04 ಮೇ 2026

ಬಹುಮುಖ ಪ್ರತಿಭೆಯ ಕಲಾವಿದ‌ ಬಿ‌ ಎಸ್ ದೇಸಾಯಿ

 


ಬಹುಮುಖ ಪ್ರತಿಭೆಯ ಕಲಾವಿದ‌ ಬಿ‌ ಎಸ್ ದೇಸಾಯಿ




ನಮ್ಮ ನಾಡಿನ ಹಿರಿಯ ಕಲಾವಿದರು ಹಾಗೂ ಛಾಯಾಚಿತ್ರಗಾರರು ಆದ   ಬಿ ಎಸ್ ದೇಸಾಯಿ ರವರಿಗೆ   ಇತ್ತೀಚಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕಾರ ಹುಡುಕಿಕೊಂಡು ಬಂದಿದೆ.
ಸರಳ ಸಜ್ಜನ ಮೃದು ಭಾಷಿ  ಬಿ.ಎಸ್. ದೇಸಾಯಿಯವರು ಪ್ರಸ್ತುತ ಹಾಸನದಲ್ಲಿ ನೆಲೆಸಿರುವ ಸಮಕಾಲೀನ ದೃಶ್ಯ ಕಲಾವಿದ. ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆಯವರಾದ ಇವರು  ಚಿತ್ರಕಲೆಯ ಮೂಲಕ ತಮ್ಮ ಬದುಕಿನ ಅರ್ಥವನ್ನು ಕಂಡುಕೊಂಡಿದ್ದಾರೆ.  ಇವರ ಕಲಾ ಪಯಣವು ಪ್ರಕೃತಿಯ ಸೂಕ್ಷ್ಮ ಸಂವೇದನೆಗಳನ್ನು ವೈಯಕ್ತಿಕ ಹಾಗೂ ಸಾರ್ವತ್ರಿಕ ಭಾಷೆಯಾಗಿ ಬಣ್ಣಗಳು ಮತ್ತು ರೂಪಗಳ ಮೂಲಕ ಭಾಷಾಂತರಿಸುವ ದಾಖಲಾಗಿದೆ.

ಇವರ  ಚಿತ್ರಕಲೆಗೆ ಪ್ರಕೃತಿಯೇ (Nature) ಮೂಲ ಸ್ಫೂರ್ತಿ ಮತ್ತು ಕ್ಯಾನ್ವಾಸ್  ಭಾವನೆಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಿದೆ.  ಹೆಚ್ಚಾಗಿ ಜಲವರ್ಣ (Watercolors) ಮತ್ತು ಪಾರದರ್ಶಕ ಮಾಧ್ಯಮವನ್ನು (Transparent media) ಬಳಸಿ ಚಿತ್ರಗಳನ್ನು ರಚಿಸಲು ಇಷ್ಟಪಡುವ ದೇಸಾಯಿಯವರು ಕೇವಲ ಪ್ರಕೃತಿಯನ್ನು ಯಥಾವತ್ತಾಗಿ ನಕಲು ಮಾಡುವುದಕ್ಕಿಂತ ಅದರ ಆತ್ಮವನ್ನು, ಶಾಂತಿಯನ್ನು  ಚಿತ್ರಗಳಲ್ಲಿ ತರಲು  ಸದಾ ಪ್ರಯತ್ನಿಸುತ್ತಾರೆ. ಇವರ  ವರ್ಣಚಿತ್ರಗಳು ಅಮೂರ್ತ (abstract) ರೂಪಗಳನ್ನು ಹೊಂದಿದ್ದು ಪ್ರಕೃತಿಯಲ್ಲಿನ ಬೆಳಕು, ದೂರದ ದೃಶ್ಯಗಳು, ಮರಗಳು ಮತ್ತು ನೈಸರ್ಗಿಕ ಸೌಂದರ್ಯದ ಆಳವಾದ ಭಾವನೆಗಳನ್ನು ಸೆರೆಹಿಡಿಯುತ್ತವೆ.
ಇವರ ಕಲಾ ಜೀವನದಲ್ಲಿ  ಅಪಾರ ಮೆಚ್ಚುಗೆ ತಂದುಕೊಟ್ಟ ಸರಣಿಯೆಂದರೆ 'ಯೋಗದರ್ಶನ' (Yogadarshana). ಇದು ಸಾಂಪ್ರದಾಯಿಕ ಭಾರತೀಯ ತತ್ವಶಾಸ್ತ್ರ ಮತ್ತು ಆಧುನಿಕ ದೃಶ್ಯ ಭಾಷೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಒಂದು ವಿಶಿಷ್ಟ ಪ್ರಯತ್ನವಾಗಿದೆ. ಯೋಗ, ಧ್ಯಾನ ಮತ್ತು ಪ್ರಕೃತಿಯೊಡನೆ ಒಂದಾಗುವ ಪ್ರಕ್ರಿಯೆ  ಕಲೆಯ ಅವಿಭಾಜ್ಯ ಅಂಗ. ಉದಾಹರಣೆಗೆ, ನೀರಿನ ಮೇಲೆ ಪದ್ಮಾಸನ ಹಾಕಿ ಧ್ಯಾನಿಸುವ ಮತ್ತು ಪ್ರಕೃತಿಯೊಂದಿಗೆ ತೇಲುವಂತಹ ಅನುಭವಗಳನ್ನು  ತಮ್ಮ ಕೃತಿಗಳಲ್ಲಿ ಅಳವಡಿಸಿಕೊಂಡಿದ್ದಾರೆ.







