18 ಅಕ್ಟೋಬರ್ 2025

ದೀಪ..


 ದೀಪ..


ಹಣ ಅಂತಸ್ತು ನೋಡುತಾ
ಮಾಡದಿರು ಎಂದಿಗೂ ತರತಮ|
ದೀಪವ ನೋಡಿ ಕಲಿ ಅದು
ಓಡಿಸುವುದು ದೀನ ದಲಿತರ
ಮನೆ ಮನಗಳ  ತಮ||

ಸಿಹಿಜೀವಿ ವೆಂಕಟೇಶ್ವರ

17 ಅಕ್ಟೋಬರ್ 2025

ಹೇಳಿಕೊಳ್ಳುವಂತಹ ಸಿನಿಮಾ "ಏಳು ಮಲೆ"




ಹೇಳಿಕೊಳ್ಳುವಂತಹ ಸಿನಿಮಾ "ಏಳು ಮಲೆ"

ಅನಿವಾರ್ಯ ಕಾರಣದಿಂದ ಥಿಯೇಟರ್ ನಲ್ಲಿ ಏಳುಮಲೆ ಸಿನಿಮಾ ನೋಡಲಾಗಿರಲಿಲ್ಲ.ಇಂದು ಓಟಿಟಿ ಯಲ್ಲಿ ನೋಡಿದೆ.ಬಹಳ ಅಚ್ಚುಕಟ್ಟಾಗಿ ಚಿತ್ರಕತೆ ಬರೆದು ನಿರ್ದೇಶನ ಮಾಡಿದ ಪುನಿತ್ ರಂಗಸ್ವಾಮಿಯವರು ಕನ್ನಡ ಚಿತ್ರ ರಂಗಕ್ಕೆ ಸಿಕ್ಕ ಮತ್ತೊಬ್ಬ ಭರವಸೆಯ ನಿರ್ದೇಶಕ ಎಂದೆನಿಸಿತು.ಇಂತಹ ಹೊಸಬರನ್ನು ಪ್ರೋತ್ಸಾಹ ಮಾಡಿ ತೆರೆಮರೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿದ ಕ್ರಿಯೇಟಿವ್ ಹೆಡ್ ಕಂ ನಿರ್ಮಾಪಕರಾದ ತರುಣ್ ಕಿಶೋರ್ ಸುಧೀರ್ ಮುಂದೆಯೂ ಇಂತಹ ಸಿನಿಮಾ ನೀಡಲೆಂದು ಆಶಿಸುವೆ.
ಕಥೆಯೇನೂ ಹೊಸದಲ್ಲ.ಅದೇ ಮೇಲ್ವರ್ಗದ ಹುಡುಗಿ ಬಡ ಹುಡುಗ, ಬೇರೆ ಭಾಷೆ, ನಾಡಿನ ಪ್ರೇಮಿಗಳ ಕಥೆ.ಮನೆಯವರ ವಿರೋಧ ಪ್ರೇಮಿಗಳ ಹೋರಾಟ.ಆದರೆ ಆ ಕಥೆಯನ್ನು ನಿರೂಪಿಸಿರುವ ರೀತಿ ಬಹಳ ಚೆನ್ನಾಗಿದೆ.ಆರಂಭದಲ್ಲಿ ಮನೆಯಲ್ಲಿ ಆರಾಮಾಗಿ ಮಲಗಿಕೊಂಡು ಸಿನಿಮಾ ನೋಡುತ್ತಿದ್ದ ನಾನು ಅರ್ಧ ಸಿನಿಮಾ ಆದಾಗ ನನಗರಿವಿಲ್ಲದೇ ಎದ್ದು ಕೂತಿದ್ದೆ. ಪ್ರತಿ ಹತ್ತು ನಿಮಿಷಕ್ಕೊಂದು ಟ್ವಿಸ್ಟ್ ಗಳು  ಉಸಿರು ಬಿಗಿ ಹಿಡಿದು ಸಿನಿಮಾ ನೋಡುವಂತೆ ಮಾಡಿದವು.ಕೊನೆಯ ಶಾಟ್ ನಲ್ಲೂ ಏನೋ ಟ್ವಿಸ್ಟ್ ಇದೆ ಅಂತ ಊಹೆ ಮಾಡುವಾಗಲೇ ಟೈಟಲ್ ಕಾರ್ಡ್ ಬಂತು.ಅಂದರೆ ಪಾರ್ಟ್ ಟೂ   ಬರಬಹುದು ಎಂದು ನನ್ನ ನಿರೀಕ್ಷೆ.


