02 ಜನವರಿ 2026

ವಾರ್ಷಿಕ ಹಿ(ಮು)ನ್ನೋಟ


 


ವಾರ್ಷಿಕ ಹಿ(ಮು)ನ್ನೋಟ


ಕಳೆದ ವರ್ಷ ಹತ್ತಾರು ಸಂಕಲ್ಪ ಮಾಡಿಕೊಂಡು ಅವುಗಳನ್ನು ಈಡೇರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದೆ.ಅದರಲ್ಲಿ ‌ಕೆಲವು ಈಡೇರಿ ಕೆಲವು ಹಾಗೆಯೇ ಉಳಿದವು.ಕಳೆದ ಕ್ಯಾಲೆಂಡರ್ ವರ್ಷದ ಬಗ್ಗೆ ಸಿಂಹಾವಲೋಕನ ಮಾಡುವ ಪ್ರಯತ್ನ ಮಾಡುವೆ.
ಇದು ಈ ವರ್ಷ ಹೇಗಿರಬೇಕು ಎಂದು ಯೋಜಿಸಿ ಜೀವಿಸಲು ಅನುಕೂಲವಾದೀತೆಂಬುದು‌ ನನ್ನ ಭಾವನೆ.

ವೃತ್ತಿ: ಕಳೆದ ವರ್ಷ ನನ್ನ ಶಾಲೆಯ ನಾಲ್ಕು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜ್ಞಾನ ಉಣಬಡಿಸುವ ಕಾರ್ಯದ ಜೊತೆಯಲ್ಲಿ ಅವರಲ್ಲಿರುವ ಇತರೆ ಕೌಶಲಗಳನ್ನು ಮತ್ತು ಪ್ರತಿಭೆಯನ್ನು ಹೊರತರುವ ಕಾಯಕವನ್ನು ಮಾಡಿರುವುದು ಆತ್ಮ ತೃಪ್ತಿ ನೀಡಿದೆ.

ಪುಸ್ತಕ ಓದು ಬರಹ: ಕಳೆದ ಐದಾರು ವರ್ಷಗಳಿಗೆ ಹೋಲಿಕೆ ಮಾಡಿಕೊಂಡರೆ ಈ ಬಾರಿ ಹದಿನೈದು ಪುಸ್ತಕ ಮಾತ್ರ ಓದಿರುವೆ.ಪುಸ್ತಕ ಪ್ರಕಟಣೆಯನ್ನು ಗಮನಿಸುವುದಾದರೆ ಈ ಬಾರಿ ನನ್ನ ಮೂರು ಪುಸ್ತಕಗಳು ಲೋಕಾರ್ಪಣೆಯಾದವು."ಸಿಹಿಜೀವಿ ಕಂಡ ಅಂಡಮಾನ್ " ಪ್ರವಾಸ ಕಥನವನ್ನು ಕಾರ್ಕಳದ ಪುಸ್ತಕ ಮನೆ ಪ್ರಕಟಿಸಿ ಅಮೋಘವಾಗಿ ಬಿಡುಗಡೆ ಕಾರ್ಯಕ್ರಮ ಮಾಡಿ ನನ್ನ ಸನ್ಮಾನಿಸಿದ್ದು ಮರೆಯಲಾಗದ ಘಟನೆ.ಮತ್ತೊಂದು ಪುಸ್ತಕ " "ಮಕ್ಕಳಿಗಾಗಿ ಮಹಾತ್ಮರ ಮಾತುಗಳು " ಪುಸ್ತಕವನ್ನು ನುಡಿತೋರಣ ಬಂಧುಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದು ಸಂತಸ ನೀಡಿತು. ಮತ್ತೊಂದು ಪುಸ್ತಕ "ಐತಿಹಾಸಿಕ ತಾಣಗಳು" ಪ್ರಿಂಟ್ ಆಗಿ ಮನೆ ಸೇರಿದೆ. ಈ ವರ್ಷ ಹೆಚ್ಚು ಪುಸ್ತಕಗಳನ್ನು ಓದಲು ಹಾಗೂ ಇನ್ನೂ ಉತ್ತಮ ‌ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಲು ಸಂಕಲ್ಪ ಮಾಡಿರುವೆ.


