21 ಫೆಬ್ರವರಿ 2018

ನಮನ (ಕವನ)

*ನಮನ*

ಗೊಮ್ಮಟ ದೇವಗೆ ನಮನ
ಯುದ್ದವ ಗೆದ್ದವಗೆ  ನಮನ |ಪ|

ವೈರಾಗ್ಯ ಮೂರ್ತಿ ಹಬ್ಬಿದೆ
ಎಲ್ಲೆಡೆ ನಿನ್ನ ಕೀರುತಿ
ಭರತನ ಗೆದ್ದೆ ನೀನು
ಭಾರತದಾಚೆ ಬೆಳೆದೆ|೧|

ಕಾಮ ಕ್ರೋಧ ಮದಗಳ
ತ್ಯಜಿಸಿದ ನೀನು
ಅತಿಯಾಸೆ ಪಡುವವರಿಗೆ
ಮಾದರಿ ನೀನು|೨|

ಮನುಜನ ತೊರೆದು
ಬೆಟ್ಟದಿ ನೆಲೆಸಿದೆ
ಎಲ್ಲವ ತೊರೆದು
ಗೊಮ್ಮಟ ಮೂರುತಿಯಾದೆ|೩|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

20 ಫೆಬ್ರವರಿ 2018

ಬರಿಮೈ ಪೋರ (ಹನಿಗವನ)


*ಬರಿಮೈಪೋರ*

ಬಾಲನ ಲೀಲೆ ಸುಂದರ
ಬಾಗಿದ ನಮ್ಮ ಚಂದಿರ
ಮಿನುಗಿವೆ ತಾರೆಗಳು
ಸುರಿದಿವೆ ಪುಷ್ಪಗಳು
ಆಟಿಕೆ ಗೊಂಬೆ ಬೇಕಿಲ್ಲ
ಮೋಡಗಳಿವೆ ನೋಡ ಲ್ಲಿ
ಬರಿಮೈ ಪೋರ ನಾನು
ಬೇಗನೆ ಬಾ ನೀನು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 ಫೆಬ್ರವರಿ 2018

ಮಾರಿಹಬ್ಬ (ಕವನ)



*ಮಾರಿ ಹಬ್ಬ*


ಬರುತಲಿದೆ‌ ನಮ್ಮ ‌ಹಬ್ಬ
ಪ್ರಜಾಪ್ರಭುತ್ವದ ಹಬ್ಬ
ಸರ್ಕಾರ ರಚಿಸುವ ಹಬ್ಬ
ಚುನಾವಣಾ ಮಹಾಹಬ್ಬ

ಬರುವ ಚುನಾವಣೆ ಯುಗಾದಿ
ಇದರಲಿ ನಮಗೆ ಬೆಲ್ಲ ಹೆಚ್ಚಿರಲಿ
ಬೇವು ಕಡಿಮೆಯಿರಲಿ
ಅಂತವರ ಆಯ್ಕೆ ನಮ್ಮದಾಗಲಿ

ಬರುವ ಚುನಾವಣೆ ದೀಪಾವಳಿ
ಕತ್ತಲಿನಿಂದ ನಾವು ಮುಕ್ತವಾಗೋಣ
ಮತಿದೀವೀಗೆ ಬೆಳಗಿಸಿಕೊಳ್ಳೋಣ
ಯೋಗ್ಯರ ಆಯ್ಕೆ ಮಾಡೋಣ

ಮುಂದಿನ ಚುನಾವಣೆ ಹೋಳಿ
ಬಣ್ಣ ಬಣ್ಣದ ಕನಸ ಹೊಂದೋಣ
ಅದಕ್ಕೊಂದುವ ನಾಯಕರ ಆರಿಸೋಣ
ನಮ್ಮ ಬಣ್ಣದ ಬದುಕ ಕಟ್ಟೋಣ

ಮುಂಬರುವ ಚುನಾವಣೆ
ಸತ್ ನಾಯಕರಿಗೆ ಹಬ್ಬ
ಕೆಟ್ಟ ನಾಯಕರಿಗೆ ಆಗಲಿದೆ
ಮುಂದೈತೆ ಮಾರಿಹಬ್ಬ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