ಮೊದಲ ಸಿನಿಮಾಗಿಂತ ಈ ಸಿನಿಮಾದಲ್ಲಿ ಡಿ ಗ್ಲಾಮ್ ಪಾತ್ರದಲ್ಲಿ ರಾಣಾ ನಟನೆಯಲ್ಲಿ ಪಳಗಿದ್ದಾರೆ. ಕಷ್ಟ ಕಾಲದಲ್ಲಿ ಪ್ರೇಮಿಯ ಸೇರುವ ಅವರ ಕಾತುರದ ಅಭಿನಯ ನೋಡಿದ ನೋಡುಗರು ಜಗ್ಗಪ್ಪ, ಮತ್ತು ಕಿಶೋರ್ ಅವರನ್ನು ಬೈಯ್ದುಕೊಳ್ಳುವ ರೇಂಜ್ ಗೆ ಅಭಿನಯ ಮಾಡಿದ್ದಾರೆ. ಎಂದಿನಂತೆ ಕಿಶೋರ್ ತಮ್ಮ ಅಭಿನಯದ ಮೂಲಕ ನೆಗೆಟಿವ್ ಶೇಡ್ ನ ಪೋಲಿಸ್ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅನುಭವಸ್ಥ ಹೆಡ್ ಕಾನ್ಸ್‌ಟೇಬಲ್ ಆಗಿ ನಾಗಾಭರಣ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ತೆಲುಗಿನ ಜಗಪತಿ ಬಾಬು ಕೆಲವೇ ದೃಶ್ಯಗಳಲ್ಲಿ ಬಂದರೂ ಅವರ ಅಭಿನಯ ಸೂಪರ್. ಚಿತ್ರದ ನಡುವೆ ಕಾಡುಗಳ್ಳ ವೀರಪ್ಪನ್ ಹತನಾಗುವ ದೃಶ್ಯಗಳನ್ನು ಬ್ಲೆಂಡ್ ಮಾಡಿರುವುದು ವರ್ಕ್ ಔಟ್ ಆಗಿದೆ.  ಸಿನಿಮಾದ ಗೆಲುವಿನಲ್ಲಿ ಛಾಯಾಗ್ರಾಹಕ ಅದ್ವೈತ ಗುರು ಮೂರ್ತಿ ಕೊಡುಗೆ ಮರೆಯಲಾಗದು.ಡಿ ಇಮ್ಮಾನ್ ರವರ ಹಾಡುಗಳು ಸಂದರ್ಭಕ್ಕೆ ತಕ್ಕಂತೆ ಹೊಂದಿಕೆಯಾಗಿವೆ.ಹಿನ್ನೆಲೆಯಲ್ಲಿ ಅವರು ನೀಡಿದ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.
ಒಟ್ಟಾರೆ ಕುಟುಂಬ ಸಮೇತ ನೋಡಬಹುದಾದ ಚಿತ್ರ ಏಳುಮಲೆ.ನೀವು ನನ್ನ ಹಾಗೆ ಥಿಯೇಟರ್ ನಲ್ಲಿ ಚಿತ್ರ ಮಿಸ್ ಮಾಡಿಕೊಂಡಿದ್ದರೆ.ಜೀ5ನಲ್ಲಿ ನೋಡಿ..

ಸಿಹಿಜೀವಿ ವೆಂಕಟೇಶ್ವರ.
ತುಮಕೂರು


 

26 ಸೆಪ್ಟೆಂಬರ್ 2025

ನನ್ನ ಅಕೌಂಟ್ ನಲ್ಲಿ ಒಂದು ಪೈಸೇನೂ ಇರಬಾರದು!


 ನನ್ನ ಅಕೌಂಟ್ ನಲ್ಲಿ ಒಂದು ಪೈಸೇನೂ ಇರಬಾರದು!