ಸಮಾಜದೊಂದಿಗೆ ನಾನು: ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಸನಾತನ ವಾಣಿಯನ್ನು ಬಲವಾಗಿ ನಂಬಿರುವ ನಾನು ಕಳೆದ ವರ್ಷದಿಂದ ಸಮಾಜಮುಖಿ ಕಾರ್ಯ ಮಾಡಲು ಆರಂಭಿಸಿರುವೆ.ಕೊಡುವುದರಲ್ಲಿ ಇರುವ ಸುಖ ನೆಮ್ಮದಿ ಅನುಭವಿಸಲಾರಂಬಿಸಿರುವೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈ ಗೆ ಗೊತ್ತಾಗಬಾರದು ಎಂಬ ಮಾತಿನಂತೆ ನಾನು ಕೊಟ್ಟ ಬಗ್ಗೆ ವಿವರ ನೀಡದಿರಲು ತೀರ್ಮಾನ ಮಾಡಿರುವೆ.ಈ ವರ್ಷವೂ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಸಂಕಲ್ಪ ಮಾಡಿರುವೆ.

ಪುರಸ್ಕಾರ: ಕಳೆದ ವರ್ಷ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನನ್ನ ಶಿಕ್ಷಣ ಮತ್ತು ಸಾಹಿತ್ಯದ ಸೇವೆ ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದ್ದು ನನ್ನ ಜೀವನದ ಮತ್ತೊಂದು ಅವಿಸ್ಮರಣೀಯ ದಿನ.

ಪತ್ರಿಕೆಯಲ್ಲಿ ಬರಹ : ಹವ್ಯಾಸವಾಗಿ ಆರಂಭವಾದ ನನ್ನ ಬರಹ ಇಂದು ಪತ್ರಿಕೆಗಳಲ್ಲಿ ಅಂಕಣ ಬರಹವಾಗಿ ಪ್ರಕಟವಾಗುತ್ತಿರುವುದಯ ಖುಷಿಯ ವಿಷಯ. ಗೌರವ ಸಂಭಾವನೆ ನೀಡಿ ನನ್ನ ಬರಹಗಳನ್ನು ಪ್ರಕಟಿಸುವ ಎಲ್ಲಾ ಪತ್ರಿಕೆಗಳಿಗೆ ನಾನು ನಮನ ಸಲ್ಲುಸಲೇಬೇಕು.ಈ ವರ್ಷವೂ ಪತ್ರಿಕೆಯಲ್ಲಿ ಬರೆಯುವ ಕಾಯಕ ಮುಂದುವೆರೆಸುವೆ.

ಗಾಯನ: ಹವ್ಯಾಸ ಕ್ಕೆ ಹಾಡುವ ನಾನು ನಮ್ಮ ಶಾಲೆಯಲ್ಲಿ ನಮ್ಮ ಮಕ್ಕಳ ಮುಂದೆ ಹಾಡಿ ಖುಷಿ ಪಡುತ್ತಿದ್ದೆ.ಈಗ ಕೆಲ ಸಮಾರಂಭಗಳಲ್ಲಿ ಹಾಡಿದಾಗ ಕೇಳುಗರು ಮೆಚ್ಚುಗೆಯಿಂದ ತಟ್ಟುವ ಚಪ್ಪಾಳೆ ಇನ್ನೂ ಹಾಡಲು ಪ್ರೇರಣೆ ನೀಡಿವೆ.

ನಾಟಕ: ಹವ್ಯಾಸಿ ನಾಟಕ ಕಲಾವಿದನಾಗಿ ಕಳೆಸ ವರ್ಷ ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಯ ಸಮಯದಲ್ಲಿ ಗುಬ್ಬಿ ವೀರಣ್ಣ ಶಿಕ್ಷಣ ಕಲಾ ತಂಡದೊಂದಿಗೆ ಗೌತಮ ಬುದ್ಧ ನಾಟಕದಲ್ಲಿ ಅಭಿನಯಿಸಿದ್ದು ಖುಷಿ ನೀಡಿತು.ಉಡುಪಿಯಲ್ಲಿ ನಡೆಸ ರಾಜ್ಯ ಮಟ್ಟದ ‌ನಾಟಕ ಸ್ಪರ್ಧೆಯಲ್ಲಿ ಭಾಗವಿಸಿದ ನಮ್ಮ ತಂಡ ಅತ್ಯುತ್ತಮ ಶಿಸ್ತಿನ ತಂಡ ಎಂಬ ಬಹುಮಾನ ಪಡೆದದ್ದು ಮತ್ತೊಂದು ಸಾರ್ಥಕ ಕ್ಷಣ.ಈ ಬಾರಿಯೂ ಅಭಿನಯ ಮುಂದುವರೆಯಲಿದೆ.

