This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
02 ಫೆಬ್ರವರಿ 2026
ಫೆಬ್ರವರಿ ಎಂದರೆ ಸುಮ್ಮನೆ ಅಲ್ಲ..
ಫೆಬ್ರವರಿ ಎಂದರೆ ಸುಮ್ಮನೆ ಅಲ್ಲ..
ಫೆಬ್ರವರಿ ತಿಂಗಳು ವರ್ಷದ ಉಳಿದ ತಿಂಗಳುಗಳಿಗಿಂತ ವಿಭಿನ್ನ ಮತ್ತು ವಿಶೇಷ. ಪ್ರಕೃತಿಯ ಬದಲಾವಣೆ, ಸಾಂಸ್ಕೃತಿಕ ಮಹತ್ವ ಹಾಗೂ ಕಾಲಗಣನೆಯ ವೈಚಿತ್ರ್ಯದಿಂದಾಗಿ ಇದು ತನ್ನದೇ ಆದ ಆಕರ್ಷಣೆ ಹೊಂದಿದೆ.
ಫೆಬ್ರವರಿ ತಿಂಗಳು ಕೇವಲ 28 ಅಥವಾ 29 ದಿನಗಳನ್ನು ಹೊಂದಿರುವ ವರ್ಷದ ಏಕೈಕ ತಿಂಗಳು. ಸೌರಮಂಡಲದ ಲೆಕ್ಕಾಚಾರದ ಪ್ರಕಾರ ಪ್ರತಿ ನಾಲ್ಕು ವರ್ಷಕ್ಕೊಮ್ಮೆ 'ಅಧಿಕ ವರ್ಷ' (Leap Year) ಬರುತ್ತದೆ. ಆಗ ಈ ತಿಂಗಳು 29 ದಿನಗಳನ್ನು ಹೊಂದಿರುತ್ತದೆ. ಈ ವೈಶಿಷ್ಟ್ಯವೇ ಫೆಬ್ರವರಿಯನ್ನು ಇತರ 11 ತಿಂಗಳುಗಳಿಗಿಂತ ವಿಭಿನ್ನವಾಗಿ ನಿಲ್ಲಿಸುತ್ತದೆ.
ಈ ತಿಂಗಳು ಮನೆ ಮಾಲೀಕರಿಗೆ ಖುಷಿಯ ವಿಚಾರವಾದರೆ ಬಾಡಿಗೆದಾರರಿಗೆ ಬೇಸರದ ತಿಂಗಳು.
ಫೆಬ್ರವರಿ ತಿಂಗಳೆಂದರೆ
ಮನೆ ಓನರ್ ಗಳಿಗೆ
ಎಲ್ಲಿಲ್ಲದ ಸಂತಸ|
ಎರಡು ದಿನ ಮೊದಲೇ
ತುಂಬಿ ಬಿಡುವುದು
ಅವರ ಬೊಕ್ಕಸ ||
ಭಾರತದಲ್ಲಿ ಫೆಬ್ರವರಿ ತಿಂಗಳು ಶೀತಗಾಲದ ಅಂತ್ಯ ಮತ್ತು ವಸಂತ ಕಾಲದ ಆಗಮನದ ಸಮಯ. ಮರದ ಎಲೆಗಳು ಉದುರಿ ಹೊಸ ಚಿಗುರು ಕಾಣಿಸಿಕೊಳ್ಳುವ ಹಾಗೂ ಹೂವುಗಳು ಅರಳುವ ಸುಂದರ ಕಾಲವಿದು. ಅತಿಯಾದ ಚಳಿಯೂ ಇಲ್ಲದ ವಿಪರೀತ ಸೆಕೆಯೂ ಇಲ್ಲದ ಹಿತಕರವಾದ ಹವಾಮಾನ ಇರುವುದರಿಂದ ಪ್ರವಾಸಕ್ಕೆ ಇದು ಅತ್ಯುತ್ತಮ ಸಮಯ.