ಜಲವರ್ಣದ ಪಾರದರ್ಶಕ ಬಣ್ಣಗಳನ್ನು ಬಳಸಿ ಸೃಷ್ಠಿಸಿರುವ ಚಿತ್ರಗಳು ಹಾಗೂ ತೈಲವರ್ಣದ ಸುಮಾರು 650 ಕ್ಕೂ ಹೆಚ್ಚು ಕಲಾಕೃತಿಗಳು ಇವರ ಕಲಾಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಉತ್ತಮ ಛಾಯಾಗ್ರಾಹಕರಾಗಿರುವ ದೇಸಾಯಿಯವರು ತಾವು ಭೇಟಿ ನೀಡಿದ್ದ ಜರ್ಮನಿ, ಹಾಲೆಂಡ್, ಬೆಲ್ಜಿಯಂ, ಪ್ಯಾರಿಸ್, ಸ್ವಿಜ್ಜರ್‍ಲ್ಯಾಂಡ್,  ಆಸ್ಟ್ರೀಯಾ  ಮುಂತಾದ  ದೇಶಗಳ ಅದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿದ್ದಾರೆ.
ಕೆಲವು ಚಿತ್ರಕಲಾ ಪ್ರದರ್ಶನ ಮತ್ತು ಕಾರ್ಯಗಾರದಲ್ಲಿ ಭಾಗವಹಿಸಿ ಪಡೆದ ಅನುಭವದೊಂದಿಗೆ  ಬೆಂಗಳೂರು, ಮಂಗಳೂರು, ಚೆನ್ನೈ, ಹೈದರಾಬಾದ್, ಪಾಂಡಿಚೆರಿ, ಮುಂಬೈ,ವಾರಣಾಸಿ  ಹಾಗೂ ದೆಹಲಿ  ಮುಂತಾದ ಕಡೆಗಳಲ್ಲಿ ತಮ್ಮ ಚಿತ್ರಕಲೆಯನ್ನು ಪ್ರದರ್ಶಿಸಿದ್ದಾರೆ.
ಇವರು ಕರ್ನಾಟಕ ಲಲಿತ ಕಲಾ ಅಕಾಡೆಮಿಯ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇದರ  ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಅವಧಿಯಲ್ಲಿ ಹಾಸನದಲ್ಲಿ ಅಕಾಡೆಮಿಯ ಹಲವು ಕಾರ್ಯಕ್ರಮ ಸಂಘಟಿಸಿ ನಗರದಲ್ಲಿ ಕಲಾ ಚಟುವಟಿಕೆಯಿಂದ ಕಲಾವಿದರಿಗೆ ಪ್ರೇರಣೆ ಹಾಗೂ ಸ್ಫೂರ್ತಿಯಾಗಿದ್ದಾರೆ. ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ ನಗರದಲ್ಲಿ ಅನೇಕ ಹಿರಿಯ ಕಲಾವಿದರಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ರೂವಾರಿಯಾಗಿದ್ದಾರೆ. ಹಲವಾರು ಚಿತ್ರಕಲಾ ಚಟುವಟಿಕೆ ಪ್ರದರ್ಶನ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.