ಪ್ತವಾಸ: ಕಳೆದ ಎರಡು ವರ್ಷಗಳಲ್ಲಿ ಕನಿಷ್ಟ ಹತ್ತು ದಿನದ ಪ್ರವಾಸ ಮಾಡಿದ ನಾನು ಈ ವರ್ಷ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರೂ ಸರ್ಕಾರದ ಗಣತಿ ಕಾರ್ಯಕ್ಲೆ ನಿಯೋಜನೆ ಗೊಂಡು ಕರ್ತವ್ಯ ಮಾಡಿದ ಪರಿಣಾಮವಾಗಿ ಪ್ರವಾಸ ಹೋಗಲಾಗಲಿಲ್ಲ.ಆದರೆ ಈ ಸಮಯದಲ್ಲಿ ವಿವಿಧ ಸಮಾಜೋ ಆರ್ಥಿಕ ಹಿನ್ನೆಲೆಯ ಕುಟುಂಬಗಳ ಭೇಟಿಯು ವಿಶೇಷವಾದ ಅನುಭವಗಳನ್ನು ನೀಡಿತು.ಈ ಬಾರಿ ವಿಶೇಷವಾದ ಪ್ರವಾಸ ಮಾಡಲು ಯೋಜಿಸಿರುವೆ.

  ಯೂಟ್ಯೂಬರ್: ಪ್ರತಿ ವರ್ಷ ಏನಾದರೂ ಹೊಸ ಕೌಶಲಗಳನ್ನು ಕಲಿಯಲು ಹಾತೊರೆಯುವ ನಾನು ಕಳೆದ ಏಪ್ರಿಲ್ ನಲ್ಲಿ ಸಿಹಿಜೀವಿಯ ಪಯಣ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದೆ ಕೇವಲ ಎಂಟು ತಿಂಗಳಲ್ಲಿ950 ಸಬ್ ಸ್ಕ್ರೈಬರ್ ಗಳು ನನ್ನ ಚಾನೆಲ್ ನ ಚಂದಾದಾರರಾಗಿರುವರು ಎಂದು ಹೆಮ್ಮೆಯಿಂದ ಹೇಳುವೆ.ನಾನು ಪ್ರವಾಸ ಮಾಡಿದ ಸ್ಥಳಗಳನ್ನು ತೋರಿಸುವ ಪ್ರಯತ್ನ ಮುಂದುವರೆದಿದೆ.ಇದುವರೆಗೆ250 ಕ್ಕೂ ಹೆಚ್ಚು ವೀಡಿಯೋ ಅಪ್ಲೋಡ್ ಮಾಡಿರುವೆ. ಕಡಿಮೆ  4 ಲಕ್ಷ ವೀಕ್ಷಣೆ ಕಂಡಿರುವುದು ಸಂತಸ ನೀಡಿದೆ.ಈ ವರ್ಷವೂ ಸಿಹಿಜೀವಿಯ ಪಯಣ ಮುಂದುವರೆಯಲಿದೆ.


ತುಸು ಬೇಸರದ ಸಂಗತಿಗಳು: ಅಮ್ಮನ ಅನಾರೋಗ್ಯ, ಆತ್ಮೀಯರ ಅಕಾಲಿಕ ನಿರ್ಗಮನ, ಸಮಾಜದಲ್ಲಿರುವ ಕೆಲ ಸ್ವಾರ್ಥಿಗಳ ನಡೆಗಳು,ಕಾಲೆಳೆಯುವ ನೀಚ ಮನಗಳನ್ನು‌ ಕಂಡಾಗ ಬೇಸರವಾಗುತ್ತದೆ.

ಏಳು ಬೀಳು ,ನೋವು ನಲಿವು ಜೀವನದ ಅವಿಭಾಜ್ಯ ಅಂಗ ಈ ಬಾರಿ ಅವುಗಳನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ದರಾಗೋಣ.ಮತ್ತೊಮ್ಮೆ ‌ನಿಮಗೆ ಹೊಸ ಕ್ಯಾಲೆಂಡರ್ ನ ವರ್ಷದ ಶುಭಾಶಯಗಳು🌷


ನಿಮ್ಮ

ಸಿಹಿಜೀವಿ ವೆಂಕಟೇಶ್ವರ..


















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