ಚುಟುಕು
*ಜೀವನ ನಿತ್ಯ ನೂತನ*
ಶಾಶ್ವತವಲ್ಲ ಬಡತನ,ಸಿರಿತನ
ಬೆಳಗಲಿ ಸದಾ ಒಳ್ಳೆಯತನ
ನಮ್ಮ ಜೀವನ ನಿತ್ಯನೂತನ
ಇದನ್ನರಿತು ಬಾಳಲಿ ಸಕಲಜನ
*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಚುಟುಕು
*ಜೀವನ ನಿತ್ಯ ನೂತನ*
ಶಾಶ್ವತವಲ್ಲ ಬಡತನ,ಸಿರಿತನ
ಬೆಳಗಲಿ ಸದಾ ಒಳ್ಳೆಯತನ
ನಮ್ಮ ಜೀವನ ನಿತ್ಯನೂತನ
ಇದನ್ನರಿತು ಬಾಳಲಿ ಸಕಲಜನ
*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
ಸಿಹಿಜೀವಿಯ ನಾಲ್ಕು ಹನಿಗಳು
೧
ಕಾಯಕ
ಶ್ರದ್ಧೆಯಿಂದ ಕೆಲಸ ಮಾಡಿದರೆ
ನಿಜವಾಗಿಯೂ ದೈವವೇ
ನಾವು ಮಾಡುವ ಕಾಯಕ|
ಕಾಯಕವೇ ಅತಿಯಾಗಿ
ದಿನವೂ ಮನೆಗೆ ಲೇಟಾಗಿ
ಬಂದರೆ ಮಡದಿ ಬೈಯ್ಯಬಹುದು
ಆಗೋದಿಲ್ಲ ನನಗೆ ಕಾಯಾಕ ||
೨
ಪ್ರಶ್ನೆ?
ಕೆಲವರು ವರ್ಕೋಹಾಲಿಕ್
ಅವರು ಕೆಲಸ ಮಾಡಲು
ಶುರುಮಾಡಿದರೆ ಪರಿವೇ ಇರೊಲ್ಲ
ಗಂಟೆ, ದಿನ ,ವಾರ|
ಇಂಥವರು ಮನೆ ಸೇರದಿದ್ದಾಗ
ಅವರ ಮಕ್ಕಳು ಹೆಂಡತಿ
ಖಾರವಾಗಿ ಕೇಳಬಹುದು ಯಾಕ್ರೀ
ಬೇಕು ನಿಮಗೆ ಸಂಸಾರ??
೩
ಎ ಐ
ಹೆಮ್ಮೆಯಿಂದ ಕೊಚ್ಚಿಕೊಂಡನವನು
ನಾನೊಬ್ಬನೇ ದುಡಿಯುವುದು
ಈ ಮನೆಯಲ್ಲಿ ಹೇಗಿದೆ ನೋಡು
ನನ್ನ ಈ ಕೈ|
ಮೂಗು ಮುರಿಯುತ ಮಡದಿಯೆಂದಳು ಅದೇನು ದೊಡ್ಡದಲ್ಲ ಬಿಡಿ ಈಗೀಗ ದುಡಿಯಲು ಆರಂಭಿಸಿವೆ ರೋಬಾಟ್, ಏ ಐ (Ai) ||
೪
ಮುಖಗಳು
ಸಮತೋಲನ ಕಾಯ್ದುಕೊಳ್ಳಬೇಕು
ವೃತ್ತಿ ಮತ್ತು ಕುಟುಂಬದ ನಡುವೆ
ಅವು ಒಂದೇ ನಾಣ್ಯದ ಎರಡು ಮುಖಗಳು|
ಸ್ವಲ್ಪ ಯಾವುದಾದರೂ ಹೆಚ್ಚು ಕಡಿಮೆ
ಆದರೆ ಉತ್ತರ ದಕ್ಷಿಣಕ್ಕೆ ತಿರುಗಬಹುದು
ನಮ್ಮ ಮುಖಗಳು||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ವೃತ್ತಿ ಬದುಕಿನ ಹಿನ್ನೋಟಕ್ಕೆ
ಸಿಹಿಜೀವಿಯ ಮುನ್ನೋಟ.
