This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
02 ಜನವರಿ 2026
ವಾರ್ಷಿಕ ಹಿ(ಮು)ನ್ನೋಟ
ವಾರ್ಷಿಕ ಹಿ(ಮು)ನ್ನೋಟ
ಕಳೆದ ವರ್ಷ ಹತ್ತಾರು ಸಂಕಲ್ಪ ಮಾಡಿಕೊಂಡು ಅವುಗಳನ್ನು ಈಡೇರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದೆ.ಅದರಲ್ಲಿ ಕೆಲವು ಈಡೇರಿ ಕೆಲವು ಹಾಗೆಯೇ ಉಳಿದವು.ಕಳೆದ ಕ್ಯಾಲೆಂಡರ್ ವರ್ಷದ ಬಗ್ಗೆ ಸಿಂಹಾವಲೋಕನ ಮಾಡುವ ಪ್ರಯತ್ನ ಮಾಡುವೆ.
ಇದು ಈ ವರ್ಷ ಹೇಗಿರಬೇಕು ಎಂದು ಯೋಜಿಸಿ ಜೀವಿಸಲು ಅನುಕೂಲವಾದೀತೆಂಬುದು ನನ್ನ ಭಾವನೆ.
ವೃತ್ತಿ: ಕಳೆದ ವರ್ಷ ನನ್ನ ಶಾಲೆಯ ನಾಲ್ಕು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜ್ಞಾನ ಉಣಬಡಿಸುವ ಕಾರ್ಯದ ಜೊತೆಯಲ್ಲಿ ಅವರಲ್ಲಿರುವ ಇತರೆ ಕೌಶಲಗಳನ್ನು ಮತ್ತು ಪ್ರತಿಭೆಯನ್ನು ಹೊರತರುವ ಕಾಯಕವನ್ನು ಮಾಡಿರುವುದು ಆತ್ಮ ತೃಪ್ತಿ ನೀಡಿದೆ.
ಪುಸ್ತಕ ಓದು ಬರಹ: ಕಳೆದ ಐದಾರು ವರ್ಷಗಳಿಗೆ ಹೋಲಿಕೆ ಮಾಡಿಕೊಂಡರೆ ಈ ಬಾರಿ ಹದಿನೈದು ಪುಸ್ತಕ ಮಾತ್ರ ಓದಿರುವೆ.ಪುಸ್ತಕ ಪ್ರಕಟಣೆಯನ್ನು ಗಮನಿಸುವುದಾದರೆ ಈ ಬಾರಿ ನನ್ನ ಮೂರು ಪುಸ್ತಕಗಳು ಲೋಕಾರ್ಪಣೆಯಾದವು."ಸಿಹಿಜೀವಿ ಕಂಡ ಅಂಡಮಾನ್ " ಪ್ರವಾಸ ಕಥನವನ್ನು ಕಾರ್ಕಳದ ಪುಸ್ತಕ ಮನೆ ಪ್ರಕಟಿಸಿ ಅಮೋಘವಾಗಿ ಬಿಡುಗಡೆ ಕಾರ್ಯಕ್ರಮ ಮಾಡಿ ನನ್ನ ಸನ್ಮಾನಿಸಿದ್ದು ಮರೆಯಲಾಗದ ಘಟನೆ.ಮತ್ತೊಂದು ಪುಸ್ತಕ " "ಮಕ್ಕಳಿಗಾಗಿ ಮಹಾತ್ಮರ ಮಾತುಗಳು " ಪುಸ್ತಕವನ್ನು ನುಡಿತೋರಣ ಬಂಧುಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದು ಸಂತಸ ನೀಡಿತು. ಮತ್ತೊಂದು ಪುಸ್ತಕ "ಐತಿಹಾಸಿಕ ತಾಣಗಳು" ಪ್ರಿಂಟ್ ಆಗಿ ಮನೆ ಸೇರಿದೆ. ಈ ವರ್ಷ ಹೆಚ್ಚು ಪುಸ್ತಕಗಳನ್ನು ಓದಲು ಹಾಗೂ ಇನ್ನೂ ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಲು ಸಂಕಲ್ಪ ಮಾಡಿರುವೆ.
ಸಮಾಜದೊಂದಿಗೆ ನಾನು: ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಸನಾತನ ವಾಣಿಯನ್ನು ಬಲವಾಗಿ ನಂಬಿರುವ ನಾನು ಕಳೆದ ವರ್ಷದಿಂದ ಸಮಾಜಮುಖಿ ಕಾರ್ಯ ಮಾಡಲು ಆರಂಭಿಸಿರುವೆ.ಕೊಡುವುದರಲ್ಲಿ ಇರುವ ಸುಖ ನೆಮ್ಮದಿ ಅನುಭವಿಸಲಾರಂಬಿಸಿರುವೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈ ಗೆ ಗೊತ್ತಾಗಬಾರದು ಎಂಬ ಮಾತಿನಂತೆ ನಾನು ಕೊಟ್ಟ ಬಗ್ಗೆ ವಿವರ ನೀಡದಿರಲು ತೀರ್ಮಾನ ಮಾಡಿರುವೆ.ಈ ವರ್ಷವೂ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಸಂಕಲ್ಪ ಮಾಡಿರುವೆ.
ಪುರಸ್ಕಾರ: ಕಳೆದ ವರ್ಷ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನನ್ನ ಶಿಕ್ಷಣ ಮತ್ತು ಸಾಹಿತ್ಯದ ಸೇವೆ ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದ್ದು ನನ್ನ ಜೀವನದ ಮತ್ತೊಂದು ಅವಿಸ್ಮರಣೀಯ ದಿನ.
ಪತ್ರಿಕೆಯಲ್ಲಿ ಬರಹ : ಹವ್ಯಾಸವಾಗಿ ಆರಂಭವಾದ ನನ್ನ ಬರಹ ಇಂದು ಪತ್ರಿಕೆಗಳಲ್ಲಿ ಅಂಕಣ ಬರಹವಾಗಿ ಪ್ರಕಟವಾಗುತ್ತಿರುವುದಯ ಖುಷಿಯ ವಿಷಯ. ಗೌರವ ಸಂಭಾವನೆ ನೀಡಿ ನನ್ನ ಬರಹಗಳನ್ನು ಪ್ರಕಟಿಸುವ ಎಲ್ಲಾ ಪತ್ರಿಕೆಗಳಿಗೆ ನಾನು ನಮನ ಸಲ್ಲುಸಲೇಬೇಕು.ಈ ವರ್ಷವೂ ಪತ್ರಿಕೆಯಲ್ಲಿ ಬರೆಯುವ ಕಾಯಕ ಮುಂದುವೆರೆಸುವೆ.
ಗಾಯನ: ಹವ್ಯಾಸ ಕ್ಕೆ ಹಾಡುವ ನಾನು ನಮ್ಮ ಶಾಲೆಯಲ್ಲಿ ನಮ್ಮ ಮಕ್ಕಳ ಮುಂದೆ ಹಾಡಿ ಖುಷಿ ಪಡುತ್ತಿದ್ದೆ.ಈಗ ಕೆಲ ಸಮಾರಂಭಗಳಲ್ಲಿ ಹಾಡಿದಾಗ ಕೇಳುಗರು ಮೆಚ್ಚುಗೆಯಿಂದ ತಟ್ಟುವ ಚಪ್ಪಾಳೆ ಇನ್ನೂ ಹಾಡಲು ಪ್ರೇರಣೆ ನೀಡಿವೆ.