ಎಸ್ ಎಲ್ ಬೈರಪ್ಪನವರು ಓರ್ವ ಶ್ರೇಷ್ಠ ಕಾದಂಬರಿಕಾರ ಎಂಬುದು ಎಷ್ಟು ಸತ್ಯವೋ ಅವರೊಬ್ಬ ದಾರ್ಶನಿಕ, ಸಂಸ್ಕೃತಿ ಪರಿಚಾರಕ, ನೇರ ನಡೆ ನುಡಿಯ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬಾಳಿದ ಮಹಾನ್ ಚೇತನ ಎಂಬುದು ಅಷ್ಟೇ ಸತ್ಯ.
ಭೈರಪ್ಪ ರವರ ಬಹುತೇಕ ಕೃತಿಗಳನ್ನು ಓದಿರುವೆ.ಕೆಲವನ್ನು ಮತ್ತೆ ಮತ್ತೆ ಓದಿದ್ದೇನೆ. ಕೆಲ ಕೃತಿಗಳ ಬಗ್ಗೆ ನನ್ನ ಲಿಖಿತ ಅಭಿಪ್ರಾಯಗಳನ್ನು ಬರೆದು ಪತ್ರಿಕೆ ಮತ್ತು ಪುಸ್ತಕಗಳಲ್ಲೂ ಪ್ರಕಟಿಸಿರುವೆ.
ಬೈರಪ್ಪ ರವರ ನಿಷ್ಠುರವಾದ ಮಾತುಗಳು ನನ್ನ ಗಮನ ಸೆಳೆದವು.  ಇತರರು ಏನೆಂದು ಕೊಂಡಾರು ಎಂದು ಯೋಚಿಸದೇ ಆನೆ ನಡೆದದ್ದೇ ದಾರಿ ಎಂದು ಬದುಕಿ ತೋರಿಸಿದರು.
ಇತ್ತೀಚಿನ ದಿನಗಳಲ್ಲಿ ಅವರೊಂದು ಹೇಳಿಕೆ ನೀಡಿದರು."ನಾನು ಸಾಯೋವಾಗ ನನ್ನ ಅಕೌಂಟ್ ನಲ್ಲಿ ಒಂದು ಪೈಸೆಯೂ‌ ಇರಬಾರದು ಎಲ್ಲವನ್ನೂ ಫ್ಲಷ್  ಮಾಡಿಬಿಡಬೇಕು" ಈ ಮಾತು ಕೇಳಿ ಭೈರಪ್ಪನವರ ಬಗ್ಗೆ ಇದ್ದ ಅಭಿಮಾನ ನೂರ್ಮಡಿಯಾಯಿತು. ಹೌದು ಅದರಂತೆ ನಡೆದು ತೋರಿಸಿದರು. ಅವರ ಇದುವರೆಗಿನ ಸಂಪಾದನೆ ಮತ್ತು ಮುಂದೆ ಅವರ ಪುಸ್ತಕಗಳಿಂದ ಬರುವ ರಾಯಲ್ಟಿ ಹಣವನ್ನು ಒಂದು ಟ್ರಸ್ಟ್ ಗೆ  ವರ್ಗಾಯಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗವಾಗಲು ಕ್ರಮ ಕೈಗೊಂಡಿದ್ದಾರೆ. ತನ್ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಅನವಶ್ಯಕವಾಗಿ ಎಸ್ ಎಲ್ ಬಿ ಯವರನ್ನು ಟೀಕಿಸುವ ಪೂರ್ವಾಗ್ರಹ ಪೀಡಿತರೂ ಸಹ ಇವರ ಇಂತಹ ಜನೋಪಯೋಗಿ ನಡೆಗಳನ್ನು ಕಂಡು ಬಾಯಿ ಮುಚ್ಚಿಕೊಂಡು ಮೆಚ್ಚುಗೆ ಸೂಚಿಸಿದ ಪ್ರಸಂಗಗಳಿವೆ.