ನಾನು ಎಪ್ ಬಿ ನಲ್ಲಿ ಮತ್ತು ಕೆಲ ಬಳಗದಲ್ಲಿ ನಮ್ಮ ಊರು ಮತ್ತು ನನ್ನ ಬಾಲ್ಯದ ಬಗ್ಗೆ ಲೇಖನ ಬರೆದಾಗ ಲೇಖನ ಚೆನ್ನಾಗಿದೆ, ನಾನು ನಿಮ್ಮ ಊರ ಪಕ್ಕದ ಊರು ಉಪ್ಪರಿಗೇನಹಳ್ಳಿಯಲ್ಲಿ ಉಪನ್ಯಾಸಕಿಯಾಗಿದ್ದೆ ಎಂದು ಪರಿಚಯ ಮಾಡಿಕೊಂಡಿದ್ದರು.
ಕಳೆದ ವಾರ ನುಡಿತೋರಣ
ಸಂಭ್ರಮದಲ್ಲಿ ಅವರನ್ನು ನೇರವಾಗಿ ಭೇಟಿಯಾಗುವ ಅವಕಾಶ ಲಭಿಸಿತು.ಅಂದೇ ಅವರ ಹೊಸ ಪುಸ್ತಕ ಬಿಡುಗಡೆಯಾದ ಸಂತಸ! ನಾನು "ನನ್ನಮ್ಮ ನಮ್ಮೂರ ಪ್ಲಾರೆನ್ಸ್ ನೈಟಿಂಗೇಲ್" ಪುಸ್ತಕವನ್ನು ಅವರಿಗೆ ನೀಡಿದೆ. ಅವರು ಅಂದು ಲೋಕಾರ್ಪಣೆಯಾದ "ವೃತ್ತಿ ಜೀವನದ ಹಿನ್ನೋಟ" ಕೃತಿ ನೀಡಿದರು. ಅವರೇ ಚಿತ್ರದುರ್ಗದ ಹೆಮ್ಮೆಯ ಉಪನ್ಯಾಸಕಿ, ಲೇಖಕಿ, ಕಥೆಗಾರ್ತಿ, ಸಂಪನ್ಮೂಲ ವ್ಯಕ್ತಿ, ಸಿ ಬಿ ಶೈಲಾ ಜಯಕುಮಾರ್.
ವಿದ್ಯಾರ್ಥಿ ದಿಸೆಯಲ್ಲಿ 'ತೀನಂಶ್ರೀ ಚಿನ್ನದ ಪದಕ' ಪಡೆದ ಪ್ರತಿಭಾನ್ವಿತರು.
ಸಾಹಿತ್ಯದ ಒಲವಿನಿಂದಾಗಿ ಓದು ಬರಹದಲ್ಲೂ ನಿಪುಣರಾದ ಮೇಡಂರವರು ವೈವಿಧ್ಯಮಯವಾದ ವಿಷಯ ವಸ್ತುಗಳ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ನುರಿತ ಬರಹಗಾರರು, ಸೂಜಿಗಲ್ಲಿನಂತೆ ಆಕರ್ಷಿಸುವ ವಾಗ್ಮಿಗಳು. ಇಂತಹ ಬಹುಮುಖ ಪ್ರತಿಭೆಯಾದ ಶೈಲಾ ಮೇಡಂ ರವರು ಇತ್ತೀಚಿನ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ ಪುಸ್ತಕ ವೃತ್ತಿ ಬದುಕಿನ ಹಿನ್ನೋಟ.
ಪುಸ್ತಕವನ್ನು ನನ್ನ ಕಾರ್ಯದ ಒತ್ತಡದ ನಡುವೆಯೂ ಎರಡು ದಿನಗಳಲ್ಲಿ ಪೂರ್ಣವಾಗಿ ಓದಿದೆ.
