25 ಡಿಸೆಂಬರ್ 2017

ಹನಿಗವನ

*ಆಶಯ*

ನಿಲ್ಲಮ್ಮ ಮುಳ್ಳು ಕೀಳುವೆನು
ನಿನ್ನ   ನೋವ  ನೀಗುವೆನು
ಹೊತ್ತಿರುವೆ ಸಂಸಾರದ ನೊಗ
ಇಳಿಸುವೆ ಭಾರ ನಾ ನಿನ್ನ ಮಗ
ಬೆಳೆಸುವೆ ನನ್ನ ಮುದ್ದು  ತಂಗಿಯ
ಹಂಚುವೆ ನಮ್ಮವರಿಗೆ ಪ್ರೀತಿಯ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

23 ಡಿಸೆಂಬರ್ 2017

ಅನ್ನದಾತಗೆ ನಮಿಸೋಣ (ರೈತ ದಿನಾಚರಣೆಯ ಪ್ರಯುಕ್ತ ಕವನ)

*ಅನ್ನದಾತಗೆ ನಮಿಸೋಣ*

ಇವನೆ ನೋಡು ನಮ್ಮ ರೈತ ಅನ್ನ ನೀಡ್ವನು
ಬಿಸಿಲು ಮಳೆ ಲೆಕ್ಕಿಸದೆ ಹೊಲದಿ ದುಡಿವನು
ಹಿಗ್ಗದೇ ಜಗ್ಗದೇ ಮುಂದೆ ನುಗ್ಗಿ   ನಡೆವನು
ಯೋಗಿಯಾಗಿ ತ್ಯಾಗಿಯಾಗಿ ಬಾಳುತಿರುವನು

ಅವನ ಬೆಳೆಗೆ ಬೆಲೆಯು ಇಲ್ಲ ಸಾಲದಲಿರುವನು
ಮಧ್ಯವರ್ತಿ ಶೋಷಣೆ ಯಲಿ ನಲುಗುತಿರುವನು
ಅಂತರ್ಜಲ ಕಡಿಮೆಯಾಗಿ‌ ಕೊರಗುತಿರುವನು
ಎಲ್ಲರ ಸೇವೆಗೈದು ನರಳಿ  ಬಳಲುತಿರುವನು

ಒಳ್ಳೆಯ ಬೆಲೆ ಅವನ  ಬೆಳೆಗೆ ನಾವು ನೀಡೋಣ
ಗೌರವದಿ  ನಮಿಸಿ ಜೈ ಕಿಸಾನ್ ಎಂದು ಹೇಳೊಣ
ಕೃಷಿಯ ದೇಶದ ಬೆನ್ನೆಲುಬೆಂದು ಸಾರೋಣ
ನಮ್ಮ ರೈತ ನಮ್ಮ ಗೆಳೆಯ ಇವಗೆ ನಮಿಸೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 ಡಿಸೆಂಬರ್ 2017

ಗಜ಼ಲ್ ೧೮ (ಯಾರಿಗೇಳಲಿ? ವಿಜಯಪುರ ಬಾಲಕಿ ಮೇಲಿನ ದೌರ್ಜನ್ಯ ದಿಂದ ಮನನೊಂದು ಬರೆದ ಗಜ಼ಲ್)

*ಗಜ಼ಲ್ ೧೮*

ದೇವಿ ನೆಲೆಸಿದ ನಾಡಲಿ ದಾನವರು ಮೆರೆಯುತಿರೆ ಯಾರಿಗೇಳಲಿ?
ದುಷ್ಟಶಕ್ತಿಗಳು ಅಟ್ಟಹಾಸದಿ ಪಟ್ಟವೇರುತಿರೆ  ಯಾರಿಗೇಳಲಿ?

ಆದಿಶಕ್ತಿ ಕ್ಷಮಯಾಧರಿತ್ರಿಯೆಂದು ಪೂಜಿಸುವರು
ನಿರ್ಧಯದಿ ಕಟುಕರಂತೆ ಎರಗಿ ಕೊಲ್ಲುತಿರೆ  ಯಾರಿಗೇಳಲಿ?