ಡಾಲರ್ ಗಟ್ಟಲೆ ಸಂಪಾದಿಸಿ ಐಶಾರಾಮಿ ಜೀವನ ನಡೆಸಲು ಉನ್ನತ ಹುದ್ದೆಗೆ ಏರಲು ಅವಕಾಶಗಳಿದ್ದರೂ ನಯವಾಗಿ ನಿರಾಕರಿಸಿ ಲಕ್ಷ್ಮಿಯ ಹಿಂದೆ ಹೋಗದೇ  ಸರಸ್ವತಿ ಸೇವೆಯನ್ನು ಮಾಡಿದ್ದಕ್ಕಾಗಿ ಕರ್ನಾಟಕಕ್ಕೆ ಮೊದಲ‌ "ಸರಸ್ವತಿ ಸಮ್ಮಾನ್" ಹುಡುಕಿಕೊಂಡು ಬಂತು. ನಾನೂ ಬಾಲ್ಯದಲ್ಲಿ ಹಲವು ಸಂಕಷ್ಟಗಳನ್ನು ಅನುಭವಿಸಿದರೂ ಬೈರಪ್ಪರವರ ಬಾಲ್ಯದ ಕಷ್ಟಗಳ ಮುಂದೆ ನನ್ನದೇನೂ ಅಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವೆ.ಆನಂದಸ್ವಾಮಿಯವರ ಪುಸ್ತಕಗಳು, ಅವರ ಫಿಲಾಸಫಿ ಗುರುಗಳಾದ ಯಮುನಾಚಾರ್ಯ ರವರು ಅವರ ಮೇಲೆ ಬಹು ಪ್ರಭಾವ ಬೀರಿದ ವ್ಯಕ್ತಿತ್ವಗಳು ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು.ಇದರ ಜೊತೆಯಲ್ಲಿ ಅವರ ದೇಶ ಸುತ್ತುವ, ಕೋಶ ಓದುವ, ಸಾಮಾನ್ಯ ಜನರೊಂದಿಗೆ ಬೆರಯುವ, ಕ್ಷೇತ್ರಕಾರ್ಯವನ್ನು ಮಾಡಿ ಅನುಭವದ ಮೂಲಕ ಬರೆಯುತ್ತಿದ್ದ ರೀತಿಗೆ ಇಂದು ನಮ್ಮ ಮುಂದೆ ಕ್ಲಾಸಿಕ್ ಕೃತಿಗಳಿವೆ.ನಮ್ಮ ದೇಶದ ಬೇರೆ ಭಾಷೆಗಳು, ಅಷ್ಟೇ ಏಕೆ ವಿದೇಶಿ ಭಾಷೆಗಳಿಗೂ ಅವರ ಕೃತಿಗಳು ಅನುವಾದಗೊಂಡು ಈಗಲೂ ಅವರ ಕೃತಿಗಳನ್ನು ಓದುತ್ತಿದ್ದಾರೆ.ಆ ಮೂಲಕ ಭೈರಪ್ಪನವರು ಚಿರಂಜೀವಿಯಾಗಿರುತ್ತಾರೆ.
ಭೈರಪ್ಪನವರ ಮತ್ತೊಂದು ಮಾತನ್ನು ನಾನು ಆಗಾಗ್ಗೆ ಜ್ಞಾಪಿಸಿಕೊಂಡು ನನಗೆ ನಾನೇ ಎಚ್ಚರಿಸಿಕೊಳ್ಳುತ್ತೇನೆ. ಅದೇನೆಂದರೆ "ಊರ ದೇವರು ಊರಾಡಿದಷ್ಟೂ ಮೂಲ ವಿಗ್ರಹಕ್ಕೆ ಬೆಲೆ ಕಡಿಮೆ ಆಗುತ್ತದೆ" ನಮ್ಮಲ್ಲಿ ಬಹಳ ಜನ ನಮ್ಮ ನೈಜ ಸಾಹಿತ್ಯ ಶಕ್ತಿಯನ್ನು ಹೊರತರುವ ಬದಲಿಗೆ ಅಲ್ಪ ಬರೆದು ಅದನ್ನೇ ವಿಜೃಂಭಿಸುವ ಮತ್ತು ಸೆಲಬ್ರೇಟ್ ಮಾಡಿಕೊಂಡು  ಸೆಲೆಬ್ರಿಟಿಯಾಗಿ ಸ್ವಯಂ ಬಿಂಬಿಸಿಕೊಳ್ಳುವವರಿಗೆ ಅವರ ಮಾತುಗಳು ನೆನಪಾಗಬೇಕು.
  ಭಾರತೀಯ ತತ್ತ್ವಶಾಸ್ತ್ರದಲ್ಲಿ ಬರುವ   ಮತ್ತೊಂದನ್ನು ಅವರು ಆಗಾಗ್ಗೆ ಹೇಳುತ್ತಿದ್ದ ಮಾತು ನನಗೆ ಪದೇ ಪದೇ ನೆನಪಾಗುತ್ತದೆ.ಅದು" The lower value should always  serve the higher, the higher is always valuable than lower "