ಮೇಡಂ ರವರ ಈ ಬರಹಗಳ ಗುಚ್ಛ ಸುಲಲಿತವಾಗಿ ಓದಿಸಿಕೊಳ್ಳುತ್ತವೆ. ಕಾವ್ಯದ ಲಹರಿ, ತಿಳಿ ಹಾಸ್ಯದ ಪರಿ, ಲಾಲಿತ್ಯದ ಬಿನ್ನಾಣ, ಗದ್ಯಗಂಧಿ ಭಾಷಾಬನಿಗಳಿಂದ ಮುದ ನೀಡುತ್ತವೆ.ಎಂಬ ನಾಗರಾಜ ಸಿರಿಗೆರೆ ರವರು ಮುನ್ನುಡಿಯಲ್ಲಿ ಹೇಳಿದ ಅಭಿಪ್ರಾಯ ನೂರಕ್ಕೆ ನೂರು ಸತ್ಯ ಎನಿಸಿತು.
ಒಟ್ಟು ಮೂವತ್ತು ಅಧ್ಯಾಯಗಳ ಈ ಕೃತಿಯಲ್ಲಿ ಮೇಡಂರವರು ತಮ್ಮ ವೃತ್ತಿ ಬದುಕಿನ ಸಿಹಿಕಹಿ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಅವರ ಶೈಕ್ಷಣಿಕ ಸಾಧನೆ, ಮುಖ್ಯಶಿಕ್ಚಕಿಯಾಗಿ, ಪ್ರೌಢಶಾಲಾ ಶಿಕ್ಷಕಿಯಾಗಿ, ಕಾಲೇಜಿನ ಉಪನ್ಯಾಸಕಿಯಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ನಿರ್ವಹಿಸಿದ ಕಾರ್ಯಗಳ ಬಗ್ಗೆ ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.
ಭೌಗೋಳಿಕವಾಗಿ ನಾನು ಓಡಾಡಿದ ಜಾಗಗಳಲ್ಲಿ ಅವರು ಕಾರ್ಯನಿರ್ವಹಿಸಿದ ಕಾರಣದಿಂದಾಗಿ ಪುಸ್ತಕ ಓದುವಾಗ ಚಿತ್ರಣಗಳು ನನ್ನ ಕಣ್ಣ ಮುಂದೆ ಹಾದು ಹೋಗುತ್ತಿದ್ದವು.ಅದರಲ್ಲೂ ಉಪ್ಪರಿಗೇನ ಹಳ್ಳಿಯ ಕಾಲೇಜಿನ ವಿವರಣೆ, ಬಸ್ ಪಯಣ, ಚಳ್ಳಕೆರೆ ಕಾಲೇಜುಗಳ ಅನುಭವದ ಬರಹಗಳು ನನಗೆ ಹೆಚ್ಚು ಆಪ್ತವಾದವು.
ನಾನೂ ಸಹ ವೃತ್ತಿಯಲ್ಲಿ ಶಿಕ್ಷಕನಾಗಿ ಇಪ್ಪತ್ತೈದು ವರ್ಷ ಪೂರೈಸಿ ಮುಂದುವರೆಯುತ್ತಿರುವ ಈ ದಿನದಲ್ಲಿ ಕೃತಿಯನ್ನು ಓದುವಾಗ ನನ್ನ ವೃತ್ತಿ ಜೀವನದ ಕೆಲ ನೆನಪುಗಳು ಒತ್ತರಿಸಿ ಬಂದವು. ಮೇಡಂ ರವರ ಬಹುತೇಕ ಅನುಭವಗಳು ನನ್ನ ಅನುಭವಗಳೇನೋ ಎಂದು ಭಾಸವಾದದ್ದು ಸುಳ್ಳಲ್ಲ.
