26 ಫೆಬ್ರವರಿ 2026

ಪೋಷಕರೇ ದಯವಿಟ್ಟು ಗಮನಿಸಿ...


 ಪೋಷಕರೇ ದಯವಿಟ್ಟು ಗಮನಿಸಿ...



ಇತ್ತೀಚಿಗೆ ಹತ್ತನೇ  ಓದುವ ಮಗುವಿನ   ಪೋಷಕರ ಮನೆಗೆ ಭೇಟಿ ನೀಡಿದಾಗ ತಂದೆಯು   ಅವರ ಮಗನ ಬಗ್ಗೆ ಮಾತನಾಡುತ್ತಾ ದಿನವೂ ಮಗ ಹಣ ಕೇಳುತ್ತಾನೆ.ಬೈಕ್ ಕೊಡಿಸು ಎನ್ನುತ್ತಾನೆ.ಮೊಬೈಲ್ ನಲ್ಲಿ ಸದಾ ಮುಳುಗಿರುತ್ತಾನೆ ಎಂಬ ದೂರುಗಳನ್ನು ನೀಡುತ್ತಾ ನೀವಾದರೂ ಬುದ್ದಿ ಹೇಳಿ ಸರ್ ನಮ್ಮ ಮಾತುಗಳನ್ನು ಕೇಳೊಲ್ಲ.ನಮ್ಮ ಎದುರಿಗೆ ಮಾತನಾಡುತ್ತಾನೆ ಎಂದು ಕಂಪ್ಲೇಂಟ್ ಲಿಸ್ಟ್ ನೀಡಿದರು.ಹೌದು ನಾನು ಇತ್ತೀಚಿನ ದಿನಗಳಲ್ಲಿ ಬಹುತೇಕ ಪೋಷಕರ ಕಡೆಯಿಂದ ಅವರ ಮಕ್ಕಳ ‌ಬಗ್ಗೆ ಹೆಚ್ಚು ಕಡಿಮೆ ಇಂತವೇ ದೂರುಗಳನ್ನು ಸ್ವೀಕರಿಸುವುದು ಮಾಮೂಲಾಗಿದೆ.ನಿಮಗೂ ಈ ಅನುಭವವಾಗಿರಬಹುದು.

ಹತ್ತನೇ ತರಗತಿಯವರೆಗೆ ಶಾಲೆಗಳಲ್ಲಿ ಬೆಳಗಿನ ಅವಧಿಯಲ್ಲಿ ರಾಗಿ ಮಾಲ್ಟ್, ಮಧ್ಯಾಹ್ನ ಮೊಟ್ಟೆ ಬಾಳೆ ಹಣ್ಣಿನ ಜೊತೆಯಲ್ಲಿ ಬಿಸಿಯೂಟ ಹಾಗೂ ಕೆಲವೆಡೆ ಸಂಜೆಯೂ ವಿವಿಧ ಕಾಳುಗಳ ಸ್ನಾಕ್ಸ್ ನೀಡುತ್ತಾರೆ. ಮತ್ತೇಕೆ ಮಕ್ಕಳಿಗೆ ‌ಹಣ? ಆದರೂ ಕೆಲ ಪೋಷಕರು ಮಕ್ಕಳಿಗೆ ಅವರು ಕೇಳದಿದ್ದರೂ ಅಗತ್ಯ ಇಲ್ಲದಿದ್ದರೂ ಹಣ ನೀಡುವುದು ಕಂಡುಬರುತ್ತದೆ.
ಮಕ್ಕಳಿಗೆ ಪೋಷಕರಾದ ನಾವು ಬಾಲ್ಯದಲ್ಲೇ ಆರ್ಥಿಕ ಸಾಕ್ಷರತೆಯ ಪಾಠ ಹೇಳಿಕೊಡಬೇಕಿದೆ. ಆದರೆ   ಬಹುತೇಕ ಪೋಷಕರು ತಮ್ಮ ಬಾಲ್ಯದ ಅನುಭವದ ಆಧಾರದ ಮೇಲೆ ನಮಗೆ ಇದ್ದ ಕಷ್ಟ ನಮ್ಮ ಮಕ್ಕಳಿಗೆ ‌ಇಲ್ಲ ಆದ್ದರಿಂದ ಹಣ ಕೊಡುವೆ ಎಂದು ಅನವಶ್ಯಕವಾಗಿ ಹಣ ನೀಡಿ ದುಂದುವೆಚ್ಚಮಾಡಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ಇನ್ನೂ ಕೆಲ ಪೋಷಕರು ನಾನು ಚಿಕ್ಕವನಿದ್ದಾಗ ನನಗೆ ಸೈಕಲ್ ಗತಿ ಇರಲಿಲ್ಲ ನನ್ನ ಮಗ ಬೈಕ್ ಓಡಿಸಲಿ ಎಂದು‌ ಎಂಟು ಒಂಭತ್ತು ಓದುವ ಮಕ್ಕಳಿಗೆ  ಬೈಕ್ ನೀಡುವರು ಹತ್ತಕ್ಕೆ ಬಂದಾಗ  ಮಗು ಬೇರೆ ಬ್ರಾಂಡ್ ಬೈಕ್ ಗೆ ಡಿಮಾಂಡ್ ಮಾಡದೇ ಮತ್ತೆನು ಮಾಡಿಯಾನೂ? ಇನ್ನೂ ಮೊಬೈಲ್ ಕಥೆ ಹೇಳುವುದೇ ಬೇಡ ವರ್ಷದ ಮಗುವಿನ ಕೈಗೆ ಮೊಬೈಲ್ ನೀಡಿ ಊಟ ಮಾಡಿಸುವ ಎಷ್ಟೋ ಪೋಷಕರಿದ್ದರೆ.ಇನ್ನೂ ಕೆಲ ಪೋಷಕರು ತಮ್ಮ ಮಕ್ಕಳ ಮೊಬೈಲ್ ಗೀಳನ್ನು ಬೇರೆಯವರ ಬಳಿ ಪಾಸಿಟೀವ್ ಆಗಿ ನನಗೇ ಮೊಬೈಲ್ ಬಳಸಲು ಬರಲ್ಲ ನನ್ನ ಮಗ ನೋಡಿ ಎಷ್ಟು ಚೆನ್ನಾಗಿ ಬಳಸ್ತಾನೆ ಎಂದು ಕೊಚ್ಚಿಕೊಳ್ಳುತ್ತಾರೆ.
ಇಷ್ಟೆಲ್ಲಾ ಆದ ಮೇಲೆ ಊರು ಹಾಳಾದ ಮೇಲೆ‌ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಶಿಕ್ಷಕರು ಮಕ್ಕಳ ತಿದ್ದಲಿ ಎಂದು ಅಲವತ್ತುಕೊಂಡರೆ ಏನು ಉಪಯೋಗ.