ನಾಟಕ: ಹವ್ಯಾಸಿ ನಾಟಕ ಕಲಾವಿದನಾಗಿ ಕಳೆಸ ವರ್ಷ ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಯ ಸಮಯದಲ್ಲಿ ಗುಬ್ಬಿ ವೀರಣ್ಣ ಶಿಕ್ಷಣ ಕಲಾ ತಂಡದೊಂದಿಗೆ ಗೌತಮ ಬುದ್ಧ ನಾಟಕದಲ್ಲಿ ಅಭಿನಯಿಸಿದ್ದು ಖುಷಿ ನೀಡಿತು.ಉಡುಪಿಯಲ್ಲಿ ನಡೆಸ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗವಿಸಿದ ನಮ್ಮ ತಂಡ ಅತ್ಯುತ್ತಮ ಶಿಸ್ತಿನ ತಂಡ ಎಂಬ ಬಹುಮಾನ ಪಡೆದದ್ದು ಮತ್ತೊಂದು ಸಾರ್ಥಕ ಕ್ಷಣ.ಈ ಬಾರಿಯೂ ಅಭಿನಯ ಮುಂದುವರೆಯಲಿದೆ.
ಪ್ತವಾಸ: ಕಳೆದ ಎರಡು ವರ್ಷಗಳಲ್ಲಿ ಕನಿಷ್ಟ ಹತ್ತು ದಿನದ ಪ್ರವಾಸ ಮಾಡಿದ ನಾನು ಈ ವರ್ಷ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರೂ ಸರ್ಕಾರದ ಗಣತಿ ಕಾರ್ಯಕ್ಲೆ ನಿಯೋಜನೆ ಗೊಂಡು ಕರ್ತವ್ಯ ಮಾಡಿದ ಪರಿಣಾಮವಾಗಿ ಪ್ರವಾಸ ಹೋಗಲಾಗಲಿಲ್ಲ.ಆದರೆ ಈ ಸಮಯದಲ್ಲಿ ವಿವಿಧ ಸಮಾಜೋ ಆರ್ಥಿಕ ಹಿನ್ನೆಲೆಯ ಕುಟುಂಬಗಳ ಭೇಟಿಯು ವಿಶೇಷವಾದ ಅನುಭವಗಳನ್ನು ನೀಡಿತು.ಈ ಬಾರಿ ವಿಶೇಷವಾದ ಪ್ರವಾಸ ಮಾಡಲು ಯೋಜಿಸಿರುವೆ.
ಯೂಟ್ಯೂಬರ್: ಪ್ರತಿ ವರ್ಷ ಏನಾದರೂ ಹೊಸ ಕೌಶಲಗಳನ್ನು ಕಲಿಯಲು ಹಾತೊರೆಯುವ ನಾನು ಕಳೆದ ಏಪ್ರಿಲ್ ನಲ್ಲಿ ಸಿಹಿಜೀವಿಯ ಪಯಣ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದೆ ಕೇವಲ ಎಂಟು ತಿಂಗಳಲ್ಲಿ950 ಸಬ್ ಸ್ಕ್ರೈಬರ್ ಗಳು ನನ್ನ ಚಾನೆಲ್ ನ ಚಂದಾದಾರರಾಗಿರುವರು ಎಂದು ಹೆಮ್ಮೆಯಿಂದ ಹೇಳುವೆ.ನಾನು ಪ್ರವಾಸ ಮಾಡಿದ ಸ್ಥಳಗಳನ್ನು ತೋರಿಸುವ ಪ್ರಯತ್ನ ಮುಂದುವರೆದಿದೆ.ಇದುವರೆಗೆ250 ಕ್ಕೂ ಹೆಚ್ಚು ವೀಡಿಯೋ ಅಪ್ಲೋಡ್ ಮಾಡಿರುವೆ. ಕಡಿಮೆ 4 ಲಕ್ಷ ವೀಕ್ಷಣೆ ಕಂಡಿರುವುದು ಸಂತಸ ನೀಡಿದೆ.ಈ ವರ್ಷವೂ ಸಿಹಿಜೀವಿಯ ಪಯಣ ಮುಂದುವರೆಯಲಿದೆ.
ತುಸು ಬೇಸರದ ಸಂಗತಿಗಳು: ಅಮ್ಮನ ಅನಾರೋಗ್ಯ, ಆತ್ಮೀಯರ ಅಕಾಲಿಕ ನಿರ್ಗಮನ, ಸಮಾಜದಲ್ಲಿರುವ ಕೆಲ ಸ್ವಾರ್ಥಿಗಳ ನಡೆಗಳು,ಕಾಲೆಳೆಯುವ ನೀಚ ಮನಗಳನ್ನು ಕಂಡಾಗ ಬೇಸರವಾಗುತ್ತದೆ.
ಏಳು ಬೀಳು ,ನೋವು ನಲಿವು ಜೀವನದ ಅವಿಭಾಜ್ಯ ಅಂಗ ಈ ಬಾರಿ ಅವುಗಳನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ದರಾಗೋಣ.ಮತ್ತೊಮ್ಮೆ ನಿಮಗೆ ಹೊಸ ಕ್ಯಾಲೆಂಡರ್ ನ ವರ್ಷದ ಶುಭಾಶಯಗಳು🌷
ನಿಮ್ಮ
ಸಿಹಿಜೀವಿ ವೆಂಕಟೇಶ್ವರ..
01 ಜನವರಿ 2026
ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು🌷🌹2026
*ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು🌷🌹*
ಕಳೆದ ಕ್ಯಾಲೆಂಡರ್ ವರ್ಷದಲ್ಲಿ
ಕಂಡಿದ್ದೇವೆ ನೋವು ನಲಿವು
ನೂರಾರು|
ಸರ್ವರಿಗೂ ಶುಭವನ್ನುಂಟು ಮಾಡಲಿ ಬರಲಿರುವ ಎರಡು ಸಾವಿರದ ಇಪ್ಪತ್ತಾರು(2026)||
*ಸಿಹಿಜೀವಿ ವೆಂಕಟೇಶ್ವರ.*
30 ಡಿಸೆಂಬರ್ 2025
ಅಂಡಮಾನ್ ಸ್ವಾತಂತ್ರ ಪಡೆದ ದಿನ..
ಇಂದು ನಾವು ಸ್ವಾತಂತ್ರ್ಯಹೊಂದಲು ಶುರು ಮಾಡಿದ ವರ್ಷ! ಹೌದು ಈ ಮಾತು ಕೇಳಿದ ಕೆಲವರು ಅಚ್ಚರಿ ಪಡಬಹುದು.ಆದರೆ ಅದೇ ಸತ್ಯ.
1943 ಡಿಸೆಂಬರ್ 30ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬೇರ್ನಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸಿದರು. 'ಆಜಾದ್ ಹಿಂದ್' ಸೇನೆ ಅಡಿಯಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ವಿಮೋಚನೆಗೊಂಡ ಮೊದಲ ತಾತ್ಕಾಲಿಕ ಭಾರತೀಯ ಪ್ರದೇಶವೆಂದು ಘೋಷಿಸಲಾಯಿತು. ಇದು ಭಾರತದ ಸ್ವಾತಂತ್ರ್ಯಕ್ಕೆ ಒಂದು ಮಹತ್ವದ ಸಾಂಕೇತಿಕ ಕಾರ್ಯವಾಗಿತ್ತು. ನೇತಾಜಿಯವರ ವಿವಾದಿತ ಅಂತ್ಯವಾಗದಿದ್ದರೆ ಅದೇ ವರ್ಷ ನಮಗೆ ಸ್ವತಂತ್ರ ಲಭಿಸುವ ಸಾಧ್ಯತೆ ಇತ್ತು. ಸ್ವತಂತ್ರ ಭಾರತೀಯ ಆಡಳಿತವನ್ನು ಸ್ಥಾಪಿಸಿದ್ದ ನೇತಾಜಿಯವರ ನೆನಪಿಗಾಗಿ ಒಂದು ದ್ವೀಪಕ್ಕೆ 'ಸ್ವರಾಜ್ ದ್ವೀಪ' ಎಂದು ಮರುನಾಮಕರಣ ಮಾಡಲಾಗಿದೆ.ಎರಡು ವರ್ಷಗಳ ಹಿಂದೆ ಆ ದ್ವೀಪಕ್ಕೆ ನಾನು ಕಾಲಿಟ್ಟಾಗ ನೇತಾಜಿಯವರು ಆ ಜಾಗದಲ್ಲಿ ಹೇಗೆಲ್ಲ ಓಡಾಡಿ,ಹೋರಾಡಿದರು ಎಂದು ಮನದಲ್ಲೇ ಊಹಿಸಿಕೊಂಡು ರೋಮಾಂಚಕನಗೊಂಡಿದ್ದೆ..