ನಾನೂ ಕೂಡಾ ಕೆಲಸಕ್ಕೆ ಸೇರಿದ ನಂತರ ಎಂ ಎ, ಎಂ ಎಡ್ ಮಾಡಿದ್ದು , ಕೆ ಇ ಎಸ್ ,ಕೆ ಎ ಎಸ್ ಪರೀಕ್ಷೆ ಬರೆದದ್ದು, ನೆನಪಾಗುತ್ತದೆ. ವೃತ್ತಿ ಮತ್ಸರ ಎಲ್ಲಾ ಕ್ಷೇತ್ರದಲ್ಲಿ ಇರುವಂತೆ ನಮ್ಮಲ್ಲೂ ಇದೆ ಅದನ್ನು ಮೇಡಂ ಸಮರ್ಥವಾಗಿ ಎದುರಿಸಿದ್ದು ಓದಿ ಸಂತಸಗೊಂಡೆ.
ಎಲ್ಲಾ ಲೇಖನಗಳು ನನಗೆ ವೈಯಕ್ತಿಕವಾಗಿ ಇಷ್ಟವಾಗುವ ಜೊತೆಗೆ ನಾನೂ ಸಹ ನನ್ನ ವೃತ್ತಿ ಜೀವನದ ಕೆಲ ಅನುಭವಗಳನ್ನು ದಾಖಲಿಸಬೇಕು ಎಂಬ ಪ್ರೇರಣೆಯಾಯಿತು.ಇದಕ್ಕೆ ಶೈಲಾ ಮೇಡಂ ರವರಿಗೆ ಧನ್ಯವಾದಗಳನ್ನು ಸಮರ್ಪಿಸುವೆ.
ಪ್ರಚಂಡ ವಿದ್ಯಾರ್ಥಿಗಳೊಂದಿಗೆ ಎಂಬ ಲೇಖನ ಹಾಗೂ ಚಳ್ಳಕೆರೆಯ ಕಾಲೇಜಿನ ಅನುಭವಗಳನ್ನು ಓದುವಾಗ ನಾನು ಗೌರಿಬಿದನೂರಿನ ಶಾಲೆಯಲ್ಲಿ ಹದಿನೈದು ವರ್ಷಗಳ ಕಾಲದ ಶಿಕ್ಷಕ ವೃತ್ತಿ ನೆನಾಪಾಯಿತು.24 ಸೆಕ್ಷನ್ ಎರಡು ಸಾವಿರ ವಿದ್ಯಾರ್ಥಿಗಳು ನಲವತ್ತು ಶಿಕ್ಷಕರು ಅಬ್ಬಾ ನಿಜಕ್ಕೂ ಅದೊಂದು ಸಮುದ್ರ!
ತಮ್ಮ ವಿದ್ಯಾರ್ಥಿಗಳಿಂದ ಅತಿಯಾದ ಮನ್ನಣೆ ಸನ್ಮಾನಗಳನ್ನು ಸ್ವೀಕರಿಸಿದ ಜೊತೆಗೆ ಚಿತ್ರದುರ್ಗದ ಸಿಂಡ್ರೆಲಾ ನಾಟಕ ನೋಡುವಾಗ ತಮ್ಮ ಹಳೆಯ ವಿದ್ಯಾರ್ಥಿ ನಡೆದುಕೊಂಡು ರೀತಿ ಓದಿ ಬೇಸರವಾಯಿತು.ನನಗೂ ಇಂತಹ ಹಲವು ಅನುಭವಗಳಾಗಿವೆ.
ಕೈ ಬಾಯಿ ಕಚ್ಚೆ ಸರಿಯಿಲ್ಲದ ಉಪನ್ಯಾಸಕರಿಗೆ ತಕ್ಕ ಪಾಠ ಕಲಿಸಿ ವಿದ್ಯಾರ್ಥಿನಿಯರ ಬಾಳಲ್ಲಿ ದೇವತೆಯಾದ ಮೇಡಂ ರವರ ಬಗ್ಗೆ ಗೌರವ ಇಮ್ಮಡಿಯಾಗುತ್ತದೆ.