ಇದಕ್ಕೆ ಪರಿಹಾರ ಪೋಷಕರ ನಡೆಗಳಲ್ಲೇ ಇದೆ.
ಮೊದಲು ‌ಪೋಷಕರು ಮೊಬೈಲ್ ಬಳಕೆ ಕಡಿಮೆ ಮಾಡಲಿ. ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡುವುದನ್ನು ನಿಲ್ಲಿಸಲಿ  ಮಕ್ಕಳಿಗೆ ಹಣದ ಬೆಲೆ ತಿಳಿಸಿಕೊಡಬೇಕು‌
ಅದಕ್ಕೆ ‌ಈ‌ ಕೆಳಗಿನ ಸರಳ ಸಲಹೆ ಪಾಲಿಸಿದರೆ ಒಳಿತು.

ದಿನವೂ ಎಷ್ಟು ಖರ್ಚು ಮಾಡಿದ್ದೀರಿ ಎಂದು ಬರೆಯಲು ನಿಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಿ.ತಿಂಗಳ ಅಂತ್ಯದಲ್ಲಿ ವಿಶ್ಲೇಷಿಸಿ.ಅನಗತ್ಯ ಖರ್ಚುಗಳು ಯಾವವು? ಎಂಬುದರ ಕಡೆ ಗಮನ ಸೆಳೆದು ಮುಂದಿನ ದಿನಗಳಲ್ಲಿ ಅವುಗಳನ್ನು ನಿಯಂತ್ರಿಸಲು‌ ತಿಳಿಸಿ.
ಉಳಿಸಿದ ಒಂದು ರೂಪಾಯಿ ಗಳಿಸಿದ ರೂಪಾಯಿಗೆ ಸಮ ಎಂಬ ಪಾಠವನ್ನು ಹೇಳಿ   ವಾರಕ್ಕೆ ಎಷ್ಟು ಸಾಧ್ಯವೋ ಅಷ್ಟು ಉಳಿತಾಯ ಮಾಡಲು ಪ್ರೋತ್ಸಾಹ ಮಾಡಿ. ಇದಕ್ಕೆ ಪಿಗ್ಗಿ ಬ್ಯಾಂಕ್ ‌ಅಥವಾ ಬ್ಯಾಂಕ್ ಗಳಲ್ಲಿ ಜಾಯಿಂಟ್ ಸೇವಿಂಗ್ಸ್ ಅಕೌಂಟ್ ಓಪನ್ ಮಾಡಿ‌ಕೊಡಿ. ಬಹುತೇಕ ಶಾಲೆಗಳಲ್ಲಿ ಬಿಸಿಯೂಟ ಹಾಲು ನೀಡಲಾಗುತ್ತದೆ. ಕಾಲೇಜಿನ ಮಕ್ಕಳು
ಕಾಲೇಜ್ ಕ್ಯಾಂಟೀನ್  ನಲ್ಲಿ ಅನವಶ್ಯಕ ತಿನ್ನುವುದು ಹಾಗೂ  ಫಾಸ್ಟ್ ಫುಡ್ ಮೇಲೆ ವಿಪರೀತ ಖರ್ಚು ಮಾಡುವುದನ್ನು  ನಿಯಂತ್ರಿಸಿ.ಮನೆ ಊಟ ತೆಗೆದುಕೊಂಡು ಹೋಗುವುದು ಉತ್ತಮ ಆಯ್ಕೆ ಎಂಬುದನ್ನು ಮನದಟ್ಟು ಮಾಡಿಕೊಡಿ.