ಸಮಾಜದಲ್ಲಿ ಮೌಲ್ಯಗಳ ಅಧಃಪತನವಾಗುತ್ತಿರುವ ಈ ಕಾಲಘಟ್ಟದಲ್ಲಿ ಭೈರಪ್ಪನವರ ಜೀವನವು ನಮಗೆ ಪ್ರೇರಣೆಯಾಗಲಿ.

ಸಿಹಿಜೀವಿ ವೆಂಕಟೇಶ್ವರ.

16 ಸೆಪ್ಟೆಂಬರ್ 2025

ಇಂದು ಓಜೋನ್ ದಿನ .


 ಪ್ರತಿವರ್ಷ ಸೆಪ್ಟೆಂಬರ್ 16ರಂದು ವಿಶ್ವ ಓಜೋನ್ ದಿನವನ್ನು ಆಚರಿಸಲಾಗುತ್ತದೆ.

ಓಜೋನ್ ಒಂದು ಅನಿಲ (Gas). ಇದರ ರಾಸಾಯನಿಕ ಸೂತ್ರ O₃ ಅಂದರೆ    ಮೂರು ಆಮ್ಲಜನಕ ಅಣುಗಳು!

ಬಣ್ಣವಿಲ್ಲದ, ಆದರೆ ಸ್ವಲ್ಪ “ಹುರಿ” ವಾಸನೆಯಿರುವ ಅನಿಲ.

ಇದು ವಾತಾವರಣದಲ್ಲಿ ಸಹಜವಾಗಿ ಉಂಟಾಗುತ್ತದೆ.


ಭೂಮಿಯ ವಾತಾವರಣದ ಸ್ಟ್ರಾಟೋಸ್ಫಿಯರ್ (Stratosphere) ಭಾಗದಲ್ಲಿ (ಸುಮಾರು 10–50 ಕಿಮೀ ಎತ್ತರದಲ್ಲಿ) ಓಜೋನ್ ಹೆಚ್ಚು ಸಾಂದ್ರತೆಯಲ್ಲಿ ಇರುತ್ತದೆ.

ಈ ಪದರವನ್ನು ಓಜೋನ್ ಪದರ (Ozone Layer) ಎಂದು ಕರೆಯಲಾಗುತ್ತದೆ.

ಇದು ಸೂರ್ಯನಿಂದ ಬರುವ ಅಲ್ಟ್ರಾ ವೈಲೆಟ್ (UV) ಕಿರಣಗಳನ್ನು ಶೋಷಿಸುತ್ತದೆ, ಭೂಮಿಯ ಜೀವಿಗಳಿಗೆ ರಕ್ಷಣೆ ನೀಡುತ್ತದೆ  ಕುಡಿಯುವ ನೀರಿನ ಸ್ವಚ್ಛತೆಗೆ ಓಜೋನ್ ಬಳಸಲಾಗುತ್ತದೆ. ಗಾಳಿ ಮತ್ತು ವಸ್ತುಗಳನ್ನು ಹಾನಿಕಾರಕ ಜೀವಾಣುಗಳಿಂದ ಮುಕ್ತಗೊಳಿಸಲು ಸಹ ಓಜೋನ್ ಉಪಯುಕ್ತ.


ಕೈಗಾರಿಕೆಯಲ್ಲಿ ಬಳಸುವ CFCs (Chlorofluorocarbons), ಏರ್‌ಕಂಡಿಷನರ್, ಫ್ರಿಜ್ ಗ್ಯಾಸ್‌ಗಳು, ಸ್ಪ್ರೆಗಳಲ್ಲಿ ಬಳಸುವ ರಾಸಾಯನಿಕಗಳು ಓಜೋನ್ ಪದರವನ್ನು ಹಾನಿಗೊಳಿಸುತ್ತವೆ.


ನಮ್ಮ ಓಜೋನ್ ಪದರ ರಕ್ಷಿಸೋಣ ತನ್ಮೂಲಕ ನಮ್ಮ ರಕ್ಷಣೆ ಮಾಡಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

11 ಸೆಪ್ಟೆಂಬರ್ 2025

ಕುಲದೀಪ.


 


ಕುಲದೀಪ..

ಭಾರತದ ವಿರುದ್ಧ ಯು ಎ ಇ
ಹೀನಾಯವಾಗಿ ಸೋತರು ಪಾಪ!
ಇದಕ್ಕೆ ಪ್ರಮುಖ ಕಾರಣ
ನಮ್ಮ ಸ್ಪಿನ್ ಬೌಲರ್  ಕುಲದೀಪ!!

ಸಿಹಿಜೀವಿ ವೆಂಕಟೇಶ್ವರ
ತುಮಕೂರು
KuldeepYadav #AsiaCupCricket #TeamIndia #ICC #BCCI #CricketHighlights #CricketLovers #IndiaWins #SpinMaster #CricketFans #Cupphaven #CrickerLife #IndianCricket #SportingMoments #BCCI2023 #AsiaCup2023 #FoundationOfWinners #CricketPassion #KuldeepMagic #Champions