4 E ಗಳಾದ ಎನುಮರೇಷನ್ ,ಇವ್ಯಾಲುಯೇಶನ್, ಎಕ್ಸಾಮ್ ಹಾಗೂ ಎಲೆಕ್ಷನ್ ಅನುಭವಗಳನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ.
ಇನ್ನೂ ಪರೀಕ್ಷೆಯಲ್ಲಿ ಕಾಪಿ ಸಂಸ್ಕೃತಿಯನ್ನು ವಿರೋಧಿಸಿದ ದಿಟ್ಟತನವನ್ನು ಮೆಚ್ಚಲೇಬೇಕು. ಪ್ರಾಮಾಣಿಕವಾಗಿ ಪಾಠ ಮಾಡುವ ಯಾವ ಶಿಕ್ಷಕರೂ ಮಾಲ್ ಪ್ರಾಕ್ಟೀಸ್ ಅನ್ನು ಬೆಂಬಲಿಸುವುದಿಲ್ಲ.ಈ ವರ್ಷ ನಡೆದ ಹತ್ತನೇ ತರಗತಿಯ ಪರೀಕ್ಷಾ ಕ್ರಮ ಮೇಡಂ ಮತ್ತು ನನ್ನಂತಹ ಶಿಕ್ಷಕರು ಸ್ವಾಗತಿಸಿದ್ದೇವೆ. ಇದು ಹೀಗೆಯೇ ಕಟ್ಟುನಿಟ್ಟಾಗಿ ನಡೆದು ನಿಜವಾಗಿ ಕಷ್ಟ ಪಟ್ಟು ಓದುವ ಮಕ್ಕಳ ಶ್ರಮಕ್ಕೆ ಪ್ರತಿಫಲ ಲಭಿಸಲಿ ಎಂದು ನನ್ನ ಬಯಕೆ.
ಮೇಡಂ ರವರು ಪ್ರತಿ ಲೇಖನದ ಆರಂಭ ಕೊನೆ ಮತ್ತು ಮಧ್ಯದಲ್ಲಿ ಉಲ್ಲೇಖಿಸಿರುವ ಪೂರಕ ನುಡಿ ಮತ್ತುಗಳು, ವಚನ, ತ್ರಿಪದಿಗಳು ಲೇಖನದ ತೂಕವನ್ನು ಹೆಚ್ಚಿಸಿವೆ.
ಚೆಂದವಾದ ಉತ್ತಮ ಮುಖಮುಟ ವಿನ್ಯಾಸ ಓದುಗರನ್ನು ಸೆಳೆಯುತ್ತವೆ ಎಂದು ಪುಸ್ತಕ ಬಿಡುಗಡೆ ಮಾಡಿ ಹೇಳಿದ ವಿದ್ವಾಂಸರಾದ ತನಾಶಿ ರವರ ಮಾತು ದಿಟ.ಅದೇ ರೀತಿ ಪುಸ್ತಕ ಒಳಪುಟ ವಿನ್ಯಾಸವೂ ಚೆನ್ನಾಗಿದೆ.ಶೈಲಾ ಮೇಡಂ ರವರ ವೃತ್ತಿ ಜೀವನದ ಕೆಲ ಪ್ರಮುಖ ಘಟನೆಗಳ ಬಿಂಬಿಸುವ ಪೋಟೋಗಳು ಪುಸ್ತಕಕ್ಕೆ ಪೂರಕವಾಗಿವೆ. ಕೈಗೆಟುಕುವ ಬೆಲೆಯಲ್ಲಿ ಮೈಸೂರಿನ ಅಮೃತ ಪ್ರಕಾಶನ ದವರು ಪ್ರಕಟಿಸಿರುವ ಈ ಪುಸ್ತಕ ಓದಲು ನಿಮಗೂ ಆಸೆಯಿದ್ದರೆ ಈ ನಂಬರ್ ಸಂಪರ್ಕ ಮಾಡಬಹುದು.9482200056
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ದಿನಕ್ಕೆ 10 ನಿಮಿಷವಾದರೂ ಕನ್ನಡ ಪುಸ್ತಕ ಓದಿ .ದಿನಕ್ಕೆ ಕನಿಷ್ಟಪಕ್ಷ 10 ಕನ್ನಡ ಹೊಸ ಕನ್ನಡ ಪದಗಳನ್ನು ಕಲಿತು ನಿಮ್ಮ ಪದಸಂಪತ್ತು ಹೆಚ್ಚಿಸಿಕೊಂಡು ಕನ್ನಡ ಪಸರಿಸುವ ಕಾರ್ಯ ಮಾಡಿ ಎಂದು ಸಾಹಿತಿಗಳು ಹಾಗೂ ವ್ಯಾಖ್ಯಾನಕಾರರಾದ ತನಾಶಿ ರವರು ಕರೆ ನೀಡಿದರು.