27 ಡಿಸೆಂಬರ್ 2025
ಬಹುಮುಖ ಪ್ರತಿಭೆಯ ಕಲಾವಿದರು ನಮ್ಮ ಕೋಟೆ ಕುಮಾರ್.
ಬಹುಮುಖ ಪ್ರತಿಭೆಯ ಕಲಾವಿದ, ಕೋಟೆ ಕುಮಾರ್.
ಲಲಿತ ಕಲೆಗಳು ಮಾನವನ ವಿಕಾಸಕ್ಕೆ ತಮ್ಮದೇ ಆದ ಪ್ರಭಾವ ಬೀರುತ್ತವೆ. ಕೆಲವರು ತಮ್ಮ ವೃತ್ತಿಯ ಜೊತೆಯಲ್ಲಿ ಪ್ರವೃತ್ತಿಯನ್ನು ಬೆಳೆಸಿಕೊಂಡು ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅಂತಹವರ ಸಾಲಿಗೆ ಸೇರುವ ಮೇರು ವ್ಯಕ್ತಿತ್ವವೇ ಕೋಟೆಕುಮಾರ್.
ಕೋಟೆಕುಮಾರ್ ಎಂದು ಪ್ರಖ್ಯಾತವಾದ ಕಲಾವಿದರೂ ಲೇಖಕರೂ ಸಂಘಟಕರೂ ಆದ ಇವರನ್ನು ಅವರ ವಿದ್ಯಾರ್ಥಿಗಳು ಎಮ್ ಎಸ್ ಕೆ ಎಂದೇ ಪ್ರೀತಿಯಿಂದ ಕರೆಯುತ್ತಾರೆ.
ಎಂ ಜಿ ಎಸ್ ಆರಾಧ್ಯ ಮತ್ತು ಎಂ ಬಿ ಶಿವಮ್ಮ ದಂಪತಿಗಳ ಮಗನಾಗಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆಯಲ್ಲಿ ಡಿಸೆಂಬರ್ ಒಂಭತ್ತರ 1965 ರಲ್ಲಿ ಜನಿಸಿದ ಇವರು B A ,MA, MFA ಪದವಿ ಪಡೆದು
ಚಿತ್ರಕಲಾ ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಾ 36 ವರ್ಷಗಳ ಕಾಲ ಬೋಧನಾ ಕಾರ್ಯದಲ್ಲಿ ತೊಡಗಿ ಸಾವಿರಾರು ಮಕ್ಕಳಿಗೆ ಜ್ಞಾನವನ್ನು ಉಣಬಡಿಸಿದ್ದಾರೆ. ವೃತ್ತಿಯ ಜೊತೆಯಲ್ಲಿ ಪ್ರವೃತ್ತಿಯನ್ನು ಬೆಳೆಸಿಕೊಂಡ ಇವರು ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಲೇಖನ ಮತ್ತು ವ್ಯಂಗ್ಯಚಿತ್ರ ಬರೆದು ಓದುಗರ ಮತ್ತು ಕಲಾರಸಿಕರ ಮೆಚ್ಚುಗೆ ಪಡೆದಿದ್ದಾರೆ. ಇವರು ಹವ್ಯಾಸಿ ಛಾಯಾಚಿತ್ರಕಾರರಾಗಿ ನೂರಾರು ವನ್ಯ ಜೀವಿ ಚಿತ್ರ ಮತ್ತು ಇತರೆ ಚಿತ್ರಗಳನ್ನು ತೆಗೆದು ಹಲವಾರು ಪತ್ರಿಕೆಗಳಿಗೆ ಕಳಿಸಿದ್ದಾರೆ.
ಇಂದಿನ ಆಧುನಿಕ ಕಾಲದ ಪ್ರಭಾವಿ ಸಮಾಜಿಕ ಮಾಧ್ಯಮ ವಾದ ಯೂಟ್ಯೂಬ್ ಬಳಸಿಕೊಂಡು ಪ್ರವಾಸಿ ತಾಣಗಳು, ವಿವಿಧ ಸಮಾರಂಭಗಳು,,ವಿಶೇಷವಾದ ಸ್ಥಳಗಳ ನೂರಾರು ವೀಡಿಯೋ ಮಾಡಿ ಕಲ್ಚರಲ್ ವ್ಯಾಲಿ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಮಾನವನ ಬದುಕು ಬೌದ್ಧಿಕ ಮತ್ತು ಅಂತರಂಗಿಕ ಸಂವೇದನೆಗಳ ಸಂಗಮವಾಗಿದ್ದು, ಪ್ರಕೃತಿಯಲ್ಲಿನ ಅನುಸಂದಾನದಲ್ಲಿ ಆಸೆ ಎಂಬ ಮುನ್ನೋಟದಲ್ಲಿ ಆನಂದವೆಂಬ ಹಂತಕ್ಕೆ ಸಮಷ್ಟಿಗೊಳಿಸುವ ಮನಸ್ಸಿನ ಕ್ರಿಯೆಯಾಗಿದೆ. ಭೌತಿಕವಾಗಿ ಅನುಭವಿಸಿದ ಅತ್ಯಂತ ಆನಂದ ಮತ್ತು ದುಃಖ ಕಷ್ಟ ಕ್ಷಣಗಳ ದಾಖಲೆ ಮನಸ್ಸಿನಲ್ಲಿ ನೆಲೆನಿಂತಿರುತ್ತದೆ. ಇಂತಹ ಘಟನೆಗಳು ಪದೇ ಪದೆ ನೆನಪಿನಲ್ಲಿ ಬಂದು ಮತ್ತೆ ಮತ್ತೆ ಅನುಭವಿಸುವ ಆಸೆ ಮಾನವನದ್ದಾಗಿದೆ. ಕಾಲಪಕ್ವತೆಯಲ್ಲಿ ಅಸ್ತಿತ್ವದ ಹುಡುಕಾಟ ಬದುಕಿನ ಗೊಂದಲದಲ್ಲಿ ಅಸ್ಪಷ್ಟ ಅನಿಸಿಕೆಗಳಿಗೊಂದು ಮೂರ್ತರೂಪ ಕೊಡುವ ಪ್ರಯತ್ನ, ಜೀವದ ತುಡಿತ ಪ್ರತಿಯೊಂದೂ ಉಸಿರಿನಲ್ಲೂ ಹುಡುಕಾಟ, ಆದಿ ಅಂತಿಮವಿಲ್ಲದ ಅಗೋಚರ ಅನಂತದತ್ತ ಈ ಮಹಾಯಾನದಲ್ಲಿ ಕಂಡ ಬೆಳಕು, ಶಬ್ದ, ಸ್ಪರ್ಶ, ಗಂಧ, ರುಚಿಗಳಲ್ಲಿ ಪಂಚಭೂತಗಳನ್ನೂ ಅನುಭವಿಸಿ ಮತ್ತೆ ಪಂಚಭೂತಗಳಲ್ಲೇ ಅಂತಿಮ ಸೇರುವ ಸತ್ಯದ ಹುಡುಕಾಟವೇ ಕಲೆ ಎನ್ನಬಹುದು.ಕಲಾ ಕ್ಷೇತ್ರ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ.ಅಂತಹ ವಿರಳ ಆಯ್ಕೆಯಲ್ಲಿ ಕೋಟೆ ಕುಮಾರ್ ಕೂಡಾ ಒಬ್ಬರು.
ಕೋಟೆ ಕುಮಾರ್ ರವರ ಬಾಲ್ಯವೇ ಅವರನ್ನು ಮುಂದೆ ಓರ್ವ ಸಮಾಜಮುಖಿ ವ್ಯಕ್ತಿಯನ್ನಾಗಿ ರೂಪಿಸಿತು.