ಈ ತಿಂಗಳು ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನೂ ಹೊಂದಿದೆ
ಫೆಬ್ರವರಿ ತಿಂಗಳಿನಲ್ಲಿ ಹಲವಾರು ಪ್ರಮುಖ ದಿನಾಚರಣೆಗಳಿವೆ.ಅದರಲ್ಲಿ
ಫೆಬ್ರವರಿ 14 ರಂದು ಆಚರಿಸುವ ಪ್ರೇಮಿಗಳ ದಿನ ಒಂದು.ಅದು ವಿಶ್ವದಾದ್ಯಂತ ಪ್ರೀತಿ ಮತ್ತು ಸ್ನೇಹವನ್ನು ಸಂಭ್ರಮಿಸುವ ದಿನ.
ಕಾತರಿಸುವನು ಅವನು
ಎಂದು ಬರುವುದೋ
ಫೆಬ್ರವರಿ ಹದಿನಾಲಕ್ಕು|
ಅವಳು ಇವನ
ಪ್ರೀತಿ ಸ್ವೀಕರಿಸಿದರೆ
ಅದೇ ದೊಡ್ಡ ಲಕ್ಕು||
ಫೆಬ್ರವರಿ 21 ರಂದು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುತ್ತೇವೆ. ನಮ್ಮ ತಾಯ್ನುಡಿಯ ಮಹತ್ವವನ್ನು ಸಾರುವ ದಿನವು ನಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆ ಪಡುವ ದಿನ
ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತೇವೆ. ಸರ್ ಸಿ.ವಿ. ರಾಮನ್ ಅವರು 'ರಾಮನ್ ಎಫೆಕ್ಟ್' ಸಂಶೋಧಿಸಿದ ದಿನದ ನೆನಪಿಗಾಗಿ ಇದನ್ನು ಭಾರತದಲ್ಲಿ ಆಚರಿಸಲಾಗುತ್ತದೆ. ಇದೇ ತಿಂಗಳಲ್ಲಿ ನಮ್ಮ ನಾಡಿನಲ್ಲಿ ಅನೇಕ ಹಬ್ಬ ಹಾಗೂ ಜಾತ್ರೆಗಳನ್ನು ಆಚರಿಸುತ್ತೇವೆ.
ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಬರುವ 'ಮಹಾಶಿವರಾತ್ರಿ' ಹಬ್ಬವು ಧಾರ್ಮಿಕವಾಗಿ ಈ ಕಾಲಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ.
ಇಷ್ಟೆಲ್ಲಾ ಮಹತ್ವದ ಈ ತಿಂಗಳ ಕಂಡರೆ ಕೆಲವರು ಬೇಸರ ವ್ಯಕ್ತಪಡಿಸುವರು.ಅವರೇ ಫೆಬ್ರವರಿ ತಿಂಗಳ 29 ರಂದು ಜನಿಸಿವರು.
ಫೆಬ್ರವರಿ 29 ರಂದು
ಹುಟ್ಟಿದವರ ಪಾಡು
ಹೇಳತೀರದು|
ಅವರ ಹುಟ್ಟು
ಪ್ರತಿ ವರ್ಷ ಬಾರದು||
ಫೆಬ್ರವರಿ ಎಂದರೆ ಕೇವಲ ಒಂದು ತಿಂಗಳಲ್ಲ.ಅದು ಹಳೆಯದನ್ನು ಕಳೆದು ಹೊಸತನಕ್ಕೆ ಸಿದ್ಧವಾಗುವ ಸಂಧಿಕಾಲ. ವರ್ಷದ ಚಿಕ್ಕ ತಿಂಗಳಾದರೂ ಇದು ಹೊತ್ತು ತರುವ ಸಂಭ್ರಮ ಮತ್ತು ಸಾರ್ಥಕತೆ ದೊಡ್ಡದು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