ಕುಣಿಗಲ್ ನ ಬ್ರಾಹ್ಮಣ ಸಮುದಾಯ ಭವನದಲ್ಲಿ ನಡೆದ ನುಡಿಸಂಭ್ರಮ ವಾರ್ಷಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ನುಡಿ ಹೆಜ್ಜೆ ಈ ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿಗಳಾದ ಅನುಸೂಯ ಸಿದ್ದರಾಮ ರವರು ನುಡಿತೋರಣ ವಾಟ್ಸಪ್ ಬಳಗ ಅಚ್ಚುಕಟ್ಟಾದ ಕಾರ್ಯಕ್ರಮ ಆಯೋಜನೆಯಲ್ಲಿ ಸಂಚಾಲನ ಸಮಿತಿಯ ಸದಸ್ಯರ ಪಾತ್ರ ಮಹತ್ವದ್ದು ಮುಂದೆಯೂ ಇಂತಹ ಕನ್ನಡದ ಕೈಂಕರ್ಯ ಮುಂದುವರೆಯಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಪ್ನಾ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥರಾದ ಆರ್ ದೊಡ್ಡೇಗೌಡರು ಸಾಹಿತ್ಯ ಪರಿಷತ್ತು ಮಾಡುವ ಕೆಲಸವನ್ನು ನುಡಿತೋರಣ ಬಳಗ ಮಾಡುತ್ತಿರುವುದು ಶ್ಲಾಘನೀಯ, ಇದು ಹೀಗೆಯೇ ಮುಂದುವರೆಯಲಿ.ಮುಂದಿನ ನುಡಿತೋರಣ ಸಮಾಗಮಕ್ಕೆ ಪುಸ್ತಕ ತಾಂಬೂಲ ನೀಡಲು ನಾನು ಸಿದ್ಧ ಎಂದರು.
ಸಾಹಿತಿಗಳು ಹಾಗೂ ನುಡಿತೋರಣದ ಸಂಚಾಲಕರಲ್ಲಿ ಒಬ್ಬರಾದ ಕಿರಣ್ ಹಿರಿಸಾವೆ ರವರು ನುಡಿತೋರಣ ಬೆಳೆದು ಬಂದ ದಾರಿ ಮತ್ತು ಮುಂದಿನ ಯೋಜನೆಯ ರೂಪರೇಷೆಗಳನ್ನು ಕವಿಮನಗಳೊಂದಿಗೆ ಹಂಚಿಕೊಂಡರು.
ನುಡಿಹೆಜ್ಜೆ ಈ ಪತ್ರಿಕೆಯ ಸಂಪಾದಕರಾದ ಎಂ ವೆಂಕಟೇಶ ಶೇಷಾದ್ರಿ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಮಾನಸ ಕೆ ಕೆ ರವರ ಚಿತ್ತದ ಸುತ್ತ ಹಾಗೂ ಸಿ ಬಿ ಶೈಲ ಜಯಕುಮಾರ್ ರವರ ವೃತ್ತಿ ಬದುಕಿನ ಹಿನ್ನೋಟ ಲೋಕಾರ್ಪಣೆಗೊಂಡ ಕೃತಿಗಳು.