ರಸ್ತೆ ಮತ್ತು ವಿದ್ಯುತ್ ಇಲ್ಲದ ಊರಿನಲ್ಲಿ ಅಲ್ಲಿನ ಜನ ಪ್ರಾಕೃತಿಕವಾಗಿ ಬದುಕುತಿದ್ದ ಕಾಲ. ಸೂರ್ಯ ಚಂದ್ರರ ಬೆಳಕಿನಲ್ಲಿ ಕಾಲ ಕಳೆಯುತ್ತಿದ್ದವರು, ದನ, ಕರು, ಕುರಿ ಮೇಕೆಗಳೇ ಜೀವನಾಧಾರ. ವ್ಯವಸಾಯ ಅಲ್ಲಿನ ಮುಖ್ಯ ಕಸುಬು. ಸುತ್ತಲೂ ಗುಡ್ಡ, ಬೆಟ್ಟ, ತೊರೆ, ಕೆರೆಗಳ ಸಾಲು ಸಾಲು, ಊರ ಮಧ್ಯದ ಅರಳೀಮರ, ಈರೇಹಕ್ಕಿಗಳ ತವರು, ಬೆಳಗುರಾತ್ರಿ ಚಿಲಿಪಿಲಿ ನಾದ. ಅಲ್ಲಿನ ಜನರಲ್ಲಿ ಹಣದ ವ್ಯವಹಾರಕ್ಕಿಂತ ಮಧುರ ಮೈತ್ರಿಯ ಕಾಲ, ಯಾವ ನಾಗರೀಕತೆಯ ಸೊಂಕು ಇಲ್ಲದ ಅಪ್ಪಟ ಗ್ರಾಮೀಣ ಬದುಕು. ಊರ ಮುಂದಿನ ಮಾರಿ ಗುಡಿ, ಅರಳೀಕಟ್ಟೆ, ಊರ ಆಚೆಯ ಮಲ್ಲಪ್ಪ ಊರ ದೇವರುಗಳು. ವರ್ಷಕ್ಕೊಮ್ಮೆ ನಡೆವ ಊರ ಹಬ್ಬಕ್ಕೆ ಸೇರುವ ಬಂದುಬಳಗ: ರಾತ್ರಿ ಬೆಳಗು ಅರೆ ತಮಟೆಗಳ ನಾದ; ಕುರಿ, ಕೋಳಿ, ಕೋಣಗಳ ಬಲಿ; ರಾತ್ರಿ ಪೂರಾ ದೊಡ್ಡಾಟ ಚಿಕ್ಕಾಟ ಇವೆಲ್ಲಾ ಆಗೊಮ್ಮೆ ಈಗೊಮ್ಮೆ ಕಾಡುವ ನೆನಪುಗಳು, ಬೇಸಿಗೆ ಬಂತೆಂದರೆ ಗೊಂಬೆರಾಮರ ಚಕ್ಕಳದ ಗೊಂಬೆಯಾಟ, ದೊಂಬರಾಟ, ಕುಕ್ಕೆಮಾರಿ, ಪ್ಲೇಗಮ್ಮ, ಕೋಲೆಬಸವ, ಬುಡುಬುಡಿಕೆ ಇವರೆಲ್ಲರೂ ಹಳ್ಳಿ ಮಕ್ಕಳಿಗೆ ಸಾಂಸ್ಕೃತಿಕ ನೆಂಟರು. ಗೋಲಿ-ಬಳಪ ಆಡುವ ಹುಡುಗರು ಹಳ್ಳಿಗೆ ಹೊಸಬರು ಬಂದರೆ ಮಿಕಿಮಿಕಿ ನೋಡುವ, ಸೈಕಲ್ ಮೋಟಾರ್ ಗಾಡಿ ಬಂದರೆ ಓ.ಎಂದು ಹಿಂದೆ ಓಡುತ್ತಿದ್ದ ಬಗೆ ವಾರಕ್ಕೊಮ್ಮೆ ಬರುತ್ತಿದ್ದ ಪಾಪಂಪಾಪ್ನ ಸಾಬರಿಗೆ ಹೊಂಗೆಬೀಜ, ಬೇವಿನಬೀಜ ಕೊಟ್ಟು ಜಿನುಗು ಬೆಲ್ಲ ತಿನ್ನುವ ವಿಶೇಷ ತಿಂಡಿ.
ಅನ್ನ ಬಟ್ಟೆಗೆ ಬಲು ಕಷ್ಟ ವರ್ಷಕ್ಕೆ ಎರಡು ಕಾಕಿ ಚಡ್ಡಿ, ನೀಲಿ ಅಂಗಿ, ಹರಿದರೆ ಹಳೆ ಬಟ್ಟೆಯ ತೇಪೆ,ಪೆನ್ನು ಪೇಪರ್ ಅಪರೂಪ ಅದು ಸಿರಿವಂತರ ಸೊತ್ತು, ಇಂಥಹ ದಿನಗಳಲ್ಲಿ ಇದ್ದ ಬಳಪವೊಂದೇ ಬರೆಯುವ ಮಂತ್ರದಂಡ ವಾಗಿತ್ತು. ಮಾರಿಗುಡಿಯ ಬಂಡೆ, ಅದರ ಮೇಲೆ ಗಣೇಶ, ಲಿಂಗ, ಆನೆ, ಹೂವು ಚಿತ್ರಗಳ ಸರಮಾಲೆ. ಆಗ ಇವರಲ್ಲಿ ಚಿತ್ರಬಿಡಿಸುವ ಆಟ ಪದೇ ಪದೇ ನಡೆಯುತ್ತಿತ್ತು. ಇವರ ಆಸೆ ಅರಿತ ಅಮ್ಮ ಕೂಲಿ ಮಾಡಿದ ನಾಲ್ಕು ರೂಪಾಯಿಯಲ್ಲಿ ಬಣ್ಣದ ಡಬ್ಬ, ಬರೆಯಲು ಪೆನ್ಸಿಲ್, ಪುಸ್ತಕ ತಂದುಕೊಟ್ಟಿದ್ದು ಮುಂದೆ ಇವರು ಕಲಾವಿದರಾಗಲು ಪ್ರೇರಣೆ ನೀಡಿದವು.
ಬಾಲ್ಯ ಕಳೆದು ಯೌವನದ ಕಾಲ ರಮ್ಯ ಜಗತ್ತಿನ ನಿಗೂಡ ಕತ್ತಲಲ್ಲಿ ಕಳೆದು ಹೋಗುವ ಕಾಲದಲ್ಲಿ ತುದಿ ಮೊದಲಿಲ್ಲದ ಕನಸಿನ ಪಯಣ ಅರಂಭವಾಯಿತು. ಬದುಕೆಂಬ ಮಾಯೆ ಎಲ್ಲವನ್ನೂ ನುಚ್ಚುನೂರು ಮಾಡುತ್ತಿದ್ದ ಬಡತನ! ಬದುಕಿಗಾಗಿ ಹೋರಾಟ ಒಂದೆಡೆಯಾದರೆ ಮತ್ತೊಂದೆಡೆ ಕಲ್ಪನಾಲೋಕದ ಕುತೂಹಲ. ಎಸ್ಎಸ್ಎಲ್ಸಿ ಆದ ಮೇಲೆ ಮನೆಬಿಟ್ಟು ದೇಶ ಸುತ್ತಿದ್ದು! ಹೊಟ್ಟೆಪಾಡಿಗಾಗಿ ಕೂಲಿಮಾಡಿ ಮಣ್ಣುಕಲ್ಲು ಹೊತ್ತು ಅಲೆದದ್ದು, ಬದುಕಿನ ಒಂದೊಂದು ದಿನವೂ ಒಂದೊಂದು ಪಾಠ, ಲೋಕ ಸತ್ಯದ ಅರಿವು. ಮತ್ತೆ ತಂದೆಯ ಒಲವು ಮನೆ ಸೇರುವಂತೆ ಮಾಡಿತು. ಮುಂದೆ ಓದಲು ಬಲವಂತ ಮಾಡಿದ ಪರಿಣಾಮವಾಗಿ ಚಿತ್ರ ಕಲಿತು ಶಿಕ್ಷಕನಾಗುವ ಆಸೆ ಕೈಗೂಡಿತು. ಬದುಕನ್ನು ಬಣ್ಣರೇಖೆಗಳಲ್ಲಿ ಕಟ್ಟಿಕೊಳ್ಳುವ ವಿಧಿ ಲಿಖಿತದಂತೆ ಕೊನೆಗೂ ಬದುಕಿನಲ್ಲಿ ಹೋರಾಡಿ ನೆಲೆಕಂಡುಕೊಂಡರು.