ಮಕ್ಕಳ ಕೈಗೆ ಫೋನ್ ಕೊಟ್ಟಾಗ  ಆಫರ್  ನೋಡಿ ಖರೀದಿ ಮಾಡದಂತೆ ಮಕ್ಕಳಿಗೆ ಮನವರಿಕೆ ಮಾಡಿಕೊಡಿ  ಅಗತ್ಯವೇ ಎಂದು ಕೇಳಿಕೊಳ್ಳಿ. ತೀರ ಅಗತ್ಯವಾಗಿ ಬೇಕಾದ ವಿಶ್ ಲಿಸ್ಟ್  ಮಾಡಿ 48 ಗಂಟೆ ನಂತರ ಖರೀದಿ ನಿಯಮ ಅನುಸರಿಸಿ.ಏಕೆಂದರೆ ಕೆಲವೊಂದು ವಸ್ತುಗಳು ಮೊದಲು ಬೇಕಿನಿಸಿ ನಿಧಾನವಾಗಿ ಯೋಚಿಸಿದಾಗ ಆ ವಸ್ತು ಅನಗತ್ಯ ಎನಿಸಬಹುದು.
ಮಕ್ಕಳಿಗೆ ಬೈಕ್ ಕೊಡಿಸುವ ಬದಲಿಗೆ ಸೈಕಲ್ ‌ಕೊಡಿಸಿ.  ಅಗತ್ಯವಿದ್ದರೆ ಬಸ್ ಪಾಸ್ ಅಥವಾ ಸ್ಟೂಡೆಂಟ್ ಪಾಸ್ ಬಳಸಲು  ಬಳಸಲು ಪ್ರೇರೇಪಿಸಿ.

ಒಟ್ಟಾರೆ ಯುವ ಜನಾಂಗಕ್ಕೆ ಆಗಾಗ್ಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುವ ಮೂಲಕ ದುಂದುವೆಚ್ಚ ಕಡಿಮೆ ಮಾಡಬಹುದು. ಮನೆಯಲ್ಲಿ ಮಕ್ಕಳ ಮೊಬೈಲ್ ಬಳಕೆ ಕಡಿಮೆ ಮಾಡಿ ಸ್ಕ್ರೀನ್ ಟೈಮ್ ಕಡಿಮೆ ಮಾಡಬೇಕಿದೆ.ಈ ನಿಟ್ಟಿನಲ್ಲಿ ಹಲ ದೇಶಗಳಲ್ಲಿ ಹದಿಹರೆಯದ ಮಕ್ಕಳಿಗೆ ಮನನ ಮೊಬೈಲ್ ಬಳಕೆಗೆ ಕೆಲ ನಿರ್ಬಂಧಗಳನ್ನು ಹೇರಿರುವುದು ಸ್ವಾಗತಾರ್ಹ.ನಮ್ಮ ರಾಜ್ಯದಲದಲ್ಲೂ ಇಂತಹ ಚಿಂತನೆ ಶುರವಾಗಿರುವುದು ಸ್ವಾಗತಾರ್ಹ.ನಮ್ಮ ಮಕ್ಕಳು ಮುಂದಿನ ಜವಾಬ್ದಾರಿಯುತ ಪ್ರಜೆಗಳಾಗಲು ಸಂಸ್ಕಾರವಂತರಾಗಲು ಪೋಷಕರ ಪಾತ್ರ ಬಹಳ ಮುಖ್ಯ ನಾವು ಜವಾಬ್ದಾರಿಯುತ ಪೋಷಕರಾಗೋಣ.ಇದಕ್ಕೆ ಸಮಾಜ ಮತ್ತು ಸರ್ವರ ಸಕಾಲಿಕ ಬೆಂಬಲವೂ ಅಗತ್ಯ.

ಸಿಹಿಜೀವಿ ವೆಂಕಟೇಶ್ವರ
ಸಾಹಿತಿಗಳು ಹಾಗೂ ಶಿಕ್ಷಕರು
ತುಮಕೂರು
9900025529

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