ರಾಜ್ಯ ಹೊರ ರಾಜ್ಯ ಅಷ್ಟೇ ಅಲ್ಲ ಹೊರದೇಶಗಳಲ್ಲೂ ತಮ್ಮ ಕಲಾಕೃತಿಗಳೊಂದಿಗೆ ಪ್ರದರ್ಶನ ಮತ್ತು ಶಿಬಿರಗಳಲ್ಲಿ ಭಾಗವಹಿಸಿದ ಅನುಭವಿ. ಜಹಾಂಗೀರ್ ಆರ್ಟ್ ಗ್ಯಾಲರಿ ಮುಂಬಯಿ, ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ, ಕರ್ನಾಟಕ ಚಿತ್ರಕಲಾ ಪರಿಷತ್‍ನ ಚಿತ್ರಸಂತೆ, ಅಲಂಕೃತ್ ಆರ್ಟ್ ಗ್ಯಾಲರಿ, ಹೈದ್ರಾಬಾದ್, ಅಲಿಯಾನ್ಸ್ ಫ್ರಾನ್ಸಿಸ್, ನವದೆಹಲಿ, ಆರೋಧನ ಗ್ಯಾಲರಿ, ಪಾಂಡಿಚೇರಿ, ದರ್ಬಾರ್ ಹಾಲ್ ಎರ್ನಾಕುಲಂ ಕೇರಳ, ಕ್ಯಾಮಲಿನ್ ಚಿತ್ರಕಲಾ ಪ್ರದರ್ಶನ, ಚಿನೈ, ರಾಷ್ಟ್ರೀಯ ಚಿತ್ರಕಲಾ ಶಿಬಿರ, ಮೌಂಟ್ ಅಬು, ರಾಜಸ್ಥಾನ, ವರ್ಣಯಾಗ ಗ್ಯಾಲರಿ ಮಸ್ಕತ್ ಹೀಗೆ ಇವರ ಭಾಗವಹಿಸುವಿಕೆಯ ಪಟ್ಟಿಯೇ ಸಾಕಷ್ಟು ಉದ್ದವಿದೆ. ಇವರ  ಮನೆ ಸಮೀಪವಿರುವ ಹುಣಸಿನಕೆರೆ ಪರಿಸರದಲ್ಲಿ 20 ಅಡಿ ಉದ್ದನೆಯ ಲ್ಯಾಂಡ್‍ಸ್ಕೇಪ್ ಚಿತ್ರ ರಚನೆ ಇಂಡಿಯಾ ಬುಕ್ ಆಪ್ ರೆಕಾರ್ಡ್‍ನಲ್ಲಿ ದಾಖಲಾಗಿದೆ. ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು   ಅತಿ ವೇಗದ ಅತಿದೊಡ್ಡ ವಿಶ್ವ ದಾಖಲೆಯ ವರ್ಣಚಿತ್ರವನ್ನು ಬರೆಸುವ ಮೂಲಕ ಕಲೆಯ ಮೂಲಕ ಪರಿಸರ ಜಾಗೃತಿ ಮೂಡಿಸುವ ದೇಸಾಯಿಯವರ ಕಾಯಕ ಜನಮೆಚ್ಚುಗೆ ಗಳಿಸಿತು.