18 ಫೆಬ್ರವರಿ 2018

ಯಾವಾಗ (ಕವನ)

*ಯಾವಾಗ*

ಅವಳೊಬ್ಬಳು ಮುಚ್ಚಿದಳು
ಒಂದು ಕಣ್ಣು
ಮಾದ್ಯಮ ದಲ್ಲಿ
ಅದೇ ಸುದ್ದಿ

ಲಕ್ಷಾಂತರ ಮಂದಿ ಬಾಳುತ್ತಿದ್ದಾರೆ
ಎರಡೂ ಕಣ್ಣು ಮುಚ್ಚಿ
ಮಾದ್ಯಮದವರಿಗೆ ಕಾಣಲೇ ಇಲ್ಲ
ಅದೇ ಅವರ ಬುದ್ದಿ

ಯುದ್ಧಗಳಲ್ಲಿ ಯೋಧರು
ಶಾಶ್ವತವಾಗಿ ಮುಚ್ಚುತ್ತಿದ್ದಾರೆ
ತಮ್ಮ ಕಣ್ಣುಗಳ
ಎಲ್ಲೂ ಇಲ್ಲ ಅದರ ಸದ್ದು

ಮನರಂಜನೆಯೇ ಇವರ
ಪ್ರಥಮ ಪ್ರಾಶಸ್ತ್ಯ
ಮಾನವೀಯತೆ
ಕೆಲವರಿಗೆ ಮಾತ್ರ ಸ್ವಂತ


ಟಿ ಆರ್ ಪಿ ಲೈಕುಗಳಿಂದ
ಹೊರಬರುವುದು ಯಾವಾಗ
ಮನರಂಜನೆಗಿಂತ  ಮಾನವತೆಗೆ
ಬೆಲೆಕೊಡುವುದು ಯಾವಾಗ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೨೬ (ಗೊತ್ತಿರಲಿಲ್ಲ)ಕವಿಬಳಗ ವಾಟ್ಸಪ್ ಗುಂಪಿನ ಗಜ಼ಲ್ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಗಜ಼ಲ್

*ಗಜ಼ಲ್ ೨೬*

ಮಂದಹಾಸ ಮುಖವಾಡದಿ ಕಾರ್ಕೋಟಕ ವಿಷವಿರುವುದು ಗೊತ್ತಿರಲಿಲ್ಲ
ತಿಳಿಗೊಳದ ಆಳದಲಿ ಬಗ್ಗಡದ ಕೆಸರಿರುವುದು ಗೊತ್ತಿರಲಿಲ್ಲ

ಕೈಕುಲಕುವ ಹಸ್ತವು  ಬಗಲಲ್ಲಿಟ್ಟುಕೊಂಡಿದೆ ಬಾಕು
ಒಲವ ನಗೆ ಬರೀ ಹಲ್ಲಿನಿಂದ ಬಂದಿರುವುದು ಗೊತ್ತಿರಲಿಲ್ಲ

ಆಡಂಬರ,ಸ್ವಾರ್ಥ,ತೋರ್ಪಡಿಕೆಯ ಪೂಜೆ ಪುರಸ್ಕಾರಗಳು
ದಿಟದ ಜನಾರ್ದನ ಸೇವೆಯ ಮರೆಯವರೆಂಬುದು ಗೊತ್ತಿರಲಿಲ್ಲ

ನೀರು ,ಜಲ,ನೆಲ ಗಾಳಿ ಮಣ್ಣಿನ  ಬಗ್ಗೆ ಭಾಷಣದ ಪ್ರವರ
ಕಾಸಿಗಾಗಿ ಭೂತಾಯಿಯ ಮಾರಿ ಕೊಳ್ಳವರೆಂದು ಗೊತ್ತಿರಲಿಲ್ಲ


ಸೀಜೀವಿಗೆ ಸರ್ವೇ ಜನಾಃ ಸುಖಿನೋಭವಂತು ಆಸೆ
ಸ್ವಾರ್ಥಿಗಳ ಕೂಟಗಳು ಜಗವ ಕೆಡಿಸುವರೆಂದು ಗೊತ್ತಿರಲಿಲ್ಲ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*