ಕಾನೂನು ಕಟ್ಟಳೆಗಳ ನ್ಯಾಯದ ಬಲ ನಾರಿಗಿರುವುದು
ನರಿಬುದ್ದಿಯ ನರರು ಅನಾಚಾರಗಳೆಸಗುತಿರೆ ಯಾರಿಗೇಳಲಿ?

ರಾಮ ಕೃಷ್ಣ, ಬಸವ ಬುಧ್ಧರ ಕಂಡ  ನಾಡು ನಮ್ಮದು
ಕೀಚಕ ಕಂಸರದಂಡು ಅಟ್ಟಹಾಸ ಮೆರೆಯುತಿರೆ ಯಾರಿಗೇಳಲಿ?

ಸೀಜೀವಿಯ ಮನ ನಾರಿಯ ಪೂಜಿಸು ಎಂದಿತು
ಕಡುಪಾಪಿಗಳು ದುಷ್ಟಕಾರ್ಯದಿ ಮುಳುಗಿರೆ ಯಾರಿಗೇಳಲಿ?

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

21 ಡಿಸೆಂಬರ್ 2017

ಗಜ಼ಲ್ ೧೭ (ಏಕೆ?)

*ಗಜ಼ಲ್೧೭*

ಅವಿನಾಭಾವ ಸಂಬಂಧದಿ ಬಳಿಸಾರಿದೆ ಏಕೆ ?
ಕರುಳುಹಿಂಡಿ ನಿರ್ಧಯದಿ ನನ್ನ ತೊರೆದೆ ಏಕೆ?


ಸಂಗೀತ ಸರಸ್ವತಿಯಾಗಿ ನನ್ನ ಬಾಳಲ್ಲಿ ಬಂದೆ
ಅಪಸ್ವರಗಳ ನುಡಿಸಿ ಗದ್ದಲವೆಬ್ಬಿಸಿದೆ ಏಕೆ?

ನಟರಾಜನ ತಕಿಟ ತದಿಮಿ ತಾಳದಿ ನರ್ತಿಸಿದೆ
ಎದೆಯ ಮೇಲೆ ದೊಂಬರಾಟವಾಡಿದೆ ಏಕೆ?

ತಂಗಾಳಿಯಂತೆ ನನ್ನ ಬಾಳಲಿ ಬಂದು ಮುದಗೊಳಿಸಿದೆ
ಬಿರುಗಾಳಿಯೆಬ್ಬಿಸಿ ಎದೆಗೆ ಬೆಂಕಿ ಹಚ್ಚಿದೆ ಏಕೆ?

ಸೀಜೀವಿಯ ಬದುಕಲಿ ಮಕರಂದ ತಂದಿಟ್ಟೆ ನೀನು
ಸವಿಯುವ ಮುನ್ನ ಮಣ್ಣು ಪಾಲು ಮಾಡಿದೆ ಏಕೆ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ಮತಯಂತ್ರ.ಮಹಾದಾಯಿ)

*ಹನಿಗವನ*

*೧*
*ಮಹಾ ತಾಯಿ*

ಸಾವಿರಾರು ಪ್ರತಿಭಟನೆಗಳು
ನೂರಾರು ಮನವಿಗಳಿಗೆ
ನೆನಪಿಗೆ ಬರಲಿಲ್ಲ
ನಮ್ಮ ಮಹಾದಾಯಿ
ಈಗ ಎಲ್ಲರಿಗೆ ನೆನಪಾಗಿದ್ದಾಳೆ
ಕಾರಣ ಚುನಾವಣೆ
ಎಂಬ ಮಹಾತಾಯಿ

*೨*

*ದೇವರು*

ಚುನಾವಣೆಯಲ್ಲಿ ಪದೇ ಪದೇ
ಬೇರೆ ಪಕ್ಷಗಳು ಗೆದ್ದರೆ ಸರಿಇಲ್ಲ
ಮತಯಂತ್ರಗಳು
ನಾವು ಗೆದ್ದರೆ ಮತಯಂತ್ರಗಳೇ
ನಮ್ಮ ಪಾಲಿನ
ದೇವಾನುದೇವತೆಗಳು


*ಸಿ.ಜಿ.ವೆಂಕಟೇಶ್ವರ*
 *ಗೌರಿಬಿದನೂರು*