ಇವರ ಕಲಾಕೃತಿಗಳು ಓಮೆನ್, ಕೆನಡಾ, ಅಮೇರಿಕಾ, ಸಿಂಗಪೂರ್, ಮಸ್ಕತ್, ಲಂಡನ್, ಬೆಲ್ಜಿಯಂ, ಫ್ರಾನ್ಸ್, ಸ್ವಿಡ್ಜರ್‍ಲ್ಯಾಂಡ್, ಜರ್ಮನಿ, ಆಸ್ಟ್ರೀಯಾ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೌಂಟ್ ಅಬು ರಾಜಸ್ಥಾನ, ಬೆನಾನ್‍ಸ್ಮಿತ್ ಆರ್ಟ್ ಸೊಸೈಟಿ, ಬೆಳಗಾಂ ಸೇರಿದಂತೆ ಇನ್ನೂ ಹಲವಾರು ಖಾಸಗಿಯವರ ಸಂಗ್ರಹದಲ್ಲಿವೆ.
ನನ್ನ ಕಲೆಯ ಕುರಿತು ಕಲಾ ವಿಮರ್ಶಕರು ಆಡಿರುವ ಮಾತುಗಳು ನನ್ನೆಲ್ಲಾ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಭಾವಿಸುವ ದೇಸಾಯಿಯವರು. ನವದೆಹಲಿಯ ಕಲಾ ವಿಮರ್ಶಕರಾದ ಪದ್ಮಶ್ರೀ ಕೇಶವ್ ಮಲಿಕ್ ಅವರು ದೇಸಾಯಿಯವರ ಕೃತಿಗಳನ್ನು "ಅವನ ಆತ್ಮದ ಭೂದೃಶ್ಯ" (landscape of his soul) ಎಂದು ಬಣ್ಣಿಸಿರುವುದನ್ನು ಮೆಲುಕು ಹಾಕುತ್ತಾರೆ. ಹಾಗೆಯೇ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಸಿ.ಎಸ್. ಕೃಷ್ಣಶೆಟ್ಟಿ ಅವರು, "ದೇಸಾಯಿಯವರ ವರ್ಣಚಿತ್ರಗಳು ಕೇವಲ ದೃಶ್ಯ ಅನುಭವಗಳಲ್ಲ; ಅವು ಭಾವನಾತ್ಮಕ ಪ್ರಯಾಣಗಳು ಮತ್ತು ಅಮೂರ್ತ ರೂಪಗಳ ಮೂಲಕ ಆಳವಾದ ಭಾವನೆಗಳನ್ನು ಹುಟ್ಟುಹಾಕುವ ಅವರ ಸಾಮರ್ಥ್ಯ ಗಮನಾರ್ಹವಾದುದು" ಎಂದು ವಿಮರ್ಶಿಸಿದ್ದಾರೆ.
ಇವರ   ಈ ಸುದೀರ್ಘ ಕಲಾ ಪಯಣಕ್ಕೆ ಹಲವಾರು ಮನ್ನಣೆಗಳು ಸಿಕ್ಕಿವೆ; ೧೯೮೯ ರಲ್ಲಿ ಮೈಸೂರು ದಸರಾ ಕಲಾ ಪ್ರದರ್ಶನ ಪ್ರಶಸ್ತಿ, ೧೯೯೪ ರಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಮತ್ತು ೨೦೦೮ ರಲ್ಲಿ ಹಾಸನ   ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಪ್ರಸ್ತುತ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿ   ಇವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರ ಜೊತೆಗೆ, ಹಾಸನದಲ್ಲಿ ಓರ್ವ ಕಲಾ ಶಿಕ್ಷಕನಾಗಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಬಗ್ಗೆ ಒಲವು ಮೂಡಿಸುವ ಕೆಲಸವನ್ನೂ  ತೃಪ್ತಿಯಿಂದ ಮಾಡಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದಾರೆ.
ಇವರ ಪಾಲಿಗೆ ಕಲೆ ಎಂಬುದು ಕೇವಲ ಬಣ್ಣಗಳ ಆಟವಲ್ಲ; ಅದು ಆತ್ಮ, ಪ್ರಕೃತಿ ಮತ್ತು ಧ್ಯಾನದ ನಡುವಿನ ಒಂದು ಸುಂದರ ಸಂವಾದ. ಈ ಪಯಣದಲ್ಲಿ ಸದಾ ಹೊಸತನ್ನು ಹುಡುಕುವ  ಕಲಾ ಸೇವೆ ನಿರಂತರವಾಗಿ ಸಾಗಲಿ ಎಂದು ನಾವು ಹಾರೈಸೋಣ..

ಸಿಹಿಜೀವಿ ವೆಂಕಟೇಶ್ವರ
ತುಮಕೂರು