಒಂದು ಸುಂದರ ಕಾದಂಬರಿ ಎಂದು ಹೇಳಬಹುದು.
 ಇಂದು ವಿಶ್ವ ಪುಸ್ತಕ ದಿನ ಈ ದಿನದಂದು ನೀವು ಸಹ ಇಂತಹ ಕಾದಂಬರಿಯನ್ನು  ಓದಲು ಸಲಹೆ ನೀಡುವೆನು.
ವಂದನೆಗಳೊಂದಿಗೆ

ಸಿ ಜಿ ವೆಂಕಟೇಶ್ವರ
ತುಮಕೂರು

ಕಾದಂಬರಿ ಹೆಸರು: ಜೀವಾತ್ಮಗಳ ವಿಕ್ರಯ

ಕಾದಂಬರಿಕಾರರ ಹೆಸರು: ವಿದ್ಯಾಧರ ದುರ್ಗೇಕರ್.

ಪ್ರಕಾಶನ: ಅವಂತ ಗಾರ್ಡೆ ಪ್ರಕಾಶನ
ಬೆಂಗಳೂರು.

ಬೆಲೆ:೨೨೫

ಸಹೃದಯಿ (ವಿಶ್ವ ಪುಸ್ತಕ ದಿನದ ಹನಿ)

*ಸಹೃದಯಿ*

ಮುಂಗಾರು ಮಳೆಯನ್ನು
ಕಲ್ಪಿಸಿಕೊಳ್ಳುವನು
ಕವಿಯು ತನ್ನ ಮಸ್ತಕದಿ
ಸಹೃದಯಿ ಓದುಗ
ಮಳೆಯಲಿ ಮಿಂದು
ಪುಳಕಗೊಳ್ಳವ ಓದಿ ಪುಸ್ತಕದಿ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

(ಇಂದು ವಿಶ್ವ ಪುಸ್ತಕ ದಿನ)

22 ಏಪ್ರಿಲ್ 2020

ಸಹನೆ ಬೇಕು (ಭಾವಗೀತೆ)

*ಸಹನೆ ಬೇಕು*

(ಇಂದು ೨೧/೪/೨೦೨೦ ವಿಶ್ವ ಸೃಜನಶೀಲ ದಿನ)

ಕುಂಚವನಿಡಿದು ಬಣ್ಣಗಳ
ಚಿತ್ತಾರದಿಂದ ಚಿತ್ರ ಬಿಡಿಸಬೇಕು
ಆಹಾ ಎನ್ನುವ ಕಲಾಕೃತಿ
ರಚಿಸಲು ಕಲಾವಿದಗೆ ಸಹನೆ ಬೇಕು.

ಶೃತಿ ,ಲಯ, ಯತಿ ಗತಿ
ರಾಗ ತಾಳ ಗೊತ್ತಿರಬೇಕು
ಕಿವಿಗಿಂಪಾದ ಹಾಡು ಹಾಡಲು
ಸಂಗೀತಗಾರನಿಗೆ ಸಹನೆ ಬೇಕು.

ಮುದ್ರೆ, ಭಾವನೆ ತಾಣಗಳ
ಆಳವಾದ ಅಭ್ಯಾಸವಿರಬೇಕು
ಮನತಣಿಸುವ ನರ್ತನ ಮಾಡಲು
ನೃತ್ಯಗಾರ್ತಿಗೆ ಸಹನೆ ಬೇಕು

ಕಗ್ಗಲ್ಲನು  ಕಡೆದು ತಿದ್ದಿ ತೀಡಿ
ಮೂರುತಿ ಕೆತ್ತನೆ ಮಾಡಬೇಕು
ಕಣ್ಮನ ಸೆಳೆವ ಕಲಾಕೃತಿಗಳ
ರಚಿಸಲು ಶಿಲ್ಪಿಗೆ ಸಹನೆ ಬೇಕು.

*ಸಿ ಜಿ ವೆಂಕಟೇಶ್ವರ*
*ತುಮಕೂರು*





ಸಿಹಿಜೀವಿಯ ನಾಲ್ಕು ಶಾಯರಿಗಳು


*ಸಿಹಿಜೀವಿಯ ನಾಲ್ಕು ಶಾಯರಿಗಳು*

*ಶಾಯರಿ೧*


ಅವಳ ಮನೆ ಮುಂದೆ ನಿಂತು
ದಿನವೂ ಅವಳ ನೋಡುವುದೇ ವಿಸ್ಮಯ
ಅವರಮ್ಮ ಬಂದಳು ಬೈಯುತ
ಯಾವುದರಲ್ಲಿ  ಹೊಡೀ ಬೇಕು ನಿನ್ನ ಮನೆಕಾಯ.

*ಶಾಯಿರಿ೨*

ನೀನೆಷ್ಟು ಬೈದರೂ, ದೂರ ಸರಿದರೂ
ನನ್ನ ಹೃದಯದಲ್ಲಿ ಕಟ್ಟವೆ ನಿನಗೆ ಮಂದಿರ
ಪ್ರೀತಿಯಲಿ ನಾ ಸೋತರೂ ಚಿಂತೆಯಿಲ್ಲ
ಪ್ರೀತಿ ಮತ್ತು ಯುದ್ದದಲ್ಲಿ ಎಲ್ಲವೂಸುಂದರ.

*ಶಾಯರಿ ೩*

ಆ ಮುಂಗುರುಳ ನಾರಿ ಸಿಗದಿದ್ದರೆ
ನೇಣು ಹಾಕಿಕೊಳ್ಳಲು ಹುಡುಕಿದ ಹಗ್ಗ
ತಲೆ ಕಡಿಯುತ್ತಿದೆ ಎಂದು ಕೆರೆಯಲು
ಅವಳು ತೆಗೆದು ಬಿಟ್ಟಳು ವಿಗ್ಗ .

*ಶಾಯರಿ ೪*

ತಿಳಿದವರೆಂದರು
ಪ್ರೀತಿ ಮಾಯೆ ಹುಷಾರು
ಈಗ ನಾನಾಗಿರುವೆ ದೇವದಾಸ್
ಹುಡುಕುತಿಹೆನು ನನ್ನ ಪಾರು

*ಸಿ ಜಿ ವೆಂಕಟೇಶ್ವರ*
*ತುಮಕೂರು*