ಗ್ರಾಮೀಣರಿಗೆ ಹೊಟ್ಟೆ ಬಟ್ಟೆಯಂತೆ ದೇವರು, ದೆವ್ವ, ಮಾಟಮಂತ್ರದೊಂದಿಗೆ ಬದುಕು ಹಾಸುಹೊಕ್ಕಾಗಿರುತ್ತದೆ. ಸುಖವಿದ್ದರೆ ದೇವರು, ಕಷ್ಟಬಂದರೆ ಮಾಟ ಮಂತ್ರ ಅತಿಯಾದರೆ ದೆವ್ವ ಗಾಳಿ. ಓದು ಬರಹ, ವೈಚಾರಿಕತೆ ಇಲ್ಲದ ಮೂಢನಂಬಿಕೆಯ ಆಚರಣೆ. ಅದರಲ್ಲೂ ಒಂದೊಂದು ಸಾಂಸ್ಕೃತಿಕ ಆಚರಣೆ ಮಕ್ಕಳಾದ ನಮಗೆ ಅನುಕರಣೆಯ ಆರಂಭ. ರಾತ್ರಿ ಕುಣಿದ ದೈವ, ದೆವ್ವ ಬೆಳಗಾಗ ನಮ್ಮ ಮೇಲೆ ಬಂದು ಕುಣಿದ ಅನುಕರಣೆ ಇವುಗಳು ಕೋಟೆ ಕುಮಾರ್ ಜೀವನದಲ್ಲಿ ವೈಜ್ಞಾನಿಕ ಚಿಂತನೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ತಮ್ಮ ಕಲೆ ಮತ್ತು ಲೇಖನಗಳಲ್ಲಿ ಅಭಿವಕ್ತಿಗೊಳಿಸಲು ಪ್ರೇರಣೆಯಾದವು.1981ರಲ್ಲಿ ತುಮಕೂರಿನ ರವೀಂದ್ರ ಕಲಾ ನಿಕೇತನದಲ್ಲಿ ಶ್ರೀ ಬಾಬೂರಾವ್ ಹಾಗೂ ಕಿಶೋರ್ಕುಮಾರ್ರವರ ಮಾರ್ಗದರ್ಶನದಲ್ಲಿ ಆರಂಭವಾದ ಇವರ ಕಲಾ ಶಿಕ್ಷಣ ಬಣ್ಣ ರೇಖೆಗಳ ಆಕರ್ಷಣೆ, ಬಂದು ಹೋಗುವ ಹಿರಿಯ ಕಲಾವಿದರ ಹಾಗೂ ಕಲಾಕೃತಿಗಳ ಆಕರ್ಷಣೆ ಮತ್ತು ಎಸ್.ಎಂ.ಪಂಡಿತ್, ರವಿವರ್ಮರ ಕಲಾಕೃತಿಗಳು ಸಹಜವಾಗಿ ಸೆಳೆದವು. ಮರುಕೃತಿ ಮಾಡಿ ಆನಂದಿಸಿ ಅರಳಗುಪ್ಪೆ, ಹಂಪೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಇಲ್ಲಿಯ ಶಿಲ್ಪ ವೈಭವ, ಉತ್ತರ ಕರ್ನಾಟಕದ ಜನಜೀವನ ಶೈಲಿ, ಶಿಲ್ಪಗಳ ರೇಖಾಚಿತ್ರ ರಚಿಸುವುದು, ನಿಸರ್ಗಚಿತ್ರ ರಚನೆ ಇವು ಮನಸ್ಸಿನ ಮೇಲೆ ಗಾಢ ಪ್ರಭಾವಬೀರಿದ ಸನ್ನಿವೇಶಗಳು, ಕಲಾಸಂಮೃದ್ಧಿಯ ಆಳ ಅಧ್ಯಯನ ಮಾಡಬೇಕೆಂಬ ಬಯಕೆಯ ಪರಿಣಾಮವಾಗಿ ಆರ್.ಎಂ.ಹಡಪದ್, ಜೆ.ಎಸ್.ಎಂ.ಮಣಿ, ಉಮೇಶ್ ಮುಂತಾದವರ ಮಾರ್ಗದರ್ಶನದಲ್ಲಿ ಶಿಕ್ಷಣ ಮುಂದುವರಿಸಿ ಸಂಯೋಜನೆ, ಭಾವಚಿತ್ರ, ವ್ಯಕ್ತಿಚಿತ್ರ, ಗ್ರಾಫಿಕಲ್ ಕಲೆ ಹೀಗೆ ವಿವಿಧ ಆಯಾಮದ ಕಲಾ ಪ್ರಾಕಾರಗಳನ್ನು ಅರಿತುಕೊಂಡ ಇವರಿಗೆ ಸ್ವತಂತ್ರತೆಯ ಅರಿವಾದದ್ದು ಆರ್.ಎಂ.ಹಡಪದ್ ರವರಿಂದ. ಅಲ್ಲದೆ ಬೆಂಗಳೂರಿನ ಕಲಾಮಂದಿರ, ಚಿತ್ರಕಲಾ ಪರಿಷತ್, ವೆಂಕಟಪ್ಪ ಆರ್ಟ್ ಗ್ಯಾಲರಿಗಳಲ್ಲಿ ನಡೆಯುತ್ತಿದ್ದ ಕಲಾ ಪ್ರದರ್ಶನಗಳು, ರೋರಿಚ್, ರುಮಾಲೆ ಚನ್ನಬಸವಯ್ಯ, ಸುಬ್ರಹ್ಮಣ್ಯರಾಜು, ನಂಜುಂಡರಾವ್ ಮುಂತಾದವರ ಸಂಪರ್ಕ, ಅಲ್ಲದೆ ಕೆನ್ ಕಲಾ ಶಾಲೆಗೆ ಬಂದು ಹೋಗುತ್ತಿದ್ದ ಅನೇಕ ಜನ ಹಿರಿಯ ಕಲಾವಿದರು, ಕವಿಗಳು, ಚಿಂತಕರ ಮಾತುಗಳ ಸ್ಪೂರ್ತಿ ಪಿ.ಲಂಕೇಶ್, ಬರಗೂರು ರಾಮಚಂದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಎಂ.ಎಹಚ್.ಕೃಷ್ಣಯ್ಯ, ಜಾನ್ ದೇವರಾಜ್, ಸಿ.ಚಂದ್ರಶೇಖರ್, ಎಂ.ಟಿ.ವಿ.ಆಚಾರ್ಯ, ಕೃಷ್ಣಶೆಟ್ಟಿ ಮುಂತಾದ ಹಿರಿಯರ ಪ್ರಭಾವ ಇವರ ಕಲಾಕೃತಿಗಳಲ್ಲಿ ಕಾಣಬಹುದು.