ಡಾ ರುಕ್ಮಿಣಿ ವ್ಯಾಸರಾಜ್ ಮತ್ತು ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು. ನಳಿನಾ ಸುಬ್ರಮಣ್ಯ ತಂಡದವರು ಪ್ರಾರ್ಥಿಸಿದರು. ಪವಿತ್ರ ಮೃತ್ಯುಂಜಯಸ್ವಾಮಿ ಸ್ವಾಗತಿಸಿ ಪ್ರಶಾಂತ್ ರವರು ವಂದಿಸಿದರು.
ಜಯಶ್ರೀ ರಾಜು ರವರು ಕಾರ್ಯಕ್ರಮ ನಿರೂಪಿಸಿದರು.
ತಾಯಂದಿರ ದಿನ ಒಂದು ದಿನಕ್ಕೆ ಸೀಮಿತವಾಗದಿರಲಿ
ತಾಯಂದಿರ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗದೇ
ದಿನವೂ ತಾಯಂದಿರ ದಿನವಾಗಿ
ಆಚರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ ಎಸ್
ಸಿದ್ದಲಿಂಗಪ್ಪ ರವರು ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕ ಹಾಗೂ ನಿರ್ಭಯ ಮಾಹಿಳಾ ಜಾಗೃತಿ ಸಂಸ್ಥೆಯ ಸಹಯೋಗದೊಂದಿಗೆ ತುಮಕೂರಿನ ವಿಪ್ರ ಭವನದಲ್ಲಿ ಹಮ್ಮಿಕೊಂಡಿದ್ದ ತಾಯಂದಿರ ದಿನದ ಉದ್ಘಾಟನಾ ಭಾಷಣ ಮಾಡುತ್ತಾ ಹೀಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪಿ ಎಲ್ ಸುನಂದಮ್ಮ ರವರು
ತಾಯಿ ಋಣ ತೀರಿಸಲು ಸಾದ್ಯವಿಲ್ಲ ಎಂದರು. ಜೊತೆಗೆ ತಾಯಿಯ ಮಹತ್ವವನ್ನು ಕವಿವಾಣಿಗಳನ್ನು ಹೇಳಿ ಮನನ ಮಾಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷರಾದ ಗೀತಾನಾಗೇಶ್ ರವರು ತಾಯಿ ದೇವರನ್ನು ಸರ್ವರೂ ದಿನವೂ ಗೌರವಿಸಿ ಪೂಜಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಕಾರ್ಯದರ್ಶಿ ಸಿಹಿಜೀವಿ ವೆಂಕಟೇಶ್ವರ , ಕೋಶಾಧ್ಯಕ್ಷರಾದ ಜಯರಾಮಯ್ಯ, ಅಭಿಷೇಕ್, ಪುಷ್ಪಲತ ಮುಂತಾದವರು ತಮ್ಮ ತಮ್ಮ ತಾಯಿಯ ಬಗ್ಗೆ ಮಾತನಾಡಿದರು.
ತುಮಕೂರು ಕನ್ನಡ ಭವನದ ಪರಿಚಾರಕಿಯಾದ ಗಂಗಮ್ಮ ರವರನ್ನು ಅವರ ಸೇವೆಯನ್ನು ಗುರ್ತಿಸಿ ಸನ್ಮಾನಿಸಲಾಯಿತು.
ಶೈಲಜಾ ವೆಂಕಟೇಶ್ ರವರು ಪ್ರಾರ್ಥಿಸಿದರು.ಅಭಿಶೇಕ್ ರವರು ಸ್ವಾಗತಿಸಿದರು.ಜ್ಯೋತಿ ಆಚಾರ್ಯ ರವರು ವಂದಿಸಿ ಎನ್ ನಂದಿನಿ ರವರು ನಿರೂಪಿಸಿದರು.