ಜಲವರ್ಣ, ತೈಲವರ್ಣ, ಅಕ್ರಲಿಕ್ ಮಾದ್ಯಮದಲ್ಲಿ ಸಮಕಾಲೀನ ತತ್ವಗಳ ಆಧಾರದಲ್ಲಿ ಪ್ರಸ್ತುತ ವಿದ್ಯಮಾನಗಳ ವಾಸ್ತವಿಕ ನೆಲೆಗಟ್ಟಿನ ಬದುಕಿನ ಅಂತರಾಳದ ಪ್ರೀತಿ, ಶಾಂತಿ, ಕೌರ್ಯ, ದ್ವಂದ್ವಗಳನ್ನು ಅಭಿವ್ಯಕ್ತಗೊಳಿಸುವ ಕೋಟೆ ಕುಮಾರ್ ರವರ ಕಲಾಕೃತಿಗಳಲ್ಲಿ ಬದುಕನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ. ಪ್ರಖರ ವರ್ಣಗಳಲ್ಲಿ ಸಂಯೋಜಿಸಿರುವ ಕಲಾಕೃತಿಗಳಲ್ಲಿ ಭೌತಿಕತೆಗಿಂತ ಭಾವನಾತ್ಮಕತೆಯೇ ಹೆಚ್ಚು ಪ್ರಾಬಲ್ಯ ಸಾದಿಸಿದೆ.ಇದರ ಜೊತೆಗೆ ವ್ಯಂಗ್ಯಚಿತ್ರಕಾರನಾಗಿ, ಸಮಕಾಲೀನ ಸಾಮಾಜಿಕ, ರಾಜಾಕೀಯ ವಿದ್ಯಮಾನಗಳನ್ನು ಕುರಿತು, ಹೊಣೆಗೇಡಿತನ, ಕೋಮುವಾದ ಭ್ರಷ್ಟಾಚಾರ, ಸ್ವಾರ್ಥಪರ ವ್ಯವಸ್ಥೆಗಳನ್ನು ಹಾಗೂ ಜನಪ್ರತಿನಿಧಿಗಳನ್ನು ತೀವ್ರವಾಗಿ ಇವರ ವ್ಯಂಗ್ಯಚಿತ್ರಗಳು ಲೇವಡಿ ಮಾಡುತ್ತವೆ.
ಕೋಟೆ ಕುಮಾರ್ ರವರ ಕಲಾ ಸೇವೆಯನ್ನು ಗುರ್ತಿಸಿ ನೂರಾರು ಪ್ರಶಸ್ತಿಗಳು ಇವರನ್ನು ಹರಸಿ ಬಂದಿವೆ.ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ.
ಪ್ರಜಾವಾಣಿ ದಿನಪತ್ರಿಕೆಯ ರಾಜ್ಯಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಡಾ. ರಾಜ್ ಕುಮಾರ್ ಅಪಹರಣದ ಹಿನ್ನಲೆಯಲ್ಲಿ ರಚಿಸಿದ ವ್ಯಂಗ್ಯಚಿತ್ರಕ್ಕೆ ಇವರಿಗೆ ಪ್ರಶಸ್ತಿ ಲಭಿಸಿದೆ. 'ಕ್ಯಾರಿಕೇಚರ್' ವಿಭಾಗದಲ್ಲೂ ವ್ಯಕ್ತಿಯ ಅಂತರಂಗ ಮತ್ತು ಬಹಿರಂಗ ವ್ಯಕ್ತಿತ್ವದ ಸೂಕ್ಷ್ಮವನ್ನು ಅಭಿವ್ಯಕ್ತಗೊಳಿಸುವಲ್ಲಿ ಪ್ರಯತ್ನಿಸಿದ್ದು 'ರಾಬ್ಬಿದೇವಿ' ಎಂಬ ಕ್ಯಾರಿಕೇಚರ್ಗೆ ದೆಹಲಿಯ ಹಿಂದೂಸ್ಥಾನ್ ಟೈಮ್ನ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ನೀಡಿದ್ದಾರೆ. ಅಲ್ಲದೆ ಕ್ಯಾಮ್ಲನ್ ಆರ್ಟ್ ಫೌಂಡೇಶನ್ ನಡೆಸಿದ ಅಖಿಲ ಭಾರತ ಕಲಾ ಸ್ಪರ್ಧೆಯಲ್ಲಿ "ಬುದ್ಧ ಮತ್ತು ಲ್ಯಾಡನ್" ಎಂಬ ತೈಲವರ್ಣದ ಕೃತಿಗೆ ಪ್ರಶಸ್ತಿ ಲಭಿಸಿದೆ. 'ಸ್ಥಿರ ಚಿತ್ರ' 'ಪ್ರಕೃತಿ ಚಿತ್ರ'ಕ್ಕೆ ಮೈಸೂರು ಸದರಾ ಪ್ರಶಸ್ತಿ ಅಲ್ಲದೆ 'ಜಾನಪದ ಮಹಿಳೆ' ಎಂಬ ಕಲಾಕೃತಿಗೆ ನಾಗಪುರದ ರಾಷ್ಟ್ರೀಯ ಕಲಾಸ್ಪರ್ಧೆಯಲ್ಲಿ ಪ್ರಶಸ್ತಿ, ಅಲ್ಲದೆ 'ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಿದ್ದಾರೆ.ಇದುವರೆಗೂ ದೆಹಲಿ, ಹೈದ್ರಾಬಾದ್, ಬೆಂಗಳೂರು, ನಾಗಪುರ, ಗೋವಾ, ಪಾಂಡಿಚೆರಿ, ಚನೈ ಮುಂತಾದ ಕಡೆ ಏಕವ್ಯಕ್ತಿ ಹಾಗೂ ಸಮೂಹ ಕಲಾ ಪ್ರದರ್ಶನ ನಡೆಸಿದ್ದಾರೆ. ಈ ಎಲ್ಲಾ ಸೃಜನಶೀಲ ಆಸಕ್ತಿಗಳ ನಡುವೆ ಹಿರಿಯ ಕಲಾವಿದರುಗಳು, ಸಾಹಿತಿಗಳ ಸಂಪರ್ಕ, ಅಲ್ಲದೆ ತುಮಕೂರಿನ ಕಲಾವಿದ ಗೆಳೆಯರ ಬಳಗದೊಂದಿಗೆ "ಕಲರ್ಸ್ ಗ್ರೂಪ್" ಎಂಬ ಸಾಂಸ್ಕೃತಿಕ ಸಂಘಟನೆ ಕಟ್ಟಿ ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ, ಯುವ ಕಲಾವಿದರ ಕಲಾ ಶಿಬಿರ, ಮನೆಗೊಂದು ಕಲಾಕೃತಿ, ನಿಮ್ಮೊಂದಿಗೆ ನಾವು ಕಾರ್ಯಕ್ರಮದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್, ವಿಜ್ಞಾನಕೇಂದ್ರ, ಕರ್ನಾಟಕ ಲಲಿತ ಕಲಾ
ಅಕಾಡೆಮಿ, ಚಿತ್ರಕಲಾ ಶಿಕ್ಷಕರ ಸಂಘ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯನಾಗಿ ಸೇವೆ ಸಲ್ಲಿಸಿರುವ ಇವರು ಹೊಸ ಹೊಸ ಶೈಲಿಯ ಸರಣಿ ಚಿತ್ರಗಳ ರಚನೆಯಲ್ಲಿ ಒಂದು ಗಟ್ಟಿತನವನ್ನು ಕಂಡುಕೊಳ್ಳಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾರೆ.ಕೋಟೆ ಯವರ ಬಹುಪಾಲು ಕಲಾಕೃತಿಗಳು ಪ್ರಕೃತಿ ಮತ್ತು ಗ್ರಾಮೀಣ ಪರಿಸರದ ಬದುಕಿನ ಸಂವೇದನೆಯಲ್ಲಿ ಸೃಷ್ಟಿಗೊಂಡಿವೆ. ಗ್ರಹಿಕೆಯಮೂರ್ತದಿಂದ ರೂಪಾಂತರ ಪಡೆದು ತನ್ನ ಸೃಜನಶೀಲತೆಯಲ್ಲಿ ಮಣ್ಣಿಗೆ ಹತ್ತಿರವಾಗಿ ಅದರ ಎಲ್ಲಾ ಧ್ವನಿ, ಸ್ಪರ್ಶ ಗಂಧಗಳೊಡನೆ ಬದುಕನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ. ನಮ್ಮ ಭವ್ಯ ಪರಂಪರೆ ಮತ್ತು ಸನಾತನ ಸಾಂಸ್ಕೃತಿಕ ಲೋಕವು ಪ್ರಕೃತಿದತ್ತವಾಗಿ ಬಂದಿದ್ದು ಈ ಪ್ರಕೃತಿಯು ತನ್ನದೇ ಆಶಯಗಳನ್ನು, ವೈಶಿಷ್ಟತೆಯನ್ನು, ಬದುಕಿನ ವಿಸ್ಮಯಗಳನ್ನು ಆಳವಾಗಿಹುದುಗಿಸಿಕೊಂಡಿದೆ. ಮಾನವ ಏನೇ ಕಲ್ಪನೆ ಮಾಡಿಕೊಂಡರೂ, ಅದು ಪ್ರಕೃತಿಕ ಒಂದು ಭಾಗವಾಗಿರುತ್ತದೆ. ಇದನ್ನು ಬಿಂಬಿಸುವ ಈ ಪ್ರಯತ್ನ ಮಾಡಿದ ಇವರು ಜನಪದ ಕುರಿತಾದ ಚಿತ್ರ ಬಿಡಿಸಿದರು.
ಜನಪದ ಚಿತ್ರಗಳು ಪ್ರಾಚೀನ ಪರಂಪರೆಯನ್ನು ಹೊಂದಿದ್ದು ಇಂದಿಗೂ ತನ್ನಲ್ಲಿರುವ ಅನ್ವೇಷಣೆ, ಆಲೋಚನೆ, ಆನಂದ, ಸೌಂದರ್ಯ ಪ್ರಜ್ಞೆಗಳಿಂದ ಗತಕಾಲದ ವೈಭವವನ್ನು ವರ್ತಮಾನದಲ್ಲಿ ನಿಂತು ನೋಡಲು ಒಂದು ವೇದಿಕೆಯನ್ನು ನೀಡುತ್ತದೆ ಎಂಬುದನ್ನು ತಮ್ಮ ಕಲಾಕೃತಿಗಳಲ್ಲಿ ಬಿಂಬಿಸಿದ್ದಾರೆ.ಕಲಾಕೃತಿಗಳು ಅಲಂಕಾರಿಕ ಎಲ್ಲೆಯನ್ನು ಮೀರಿ ಸಾಮಾಜಿಕ ವಿಡಂಬನೆ, ಸಾಮಾಜಿಕ ಪರಿವರ್ತನೆಯ ಮಾಧ್ಯಮಗಳಾಗಿ ಹಾಗೂ ಜ್ಞಾನ ಚಿಂತನೆಗಳಾಗಿ ಬೆಳೆಯಬೇಕೆಂದು ಕೋಟೆಯವರ ಕಲಾಕೃತಿಗಳ ಆಶಯ.
ಇವರ ಬಹುತೇಕ ಕಲಾಕೃತಿಗಳು ವಿಶೇಷವಾಗಿ ಜನಪದ ಶೈಲಿಯ ನವ್ಯ ಕಲಾಕೃತಿಗಳಾಗಿದ್ದು ರೇಖಾ ಪ್ರಧಾನವಾದ ಚಿತ್ರ ಶೈಲಿಯನ್ನು ತನ್ನ ಅನುಕೂಲಕ್ಕೆತಕ್ಕಂತೆ ಬಣ್ಣಗಳ ಸಂಯೋಜನೆಯಿಂದ ಹೊಸ, ಹೊಸ ಸಾಧ್ಯತೆಗಳ ಹುಡುಕಾಟ ಮಾಡಿದ್ದಾರೆ. ಪ್ರಕೃತಿ ಮತ್ತು ಮಾನವ ಸಂಬಂಧಗಳನ್ನು ನೇರವಾಗಿ ನೀಡುವ ಪ್ರಯತ್ನ ಸರಳ ಅಲಂಕಾರವೂ ಭವ್ಯತೆಯನ್ನು ಸೃಷ್ಟಿಸುವಂತೆ ಸಂಯೋಜಿಸಲಾಗಿದೆ. ಹೆಚ್ಚು ಸಮತಲಾಕೃತಿಗಳಾಗಿದ್ದು, ಎರಡು ಆಯಾಮಗಳಲ್ಲಿ ಬಣ್ಣಗಳ ಬಳಕೆ ಮಾಡಲಾಗಿದೆ.
ಇರುವ ಖಾಲಿಜಾಗದಲ್ಲಿ ವಸ್ತು ವಿಷಯಕ್ಕನುಗುಣವಾಗಿ ಹೇಳಬೇಕಿರುವ ಮುಖ್ಯಾಂಶಗಳನ್ನು ಮೊದಲುಮಾಡಿ ಪೂರಕ ವಸ್ತು ವಿಷಯಗಳನ್ನು ಹಿನ್ನಲೆಯಾಗಿ ಬಳಸಿ ಸಾಂಕೇತಿಕ ಸನ್ನಿವೇಶಗಳನ್ನು ಸೃಷ್ಟಿಮಾಡಿ ಮಾನವ ಸಂಬಂಧಗಳು ಆಶಯಗಳನ್ನು ಸಾಂಕೇತಿಕ ಸ್ವರೂಪವನ್ನು ಜನಪದ ಶೈಲಿಗೆ ಹೊಂದುವ ರೇಖಾಲಾಲಿತ್ಯವನ್ನು ಸಮನ್ವಯಗೊಳಿಸುವ ಇವರ ಶೈಲಿ ನನಗೆ ವೈಯುಕ್ತಿಕವಾಗಿ ಬಹಳ ಇಷ್ಟ ಆಗುತ್ತದೆ.
ಕ್ಯಾನ್ವಸ್ ಮೇಲೆ ರೇಖಾ ಸಂಯೋಜನೆ ಆದ ನಂತರ ಆಕ್ರಲಿಕ್ ತೆಳುವರ್ಣಗಳ ಲೇಪಿಸಿ ಬೇಕಾದ ಬಿಳಿಜಾಗವನ್ನು ಹಾಗೆಯೇ ಖಾಲಿ ಕ್ಯಾನ್ವಸ್ ಉಳಿಸಿಕೊಂಡು ನಂತರ ಎರಡು ಆಯಾಮದ ನೆರಳು ಬೆಳಕಿನ ಬಣ್ಣಗಳೊಂದಿಗೆ ಮುಖ್ಯ ಆಕೃತಿಗಳನ್ನು ಪೂರ್ಣಗೊಳಿಸಿಕೊಂಡು ಅದರ ಆಶಯಚಿತ್ರಗಳಿಗೆ ಅದೇ ಬಣ್ಣಗಳ ಬಳಕೆ ಮಾಡಿಕೊಂಡು ಹಿನ್ನೆಲೆ ಮತ್ತು ಮುಖ್ಯ ಆಕೃತಿಗಳಿಗೆ ಸಹಜವಾಗಿ ವಿರುದ್ಧ ಬಣ್ಣಗಳ ಲೇಪನ ಮಾಡಿ . ಉಳಿದ ಖಾಲಿ ಜಾಗ ಅಥವಾ ಹಿನ್ನೆಲೆ ದೃಢೀಕರಿಸುವ ಜಾಗಕ್ಕೆ ದಪ್ಪನಾಗಿ (ಸ್ಪೆಕ್ಟರ್) ಬಳಸಿ ವಿಭಿನ್ನ ಆಯಾಮ ಸೃಷ್ಟಿಸುವ ರೀತಿ ಗಮನ ಸೆಳೆಯಿತು. ಇವರು ಅಕ್ರಲಿಕ್ ಬಣ್ಣಗಳನ್ನು ತೈಲವರ್ಣಗಳಂತೆ ಬಳಸಿಕೊಳ್ಳುವ ಜೊತೆಗೆ ಪೋಸ್ಟರ್ ವರ್ಣಗಳ ರೀತಿ ಹಾಗೂ ಜಲವರ್ಣಗಳ ರೀತಿ ಬಳಕೆ ಮಾಡುತ್ತಾರೆ.ಗ್ರಾಮ ಸಂಸ್ಕೃತಿಯ ಆಳ ಅಧ್ಯಯನದ ಜೊತೆಗೆ ಬೇರೆ ಬೇರೆ ಜನಪದ ಕಲೆಗಳಾದ ತೊಗಲುಗೊಂಬೆ, ಅಚ್ಚೆ, ರಂಗೋಲಿ, ಬೆಳದಿಂಗಳ ಕಲೆ, ಕಸೂತಿ, ಕೌದಿ, ಬೂತಾರಾದನೆ, ಯಕ್ಷಗಾನ, ಭಿತ್ತಿಚಿತ್ರ, ಮುಖವಾಡಗಳು, ಕಿನ್ನಾಳಕಲೆ ಮುಂತಾದ ಪ್ರಾಕರಗಳ ಸಂಕೇತಗಳನ್ನು ತೆಗೆದುಕೊಂಡು ಜನಪದರ ಮೂಲ ಆಶಯ ಮತ್ತು ಅನುಭವಗಳನ್ನು ಸಂಶೋದಿಸಿ ಕ್ರಿಯಾತ್ಮಕ ರೂಪ ಕೊಡುವ ಪ್ರಯತ್ನ ಮಾಡಿದ್ದಾರೆ.
ಇಂತಹ ಅಪ್ರತಿಮ ಬಹುಮುಖ ಪ್ರತಿಭೆಯ ಕೋಟೆ ಕುಮಾರ್ ರವರು ಆರು ವರ್ಷಗಳ ಕಾಲ ನನ್ನ ಸಹೋದ್ಯೋಗಿಯಾಗಿದ್ದರು ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ.ನನ್ನ ಶೈಕ್ಷಣಿಕ, ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಹಾಗೂ ವೈಯಕ್ತಿಕವಾಗಿ ನನಗೆ ಅಮೂಲ್ಯವಾದ ಸಲಹೆ ಮಾರ್ಗದರ್ಶನ ನೀಡಿ ಬೆಂಬಲಿಸಿದ್ದಾರೆ.ಶ್ರೀಯುತರು ಇದೇ ಡಿಸೆಂಬರ್ ತಿಂಗಳ 31 ರಂದು ಸರ್ಕಾರಿ ಕೆಲಸದಿಂದ ವಯೋ ನಿವೃತ್ತಿ ಹೊಂದುತ್ತಿದ್ದಾರೆ.ಇವರಿಗೆ ದೇವರು ಆಯುರಾರೋಗ್ಯ ಐಶ್ವರ್ಯ ಕರುಣಿಸಲಿ ಅವರ ಸಾಹಿತ್ಯ, ಕಲಾ ಸೇವೆ ಮುಂದುವರೆಯಲಿ ಎಂದು ನಾನು ಮನದುಂಬಿ ಹಾರೈಸುವೆ.ನೀವೂ ಕೋಟೆ ಕುಮಾರ್ ರವರಿಗೆ ಹಾರೈಸಲು ಈ ನಂಬರ್ 9886258195
ಸಿಹಿಜೀವಿ ವೆಂಕಟೇಶ್ವರ
ಸಾಹಿತಿಗಳು ಹಾಗೂ ಶಿಕ್ಷಕರು
ತುಮಕೂರು
9900925529.
11 ಡಿಸೆಂಬರ್ 2025
ಗಾಂಧಾರಿ ಕಲೆ ಯಿಂದ ಶಾಲಾ ಕಾಲೇಜುಗಳಲ್ಲಿ ಕಾಪಿ ತಡೆಯಬಹುದು!
ಪರೀಕ್ಷೆಗಳಲ್ಲಿ ಕಾಪಿ ಮಾಡುವುದು ದೊಡ್ಡ ಪಿಡುಗಾಗಿದ್ದು ಕೆಲ ಪರೀಕ್ಷೆಗಳಿಗೆ ಸಿ ಸಿ ಟಿವಿ ಕ್ಯಾಮರಾ ಹಾಕಿ ವೆಬ್ ಕಾಸ್ಟ್ ಮಾಡಿದರೂ ಕೆಲವೆಡ ನಕಲಾಗುತ್ತಿರುವ ಈ ಕಾಲದಲ್ಲಿ ಬಳ್ಳಾರಿಯಲ್ಲಿ ಓರ್ವ ವಿದ್ಯಾರ್ಥಿನಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ಸರ್ವರ ಮೆಚ್ಚುಗೆ ಗಳಿಸಿದ್ದಾಳೆ.
ಹಿಮಾಬಿಂದು ಎಂಬ ಈ ವಿದ್ಯಾರ್ಥಿನಿ
'ಗಾಂಧಾರಿ' ವಿದ್ಯೆ ಕಲಿತು ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ 8ನೇ ತರಗತಿಯ ಎಫ್ಎ 4ರ ಆರು ವಿಷಯ ಗಳ ಪರೀಕ್ಷೆ ಬರೆದು ಗಮನ ಸೆಳೆದಿದ್ದಾಳೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶ, ವಾಸನೆ ಹಾಗೂ ಶಬ್ದದಿಂದಲೇ ವ್ಯಕ್ತಿ ಹಾಗೂ ವಸ್ತುಗಳನ್ನು ಗುರುತಿಸುವ ಅಪರೂಪದ 'ಗಾಂಧಾರಿ ಕಲೆ' ಕರಗತ ಮಾಡಿಕೊಂಡಿರುವುದು ವಿಶೇಷ.
ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ರಾಮಾಂಜಿನಿ ಹಾಗೂ ಕವಿತಾ ದಂಪತಿ ಹಿರಿಯ ಮಗಳು ಹಿಮಾಬಿಂದು, ಪದ್ಮನಾಭ ಗುರೂಜಿ ಆನ್ಲೈನ್ನಲ್ಲಿ ನೀಡಿದ ಪಾಠಗಳ ನೆರವಿನಿಂದ ಈ ವಿದ್ಯೆ ಕಲಿತಿದ್ದಾಳೆ.
"ನನ್ನ ಮಗಳು ನಾಲ್ಕನೇ ತರಗತಿ ಯಲ್ಲಿದ್ದಾಗ ಕಲಿಕೆಯಲ್ಲಿ ಬಹಳ ಹಿಂದುಳಿದಿದ್ದಳು. ಗಾಂಧಾರಿ ವಿದ್ಯೆ ಕಲಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಸದಾ ಕ್ರಿಯಾಶೀಲರಾಗಿ ಇರುತ್ತಾರೆ ಎನ್ನುವ ಸ್ನೇಹಿತರ ಸಲಹೆ ಮೇರೆಗೆ ಈ ವಿದ್ಯೆ ಕಲಿಸಿದೆ. ಈ ಪ್ರಯೋಗದ ನಂತರ ಕ್ಲಾಸ್ಗೆ ಪ್ರಥಮ ಸ್ಥಾನದಲ್ಲಿ ಬರುತ್ತಿದ್ದಾಳೆ,'' ಎಂದು ಆ ವಿದ್ಯಾರ್ಥಿನಿಯ ತಂದೆ ರಾಮಾಂಜಿನಿ ರೆಡ್ಡಿ ಸಂತಸ ಹಂಚಿಕೊಂಡಿದ್ದಾರೆ.
ಎಲ್ಲಾ ಸ್ತರಗಳ ಪರೀಕ್ಷೆಯಲ್ಲಿ ಇಂತಹ ಗಾಂಧಾರಿ ವಿದ್ಯೆ ಅಳವಡಿಸಿದರೆ ಹೇಗೆ? ಸಿ ಸಿ ಟಿ ವಿ ಪರೀಕ್ಷಾ ಸಿಬ್ಬಂದಿ ಇತರೆ ಖರ್ಚನ್ನು ಉಳಿಸಬಹುದೇ? ಈ ವಿಷಯದ ಬಗ್ಗೆ ಚರ್ಚೆ ಅಗತ್ಯವಿದೆ.ನೀವೇನಂತೀರಿ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು







